ಕನಕಪುರದ 250ಕ್ಕೂ ಹೆಚ್ಚು ಹಳ್ಳಿಗಳಿಗೂ ಕಾವೇರಿ ನೀರು ಪೂರೈಕೆ : ಡಿ.ಕೆ.ಶಿವಕುಮಾರ್

ಕನಕಪುರ, ಜು.21: ಬೆಂಗಳೂರು ಮಾದರಿಯಲ್ಲಿ ಸಂಗಮದ ಬಳಿ ಕಾವೇರಿ ನೀರನ್ನು ಪಂಪ್ ಮಾಡಿ ಕ್ಷೇತ್ರದ 250ಕ್ಕೂ ಹೆಚ್ಚು ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರನ್ನು ತಲುಪಿಸುವ ಯೋಜನೆ ರೂಪಿಸಲಾಗುತ್ತಿದೆ. ಜೊತೆಗೆ ಕ್ಷೇತ್ರದ ಕೆರೆಗಳಿಗೂ ನೀರನ್ನು ತುಂಬಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಸೋಮವಾರ ಕನಕಪುರದ ಕೋಡಿಹಳ್ಳಿ ಹೋಬಳಿಯಲ್ಲಿ ನಡೆದ ‘ಬಾಗಿಲಿಗೆ ಬಂತು ಸರಕಾರ, ಸೇವೆಗೆ ಇರಲಿ ಸಹಕಾರ’ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೀರಾವರಿ ಸಚಿವನಾದ ನಾನು ನನ್ನ ಕ್ಷೇತ್ರದ ಕೆರೆಗಳನ್ನು ತುಂಬಿಸುವ ಕೆಲಸ ಮಾಡುತ್ತಿದ್ದೇನೆ. ಶಿಂಷಾದಿಂದ ಸಾತನೂರು ಹೋಬಳಿಗೆ ನೀರು ತರಲಾಗುತ್ತಿದೆ. ಅರ್ಕಾವತಿಯಿಂದ ಕಸಬಾ ಹೋಬಳಿ ಕೆರೆಗಳನ್ನು ತುಂಬಿಸುವ ಕೆಲಸ ಮಾಡಲಾಗುತ್ತಿದೆ. ಹೊಸದುರ್ಗ ಭಾಗದ ಕೆರೆಗಳನ್ನು ಕಾವೇರಿ ನದಿ ನೀರಿನಿಂದ ತುಂಬಿಸಲಾಗುವುದು ಎಂದು ಹೇಳಿದರು.
ಈ ಅವಧಿಯಲ್ಲೇ ಮೆಡಿಕಲ್ ಕಾಲೇಜಿಗೆ ಮುಕ್ತಿ ನೀಡಲಾಗುವುದು. ಕ್ಷೇತ್ರದಲ್ಲಿ ಎರಡು ಮೆಡಿಕಲ್ ಕಾಲೇಜು ಇರಲಿದೆ. ಕನಕಪುರದಲ್ಲಿ ಇನ್ಫೋಸಿಸ್ ಸಹಾಯದಲ್ಲಿ ತಾಯಿ ಮಗು ಆಸ್ಪತ್ರೆ ತೆರೆಯಲಾಗಿದೆ. ಇಂತಹ ಸರಕಾರಿ ಆಸ್ಪತ್ರೆ ಬೇರೆ ಎಲ್ಲಾದರೂ ಇದೆಯೇ? ನಾವು ಮಾಡುತ್ತಿರುವ ಕೆಲಸ ದೇಶಕ್ಕೆ ಮಾದರಿ ಎಂದು ಶಿವಕುಮಾರ್ ತಿಳಿಸಿದರು.
ನಾವು ಶುದ್ಧ ಕುಡಿಯುವ ನೀರಿನ ಘಟಕ, ಸೋಲಾರ್ ಪಾರ್ಕ್ ಮಾಡಿದೆವು. ನಂತರ ಈ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ. ನಮ್ಮ ಮೆಡಿಕಲ್ ಕಾಲೇಜನ್ನು ಯಡಿಯೂರಪ್ಪ ಅವರು ಚಿಕ್ಕಬಳ್ಳಾಪುರಕ್ಕೆ ಹಾಕಿಬಿಟ್ಟರು. ಇಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣವಾದರೆ ನೀವುಗಳು ಯಾರೂ ಬೆಂಗಳೂರಿಗೆ ಹೋಗಬೇಕಿಲ್ಲ ಎಂದು ಅವರು ತಿಳಿಸಿದರು.
ಆನೆಗಳ ಹಾವಳಿ ತಡೆಯಲು ಸುಮಾರು 50 ಕಿ.ಮೀ ಉದ್ದ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಉಳಿದ 50 ಕಿ.ಮೀ ಅನ್ನು ಪೂರ್ಣಗೊಳಿಸಲಾಗುವುದು. ನಮ್ಮ ಕ್ಷೇತ್ರದಲ್ಲಿ ಇಬ್ಬರು ರೈತರಿಗೆ ಒಂದು ಟ್ರಾನ್ಸ್ ಫಾರ್ಮರ್ ನೀಡಿರುವುದರಿಂದ 25 ಸಾವಿರ ರೈತರಿಗೆ ಅನುಕೂಲವಾಗಿದೆ. ಹುಣಸನಹಳ್ಳಿ, ದೊಡ್ಡ ಆಲಹಳ್ಳಿಯಲ್ಲಿ ಸೋಲರ್ ವಿದ್ಯುತ್ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಹಗಲು ಹೊತ್ತಿನಲ್ಲಿಯೇ ರೈತರಿಗೆ ವಿದ್ಯುತ್ ನೀಡಲಾಗುವುದು ಎಂದು ಶಿವಕುಮಾರ್ ಹೇಳಿದರು.
ನಿಮ್ಮ ಮನೆ ಮಗನಾಗಿ ಬಂದಿರುವೆ: ನಾನು ಯಾವುದೇ ಅಧಿಕಾರ ಹೊತ್ತಕೊಂಡು ಇಲ್ಲಿಗೆ ಬಂದಿಲ್ಲ. ನಾನು ನಿಮ್ಮೆಲ್ಲರ ಮನೆಮಗನಾಗಿ ಇಲ್ಲಿಗೆ ಬಂದಿದ್ದೇನೆ. ವೈದ್ಯರು ವಿಶ್ರಾಂತಿ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ. ಆದ ಕಾರಣಕ್ಕೆ ಮುಂದಿನ ಮೂರು ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುತ್ತೇನೆ. ನಿಮಗೆ ಮಾತುಕೊಟ್ಟ ಕಾರಣಕ್ಕೆ ನಿಮ್ಮ ಸಮಸ್ಯೆಗಳನ್ನು ಆಲಿಸಿಕೊಳ್ಳಲು ಬಂದಿದ್ದೇನೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.
ಇ ಖಾತಾ ಮಾಡಿಸಲು ನಾವು ತೀರ್ಮಾನ ಮಾಡಿದ್ದೇವೆ. ನೀವು ಯಾರಿಗೂ ಲಂಚ ನೀಡದೇ ಖಾತಾ ಪಡೆಯಬೇಕು. ಅದಕ್ಕಾಗಿ ಇ ಖಾತಾ ತಂದಿದ್ದೇವೆ. ಇದು ದೇಶಕ್ಕೆ ಮಾದರಿ ಕೆಲಸ. ಈಗಾಗಲೇ ಪೋಡಿ ಮುಕ್ತ ಗ್ರಾಮ ಮಾಡಲು ಮುಂದಾಗಿದ್ದೇವೆ. 175 ಉಪ ಗ್ರಾಮ ಮಾಡುತ್ತಿದ್ದೇವೆ. ಇಲ್ಲಿ ಸಾಕಷ್ಟು ಜನರಿಗೆ ಬಗರ್ ಹುಕುಂ ಜಮೀನು ನೀಡಲಾಗಿದೆ. ಇನ್ನಷ್ಟು ಜನರಿಗೆ ನೀಡಲು ಸುರೇಶ್ ಅವರಿಗೆ ಜವಾಬ್ದಾರಿ ನೀಡಲಾಗಿದೆ ಎಂದು ಅವರು ತಿಳಿಸಿದರು.
ಸುಮಾರು 1,300 ಜನರಿಗೆ ನೂತನ ಪೋಡಿ ನೀಡಲಾಗಿದೆ. ದಾಖಲೆಗಳಲ್ಲಿ ಇಲ್ಲದ 175 ಉಪಗ್ರಮಗಳನ್ನು ಮಾಡಲಾಗಿದೆ. ಇಕ್ಬಾಲ್ ಹುಸೇನ್ ಶಾಸಕರಾದ ಬಳಿಕ ರಾಮನಗರದಲ್ಲಿ 1 ಸಾವಿರ ಕೋಟಿ ರೂ. ಅನುದಾನ ನೀಡಿ ರಾಮನಗರ ಪಟ್ಟಣ ಅಭಿವೃದ್ಧಿ ಮಾಡಲಾಗುತ್ತಿದೆ. ನಮ್ಮ ಗ್ಯಾರಂಟಿ ಯೋಜನೆಗಳು ಜನರನ್ನು ತಲುಪುತ್ತಿವೆ ಎಂದು ಶಿವಕುಮಾರ್ ಹೇಳಿದರು.
ಅನಾರೋಗ್ಯದ ಮಧ್ಯೆಯೂ ಜನರ ಅಹವಾಲು ಸ್ವೀಕಾರ: ಒಂದು ವಾರದಿಂದ ಡೇಂಘಿ ಜ್ವರದಿಂದ ಬಳಲುತ್ತಿರುವ ಶಿವಕುಮಾರ್, ಅನಾರೋಗ್ಯದ ನಡುವೆಯೂ ತಮ್ಮ ಕ್ಷೇತ್ರದ ಜನರ ಅಹವಾಲು ಸ್ವೀಕರಿಸಿದರು. ವಿಧವಾ ಪಿಂಚಣಿ, ಬಗರ್ ಹುಕುಂ ಸಾಗುವಳಿ ಜಮೀನು, ನಿವೇಶನ, ಮನೆ, ಇ-ಖಾತಾ, ಪಡಿತರ ಕಾರ್ಡ್ ಗಾಗಿ ನೂರಾರು ಜನರು ಮನವಿ ಸಲ್ಲಿಸಿದರು. ಜನರ ಅರ್ಜಿಗಳನ್ನು ಸ್ವೀಕರಿಸಿ, ಸೂಕ್ತ ರೀತಿಯಲ್ಲಿ ಸ್ಪಂದಿಸಿ, ಪರಿಹಾರ ನೀಡುವುದಾಗಿ ಭರವಸೆ ನೀಡಿದರು.
ನೂತನವಾಗಿ ರಚನೆಯಾದ ಕಂದಾಯ ಗ್ರಾಮಗಳ ಹಕ್ಕು ಪತ್ರ ಮತ್ತು ಫಲಾನುಭವಿಗಳಿಗೆ ಇ-ಸ್ವತ್ತು ದಾಖಲೆಗಳನ್ನು ವಿತರಿಸಿದರು. ಫಲಾನುಭವಿಗಳಿಗೆ ಮೀನು ಹಿಡಿಯುವ ಸಲಕರಣೆಗಳ ಕಿಟ್, ವಿವಿಧ ಇಲಾಖೆಗಳ ವತಿಯಿಂದ ಸ್ಥಳೀಯ ಫಲಾನುಭವಿಗಳಿಗೆ ಟ್ಯಾಕ್ಸಿ ಹಾಗೂ ವಿಕಲಚೇತನರಿಗೆ ದ್ವಿಚಕ್ರ ವಾಹನ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್, ಶಾಸಕ ಇಕ್ಬಾಲ್ ಹುಸೇನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.