ಚುನಾವಣಾ ಆಯೋಗದ ಉದ್ಧಟತನ

ಕಳೆದ ಹನ್ನೊಂದು ವರ್ಷಗಳಿಂದ ಚುನಾವಣಾ ಆಯೋಗದ ಕಾರ್ಯ ವೈಖರಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಸ್ವತಂತ್ರ, ಸಾಂವಿಧಾನಿಕ ಸಂಸ್ಥೆ ಎಂಬ ತನ್ನ ಪ್ರತಿಷ್ಠೆಗೆ ತಾನೇ ಧಕ್ಕೆ ತಂದು ಕೊಳ್ಳುತ್ತಿದೆ. ಚುನಾವಣಾ ಆಯೋಗದ ಸ್ಥಿತಿ ಇದಾದರೆ ಮಹತ್ವದ ಸಂವಿಧಾನಾತ್ಮಕ ಸ್ಥಾನದಲ್ಲಿ ಇರುವ ರಾಜ್ಯಪಾಲರುಗಳೂ ಇದೇ ಹಾದಿಯಲ್ಲಿದ್ದಾರೆ. ಹೀಗಾಗಿ ಸಂವಿಧಾನದ ವಿಧಿ, ವಿಧಾನಗಳನ್ನು ರಕ್ಷಿಸಲು ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರು 'ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಸಾಂವಿಧಾನಿಕ ಸಂಸ್ಥೆಗಳು ವಿಫಲಗೊಂಡರೆ ಸುಪ್ರೀಂ ಕೋರ್ಟ್ ಸುಮ್ಮನೆ ನೋಡುತ್ತಾ ಕುಳಿತುಕೊಳ್ಳುವುದಿಲ್ಲ'' ಎಂಬ ಎಚ್ಚರಿಕೆ ನೀಡಬೇಕಾಗಿ ಬಂದಿದೆ.
ಬಿಜೆಪಿಯೇತರ ರಾಜ್ಯಗಳ ರಾಜ್ಯಪಾಲರುಗಳು ಸ್ಥಳೀಯ ಸರಕಾರದ ವಿರುದ್ಧ ಹಗೆ ಸಾಧಿಸುತ್ತಿರುವುದು ಹೊಸದೇನಲ್ಲ. ಆಯಾ ರಾಜ್ಯಗಳ ರಾಜ್ಯ ವಿಧಾನಸಭೆಗಳು ಮಹತ್ವದ ಕಾನೂನಿಗೆ ಸಂಬಂಧಿಸಿದ ತಿದ್ದುಪಡಿ ವಿಧೇಯಕಗಳಿಗೆ ಅಂಕಿತ ಹಾಕದೆ, ರಾಷ್ಟ್ರಪತಿಗಳಿಗೂ ಕಳುಹಿಸದೇ ತಮ್ಮ ಬಳಿಯಲ್ಲಿ ಇಟ್ಟುಕೊಳ್ಳುತ್ತಿರುವ ಬಗ್ಗೆ ಅಲ್ಲಿನ ಚುನಾಯಿತ ಸರಕಾರಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿವೆ. ಈ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿಗಳು ಅರ್ಜಿಯ ವಿಚಾರಣೆಯ ಹಂತದಲ್ಲಿ ಈ ಮಾತನ್ನು ಸ್ಪಷ್ಟವಾಗಿ ಹೇಳಿದ್ದು ಗಮನಾರ್ಹವಾಗಿದೆ. ರಾಜ್ಯಪಾಲರುಗಳ ಅವಾಂತರ ಇದಾದರೆ ಚುನಾವಣಾ ಆಯೋಗದ ಕುಚೋದ್ಯತನ ಇನ್ನೊಂದು ರೀತಿಯದು. ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ನಡೆಸಿರುವ ಚುನಾವಣಾ ಆಯೋಗ ಅಧಿಕೃತ ಗುರುತಿನ ಚೀಟಿಯನ್ನಾಗಿ 'ಆಧಾರ್' ನ್ನು ಪರಿಗಣಿಸಬಾರದೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಮಧ್ಯಪ್ರವೇಶ ಮಾಡಿರುವ ಸುಪ್ರೀಂ ಕೋರ್ಟ್ ಆಧಾರ್ ಪುರಾವೆಯನ್ನು ಒಪ್ಪಿಕೊಳ್ಳಬೇಕೆಂದು ಅದಕ್ಕೆ ಸೂಚಿಸಿದೆ. ಇದರಿಂದ ಅಸಮಾಧಾನಗೊಂಡ ಚುನಾವಣಾ ಆಯೋಗ ತನ್ನ ಕಾರ್ಯ ನಿರ್ವಹಣೆಯಲ್ಲಿ ಸುಪ್ರೀಂ ಕೋರ್ಟ್ ಹಸ್ತಕ್ಷೇಪ ಬೇಡ ಎಂದು ಮನವಿ ಸಲ್ಲಿಸಿದೆ. ಇದರಿಂದಾಗಿ ಎರಡು ಸಾಂವಿಧಾನಿಕ ಸಂಸ್ಥೆಗಳಲ್ಲಿ ತೆರೆಮರೆಯ ಸಂಘರ್ಷ ಆರಂಭವಾಗುವ ಅಪ್ರಿಯಕರ ಬೆಳವಣಿಗೆಗಳು ಗೋಚರಿಸುತ್ತಿವೆ.
ಮತಗಳ್ಳತನದ ಕುರಿತು ಲೋಕಸಭೆಯ ಪ್ರತಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿಯವರು ಮಾಡಿರುವ ಆರೋಪದ ಬಗ್ಗೆ ಚುನಾವಣಾ ಆಯೋಗ ತನಿಖೆಗೆ ಆದೇಶ ನೀಡಬೇಕಾಗಿತ್ತು. ಅದರ ಬದಲಾಗಿ ಅವರ ವಿರುದ್ದ ಕಾಲು ಕೆದರಿ ಜಗಳಕ್ಕೆ ನಿಂತ ಚುನಾವಣಾ ಆಯೋಗ, ಅದರಲ್ಲೂ ಮುಖ್ಯ ಚುನಾವಣಾ ಆಯುಕ್ತರು ರಾಹುಲ್ ಗಾಂಧಿಯವರ ಮೇಲೆ ರಾಜಕಾರಣಿಗಳಂತೆ ಆಕ್ಷೇಪಾರ್ಹ ಪ್ರತ್ಯಾಕ್ರಮಣಕ್ಕೆ ಮುಂದಾದರು. ಮತಗಳ್ಳತನದ ಕುರಿತು ಟೀಕೆ ಮಾಡುವಾಗ ರಾಹುಲ್ ಗಾಂಧಿಯವರು ತಮ್ಮ ಆರೋಪದ ಗಂಭೀರತೆಯನ್ನು ಮನಗಾಣಿಸಲು 'ಜಲಜನಕ ಬಾಂಬ್'ನಂಥ ಪದವನ್ನು ಬಳಸಿದರು. ಅವರ ಆರೋಪದ ಬಗ್ಗೆ ನಿಷ್ಪಕ್ಷ ತನಿಖೆಯನ್ನು ನಡೆಸಬೇಕಾದ ಚುನಾವಣಾ ಆಯೋಗ ಅದನ್ನು ಬಿಟ್ಟು 'ಆರೋಪವನ್ನು ಸಾಬೀತು ಪಡಿಸಬೇಕು', 'ಪ್ರಮಾಣಪತ್ರ ಸಲ್ಲಿಸಬೇಕು' ಎಂಬೆಲ್ಲ ಉದ್ದಟತನದ ಮಾರ್ಗ ಹಿಡಿದಿದೆ. ಈ ಬಗ್ಗೆ ಚುನಾವಣಾ ಆಯೋಗದ ಹಿಂದಿನ ಆಯುಕ್ತ ಎಸ್. ವೈ. ಖುರೇಷಿ ಅವರು "ತನ್ನ ಕಾರ್ಯವೈಖರಿಯ ಬಗ್ಗೆ ಆರೋಪಗಳು ಬಂದಾಗ ಆಯೋಗ ಆತ್ಮಾವಲೋಕನ ಮಾಡಿಕೊಳ್ಳಬೇಕು. ತನ್ನ ನಿರ್ಧಾರಗಳ ಮೇಲೆ ಪ್ರಭಾವ ಬೀರುವ ಶಕ್ತಿಗಳ ಬಗ್ಗೆ ಎಚ್ಚರವಾಗಿರಬೇಕು'' ಎಂದು ಹೇಳಿದ್ದಾರೆ.
ಚುನಾವಣಾ ಆಯೋಗದ ಕಾರ್ಯ ವೈಖರಿಯ ಬಗ್ಗೆ ಯಾರೋ ಬೀದಿಯಲ್ಲಿ ಹೋಗುವವರು ಮಾಡಿರುವ ಆರೋಪ ಇದಲ್ಲ. ರಾಹುಲ್ ಗಾಂಧಿಯವರು ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕರು. ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡುವುದು ಚುನಾವಣಾ ಆಯೋಗಕ್ಕೆ ಶೋಭೆ ತರುವುದಿಲ್ಲ. ಅದು ತನ್ನ ಪಾರದರ್ಶಕತೆಯ ಕುರಿತು ಕೇವಲ ಪ್ರತ್ಯಾರೋಪ ಮಾಡದೆ ತನಿಖೆಗೆ ಅವಕಾಶ ನೀಡಬೇಕಾಗಿತ್ತು. ಇಂಥ ಸುವರ್ಣಾವಕಾಶವನ್ನು ಚುನಾವಣಾ ಆಯೋಗ ಕಳೆದುಕೊಂಡಿದೆ. ಹೀಗಾಗಿ ಪ್ರತಿಪಕ್ಷಗಳು ಸುಪ್ರೀಂ ಕೋರ್ಟ್ ಮೆಟ್ಟಿಲನ್ನು ಹತ್ತಬೇಕಾಗಿ ಬಂದಿದೆ.
ಈಗಿರುವ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇಬ್ಬರು ಚುನಾವಣಾ ಆಯುಕ್ತರು ಹೇಗೆ ನೇಮಕಗೊಂಡರೆಂಬ ವಿವರ ಇಲ್ಲಿ ಬೇಡ. ಆದರೆ ಚುನಾವಣಾ ಆಯೋಗವು ಬಿಹಾರ ವಿಧಾನಸಭೆ ಚುನಾವಣೆಗೆ ಕೆಲವೇ ವಾರಗಳು ಮಾತ್ರ ಬಾಕಿ ಉಳಿದಿರುವಾಗ ನಾಗರಿಕರ ಅಧಿಕೃತ ಗುರುತಿನ ಚೀಟಿಗೆ ಆಧಾರ್‌ನ್ನು ಪರಿಗಣಿಸಕೂಡದೆಂದು ಬೂತ್ ಹಂತದ ಅಧಿಕಾರಿಗಳ ಮೂಲಕ ಅಡ್ಡಗಾಲು ಹಾಕಿದೆ. ಈ ಹಿನ್ನೆಲೆಯಲ್ಲಿ ಮಧ್ಯಪ್ರವೇಶ ಮಾಡಿರುವ ಸುಪ್ರೀಂ ಕೋರ್ಟ್ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಸಮಯದಲ್ಲಿ ಅಧಿಕೃತ ಗುರುತಿನ ಚೀಟಿಯನ್ನಾಗಿ ಆಧಾರ್‌ನ್ನು ಪರಿಗಣಿಸಬೇಕು ಎಂದು ಆದೇಶ ನೀಡಿದೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವ ಎಲ್ಲರೂ ಇದನ್ನು ಸ್ವಾಗತಿಸಿದ್ದಾರೆ. ಆದರೆ ಇದು ಚುನಾವಣಾ ಆಯೋಗದ ಅಸಮಾಧಾನಕ್ಕೆ ಕಾರಣವಾಗಿದೆ. ಒಟ್ಟು ಶೇ. 90ರಷ್ಟು ಜನರು ಆಧಾರ್‌ನ್ನೇ ಗುರುತಿನ ಚೀಟಿಯನ್ನಾಗಿ ಹೊಂದಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಗುರುತಿನ ಚೀಟಿಯ ಪುರಾವೆಯಾಗಿ ಆಧಾರ್ ಬಳಸುವುದರಿಂದ ಬಿಹಾರದಲ್ಲಿ ಮತದಾರರ ಪಟ್ಟಿಯಿಂದ ಹೊರಗೆ ಉಳಿದಿರುವ 65 ಲಕ್ಷಕ್ಕೂ ಹೆಚ್ಚು ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಅರ್ಹರಾಗುತ್ತಾರೆ. ಇದು ಚುನಾವಣಾ ಆಯೋಗಕ್ಕೆ ನುಂಗಲಾಗದ ತುಪ್ಪದಂತಾಗಿದೆ.
ಚುನಾವಣಾ ಆಯೋಗದ ಇತಿಹಾಸವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಅದು ಮುಂಚಿನಿಂದಲೂ ಆಳುವ ಸರಕಾರದ ಕೈಗೊಂಬೆಯಂತೆ ಕೆಲಸ ಮಾಡುತ್ತ ಬಂದಿದೆ. ಆದರೆ ಟಿ.ಎನ್. ಶೇಷನ್ ಅವರು ಮುಖ್ಯ ಚುನಾವಣಾ ಆಯುಕ್ತರಾಗಿದ್ದಾಗ ಅತ್ಯಂತ ನಿಷ್ಪಕ್ಷವಾಗಿ ಕಾರ್ಯನಿರ್ವಹಿಸಿತ್ತು. ಭ್ರಷ್ಟ ರಾಜಕಾರಣಿಗಳಿಗೆ ಶೇಷನ್ ಸಿಂಹ ಸ್ವಪ್ನದಂತಿದ್ದರು. ಆದರೆ ನರೇಂದ್ರ ಮೋದಿಯವರ ನೇತೃತ್ವದ ಎನ್‌ಡಿಎ ಸರಕಾರ ಬಂದ ನಂತರವಂತೂ ಚುನಾವಣಾ ಆಯೋಗ ಬಿಜೆಪಿಯ ಒಂದು ಅಂಗದಂತೆ ಕಾರ್ಯನಿರ್ವಹಿಸುತ್ತಿದೆ. ತನ್ನ ಅಕ್ರಮಗಳ ಬಗ್ಗೆ ಆರೋಪಗಳು ಬಂದಾಗ ಅದು ಮೌನವಾಗಿರುತ್ತದೆ. ಅದರ ಪರವಾಗಿ ತರಾತುರಿಯಲ್ಲಿ ಹೇಳಿಕೆ ನೀಡುವ ಬಿಜೆಪಿ ನಾಯಕರು ಸಮರ್ಥನೆಗೆ ಮುಂದಾಗುತ್ತಾರೆ. ಹೀಗಾಗಿ ಆಯೋಗದ ಕಾರ್ಯ ವೈಖರಿಯ ಬಗ್ಗೆ ಸಹಜವಾಗಿ ಸಂದೇಹ ಬರುತ್ತದೆ. ಸಂದೇಹ ನಿವಾರಣೆಗೆ ಚುನಾವಣಾ ಆಯೋಗ ಯಾವುದೇ ಪಾರದರ್ಶಕ ಕ್ರಮಗಳನ್ನು ಕೈಗೊಂಡಿಲ್ಲ. ಚುನಾವಣಾ ಆಯೋಗದ ವಕ್ತಾರರಂತೆ ಬಿಜೆಪಿ ನಾಯಕರು ಯಾಕೆ ವರ್ತಿಸುತ್ತಾರೆ? ಚುನಾವಣಾ ಆಯೋಗ ಯಾಕೆ ಜಾಣ ಮೌನವನ್ನು ತಾಳುತ್ತದೆ? ಎಂಬ ಪ್ರಶ್ನೆಗಳಿಗೆ ಉತ್ತರ ಬೇಕಾಗಿದೆ.
ಕೇಂದ್ರದ ಬಿಜೆಪಿ ನೇತೃತ್ವದ ಸರಕಾರ ಸಾಂವಿಧಾನಿಕ ಸಂಸ್ಥೆಗಳ ಮೇಲೆ ನಿಯಂತ್ರಣ ಸಾಧಿಸುತ್ತಿರುವುದರಿಂದ ಭಾರತದ ಸಂಸದೀಯ ಜನತಂತ್ರ ವ್ಯವಸ್ಥೆ ಹಂತ ಹಂತವಾಗಿ ದುರ್ಬಲಗೊಳ್ಳತೊಡಗಿದೆ. ಒಮ್ಮೆ ಪ್ರಜಾಪ್ರಭುತ್ವ ವ್ಯವಸ್ಥೆ ಕುಸಿದು ಬಿದ್ದರೆ ನಿರಂಕುಶ, ಫ್ಯಾಶಿಸ್ಟ್ ಸರ್ವಾಧಿಕಾರಿ ವ್ಯವಸ್ಥೆ ಬಹುತ್ವ ಭಾರತವನ್ನು ಕಬಳಿಸಲು ಹಿಂಜರಿಯುವುದಿಲ್ಲ. ಈ ಅಪಾಯದಿಂದ ದೇಶವನ್ನು ಪಾರು ಮಾಡಲು ಭಾರತದ ಎಲ್ಲಾ ಸಮುದಾಯಗಳ ಜನರು ಸಂಕಲ್ಪ ಮಾಡಬೇಕಾಗಿದೆ.