ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮತ ಪತ್ರಗಳ ಬಳಕೆ ಯಾಕೆ ಸರಿ?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಮುಂಬರುವ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಇಲೆಕ್ಟ್ರಾನಿಕ್ ಮತ ಯಂತ್ರದ ಬದಲಾಗಿ ಬ್ಯಾಲೆಟ್ ಪೇಪರ್‌ಗಳನ್ನು ಬಳಸಿ ನಡೆಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಮತಗಳ್ಳತನದ ಪ್ರಕರಣಗಳು ಬಯಲಾದ ಬಳಿಕ ಜನಸಾಮಾನ್ಯರಲ್ಲಿ ಇವಿಎಂ ಮೇಲಿನ ವಿಶ್ವಾಸಾರ್ಹತೆ ಕಡಿಮೆಯಾಗಿದೆ. ಆದುದರಿಂದ ಸಚಿವ ಸಂಪುಟವು ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಸಿ ನಡೆಸುವಂತೆ ಆಯೋಗಕ್ಕೆ ಶಿಫಾರಸು ಮಾಡಲು ನಿರ್ಧರಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್. ಕೆ. ಪಾಟೀಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ರಾಹುಲ್ ಗಾಂಧಿಯವರು ‘ಮತಗಳ್ಳತನ’ದ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಆಂದೋಲನ ಆರಂಭಿಸಿದ್ದಾರೆ ಮಾತ್ರವಲ್ಲದೆ, ಕರ್ನಾಟಕದ ಲೋಕಸಭಾ ಕ್ಷೇತ್ರವೊಂದರಲ್ಲಿ ನಡೆದ ಮತಗಳ್ಳತನದ ಬಗ್ಗೆ ದಾಖಲೆಗಳನ್ನೂ ಬಹಿರಂಗಪಡಿಸಿದ್ದರು. ಇಂಡಿಯಾ ಒಕ್ಕೂಟದ ಈ ಆರೋಪಗಳಿಗೆ ಚುನಾವಣಾ ಆಯೋಗ ಕಿವಿಯನ್ನು ಕಿವುಡು ಮಾಡಿ ಕುಳಿತಿರುವ ಹೊತ್ತಿಗೆ, ಆಯೋಗಕ್ಕೆ ಸವಾಲು ಹಾಕುವಂತೆ ರಾಜ್ಯ ಸರಕಾರ ಸ್ಥಳೀಯ ಸಂಸ್ಥೆಗಳಲ್ಲಿ ಬ್ಯಾಲೆಟ್ ಪೇಪರ್‌ಗಳ ಮೂಲಕ ಚುನಾವಣೆ ನಡೆಸಲು ಹೊರಟಿದೆ. ಇವಿಎಂ ಬಗ್ಗೆ ಕೇಳಿ ಬರುತ್ತಿರುವ ಆರೋಪಗಳನ್ನು ಗಂಭೀರವಾಗಿ ತೆಗೆದುಕೊಳ್ಳದ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನಾ ರೂಪದಲ್ಲಿ ಸರಕಾರ ಈ ನಿರ್ಣಯವನ್ನು ತೆಗೆದುಕೊಂಡಿದೆ. ಸ್ಥಳೀಯ ಸಂಸ್ಥೆಗಳಲ್ಲಿ ನಡೆಯುವ ಚುನಾವಣೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಆಯಾ ರಾಜ್ಯ ಸರಕಾರಗಳಿಗಿರುವುದರಿಂದ, ಸಂಪುಟದ ಈ ತೀರ್ಮಾನಕ್ಕೆ ಚುನಾವಣಾ ಆಯೋಗ ಹೇಗೆ ಸ್ಪಂದಿಸುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಆದರೆ, ಈಗಾಗಲೇ ಬಿಜೆಪಿಯು ರಾಜ್ಯ ಸರಕಾರದ ತೀರ್ಮಾನದ ವಿರುದ್ಧ ತಕರಾರುಗಳನ್ನು ಎತ್ತಿದೆ.
‘‘ಇವಿಎಂ ಬದಲಿಗೆ ಮತಪತ್ರದ ಮೂಲಕ ಚುನಾವಣೆಯನ್ನು ಎದುರಿಸಲು ರಾಜ್ಯ ಸರಕಾರ ಮುಂದಾಗಿರುವುದು ಖಂಡನೀಯ. ಇದು ಮತ್ತೆ ಪುರಾತನ ಯುಗಕ್ಕೆ ಹೋಗುತ್ತಿರುವ ಸೂಚನೆಯಾಗಿದೆ’’ ಎಂದು ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರು ಆಕ್ಷೇಪಿಸಿದ್ದಾರೆ. ‘‘ಮತ ಪತ್ರವನ್ನು ಬಳಸಿದರೆ ಫಲಿತಾಂಶ ಘೋಷಣೆ ತಡವಾಗುತ್ತದೆ. ಸುಮಾರು ನಾಲ್ಕು ದಿನಗಳನ್ನು ಮತ ಎಣಿಕೆಗೆ ಮೀಸಲಿಡಬೇಕಾಗುತ್ತದೆ’’ ಎಂದೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಅವರ ಈ ಕಳವಳ ಅರ್ಥಹೀನವಾಗಿದೆ. ತಂತ್ರಜ್ಞಾನದಲ್ಲಿ ಭಾರತಕ್ಕಿಂತ ಹಲವು ಪಟ್ಟು ಸಾಧನೆಗಳನ್ನು ಮಾಡಿರುವ ದೇಶಗಳು ಈಗಲೂ ಚುನಾವಣೆಗಳಿಗೆ ಮತಪತ್ರವನ್ನೇ ಅವಲಂಬಿಸಿವೆ. ಅದರ ಅರ್ಥ ಅದು ತಂತ್ರಜ್ಞಾನದ ಬಳಕೆಗೆ ಹಿಂದೇಟು ಹೊಡೆಯುತ್ತಿದೆ ಎಂದಲ್ಲ. ಕೆಲವೊಮ್ಮೆ ಇಂತಹ ತಂತ್ರಜ್ಞಾನಗಳು ದುರ್ಬಳಕೆಯಾದರೆ ಅದು ಪ್ರಜಾಸತ್ತೆಯ ಮೇಲೆ ಭಾರೀ ಪರಿಣಾಮ ಬೀರಬಹುದು. ಪ್ರಜಾಪ್ರಭುತ್ವದ ಉದ್ದೇಶವೇ ನೀರುಪಾಲಾಗಬಹುದು ಎನ್ನುವ ಎಚ್ಚರಿಕೆಯ ಹಿನ್ನೆಲೆಯಲ್ಲಿ ಅವರು ಇವಿಎಂ ಬಗ್ಗೆ ಆಸಕ್ತಿ ತೋರಿಸಿಲ್ಲ. ಪ್ರಜಾಪ್ರಭುತ್ವದ ಅಳಿವು ಉಳಿವಿನ ಮುಂದೆ ತಂತ್ರಜ್ಞಾನದ ಹಿರಿಮೆ ಏನೇನೂ ಅಲ್ಲ ಎನ್ನುವುದನ್ನು ಇದು ಹೇಳುತ್ತದೆ. ಇನ್ನೊಂದು ವಾದ, ಮತ ಪತ್ರ ಬಳಸಿದರೆ ಫಲಿತಾಂಶ ಘೋಷಣೆ ತಡವಾಗುತ್ತದೆ ಎನ್ನುವುದು. ಪ್ರಜಾಪ್ರಭುತ್ವದ ಯಶಸ್ಸಿರುವುದು ಎಷ್ಟು ಬೇಗ ಫಲಿತಾಂಶ ಘೋಷಣೆಯಾಗುತ್ತದೆ ಎನ್ನುವುದರಲ್ಲಲ್ಲ. ಚುನಾವಣೆಯು ಎಷ್ಟರಮಟ್ಟಿಗೆ ಅಕ್ರಮಗಳಿಲ್ಲದೆ ನಡೆಯುವುದು ಎನ್ನುವುದರ ಆಧಾರದ ಮೇಲೆ. ಅಕ್ರಮಗಳ ಜೊತೆಗೆ ಚುನಾವಣೆ ನಡೆದು ಅದೆಷ್ಟು ಬೇಗ ಫಲಿತಾಂಶ ಪ್ರಕಟವಾದರೂ ಚುನಾವಣೆಯ ಉದ್ದೇಶ ನೆರವೇರುವುದಿಲ್ಲ. ಈ ಹಿಂದೆಲ್ಲ ಫಲಿತಾಂಶ ಒಂದೆರಡು ದಿನ ತಡವಾದುದರಿಂದ ಪ್ರಜಾಸತ್ತೆಗೆ ಯಾವುದೇ ಸಮಸ್ಯೆ ಉಂಟಾಗಿಲ್ಲ.
ಇಷ್ಟಕ್ಕೂ ಚುನಾವಣೆಗಳು ನಡೆದ ಬಳಿಕ ರಚನೆಯಾದ ಸರಕಾರವನ್ನು ‘ಆಪರೇಷನ್ ಕಮಲ’ದ ಮೂಲಕ ಉರುಳಿಸಿ ಜನರ ಮೇಲೆ ಪದೇ ಪದೇ ಹೊಸದಾಗಿ ಉಪಚುನಾವಣೆಗಳನ್ನು ಹೇರಿದ ಆರೋಪಗಳನ್ನು ಎದುರಿಸುತ್ತಿರುವ ಬಿಜೆಪಿಗೆ ಫಲಿತಾಂಶ ಘೋಷಣೆ ಒಂದೆರಡು ದಿನ ತಡವಾಗುವುದರ ಬಗ್ಗೆ ಕಳವಳ ವ್ಯಕ್ತಪಡಿಸುವ ನೈತಿಕತೆಯಾದರೂ ಇದೆಯೆ? ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಶಾಸಕನನ್ನು ಹಣಕೊಟ್ಟು ಕೊಂಡು ಆತನಿಂದ ರಾಜೀನಾಮೆ ನೀಡಿಸಿ ಚುನಾವಣೆಯ ಉದ್ದೇಶವನ್ನೇ ಬುಡಮೇಲು ಗೊಳಿಸುವ ಕುಕೃತ್ಯಗಳನ್ನು ‘ಆಪರೇಷನ್ ಕಮಲ’ವೆಂದು ಕೊಚ್ಚಿಕೊಳ್ಳುವ ನಾಯಕರು, ಇವಿಎಂನಿಂದಲೇ ಚುನಾವಣೆ ನಡೆಯಬೇಕು ಎಂದು ಒತ್ತಾಯಿಸುವ ಉದ್ದೇಶವಾದರೂ ಏನು? ಹಾಗೆ ನೋಡಿದರೆ, ಇವಿಎಂ ಮೂಲಕ ಅಕ್ರಮ ನಡೆಯುತ್ತಿದೆ ಎಂದು ಮೊತ್ತ ಮೊದಲಾಗಿ ಆರೋಪ ಮಾಡಿರುವುದು ಬಿಜೆಪಿಯ ಹಿರಿಯ ನಾಯಕ ಎಲ್. ಕೆ. ಅಡ್ವಾಣಿಯವರು. ಇವಿಎಂ ಮೂಲಕ ಮೊತ್ತ ಮೊದಲ ಬಾರಿಗೆ ಲೋಕಸಭಾ ಚುನಾವಣೆ ನಡೆದು ಯುಪಿಎ ಸರಕಾರ ಅಧಿಕಾರ ಹಿಡಿದಾಗ, ಇದರ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿದ ಅಂದಿನ ಬಿಜೆಪಿಯ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ ‘‘ಮತಯಂತ್ರವನ್ನು ದುರುಪಯೋಗ ಪಡಿಸಲಾಗಿದೆ’’ ಎಂದು ದೂರಿದ್ದರು. 2009ರಲ್ಲಿ ಇವಿಎಂ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿ ಮತ್ತೆ ಮತ ಪತ್ರವನ್ನು ಜಾರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದಾಗ ಬಿಜೆಪಿಯ ಹಲವು ನಾಯಕರು ಅದಕ್ಕೆ ಧ್ವನಿಗೂಡಿಸಿದ್ದರು. ಇದೀಗ ಎಲ್ಲವೂ ತಿರುವುಮುರುವಾಗಿದೆ. ಪ್ರಧಾನಿ ಮೋದಿ ಇವಿಎಂ ಮೂಲಕವೇ ಆಯ್ಕೆಯಾಗಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಇವಿಎಂನ ವಿರುದ್ಧ ವ್ಯಾಪಕ ಆರೋಪಗಳು ಕೇಳಿ ಬಂದರೂ, ಅದಕ್ಕೆ ಯಾವುದೇ ರೀತಿಯಲ್ಲಿ ಸ್ಪಂದಿಸದೇ, ಶತಾಯಗತಾಯ ಇವಿಎಂನ್ನು ಚುನಾವಣಾ ಆಯೋಗ ಸಮರ್ಥಿಸುತ್ತಿದೆ. ಇದರ ಬೆನ್ನಿಗೇ ಮತಗಳ್ಳತನದ ಬಗ್ಗೆ ವ್ಯಾಪಕ ಆರೋಪಗಳು ಕೇಳಿ ಬರುತ್ತಿದ್ದು, ಚುನಾವಣಾ ಆಯೋಗವೂ ಇದರಲ್ಲಿ ಶಾಮೀಲಾಗಿರುವ ಬಗ್ಗೆ ಸಂಶಯಗಳು ವ್ಯಕ್ತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಮತಪತ್ರದ ಮೂಲಕ ನಡೆಯುವ ಚುನಾವಣೆ ಹೆಚ್ಚು ಪಾರದರ್ಶಕ ಎನ್ನುವ ಅಭಿಪ್ರಾಯ ಕೇಳಿ ಬರುತ್ತಿದೆ.
ಇಷ್ಟಕ್ಕೂ ಇವಿಎಂನ್ನು ಅಳವಡಿಸಿಕೊಂಡಿದ್ದ ಹಲವು ದೇಶಗಳು ಮತ್ತೆ ಮತ ಪತ್ರದ ಕಡೆಗೆ ಹೊರಳಿರುವಾಗ ಭಾರತವೂ ಹಂತ ಹಂತವಾಗಿ ಯಾಕೆ ಆ ಕಡೆಗೆ ಹೊರಳಬಾರದು ಎನ್ನುವುದರ ಬಗ್ಗೆ ಗಂಭೀರ ಚರ್ಚೆ ನಡೆಯಬೇಕಾಗಿದೆ. ಈ ಚರ್ಚೆಗೆ ವೇದಿಕೆ ಒದಗಿಸಿ ಕೊಡಬೇಕಾದ ಹೊಣೆಗಾರಿಕೆ ಚುನಾವಣಾ ಆಯೋಗದ್ದು. ಆದರೆ ಆಯೋಗ ಇವಿಎಂ ಇಲ್ಲದೆ ಪ್ರಜಾಪ್ರಭುತ್ವಕ್ಕೆ ಅಸ್ತಿತ್ವವಿಲ್ಲ ಎಂಬಂತೆ ವರ್ತಿಸುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯೇತರ ಎಲ್ಲ ರಾಜ್ಯಗಳು ತಮ್ಮಲ್ಲಿ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮತ ಪತ್ರವನ್ನು ಬಳಸುವ ಬಗ್ಗೆ ನಿರ್ಣಯವನ್ನು ತೆಗೆದುಕೊಳ್ಳಬೇಕು. ಮತ್ತೆ ಮತಪತ್ರದ ಕಡೆಗೆ ಹೊರಳುವುದು ಬಹಳಷ್ಟು ದುಬಾರಿ ವೆಚ್ಚಕ್ಕೆ ಆಸ್ಪದ ನೀಡಬಹುದೇನೋ ನಿಜ. ಆದರೆ ಪ್ರಜಾಪ್ರಭುತ್ವದ ಅಳಿವು ಉಳಿವಿನ ಮುಂದೆ ಈ ವೆಚ್ಚ ನಗಣ್ಯ ಎನ್ನುವುದನ್ನು ಮರೆಯಲಾಗದು. ಈ ನಿಟ್ಟಿನಲ್ಲಿ ಮತ ಪತ್ರಗಳ ಪುನರ್‌ಬಳಕೆಯ ಸಾಧಕ ಬಾಧಕಗಳನ್ನು ಅರಿತುಕೊಳ್ಳಲು ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು.