ಶಿಕಾರಿಪುರ | ರಸ್ತೆ ಅಪಘಾತ: ವಿವಾಹ ನಿಶ್ಚಿತಾರ್ಥವಾಗಿದ್ದ ಜೋಡಿ ಮೃತ್ಯು

ಶಿವಮೊಗ್ಗ, ಸೆ.11: ಬೈಕ್ ಮತ್ತು ಓಮ್ನಿ ವಾಹನದ ಮಧ್ಯೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ ಬೈಕ್ ನಲ್ಲಿದ್ದ ಯುವಕ ಮತ್ತು ಯುವತಿ ಮೃತಪಟ್ಟ ಘಟನೆ ಶಿಕಾರಿಪುರ ತಾಲೂಕಿನ ಅಂಬಾರಗೊಪ್ಪ ಕ್ರಾಸ್ ಸಮೀಪ ನಡೆದಿರುವುದು ವರದಿಯಾಗಿದೆ.
ಮೃತರನ್ನು ತಾಲೂಕಿನ ಮಟ್ಟಿಕೋಟೆ ಗ್ರಾಮದ ರೇಖಾ(20) ಮತ್ತು ತೊಗರ್ಸಿ ಸಮೀಪದ ಗಂಗೊಳ್ಳಿ ಗ್ರಾಮದ ನಿವಾಸಿ ಬಸವನಗೌಡ ದ್ಯಾಮನಗೌಡ್ರ(25) ಎಂದು ಗುರುತಿಸಲಾಗಿದೆ. ಇವರಿಬ್ಬಗೆ ಡಿಸೆಂಬರ್ ನಲ್ಲಿ ವಿವಾಹ ನಿಗದಿಯಾಗಿತ್ತು.
ಪಟ್ಟಣದಲ್ಲಿರುವ ಗಾರ್ಮೆಂಟ್ಸ್ ಕೆಲಸಕ್ಕೆ ತೆರಳುವವರನ್ನು ಶಿರಾಳಕೊಪ್ಪ ಕಡೆಯಿಂದ ಕರೆದೊಯ್ಯುತ್ತಿದ್ದ ಓಮ್ನಿ ಮತ್ತು ಬಸವನಗೌಡ ಮತ್ತು ರೇಖಾ ಸಂಚರಿಸುತ್ತಿದ್ದ ಬೈಕ್ ಮಧ್ಯೆ ಮುಖಾಮುಖಿ ಢಿಕ್ಕಿ ಸಂಭವಿಸಿದೆ.
ಢಿಕ್ಕಿಯಾದ ರಭಸಕ್ಕೆ ಬೈಕ್ ರಸ್ತೆ ಪಕ್ಕದ ಹಳ್ಳಕ್ಕೆ ಉರುಳಿಬಿದ್ದಿದೆ. ಓಮ್ನಿಯ ಮುಂಭಾಗ ತೀವ್ರ ಹಾನಿಗೊಳಗಾಗಿದೆ.
ರೇಖಾ, ಬಸವನಗೌಡ ಇಬ್ಬರಿಗೂ ಕಳೆದ ತಿಂಗಳು ಮದುವೆ ನಿಶ್ಚಿತಾರ್ಥ ನಡೆದಿತ್ತು. ಮಳೆ ಕಾರಣಕ್ಕೆ ಮದುವೆ ಮುಂದಕ್ಕೆ ಹಾಕಿದ್ದು ಡಿಸೆಂಬರ್ನಲ್ಲಿ ಮದುವೆಗೆ ದಿನ ನಿಗದಿಯಾಗಿತ್ತು ಎಂದು ತಿಳಿದುಬಂದಿದೆ.