ತಲಾ ಆದಾಯ | ದೇಶದಲ್ಲೇ ಕರ್ನಾಟಕ ನಂ.1
ದಶಕದಲ್ಲಿ 93.6 ಶೇ. ಬೆಳವಣಿಗೆ

ಮಂಗಳೂರು, ಜು.22: 2024-25ನೇ ಸಾಲಿನಲ್ಲಿ ಕರ್ನಾಟಕವು ದೇಶದಲ್ಲೇ ಅತ್ಯಧಿಕ ತಲಾ ಆದಾಯವಿರುವ ರಾಜ್ಯವಾಗಿ ಹೊರಹೊಮ್ಮಿದ್ದು, ದಶಕದುದ್ದಕ್ಕೂ 93.6 ಶೇ. ಬೆಳವಣಿಗೆಯನ್ನು ದಾಖಲಿಸಿದೆ ಎಂದು ವಿತ್ತ ಸಚಿವಾಲಯವು ಲೋಕಸಭೆಯಲ್ಲಿ ಪ್ರಕಟಿಸಿದ ದತ್ತಾಂಶಗಳು ಬಹಿರಂಗಪಡಿಸಿವೆ.
ಕರ್ನಾಟಕದ ತಲಾವಾರು ಒಟ್ಟು ರಾಜ್ಯ ಆಂತರಿಕ ಉತ್ಪನ್ನ (ಎನ್‌ಎಸ್‌ಡಿಪಿ)ವು 2,04,605ಕ್ಕೆ ತಲುಪಿದ್ದು, 2014-15ರಲ್ಲಿದ್ದ 1,05,697 ರೂ.ನಿಂದ ಶೇ.93.6 ಶೇ. ಬೆಳವಣಿಗೆಯನ್ನು ದಾಖಲಿಸಿದೆ.
2024-25ನೇ ಸಾಲಿನಲ್ಲಿ ರಾಷ್ಟ್ರಮಟ್ಟದಲ್ಲಿ ಭಾರತದ ಒಟ್ಟು ತಲಾ ರಾಷ್ಟ್ರೀಯ ಆದಾಯವು (ಎನ್‌ಎನ್‌ಐ) 1,14,710 ರೂ. ಆಗಿದೆ. ಒಂದು ದಶಕದ ಹಿಂದೆ ಇದು 72,805 ರೂ. ಆಗಿತ್ತು. ತಲಾ ಆದಾಯದಲ್ಲಿ ಭಾರೀ ಮೇಲ್ಮುಖ ಬೆಳವಣಿಗೆಯನ್ನು ಈ ಪ್ರವೃತ್ತಿ ತೋರಿಸಿದೆ.ಆದರೆ ತಲಾ ಆದಾಯ ಹೆಚ್ಚಳವು ವಿವಿಧ ರಾಜ್ಯಗಳಲ್ಲಿ ವಿಭಿನ್ನವಾಗಿರುವುದನ್ನು ದತ್ತಾಂಶಗಳು ತೋರಿಸಿವೆ.
2024-25ರ ವಿತ್ತೀಯ ವರ್ಷದಲ್ಲಿ ದೇಶದ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿಗಳ ಪೈಕಿ ಕರ್ನಾಟಕದ ತಲಾ ಆದಾಯ (2,04,605 ರೂ.)ವು ಅತ್ಯಂತ ಗರಿಷ್ಠವಾಗಿದೆ. 1,96,309 ತಲಾ ಆದಾಯ ಹೊಂದಿರುವ ತಮಿಳುನಾಡು ದ್ವಿತೀಯ ಸ್ಥಾನದಲ್ಲಿದೆ.
ಕಳೆದ ಒಂದು ದಶಕದಲ್ಲಿ ರಾಜ್ಯದ ಆದಾಯವು ಹೆಚ್ಚುಕಡಿಮೆ ಎರಡು ಪಟ್ಟು ಹೆಚ್ಚಾಗಿದ್ದು, ಇತರ ರಾಜ್ಯಗಳನ್ನು ಮೀರಿಸಿದೆ. 2013-14ನೇ ಸಾಲಿನಲ್ಲಿ ಅದರ ತಲಾ ಆದಾಯವು 1,01,858 ರೂ. ಆಗಿತ್ತು. ಆದರೆ 2023-24ನೇ ಸಾಲಿನಲ್ಲಿ ಅದರ ತಲಾ ಆದಾಯವು 88.5 ಶೇ. ಬೆಳವಣಿಗೆಯನ್ನು ಕಂಡಿದೆ ಎಂದು ವಿತ್ತ ಸಚಿವಾಲಯ ದತ್ತಾಂಶಗಳು ಬಹಿರಂಗಪಡಿಸಿವೆ.
ದಶಕದಾವಧಿಯ ತಲಾ ಆದಾಯ ಬೆಳವಣಿಗೆ ದರದಲ್ಲಿ ಕರ್ನಾಟಕವು ದೇಶದಲ್ಲೇ ದ್ವಿತೀಯ ಸ್ಥಾನ ಪಡೆದಿದ್ದು, 93.6 ಶೇ. ಬೆಳವಣಿಗೆಯನ್ನು ದಾಖಲಿಸಿದೆ. ಆದರೆ ಒಡಿಶಾವು 96.7 ಶೇ. ತಲಾವಾರು ಆದಾಯದೊಂದಿಗೆ ಮೊದಲ ಸ್ಥಾನದಲ್ಲಿದೆ.
ಗರಿಷ್ಠ ತಲಾ ಆದಾಯ ಬೆಳವಣಿಗೆ ದರವು ಮಿಜೋರಾಂನಲ್ಲಿ ದಾಖಲಾಗಿದ್ದು, 125.4 ಶೇ.ರಷ್ಟಿದೆ. ಗುಜರಾತ್ (90.7 ಶೇ.), ಗೋವಾ (89.9 ಶೇ.), ಕರ್ನಾಟಕ (88.5 ಶೇ.), ತೆಲಂಗಾಣ (84.3 ಶೇ.) ಹಾಗೂ ಒಡಿಶಾ (83.4 ಶೇ.) ಬೆಳವಣಿಗೆಯನ್ನು ಕಂಡಿದೆ.
ಆದರೆ ಕೇರಳ, ಅರುಣಾಚಲ ಪ್ರದೇಶ,ಗೋವಾ, ಜಾರ್ಖಂಡ್, ಮಿಜೋರಾಂ ಸೇರಿದಂತೆ ಕೆಲವು ರಾಜ್ಯಗಳ ತಲಾವಾರು ಆದಾಯದ ಕುರಿತ ವಿವರಗಳು ಲಭ್ಯವಿಲ್ಲವೆಂದು ಕೇಂದ್ರ ಸರಕಾರವು ಉತ್ತರಿಸಿದೆ.