ಹಾಸನ ದುರಂತ : ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ

ಹಾಸನ : ಹೊಳೆನರಸೀಪುರ ತಾಲೂಕಿನ ಮೊಸಳೆ ಹೊಸಳ್ಳಿ ಬಳಿ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಇದರಿಂದಾಗಿ ಕನಿಷ್ಠ 9 ಮಂದಿ ಮೃತಪಟ್ಟಿದ್ದಾರೆ. ಸುಮಾರು 23ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದು, ಮೃತರ ಸಂಖ್ಯೆ ಹೆಚ್ಚಾಗುವ ಆತಂಕ ವ್ಯಕ್ತವಾಗಿದೆ.
ಹಾಸನ ದುರಂತಕ್ಕೆ ಸಿಎಂ ಸಂತಾಪ; ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಣೆ
"ಹಾಸನದಲ್ಲಿ ಗಣೇಶ ವಿಸರ್ಜನೆಗಾಗಿ ಮೆರವಣಿಗೆಯಲ್ಲಿ ತೆರಳುತ್ತಿದ್ದವರ ಮೇಲೆ ಲಾರಿ ಹರಿದು ಹಲವರು ಸಾವಿಗೀಡಾಗಿ, ಸುಮಾರು 20ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡ ಸುದ್ದಿ ತಿಳಿದು ಅತೀವ ದುಃಖವಾಯಿತು.ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಗಾಯಾಳುಗಳು ಆದಷ್ಟು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಮೃತರ ಕುಟುಂಬಗಳಿಗೆ ಸರ್ಕಾರದ ವತಿಯಿಂದ ತಲಾ ರೂ.5 ಲಕ್ಷ ಪರಿಹಾರ ನೀಡಲಾಗುವುದು. ಘಟನೆಯಲ್ಲಿ ಗಾಯಗೊಂಡವರ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಇದು ಅತ್ಯಂತ ನೋವಿನ ಘಳಿಗೆ. ಅಪಘಾತ ಸಂತ್ರಸ್ತ ಕುಟುಂಬಗಳ ಜೊತೆ ನಾವೆಲ್ಲರೂ ನಿಲ್ಲೋಣ"
ಸಿದ್ದರಾಮಯ್ಯ, ಮುಖ್ಯಮಂತ್ರಿ
"ಹಾಸನ ಜಿಲ್ಲೆಯ ಮೊಸಳೆಹೊಸಳ್ಳಿಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಸಂಭವಿಸಿದ ಭೀಕರ ಅಪಘಾತ ಅತ್ಯಂತ ಆಘಾತಕಾರಿಯಾಗಿದ್ದು, ಈ ಘೋರ ದುರ್ಘಟನೆಯ ಬಗ್ಗೆ ಕೇಳಿ ತುಂಬಾ ದುಃಖವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಮೃತರ ಕುಟುಂಬಕ್ಕೆ 5 ಲಕ್ಷ ರೂ. ಹಾಗೂ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ. ಗಾಯಾಳುಗಳು ಶೀಘ್ರದಲ್ಲೇ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ"
ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ
"ಹಾಸನ ಜಿಲ್ಲೆಯ ಮೊಸಳೆಹೊಸಳ್ಳಿ ಗ್ರಾಮದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಕ್ಯಾಂಟರ್ ಲಾರಿ ನುಗ್ಗಿ ಸಂಭವಿಸಿದ ದಾರುಣ ಅಪಘಾತದಲ್ಲಿ ಎಂಟು ಜನರು ಸಾವಿಗೀಡಾಗಿ 20ಕ್ಕೂ ಹೆಚ್ಚು ಜನ ತೀವ್ರವಾಗಿ ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ತೀವ್ರ ಆಘಾತ ಉಂಟುಮಾಡಿದೆ. ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡವರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ, ಮೃತರ ಕುಟುಂಬಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ರಾಜ್ಯ ಸರ್ಕಾರ, ಜಿಲ್ಲಾಡಳಿತ ಈ ಕೂಡಲೇ ಗಾಯಗೊಂಡವರ ಚಿಕಿತ್ಸೆಗೆ ಕ್ರಮ ಕೈಗೊಳ್ಳಬೇಕು ಮತ್ತು ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ಘೋಷಿಸಿಬೇಕು ಎಂದು ಆಗ್ರಹಿಸುತ್ತೇನೆ"
ಆರ್.ಅಶೋಕ್, ವಿಪಕ್ಷ ನಾಯಕ
ಘಟನೆಯ ವಿವರ:
ಈ ಘಟನೆ ರಾತ್ರಿ 8:30ಕ್ಕೆ ರಾಷ್ಟ್ರೀಯ ಹೆದ್ದಾರಿಯ ಮೊಸಳೆಹೊಸಳ್ಳಿ ಬಳಿ ನಡೆದಿದೆ. ಹಾಸನದಿಂದ ಮೈಸೂರಿನ ಕಡೆಗೆ ಸಂಚರಿಸುತ್ತಿದ್ದ ಟ್ರಕ್ ವೊಂದು ಓವರ್‌ಟೇಕ್ ಮಾಡುವ ರಭಸದಲ್ಲಿ ರಸ್ತೆಯ ಡಿವೈಡರ್‌ಗೆ ಢಿಕ್ಕಿ ಹೊಡೆದು ನಿಯಂತ್ರಣವನ್ನು ಕಳೆದುಕೊಂಡಿದೆ. ನಂತರ ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದ ಗುಂಪಿನ ಮೇಲೆ ನೇರವಾಗಿ ಹರಿದ ಪರಿಣಾಮ ದುರ್ಘಟನೆ ಸಂಭವಿಸಿದೆ. ಮೆರವಣಿಗೆಯಲ್ಲಿ ಸ್ಥಳೀಯ ಗ್ರಾಮಸ್ಥರು, ವಿದ್ಯಾರ್ಥಿಗಳು ಸೇರಿದಂತೆ ಭಕ್ತರು ಭಾಗವಹಿಸುತ್ತಿದ್ದರು.
ಮೃತರಲ್ಲಿ ಗೊಕುಲ್ (17) ಮತ್ತು ಈಶ್ವರ್ (17) ಎಂಬ ಇಬ್ಬರು ಸ್ಥಳೀಯ ಗ್ರಾಮಸ್ಥರಾಗಿದ್ದಾರೆ. ಗಾಯಾಳುಗಳಲ್ಲಿ ಹಲವರು ಗಂಭೀರ ಸ್ಥಿತಿಯಲ್ಲಿದ್ದು, ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವು ಗಾಯಾಳುಗಳನ್ನು ಹಾಸನದ ಖಾಸಗಿ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಮಾಹಿತಿ ಪ್ರಕಾರ, ಲಾರಿಯ ಚಾಲಕ ರಭಸದಿಂದ ಆಟೋರಿಕ್ಷಾ ಓವರ್‌ಟೇಕ್ ಸಮಯದಲ್ಲಿ ನಿಯಂತ್ರಣ ಕಳೆದುಕೊಂಡಿದ್ದಾನೆ. ಚಾಲಕನನ್ನು ಸ್ಥಳದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.