ನಾಳೆ (ಸೆ.17) ರಾಜ್ಯಾದ್ಯಂತ ಹೊಸದಾಗಿ 500 ನಂದಿನಿ ಮಾರಾಟ ಮಳಿಗೆಗಳ ಉದ್ಘಾಟನೆ

ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯಾದ್ಯಂತ ಹೊಸದಾಗಿ 500 ನಂದಿನಿ ಮಾರಾಟ ಮಳಿಗೆ, ಪಾರ್ಲರ್ಗಳನ್ನು ಸ್ಥಾಪನೆ ಮಾಡಲಾಗಿದ್ದು, ಇಂದು(ಸೆ.17) ಕಲಬುರಗಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಳಿಗೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಕರ್ನಾಟಕ ಹಾಲು ಮಹಾ ಮಂಡಳಿಯ (ಕೆಎಂಎಫ್) ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ಹೇಳಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ 2,598 ನಂದಿನಿ ಮಳಿಗೆ, ಪಾರ್ಲರ್ಗಳು ಈಗಾಗಲೇ ಕಾರ್ಯಾಚರಿಸುತ್ತಿದೆ. ಈ ಎಲ್ಲ ಮಳಿಗೆಗಳ ಮುಖಾಂತರ ಗ್ರಾಹಕರಿಗೆ ಕೈಗೆಟುಕುವ ಬೆಲೆಗಳಲ್ಲಿ ಸಕಾಲದಲ್ಲಿ ದೊರೆಯುವಂತೆ ಮಾಡಲಾಗಿದೆ. ಇದಕ್ಕೆ ಹೊಸದಾಗಿ 500 ಸಂಖ್ಯೆ ನಂದಿನಿ ಪಾರ್ಲರ್ ಗಳು ಸೇರ್ಪಡೆಯಾಗಲಿದೆ ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕ ಭಾಗದ ಬಳ್ಳಾರಿ, ಕೊಪ್ಪಳ, ರಾಯಚೂರು, ವಿಜಯನಗರ, ಕಲಬುರಗಿ, ಬೀದರ್ ಮತ್ತು ಯಾದಗಿರಿ ಪ್ರದೇಶಗಳಲ್ಲಿ ಒಟ್ಟು 68 ಹೊಸ ನಂದಿನಿ ಪಾರ್ಲರ್ ಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಕೆಎಂಎಫ್ ಐದು ದಶಕಗಳಿಂದ ನಂದಿನಿ ಬ್ರ್ಯಾಂಡ್ನಲ್ಲಿ ಪರಿಶುದ್ಧ ಹಾಗೂ ರುಚಿಕರ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ದೇಶದಾದ್ಯಂತ ಮಾರಾಟ ಮಾಡುತ್ತಿದೆ. 2024-25ನೆ ಸಾಲಿನಲ್ಲಿ ಕೆಎಂಎಫ್ನ ವಹಿವಾಟು 24,928 ಕೋಟಿ ರೂ.ಗೆ ತಲುಪಿದ್ದು, ಶೇ.16.5ರಷ್ಟು ವಾರ್ಷಿಕ ಪ್ರಗತಿಯನ್ನು ಸಾಧಿಸಿದೆ. 2025-26ನೆ ಸಾಲಿಗೆ ರೂ. 28,444 ಕೋಟಿ ತಲುಪುವ ಗುರಿಯನ್ನು ಸಂಸ್ಥೆಯು ಹೊಂದಿದೆ ಎಂದು ಬಿ. ಶಿವಸ್ವಾಮಿ ತಿಳಿಸಿದರು.