ಕೋಚಿಂಗ್ ಹಾವಳಿ: ಸರಕಾರಿ ಶಾಲೆಗಳಿಗೆ ಗಂಡಾಂತರ

PC: PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ದೇಶದಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಕೋಚಿಂಗ್ ಹಾಗೂ ಮನೆ ಪಾಠದ ಪರಿಣಾಮವಾಗಿ ಹಲವಾರು ವರ್ಷಗಳ ಕಾಲ ಮಕ್ಕಳಿಗೆ ಅಕ್ಷರವನ್ನು ಕಲಿಸಿದ ಸರಕಾರಿ ಶಾಲೆಗಳ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುತ್ತಿರುವುದು ಅಧಿಕೃತ ಸಮೀಕ್ಷೆಯಿಂದ ಬಯಲಿಗೆ ಬಂದಿದೆ. ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶ ದಿಲ್ಲಿಯನ್ನು ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಪ್ರಮಾಣ ಕಡಿಮೆಯಾಗುತ್ತಿದೆ. ಎಪ್ಪತ್ತರ ದಶಕದಲ್ಲಿ ಸರಕಾರಿ ಶಾಲೆಗಳಿಗೆ ಸೇರುವ ಮಕ್ಕಳ ಪ್ರಮಾಣ ಶೇ. 74ರಷ್ಟು ಇತ್ತು. ಈಗ ಅದು ಶೇ. 51-56ಕ್ಕೆ ಕುಸಿದಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಖಾಸಗಿ ಶಾಲೆಗಳು ನೀಡುತ್ತಿರುವ ಪೈಪೋಟಿಯಿಂದ ಸರಕಾರಿ ಶಾಲೆಗಳು ತತ್ತರಿಸಿ ಹೋಗಿವೆ. ಖಾಸಗಿ ಶಾಲೆಗಳು ದುಬಾರಿ ಎಂದು ಗೊಣಗಾಡುತ್ತಲೇ ಪೋಷಕರು ತಮ್ಮ ಮಕ್ಕಳನ್ನು ಅದೇ ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ. ಸರಕಾರಿ ಶಾಲೆಗಳಲ್ಲಿ ಮಗುವೊಂದಕ್ಕೆ ಶಿಕ್ಷಣ ಕೊಡಿಸಲು ಬೇಕಾಗುವ ವಾರ್ಷಿಕ ಸರಾಸರಿ ಮೊತ್ತ ಕೇವಲ 2,863 ರೂಪಾಯಿ. ಆದರೆ ಖಾಸಗಿ ಶಾಲೆಗಳಲ್ಲಿ ಈ ಮೊತ್ತ ಸರಾಸರಿ 25 ಸಾವಿರ ರೂಪಾಯಿ. ಆದರೂ ಪೋಷಕರು ದುಬಾರಿ ಹಣ ತೆತ್ತು ತಮ್ಮ ಮಕ್ಕಳನ್ನು ಅದೇ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಆದರೆ ಎಡರಂಗ ಸರಕಾರವಿರುವ ಕೇರಳ ಹಾಗೂ ಕೇಂದ್ರಾಡಳಿತ ಪ್ರದೇಶವಾದ ದಿಲ್ಲಿಯಲ್ಲಿ ಸರಕಾರಿ ಶಾಲೆಗಳು ಖಾಸಗಿ ಶಾಲೆಗಳನ್ನು ಹಿಮ್ಮೆಟ್ಟಿಸಿ ದಾಖಲೆಯನ್ನು ಮಾಡಿವೆ. ಅಲ್ಲಿ ಸರಕಾರಿ ಶಾಲೆಗಳ ಗುಣಮಟ್ಟದ ಸುಧಾರಣೆಗೆ ಕೈಗೊಂಡ ವಿಶೇಷ ಕ್ರಮಗಳು ಅವುಗಳ ಬಲವರ್ಧನೆಗೆ ಕಾರಣವಾಗಿವೆ.
ಕೇಂದ್ರ ಸರಕಾರ ಇತ್ತೀಚೆಗೆ ನಡೆಸಿದ ಸಮಗ್ರ ಸಮೀಕ್ಷೆಯಿಂದ ತಿಳಿದು ಬಂದ ಮಹತ್ವದ ಅಂಶಗಳೆಂದರೆ ಸರಕಾರಿ ಶಾಲೆಗಳಿಗೆ ಪರ್ಯಾಯವಾಗಿ ಖಾಸಗಿ ಶಿಕ್ಷಣ ವ್ಯವಸ್ಥೆ ವ್ಯಾಪಕವಾಗಿ ಬೆಳೆಯುತ್ತಿದೆ. ಇದರ ದುಷ್ಪರಿಣಾಮ ಸರಕಾರಿ ಶಾಲೆಗಳ ಮೇಲೆ ಆಗಿದೆ. ಅಧಿಕೃತ ಅಂಕಿ ಅಂಶಗಳ ಪ್ರಕಾರ ಶಾಲೆಗಳಿಗೆ ಹೋಗುವ ಮಕ್ಕಳ ಪೈಕಿ ಶೇ. 27ರಷ್ಟು ಮಕ್ಕಳು ಖಾಸಗಿಯಾಗಿ ಮನೆ ಪಾಠವನ್ನು ಹೇಳಿಸಿಕೊಳ್ಳುತ್ತಿದ್ದಾರೆ. ಹೀಗೆ ಮನೆ ಪಾಠ ಹೇಳಿಸಿಕೊಳ್ಳುವ ಮಕ್ಕಳ ಪ್ರಮಾಣ ಗ್ರಾಮೀಣ ಪ್ರದೇಶಗಳಲ್ಲಿ ಶೇ. 25.5ರಷ್ಟಿದೆ. ನಗರ ಪ್ರದೇಶದಲ್ಲಿ ಶೇ. 37ರಷ್ಟಿದೆ. ಪರ್ಯಾಯ ಖಾಸಗಿ ಶಿಕ್ಷಣ ವ್ಯವಸ್ಥೆಯೊಂದು ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಅನಾರೋಗ್ಯಕರ ಬೆಳವಣಿಗೆಯಾಗಿದೆಯೆಂದರೆ ಅತಿಶಯೋಕ್ತಿಯಲ್ಲ. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಸಂಬಂಧ ಪೋಷಕರು ಹೊಂದಿರುವ ಆಸಕ್ತಿ ಮಾತ್ರವಲ್ಲ, ಆತಂಕ ಕೂಡ ಇದಕ್ಕೆ ಕಾರಣವಾಗಿದೆ. ಮುಖ್ಯವಾಹಿನಿಯ ಶಾಲಾ ವ್ಯವಸ್ಥೆಯ ಗುಣಮಟ್ಟದ ಬಗ್ಗೆ ಪೋಷಕರಿಗೆ ನಂಬಿಕೆಯಿಲ್ಲದಿರುವುದು ಕಳವಳಕಾರಿ ಸಂಗತಿಯಾಗಿದೆ.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಹಪಾಠಿಗಳ ಜೊತೆಗೆ ಪೈಪೋಟಿ ನಡೆಸುವ ಒತ್ತಡಕ್ಕೆ ಒಳಗಾಗಿರುವ ವಿದ್ಯಾರ್ಥಿಗಳು ಮನೆ ಪಾಠದ, ಕೋಚಿಂಗ್ ಕೇಂದ್ರಗಳ ಮೊರೆ ಹೋಗುತ್ತಿದ್ದಾರೆ. ಆದರೆ ಇದರ ಇನ್ನೊಂದು ಮುಖವೆಂದರೆ ಅಸಹನೀಯ ಒತ್ತಡವಾಗಿದೆ. ಶಾಲೆಗೆ ಹೋಗಿ ಮನೆಗೆ ವಾಪಸಾಗುವ ಮುನ್ನ ಮನೆಪಾಠಕ್ಕೆ ಹೋಗಲೇ ಬೇಕಾದ ಅನಿವಾರ್ಯತೆ, ನಂತರ ಮನೆಗೆ ಬಂದು ಹೋಮ್ ವರ್ಕ್ ಮಾಡುವುದು ಮಕ್ಕಳ ಪಾಲಿಗೆ ಅಸಹನೀಯ ಶಿಕ್ಷೆಯಂತಾಗಿದೆ. ಬರೀ ಓದುವುದು, ಬರೆಯುವುದು ಇವುಗಳ ಪರಿಣಾಮವಾಗಿ ಬಾಲ್ಯವನ್ನೇ ಕಳೆದುಕೊಳ್ಳುತ್ತಿರುವ ಮಕ್ಕಳ ಪಾಲಿಗೆ ಕ್ರೀಡೆ, ಆಟ, ವಿಶ್ರಾಂತಿ ಇದಾವುದೂ ಇಲ್ಲದಂತಾಗಿದೆ. ಈ ದುಷ್ಪರಿಣಾಮವನ್ನು ನಿವಾರಿಸಬೇಕೆಂದರೆ ಮುಖ್ಯವಾಹಿನಿಯ ಸರಕಾರಿ ಶಾಲಾ ವ್ಯವಸ್ಥೆಯ ಗುಣಮಟ್ಟವನ್ನು ಸುಧಾರಿಸುವುದು ತುರ್ತು ಅಗತ್ಯವಾಗಿದೆ. ಬಾಹ್ಯ ಮನೆ ಪಾಠ ಮತ್ತು ಕೋಚಿಂಗ್ಗಳ ಅವಲಂಬನೆಯನ್ನು ಕಡಿಮೆ ಮಾಡಬೇಕಾಗಿದೆ.
ದೇಶದೆಲ್ಲೆಡೆ ನಾಯಿಕೊಡೆಗಳಂತೆ ತಲೆ ಎತ್ತಿರುವ ಟ್ಯೂಷನ್ ಕೇಂದ್ರಗಳು ಹಾಗೂ ಖಾಸಗಿ ಮನೆಪಾಠಗಳು ಇವುಗಳ ಜೊತೆ ಜೊತೆಗೆ ದೊಡ್ಡ ಶಿಕ್ಷಣ ಸಂಸ್ಥೆಗಳು ಕೂಡ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳನ್ನು ಗುರಿಯಾಗಿರಿಸಿಕೊಂಡು ಕೋಚಿಂಗ್ ಕೇಂದ್ರಗಳನ್ನು ನಡೆಸುತ್ತಿವೆ. ಈ ಕೇಂದ್ರಗಳು ಸೃಷ್ಟಿಸುವ ಒತ್ತಡದಿಂದಾಗಿ ವಿದ್ಯಾರ್ಥಿಗಳು ದಿಗಿಲುಗೊಂಡು ಆತ್ಮಹತ್ಯೆಗೆ ಮೊರೆ ಹೋಗುತ್ತಿದ್ದಾರೆ. ಆದ್ದರಿಂದ ಇವುಗಳ ಮೇಲೆ ಕಾನೂನು ಕ್ರಮ ಅಗತ್ಯವಾಗಿದೆ. ಇದರ ಜೊತೆಗೆ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಲೋಪಗಳನ್ನು ನಿವಾರಿಸಬೇಕಾಗಿದೆ. ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳ ಸೂತ್ರಧಾರರೇ ನಮ್ಮ ಶಾಸನ ಸಭೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಸರಕಾರಿ ಶಾಲೆಗಳನ್ನು ಬಲ ಪಡಿಸುವ ಕಾರ್ಯಕ್ಕೆ ಬೆಂಬಲ ಸಿಗುವುದು ಅಂದುಕೊಂಡಷ್ಟು ಸುಲಭವಲ್ಲ.
ಮಧ್ಯಮ, ಮೇಲ್ಮಧ್ಯಮ ವರ್ಗಗಳ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವುದು ಹೆಚ್ಚಾಗಿರುವ ಈ ಸಂದರ್ಭದಲ್ಲಿ ಅತ್ಯಂತ ಕಡಿಮೆ ಆದಾಯವಿರುವ ಪೋಷಕರು ಮಾತ್ರ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ.
ವಿದ್ಯೆ ಎಂಬುದು ಕೇವಲ ಹೆಚ್ಚು ಅಂಕಗಳನ್ನು ಪಡೆದು ಸಾಕಷ್ಟು ಆದಾಯವಿರುವ ದೇಶ, ವಿದೇಶಗಳ ನೌಕರಿಗಳಿಗೆ ಸೇರುವುದಲ್ಲ. ಇದರ ಜೊತೆಗೆ ಜ್ಞಾನ ಸಂಪಾದನೆಯೂ ಶಿಕ್ಷಣದ ಗುರಿಯಾಗಿರಬೇಕು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕಾಗಿದೆ. ಮಕ್ಕಳನ್ನು ನಾಳಿನ ನಾಗರಿಕರು ಎಂದು ಕರೆಯುತ್ತೇವೆ. ಆದರೆ ಅವರ ಸರ್ವತೋಮುಖ ಬೆಳವಣಿಗೆಗೆ ಆದ್ಯತೆ ಸಿಗುತ್ತಿಲ್ಲ. ಶಾಲೆಗೆ ಸೇರುವ ಮಗುವಿನ ಸಮಗ್ರ ಬೆಳವಣಿಗೆಗೆ ಮೊದಲ ಪ್ರಾಶಸ್ತ್ಯ ನೀಡಬೇಕು. ಕೇವಲ ಡೊನೇಶನ್ ಮೊದಲಾದ ದುಬಾರಿ ಶುಲ್ಕಗಳಿಗಾಗಿ ಆರಂಭಿಸಲಾಗುತ್ತಿರುವ ಖಾಸಗಿ ಶಾಲೆಗಳಿಗೆ ಹಣ ಮುಖ್ಯ. ಆದ್ದರಿಂದ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸರಕಾರಿ ಶಾಲೆಗಳನ್ನು ಬಲಪಡಿಸುವುದು ತುರ್ತು ಅಗತ್ಯವಾಗಿದೆ.
ಇನ್ನೊಂದು ಅಪಾಯಕಾರಿ ಬೆಳವಣಿಗೆ ಅಂದರೆ ಸ್ವಾತಂತ್ರ್ಯದ ನಂತರ ಈ ಬಹುತ್ವ ಭಾರತವನ್ನು ಕಟ್ಟಿದ ರಾಷ್ಟ್ರೀಯ ನಾಯಕರಾದ ಮಹಾತ್ಮಾ ಗಾಂಧೀಜಿ, ಜವಾಹರಲಾಲ್ ನೆಹರೂ, ಡಾ. ಅಂಬೇಡ್ಕರ್, ಸುಭಾಷ್ ಚಂದ್ರ ಬೋಸ್, ಮೌಲಾನಾ ಅಬುಲ್ ಕಲಾಂ ಆಝಾದ್ ಮೊದಲಾದವರ ಬಗ್ಗೆ ಎಳೆಯ ಮಕ್ಕಳ ಮೆದುಳಿಗೆ ಜನಾಂಗ ದ್ವೇಷದ ವಿಷ ತುಂಬುವ ಶಿಕ್ಷಕರ ಹಾವಳಿ ಅತ್ಯಂತ ವ್ಯಾಪಕವಾಗಿದೆ. ಗೋಡ್ಸೆಯನ್ನು ಮಹಾತ್ಮ ಎಂದು ಬಿಂಬಿಸುವ ಕಾರ್ಯ ಅತ್ಯಂತ ವ್ಯವಸ್ಥಿತವಾಗಿ ನಡೆದಿದೆ. ಇಷ್ಟು ಮಾತ್ರವಲ್ಲ ಹೊಸ ಭಾರತವನ್ನು ಕಟ್ಟಲು ಬೆವರು ಮತ್ತು ರಕ್ತ ಸುರಿಸಿದ ದಲಿತ, ಅಲ್ಪಸಂಖ್ಯಾತ ಸಮುದಾಯಗಳ ಬಗ್ಗೆ ಮಕ್ಕಳ ತಲೆಯಲ್ಲಿ ವಿಷ ತುಂಬಲಾಗುತ್ತಿದೆ. ಸರಕಾರ ಇಂತಹ ಶಿಕ್ಷಕರ ವೇಷದ ಗೋಡ್ಸೆವಾದಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
ಭಾರತ ಎಂಬುದು ಒಂದು ಸಮುದಾಯಕ್ಕೆ, ಜನಾಂಗಕ್ಕೆ ಸೇರಿದ ರಾಷ್ಟ್ರವಲ್ಲ, ಶತಮಾನಗಳಿಂದ ಇಲ್ಲಿ ನೆಲೆಸಿದ ಹಾಗೂ ಮೂಲ ನಿವಾಸಿಗಳಾದ ದಲಿತರು, ಅಲ್ಪಸಂಖ್ಯಾತರು, ಆದಿವಾಸಿಗಳು, ಎಲ್ಲ ಸಮುದಾಯಗಳ ಶ್ರಮಜೀವಿಗಳು ಸೇರಿದಂತೆ ಎಲ್ಲರಿಗೂ ಸೇರಿದ ಬಹುತ್ವ ಭಾರತವಿದು. ಶಾಲಾ ಮಕ್ಕಳಿಗೆ ಬಹುತ್ವ ಭಾರತ ಹಾಗೂ ಸಂವಿಧಾನದ ಬಗ್ಗೆ ತಿಳುವಳಿಕೆ ನೀಡುವ ಪ್ರಕ್ರಿಯೆ ತುರ್ತಾಗಿ ನಡೆಯುವುದು ಅಗತ್ಯವಾಗಿದೆ. ಮಕ್ಕಳಿಗೆ ಮಾತ್ರವಲ್ಲ, ಅವರಿಗೆ ಪಾಠ ಮಾಡುವ ಶಿಕ್ಷಕರಿಗೂ ಕೂಡ ನಮ್ಮ ಸ್ವಾತಂತ್ರ್ಯ ಹೋರಾಟ ಹಾಗೂ ಸಂವಿಧಾನದ ಅರಿವು ಮೂಡಿಸುವ ಕಾರ್ಯ ವ್ಯಾಪಕವಾಗಿ ನಡೆಯಬೇಕಾಗಿದೆ. ಈಗ ಇರುವ ಶಿಕ್ಷಕರಲ್ಲಿ ಅನೇಕರು ಸಂಘದ ಶಾಖೆಗೆ ಹೋಗಿ ಬಂದವರು. ಅವರ ಮೇಲೆ ಸರಕಾರ ಮಾತ್ರವಲ್ಲ, ಸಮಾಜವೂ ಕಣ್ಣಿಡಬೇಕಾಗಿದೆ.