ಅಕ್ಟೋಬರ್‌ನಲ್ಲಿ 800 ಕೆಪಿಎಸ್ ಶಾಲೆಗಳನ್ನು ತೆರೆಯಲಾಗುವುದು : ಸಚಿವ ಮಧುಬಂಗಾರಪ್ಪ

ಶಿವಮೊಗ್ಗ(ಸೆ.02) : ಅಕ್ಟೋಬರ್‌ನಲ್ಲಿ 800 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯಲಾಗುವುದು. ಈ ಯೋಜನೆಗೆ ಶಿವಮೊಗ್ಗದಲ್ಲಿಯೇ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ ಎಂದು ಸಾಕ್ಷರತಾ ಹಾಗೂ ಶಾಲಾ ಶಿಕ್ಷಣ ಸಚಿವ ಎಸ್.ಮಧುಬಂಗಾರಪ್ಪ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 800 ಕೆಪಿಎಸ್ ಶಾಲೆಗಳನ್ನು ತೆರೆಯಲಾಗುವುದು. ಇದರಲ್ಲಿ 500 ಶಾಲೆಗಳನ್ನು ಏಷ್ಯಾ ಡೆವಲಪ್‌ಮೆಂಟ್ ನೆರವಿನಿಂದ ಪ್ರಾರಂಭಿಸಲಾಗುತ್ತಿದೆ. ಕೆಕೆಆರ್‌ಎಲ್‌ನಿಂದ 200 ಶಾಲೆಗಳು, ಉಳಿದ 100 ಶಾಲೆಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
800 ಕೆಪಿಎಸ್ ಶಾಲೆಯಲ್ಲಿ ಉತ್ತರ ಕರ್ನಾಟಕಕ್ಕೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಸರಕಾರದ ಜೊತೆಗೆ ಎಸ್‌ಜಿಓಗಳು ಕೈ ಜೋಡಿಸಲಿವೆ. ಈ ಶಾಲೆಗಳನ್ನು ಮುಂಬರುವ ಅಕ್ಟೋಬರ್‌ನಲ್ಲಿ ಶಿವಮೊಗ್ಗದಿಂದಲೇ ಪ್ರಾರಂಭಿಸಲು ಸಿಎಂ ಅವರನ್ನು ಕರೆಸಲಾಗುತ್ತದೆ. ಇದರ ಜೊತೆಗೆ ಜಿಲ್ಲೆಯ ಅಭಿವೃದ್ದಿ ಕಾಮಗಾರಿಗೂ ಚಾಲನೆ ನೀಡಲಾಗುತ್ತದೆ. ಶರಾವತಿ ಪಂಪ್ಡ್ ಸ್ಟೋರೇಜ್ ವಿಚಾರವನ್ನೂ ಸಿಎಂ ಮಾತನಾಡಲಿದ್ದಾರೆ ಎಂದರು.
ಪ್ರಗತಿಪಥದ ಹೆಸರಿನಲ್ಲಿ ರಸ್ತೆ ಅಭಿವೃದ್ಧಿ:
ಪ್ರಗತಿಪಥ ಯೋಜನೆಯಡಿ ರಸ್ತೆ ಅಭಿವೃದ್ದಿಗೆ ಆದ್ಯತೆ ನೀಡಲಾಗುತ್ತಿದೆ. 50 ಕೋಟಿ ರೂ. ಪ್ರತಿ ಶಾಸಕರಿಗೆ ನೀಡಲಾಗಿದೆ. ಕಾಂಗ್ರೆಸ್ ಶಾಸಕರಿಗಷ್ಟೇ ಅಲ್ಲ, ಬಿಜೆಪಿ, ಜೆಡಿಎಸ್ ಶಾಸಕರುಗಳಿಗೂ ಸಹ ಅನುದಾನ ನೀಡುವುದಾಗಿ ಸಿಎಂ ಘೋಷಿಸಿದ್ದಾರೆ. ಪ್ರಗತಿಪಥದಡಿ 50 ಕಿ.ಮೀ ರಸ್ತೆ ನಿರ್ಮಾಣ ಮಾಡಲಾಗುವುದು. ನಮ್ಮ ಜಿಲ್ಲೆಯಲ್ಲಿ ಮಳೆಯಿಂದ ರಸ್ತೆಗಳು ಹಾಳಾಗಿರುವ ಕಾರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದರು.
ಮಳೆ ಹಾನಿ ಕುರಿತ ವರದಿಗೆ ಸೂಚನೆ:
ಜಿಲ್ಲೆಯಲ್ಲಿ ಮಳೆಯಿಂದ ಪ್ರವಾಹ ಬಾರದೇ ಇದ್ದರೂ ಸಹ ಅನೇಕ ಸಮಸ್ಯೆ ಸೃಷ್ಟಿಸಿದೆ. ಅಡಿಕೆ ಹಾಗೂ ಮೆಕ್ಕೆಜೋಳ ಬೆಳೆಗೆ ಹಾನಿಯಾಗಿದೆ. 45 ಸಾವಿರ ಹೆಕ್ಟೇರ್ ಅಡಿಕೆಗೆ ಕೊಳೆ ರೋಗ ಬಂದಿದೆ. ಅಡಿಕೆ ಸಂಶೋಧನಾ ಕೇಂದ್ರವನ್ನು ಕೇಂದ್ರ ಸರಕಾರ ಸ್ಥಾಪಿಸಬೇಕಿತ್ತು. ಕೊಳೆ ರೋಗದ ಕುರಿತು ತೋಟಗಾರಿಕಾ ಇಲಾಖೆ ಹಾಗೂ ಕೃಷಿ ವಿವಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ಕೇಂದ್ರದವರು 1,500 ಕೋಟಿ ರೂ ಘೋಷಣೆ ಮಾಡಿರುವುದು ಯಾವುದಕ್ಕೂ ಸಾಕಾಗುವುದಿಲ್ಲ. ರೈತರ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಶ್ರಮಿಸಬೇಕಿದೆ. ಹಿಂದೆ ಬರ ಬಂದಾಗ ನಾವು ಸುಪ್ರೀಂ ಕೋರ್ಟ್ಗೆ ಹೋಗಿ ಹಣ ಪಡೆಯಬೇಕಾಗಿತ್ತು. ಮುಂದೆ ಅದೇ ದಾರಿ ಹಿಡಿಯಬೇಕೇನೋ ಗೊತ್ತಿಲ್ಲ ಎಂದು ಹೇಳಿದರು.
ಸಂಸದ ರಾಘವೇಂದ್ರ ವಿರುದ್ಧ ಕಿಡಿ: ಸಂಸದರು ಖೇಲೂ ಇಂಡಿಯಾ ಅಂತ ಹಾಕಿಕೊಂಡಿದ್ದಾರೆ. ಕೇಂದ್ರ ಸರಕಾರದವರು ಬೇಟಿ ಬಚಾವೋ ಬೇಟಿ ಪಡಾವೋ ಎಂಬ ಯೋಜನೆ ಮಾಡಿದ್ದಾರೆ. ಅವರು ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ಭಾವನಾತ್ಮಕವಾಗಿ ಮಾತನಾಡುತ್ತಿದ್ದಾರೆ. ಇವರು ಕೊಳೆ ರೋಗದ ಬಗ್ಗೆ ಸಂಸತ್‌ನಲ್ಲಿ ಮಾತನಾಡುತ್ತಾರೆಯೇ? ಎಂದು ಪ್ರಶ್ನೆ ಮಾಡಿದರು.
ಇವರು ಅರಣ್ಯ ಇಲಾಖೆಯ ಬಗ್ಗೆ ಮಾತನಾಡಲ್ಲ. ರಾಜ್ಯದ ತೆರಿಗೆ ಬಗ್ಗೆ ಮಾತನಾಡುವುದಿಲ್ಲ. ಸಂಸದರು ದೆಹಲಿಗೆ ಹೋಗಿ ಮಂತ್ರಿಗಳ ಬಳಿ ಹೋಗಿ ಫೋಟೋ ತೆಗೆಸಿಕೊಂಡು ಬರುತ್ತಿದ್ದಾರೆ. ರಾಹುಲ್ ಗಾಂಧಿ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಪಾದಯಾತ್ರೆ ನಡೆಸಿದ್ದರು. ರಾಹುಲ್ ಗಾಂಧಿ ಪರ ಈಗ ಜನಸಾಮಾನ್ಯರು ಇದ್ದಾರೆ ಎಂದರು.
ಎಸ್‌ಐಟಿ ವರದಿ ಬಂದಿಲ್ಲ, ಆಗ್ಲೇ ಬಿಜೆಪಿಯಿಂದ ಯಾತ್ರೆ: ಬಿಜೆಪಿಯವರು ಧರ್ಮಸ್ಥಳದ ವಿಚಾರದಲ್ಲಿ ಆತುರವಾಗಿ ಮಾತನಾಡುತ್ತಿದ್ದಾರೆ. ಜೆಡಿಎಸ್ ಹಾಗೂ ಬಿಜೆಪಿಯವರು ಪ್ರಜ್ವಲ್ ವಿಚಾರದಲ್ಲಿ ಯಾಕೆ ಸಂತ್ರಸ್ತರ ಮನೆಗೆ ಹೋಗುತ್ತಿಲ್ಲ? ಎಂದು ಪ್ರಶ್ನಿಸಿದರು. ಮತ ಕಳವು ಕುರಿತು ನಾವು ಗ್ರಾಮ ಪಂಚಾಯತ್ ಮಟ್ಟಕ್ಕೂ ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಎಂಎಲ್‌ಸಿ ಬಲ್ಕಿಷ್ ಬಾನು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್, ಕಲಗೋಡು ರತ್ನಾಕರ್, ಜಿ.ಡಿ ಮಂಜುನಾಥ್, ರಮೇಶ್ ಶಂಕರಘಟ್ಟ ಸೇರಿದಂತೆ ಹಲವರಿದ್ದರು.