ದ್ವೇಷ ಭಾಷಣದ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು : ಸಿಎಂ ಸಿದ್ದರಾಮಯ್ಯ
► ‘ಕರ್ನಾಟಕ ಮಾದಕ ವಸ್ತು ಮುಕ್ತ ರಾಜ್ಯವಾಗಬೇಕು’ ► ಡಿಸಿ, ಸಿಇಒಗಳ ಜೊತೆ ಸಭೆ

ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ದ್ವೇಷ ಭಾಷಣದ ಬಗ್ಗೆ ಸುಪ್ರೀಂಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದ್ದರೂ, ಯಾಕೆ ಜಿಲ್ಲೆಗಳಲ್ಲಿ ದ್ವೇಷ ಭಾಷಣದ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ? ಇಂತಹ ಘಟನೆಗಳು ನಡೆದಾಗ ತಕ್ಷಣ ದೂರು ದಾಖಲಿಸಿ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.
ಶನಿವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆಗಿನ ಎರಡನೇ ದಿನದ ಸಭೆಯಲ್ಲಿ ಮಾತನಾಡಿದ ಅವರು, ಇದೇ ರೀತಿ ಸರಕಾರದ ಯೋಜನೆಗಳ ಬಗ್ಗೆ, ಕೈಗೊಂಡಿರುವ ಕ್ರಮಗಳ ಬಗ್ಗೆ ಸುಳ್ಳು ಸುದ್ದಿಗಳನ್ನು, ಮಾಹಿತಿಗಳನ್ನು ಹರಡುವ ಪ್ರಕರಣಗಳಲ್ಲಿಯೂ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ರಾಜ್ಯವನ್ನು ಮಾದಕ ವಸ್ತು ಮುಕ್ತ ರಾಜ್ಯ ಮಾಡುವುದು ನಮ್ಮ ಗುರಿ. ಮಾದಕ ವಸ್ತು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವವರಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಪೊಲಿಸ್ ಇಲಾಖೆ, ಶಿಕ್ಷಣ ಇಲಾಖೆ ಇತರ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಅವರು ಹೇಳಿದರು.
ಮಾದಕ ವಸ್ತು ಮಾರಾಟ ಮಾಡುವವರ ಅಂಗಡಿ ಮತ್ತಿತರ ಕೇಂದ್ರಗಳ ಪರವಾನಗಿ ರದ್ದುಗೊಳಿಸುವ ಸಂಬಂಧ ಕಾನೂನು ತಿದ್ದುಪಡಿ ತನ್ನಿ ಎಂದು ಅಧಿಕಾರಿಗಳಿಗೆ ಸೂಚಿಸಿದ ಮುಖ್ಯಮಂತ್ರಿ, 2023ರಲ್ಲಿ 6767 ಪ್ರಕರಣಗಳು, 2024ರಲ್ಲಿ 4188 ಪ್ರಕರಣಗಳು ದಾಖಲಾಗಿವೆ. ಈ ವರ್ಷ ಇದುವರೆಗೆ 1793 ಪ್ರಕರಣಗಳು ದಾಖಲಾಗಿವೆ. ಜಿಲ್ಲೆಗಳಲ್ಲಿ ಮಾದಕ ದ್ರವ್ಯ ದಂಧೆಯನ್ನು ಮಟ್ಟ ಹಾಕಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.
ಅಗತ್ಯಬಿದ್ದರೆ ಇನ್ನಷ್ಟು ಕಠಿಣ ಕಾಯ್ದೆಗಳನ್ನು ಜಾರಿಗೆ ತರಲು ನಾವು ಬದ್ಧರಾಗಿದ್ದೇವೆ. ಶಾಲಾ, ಕಾಲೇಜುಗಳಲ್ಲಿ ಮಾದಕ ದ್ರವ್ಯ ಚಟುವಟಿಕೆಗಳ ಮೇಲೆ ನಿರಂತರ ನಿಗಾ ವಹಿಸಬೇಕು. ಅಪರಾಧ ಚಟುವಟಿಕೆಗಳನ್ನು ಹತ್ತಿಕ್ಕಲು ಪೊಲೀಸ್ ಇಲಾಖೆಗೆ ಜಿಲ್ಲಾಧಿಕಾರಿಗಳು ಎಲ್ಲ ಸಹಕಾರ ನೀಡಬೇಕು. ಗೂಂಡಾ ಕಾಯ್ದೆಯಡಿ ಬಾಕಿಯಿರುವ ಎಲ್ಲ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂದು ಮುಖ್ಯಮಂತ್ರಿ ಸೂಚಿಸಿದರು.
ಅನ್ನಭಾಗ್ಯ ಯೋಜನೆಯಡಿ ನೀಡುವ ಅಕ್ಕಿಯ ದುರುಪಯೋಗ ತಡೆಯಲು ಗಮನ ಹರಿಸಬೇಕು. ಸಾರ್ವಜನಿಕರು ಅಕ್ಕಿಯನ್ನು ಮಾರುಕಟ್ಟೆಯಲ್ಲಿ ಮಾರಿಕೊಳ್ಳುವ ಬಗ್ಗೆ ದೂರುಗಳು ಬರುತ್ತಿವೆ. ಇದರ ದುರುಪಯೋಗ ತಡೆಯಲು ಪರ್ಯಾಯವಾಗಿ ಬೇಳೆ, ಎಣ್ಣೆ ಕೊಡಬಹುದಾ ಪರಿಶೀಲಿಸಿ ಎಂದು ಮುಖ್ಯಮಂತ್ರಿ ಸೂಚಿಸಿದರು.
ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ 91 ಅಸಂಘಟಿತ ಕಾರ್ಮಿಕ ವರ್ಗಗಳನ್ನು ಗುರುತಿಸಲಾಗಿದೆ. ಈವರೆಗೂ 25,61,105 ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸಲಾಗಿದೆ. ಅವರಿಗೆ ಅಪಘಾತ ಪರಿಹಾರ, ಸ್ಮಾರ್ಟ್ ಕಾರ್ಡ್ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ರಾಜ್ಯ ಗಿಗ್ ಕಾರ್ಮಿಕರ ಯೋಜನೆಯಡಿ ಇ ಕಾಮರ್ಸ್ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗಿಗ್ ಕಾರ್ಮಿಕರಿಗೆ ಅಪಘಾತ ಹಾಗೂ ಜೀವ ವಿಮಾ ಸೌಲಭ್ಯ ನೀಡಲಾಗುತ್ತಿದ್ದು, ಬಾಲಕಾರ್ಮಿಕ ಪ್ರಕರಣಗಳಲ್ಲಿ 577 ದೂರು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.
ಮೈಕ್ರೋ ಫೈನಾನ್ಸ್: ಮೈಕ್ರೋ ಫೈನಾನ್ಸ್ ಕಾಯ್ದೆಯನ್ನು ಕೂಲಂಕಷವಾಗಿ ಓದಿರುವಿರಾ? ಅದರ ಪ್ರಕಾರ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದ ಮುಖ್ಯಮಂತ್ರಿ, ಜಿಲ್ಲಾ ಮಟ್ಟದಲ್ಲಿ ಡಿಸಿ, ಎಸ್ಪಿ ಗಳು, ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಗಳು ಪ್ರಯತ್ನಿಸಿದರೆ ಮೈಕ್ರೋ ಫೈನಾನ್ಸ್ ಹಾವಳಿಗೆ ಮಟ್ಟ ಹಾಕಬಹುದು ಎಂದರು.
ಮೈಕ್ರೋಫೈನಾನ್ಸ್ ಗೆ ಸಂಬಂಧಿಸಿದಂತೆ ಕಳೆದ ಜನವರಿಯಿಂದ ಒಟ್ಟು 31 ಪ್ರಕರಣಗಳು ದಾಖಲಾಗಿವೆ. ವಿಜಯನಗರ, ದಾವಣಗೆರೆ, ಕೊಡಗು ಜಿಲ್ಲೆಗಳಲ್ಲಿ ಐದು ಆತ್ಮಹತ್ಯೆಗಳು ವರದಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದರು.