ಗ್ರಾಮೀಣ ವೃತ್ತಿ ರಂಗಭೂಮಿಗೆ ಬೇಕು ಕಾಯಕಲ್ಪ

ಸರಕಾರವು ನಾಟಕ ಕಂಪನಿಗಳಿಗೆ ಪ್ರತೀ ವರ್ಷ ಎರಡು ಕೋಟಿ ರೂಪಾಯಿ ನೀಡುತ್ತಿದೆ. ಆದರೆ ಹವ್ಯಾಸಿಗಳು ಆಡುವ ಗ್ರಾಮೀಣ ವೃತ್ತಿ ರಂಗಭೂಮಿ ಅಥವಾ ಕಂಪನಿ ಶೈಲಿಯ ನಾಟಕಗಳನ್ನು ಗಂಭೀರವಾಗಿ ಪರಿಗಣಿಸಿ ಅನುದಾನ ನೀಡಬೇಕಿದೆ. ಇದಕ್ಕಾಗಿ ಯೋಜನೆಗಳನ್ನೂ ರೂಪಿಸಬೇಕಿದೆ. ರಂಗಾಯಣಗಳನ್ನು, ನಾಟಕ ಕಂಪನಿಗಳನ್ನು ಗಂಭೀರವಾಗಿ ತೆಗೆದುಕೊಳ್ಳುವ ಸರಕಾರವು, ಗ್ರಾಮೀಣ ವೃತ್ತಿ ರಂಗಭೂಮಿಯನ್ನೂ ಗಂಭೀರವಾಗಿ ಪರಿಗಣಿಸಬೇಕಿದೆ.
ಅದು ಅಪರೂಪದ ಸಮಾವೇಶ.
ಹಾರ್ಮೋನಿಯಂ ಹಾಗೂ ನಾಟಕ ಮಾಸ್ತರ, ಎಪ್ಪತ್ತೆರಡು ವರ್ಷ ವಯಸ್ಸಿನ ನೀಲಗುಂದ ಬಸವನಗೌಡ್ರು ಒಂದು ದಿನದ ಜಿಲ್ಲಾಮಟ್ಟದ ನಾಟಕೋತ್ಸವ ಹಾಗೂ ರಂಗಭೂಮಿ ಕಲಾವಿದರಿಗೆ ಸನ್ಮಾನ ಸಮಾರಂಭ ದಾವಣಗೆರೆಯಲ್ಲಿ (ಆಗಸ್ಟ್ 24) ಆಯೋಜಿಸಿದ್ದರು. ಆ ಸಮಾರಂಭ ಕಲಾವಿದರ ಸಮಾವೇಶವಾಗಿತ್ತು.
ಈ ಬಸವನಗೌಡ್ರ ತಾತ ಬಸವನಗೌಡ್ರು ಈಗಿನ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ನೀಲಗುಂದದವರು. ಶ್ರೀ ಮಲ್ಲಿಕಾರ್ಜುನ ನಾಟಕ ಸಂಘ, ನೀಲಗುಂದ ಎಂಬ ನಾಟಕ ಕಂಪನಿ ಶುರು ಮಾಡಿ 150 ಎಕರೆ ಜಮೀನು ಕಳೆದುಕೊಂಡವರು. ಬಸವನಗೌಡ್ರು ಮಕ್ಕಳಾದ ಶಿವನಗೌಡ್ರು, ಚನ್ನಬಸವನಗೌಡ್ರು ಕಲಾವಿದರಾಗಿ ಬೇರೆ ಬೇರೆ ನಾಟಕ ಕಂಪನಿಗಳಲ್ಲಿದ್ದರು. ಅವರ ಇನ್ನೊಬ್ಬ ಮಗ ಈಶ್ವರಗೌಡ್ರ ಮಗ ಈಗಿನ ಬಸವನಗೌಡ್ರು. ಈ ಬಸವನಗೌಡ್ರು ಕೂಡಾ ತಮ್ಮ ತಾತನ ಹೆಸರಿನ ನಾಟಕ ಕಂಪನಿ ಶುರು ಮಾಡಿ ಏಳೆಂಟು ಎಕರೆ ಜಮೀನು ಕಳೆದುಕೊಂಡವರು. ಇಂಥ ಅಪರೂಪದ ಬಸವನಗೌಡ್ರು ಪ್ರತೀ ವರ್ಷ ಕಲಾವಿದರಿಗೆ ಸನ್ಮಾನಿಸುತ್ತಾರೆ. ಬಾಗಲಕೋಟೆ ಜಿಲ್ಲೆಯ ಬನಹಟ್ಟಿ, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಮೈಸೂರು, ಶಿವಮೊಗ್ಗ, ಚಿತ್ರದುರ್ಗ, ಬಳ್ಳಾರಿ... ಹೀಗೆ ಹತ್ತು ಜಿಲ್ಲೆಯ ಕಲಾವಿದರು ಸಮಾವೇಶಗೊಂಡಿದ್ದರು. ಮುಖ್ಯವಾಗಿ ಗ್ರಾಮೀಣ ವೃತ್ತಿ ರಂಗಭೂಮಿ ಕಲಾವಿದರನ್ನು ಕಳೆದ 10 ವರ್ಷಗಳಿಂದ ಅವರು ಸನ್ಮಾನಿಸುತ್ತಿದ್ದಾರೆ. ಹಾಗೆಯೇ ಎರಡು ನಾಟಕಗಳನ್ನು ಪ್ರದರ್ಶಿಸಲು ಅವಕಾಶ ನೀಡುತ್ತಾರೆ. ಈ ಬಾರಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಸಣ್ಣಮ್ಮ ಬೊಮ್ಮಯ್ಯ ದೇವ ನಾಟ್ಯ ಮಂಡಳಿಯು ಮೋಹನ ಜಿ. ನಾಯ್ಕ ವಿರಚಿತ ‘ಅಣ್ಣ ಕೊಟ್ಟ ಉಡುಗೊರೆ’ ನಾಟಕ ಹಾಗೂ ದಾವಣಗೆರೆಯ ಶ್ರೀ ಮುರುಡ ಬಸವೇಶ್ವರ ಸಾಂಸ್ಕೃತಿಕ ಜಾನಪದ ನಾಟ್ಯ ಸಂಘದಿಂದ ಬೇಲೂರು ಕೃಷ್ಣಮೂರ್ತಿ ರಚಿತ ‘ಗೋಮುಖ ವ್ಯಾಘ್ರ’ ನಾಟಕಗಳು ಪ್ರದರ್ಶನಗೊಂಡವು. ‘ಅಣ್ಣ ಕೊಟ್ಟ ಉಡುಗೊರೆ’ ನಾಟಕದಲ್ಲಿ ಬಸವನಗೌಡ್ರ ಮಗಳಾದ ಸುಜಾತಾ ನಾಯಕನಟಿಯಾಗಿ ಅಭಿನಯಿಸಿ ಗಮನ ಸೆಳೆದರು.
ಅವರ ಆಹ್ವಾನದ ಮೇರೆಗೆ ಬಂದ ಕಲಾವಿದರಿಗೆ ಊಟ, ವಸತಿ ಜೊತೆಗೆ ಸನ್ಮಾನಿಸಿದರು. ಈ ಮೂಲಕ ಕರ್ನಾಟಕ ನಾಟಕ ಅಕಾಡಮಿಯ ಹಾಗೆ ಕಾರ್ಯಕ್ರಮ ಆಯೋಜಿಸಿದ್ದರು. ಈ ಕಾರಣಕ್ಕೆ ಇವರೆಲ್ಲ ಮುಖ್ಯರಾಗುತ್ತಾರೆ. ವೃತ್ತಿ ರಂಗಭೂಮಿ ಎಂದರೆ ಕೇವಲ ನಾಟಕ ಕಂಪನಿಗಳಲ್ಲ; ಗ್ರಾಮೀಣರು ಹವ್ಯಾಸಿಯಾಗಿದ್ದುಕೊಂಡು ನಾಟಕಗಳನ್ನು ಪ್ರದರ್ಶಿಸುವ ಮೂಲಕ ವೃತ್ತಿ ರಂಗಭೂಮಿಯನ್ನು ಕಟ್ಟುತ್ತಿದ್ದಾರೆ.
ಹೀಗೆಯೇ ‘‘ಹತ್ತು ಜಿಲ್ಲೆಗಳಲ್ಲಿ ಅದರಲ್ಲೂ ತುಮಕೂರು, ಹಾಸನ, ಚಾಮರಾಜನಗರ, ಬೆಂಗಳೂರು, ಮಂಡ್ಯ, ಕೋಲಾರ, ಮೈಸೂರುಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಪೌರಾಣಿಕ ನಾಟಕಗಳಾಗುತ್ತಿವೆ. ನೂರು ಕೋಟಿ ರೂಪಾಯಿಗೂ ಅಧಿಕ ವಹಿವಾಟು ಆಗುತ್ತದೆ’’ ಎನ್ನುವುದು ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಅವರ ವಿಶ್ವಾಸದ ಮಾತು. ಇವೆಲ್ಲ ಗ್ರಾಮೀಣರ ವೃತ್ತಿ ರಂಗಭೂಮಿ ನಾಟಕಗಳೇ ಅಂದರೆ ಕಂಪನಿ ಶೈಲಿಯ ವೃತ್ತಿ ರಂಗಭೂಮಿ ನಾಟಕಗಳು. ಇಂಥ ವೃತ್ತಿ ರಂಗಭೂಮಿಯ ಸಮೀಕ್ಷೆಗೆ ಕಡಕೋಳ ಅವರು ಮುಂದಾಗಿದ್ದಾರೆ. ಇದಕ್ಕೆ ಸರಕಾರ ಸಹಕಾರ ಕೊಡಬೇಕಿದೆ. ಪೌರಾಣಿಕ, ಐತಿಹಾಸಿಕ, ಸಾಮಾಜಿಕ ನಾಟಕಗಳ ಕುರಿತು ಸಮೀಕ್ಷೆಗಳ ಮೂಲಕ ಸರಿಯಾದ ದಾಖಲೆ ಸಿಗಲಿದೆ. ಏಕೆಂದರೆ ನಿರಂತರವಾಗಿ ವೃತ್ತಿ ರಂಗಭೂಮಿಯನ್ನು ಉಳಿಸುವವರು ಗ್ರಾಮೀಣ ವೃತ್ತಿ ರಂಗಭೂಮಿ ಕಲಾವಿದರು.
ತುಮಕೂರಿನ ಹೇಮಾ ಅವರು ಮುಂದಿನ ಎರಡು ವರ್ಷ ಅಂದರೆ 2027ವರೆಗೂ ಗ್ರಾಮೀಣ ರಂಗಭೂಮಿಯ ಪೌರಾಣಿಕ ನಾಟಕಗಳಿಗೆ ಬುಕ್ ಆಗಿದ್ದಾರೆ. ಹೀಗೆಯೇ ಲಾವಣ್ಯ, ಶೀಲಾ, ಗಂಗಾ ಮೊದಲಾದ ಕಲಾವಿದೆಯರು ಮುಂದಿನ ವರ್ಷದವರೆಗೆ ನಾಟಕಗಳಿಗೆ ಬುಕ್ ಆಗಿದ್ದಾರೆ. ಹೀಗಿರುವಾಗ ‘‘ಸರಕಾರ ನಾಟಕ ಕಂಪನಿಗಳಿಗೆ ಅನುದಾನ ನೀಡುತ್ತಿದೆ. ಗ್ರಾಮೀಣ ವೃತ್ತಿ ರಂಗಭೂಮಿಗೂ ಅನುದಾನ ನೀಡಬೇಕಿದೆ’’ ಎನ್ನುವುದು ಮಲ್ಲಿಕಾರ್ಜುನ ಕಡಕೋಳ ಅವರ ಪ್ರತಿಪಾದನೆ.
ಅವರ ಮಾತು ನಿಜ. ಸರಕಾರವು ನಾಟಕ ಕಂಪನಿಗಳಿಗೆ ಪ್ರತೀ ವರ್ಷ ಎರಡು ಕೋಟಿ ರೂಪಾಯಿ ನೀಡುತ್ತಿದೆ. ಆದರೆ ಹವ್ಯಾಸಿಗಳು ಆಡುವ ಗ್ರಾಮೀಣ ವೃತ್ತಿ ರಂಗಭೂಮಿ ಅಥವಾ ಕಂಪನಿ ಶೈಲಿಯ ನಾಟಕಗಳನ್ನು ಗಂಭೀರವಾಗಿ ಪರಿಗಣಿಸಿ ಅನುದಾನ ನೀಡಬೇಕಿದೆ. ಇದಕ್ಕಾಗಿ ಯೋಜನೆಗಳನ್ನೂ ರೂಪಿಸಬೇಕಿದೆ. ರಂಗಾಯಣಗಳನ್ನು, ನಾಟಕ ಕಂಪನಿಗಳನ್ನು ಗಂಭೀರವಾಗಿ ತೆಗೆದುಕೊಳ್ಳುವ ಸರಕಾರವು, ಗ್ರಾಮೀಣ ವೃತ್ತಿ ರಂಗಭೂಮಿಯನ್ನೂ ಗಂಭೀರವಾಗಿ ಪರಿಗಣಿಸಬೇಕಿದೆ. ಅವರನ್ನು ಆಗಾಗ ಸಮಾವೇಶಗೊಳಿಸಿ ಕಷ್ಟಸುಖ ಹಂಚಿಕೊಳ್ಳುವಂತಾಗಬೇಕು. ಗ್ರಾಮೀಣ ವೃತ್ತಿ ರಂಗಭೂಮಿಯ ಶೇ. 90ರಷ್ಟು ನಾಟಕಗಳು ಮೌಲ್ಯಯುತವಾಗಿರುತ್ತವೆ. ಕಂದಗಲ್ಲ ಹನುಮಂತರಾಯ ಅವರ ‘ರಕ್ತರಾತ್ರಿ’, ‘ಚಿತ್ರಾಂಗದೆ’, ಬಿ.ಪುಟ್ಟಸ್ವಾಮಯ್ಯ ಅವರ ‘ಕುರುಕ್ಷೇತ್ರ’ ನಾಟಕಗಳಲ್ಲಿ ದ್ವಂದ್ವಾರ್ಥ ಸಂಭಾಷಣೆ ಇರಲು ಸಾಧ್ಯವಿಲ್ಲ. ಇಂಥ ಪೌರಾಣಿಕ ನಾಟಕಕ್ಕೆ ಐದಾರು ಲಕ್ಷ ರೂಪಾಯಿ ಖರ್ಚು ಮಾಡುತ್ತಾರೆ. ಆದರೆ ಅವರದು ಅಸಂಘಟಿತ ವಲಯ. ಅವರನ್ನು ಸಂಘಟಿಸಬೇಕು ಇಲ್ಲವೇ ಅವರು ಸಂಘಟಿತರಾಗಬೇಕು. ಸುಭದ್ರಮ್ಮ ಮನ್ಸೂರ, ಮರಿಯಮ್ಮನಹಳ್ಳಿಯ ಕೆ. ನಾಗರತ್ನಮ್ಮ ಅವರು ಕಂಪನಿ ಶೈಲಿಯ ನಾಟಕಗಳಲ್ಲಿ ಅಭಿನಯಿಸುತ್ತ ಬದುಕಿನುದ್ದಕ್ಕೂ ದುಡಿದರು. ಈಮೂಲಕ ಆ ಪರಂಪರೆ ಉಳಿಸಿದವರು.
ಆದರೆ ಸರಕಾರದ ವಾರ್ಷಿಕ ಅನುದಾನಕ್ಕಾಗಿ ಅನೇಕ ನಾಟಕ ಕಂಪನಿಗಳು ಉಳಿದಿವೆ ಎನ್ನುವುದು ವಾಸ್ತವ. ಇದಕ್ಕಾಗಿ ಚಲನಶೀಲತೆ ಮತ್ತು ವೃತ್ತಿ ರಂಗಭೂಮಿಯನ್ನು ಪೌರಾಣಿಕ, ಐತಿಹಾಸಿಕ ನಾಟಕಗಳ ಮೂಲಕ ಗ್ರಾಮೀಣ ವೃತ್ತಿ ರಂಗಭೂಮಿಯನ್ನು ಉಳಿಸಿ, ಬೆಳೆಸಿದವರನ್ನು ಪ್ರೋತ್ಸಾಹಿಸಬೇಕಿದೆ. ಇದರ ಬಾಹುಳ್ಯ ಮತ್ತು ಪಾರಮ್ಯ ನಾಟಕ ಕಂಪನಿಗಳಲ್ಲಿ ಇಲ್ಲ. ಆದರೆ ಗ್ರಾಮೀಣರು ಉಳಿಸಿದ್ದಾರೆ. ಉಳಿದಿರುವ ಐದಾರು ನಾಟಕ ಕಂಪನಿಗಳು ಆಡುವ ನಾಟಕಗಳು ಸಾವಿರ ಪ್ರದರ್ಶನಗಳನ್ನೂ ದಾಟುವುದಿಲ್ಲ. ಆದರೆ ಗ್ರಾಮೀಣರು ಆಡುವ ನಾಟಕಗಳು ವರ್ಷಕ್ಕೆ 15-18 ಸಾವಿರ ಪ್ರದರ್ಶನಗಳಾಗುತ್ತವೆ. ಇದರಿಂದ ಅನೇಕರು ಬದುಕುತ್ತಾರೆ. ಅದರಲ್ಲೂ ಟಿ.ವಿ. ಹಾಗೂ ಮೊಬೈಲ್ ಫೋನ್ ಹಾವಳಿ ನಡುವೆ ಸಮೃದ್ಧವಾದ ಸಾಂಸ್ಕೃತಿಕ ಬದುಕನ್ನು ಕಟ್ಟಿಕೊಂಡಿದ್ದಾರೆ.
ಇಂಥ ಗ್ರಾಮೀಣ ವೃತ್ತಿ ರಂಗಭೂಮಿ ಕಲಾವಿದರನ್ನು ಒಟ್ಟುಗೂಡಿಸುವ ಉದ್ದೇಶದ ಕುರಿತು ನೀಲಗುಂದ ಬಸವನಗೌಡರನ್ನು ಕೇಳಿದರೆ ‘‘ಸರಕಾರ ಎಲ್ಲರನ್ನೂ ಗುರುತಿಸುವುದಿಲ್ಲ. ಅವರನ್ನು ಆಹ್ವಾನಿಸಿ, ಸನ್ಮಾನಿಸುವುದರ ಮೂಲಕ ಸಂಘಟಿಸುವ ಉದ್ದೇಶವಿದೆ. ಈಗಾಗಲೇ 10 ವರ್ಷಗಳಿಂದ ಸಂಘಟಿಸುತ್ತಿರುವೆ. ಈ ವರ್ಷ 192 ಕಲಾವಿದರನ್ನು ಸನ್ಮಾನಿಸುವ ಉದ್ದೇಶವಿತ್ತು. ಅಂತಿಮವಾಗಿ 210 ಕಲಾವಿದರನ್ನು ಸನ್ಮಾನಿಸಿದೆವು. ಇದರಿಂದ ಲಾಭ ಏನಿಲ್ಲ. ಆದರೆ ನಮ್ಮ ಕುಟುಂಬಕ್ಕೆ ಅನ್ನ ಹಾಕುತ್ತಿರುವವರು ಗ್ರಾಮೀಣ ವೃತ್ತಿ ರಂಗಭೂಮಿಯವರು. ಹೇಗೆಂದರೆ ನನ್ನನ್ನು ಸೇರಿದಂತೆ ನನ್ನ ಹೆಂಡತಿ ಬಿ. ಸಾವಿತ್ರಮ್ಮ, ಮಗಳಾದ ಸುಜಾತಾ ಅವರನ್ನು ನಟಿಸಲು ಆಹ್ವಾನಿಸುತ್ತಾರೆ. ನಾಟಕ ನಿರ್ದೇಶಿಸುವುದರ ಜೊತೆಗೆ ಹಾರ್ಮೋನಿಯಂ, ಕೀಬೋರ್ಡ್ ನುಡಿಸುವ ನನ್ನನ್ನೂ ಕರೆಯುತ್ತಾರೆ. ಇದಕ್ಕಾಗಿ ಪ್ರತೀ ವರ್ಷ ಹೀಗೆಯೇ ಕಲಾವಿದರನ್ನು ಸನ್ಮಾನಿಸುವೆ’’ ಎನ್ನುವ ಅವರ ಮಾತು ಸತ್ಯ. ಈ ಮೂಲಕ ಅವರು ಕಲಾವಿದರನ್ನು ಸಮಾವೇಶಗೊಳಿಸಿದಂತಾಗುತ್ತದೆ. ಇದರಿಂದ ಬಾಗಲಕೋಟೆ ಜಿಲ್ಲೆಯ ಇಲಕಲ್ಲದ ರಂಗಭೂಮಿ ಕಲಾವಿದೆ ರೇಷ್ಮಾ ಅಳವಂಡಿ, ಶಿಗ್ಗಾವಿಯ ವೀಣಾ ಬೆಂಗೇರಿ, ಭಾರತಿ ದಾವಣಗೆರೆ, ಸೌಮ್ಯಾ ದಾವಣಗೆರೆ, ಹುಬ್ಬಳ್ಳಿಯ ಪುಷ್ಪಮಾಲಾ ಅಣ್ಣಿಗೇರಿ ಮೊದಲಾದವರು ಸೇರಿದ್ದರು.
ಈ ಹಿಂದೆ ಅಂದರೆ 2007ರಲ್ಲಿ ಕರ್ನಾಟಕ ನಾಟಕ ಅಕಾಡಮಿ ವತಿಯಿಂದ ಇದೇ ದಾವಣಗೆರೆಯಲ್ಲಿ ರಂಗಭೂಮಿ ಕಲಾವಿದರ ಸಮಾವೇಶವಾಗಿತ್ತು. ಆಗ ಕಪ್ಪಣ್ಣ ಅವರು ನಾಟಕ ಅಕಾಡಮಿಯ ಅಧ್ಯಕ್ಷರಾಗಿದ್ದರು. ಸಾಹಿತ್ಯ ಸಮ್ಮೇಳನದ ಮಾದರಿಯಲ್ಲಿ ಸಮಾವೇಶವಾಗಿತ್ತು. ಇದಕ್ಕೂ ಮುನ್ನ ಕಂಚಿಕೇರಿ ಕೊಟ್ರ ಬಸಪ್ಪ ಅವರ ಜಯಲಕ್ಷ್ಮೀ ನಾಟಕ ಸಂಘವು ಶುರುವಾಗಿದ್ದು 1918ರಲ್ಲಿ. ಇದಾದ ಹತ್ತು ವರ್ಷಗಳ ನಂತರ ಚಿಂದೋಡಿ ವೀರಪ್ಪ ಅವರ ಕೆ.ಬಿ.ಆರ್. ಡ್ರಾಮ ಕಂಪನಿ ಶುರುವಾಯಿತು. ಜಯಲಕ್ಷ್ಮೀ ನಾಟಕ ಸಂಘದ ವಜ್ರಮಹೋತ್ಸವ ಸಮಾರಂಭವನ್ನು ವೀರಪ್ಪ ಅವರ ಪುತ್ರಿ, ಖ್ಯಾತ ರಂಗಭೂಮಿ ಕಲಾವಿದೆ ಚಿಂದೋಡಿ ಲೀಲಾ ಅವರು ದಾವಣಗೆರೆಯಲ್ಲಿ ಆಯೋಜಿಸಿದ್ದರು. ಆಗ ಅವರು ಕರ್ನಾಟಕ ನಾಟಕ ಅಕಾಡಮಿಯ ಅಧ್ಯಕ್ಷರಾಗಿದ್ದರು. ಅವರ ಹೆಸರಿನ ಪದ್ಮಶ್ರೀ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ನೀಲಗುಂದ ಬಸವನಗೌಡ್ರು ತಮ್ಮ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಈ ಮೂಲಕ ರಂಗಪರಂಪರೆಯೊಂದು ಅನೂಚಾನವಾಗಿ ಬೆಳೆದು ಬರುತ್ತಿದೆ. ಹಾಗೆಯೇ ದಾವಣಗೆರೆಯು ವೃತ್ತಿ ರಂಗಭೂಮಿಯ ತವರೂರು ಎಂಬುದು ಸಾಬೀತಾಗುತ್ತಲೇ ಇರುತ್ತದೆ.