ರಾಜ್ಯದಲ್ಲಿ ಕೋವಿಡ್ ಪ್ರಕರಣ ಹೆಚ್ಚಳ | ಅನಾರೋಗ್ಯ ಪೀಡಿತ ಮಕ್ಕಳನ್ನು ಶಾಲೆಗೆ ಕಳುಹಿಸಬೇಡಿ : ಆರೋಗ್ಯ ಇಲಾಖೆ

ಸಾಂದರ್ಭಿಕ ಚಿತ್ರ | PC: Meta AI
ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಮಹತ್ವದ ಸಲಹೆಗಳನ್ನು ನೀಡಿದೆ. ಅನಾರೋಗ್ಯ ಪೀಡಿತ ಮಕ್ಕಳನ್ನು ಮನೆಯಲ್ಲಿಯೇ ಇರಿಸಿ, ರೋಗಲಕ್ಷಣಗಳಿಗಾಗಿ ವಿದ್ಯಾರ್ಥಿಗಳನ್ನು ಮೇಲ್ವಿಚಾರಣೆ ಮಾಡಿ, ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸೂಚಿಸಿದೆ.
ನಾಗರಿಕರು ಭಯಭೀತರಾಗದೆ ಹಾಗೂ ಜಾಗರೂಕರಾಗಿದ್ದುಕೊಂಡು ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ಪ್ರಯತ್ನಗಳನ್ನು ಮಾಡಬೇಕು. ಯಾವುದೇ ಹೊಸ ರೂಪಾಂತರಗಳು ಅಥವಾ ಸಂಭಾವ್ಯ ಕೋವಿಡ್ ಪ್ರಕರಣಗಳನ್ನು ಪತ್ತೆಹಚ್ಚಲು ಮತ್ತು ನಿಯಂತ್ರಿಸಲು ಸಾರ್ವಜನಿಕರ ಸಹಕಾರವು ಅತ್ಯಗತ್ಯ ಎಂದು ಹೇಳಿದೆ.
ಜಾಗರೂಕರಾಗಿರಿ, ಆತಂಕಪಡಬೇಡಿ, ಅಧಿಕೃತ ಮೂಲಗಳ ಮೂಲಕ ಮಾಹಿತಿ ಪಡೆಯಿರಿ, ಪರಿಶೀಲಿಸದ ಮಾಹಿತಿಯನ್ನು ಪರಿಗಣಿಸದಿರಿ. ವಿದೇಶಗಳಿಂದ ಬರುವ ಪ್ರಯಾಣಿಕರ ಬಗ್ಗೆ ಆರೋಗ್ಯ ಅಧಿಕಾರಿಗಳಿಗೆ ತಿಳಿಸಬೇಕು. ಜನದಟ್ಟಣೆಯ ಸ್ಥಳಗಳಲ್ಲಿ ಮಾಸ್ಕ್ ಧರಿಸಿ, ದೈಹಿಕ ಅಂತರವನ್ನ ಕಾಪಾಡಿಕೊಳ್ಳಿ, ಉತ್ತಮ ನೈರ್ಮಲ್ಯವನ್ನು ಅಭ್ಯಾಸ ಮಾಡಿ. ಜ್ವರ, ಕೆಮ್ಮು, ಎದೆನೋವು ಅಥವಾ ಉಸಿರಾಟದ ತೊಂದರೆ ಇದ್ದರೆ ತಕ್ಷಣ ವೈದ್ಯಕೀಯ ಸಲಹೆ ಪಡೆಯಿರಿ ಎಂದು ಸೂಚಿಸಲಾಗಿದೆ.
ಆರೋಗ್ಯ ಸಲಹೆಗೆ ಉಚಿತ ಸಹಾಯವಾಣಿ ಸಂಖ್ಯೆ 1800 425 8330ಗೆ ಕರೆ ಮಾಡಿ ಹಾಗೂ ರೋಗಿಗಳ ತುರ್ತು ಸಾಗಣೆಗೆ 108ಗೆ ಕರೆ ಮಾಡಬಹುದು. ನಾವು-ನಮ್ಮ ಜನರನ್ನು ಸುರಕ್ಷಿತವಾಗಿರಿಸಿಕೊಳ್ಳಲು ಅಗತ್ಯ ಮುನ್ನಚ್ಚರಿಕೆ ವಹಿಸಿದರೆ ಕೋವಿಡ್ ನಿಯಂತ್ರಿಸಬಹುದಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.