ಪೊಲೀಸ್ ಠಾಣೆಗಳ ಸಿಸಿ ಟಿವಿ ಕಣ್ಣುಗಳೇಕೆ ಮುಚ್ಚಿವೆ?

PC | META AI (ಸಾಂದರ್ಭಿಕ ಚಿತ್ರ )
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಪಾರದರ್ಶಕವಾಗಿ ಕಾರ್ಯ ನಿರ್ವಹಿಸಲು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವಲ್ಲಿ ಸರಕಾರಿ ಕಚೇರಿಗಳು, ಪೊಲೀಸ್ ಇಲಾಖೆಗಳು, ನ್ಯಾಯಾಲಯಗಳು ಯಾಕೆ ವಿಫಲವಾಗುತ್ತಿವೆ ಎನ್ನುವ ಪ್ರಶ್ನೆ ಪದೇ ಪದೇ ಏಳುತ್ತಲೇ ಇವೆ. ಆಧುನಿಕ ತಂತ್ರಜ್ಞಾನಗಳ ಬಗ್ಗೆ ಸರಕಾರಿ ಕಚೇರಿಗಳು, ಪೊಲೀಸ್ ಇಲಾಖೆಗಳು ಸಾಕ್ಷರವಾಗಿಲ್ಲವೇ ಅಥವಾ ಅವುಗಳನ್ನು ಅಳವಡಿಸಲು ಅವುಗಳಿಗೆ ಇಚ್ಛಾಶಕ್ತಿಯಿಲ್ಲವೆ? ಎಂದು ಅನುಮಾನಿಸುವಂತಾಗಿದೆ. ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿಗಳ ಕಡ್ಡಾಯ ಅಳವಡಿಕೆಗಾಗಿ ಸುಪ್ರೀಂಕೋರ್ಟ್ ಪದೇ ಪದೇ ಆದೇಶ ನೀಡಬೇಕು ಎನ್ನುವುದಾದರೆ ಉಳಿದ ತಂತ್ರಜ್ಞಾನಗಳ ಬಳಕೆಯ ಬಗ್ಗೆ ಚರ್ಚಿಸಿ ಪ್ರಯೋಜನವಿದೆಯೆ? ಮಾಧ್ಯಮವೊಂದರಲ್ಲಿ ಪ್ರಕಟವಾದ ‘ಲಾಕಪ್ ಡೆತ್’ ವರದಿಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಸುಪ್ರೀಂಕೋರ್ಟ್, ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕಡ್ಡಾಯವಾಗಿ ಕಾರ್ಯನಿರ್ವಹಿಸಬೇಕು ಎನ್ನುವ ನಿಟ್ಟಿನಲ್ಲಿ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಪ್ರಕರಣವನ್ನು ದಾಖಲಿಸಿಕೊಂಡಿದೆ. ‘ದೈನಿಕ್ ಭಾಸ್ಕರ್’ ಪತ್ರಿಕೆಯಲ್ಲಿ ‘ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕೊರತೆ’ ಎನ್ನುವ ತಲೆಬರಹದಲ್ಲಿ ವಿಶೇಷ ವರದಿಯೊಂದು ಪ್ರಕಟಗೊಂಡಿತ್ತು. ಕಳೆದ ಎಂಟು ತಿಂಗಳ ಅವಧಿಯಲ್ಲಿ ದಿಲ್ಲಿಯ ವಿವಿಧ ಠಾಣೆಗಳಲ್ಲಿ 11 ಸಾವುಗಳು ಸಂಭವಿಸಿರುವುದನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಸಿಸಿ ಟಿವಿ ಕಾರ್ಯ ನಿರ್ವಹಿಸದೇ ಇದ್ದುದರಿಂದ ಈ ಸಾವಿನ ಹಿಂದೆ ಪೊಲೀಸರ ಕೈವಾಡಗಳನ್ನು ಗುರುತಿಸುವುದು ಕಷ್ಟವಾಗಿತ್ತು. ವರದಿಯು ಹೊರಗೆಡಹಿದ ಮಾಹಿತಿಗಳನ್ನು ಗಂಭೀರವಾಗಿ ತೆಗೆದುಕೊಂಡಿರುವ ಸುಪ್ರೀಂಕೋರ್ಟ್ ಇದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸ್ವಯಂ ಪ್ರಕರಣ ದಾಖಲಿಸಿದೆ.
ಪೊಲೀಸ್ ಠಾಣೆಗಳಲ್ಲಿ ಸಿಸಿ ಟಿವಿಗಳು ಕಡ್ಡಾಯವಾಗಿ ಇರಬೇಕು ಎನ್ನುವುದನ್ನು ಇದೇ ಸುಪ್ರೀಂಕೋರ್ಟ್ 2020ರ ಆದೇಶದಲ್ಲಿ ತಿಳಿಸಿತ್ತು. ಆ ತೀರ್ಪಿನಲ್ಲಿ ದೇಶಾದ್ಯಂತ ಪ್ರತಿಯೊಂದು ಪೊಲೀಸ್ ಠಾಣೆಗಳಲ್ಲಿ ರಾತ್ರಿ ವೇಳೆ ಅಥವಾ ಕಡಿಮೆ ಬೆಳಕಿನಲ್ಲಿಯೂ ಸ್ಪಷ್ಟವಾದ ಚಿತ್ರಗಳನ್ನು ಸೆರೆಹಿಡಿಯಲು ಸಹಾಯ ಮಾಡುವ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲು ನ್ಯಾಯಾಲಯ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶಿಸಿತ್ತು. ವಿಪರ್ಯಾಸವೆಂದರೆ ಈ ದೇಶದ ಬಹುತೇಕ ಪೊಲೀಸ್ ಠಾಣೆಗಳು ಇನ್ನೂ ಸಿಸಿ ಕ್ಯಾಮರಾಗಳನ್ನೇ ಹೊಂದಿಲ್ಲ. ಈ ಕ್ಯಾಮರಾಗಳನ್ನು ಹೊಂದಿರುವ ಠಾಣೆಗಳಲ್ಲಿ ಅವುಗಳು ಬಹುತೇಕ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವ ಆರೋಪಗಳನ್ನು ಎದುರಿಸುತ್ತಿವೆ. ಮೂಲಭೂತ ಅಗತ್ಯವಾಗಿರುವ ಸಿಸಿ ಕ್ಯಾಮರಾಗಳನ್ನೇ ಪೊಲೀಸ್ ಠಾಣೆಗಳಿಗೆ ಅಳವಡಿಸಲು ವಿಫಲವಾಗಿರುವ ಗೃಹ ಇಲಾಖೆ, ಉಳಿದ ತಂತ್ರಜ್ಞಾನಗಳನ್ನು ಅದೆಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿರಬಹುದು ಎನ್ನುವುದನ್ನು ನಾವೇ ಊಹಿಸಬಹುದು. ಇಂದು ಸೈಬರ್ ಅಪರಾಧಿಗಳನ್ನು ಹಿಡಿಯುವಲ್ಲಿ ಪೊಲೀಸ್ ಇಲಾಖೆಗಳು ಯಾಕೆ ವಿಫಲವಾಗುತ್ತಿವೆ, ಡಿಜಿಟಲ್ ಅಪರಾಧಗಳು ಯಾಕೆ ಹೆಚ್ಚುತ್ತಿವೆ, ಅವರು ಯಾಕೆ ಮುಕ್ತವಾಗಿ ಅಪರಾಧಗಳಲ್ಲಿ ತೊಡಗಿದ್ದಾರೆ ಎನ್ನುವುದಕ್ಕೆ ಇದರಲ್ಲೇ ಉತ್ತರವಿದೆ. ಡಿಜಿಟಲ್ ಅಪರಾಧಿಗಳು ನಮ್ಮ ಪೊಲೀಸ್ ಇಲಾಖೆಗಳಿಗಿಂತ ಎಷ್ಟೋ ಮುಂದಿದ್ದಾರೆ. ತಂತ್ರಜ್ಞಾನದ ಕುರಿತಂತೆ ಈ ಅಪರಾಧಿಗಳಿಗೆ ಇರುವ ತಿಳುವಳಿಕೆ ಪೊಲೀಸರಿಗೆ ಇಲ್ಲ. ಆದುದರಿಂದಲೇ, ಬ್ಯಾಂಕ್ಗಳ ಕಟ್ಟಡಗಳಿಗೆ ಕನ್ನ ಹಾಕುವುದಕ್ಕಿಂತ ನೇರವಾಗಿ ಆಯಾ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುವುದು ಸುಲಭವಾಗಿದೆ. ಗೋಡೆ ಕೊರೆದು, ಬಾಗಿಲು ಒಡೆದು, ಸರಳು ಮುರಿದು ಕಳವು ಮಾಡುವುದಕ್ಕಿಂತ, ‘ತೆರೆದಿದೆ ಬಾಗಿಲು ಬಾ ಅತಿಥಿ’ ಎಂದು ಕಳ್ಳರನ್ನು ಕೈ ಬೀಸಿ ಕರೆಯುತ್ತಿದೆ ಡಿಜಿಟಲ್ ಬ್ಯಾಂಕಿಂಗ್. ಪೊಲೀಸರ ಗನ್ನು, ಲಾಠಿಗಳಿಗೆ ನಿಲುಕದ ಈ ಅದೃಶ್ಯ ಕಳ್ಳರನ್ನು ತಂತ್ರಜ್ಞಾನದ ಸವಲತ್ತು ಇಲ್ಲದೆ ಪೊಲೀಸರಾದರೂ ಹೇಗೆ ಬಂಧಿಸಿಯಾರು?
ಪೊಲೀಸ್ ಇಲಾಖೆಗಳು ಕನಿಷ್ಠ ಸಿಸಿ ಕ್ಯಾಮರಾವನ್ನು ಅಳವಡಿಸುವ ವಿಷಯದಲ್ಲೇ ಇನ್ನೂ ಹಿಂದುಳಿದಿದೆ ಮತ್ತು ಅದರ ವಿರುದ್ಧ ಸುಪ್ರೀಂಕೋರ್ಟ್ ಸ್ವಯಂ ಪ್ರಕರಣ ದಾಖಲಿಸುವ ಸ್ಥಿತಿ ನಿರ್ಮಾಣವಾಗಿದೆ ಎನ್ನುವುದೇ ನಮ್ಮ ಕಾನೂನು ವ್ಯವಸ್ಥೆಯ ಶೋಚನೀಯ ಸ್ಥಿತಿಯನ್ನು ಹೇಳುತ್ತದೆ. ಇಲ್ಲಿ, ಸಿಸಿ ಕ್ಯಾಮರಾ ಅಳವಡಿಸಲು ಸಾಧ್ಯವಾಗಿಲ್ಲ ಎನ್ನುವುದಕ್ಕಿಂತ ಅದನ್ನು ಅಳವಡಿಸುವ ಇಚ್ಛಾಶಕ್ತಿ ಇಲಾಖೆಗೆ ಇಲ್ಲ ಎನ್ನುವುದೇ ಹೆಚ್ಚು ಸರಿ. ಪೊಲೀಸ್ ಇಲಾಖೆಗಳು ತಮ್ಮ ಬೇಜವಾಬ್ದಾರಿಗಳನ್ನು, ಸೋಮಾರಿತನವನ್ನು, ಭ್ರಷ್ಟಾಚಾರಗಳನ್ನು, ಅಕ್ರಮಗಳನ್ನು ಮುಚ್ಚಿ ಹಾಕುವುದಕ್ಕಾಗಿಯೇ ಸಿಸಿ ಕ್ಯಾಮರಾದ ಕಣ್ಣುಗಳಿಗೆ ಬಟ್ಟೆ ಕಟ್ಟಿದೆ. ಯಾವ ರಾಜ್ಯಗಳಲ್ಲಿ ನಕಲಿ ಎನ್ಕೌಂಟರ್ಗಳು, ಲಾಕಪ್ ಡೆತ್ಗಳು ಹೆಚ್ಚಿರುತ್ತವೆಯೋ ಅಲ್ಲಿ ಸಿಸಿ ಕ್ಯಾಮರಾಗಳು ಅಳವಡಿಕೆಯಾಗಿರುವುದಿಲ್ಲ ಅಥವಾ ಅಳವಡಿಕೆಯಾಗಿರುವ ಸಿಸಿ ಕ್ಯಾಮರಾಗಳು ಸರಿಯಾದ ಹೊತ್ತಿನಲ್ಲಿ ಕಾರ್ಯ ನಿರ್ವಹಿಸುತ್ತಿರುವುದಿಲ್ಲ. ಪರಿಣಾಮಕಾರಿಯಾಗಿ ಸಿಸಿ ಕ್ಯಾಮರಾಗಳು ಅಳವಡಿಕೆಯಾದರೆ ಬಹುತೇಕ ಪೊಲೀಸ್ ಠಾಣೆಗಳಲ್ಲಿ ಪೊಲೀಸರು ನಡೆಸುವ ಹಲವು ಅಕ್ರಮಗಳು ಬೆಳಕಿಗೆ ಬರುವ ಸಾಧ್ಯತೆಗಳಿವೆ. ಇದೇ ಸಂದರ್ಭದಲ್ಲಿ ಸಂತ್ರಸ್ತರು ಪೊಲೀಸ್ ಠಾಣೆಗಳಲ್ಲಿ ಧೈರ್ಯವಾಗಿ ಪ್ರವೇಶಿಸುವುದಕ್ಕೆ, ಅಲ್ಲಿ ಅವರೊಂದಿಗೆ ಪೊಲೀಸರು ಹೇಗೆ ವ್ಯವರಿಸುತ್ತಾರೆ ಎನ್ನುವುದು ತಿಳಿದುಕೊಳ್ಳುವುದಕ್ಕೂ ಸಿಸಿ ಕ್ಯಾಮರಾಗ ಅಗತ್ಯವಿದೆ. ಸುಪ್ರೀಂಕೋರ್ಟ್ ಕಡ್ಡಾಯವಾಗಿ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು ಎಂದು ಆದೇಶ ನೀಡಿದ ಬಳಿಕವೂ ಅವುಗಳ ಬಗ್ಗೆ ಪೊಲೀಸ್ ಠಾಣೆಗಳು ನಿರ್ಲಕ್ಷ್ಯ ವಹಿಸುತ್ತಿವೆ ಎಂದರೆ ಅದರ ಹಿಂದೆ ದುರುದ್ದೇಶಗಳಿವೆ ಎನ್ನುವುದು ಸ್ಪಷ್ಟ. ಈ ನಿಟ್ಟಿನಲ್ಲಿ ಪೊಲೀಸ್ ಠಾಣೆಗಳಲ್ಲಿ ಸಿಸಿ ಕ್ಯಾಮರಾಗಳ ಪರಿಣಾಮಕಾರಿಯಾಗಿ ಅಳವಡಿಕೆಯಾಗಿದೆಯೆ? ಅವುಗಳು ಕಾರ್ಯಾಚರಿಸುತ್ತಿವೆಯೇ ಎನ್ನುವುದರ ಬಗ್ಗೆ ಎಲ್ಲ ರಾಜ್ಯಗಳೂ ವರದಿಯನ್ನು ತರಿಸಿಕೊಳ್ಳುವ ಅಗತ್ಯವಿದೆ.
ಇದೇ ಸಂದರ್ಭದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲೂ ಸಿಸಿ ಟಿವಿ ಕಡ್ಡಾಯ ಎಂದು ಸರಕಾರ ಹೇಳುತ್ತಲೇ ಬರುತ್ತಿದೆಯಾದರೂ, ಪರಿಣಾಮಕಾರಿಯಾದ ಅಳವಡಿಕೆಯಲ್ಲಿ ಸೋತಿದೆ. ಈ ಕಾರಣದಿಂದಲೇ, ಸಾರಿಗೆ ಕಚೇರಿಗಳು ಭ್ರಷ್ಟಾಚಾರದ ಅಡ್ಡೆಯಾಗಿವೆೆ. ಮಧ್ಯವರ್ತಿಗಳ ನಿಯಂತ್ರಣದಲ್ಲಿ ಸಾರಿಗೆ ಕಚೇರಿಗಳು ಮುನ್ನಡೆಯುತ್ತಿವೆ. ಜನಸಾಮಾನ್ಯರು ತಮ್ಮ ಕೆಲಸ ಕಾರ್ಯಗಳಿಗೆ ನೇರವಾಗಿ ಅಧಿಕಾರಿಗಳನ್ನು ಸಂಪರ್ಕಿಸಲು ಸಾಧ್ಯವಿಲ್ಲ ಎನ್ನುವ ಸ್ಥಿತಿ ಹಲವೆಡೆೆ ಇದೆ. ಹೆಚ್ಚುತ್ತಿರುವ ರಸ್ತೆ ಅವಘಡಗಳಲ್ಲಿ ಈ ಭ್ರಷ್ಟಾಚಾರದ ಕೊಡುಗೆ ಬಹುದೊಡ್ಡದಿದೆ. ಸಾರಿಗೆ ಕಚೇರಿಗಳಲ್ಲೂ ಕಡ್ಡಾಯ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಅಲ್ಲಿನ ಕೆಲಸ ಕಾರ್ಯಗಳನ್ನು ಪಾರದರ್ಶಕವಾಗಿಸುವ ಪ್ರಯತ್ನ ನಡೆಯಬೇಕು. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ಕಚೇರಿಗಳಲ್ಲಿ ಸಿಸಿ ಕ್ಯಾಮರಾಗಳಿವೆಯೋ, ಅವುಗಳು ಕಾರ್ಯನಿರ್ವಹಿಸುತ್ತಿವೆಯೋ ಎನ್ನುವುದರ ಬಗ್ಗೆ ಅನಿರೀಕ್ಷಿತ ತಪಾಸಣೆಗಳು ನಡೆಯಬೇಕಾಗಿದೆ. ಸುಪ್ರೀಂಕೋರ್ಟ್ನ
ಆದೇಶಕ್ಕೆ ಕಾಯದೇ ಸರಕಾರ ಈ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಬೇಕು. ಎಲ್ಲ ಸರಕಾರಿ ಕಚೇರಿಗಳಲ್ಲೂ ಸಿಸಿ ಕ್ಯಾಮರಾಗಳನ್ನು ಕಡ್ಡಾಯಗೊಳಿಸಿ ಸರಕಾರದ ಕೆಲಸಗಳನ್ನು ಹೆಚ್ಚು ಪಾರದರ್ಶಕವನ್ನಾಗಿಸಿ ಭ್ರಷ್ಟಾಚಾರಗಳಿಗೆ, ಅಕ್ರಮಗಳಿಗೆ ಕಡಿವಾಣ ಹಾಕಲು ಮುಂದಾಗಬೇಕು.