ರಸ್ತೆ ಅಪಘಾತ ಸಂತಸ್ಥರಿಗೆ ರಾಜ್ಯ ಸರಕಾರದಿಂದ ಹೆಚ್ಚುವರಿ 1ಲಕ್ಷ ರೂ.ನೆರವು

ಬೆಂಗಳೂರು: ರಾಜ್ಯ ಸರಕಾರವು ಅನುಷ್ಟಾನ ಮಾಡಿದ ರಸ್ತೆ ಅಪಘಾತ ಸಂತ್ರಸ್ತರ ನಗದು ರಹಿತ ಚಿಕಿತ್ಸಾ ಯೋಜನೆಯನ್ನು ಮಾರ್ಪಡಿಸಿದ್ದು, ಪ್ರತಿ ಅಪಘಾತ ಸಂತ್ರಸ್ತರಿಗೆ ಹೆಚ್ಚುವರಿಯಾಗಿ ಒಂದು ಲಕ್ಷ ರೂ. ಆರ್ಥಿಕ ನೆರವು ನೀಡುವುದಾಗಿ ಆದೇಶ ಹೊರಡಿಸಿದೆ.
ಕೇಂದ್ರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮಂತ್ರಾಲಯವು 1988ರ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 162 ರಡಿಯಲ್ಲಿ ಈ ಯೋಜನೆಯನ್ನು ಜಾರಿ ಮಾಡಿದೆ. ಈ ಯೋಜನೆಯಡಿ ಪ್ರತಿ ವ್ಯಕ್ತಿಗೆ ವರ್ಷಕ್ಕೆ 1.5 ಲಕ್ಷ ರೂ. ಮಿತಿಗೊಳಪಟ್ಟು ಗೋಲ್ಡನ್ ಅವರ್ (ಮೊದಲ ಒಂದು ಗಂಟೆ) ಅವಧಿಯಲ್ಲಿ ಮತ್ತು ಅಪಘಾತದ ನಂತರದ 7 ದಿನಗಳವರೆಗೆ ಉಚಿತ ತುರ್ತು ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಲಾಗುತ್ತದೆ.
ಈ ಯೋಜನೆಯು ಸಾಮಾಜಿಕ-ಆರ್ಥಿಕ ಸ್ಥಿತಿ ಅಥವಾ ರಾಷ್ಟ್ರೀಯತೆಯನ್ನು ಲೆಕ್ಕಿಸದೆ ಎಲ್ಲ ವ್ಯಕ್ತಿಗಳಿಗೆ ಅನ್ವಯಿಸುತ್ತದೆ. ಸುಪ್ರೀಂ ಕೋರ್ಟ್ ನಿರ್ದೇಶನಗಳ ಪ್ರಕಾರ ಈ ಯೋಜನೆಯಡಿಯಲ್ಲಿ ನೋಂದಾವಣೆಯಾಗಿಲ್ಲದ ಆಸ್ಪತ್ರೆಗಳೂ ಕಡ್ಡಾಯವಾಗಿ ಸಂತ್ರಸ್ಥರಿಗೆ ಚಿಕಿತ್ಸೆ ನೀಡಬೇಕು. ಆದರೆ ನೋಂದಾವಣೆಯಾಗಿಲ್ಲದ ಆಸ್ಪತ್ರೆಗಳು ಸ್ಥಿರೀಕರಣ ಪ್ಯಾಕೇಜ್‍ಗಳಿಗೆ ಮಾತ್ರ ಅರ್ಹವಾಗಿರುತ್ತವೆ.
ರಾಜ್ಯ ಸರಕಾರವು ರಾಜ್ಯದಲ್ಲಿಯೂ ಈ ಯೋಜನೆಯನ್ನು ಅನುಷ್ಟಾನ ಮಾಡಿದ್ದು, ಯೋಜನೆಯ ಮಾರ್ಗಸೂಚಿಗಳಂತೆ 1.5 ಲಕ್ಷ ರೂ. ಮೀರಿದ ಚಿಕಿತ್ಸಾ ವಿಧಾನಗಳಿಗೆ ವೈದ್ಯಕೀಯ ತಜ್ಞರ ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ಹೆಚ್ಚುವರಿಯಾಗಿ ಒಂದು ಲಕ್ಷ ರೂ. ಸಹಾಯಧನವನ್ನು ನೀಡಲಿದೆ.
ಅಪಘಾತದಿಂದಾಗಿ ವೆಂಟಿಲೇಟರ್ ನಲ್ಲಿ ಇರುವ ರೋಗಿಗಳು ಹಾಗೂ ಮಲ್ಟಿ ಆರ್ಗನ್ ವೈಫಲ್ಯ ಅಥವಾ ಇತರ ಗಂಭೀರ ಚಿಕಿತ್ಸೆಗೆ ಒಳಪಟ್ಟವರು, 7 ದಿನಗಳ ಚಿಕಿತ್ಸೆ ನಂತರವೂ ವಿಸ್ತ್ರತ ಚಿಕಿತ್ಸೆಗೆ ಒಳಗಾದಲ್ಲಿ ರಾಜ್ಯವು ಅವರಿಗೆ ಹೆಚ್ಚುವರಿ ಆರ್ಥಿಕ ನೆರವು ನೀಡಲಿದೆ.
ಆರಂಭಿಕ ಚಿಕಿತ್ಸೆಯ ನಂತರ ರೋಗಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕಾದರೆ, ಆ ಆಸ್ಪತ್ರೆಯು ರಾಷ್ಟ್ರೀಯ ಮಂಡಳಿಗಳಲ್ಲಿ ಮಾನ್ಯತೆ ಪಡೆದಿರಬೇಕು ಅಥವಾ ರಾಜ್ಯದ ನೊಂದಾವಣೆ ಮಾನದಂಡಗಳನ್ನು ಪೂರೈಸಿರಬೇಕು. ಈ ಸಂದರ್ಭದಲ್ಲಿ ರೋಗಿಯ ಚಿಕಿತ್ಸೆಯು ಎಸ್‍ಎಎಸ್‍ಟಿ ಪ್ಯಾಕೇಜ್ ದರಗಳಲ್ಲಿ 1 ಲಕ್ಷ ರೂ.ಗಳ ಮಿತಿಗೆ ಒಳಪಟ್ಟಿರಬೇಕು ಎಂದು ಆದೇಶದಲ್ಲಿ ತಿಳಿಸಿದೆ.