ಭಾರತ ರತ್ನಕ್ಕೆ ‘ಕುವೆಂಪು’ ಗೌರವ ಸಿಗುವುದೆ?

ಕನ್ನಡ ಚಿತ್ರರಂಗದ ಹಿರಿಯ ನಟ ವಿಷ್ಣುವರ್ಧನ್ ಮತ್ತು ಬಹುಭಾಷಾ ನಟಿ ಡಾ. ಬಿ. ಸರೋಜಾ ದೇವಿ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ನೀಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದೇ ಸಂದರ್ಭದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ರಾಜ್ಯ ಸರಕಾರ ‘ಭಾರತರತ್ನ ಪ್ರಶಸ್ತಿ’ಗೆ ಶಿಫಾರಸು ಮಾಡಿದೆ. ವಿವಿಧ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದ ಸಾಧಕರಿಗೆೆ ನೀಡುವ ರಾಜ್ಯದ ಅತ್ಯುನ್ನತ ಪ್ರಶಸ್ತಿಯಾಗಿ ‘ಕರ್ನಾಟಕ ರತ್ನ’ವನ್ನು ಗುರುತಿಸಲಾಗುತ್ತಿದೆ 1991ರಿಂದ ಈ ಪ್ರಶಸ್ತಿಗಾಗಿ ಸಾಧಕರನ್ನು ಗುರುತಿಸುವ ಪ್ರಕ್ರಿಯೆ ಆರಂಭಗೊಂಡಿತು. 1992ರಲ್ಲಿ ಮೊದಲ ಕರ್ನಾಟಕ ರತ್ನವನ್ನು ರಾಷ್ಟ್ರಕವಿ ಕುವೆಂಪು ಹಾಗೂ ಡಾ. ರಾಜ್‌ಕುಮಾರ್ ಅವರಿಗೆ ನೀಡಲಾಯಿತು. ಕುವೆಂಪು ಈ ನಾಡಿನ ಭಾಷೆ, ಸಾಹಿತ್ಯ, ಕಾವ್ಯ ಮತ್ತು ವೈಚಾರಿಕತೆಗೆ ಕೊಟ್ಟ ಕೊಡುಗೆಯ ಮೂಲಕ ಪ್ರಶಸ್ತಿಗೆ ಅರ್ಹರಾದರೆ, ರಾಜ್‌ಕುಮಾರ್ ಕೇವಲ ನಟರಾಗಿ ಮಾತ್ರವಲ್ಲ, ಕನ್ನಡ ಅಸ್ಮಿತೆಯ ಭಾಗವಾಗಿ ಗೌರವವನ್ನು ಪಡೆದುಕೊಂಡರು. ಅಲ್ಲಿಂದ ಈವರೆಗೆ ಸುಮಾರು 12 ಸಾಧಕರನ್ನು ಕರ್ನಾಟಕ ರತ್ನ ಪ್ರಶಸ್ತಿಗೆ ಗುರುತಿಸಲಾಗಿದೆ. ಈ ಬಾರಿ ಇಬ್ಬರು ಸಿನೆಮಾ ನಟ-ನಟಿಯರನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದ್ದು, ಈ ಮೂಲಕ ಸಿನಿಮಾ ರಂಗದ ಒಟ್ಟು ನಾಲ್ಕು ಮಂದಿ ಕರ್ನಾಟಕ ರತ್ನ ಪಡೆದಂತಾಗಿದೆ. ಈ ಬಾರಿ ಇಬ್ಬರೂ ಸಿನಿಮಾ ಕ್ಷೇತ್ರದ ಸಾಧಕರನ್ನೇ ಆಯ್ಕೆ ಮಾಡುವ ಅಗತ್ಯವಿತ್ತೆ? ಎನ್ನುವ ಪ್ರಶ್ನೆಯೂ ಇದೇ ಸಂದರ್ಭದಲ್ಲಿ ಎದ್ದಿದೆ. ವಿಷ್ಣುವರ್ಧನ್, ಸರೋಜಾದೇವಿ ಸಿನೆಮಾ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆ ಮಾಡಿದ್ದಾರಾದರೂ, ಕರ್ನಾಟಕ ರತ್ನಕ್ಕೆ ಸಿನೆಮಾ ಕ್ಷೇತ್ರದಿಂದ ಒಬ್ಬರನ್ನು ಮತ್ತು ಇತರ ಕ್ಷೇತ್ರದಿಂದ ಇನ್ನೊಬ್ಬ ಸಾಧಕರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿತ್ತು. ವಿಜ್ಞಾನ, ಕೃಷಿ, ಆರೋಗ್ಯ, ಪರಿಸರ ಮೊದಲಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಒಬ್ಬರೂ ಯಾಕೆ ಸರಕಾರಕ್ಕೆ ಸಿಗಲಿಲ್ಲ? ಎನ್ನುವ ಪ್ರಶ್ನೆ ನಿರ್ಲಕ್ಷಿಸುವಂತಹದೇನಲ್ಲ. ಮರಣೋತ್ತರವಾಗಿ ನೀಡುವುದಾದರೆ ಸಿನೆಮಾ ಕ್ಷೇತ್ರಗಳಲ್ಲ್ ಅಪಾರ ಸಾಧನೆ ಮಾಡಿದ ತಂತ್ರಜ್ಞರು, ನಿರ್ದೇಶಕರು ಆಗಿ ಹೋಗಿದ್ದಾರೆ. ಅವರನ್ನೆಲ್ಲ ಗುರುತಿಸದೇ ಕರ್ನಾಟಕ ರತ್ನಕ್ಕೆ ಜನಪ್ರಿಯ ನಟರನ್ನು ಆಯ್ಕೆ ಮಾಡಿರುವುದು ಪ್ರಶಸ್ತಿ ಓಲೈಕೆಗೆ ಬಲಿಯಾಯಿತೆ ಎಂಬ ಅನುಮಾನಕ್ಕೆ ಕಾರಣವಾಗಿದೆ. ಈವರೆಗೆ ಆಯ್ಕೆಯಾದ 12 ಕರ್ನಾಟಕ ರತ್ನಗಳಲ್ಲಿ 4 ಮಂದಿ ಸಿನೆಮಾ ನಟರೇ ಆಗಿದ್ದಾರೆ. ಸಂಸ್ಕೃತಿ ಮತ್ತು ಕಲೆಯ ಒಂದು ಭಾಗ ಮಾತ್ರವಾಗಿದೆ ಸಿನಿಮಾ. ಹಾಗೆಂದು, ಅದರ ಮೂಲಕವೇ ಕರ್ನಾಟಕವನ್ನು ಬಿಂಬಿಸುವುದು ಸರಿಯಲ್ಲ. ಈ ನಿಟ್ಟಿನಲ್ಲಿ ಈ ನಾಡನ್ನು ಕಟ್ಟಿ ಬೆಳೆಸಲು ಬೆವರು ಸುರಿಸಿದ ಇತರ ಕ್ಷೇತ್ರಗಳ ಸಾಧಕರಿಗೂ ಭವಿಷ್ಯದಲ್ಲಿ ನ್ಯಾಯ ಸಿಗುವಂತಾಗಬೇಕು.
ಇದೇ ಸಂದರ್ಭದಲ್ಲಿ ಕುವೆಂಪು ಅವರನ್ನು ಭಾರತ ರತ್ನಕ್ಕೆ ಶಿಫಾರಸು ಮಾಡಿರುವುದು ಶ್ಲಾಘನೀಯ ಕಾರ್ಯ. ಕರ್ನಾಟಕದಲ್ಲಿ ಈವರೆಗೆ ಮೂವರು ಶ್ರೇಷ್ಠ ಸಾಧಕರು ಭಾರತ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. 1955ರಲ್ಲಿ ಸರ್. ಎಂ. ವಿಶ್ವೇಶ್ವರಯ್ಯ, 2009ರಲ್ಲಿ ಖ್ಯಾತ ಸಂಗೀತ ವಿದ್ವಾಂಸ ಪಂ. ಭೀಮಸೇನ ಜೋಷಿ, 2014ರಲ್ಲಿ ಹಿರಿಯ ವಿಜ್ಞಾನಿ ಸಿ. ಎನ್. ಆರ್. ರಾವ್ ಅವರು ಈ ಹಿರಿಮೆಯನ್ನು ತನ್ನದಾಗಿಸಿಕೊಂಡಿದ್ದಾರೆ. ದಿವಂಗತ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮಿಯವರು ಸಾಮಾಜಿಕ, ಶಿಕ್ಷಣ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಾಗಿ ಅವರಿಗೆ ಭಾರತ ರತ್ನ ನೀಡಬೇಕು ಎಂದು ಹಲವಾರು ರಾಜಕೀಯ ನಾಯಕರು, ಸಾಮಾಜಿಕ ಕಾರ್ಯಕರ್ತರು ಕೇಂದ್ರವನ್ನು ಆಗ್ರಹಿಸುತ್ತಾ ಬಂದಿದ್ದಾರೆ. ಆದರೆ ಈ ಬೇಡಿಕೆಯನ್ನು ಕೇಂದ್ರ ಸರಕಾರ ತಿರಸ್ಕರಿಸುತ್ತಲೇ ಬಂದಿದೆ. ಇತ್ತೀಚಿನ ದಿನಗಳಲ್ಲಿ ರಾಜಕೀಯ ಕಾರಣಗಳನ್ನು ಮುಂದಿಟ್ಟು ಭಾರತ ರತ್ನವನ್ನು ಹಂಚುವ ಪ್ರವೃತ್ತಿ ಹೆಚ್ಚುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಪ್ರಣವ್ ಮುಖರ್ಜಿ, ಪಿ.ವಿ. ನರಸಿಂಹ ರಾವ್, ಎಲ್. ಕೆ. ಅಡ್ವಾಣಿ ಇವರೆಲ್ಲರಿಗೆ ಭಾರತ ರತ್ನ ಹೇಗೆ ಸಿಕ್ಕಿತು ಎನ್ನುವುದನ್ನು ವಿವರಿಸುವ ಅಗತ್ಯವಿಲ್ಲ. ಕ್ರಿಕೆಟ್‌ನಲ್ಲಿ ಮಾಡಿದ ಸಾಧನೆಗಾಗಿ ಸಚಿನ್ ತೆಂಡುಲ್ಕರ್‌ಗೆ ಭಾರತ ರತ್ನ ನೀಡಿದಾಗಲೂ ಅದರ ವಿರುದ್ಧ ಮಾತುಗಳು ಕೇಳಿ ಬಂದಿದ್ದವು. ಇವರಿಗೆಲ್ಲ ಭಾರತರತ್ನವನ್ನು ಹಂಚುವುದಕ್ಕೆ ಸಾಧ್ಯವಾಗುವುದಾದರೆ, ತ್ರಿ ದಾಸೋಹದ ಮೂಲಕ ಎಲ್ಲ ವರ್ಗಗಳನ್ನು ತಲುಪಿದ, ಧರ್ಮಕ್ಕೆ ಹೊಸ ವ್ಯಾಖ್ಯಾನವನ್ನು ನೀಡಿದ ಸಿದ್ಧಗಂಗಾ ಸ್ವಾಮೀಜಿಗಳಿಗೆ ಯಾಕೆ ಭಾರತರತ್ನ ನೀಡಲಾಗದು ? ಈ ಪ್ರಶ್ನೆಯನ್ನು ಕೇಂದ್ರ ಸರಕಾರಕ್ಕೆ ಕರ್ನಾಟಕ ಕೇಳುತ್ತಲೇ ಬಂದಿದೆ.
ಇದೀಗ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ಭಾರತ ರತ್ನ ಗೌರವಕ್ಕೆ ಕರ್ನಾಟಕ ಶಿಫಾರಸು ಮಾಡಿರುವುದು ಅರ್ಥಪೂರ್ಣವಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿದ ಸಾಧಕರಿಗೆ ಭಾರತ ರತ್ನ ಗೌರವ ಈವರೆಗೆ ಸಿಕ್ಕಿಲ್ಲ. ‘ಶ್ರೀರಾಮಾಯಣ ದರ್ಶನಂ’ ಕಾವ್ಯದ ಮೂಲಕ ಕರ್ನಾಟಕಕ್ಕೆ ಮೊತ್ತ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟವರು ಕುವೆಂಪು. ಇಂದು ಜಗತ್ತು ಬಯಸುವ ಶಾಂತಿ, ಮಾನವೀಯತೆಯ ಬಗ್ಗೆ ಭವ್ಯವಾದ ಕಲ್ಪನೆಯನ್ನು ಅವರು ಹೊಂದಿದ್ದರು. ವಿಶ್ವ ಮಾನವತೆಯನ್ನು ತನ್ನೆಲ್ಲ ಬರಹಗಳಲ್ಲಿ, ಕಾವ್ಯಗಳಲ್ಲಿ ಪದೇ ಪದೇ ಸಾರಿದವರು. ಇಂಗ್ಲಿಷ್‌ನಲ್ಲಿ ಬರೆಯುವ ಎಲ್ಲ ಸಾಮರ್ಥ್ಯ ಅವರಲ್ಲಿದ್ದರೂ ಅವರು ಪ್ರಜ್ಞಾಪೂರ್ವಕವಾಗಿ ಕನ್ನಡವನ್ನು ಆರಿಸಿಕೊಂಡರು. ಪ್ರಾದೇಶಿಕ ಭಾಷೆಯನ್ನು ಅವರು ರಾಷ್ಟ್ರಮಟ್ಟಕ್ಕೆ ತಲುಪಿಸಿದರು. ಅಷ್ಟೇ ಅಲ್ಲ, ಧರ್ಮ, ದೇಶದ ಗಡಿಯಾಚೆಗೆ ವಿಶ್ವ ಮಾನವ ಪ್ರಜ್ಞೆಯನ್ನು ದಾಟಿಸುವುದಕ್ಕೆ ಪ್ರಯತ್ನಿಸಿದರು. ಕುವೆಂಪು ಅವರೊಳಗೆ ರಾಮಕೃಷ್ಣ ಪರಮಹಂಸರಿದ್ದಾರೆ, ಗುರುದೇವ ರವೀಂದ್ರರಿದ್ದಾರೆ. ವಿಲಿಯಂ ವರ್ಡ್‌ವರ್ತ್‌ರಂತಹ ವಿಶ್ವದ ಮಹಾನ್ ಕವಿಗಳ ಝಲಕ್‌ಗಳು ಅವರ ಕಾವ್ಯದಲ್ಲಿವೆ. ಮುಖ್ಯವಾಗಿ ಅವರು ವೈಚಾರಿಕವಾಗಿ ಬಹಳಷ್ಟು ಎತ್ತರದಲ್ಲಿದ್ದರು. ತನ್ನ ಕಾವ್ಯ ರೂಪಕಗಳಲ್ಲಿ ಮೈಮರೆಯದೆ ಲೇಖನ, ಬರಹ, ಭಾಷಣಗಳಲ್ಲಿ ಪುರೋಹಿತ ಶಾಹಿ ವ್ಯವಸ್ಥೆಯ ವಿರುದ್ಧ ಬಂಡೆದ್ದರು. ಜನರನ್ನು ಜಾಗೃತಗೊಳಿಸಲು ಬಹುದೊಡ್ಡ ಪಾತ್ರವನ್ನು ವಹಿಸಿದರು. ಶೋಷಿತ ಸಮುದಾಯದ ಅಳಲುಗಳನ್ನು ತನ್ನ ಕತೆ, ಕಾದಂಬರಿಗಳಲ್ಲಿ ತೆರೆದಿಟ್ಟರು. ಅವರ ‘ಧನ್ವಂತರಿಯ ಚಿಕಿತ್ಸೆ’ ಈ ದೇಶದ ರೈತರ ಅಳಲನ್ನು ಅತ್ಯಂತ ವ್ಯಂಗ್ಯವಾಗಿ, ಪರಿಣಾಮಕಾರಿಯಾಗಿ ತೆರೆದಿಡುತ್ತದೆ. ‘ನಿರಂಕುಶ ಮತಿಗಳಾಗಿ’ ಅವರ ಭಾಷಣ ಮತ್ತು ಲೇಖನ ಈ ನಾಡಿನ, ದೇಶದ ಯುವಕರಿಗೆ ಸ್ವತಂತ್ರವಾಗಿ ಯೋಚಿಸುವುದಕ್ಕೆ ಕರೆ ನೀಡುತ್ತದೆ.
ಕುವೆಂಪು ಅವರು ಎಂದಿಗೂ ನಾಸ್ತಿಕರಾಗಿರಲಿಲ್ಲ. ಹಾಗೆಯೇ ಈ ದೇಶದ ಪರಂಪರೆಯನ್ನು, ಸಂಸ್ಕೃತಿಯನ್ನು ಪೂರ್ಣವಾಗಿ ತಿರಸ್ಕರಿಸಲೂ ಇಲ್ಲ. ‘ಶ್ರೀರಾಮಾಯಣದರ್ಶನಂ’ ಮಹಾ ಕಾವ್ಯದ ಮೂಲಕ ರಾಮಾಯಣಕ್ಕೆ ಆಧುನಿಕ ಕನ್ನಡದಲ್ಲಿ ಹೊಸ ಹೊಳಹನ್ನು ನೀಡಿದರು. ಮಹಾಭಾರತ,
ರಾಮಾಯಣದ ಪಾತ್ರಗಳನ್ನು ಮುರಿದು ಕಟ್ಟುವ ಪ್ರಯತ್ನ ಮಾಡಿದರು. ಭಾರತೀಯ ಸಂಸ್ಕೃತಿಯಲ್ಲಿ ನಾವು ಯಾವುದನ್ನು ಸ್ವೀಕರಿಸಬೇಕು, ಸ್ವೀಕರಿಸಬಾರದು ಎನ್ನುವ ವಿಷಯದಲ್ಲಿ ಯುವ ತಲೆಮಾರಿಗೆ ದಾರಿ ದೀಪವಾದರು. ಅವರ ಮಹಾಕಾವ್ಯ, ಮಹಾಕಾದಂಬರಿಗಳು, ಕವನ ಸಂಕಲನಗಳು, ವೈಚಾರಿಕ ಲೇಖನಗಳು, ನಾಟಕಗಳು ಇಂದಿನ ಭಾರತಕ್ಕೆ ಕೈ ದೀವಿಗೆಗಳಾಗಿವೆ. ‘ಸ್ಮಶಾನ ಕುರುಕ್ಷೇತ್ರ’ದಲ್ಲಿ ಯುದ್ಧದ ಭೀಕರತೆಯನ್ನು ತೆರೆದಿಟ್ಟರೆ, ‘ಶೂದ್ರ ತಪಸ್ವಿ’ಯಲ್ಲಿ ಪುರಾಣದ ಪಾತ್ರಗಳ ಮೂಲಕವೇ ಜಾತೀಯತೆ ವಿರುದ್ಧ ರಾಮಬಾಣವನ್ನು ಬಿಡುತ್ತಾರೆ. ಕುವೆಂಪು ಅವರಿಗೆ ಭಾರತ ರತ್ನವನ್ನು ನೀಡುವ ಮೂಲಕ, ಸರಕಾರ ಭಾರತ ರತ್ನವನ್ನು ವಿಶ್ವ ಮಾನ್ಯಗೊಳಿಸಿದಂತಾಗುತ್ತದೆ. ಆದುದರಿಂದ, ರಾಜ್ಯ ಸರಕಾರದ ಶಿಫಾರಸನ್ನು ಕೇಂದ್ರ ಸರಕಾರ ಗೌರವ ರೂಪದಲ್ಲಿ ಸ್ವೀಕರಿಸಿ ಕುವೆಂಪು ಅವರಿಗೆ ಭಾರತ ರತ್ನ ಗೌರವವನ್ನು ನೀಡಲು ಮುಂದಾಗಬೇಕಾಗಿದೆ.