ಶಿವಮೊಗ್ಗ | ಹಾವುಗಳನ್ನು ಹಿಡಿದು ವಿಕೃತಿ ಮೆರೆದ ಆರೋಪ : ಪ್ರಕರಣ ದಾಖಲು

ಶಿವಮೊಗ್ಗ : ಹಾವುಗಳ ಜೊತೆ ವಿಕೃತಿ ಫೋಟೋ ಶೂಟ್ ಮಾಡಿಕೊಂಡ ಘಟನೆ ಜಿಲ್ಲೆಯ ಉಂಬ್ಳೆಬೈಲು ಅರಣ್ಯ ವ್ಯಾಪ್ತಿಯಲ್ಲಿ ನಡೆದಿದ್ದು, ವ್ಯಕ್ತಿಯೊಬ್ಬನ ಮನೆಯ ಮೇಲೆ ದಾಳಿ ನಡೆಸಿದ ಅರಣ್ಯಾಧಿಕಾರಿಗಳು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಮಳಲಿ ಕೊಪ್ಪದ ಇರ್ಫಾನ್ ಮತ್ತು ಮೂವರ ವಿರುದ್ಧ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಶಿವಮೊಗ್ಗದ, ಮತ್ತೂರು ರಸ್ತೆಯ ಮಳಲಿಕೊಪ್ಪದಲ್ಲಿ ಕೆಲವು ಯುವಕರು ಮೂರು ಹೆಬ್ಬಾವು ಮತ್ತು ಒಂದು ನಾಗರ ಹಾವುಗಳನ್ನು ಹಿಡಿದು ಕೊಂಡು ಅವುಗಳಿಗೆ ಹಿಂಸೆ ನೀಡುತ್ತಾ, ಫೋಟೋ ಶೂಟ್,ವಿಡಿಯೋ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು.
ಅವುಗಳ ಬಾಯಿಗೆ ಪ್ಲಾಸ್ಟರ್ ಹಾಕಿ ಬಂದ್ ಮಾಡಿ, ವಿಕೃತಿಯಾಗಿ ವರ್ತಿಸುತ್ತಾ ವಿಲಕ್ಷಣವಾಗಿ ಹಾವುಗಳ ಮೇಲೆ ದಬ್ಬಾಳಿಕೆ ಮಾಡುತ್ತಿರುವ ದೃಶ್ಯಗಳು ಅಮಾನವೀಯವಾಗಿ ಕಂಡುಬಂದಿದ್ದವು.
ಹೆಬ್ಬಾವು ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಶೆಡ್ಯೂಲ್ 1ಕ್ಕೆ ಸೇರಿದ ಉರಗವಾಗಿದೆ. ಇದು ಕಾನೂನು ಉಲ್ಲಂಘನೆ ಮತ್ತು ಬೇಟೆ ಪ್ರಕರಣ ಆಗಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಅರಣ್ಯ ಇಲಾಖೆಯವರು ಸೋಮವಾರ ಸಂಜೆ 4 ಗಂಟೆ ವೇಳೆಗೆ ಇರ್ಪಾನ್ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಕೆಲ ಚೀಲದಲ್ಲಿ ಹಾವುಗಳನ್ನ ಕಟ್ಟಿಡಲಾಗಿತ್ತು. ಅವುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇರ್ಫಾನ್ ಉರುಗ ತಜ್ಞರೆಂದು ಹೇಳಲಾಗುತ್ತಿದ್ದು ತನಿಖೆಯಲ್ಲಿ ಸತ್ಯಾಸತ್ಯತೆ ಹೊರಬರಬೇಕಿದೆ. ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.