ರಾಮನಗರ | ಮೆಟ್ಟಿಲು ಹತ್ತಲು ಕಷ್ಟಪಡುತ್ತಿದ್ದ ಮಹಿಳೆ; ಕೋರ್ಟ್ನಿಂದ ಹೊರಬಂದು ವಿಚಾರಣೆ ನಡೆಸಿದ ನ್ಯಾಯಾಧೀಶ

ಸಾಂದರ್ಭಿಕ ಚಿತ್ರ
ಬೆಂಗಳೂರು: ಅಪಘಾತದಲ್ಲಿ ಗಾಯಗೊಂಡು ಕಾಲುನೋವಿನಿಂದ ಮೆಟ್ಟಿಲು ಹತ್ತಲು ಕಷ್ಟಪಡುತ್ತಿದ್ದ ಮಹಿಳೆಗೆ ರಾಮನಗರದ ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಎಚ್. ಅವಿನಾಶ್ ಚಿಂದು ಕೋರ್ಟ್ ನಿಂದ ಹೊರಬಂದು ವಿಚಾರಣೆ ನಡೆಸಿ, ನ್ಯಾಯ ಒದಗಿಸಿದ್ದಾರೆ.
ಅಪಘಾತವೊಂದರಲ್ಲಿ ಗಾಯಗೊಂಡು ಕಾಲು ನೋವಿನಿಂದ ಮೆಟ್ಟಿಲು ಹತ್ತಲಾಗದೆ ಮಹಿಳೆ ಕೋರ್ಟ್ ಹೊರಗಡೆ ಕುಳಿತಿದ್ದರು. ಈ ಹಿನ್ನೆಲೆ ಎಚ್. ಅವಿನಾಶ್ ಚಿಂದು ಮಹಿಳೆಯ ಬಳಿ ಹೋಗಿ ನ್ಯಾಯ ದೊರಕಿಸಿ ಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ವರದಿಗಳ ಪ್ರಕಾರ ನಗರದ ಚಲುವಯ್ಯ ಎಂಬವರು ಅಪಘಾತವೊಂದರಲ್ಲಿ ಮೃತಪಟ್ಟಿದ್ದರು. ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿತ್ತು. ಮೃತರ ಮಕ್ಕಳಿಗೆ ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿತ್ತು. ಇದೇ ಸಂದರ್ಭ ಚಲುವಯ್ಯ ಅವರ ಪುತ್ರಿ ಯಶೋಧಮ್ಮ ಅವರಿಗೆ ಕಾಲು ಪೆಟ್ಟಾಗಿ ಕೋರ್ಟ್ ಮೆಟ್ಟಿಲು ಹತ್ತಲು ಸಾಧ್ಯವಾಗುತ್ತಿರಲಿಲ್ಲ.
ಈ ಹಿನ್ನೆಲೆ ನ್ಯಾಯಾಧೀಶರು ಮಹಿಳೆ ಇದ್ದಲ್ಲಿಗೇ ಬಂದು ವಿಚಾರಣೆ ನಡೆಸಿ ಮೃತರ ವಾರಸುದಾರರಿಗೆ 1 ಲಕ್ಷ ರೂ. ಪರಿಹಾರ ಬಿಡುಗಡೆ ಮಾಡುವಂತೆ ಆದೇಶಿಸಿದ್ದಾರೆ ಎಂದು ವರದಿಯಾಗಿದೆ.