‘ಮಾನಸಿಕ ಅಸ್ವಸ್ಥ’ರ ವೇಷದಲ್ಲಿ ಉಗ್ರರು!

ಅಶ್ವಿನ್ ಕುಮಾರ್ ಸುಪ್ರಾ (Photo:X/@zoo_bear)
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಮೂರು ದಿನಗಳ ಹಿಂದೆ ಇಡೀ ಮುಂಬೈಯನ್ನು ಬೆಚ್ಚಿ ಬೀಳಿಸುವಂತಹ ಬೆದರಿಕೆ ಕರೆಯೊಂದು ಪೊಲೀಸ್ ಸಹಾಯವಾಣಿಗೆ ಹೋಗಿತ್ತು. ‘‘ಲಷ್ಕರೆ ಜಿಹಾದಿ ಸಂಘಟನೆಯ 34 ಮಾನವ ಬಾಂಬರ್ಗಳು 400 ಕಿಲೋಗ್ರಾಂ ಆರ್ಡಿಎಕ್ಸ್ ಹೊತ್ತು ತಮ್ಮನ್ನು ತಾವು ಸ್ಫೋಟಿಸಿಕೊಳ್ಳಲು 34 ವಾಹನಗಳಲ್ಲಿ ಮುಂಬೈ ನಗರದಲ್ಲಿ ತಿರುಗಾಡುತ್ತಿದ್ದಾರೆ’’ ಎಂದು ಬೆದರಿಕೆ ಕರೆಯಲ್ಲಿ ತಿಳಿಸಲಾಗಿತ್ತು. ಸಹಸ್ರಾರು ಜನರು ಈ ಬಾಂಬ್ ದಾಳಿಯಲ್ಲಿ ಭೀಕರವಾಗಿ ಸಾಯಲಿದ್ದಾರೆ ಎಂದು ಎಚ್ಚರಿಸಲಾಗಿತ್ತು. ಈ ಕರೆಗೆ ಮುಂಬೈ ಪೊಲೀಸರು ಅಕ್ಷರಶಃ ನಡುಗಿ ಹೋಗಿದ್ದರು. ಯಾಕೆಂದರೆ, ಶನಿವಾರ ಮುಂಬೈ ಮಹಾನಗರದಲ್ಲಿ ಬೃಹತ್ ಗಣೇಶ ವಿಸರ್ಜನೆ ಮೆರವಣಿಗೆ ನಡೆಯಲಿತ್ತು. ಈ ಸಂದರ್ಭದಲ್ಲಿ ಲಕ್ಷಾಂತರ ಮಂದಿ ಭಾಗವಹಿಸುವವರಿದ್ದರು. ಒಂದು ವೇಳೆ ಬೆದರಿಕೆ ಕರೆಯಲ್ಲಿ ಒಂದಿಷ್ಟು ಸತ್ಯ ಇದ್ದರೂ ಸಾವಿರಾರು ಜನರ ಮಾರಣಹೋಮ ನಡೆಯುವ ಸಾಧ್ಯತೆಗಳಿದ್ದವು. ಆದುದರಿಂದ, ಮುಂಬೈಯಲ್ಲಿ 21,000 ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಯಿತು. ಬೆದರಿಕೆ ಕರೆಯು ಅದಾಗಲೇ ಮಾಧ್ಯಮಗಳಲ್ಲೂ ಸೋರಿಕೆಯಾಗಿರುವುದರಿಂದ ಜನರು ಕೂಡ ಭಾರೀ ಆತಂಕದಲ್ಲಿದ್ದರು. ತನಿಖೆಯನ್ನು ಚುರುಕು ಗೊಳಿಸಿದ ಪೊಲೀಸರು ಕೊನೆಗೂ ಬೆದರಿಕೆ ಒಡ್ಡಿದ ಶಂಕಿತ ಉಗ್ರ ಅಶ್ವಿನ್ ಕುಮಾರ್ ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಹಾರದ ರಾಜಧಾನಿ ಪಾಟ್ನಾದ ಪಾಟಲಿ ಪುತ್ರ ನಗರದವನಾಗಿರುವ ಅಶ್ವಿನಿ ಕುಮಾರ್ ಮೂಲತಃ ಜ್ಯೋತಿಷಿ ಮತ್ತು ವಾಸ್ತು ಸಲಹೆಗಾರನಾಗಿ ಕೆಲಸ ನಿರ್ವಹಿಸುತ್ತಿದ್ದ. ಈತ ಬೆದರಿಕೆ ಸಂದೇಶವನ್ನು ಫಿರೋಝ್ ಹೆಸರಿನಲ್ಲಿ ರವಾನಿಸಿದ್ದ. ಬಂಧನದ ವೇಳೆ ಪೊಲೀಸರು ಆರೋಪಿಯಿಂದ ಏಳು ಮೊಬೈಲ್ ಫೋನ್ಗಳು, ಮೂರು ಸಿಮ್ಕಾರ್ಡ್ಗಳು, ಆರು ಮೆಮೊರಿ ಕಾರ್ಡ್ ಹೋಲ್ಡರ್ಗಳು ಹಾಗೂ ಇತರ ಇಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯ ಹೆಸರು ಅಶ್ವಿನಿ ಕುಮಾರ್ ಎನ್ನುವುದು ಬಹಿರಂಗವಾಗುತ್ತಿದ್ದಂತೆಯೇ ಬೆದರಿಕೆಯ ಕುರಿತಂತೆ ಮಾಧ್ಯಮಗಳಿಗೆ ಇರುವ ಆಸಕ್ತಿ ಏಕಾಏಕಿ ಕಡಿಮೆಯಾಗಿದೆ. ಆತ ಮಾನಸಿಕ ಅಸ್ವಸ್ಥನಾಗಿದ್ದ ಎನ್ನುವುದನ್ನು ನಿರೂಪಿಸುವ ಪ್ರಯತ್ನ ಪರೋಕ್ಷವಾಗಿ ನಡೆಯುತ್ತಿದೆ.
ಆರೋಪಿಗೆ ಬಾಂಬ್ ಸ್ಫೋಟ ನಡೆಸುವ ಉದ್ದೇಶವಿತ್ತೋ ಇಲ ವೋ ಎನ್ನುವುದು ತನಿಖೆಯಿಂದ ಬಹಿರಂಗವಾಗಬೇಕು. ಆದರೆ, ಇಂತಹದೊಂದು ಬೆದರಿಕೆಯನ್ನು ಒಡ್ಡುವ ಮೂಲಕ ದುಷ್ಕರ್ಮಿಗೆ ಮುಂಬೈ ಶಹರದ ಶಾಂತಿ ಸುವ್ಯವಸ್ಥೆಯನ್ನು ಕದಡುವ ದುರುದ್ದೇಶವಿತ್ತು ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಯಾಕೆಂದರೆ, ಆತ ಬೆದರಿಕೆಯನ್ನು ಒಡ್ಡಿದ ಸಂದರ್ಭ ಅತ್ಯಂತ ಸೂಕ್ಷ್ಮವಾದುದು. ಇಡೀ ಮುಂಬೈ ಗಣೇಶೋತ್ಸವ ವಿಸರ್ಜನೆಯ ಸಂಭ್ರಮದಲ್ಲಿ ಮೈಮರೆತಿರುವ ಹೊತ್ತಿನಲ್ಲಿ ಆತ ಒಂದು ನಿರ್ದಿಷ್ಟ ಸಮುದಾಯದ ವ್ಯಕ್ತಿಯ ಹೆಸರಿನಲ್ಲಿ, ಸಂಘಟನೆಯ ಹೆಸರಿನಲ್ಲಿ ಬೆದರಿಕೆಯನ್ನು ಒಡ್ಡಿದ್ದ. ಒಮ್ಮೆ ಇದೇ ಮುಂಬೈ ನಗರ ಕೋಮುಗಲಭೆಗಳ ಬೆಂಕಿಯಲ್ಲಿ ಸಂಪೂರ್ಣ ಸುಟ್ಟು ಹೋಗಿತ್ತು. ಇದೀಗ ಎಲ್ಲರೂ ಸೌಹಾರ್ದವಾಗಿ ಬದುಕುವ ವಾತಾವರಣ ಪುನರ್ನಿರ್ಮಾಣಗೊಂಡಿದೆ. ಹೀಗಿರುವಾಗ ಗಣೇಶೋತ್ಸವ ಸಂದರ್ಭದಲ್ಲೇ ಈತ ಇನ್ನೊಂದು ಧರ್ಮದ ಹೆಸರಿನಲ್ಲಿ ಭಾರೀ ಸ್ಫೋಟ ನಡೆಸುವ ಬೆದರಿಕೆ ಒಡ್ಡಿರುವುದರ ಉದ್ದೇಶವೇ ಮುಂಬೈಯಲ್ಲಿ ಒಂದು ಸಮುದಾಯದ ವಿರುದ್ಧ ಹಿಂದೂ ಧರ್ಮೀಯರನ್ನು ಮತ್ತೆ ಎತ್ತಿ ಕಟ್ಟುವುದು. ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳದೇ ಇದ್ದರೆ ಮುಂಬೈಗೆ ಬೆಂಕಿ ಹಚ್ಚಲು ಈ ವದಂತಿಯೇ ಸಾಕಾಗುತ್ತಿತ್ತು. ಆತ ಹುಸಿ ಬೆದರಿಕೆಯೊಡ್ಡಿದ್ದರೂ, ಆತನ ಉದ್ದೇಶ ಭಾರೀ ಅನಾಹುತವನ್ನು ಎಸಗುವುದೇ ಆಗಿತ್ತು. ಆತ ಎಸಗಿರುವುದು ದೇಶ ವಿರೋಧಿ ಕೃತ್ಯ ಎನ್ನುವುದರಲ್ಲಿ ಯಾರಿಗೂ ಅನುಮಾನವಿಲ್ಲ.
ಇತ್ತೀಚೆಗೆ ದೇಶಾದ್ಯಂತ ಇಂತಹ ‘ಮಾನಸಿಕ ಅಸ್ವಸ್ಥ’ ವೇಷದಲ್ಲಿರುವ ಉಗ್ರವಾದಿಗಳ ಸಂಖ್ಯೆ ಅಧಿಕವಾಗುತ್ತಿದೆ. ಅವರ ಉದ್ದೇಶ ದೇಶದ ಆಂತರಿಕ ಭದ್ರತೆಯನ್ನು ದುರ್ಬಲಗೊಳಿಸುವುದೇ ಆಗಿದ್ದರೂ, ಅವರ ಬೆದರಿಕೆಗಳಿಂದ ಭಾರೀ ನಷ್ಟಗಳು ಸಂಭವಿಸುತ್ತಿದ್ದರೂ ‘ಮಾನಸಿಕ ಅಸ್ವಸ್ಥರು’ ಎನ್ನುವ ಮುಖವಾಡದಲ್ಲಿ ಕಾನೂನು ಕುಣಿಕೆಯಿಂದ ಪಾರಾಗುತ್ತಿದ್ದಾರೆ. ಆರೋಪಿಗಳ ಹೆಸರು ಮುಸ್ಲಿಮ್ ಸಮುದಾಯಕ್ಕೆ ಸೇರಿದ್ದಾಗ ಮಾತ್ರ ಮಾಧ್ಯಮಗಳು ಹಾಹಾಕಾರ ಎಬ್ಬಿಸುತ್ತವೆೆ. ಪೊಲೀಸರು ಆರೋಪಿಯ ಹಿಂದಿರುವ ಉಗ್ರವಾದಿ ಸಂಘಟನೆಗಳ ಬಗ್ಗೆ ಅನ್ವೇಷಣೆಗೆ ಇಳಿಯುತ್ತಾರೆೆ. ಆರೋಪಿಯನ್ನು ಶಂಕಿತ ಉಗ್ರ ಎಂದು ಕರೆದು ಜೈಲಿಗೆ ತಳುತ್ತಾರೆ. ಆದರೆ ಆತ ಆ ಧರ್ಮಕ್ಕೆ ಸೇರಿದವನಲ್ಲದೇ ಇದ್ದರೆ ಪ್ರಕರಣ ಆರೋಪಿಯ ಬಂಧನದ ಪ್ರಹಸನದೊಂದಿಗೆ ಬಿದ್ದು ಹೋಗುತ್ತದೆ. ಜನವರಿ 6ರಂದು ಮಹಾಕುಂಭ ಮೇಳ ನಡೆದಾಗ ನಾಸಿರ್ ಪಠಾಣ್ ಎಂಬ ಹೆಸರಿನಲ್ಲಿ ಬಾಂಬ್ ದಾಳಿಯ ಬೆದರಿಕೆ ಒಡ್ಡಲಾಗಿತ್ತು. ಮಹಾಕುಂಭಮೇಳದ ಮೇಲೆ ಬಾಂಬ್ ದಾಳಿ ನಡೆಸಿ 1,000 ಜನರನ್ನು ಹತ್ಯೆ ಮಾಡಲಾಗುವುದು ಎಂದು ಸಾಮಾಜಿಕ ಜಾಲತಾಣದಲ್ಲಿ ಈತ ಬೆದರಿಸಿದ್ದ. ಈ ಬೆದರಿಕೆ ದೇಶದಲ್ಲಿ ಸಂಚಲನವನ್ನು ಉಂಟು ಮಾಡಿತ್ತು. ಅದಾಗಲೇ ಮಾಧ್ಯಮಗಳು ಈ ಬೆದರಿಕೆಯನ್ನು ಮುಂದಿಟ್ಟುಕೊಂಡು ದ್ವೇಷವನ್ನು ಹರಡಲು ಶುರು ಹಚ್ಚಿದ್ದವು. ಆದರೆ ಪೊಲೀಸರು ತನಿಖೆಯನ್ನು ಇನ್ನಷ್ಟು ಆಳಕ್ಕಿಳಿಸಿದಾಗ ಮುಸ್ಲಿಮ್ ವ್ಯಕ್ತಿಯ ಹೆಸರಿನಲ್ಲಿ ಆಯುಷ್ ಕುಮಾರ್ ಜೈಸ್ವಾಲ್ ಎಂಬಾತ ಬೆದರಿಕೆ ಒಡ್ಡಿರುವುದು ಬೆಳಕಿಗೆ ಬಂತು. ಕೃತ್ಯವನ್ನು ಎಸಗಿದ್ದ ಆರೋಪಿ ನೆರೆಯ ನೇಪಾಳದಲ್ಲಿ ತಲೆ ಮರೆಸಿಕೊಂಡಿದ್ದ. ಕೊನೆಗೂ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾದರು. ‘ತನ್ನ ನೆರೆಮನೆಯ ನಾಸಿರ್ ಪಠಾಣ್ ಎಂಬಾತನನ್ನು ಪ್ರಕರಣದಲ್ಲಿ ಸಿಲುಕಿಸಲು ಈ ಕೃತ್ಯ ಎಸಗಿದ್ದೆ’ ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದ. ಆದರೆ, ಅದಷ್ಟೇ ಆತನ ಉದ್ದೇಶವಾಗಿದ್ದರೆ ಅದಕ್ಕಾಗಿ ಕುಂಭಮೇಳದಂತಹ ಹಿಂದೂ ಧಾರ್ಮಿಕ ಸಮಾವೇಶವನ್ನು ಯಾಕೆ ಆತ ಗುರಿ ಮಾಡಿದ್ದ? ಆತನ ಬೆದರಿಕೆಯು ದೇಶದ ಹಿಂದೂ ಜನರ ಭಾವನೆಗಳಿಗೆ ಧಕ್ಕೆ ತರುವಂತಹದ್ದಾಗಿತ್ತು. ಜನರು ರೊಚ್ಚಿಗೆದ್ದು ಇನ್ನೊಂದು ಧರ್ಮೀಯರ ಮೇಲೆ ದಾಳಿ ನಡೆಸುವ ಸಾಧ್ಯತೆಗಳಿತ್ತು ಅಥವಾ ದುಷ್ಕರ್ಮಿಯ ನಿಜವಾದ ಉದ್ದೇಶವೇ ಅದಾಗಿರಲೂ ಬಹುದು. ಈ ಕೃತ್ಯದ ಹಿಂದೆ ಕೋಮುಗಲಭೆಗಳನ್ನು ನಡೆಸಿ ರಾಜಕೀಯ ಉದ್ದೇಶವನ್ನು ಈಡೇರಿಸಿಕೊಳ್ಳುವ ಸಂಘಪರಿವಾರ ಸಂಘಟನೆಗಳ ಪಾತ್ರವನ್ನೂ ಅಲ್ಲಗಳೆಯಲು ಸಾಧ್ಯವಿಲ್ಲ. ಹೀಗಿರುವಾಗ, ಇದನ್ನು ‘ಹುಸಿ ಬೆದರಿಕೆ’ ಎಂದು ನಿರ್ಲಕ್ಷಿಸುವುದು ಎಷ್ಟು ಸರಿ?
2025ರಲ್ಲಿ ಜುಲೈ 20ರವರೆಗೆ ವಿಮಾನ ಯಾನ ಸಂಸ್ಥೆಗಳು ಒಟ್ಟು 69 ಹುಸಿ ಬಾಂಬ್ ಬೆದರಿಕೆ ಕರೆಗಳನ್ನು ಸ್ವೀಕರಿಸಿವೆ ಎಂದು ಕೇಂದ್ರ ಸರಕಾರ ತಿಳಿಸಿದೆ. 2022ರಿಂದ ಜುಲೈ 20, 2025ರವರೆಗೆ ವಿಮಾನ ಯಾನ ಸಂಸ್ಥೆಗಳು ಒಟ್ಟು 881 ಹುಸಿ ಬಾಂಬ್ ಬೆದರಿಕೆಗಳನ್ನು ಸ್ವೀಕರಿಸಿವೆ.ಯಾವುದೇ ಬೆದರಿಕೆ ಕರೆಗಳನ್ನು ವಿಮಾನ ಯಾನ ಸಂಸ್ಥೆಗಳು ನಿರ್ಲಕ್ಷಿಸುವಂತಿಲ್ಲ. ಒಂದು ವೇಳೆ ಆ ಕರೆಯಲ್ಲಿ ಸತ್ಯಾಂಶವಿದ್ದರೆ ಅದು ನೂರಾರು ಜನರ ಸಾವುನೋವುಗಳಿಗೆ ಕಾರಣವಾಗಬಹುದು. ಈ ಕಾರಣದಿಂದ ಈ ಬಾಂಬ್ ಬೆದರಿಕೆ ಕರೆಗಳ ಕಾರಣದಿಂದಲೇ ನೂರಾರು ವಿಮಾನಗಳು ಪ್ರಯಾಣಗಳನ್ನು ಅರ್ಧದಲ್ಲೇ ನಿಲ್ಲಿಸಿವೆ. ಹಲವು ಮಹತ್ವದ ಕಾರ್ಯಕ್ರಮಗಳಿಗೆ ತಲುಪಲೇ ಬೇಕು ಎನ್ನುವವರು ತೊಂದರೆ ಅನುಭವಿಸಿದ್ದಾರೆ. ಅನಿವಾಸಿ ಉದ್ಯಮಿಗಳು ಭಾರತೀಯ ವಿಮಾನ ಸಂಸ್ಥೆಗಳ ಕುರಿತಂತೆ ವಿಶ್ವಾಸ ಕಳೆದುಕೊಂಡಿದ್ದಾರೆ.ಹಲವರು ಆರ್ಥಿಕ ನಷ್ಟಗಳನ್ನು ಎದುರಿಸುವಂತಾಗಿದೆ. ಇಂತಹ ಬೆದರಿಕೆ ತೀವ್ರವಾಗುತ್ತಿದ್ದ ಹಾಗೆಯೇ ಸರಕಾರ ಅನಿವಾರ್ಯವಾಗಿ ಕಳೆದ ವರ್ಷ ಡಿಸೆಂಬರ್ನಲ್ಲಿ ಹುಸಿ ಬಾಂಬ್ ಬೆದರಿಕೆ ಒಡ್ಡಿದರೆ ಒಂದು ಕೋಟಿ ರೂಪಾಯಿಯವರೆಗೆ ದಂಡ ವಿಧಿಸಲು ವಿಮಾನ ಭದ್ರತಾ ನಿಯಮಕ್ಕೆ ತಿದ್ದುಪಡಿ ತಂದಿತು. ವಿಮಾನಗಳಿಗೆ ಬೆದರಿಕೆಯೊಡ್ಡಿದವರ ವಿರುದ್ಧ ಕಾಯ್ದೆಯನ್ನು ಬಿಗಿಯಾಗಿಸಿದ ಸರಕಾರವೇ, ಶಾಲೆ ಕಾಲೇಜುಗಳಿಗೆ, ಧಾರ್ಮಿಕ ಉತ್ಸವಗಳಿಗೆ ಸರಣಿ ಬಾಂಬ್ ಬೆದರಿಕೆ ಒಡ್ಡಿದವರ ವಿರುದ್ಧ ಮೃದು ನಿಲುವು ತಳೆದಿರುವುದು ಯಾಕೆ ? ಎಂದು ಇದೀಗ ಜನರು ಪ್ರಶ್ನಿಸುತ್ತಿದ್ದಾರೆ.
ಇಂತಹ ಸ್ಫೋಟ ಬೆದರಿಕೆಯೊಡ್ಡುವವರ ಉದ್ದೇಶ ಸಮಾಜದಲ್ಲಿ ಉದ್ವಿಗ್ನ ವಾತಾವರಣವನ್ನು ನಿರ್ಮಿಸುವುದು, ಒಂದು ಸಮುದಾಯವನ್ನು ಇನ್ನೊಂದು ಸಮುದಾಯದ ವಿರುದ್ಧ ಎತ್ತಿ ಕಟ್ಟುವುದಾಗಿರುತ್ತದೆ. ಜೊತೆಗೆ ದೇಶದ ಕಾನೂನು ಸುವ್ಯವ್ಯಸ್ಥೆಯನ್ನು ದುರ್ಬಲಗೊಳಿಸಿ ಉಗ್ರರಿಗೆ ಪರೋಕ್ಷ ನೆರವನ್ನು ನೀಡುವ ಉದ್ದೇಶವಿದೆ. ‘ತೋಳ ಬಂತು ತೋಳ’ ಗಾದೆಯಂತೆ ಇಂತಹ ಬೆದರಿಕೆ ಕರೆಗಳು ಅಭ್ಯಾಸವಾಗಿ ಪೊಲೀಸರು ಅವುಗಳನ್ನು ನಿರ್ಲಕ್ಷಿಸಿ, ಮುಂದೊಂದು ದಿನ ಈ ಬೆದರಿಕೆ ನಿಜವೇ ಆಗಿ ಬಿಟ್ಟರೆ ಸಂಭವಿಸುವ ಸಾವುನೋವುಗಳಿಗೆ ಯಾರು ಹೊಣೆ? ಆದುದರಿಂದ ಇಂತಹ ಬೆದರಿಕೆಯನ್ನು ಒಡ್ಡುವ ಯಾವನೇ ಆಗಿರಲಿ, ಆತನನ್ನು ದೇಶದ್ರೋಹದ ಕಾಯ್ದೆಯಡಿ ಬಂಧಿಸಿ, ಶಾಶ್ವತವಾಗಿ ಜೈಲಿನಲ್ಲಿರಿಸಲು ಒಂದು ಕಠಿಣ ಕಾನೂನನ್ನು ಜಾರಿಗೆ ತರಬೇಕಾಗಿದೆ. ಇಂತಹ ಹುಸಿ ಬೆದರಿಕೆಗಳು ಸಮಾಜದ ಮೇಲೆ, ಕಾನೂನು ಸುವ್ಯವಸ್ಥೆಯ ಮೇಲೆ ಬೀರುವ ದುಷ್ಪರಿಣಾಮಗಳನ್ನು ಗಂಭೀರವಾಗಿ ತೆಗೆದುಕೊಂಡು ಆರೋಪಿಗೆ ಕಠಿಣ ಶಿಕ್ಷೆಯನ್ನು ನೀಡುವ ವ್ಯವಸ್ಥೆಯಾಗಬೇಕು.