ʼಮೈಸೂರು ದಸರಾʼ ಧರ್ಮಾತೀತ ಹಬ್ಬ; ಉದ್ಘಾಟನೆಗೆ ಬಾನು ಮುಷ್ತಾಕ್ ಅವರೇ ಸೂಕ್ತ : ಸಿಎಂ ಸಿದ್ದರಾಮಯ್ಯ

ಮೈಸೂರು, ಆ.31 : ಮೈಸೂರು ದಸರಾ ನಾಡಹಬ್ಬ, ಇದನ್ನು ಉದ್ಘಾಟನೆ ಮಾಡಲು ಆ ಧರ್ಮ, ಈ ಧರ್ಮ ಎನ್ನುವ ಹಾಗಿಲ್ಲ, ಈ ಹಬ್ಬವನ್ನು ಎಲ್ಲರೂ ಆಚರಣೆ ಮಾಡುತ್ತಾರೆ. ಇದರ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಕರೆದಿರುವುದು ಸೂಕ್ತವಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.
ನಗರದ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರು ದಸರಾ ಧರ್ಮಾತೀತ, ಜಾತ್ಯಾತೀತವಾಗಿ ನಡೆಯುವಂತಹದ್ದು, ಇದರಲ್ಲಿ ಎಲ್ಲರೂ ಭಾಗವಹಿಸಬಹುದು. ಬೂಕರ್ ಪ್ರಶಸ್ತಿ ಪಡೆದ ವಿಜೇತರು ಬಹಳ ಕಡಿಮೆ. ಹಾಗಾಗಿ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಲಾಗಿದೆ. ಇತಿಹಾಸ ಗೊತ್ತಿಲ್ಲದ ಕೆಲವು ಧರ್ಮಾಂಧರು ಇದನ್ನು ವಿರೋಧ ಮಾಡುತ್ತಿದ್ದಾರೆ ಎಂದು ಹೇಳಿದರು.
ದಸರಾ ಸಾಂಸ್ಕೃತಿಕ ಉತ್ಸವ, ನಾಡಹಬ್ಬ, ಇದರಲ್ಲಿ ಇಂತಹ ಧರ್ಮದವರೇ ಭಾಗವಹಿಸಬೇಕು ಎಂಬುವುದಿಲ್ಲ. ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್, ಬೌದ್ಧ, ಜೈನ ಸೇರಿದಂತೆ ಎಲ್ಲರಿಗೂ ಸೇರಿದ್ದು. ಮಹಾರಾಜರ ಆಡಳಿತ ಇಲ್ಲದ ಕಾಲದಲ್ಲಿ ಹೈದರಾಲಿ, ಟಿಪ್ಪು ಸುಲ್ತಾನ್ ದಸರಾ ಅಚರಣೆ ಮಾಡಿರಲಿಲ್ಲವೇ?. ಮೈಸೂರು ಆಸ್ಥಾನದಲ್ಲಿ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಎರಡು ಬಾರಿ ಅಂಬಾರಿ ಮೇಲೆ ಕುಳಿತು ದಸರಾ ಆಚರಣೆ ಮಾಡಿರಲಿಲ್ಲವೇ? ಹಾಗಾಗಿ ಇದು ಧರ್ಮಾತೀತ ಜಾತ್ಯತೀತ ಹಬ್ಬ, ಹಾಗಾಗಿ ಬಾನು ಮುಷ್ತಾಕ್ ಆಯ್ಕೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯವರು ರಾಜಕೀಯಕ್ಕಾಗಿ ವಿರೋಧಿಸುತ್ತಾರೆ. ಕುಂಟು ನೆಪ ಇಟ್ಟುಕೊಂಡು ಹಾಗೆ ಹೀಗೆ ಎಂದು ಹೇಳುತ್ತಾರೆ. ಅವರು ಜಾತ್ಯಾತೀತವಾಗಿ ಮಾತನಾಡುತ್ತಾರಾ? ಎಂದು ಪ್ರಶ್ನಿಸಿದರು.
ಭುವನೇಶ್ವರಿ ಬಗ್ಗೆ ಬಾನು ಮುಷ್ತಾಕ್ ಮಾತನಾಡಿದ್ದಾರೆ ಎಂಬ ಬಗ್ಗೆ ಚರ್ಚೆಯಾಗುತ್ತಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, ಅದಕ್ಕೂ ಇದಕ್ಕೂ ಏನು ಸಂಬಂಧ, ಅವರು ಕನ್ನಡದಲ್ಲಿ ಗೌರವ ಇಲ್ಲದೆ ಕನ್ನಡದಲ್ಲಿ ಬರೆಯುತ್ತಾರಾ? ಅವರು ಹೃದಯ ಹಣತೆ ಯಾವುದರಲ್ಲಿ ಬರೆದಿರುವುದು. ಕನ್ನಡದ ಬಗ್ಗೆ ಅಭಿಮಾನ, ಪ್ರೀತಿ, ಗೌರವ ಇಲ್ಲದಿದ್ದರೆ ಅವರು ಕನ್ನಡದಲ್ಲಿ ಬರೆಯಲು ಸಾಧ್ಯವೇ? ಅವರು ಎಲ್ಲಾ ಸಾಹಿತ್ಯ ರಚನೆ ಮಾಡಿರುವುದು ಕನ್ನದಲ್ಲೇ ಎಂದು ಹೇಳಿದರು.
ದನದ ಮಾಂಸ ತಿನ್ನುತ್ತಾರೆ ಎಂದು ವಿರೋಧ ಪಕ್ಷದ ನಾಯಕ ಅರ್.ಅಶೋಕ್ ಹೇಳಿಕೆ ಪ್ರತಿಕ್ರಿಯಿಸಿದ ಸಿಎಂ, ಡೋಂಗಿಗಳು ಹೀಗೆಲ್ಲಾ ಮಾತನಾಡುವವರು, ದನದ ಮಾಂಸ ತಿನ್ನುವುದನ್ನು ನೋಡಿರುವವರು ಯಾರು? ರಾಜಕೀಯಕ್ಕಾಗಿ ಮಾತನಾಡುವ ಡೋಂಗಿಗಳಿಗೆ ಉತ್ತರ ಕೊಡುವ ಅಗತ್ಯವಿಲ್ಲ ಎಂದು ಹೇಳಿದರು.
ದಸರಾ ಉದ್ಘಾಟನೆಯನ್ನು ಒಬ್ಬರ ಕೈಯಲ್ಲೇ ಉದ್ಘಾಟನೆ ಮಾಡಿಸಬೇಕು ಹಾಗಾಗಿ ಬಾನು ಮುಷ್ತಾಕ್ ಆಯ್ಕೆ ಮಾಡಲಾಗಿದೆ. ದೀಪಾ ಬಾಸ್ತಿ ಅವರನ್ನು ಸರಕಾರ ಅಭಿನಂದಿಸಿದೆ. ಬೂಕರ್ ಬಂದ ಮೇಲೆ ಬಾನು ಮುಷ್ತಾಕ್, ದೀಪಾ ಬಸ್ತಿ ಅವರಿಗೂ ತಲಾ 10 ಲಕ್ಷ ನೀಡಲಾಗಿದೆ. ದಸರಾಗೆ ಆಹ್ವಾನ ಮಾಡಬೇಕು ಎಂದರೆ ಆಮೇಲೆ ನೋಡೋಣ ಎಂದು ಹೇಳಿದರು.