ಕೃತಕ ಬುದ್ಧಿಮತ್ತೆ ಬಳಸಿ ನನ್ನ ವಿರುದ್ಧ ಷಡ್ಯಂತ್ರ : ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರ ಆರೋಪ

ಶಿವಮೊಗ್ಗ, ಸೆ.2: ನನ್ನ ಮೇಲೆ ಬಂದಿರುವ ಆರೋಪ ಸಂಪೂರ್ಣ ಷಡ್ಯಂತ್ರದಿಂದ ಕೂಡಿದೆ. ನಿಗಮದ ಸೌಲಭ್ಯ ನೀಡಲು ಕಮಿಷನ್ ಕೇಳಿದ್ದೇನೆ ಎನ್ನುವ ಆ ವಿಡಿಯೋದಲ್ಲಿ ನಾನು ಇರುವುದು ನಿಜವಾದರೂ ಮಾತನಾಡಿದ್ದು ನಾನಲ್ಲ ಎಂದು ಭೋವಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ಸ್ಪಷ್ಟಪಡಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ ಧ್ವನಿ ನನ್ನದೂ ಅಲ್ಲ. ಇಡೀ ಸಂಭಾಷಣೆಗೆ ಬೇರೆ ಧ್ವನಿ ನೀಡಲಾಗಿದೆ. ಇದಕ್ಕಾಗಿ ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಬಳಸಿ ಷಡ್ಯಂತ್ರ ರೂಪಿಸಲಾಗಿದೆ ಎಂದರು.
ಷಡ್ಯಂತ್ರದ ವಿರುದ್ಧ ದೂರು ಕೊಡಲು ನಿರ್ಧರಿಸಿದ್ದೇನೆ. ಬೇಕಾದರೆ ಇದನ್ನು ಯಾವುದೇ ರೀತಿಯ ತನಿಖೆಗೆ ಒಳಪಡಿಸಬಹುದು ಎಂದು ಎಸ್. ರವಿಕುಮಾರ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ವೀರೇಶ್ ಕ್ಯಾತಿನಕೊಪ್ಪ, ಮನ್ಸೂರ್, ಕೃಷ್ಣಪ್ಪ, ತಿಮ್ಮರಾಜು, ದೇವಿಕುಮಾರ್, ಪಿ.ಒ. ಶಿವಕುಮಾರ್ ಉಪಸ್ಥಿತರಿದ್ದರು.
‘ಸಿಎಂ ಸೂಚಿಸಿದರೆ ರಾಜೀನಾಮೆ’ :
ರಾಜೀನಾಮೆ ಪ್ರಶ್ನೆ ಸರಕಾರದ ನಿರ್ಧಾರ. ಇದಕ್ಕೆ ಸಂಬಂಧಿಸಿದಂತೆ ಸಿಎಂ, ಡಿಸಿಎಂ, ಇಲಾಖೆ ಸಚಿವರನ್ನು ನಾನು ಭೇಟಿ ಮಾಡಬೇಕು. ನಿಜವಾಗಿ ನಡೆದಿರುವುದು ಏನೆಂದು ತಿಳಿಸಬೇಕಾಗಿದೆ. ಮುಂದೆ ಅವರು ನೀಡುವ ಸೂಚನೆಗೆ ನಾನು ಬದ್ಧನಾಗಿದ್ದೇನೆ. ರಾಜೀನಾಮೆ ನೀಡಬೇಕು ಎಂದು ಸೂಚನೆ ನೀಡಿದರೆ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದು ರವಿಕುಮಾರ್ ಹೇಳಿದರು.