ಬಿಜಿಪಿ ನಾಯಕರಿಗೆ ಸರಣಿ ಪ್ರಶ್ನೆಗಳೊಂದಿಗೆ ಸಚಿವ ಪ್ರಿಯಾಂಕ್ ಖರ್ಗೆ ಪೋಸ್ಟ್ ಮಾಡಿರುವ ವಿಡಿಯೋದಲ್ಲೇನಿದೆ?

ಬೆಂಗಳೂರು : ʼಸೌಜನ್ಯಾಳನ್ನು ಕೊನೆಯದಾಗಿ ಮಾತನಾಡಿಸಿದ್ದು ನಾನು. ಅದಾಗಿ ಐದು ನಿಮಿಷ ಆದಾಗಲೇ ಆಕೆಯನ್ನು ಅಪಹರಣ ಮಾಡಿದ್ದಾರೆ. ಅವತ್ತೇ ರಾತ್ರಿ ನಾನು ಹೆಗ್ಗಡೆಯವರ ಬಳಿ ಈ ಮಾಹಿತಿ ಹೇಳಿದ್ದೆʼ ಎಂದು ಸೌಜನ್ಯಾಳ ಮಾವ ಹೇಳಿದ್ದಾರೆ.
ಸೆ.1 ಸೋಮವಾರ ನಡೆದ ಧರ್ಮಸ್ಥಳ ಚಲೋ ಕಾರ್ಯಕ್ರಮದ ಬಳಿಕ ಸೌಜನ್ಯಾಳ ಮನೆಗೆ ತೆರಳಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಹಿತ ಇತರ ನಾಯಕರ ನಿಯೋಗದೊಂದಿಗೆ ಸೌಜನ್ಯಾಳ ತಾಯಿ ಹಾಗೂ ಕುಟುಂಬಸ್ಥರು ಮಾತನಾಡಿರುವ ವಿಡಿಯೋವನ್ನು ಸಚಿವ ಪ್ರಿಯಾಂಕ್ ಖರ್ಗೆ ಪೋಸ್ಟ್ ಮಾಡಿದ್ದಾರೆ.
ವಿಡಿಯೋದಲ್ಲೇನಿದೆ?:
ಬಿಜೆಪಿ ನಿಯೋಗದೊಂದಿಗೆ ಮಾತನಾಡಿರುವ ಸೌಜನ್ಯಾ ತಾಯಿ ಕುಸುಮಾವತಿ ”ನನ್ನ ಮಗಳದ್ದು ಏನು ಸಾರ್? ನನ್ನ ಮಗಳನ್ನು ತೀರಿಸಿ ಬಿಟ್ಟಿದ್ದಾರೆ. ನ್ಯಾಯ ಕೇಳಲು ಹೋದ ನಮ್ಮ ಮೇಲೆಯೇ ದಬ್ಬಾಳಿಕೆ ಮಾಡುತ್ತಿದ್ದಾರೆ” ಎಂದು ಕಣ್ಣೀರಿಟ್ಟಿದ್ದಾರೆ.
“ನೋಡಿ ಸರ್, ಸೌಜನ್ಯಾಳ ಹೆಸರು ಹೇಳಿಕೊಂಡು ಹಣ ಮಾಡಿದ್ದಾರೆ. ಇಷ್ಟು ದೊಡ್ಡ ಮನೆ ಕಟ್ಟಿದ್ದಾರೆ ಅಂತ ನಿಮ್ಮ ಪಕ್ಷದಲ್ಲಿದ್ದವರೇ ಹೇಳುತ್ತಿದ್ದಾರೆ. ಹಾಗಾದರೆ ನಮ್ಮ ಮಗಳಿಗೆ ನ್ಯಾಯ ಇಲ್ವಾ ಸರ್? ಎಂದು ಪ್ರಶ್ನಿಸಿದರು.
“ನೋಡಿ, ನಮ್ಮ ಮನೆಯಿಂದ ಅನ್ಯಾಯ ಆಗಿದ್ದು ಹೌದು. ಇದನ್ನು ಇಲ್ಲಿಗೇ ಮುಗಿಸಿ ಬಿಡುವ ಅಂತ ನಮ್ಮ ಕುಟುಂಬದ ದೊಡ್ಡಪ್ಪ ಅವರೊಂದಿಗೆ ಇದೇ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ಹಾಗಾದರೆ ನ್ಯಾಯ ಕೊಡಿಸೋದು ಯಾರು ಸರ್?. ಇದೇ ವೀರೇಂದ್ರ ಹೆಗ್ಗಡೆಯ ತಮ್ಮನ ಬಳಿಗೆ ನನ್ನ ಗಂಡ ಮತ್ತು ತಮ್ಮ ವಿಠ್ಠಲ ಗೌಡ ಹೋಗಿ, ನಾನು ಸೌಜನ್ಯಾಳ ಅಪ್ಪ, ಅದು ಅವಳ ಮಾವ ಅಂತ ಹೇಳಿದ್ದಕ್ಕೆ ʼಹೌದಾ ಮಾರಾಯ್ರೇ, ತುಂಬಾ ಒಳ್ಳೆಯ ಹುಡುಗಿ, ತುಂಬಾ ಚೆನ್ನಾಗಿದ್ದಾಳೆ. ನಿನಗೆ ಪಕ್ಷದವರೆಲ್ಲ ಬಂದು ಹಣ ಕೊಡ್ತಿದ್ದಾರೆ. ಅದನ್ನು ಸುಮ್ನೆ ಕೋರ್ಟು, ಕಚೇರಿ ಅಂತ ಖರ್ಚು ಮಾಡಬೇಡಿ. ಇದ್ದ ಮಕ್ಕಳನ್ನು ನೋಡಿಕೊಂಡಿರಿʼ ಅಂತ ಹೇಳಿದ್ದಾರೆ”. “ನೀನು ನಡೆದುಕೊಂಡು ಹೋಗುವಾಗ ಆಚೆ ಈಚೆ ದೊಡ್ಡ ಬಂಡೆಗಳು ಇರುತ್ತೆ. ಆ ಕಡೆ ಈ ಕಡೆ ನೋಡ್ಕೊಂಡು ನಡಿ. ಹೆಲ್ಮೆಟ್ ಧರಿಸಿಕೊಂಡು ಹೋಗು ಅಂತ ನನ್ನ ತಮ್ಮನಿಗೆ ಹೇಳಿದ್ದಾರೆ. ಹಾಗಾದರೆ ನಮಗೆ ಸಾಂತ್ವನ ಯಾರು ಹೇಳುತ್ತಾರೆ ಸರ್?” ಎಂದು ಕುಸುಮಾವತಿ ಪ್ರಶ್ನಿಸಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಇದಕ್ಕೆ ಪ್ರತಿಕ್ರಿಯಿಸಿದ ವಿಜಯೇಂದ್ರ ಅವರು, “ಈಗ ಆಗಿದ್ದೆಲ್ಲಾ ಆಯ್ತು. ನಾವಂತೂ ಮಗುವನ್ನು ಮರಳಿ ತರಲು ಸಾಧ್ಯ ಇಲ್ಲ. ನಾನು ಇಲ್ಲಿ ಬಂದಿರುವ ಉದ್ದೇಶ ಒಂದೇ. ನೀವು ಮಗಳನ್ನು ಕಳೆದುಕೊಂಡಿದ್ದೀರಿ. ಬೆಲೆ ಕಟ್ಟಲು ಸಾಧ್ಯವಿಲ್ಲ. ನಾನು ಏನು ವಿನಂತಿ ಮಾಡುತ್ತೇನೆಂದರೆ, ಈಗ ಸಿಬಿಐ ಕೋರ್ಟ್ ಆದೇಶ ಏನು ಆಗಿದೆಯೋ, ಆ ಬಗ್ಗೆ ಮೇಲ್ಮನವಿ ಸಲ್ಲಿಸೋ ನಿರ್ಧಾರ ನೀವು ಮಾಡಿದ್ದರೆ, ಸುಪ್ರೀಂ ಕೋರ್ಟ್ ನಲ್ಲಿ ಅಡ್ವೊಕೇಟ್ ಬಗ್ಗೆ ನೀವೇನೂ ತಲೆಕೆಡಿಸಿಕೊಳ್ಳಬೇಡಿ. ಖಂಡಿತಾ ನಾನು ನಿಮ್ಮ ಜೊತೆ ಇರ್ತೇನೆ. ನಾವು ಪಕ್ಷದಿಂದ ಜವಾಬ್ದಾರಿ ತೆಗೆದುಕೊಂಡು ಖಂಡಿತಾ ನಿಮ್ಮ ಪರ ಇರುತ್ತೇವೆ” ಎಂದು ಹೇಳಿದರು.
"ಈ ಘಟನೆಯಲ್ಲಿ ಪೊಲೀಸ್ ಅವರು ಎಷ್ಟು ಭಾಗಿಯಾಗಿದ್ದಾರೆ ಎಂದರೆ , ಸೌಜನ್ಯಾಳ ಮೃತದೇಹದ ಪಕ್ಕ ಸಿಕ್ಕಿದ ಈ ಚೀಟಿ ಇದೆಯಲ್ಲಾ ಸರ್, ಇದನ್ನು ಸೌಜನ್ಯ ನಾಪತ್ತೆಯಾದ ಅಂದು ರಾತ್ರಿ ಮನೆಗೆ ಬಂದಿದ್ದ ಪೊಲೀಸರು ಅವಳ ಕಪಾಟಿನಲ್ಲಿದ್ದ ಪುಸ್ತಕದಿಂದ ಎರಡು ನಂಬರ್ ತೆಗೆದುಕೊಂಡು ಹೋಗಿದ್ದರು. ಅದು ನನ್ನ ಮೂರನೇ ಅಕ್ಕ ಮತ್ತು ಭಾವನದ್ದು. ಆ ನಂಬರ್ ನನಗೆ ಆವಾಗ ಝೂಮ್ ಮಾಡಿ ನೋಡಲು ಆಗಿರಲಿಲ್ಲ. ಅದೇ ಚೀಟಿಗಳನ್ನು ಮೃತದೇಹದ ಬಳಿ ಇಟ್ಟಿದ್ದಾರೆ. ಎಷ್ಟು ಫಿಟ್ ಮಾಡಿದ್ದಾರೆ ನೋಡಿ ಸರ್. ಮರುದಿನ ಬೆಳಿಗ್ಗೆ ನಮ್ಮನ್ನು ಬರಲು ಹೇಳಿದ್ದರಿಂದ ನಾವು ಹೋಗಿದ್ದೆವು. ನನ್ನ ಅಪ್ಪ ಜೊತೆಗಿದ್ದರು. ಆವಾಗ ಧಣಿಗಳು ಇದ್ದಾರಲ್ಲ ಅವರ ಬಾಯಲ್ಲಿ ಹೇಳಿದ ಮಾತು ʼಅವಳು ಯಾರೊಂದಿಗೋ ಓಡಿ ಹೋಗಿರ್ಬೇಕು. ಇನ್ನರಡು ದಿವಸದಲ್ಲಿ ಬರಬಹುದು. ಅವಳಿಗೆ ಹೊಡೆಯಲು ಹೋಗಬೇಡಿ” ಅಂತ ಸೌಜನ್ಯಾಳ ಮಾವ ಮಾತು ಮುಂದುವರಿಸಿದರು.
ಈ ವೇಳೆ ವಿಜಯೇಂದ್ರ ಅವರು ಸುದ್ದಿಗಾರರಿಗೆ "ಐದು ನಿಮಿಷ ಹೊರಗೆ ನಿಲ್ಲಿ, ಆ ಮೇಲೆ ನಾವು ಬ್ರೀಫ್ ಮಾಡುತ್ತೇವೆ" ಎಂದು ಹೇಳುತ್ತಿರುವುದು ವೀಡಿಯೋದಲ್ಲಿ ಕಾಣಿಸುತ್ತಿದೆ.