ಮಾಲೂರು ಶಾಸಕ ನಂಜೇಗೌಡ ಆಯ್ಕೆ ಅನೂರ್ಜಿತ; ನಾಲ್ಕು ವಾರದಲ್ಲಿ ಹೊಸದಾಗಿ ಮತ ಎಣಿಕೆ ನಡೆಸಿ, ಫಲಿತಾಂಶ ಪ್ರಕಟಿಸಲು ಹೈಕೋರ್ಟ್ ಆದೇಶ

ಶಾಸಕ ಕೆ.ವೈ. ನಂಜೇಗೌಡ
ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯ ಮಾಲೂರು ಕ್ಷೇತ್ರದ ಫಲಿತಾಂಶವನ್ನು ರದ್ದುಪಡಿಸಿರುವ ಹೈಕೋರ್ಟ್, ಮುಂದಿನ ನಾಲ್ಕು ವಾರಗಳಲ್ಲಿ ಹೊಸದಾಗಿ ಮತ ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿದೆ. ಇದರಿಂದ, ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ಅವರ ಆಯ್ಕೆ ಅನೂರ್ಜಿತಗೊಂಡಂತಾಗಿದೆ.
ವಿಧಾನಸಭೆ ಚುನಾವಣೆಯಲ್ಲಿ ಕೋಲಾರದ ಮಾಲೂರು ಕ್ಷೇತ್ರದಿಂದ ಶಾಸಕರಾಗಿ ಕೆ.ವೈ. ನಂಜೇಗೌಡ ಆಯ್ಕೆಯಾಗಿರುವುದನ್ನು ಅನೂರ್ಜಿತಗೊಳಿಸಬೇಕು ಎಂದು ಕೋರಿ ಬಿಜೆಪಿ ಪರಾಜಿತ ಅಭ್ಯರ್ಥಿ ಕೆ.ಎಸ್. ಮಂಜುನಾಥ್ ಗೌಡ ಸಲ್ಲಿಸಿದ್ದ ಚುನಾವಣಾ ರಿಟ್ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಜತೆಗೆ, ಮಾಲೂರು ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯದ ದೃಶ್ಯಾವಳಿಗಳನ್ನು ಚಿತ್ರೀಕರಿಸಿ ಶೇಖರಿಸಿಟ್ಟಿರುವ ಹಾರ್ಡ್ಡಿಸ್ಕ್ ಅನ್ನು ಐಕಿಯಾ ಬಿಸಿನೆಸ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ನಿಂದ ಪಡೆಯಲಾಗಿದೆಯೇ, ಇಲ್ಲವೇ ಎಂಬ ಬಗ್ಗೆ ವಿವರಣೆ ನೀಡಿ ಪ್ರಮಾಣಪತ್ರ ಸಲ್ಲಿಸುವಂತೆ ಕೋಲಾರ ಜಿಲ್ಲಾ ಚುನಾವಣಾಧಿಕಾರಿಯಾಗಿದ್ದ ವೆಂಕಟರಾಜು ಅವರಿಗೆ ನ್ಯಾಯಾಲಯ ಸೂಚಿಸಿದೆ. ವಿಸ್ತೃತ ತೀರ್ಪಿನ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಇದೇ ವೇಳೆ, ನಂಜೇಗೌಡ ಪರ ವಕೀಲರು, ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಮೇಲ್ವಿನವಿ ಸಲ್ಲಿಸಲಾಗುವುದು. ಅಲ್ಲಿಯವರೆಗೆ ಆದೇಶಕ್ಕೆ ತಡೆ ನೀಡುವಂತೆ ಕೋರಿದರು. ಈ ಮನವಿ ಪುರಸ್ಕರಿಸಿದ ಹೈಕೋರ್ಟ್ ಆದೇಶಕ್ಕೆ 30 ದಿನಗಳ ಕಾಲ ತಡೆಯಾಜ್ಞೆ ನೀಡಿತು.
ಪ್ರಕರಣವೇನು? :
ಮಾಲೂರು ವಿಧಾನಸಭೆ ಕ್ಷೇತ್ರ ಮತ ಎಣಿಕೆ ಪ್ರಕ್ರಿಯೆಯಲ್ಲಿ ಹಲವು ಲೋಪದೋಷಗಳಾಗಿವೆ. ಆದ್ದರಿಂದ, ಆ ಕ್ಷೇತ್ರದಿಂದ ಶಾಸಕರಾಗಿ ಕೆ.ವೈ.ನಂಜೇಗೌಡ ಆಯ್ಕೆಯಾಗಿರುವುದನ್ನು ಅನೂರ್ಜಿತಗೊಳಿಸಬೇಕು ಎಂದು ಕೋರಿ ಕೆ.ಎಸ್. ಮಂಜುನಾಥ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.