ಕಾಡುವ ‘ನಿತ್ಯ ಸಚಿವ’; ಕಾಡದ ಕಲಾವಿದರು

ನಾಟಕ: ನಿತ್ಯ ಸಚಿವ
ಲೇಖಕರು: ಡಾ. ರಾಜಪ್ಪ ದಳವಾಯಿ
ವಿನ್ಯಾಸ, ನಿರ್ದೇಶನ: ಪ್ರಮೋದ್ ಶಿಗ್ಗಾಂವ
ಸಂಗೀತ: ಹನುಮಂತ ಜನದನಿ
ರಂಗ ನಿರ್ವಹಣೆ: ಅರ್ಪಿತಾ, ಸೋಮಶೇಖರ್ ಮಂಡ್ಯ
ಪ್ರಸಾಧನ: ಬಿ.ಎಂ. ರಾಮಚಂದ್ರ
ತಂಡ: ಕರ್ನಾಟಕ ಸಂಘ, ಮಂಡ್ಯ
ಕಲಾವಿದರು:
ಅಜಯ್ ನೀನಾಸಂ, ಶಿವರಾಮು ಚಿಕ್ಕೇಗೌಡನದೊಡ್ಡಿ, ಎಂ.ಬಾಲಕೃಷ್ಣ, ಪುಟ್ಟರಾಜು ಬೆಳತೂರು, ಶ್ರೀಕಂಠೇಗೌಡ ಹುಲಿವಾನ, ಮಹದೇವಯ್ಯ ಸಿ.ಎಂ., ರತ್ನಾ ಜೈನ್, ಪುಟ್ಟಬುದ್ಧಿ, ಎಚ್.ಆರ್. ಅರ್ಪಿತಾ, ಎಲ್.ಆರ್. ರವಿಕಲಾ, ಜಿ.ಎಸ್. ವಿಜಯಕುಮಾರ್, ಜಯಮ್ಮ, ಭಾಗ್ಯ ಕೆ. ಮಂಗಲ, ಬಿ.ವೈ. ಅಂಕುಶ್, ಎಸ್.ಸಿ. ಸಚಿನ್‌ಕುಮಾರ್, ತನ್ಮಯ್ ವೈ. ದತ್ತ, ಜಯಂತ್, ತೆಗ್ಗಳ್ಳಿ ವೆಂಕಟೇಶ್, ವಿಶ್ವಾಸ್, ಸೋಮಶೇಖರ್.
‘‘ಆದರ್ಶಗಳೆಂದರೆ ಹಾಗೆಯೇ. ತಪ್ಪು ಮಾಡದಂತೆ ಇರುವ ಕಠೋರತೆ. ನಮ್ಮ ಸುತ್ತೆಲ್ಲ ತಪ್ಪು ಮಾಡಲು ಸಾವಿರ ಅವಕಾಶಗಳು ಕಾದು ಕುಳಿತಿವೆ. ಎದುರು ಬಂದು ನನ್ನನ್ನು ಬಳಸು, ನನ್ನನ್ನು ಬಳಸು ಎಂದು ಕಾಡುತ್ತವೆ. ಅಂಥವನ್ನು ಮಾಡದಿರಲು ತುಂಬಾ ಗಟ್ಟಿತನ ಇರಬೇಕು...’’ ಎನ್ನುವ ಶಂಕರಗೌಡರ ಪಾತ್ರದ ಮಾತುಗಳು ಕಾಡುತ್ತವೆ.
ಕಳೆದ ರವಿವಾರ (ಆಗಸ್ಟ್ 3) ಮೈಸೂರಿನ ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಗ್ರೀಷ್ಮ ರಂಗೋತ್ಸವ ಅಂಗವಾಗಿ ‘ನಿತ್ಯ ಸಚಿವ’ ನಾಟಕವು ಕೆಲ ಕೊರತೆಗಳ ನಡುವೆ ಯಶಸ್ವಿಯಾಗಿ ಪ್ರದರ್ಶನಗೊಂಡಿತು.
ನಾಟಕ ಶುರುವಾಗುವುದೇ ಬೆಳಗಾವಿಯಲ್ಲಿ. ಶಂಕರಗೌಡರು ಸಹಪಾಠಿಗಳಾದ ನಾಡಗೌಡ, ಹುಚ್ಚಮಾಸ್ತಿಗೌಡ, ಪಾಟೀಲ ಪುಟ್ಟಪ್ಪ ಹಾಗೂ ಚೌಗುಲಾ ಅವರೊಂದಿಗೆ ಬೆಳಗಾವಿಯ ಕೆಎಲ್‌ಇ ಕಾನೂನು ಕಾಲೇಜಿನಲ್ಲಿ ಓದುವಾಗ ಗಾಂಧೀಜಿಯವರ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಚಳವಳಿಗೆ ಬೆಂಬಲಿಸುವ ಮೂಲಕ. ಹೀಗೆ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಅವರನ್ನು ಪೊಲೀಸರು ಬಂಧಿಸಿದಾಗ, ಅವರ ಸಹಪಾಠಿ ನಂದಿನಿ ತಮ್ಮ ಗುರುಗಳಾದ ಡಾ.ಕೇಳ್ಕರ್ ಅವರೊಂದಿಗೆ ಬಂದು ಬಿಡಿಸಿಕೊಂಡು ಹೋಗುತ್ತಾರೆ. ಹಾಗೆ ಹೋಗುವಾಗ ಕೃತಜ್ಞತೆ ಹೇಳುವ ಶಂಕರಗೌಡರಿಗೆ ನಿಮ್ಮನ್ನು ಪ್ರೀತಿಸುವೆ ಎಂದು ನಂದಿನಿ ಹೇಳುತ್ತಾಳೆ. ಆದರೆ ನಯವಾಗಿ ತಿರಸ್ಕರಿಸುವ ಶಂಕರಗೌಡರು ‘‘ಗಾಂಧಿಯ ಅನುಯಾಯಿಯಾಗಿ, ಗ್ರಾಮೀಣ ಜನರ ಜೀವನಾಡಿಯಾಗಿ ಬದುಕಬೇಕೆಂದಿದ್ದೇನೆ. ಒಳ್ಳೆಯ ಲಾಯರ್ ಆಗಬೇಕೆಂಬ ಕನಸು ಹೊತ್ತಿರುವೆ. ಕೃಷಿಕರ, ಹಳ್ಳಿಯ ಜನರೊಂದಿಗೆ ಬೆರೆತು ಬದುಕಬೇಕೆಂಬ ಕನಸುಗಳಿವೆ’’ ಎಂದು ಹೊರಡುತ್ತಾರೆ.
ನಂತರ ವಕೀಲರಾಗುವ ಶಂಕರಗೌಡರು ‘‘ಥಿಯರಿ ಓದುತ್ತಾ ಓದುತ್ತ ಆದರ್ಶಗಳ ಬೆನ್ನು ಹತ್ತಿ ಹೋದ ನನಗೆ ನ್ಯಾಯ ಪ್ರತಿಪಾದನೆಯ ಪ್ರಾಯೋಗಿಕತೆ ಈಗೀಗ ಅರ್ಥವಾಗ್ತಿದೆ. ಎಷ್ಟೊಂದು ಸುಳ್ಳುಗಳ ಸರಮಾಲೆ ಕಟ್ಟಬೇಕಿದೆ ಒಂದು ನ್ಯಾಯಕ್ಕಾಗಿ! ಸುಳ್ಳುಗಳ ಹಾಸಿ, ಅವನ್ನೇ ಹೊದ್ದು ನಿದ್ದೆ ಬರದೆ ಒದ್ದಾಡುತ್ತಿರುವೆ’’ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಅಲ್ಲದೆ ‘‘ಎಷ್ಟೊಂದು ಕನಸುಗಳ ಹೊತ್ತು ಲಾ ವ್ಯಾಸಂಗ ಮುಗಿಸಿದೆ. ನನ್ನ ಜನರಿಗೆ ನ್ಯಾಯ ದೊರಕಿಸಿಕೊಡುವುದೇ ಬದುಕಿನ ಭಾಗ್ಯವೆಂದು ಭಾವಿಸಿದ್ದೆ. ಭಾವನೆಗಳೆಲ್ಲ ಬುಡಮೇಲಾದವು!’’ ಎಂದು ವಕೀಲಿ ವೃತ್ತಿಗೆ ಶರಣು ಹೇಳುತ್ತಾರೆ.
ಬಳಿಕ ಪ್ರಸ್ತದ ದಿನದ ದೃಶ್ಯ. ಆದರೆ ಶಂಕರಗೌಡರ ಗೆಳೆಯರು ಬಂದು ಮೈಸೂರು ಚಲೊ ಕುರಿತು ಚರ್ಚಿಸುವಾಗ ಇನ್‌ಸ್ಪೆಕ್ಟರ್ ಬಂದು ‘‘ಮೈಸೂರು ಅರಮನೆಯನ್ನು ಧ್ವಂಸ ಮಾಡಲಿಕ್ಕೆ ದೊಂಬಿ ಮಾಡಿ, ಮಹಾರಾಜರ ಜೀವಕ್ಕೆ ಆಪತ್ತು ತರುವ ಕರಾಮತ್ತು ನಡೆಸಲು ಸಂಚು ರೂಪಿಸಲು ಇಲ್ಲಿ ಸೇರಿದ್ದೀರಿ’’ ಎಂದು ಬಂಧಿಸಿ ಕರೆದೊಯ್ಯುತ್ತಾರೆ. ಮುಂದಿನ ದೃಶ್ಯದಲ್ಲಿ ಶಂಕರಗೌಡರು ಜೈಲು ಸೇರಿದಾಗ ಗಾಂಧೀಜಿಯೊಂದಿಗೆ ನಡೆಸುವ ಸಂವಾದ ಚೆನ್ನಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಅಧಿಕಾರದಿಂದ ದೂರ ಉಳಿದ ಗಾಂಧೀಜಿಯನ್ನು ಶಂಕರಗೌಡರು ಕೇಳಿದಾಗ ಬಾಪು ‘‘ನೊಂದವರ ಕಣ್ಣೀರು ಒರೆಸುವುದಕ್ಕಿಂತ ಬೇರೆಯ ಅಧಿಕಾರವಿದೆಯೇ? ಸ್ವಾತಂತ್ರ್ಯ ಬಂತು, ನನ್ನ ಕೆಲಸ ಮುಗಿಯಿತು. ಸ್ವಾತಂತ್ರ್ಯ ಮತ್ತು ಅಧಿಕಾರ ಎರಡೂ ಒಂದು ನಾಣ್ಯದ ಎರಡು ಮುಖಗಳು’’ ಎಂದು ಹೇಳಿ ‘‘ನಿನಗೆ ಅಧಿಕಾರ ಸಿಕ್ಕರೆ ಯಾವ ವಿಷಯಗಳಿಗೆ ಮಹತ್ವವನ್ನು ನೀಡುತ್ತೀಯಾ?’’ ಎಂದು ಕೇಳುತ್ತಾರೆ. ಆಗ ಶಂಕರಗೌಡರು ‘‘ಕೃಷಿ, ಸಹಕಾರ, ಖಾದಿ, ಶಿಕ್ಷಣ ನನ್ನ ಪ್ರದೇಶವನ್ನು ಮುನ್ನಡೆಸುವ ನಾಲ್ಕು ಗಾಲಿಗಳು ಬಾಪು. ಆ ಬಂಡಿ ಮಂಡ್ಯವನ್ನು ಇಂಡಿಯಾದಲ್ಲೇ ಮುನ್ನೆಲೆಗೆ ತರುತ್ತದೆ. ಪ್ರಗತಿಯ ಚಕ್ರಗಳು ನಿರಂತರ ಸುತ್ತುತ್ತಲೇ ಇರಬೇಕಲ್ಲವೆ ಬಾಪು. ಅಂಥ ಮಹಾಚಕ್ರ ನೀವು ಕೊಟ್ಟ ಚರಕ’’ ಎನ್ನುತ್ತಾರೆ.
ನಂತರದ ದೃಶ್ಯದಲ್ಲಿ ಸಾಹುಕಾರ ಚನ್ನಯ್ಯ ಹಾಗೂ ವೀರಣ್ಣಗೌಡ ಅವರೊಂದಿಗೆ ಸಂಭಾಷಣೆ ಕುತೂಹಲಕಾರಿಯಾಗಿದೆ. ವೀರಣ್ಣಗೌಡ ‘‘ಶಂಕರಗೌಡ ಪ್ರಾಮಾಣಿಕ, ಜನಸ್ನೇಹಿ, ಗಾಂಧಿವಾದಿ. ಜನರ ಹಿತಕ್ಕಾಗಿಯೇ ಬದುಕಿರುವವನು. ನೀವು ಬಿ.ಡಿ. ಜತ್ತಿಗೆ ಹೇಳಿ ಮಂಡ್ಯಕ್ಕೆ ಬರಬೇಕಿದ್ದ ಇಂಜಿನಿಯರಿಂಗ್ ಕಾಲೇಜನ್ನು ಹಾಸನಕ್ಕೆ ಕೊಡಿಸಿದ್ದು ಸರಿಯಾದ ಕ್ರಮ ಅಲ್ಲ. ಅದರಿಂದ ನೀವು ಶಂಕರಗೌಡನ ಶತ್ರುವಾಗಲಿಲ್ಲ. ಬದಲಿಗೆ ಮಂಡ್ಯ ಪ್ರದೇಶಕ್ಕೆ ಶತ್ರು ಎನಿಸಿಬಿಟ್ಟಿರಿ. ವಿದ್ಯಾಭ್ಯಾಸಕ್ಕೆ ಅಡ್ಡಿ ಮಾಡಿದವರು ಈ ದೇಶದಲ್ಲಿ ಎಂದೂ ಹೀರೋ ಆಗಲಿಕ್ಕೆ ಸಾಧ್ಯವಿಲ್ಲ’’ ಎನ್ನುವ ಮೂಲಕ ರಾಜಕಾರಣದ ಒಳಸುಳಿಗಳನ್ನು ಬಿಚ್ಚಿಡುವಾಗ ವರ್ತಕರು ಬಂದು, ಶಂಕರಗೌಡರು ಸಹಕಾರಿ ಸೊಸೈಟಿ ಮೂಲಕ ಎಲ್ಲ ವಸ್ತುಗಳನ್ನು ಮಾರಾಟ ಮಾಡುತ್ತಿರುವುದಕ್ಕೆ ತಮಗೆ ಅನ್ಯಾಯವಾಗುತ್ತಿದೆಯೆಂದು ಚರ್ಚಿಸಿ ವಿಧಾನಸಭೆಯ ಚುನಾವಣೆಯಲ್ಲಿ ಶಂಕರಗೌಡರನ್ನು ಸೋಲಿಸುವ ಕುರಿತು ಚರ್ಚಿಸುತ್ತಾರೆ.
ಹೀಗೆ ಸಾಗುವ ನಾಟಕದಲ್ಲಿ ಶಂಕರಗೌಡರೇ ರಚಿಸಿ, ನಿರ್ದೇಶಿಸಿದ ‘ಪಾದುಕಾ ಕಿರೀಟಿ’ ನಾಟಕದ ದೃಶ್ಯವೂ ಇದೆ (ಈ ದೃಶ್ಯದಲ್ಲಿ ವಿಗ್ ಬೀಳದ ಹಾಗೆ ಅಜಯ್ ನೋಡಿಕೊಳ್ಳಲಿ) ಬಳಿಕದ ದೃಶ್ಯದಲ್ಲಿ ಇಂಜಿನಿಯರಿಂಗ್ ಕಾಲೇಜು ಆರಂಭಿಸಲು ಅಗತ್ಯವಾದ ಜಮೀನನ್ನು ರೈತರ ಮನವೊಲಿಸುತ್ತಾರೆ. ಇದರೊಂದಿಗೆ ಪದವಿ ಕಾಲೇಜು, ಸಂಜೆ ಕಾಲೇಜು ಜೊತೆಗೆ ಶಿಕ್ಷಕರ ಸೃಷ್ಟಿಗಾಗಿ ಬಿ.ಇಡಿ. ಕಾಲೇಜನ್ನೂ ಆರಂಭಿಸುತ್ತಾರೆ. ಇದಕ್ಕಾಗಿ ಮತ್ತೆ ಮತ್ತೆ ನಾಟಕಗಳನ್ನು ಆಡಿ ದುಡ್ಡು ಸಂಗ್ರಹಿಸುತ್ತಾರೆ. ‘‘ಅಧ್ಯಾಪಕರು, ವಿದ್ಯಾರ್ಥಿಗಳು ತರಗತಿಗಳಾಚೆ ಶಿಕ್ಷಣದ ಭಾಗವಾಗಿ ನಾಟಕದಲ್ಲಿ ತೊಡಗಿಕೊಂಡರೆ ನಮ್ಮ ಮನಸ್ಸಿಗೂ ವಿಕಸನ ಬರುತ್ತೆ. ಜನರೂ ರಂಗಭೂಮಿಯಿಂದ ಮೌಲ್ಯಯುತ ವಿವೇಕವನ್ನು ಕಲಿಯಲು ಸಹಾಯವಾಗುತ್ತೆ. ಕಲಿಕೆಯ ಬಂಡಿಯ ಎರಡು ಗಾಲಿಗಳೆಂದರೆ ಶಿಕ್ಷಣ ಮತ್ತು ರಂಗಭೂಮಿ’’ ಎಂದು ಮನಗಾಣಿಸುತ್ತಾರೆ. ಆದರೆ ಅವರೇ ಕಟ್ಟಿದ ಜನತಾ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು ರಂಗಭೂಮಿ ಸಲುವಾಗಿ ಥಿಯೇಟರು ಕಟ್ಟಲು ಮುಂದಾದ ಶಂಕರಗೌಡರನ್ನು ವಿರೋಧಿಸುತ್ತಾರೆ. ಹೀಗಾದಾಗ ‘‘ರಂಗಭೂಮಿ ಮನುಷ್ಯ ಮನುಷ್ಯನನ್ನು ಕಟ್ಟುವ ಕೆಲಸ ಮಾಡುತ್ತದೆ. ಅಂಥ ಸಾಧನಕ್ಕೆ ಒಂದು ನೆಲೆ ಮಾಡಬೇಕೆಂದು ನನ್ನ ವಿದ್ಯಾಸಂಸ್ಥೆಯಲ್ಲಿ ರಂಗಮಂದಿರ ಕಟ್ಟುವುದನ್ನೇ ಅಪರಾಧವಾಗಿ ಕಾಣುತ್ತಿರುವ, ನಾನು ಕರೆತಂದು ಸಂಸ್ಥೆಗೆ ಸೇರಿಸಿದ ಮಹಾನುಭಾವರುಗಳೇ ನನಗೆ ನೋಟಿಸು ಕೊಟ್ಟ ಮೇಲೆ ನಾನು ಇನ್ನು ಇಲ್ಲಿರುವುದು ಸಾಧ್ಯವಿಲ್ಲ’’ ಎಂದು ಆಡಳಿತ ಮಂಡಳಿಗೆ ರಾಜೀನಾಮೆಯನ್ನೂ ನೀಡುತ್ತಾರೆ.
ಬಳಿಕ ಅವರ ಅಣ್ಣನ ಮಗನೇ ಆಸ್ತಿಯಲ್ಲಿ ಪಾಲು ಕೇಳುವುದನ್ನು ಕಂಡು ಕಂಗಾಲಾಗುತ್ತಾರೆ. ಕೊನೆಯ ದೃಶ್ಯದಲ್ಲಿ ಸಾವಿನೊಂದಿಗೆ ಮುಖಾಮುಖಿಯಾಗುವ ದೃಶ್ಯ ಗಮನಾರ್ಹ. ‘‘ನಾಟಕದಲ್ಲಿ ಕುಂತ ಜನರನ್ನು ಎದುರಿಸಬೇಕು. ರಾಜಕಾರಣದಲ್ಲಿ ಚಲಿಸುವ ಜನರನ್ನು ಎದುರಿಸಬೇಕು. ಒಟ್ಟಾರೆ ಎರಡರಲ್ಲೂ ಜನರನ್ನು ಎದುರಿಸುವುದು ಮುಖ್ಯ’’ ಎನ್ನುತ್ತಾರೆ ಶಂಕರಗೌಡರು.
ಹೀಗೆ ಆಧುನಿಕ ಮಂಡ್ಯ ರೂಪಿಸಿದ ಶಂಕರಗೌಡರ ಕುರಿತ ರಾಜಪ್ಪ ದಳವಾಯಿ ಅವರ ನಾಟಕ ಚೆನ್ನಾಗಿದೆ. ಪ್ರಮೋದ್ ಶಿಗ್ಗಾಂವ ಅವರ ನಿರ್ದೇಶನವೂ ಚೆನ್ನಾಗಿದೆ. ಶಂಕರಗೌಡರ ಪಾತ್ರ ನಿರ್ವಹಿಸಿದ ಅಜಯ್ ನೀನಾಸಂ ಅವರ ಅಭಿನಯವೂ ಚೆನ್ನಾಗಿದೆ. ಇಡೀ ನಾಟಕವನ್ನು ಅವರು ತೂಗಿಸಿಕೊಂಡು ಹೋಗುತ್ತಾರೆ. ಅವರಿಗೆ ಸಾಥಿಯಾಗಿ ಪುಟ್ಟಬುದ್ಧಿ, ಬಾಲಕೃಷ್ಣ, ರತ್ನಾ ಜೈನ್, ಜಯಮ್ಮ, ರವಿಕಲಾ, ಭಾಗ್ಯ ಕೆ.ಮಂಗಲ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಆದರೆ ಉಳಿದ ಕಲಾವಿದರಿಗೆ ತಾಲೀಮಿನ ಕೊರತೆ ಕಾಡುತ್ತಿತ್ತು. ಇದರಿಂದ ಡೈಲಾಗ್ ತಪ್ಪಿದ ಪರಿಣಾಮ ನಾಟಕದ ಓಘಕ್ಕೆ ಕಡಿವಾಣ ಬೀಳುತ್ತಿತ್ತು ಜೊತೆಗೆ ಪ್ರೇಕ್ಷಕರಿಗೂ ಬೇಸರವಾಗುತ್ತಿತ್ತು. ಎರಡು ಗಂಟೆಯ ಹಾಗೂ ಗಂಭೀರವಾದ ಈ ನಾಟಕವನ್ನು ಹವ್ಯಾಸಿ ಕಲಾವಿದರು ಗಂಭೀರ ವಾಗಿ ತೆಗೆದುಕೊಂಡು, ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಯಶಸ್ವಿಗೊಳಿಸಬೇಕಾದ ಅನಿವಾರ್ಯ ಮತ್ತು ಅಗತ್ಯವಿದೆ. ಏಕೆಂದರೆ ಇದು ಶಂಕರಗೌಡರ ಕುರಿತ ಮಹತ್ವದ ನಾಟಕ ಮತ್ತು ಮಂಡ್ಯದ ಪ್ರತಿಷ್ಠಿತ ಕರ್ನಾಟಕ ಸಂಘದ ನಾಟಕ. ಈ ಸಂಘದ ಮತ್ತು ಅಧ್ಯಕ್ಷರಾದ ಜಯಪ್ರಕಾಶಗೌಡ ಅವರ ಮರ್ಯಾದೆ ಉಳಿಸಲಾದರೂ ನಾಟಕ ಚೆನ್ನಾಗಿ ಆಗಲಿ. ಮುಂದೆ ಮತ್ತೆ ಮತ್ತೆ ಕಾಡುವ ಅಂದರೆ ಮನಸ್ಸಿನಲ್ಲಿ ಉಳಿಯುವಂಥ ಅಭಿನಯವನ್ನು ಎಲ್ಲ ಕಲಾವಿದರು ನೀಡಲೆಂದು ಹಾರೈಸುವೆ.