ಮನಸ್ಸಿನ ಆರೋಗ್ಯವೇ ಜಗತ್ತಿನ ಆರೋಗ್ಯ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಮನಸ್ಸು ಮತ್ತು ದೇಹದ ನಡುವಿನ ಸಮತೋಲನದಿಂದ ಒಬ್ಬ ಆರೋಗ್ಯವಂತ ಪೂರ್ಣ ಮನುಷ್ಯನಾಗಿ ರೂಪುಗೊಳ್ಳುತ್ತಾನೆ. ದೇಹವನ್ನು ಆರೋಗ್ಯವಾಗಿಟ್ಟುಕೊಂಡರೆ ಅದು ಮನಸ್ಸಿನ ಮೇಲೆಯೂ, ಮನಸ್ಸನ್ನು ಆರೋಗ್ಯವಾಗಿಟ್ಟುಕೊಂಡರೆ ದೇಹದ ಮೇಲೆಯೂ ಸತ್‌ಪರಿಣಾಮವುಂಟಾಗುತ್ತದೆ. ಇಷ್ಟಾದರೂ ನಾವು ದೈಹಿಕ ಆರೋಗ್ಯಕ್ಕೆ ನೀಡುವ ಮಹತ್ವವನ್ನು ಮನಸ್ಸಿಗೆ ನೀಡುತ್ತಿಲ್ಲ. ಪರಿಣಾಮವಾಗಿ, ಇಂದು ಜಗತ್ತನ್ನು ಅತಿ ಹೆಚ್ಚು ಕಾಡುತ್ತಿರುವ ರೋಗವಾಗಿ ಖಿನ್ನತೆ, ಆತಂಕಗಳು ಗುರುತಿಸಿಕೊಳ್ಳುತ್ತಿವೆ. ಇವುಗಳಿಗೆ ಯುವಕರು ಮತ್ತು ಮಹಿಳೆಯರು ಹೆಚ್ಚು ಹೆಚ್ಚು ಬಲಿಯಾಗುತ್ತಿರುವುದರಿಂದ ಮನೆ, ಸಮಾಜದೊಳಗೆ ಅಭದ್ರತೆ, ಬಿರುಕುಗಳು ಸೃಷ್ಟಿಯಾಗುತ್ತಿವೆ. ಈ ಬಿರುಕುಗಳು ಹೊಸ ಮಾನಸಿಕ ಸಮಸ್ಯೆಗಳನ್ನು ಹುಟ್ಟಿಸಿ ಹಾಕುತ್ತಿವೆ. ಇದೊಂದು ರೀತಿಯಲ್ಲಿ, ವಿಷ ವರ್ತುಲ. ವಿಪರ್ಯಾಸವೆಂದರೆ, ಮಾನಸಿಕ ಸಮಸ್ಯೆಗಳು ಒಂದು ಭೀಕರ ಪಿಡುಗಾಗಿ ಜಗತ್ತನ್ನು ಕಾಡುತ್ತಿರುವಾಗಲೂ, ಹೆಚ್ಚಿನವರಿಗೆ ತಾನು ರೋಗದಿಂದ ನರಳುತ್ತಿದ್ದೇನೆ ಎನ್ನುವುದರ ಅರಿವೇ ಇರುವುದಿಲ್ಲ. ಅರಿವಾದ ದೊಡ್ಡ ಸಂಖ್ಯೆಯ ಜನರಿಗೆ ಇದಕ್ಕೆ ಸೂಕ್ತ ಔಷಧಿಗಳನ್ನು ಪಡೆಯಬೇಕು ಎನ್ನುವ ತಿಳುವಳಿಕೆಯೂ ಇಲ್ಲ. ಮಾನಸಿಕ ಸಮಸ್ಯೆ ಎದುರಿಸುತ್ತಿರುವ ಬಹುಸಂಖ್ಯಾತರು ಮಾನಸಿಕ ತಜ್ಞರನ್ನು ಭೇಟಿಯಾಗುವುದು ಅವಮಾನಕರ ವಿಷಯವೆಂದೇ ಇಂದಿಗೂ ತಪ್ಪು ಕಲ್ಪನೆಯಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ಜನರ ಮಾನಸಿಕ ಸಮಸ್ಯೆಗಳಿಗೆ ಹೋಲಿಸಿದರೆ ಜಗತ್ತಿನಲ್ಲಿ ವೈದ್ಯರ ಸಂಖ್ಯೆ ತೀರಾ ಕಡಿಮೆ ಪ್ರಮಾಣದಲ್ಲಿದೆ. ಇದಕ್ಕೆ ಸಂಬಂಧಿಸಿದ ಔಷಧಿಗಳ ವಿಷಯದಲ್ಲೂ ಸಾಕಷ್ಟು ಗೊಂದಲಗಳಿವೆ.
ಮಾನಸಿಕ ಆರೋಗ್ಯ ಸ್ಥಿತಿಗತಿಗಳ ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆಯು ಮಂಗಳವಾರ ವರದಿಯನ್ನು ಬಿಡುಗಡೆ ಮಾಡಿದ್ದು, ಈ ಜಗತ್ತಿನ ನೂರು ಕೋಟಿಗೂ ಅಧಿಕ ಜನರು ಬೇರೆ ಬೇರೆ ರೀತಿಯ ಮಾನಸಿಕ ಸಮಸ್ಯೆಗಳ ಜೊತೆಗೆ ಬದುಕುತ್ತಿದ್ದಾರೆ ಎನ್ನುವುದನ್ನು ಹೇಳಿದೆ. ಯುವಜನರಲ್ಲಿ ಈ ಕಾಯಿಲೆಗಳು ಹೆಚ್ಚುತ್ತಿದ್ದು, 2021ರಲ್ಲಿ 7.2 ಲಕ್ಷ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ ಹೇಳುತ್ತಿದೆ. ಮಾನಸಿಕ ಸಮಸ್ಯೆಗಳು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಕಂಡು ಬರುತ್ತಿವೆ. 51.39 ಲಕ್ಷ ಪುರುಷರು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, 58.15 ಲಕ್ಷ ಮಹಿಳೆಯರು ಬೇರೆ ಬೇರೆ ಒತ್ತಡಗಳನ್ನು ಎದುರಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಆತ್ಮಹತ್ಯೆ ಪ್ರಯತ್ನಗಳು ಕೂಡ ಹೆಚ್ಚುತ್ತಿರುವುದನ್ನು ವರದಿ ಉಲ್ಲೇಖಿಸಿದೆ. ಮಾನಸಿಕ ಕಾರಣದಿಂದ ಆತ್ಮಹತ್ಯೆಗೆ ಶರಣಾಗುವುದರಲ್ಲಿ ಪುರುಷರ ಸಂಖ್ಯೆ ಹೆಚ್ಚಿದೆ ಎನ್ನುವುದನ್ನು ವರದಿ ಹೇಳುತ್ತಿದೆ. ಈ ಆತಂಕ ಮತ್ತು ಖಿನ್ನತೆಗಳು ಜಾಗತಿಕ ಆರ್ಥಿಕತೆಗೆ ವಾರ್ಷಿಕವಾಗಿ ಒಂದು ಲಕ್ಷ ಕೋಟಿ ಡಾಲರ್‌ಗಳಷ್ಟು ನಷ್ಟವನ್ನುಂಟು ಮಾಡುತ್ತಿದೆ. ಅಧಿಕ ಆದಾಯದ ದೇಶಗಳು ಮಾನಸಿಕ ಆರೋಗ್ಯ ಸೇವೆಗಳಿಗಾಗಿ ಪ್ರತೀ ವ್ಯಕ್ತಿಗೆ 65. 8 ಡಾಲರ್ ವೆಚ್ಚ ಮಾಡಿದರೆ ಭಾರತದಂತಹ ಕಡಿಮೆ ಆದಾಯದ ದೇಶಗಳು ಕೇವಲ 0.04 ಡಾಲರ್‌ಗಳನ್ನಷ್ಟೇ ವ್ಯಯಿಸುತಿವೆ.
ಆಧುನಿಕ ದಿನಗಳಲ್ಲಿ ಹೆಚ್ಚುತ್ತಿರುವ ಹಿಂಸಾಚಾರ ಮಕ್ಕಳಲ್ಲಿ ಮತ್ತು ಯುವಕರನ್ನು ಮಾನಸಿಕ ಸಮಸ್ಯೆಗಳಿಗೆ ತಳ್ಳುತ್ತಿವೆ. ಇಸ್ರೇಲ್ ನಡೆಸುತ್ತಿರುವ ಭಯಾನಕ ಹತ್ಯಾಕಾಂಡದ ಪರಿಣಾಮವಾಗಿ ಗಾಝಾದಲ್ಲಿ ಬದುಕಿರುವ ಅಳಿದುಳಿದ ಮಕ್ಕಳು ಎದುರಿಸುತ್ತಿರುವ ಮಾನಸಿಕ ಸಮಸ್ಯೆಗಳ ಬಗ್ಗೆ ವಿಶ್ವಸಂಸ್ಥೆ ಆತಂಕಗಳನ್ನು ವ್ಯಕ್ತಪಡಿಸುತ್ತಲೇ ಬಂದಿದೆ. ಭಾರತದಲ್ಲಿ ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಮಕ್ಕಳು ಅತಿ ಹೆಚ್ಚು ಖಿನ್ನತೆ ಮತ್ತು ಆತಂಕಗಳಿಂದ ನರಳುತ್ತಿರುವುದನ್ನು ಬೇರೆ ಬೇರೆ ವರದಿಗಳು ಬೆಟ್ಟು ಮಾಡುತ್ತಿವೆ. ಸರಕಾರ ಪ್ರಾಯೋಜಿತ ಹಿಂಸಾಚಾರಗಳು ದೇಶದಲ್ಲಿ ಮಕ್ಕಳು ಮತ್ತು ಯುವಕರನ್ನು ಮಾನಸಿಕವಾಗಿ ಅಸ್ವಸ್ಥರನ್ನಾಗಿಸುತ್ತಿದೆ. ಇಂತಹ ಮಕ್ಕಳು ಭವಿಷ್ಯದಲ್ಲಿ ತೀವ್ರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೋಮುಗಲಭೆಗಳಲ್ಲಿ ಹಿಂಸಾಚಾರಗಳನ್ನು ನೋಡಿದ, ಅವುಗಳಲ್ಲಿ ಸಂತ್ರಸ್ತರಾದ ಮಕ್ಕಳಲ್ಲೂ ಮಾನಸಿಕ ಸಮಸ್ಯೆಗಳು ಕಂಡು ಬರುತ್ತವೆ. ಆಧುನಿಕ ದಿನಗಳಲ್ಲಿ ಮಕ್ಕಳಲ್ಲಿಯೂ ಹಿಂಸಾಗ್ರಸ್ತ ಮನಸ್ಥಿತಿ ಹೆಚ್ಚುತ್ತಿದೆ. ಬಳಪ ಹಿಡಿಯಬೇಕಾದ ಕೈಗಳು ಚೂರಿಗಳನ್ನು ಹಿಡಿದು ಓಡಾಡುತ್ತಿವೆ. ಶಾಲಾ ಕಾಲೇಜುಗಳಲ್ಲಿ ನಡೆಯುವ ವಿದ್ಯಾರ್ಥಿಗಳಿಂದಲೇ ಘಟಿಸುವ ಶೂಟೌಟ್‌ಗಳು ಹಿರಿಯರನ್ನು ಬೆಚ್ಚಿ ಬೀಳಿಸುತ್ತಿವೆ. ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಕಳೆದ ಆಗಸ್ಟ್
ನಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿಯೊಬ್ಬ ಹತ್ತನೇ ತರಗತಿಯ ವಿದ್ಯಾರ್ಥಿಯನ್ನು ಚಾಕುವಿನಿಂದ ಇರಿದು ಕೊಂದು ಹಾಕಿರುವ ಕೃತ್ಯ ನಡೆದಿದೆ. ಕಳೆದ ಜೂನ್‌ನಲ್ಲಿ 11 ವರ್ಷದ ವಿದ್ಯಾರ್ಥಿ ಇನ್ನೊಬ್ಬ ವಿದ್ಯಾರ್ಥಿಯನ್ನು ಚೂರಿಯಿಂದ ಇರಿದಿರುವ ಘಟನೆ ನಡೆದಿತ್ತು. ಇದೇ ಸಂದರ್ಭದಲ್ಲಿ ಪ್ರೇಮ ವೈಫಲ್ಯದ ಹೆಸರಿನಲ್ಲಿ ಕೊಲೆಗಳು ಹೆಚ್ಚುತ್ತಿವೆ. ಇವುಗಳಲ್ಲಿ ಬಹುತೇಕ ಪ್ರಕರಣಗಳಲ್ಲಿ ಆರೋಪಿ ವಿಕೃತ ಮಾನಸಿಕತೆಯಿಂದ ನರಳುತ್ತಿರುತ್ತಾನೆ. ಅದು ಬೆಳಕಿಗೆ ಬರುವಷ್ಟರಲ್ಲಿ ದುರಂತಗಳು ಸಂಭವಿಸಿರುತ್ತವೆ.
ಕುಟುಂಬ ಸಣ್ಣದಾಗುತ್ತಾ ಹೋದ ಹಾಗೆ ಮಕ್ಕಳ ಕಡೆಗೆ ಪೋಷಕರ ಗಮನವೂ ಕಡಿಮೆಯಾಗುತ್ತಾ ಹೋಗುವುದು, ಪೋಷಕರ ನಡುವೆ ಹೆಚ್ಚುತ್ತಿರುವ ಕಲಹಗಳು ಮಕ್ಕಳ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತಿರುವುದು ಅಂತಿಮವಾಗಿ ಅವರನ್ನು ಮಾನಸಿಕ ಸಮಸ್ಯೆಗಳಿಗೆ ಈಡು ಮಾಡಬಹುದು. ಆಧುನಿಕ ದಿನಗಳಲ್ಲಿ ದಂಪತಿ ನಡುವೆ ಹೆಚ್ಚುತ್ತಿರುವ ವಿಚ್ಛೇದನದ ಬಲಿಪಶುಗಳು ಮಕ್ಕಳೇ ಆಗಿರುತ್ತಾರೆ. ಲೈಂಗಿಕವಾಗಿ ಮಕ್ಕಳ ಶೋಷಣೆಯೂ ಹಲವು ಮಾನಸಿಕ ಸಮಸ್ಯೆಗಳಿಗೆ ಮುಖ್ಯ ಕಾರಣವಾಗಿದೆ. ಇಂತಹ ಸಂದರ್ಭದಲ್ಲಿ ಪ್ರತಿ ಶಾಲೆಗಳಲ್ಲಿ ಮಕ್ಕಳ ಜೊತೆಗೆ ಸಂವಹನ ನಡೆಸುವ ಪದ್ಧತಿಯಿರಬೇಕು. ಅವರ ದೈಹಿಕ ಚಟುವಟಿಕೆಗಳಲ್ಲಿ ಗಮನವಿಟ್ಟಂತೆಯೇ ಮಾನಸಿಕ ಸಮಸ್ಯೆಗಳಿಗೂ ಶಿಕ್ಷಕರು ಸ್ಪಂದಿಸುವುದು ಅತ್ಯಗತ್ಯವಾಗಿದೆ. ಯುವಕರನ್ನು ಕಾಡುತ್ತಿರುವ ಒಂಟಿತನ, ಅವರು ಕೆಲಸದ ಸಂದರ್ಭದಲ್ಲಿ ಎದುರಿಸುವ ಒತ್ತಡಗಳು, ವಿಶ್ರಾಂತಿಯಿಲ್ಲದ ದುಡಿಮೆ ಇತ್ಯಾದಿಗಳು ಖಿನ್ನತೆ, ಆತಂಕಗಳಿಗೆ ಕಾರಣವಾಗಬಹುದು. ಕೊರೋನೋತ್ತರ ದಿನಗಳಲ್ಲಿ ಜಗತ್ತು ಭಾರೀ ಆರ್ಥಿಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಕೊರೋನಾ ಕಾಲದಲ್ಲಿ ದೈಹಿಕವಾಗಿ ಬಾಧಿತರ ಬಗ್ಗೆಯಷ್ಟೇ ಕಾಳಜಿವಹಿಸಲಾಯಿತು. ಇದೇ ಸಂದರ್ಭದಲ್ಲಿ ಲಾಕ್‌ಡೌನ್, ಆರ್ಥಿಕ ಒತ್ತಡ, ನಿರುದ್ಯೋಗ ಇತ್ಯಾದಿ ಕಾರಣಗಳಿಂದ ಖಿನ್ನತೆಗೆ, ಆತಂಕಕ್ಕೊಳಗಾದವರನ್ನು ನಿರ್ಲಕ್ಷಿಸಿದ ಪರಿಣಾಮವಾಗಿ ಜಾಗತಿಕವಾಗಿ ಮಾನಸಿಕ ಸಮಸ್ಯೆಗಳು ಹೆಚ್ಚಿವೆ. ಇದೇ ಸಂದರ್ಭದಲ್ಲಿ ಮಹಿಳೆಯರು ಮನೆಯ ಒಳಗೆ ಮತ್ತು ಹೊರಗೆ ಎದುರಿಸುತ್ತಿರುವ ಒತ್ತಡಗಳಿಗೆ ಪ್ರಾಮಾಣಿಕ ಪರಿಹಾರಗಳನ್ನು ಹುಡುಕುವ ಕಾರ್ಯವೂ ನಡೆಯುತ್ತಿಲ್ಲ.
ಭಾರತದಂತಹ ದೇಶದಲ್ಲಿ ಮಾನಸಿಕ ತಜ್ಞರ ಬಹುದೊಡ್ಡ ಕೊರತೆಯಿರುವುದು ರೋಗ ಹೆಚ್ಚಳಕ್ಕೆ ಒಂದು ಕಾರಣವಾಗಿದೆ. ಇದರ ಜೊತೆ ಜೊತೆಗೇ ಗ್ರಾಮೀಣ ಪ್ರದೇಶದಲ್ಲಿ ಮಾನಸಿಕ ಸಮಸ್ಯೆಗಳು ಮೌಢ್ಯಕ್ಕೆ ಕಾರಣವಾಗುತ್ತಿವೆ. ಇಲ್ಲಿ ಮಾನಸಿಕ ಕಾಯಿಲೆಗಳಿಗೆ ಈಡಾದವರನ್ನು ಕಪಟ ಮಂತ್ರವಾದಿಗಳು, ಜೋಯಿಸರು, ಬಾಬಾಗಳು ಉಪಚರಿಸುವುದು ಕಾಯಿಲೆಯ ಉಲ್ಬಣಕ್ಕೆ ಕಾರಣವಾಗುತ್ತಿದೆ. ಹಾಗೆಯೇ ವಿದ್ಯಾವಂತರೂ ಮಾನಸಿಕ ಕಾಯಿಲೆಗಳನ್ನ್ನು ಮುಚ್ಚಿಡುವುದು ಅಥವಾ ವೈದ್ಯರನ್ನು ಸಂಪರ್ಕಿಸಲು ಹಿಂಜರಿಯುತ್ತಿರುವುದು ಕಾಣಬಹುದು. ಈ ನಿಟ್ಟಿನಲ್ಲಿ ಮಾನಸಿಕ ಕಾಯಿಲೆಗಳ ಬಗ್ಗೆ ಜಾಗೃತಿಯನ್ನು ಮೂಡಿಸುವ ಕಾರ್ಯ ಹೆಚ್ಚು ಹೆಚ್ಚು ನಡೆಯಬೇಕಾಗಿದೆ. ಶಾಲಾ ಪಠ್ಯಗಳ ಮೂಲಕವೂ ಈ ಸಮಸ್ಯೆಗಳ ಬಗ್ಗೆ ಅರಿವನ್ನು ಮೂಡಿಸಬೇಕು. ಹಾಗೆಯೇ ದೇಶದಲ್ಲಿ ಮೌಢ್ಯ ನಿಯಂತ್ರಣ ಕಾಯ್ದೆಯನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಿ ಜನರನ್ನು ಹೆಚ್ಚು ಪ್ರಜ್ಞಾವಂತರನ್ನಾಗಿಸುವ ಅಗತ್ಯವಿದೆ. ಆರೋಗ್ಯವಂತ ಸಮಾಜ ಆರೋಗ್ಯವಂತ ಮನಸ್ಸು ಒಂದನ್ನೊಂದು ಬಿಡದಂತೆ ಬೆಸೆದಿದೆ. ನಮ್ಮ ಒಳ್ಳೆಯ ಆಲೋಚನೆಗಳೇ ಉತ್ತಮ ಸಮಾಜವನ್ನು ನಿರ್ಮಿಸುತ್ತವೆ. ಈ ಕಾರಣಕ್ಕಾಗಿ ದೇಹದ ಕಾಯಿಲೆಗಳನ್ನು ಗಂಭೀರವಾಗಿ ತೆಗೆದುಕೊಂಡಂತೆ ಮಾನಸಿಕ ಕಾಯಿಲೆಗಳನ್ನೂ ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ.