ಸೈಬರ್ ಅಪರಾಧ ಪ್ರಕರಣಗಳ ತನಿಖೆಗೆ ʼಕಮಾಂಡ್ ಸೆಂಟರ್ʼ ಸ್ಥಾಪನೆ; ರಾಜ್ಯ ಸರಕಾರದ ಕ್ರಮ ಸ್ವಾಗತಿಸಿದ ಹೈಕೋರ್ಟ್

ಬೆಂಗಳೂರು : ರಾಜ್ಯದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧ ಪ್ರಕರಣಗಳ ತನಿಖೆಗೆ 'ಸೈಬರ್ ಕಮಾಂಡ್ ಸೆಂಟರ್' (ಸಿಸಿಸಿ) ಹೆಸರಿನ ಸ್ವತಂತ್ರ ತನಿಖಾ ಘಟಕವನ್ನು ಸ್ಥಾಪಿಸಿರುವ ರಾಜ್ಯ ಸರಕಾರ ಕ್ರಮವನ್ನು ಸ್ವಾಗತಿಸಿರುವ ಹೈಕೋರ್ಟ್, ಈ ಘಟಕವು ಕೇವಲ ಕಾಗದದ ಮೇಲೆ ಉಳಿಯುವಂತಾಗದೆ, ಸಮರ್ಪಕ ಮತ್ತು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ನಿರ್ದೇಶಿಸಿದೆ.
ನ್ಯೂಸ್ಪೇಸ್ ರಿಸರ್ಚ್ ಆ್ಯಂಡ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿ ಸಂಬಂಧ ಡ್ರೋನ್ ತಂತ್ರಜ್ಞಾನ ದತ್ತಾಂಶ ಕಳವು ಪ್ರಕರಣದ ಕುರಿತು ಡಿಜಿಪಿ ಪ್ರಣಬ್ ಮೊಹಾಂತಿ ನೇತೃತ್ವದಲ್ಲಿ ವಿಶೇಷ ತನಿಖಾ ದಳವನ್ನು ರಚನೆ ಮಾಡಲು 2025ರ ಏಪ್ರಿಲ್‌ನಲ್ಲಿ ಆದೇಶಿಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧ ಪ್ರಕರಣಗಳ ತನಿಖೆಗೆ 'ಸೈಬರ್ ಕಮಾಂಡ್ ಸೆಂಟರ್' ಹೆಸರಿನ ಸ್ವತಂತ್ರ ತನಿಖಾ ಘಟಕ ಸ್ಥಾಪನೆ ಮಾಡುವಂತೆ ಸರಕಾರಕ್ಕೆ ಸೂಚಿಸಿತ್ತು.
ಅದರಂತೆ, ಮಾದಕ ವಸ್ತು ಮತ್ತು ಸೈಬರ್ ಪ್ರಕರಣಗಳ ತನಿಖೆಯನ್ನು ಸಿಸಿಸಿ ವ್ಯಾಪ್ತಿಗೆ ನೀಡಿ ರಾಜ್ಯ ಸರಕಾರ ಆದೇಶಿಸಿತ್ತು. ಅರ್ಜಿ ಕುರಿತು ಬುಧವಾರ ವಿಚಾರಣೆ ನಡೆಸಿದ ಹೈಕೋರ್ಟ್, ಸರಕಾರದ ಆದೇಶವನ್ನು ಸ್ವಾಗತಿಸಿತಲ್ಲದೆ, ಕೇವಲ ಸಿಸಿಸಿ ಸ್ಥಾಪನೆ ಮಾಡಿದರೆ ಸಾಲುವುದಿಲ್ಲ. ಈ ಕೇಂದ್ರವು ಸಮರ್ಪಕ ಮತ್ತು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಬೇಕು. ಅದು ನಿಷ್ಕ್ರಿಯವಾಗಿ ಉಳಿದರೆ, ಹೆಚ್ಚುತ್ತಿರುವ ಸೈಬರ್ ಅಪರಾಧಗಳನ್ನು ತಡೆಯುವ ಕೆಲಸವು ಕೇವಲ ಕಾಗದದ ಉಳಿಯುತ್ತದೆ ಎಂದು ಹೇಳಿತು.
ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು:
ಸೈಬರ್ ಕಮಾಂಡ್ ಸೆಂಟರ್ ಅಧಿಕಾರಶಾಹಿಯ ಕಟ್ಟಡವಾಗಿರಬಾರದು. ಬದಲಿಗೆ, ಒಂದು ಮಾದರಿ ಬದಲಾವಣೆಯಾಗಿರಬೇಕು. ಸೈಬರ್ ಅಪರಾಧದ ವಿರುದ್ಧದ ಹೋರಾಟದಲ್ಲಿ ದಾರಿ ದೀಪವಾಗಬೇಕು. ಸಿಸಿಸಿಯು ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಿದರೆ, ಹೊಸ ಯುಗದ ಅಪರಾಧಗಳನ್ನು ಎದುರಿಸಲು ಸಾಧ್ಯವಾಗುತ್ತದೆ. ಆದ್ದರಿಂದ, ಸಿಸಿಸಿಯನ್ನು ಬಲಪಡಿಸಬೇಕು ಎಂದು ಇದೇ ವೇಳೆ ನ್ಯಾಯಪೀಠ ನಿರ್ದೇಶಿಸಿದೆ.
ಸೈಬರ್ ಅಪರಾಧಗಳ ತನಿಖೆಯಲ್ಲಿನ ಪ್ರಗತಿ ಅಥವಾ ಎಲ್ಲ ಮಾಹಿತಿ ಮತ್ತು ತಂತ್ರಜ್ಞಾನ ಪ್ರಕರಣಗಳನ್ನು ಒಂದೇ ಸೂರಿನಡಿ ತರಬೇಕು. ಕೇಂದ್ರದ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಇರಬೇಕು. ಸಿಸಿಸಿ ಅಡಿಯಲ್ಲಿ ತರಲಾದ ಅಧಿಕಾರಿಗಳನ್ನು ಅಸಾಧಾರಣ ಸಂದರ್ಭಗಳನ್ನು ಹೊರತುಪಡಿಸಿ, ವರ್ಗಾವಣೆ ಮಾಡಬಾರದು. ಪೂರ್ವಾಪರ ಸಮಾಲೋಚನೆಯಿಲ್ಲದೆ ಸಿಸಿಸಿ ಮುಖ್ಯಸ್ಥ ಮತ್ತು ಅವರ ತಂಡದ ಸದಸ್ಯರನ್ನು ರಾತ್ರೋರಾತ್ರಿ ಸ್ಥಾನದಿಂದ ಕೆಳಗಿಳಿಸಬಾರದು. ಅವರ ವರ್ಗಾವಣೆ ಮಾಡುವ ಮೂಲಕ ಸೈಬರ್ ಅಪರಾಧ ಪ್ರಕರಣಗಳ ತನಿಖೆಗೆ ಅಡಚಣೆ ಉಂಟು ಮಾಡಬಾರದು ಎಂದು ತಾಕೀತು ಮಾಡಿದ ಹೈಕೋರ್ಟ್, ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 24ಕ್ಕೆ ಮುಂದೂಡಿತು.