ಸಿರವಾರ | ಹೆದ್ದಾರಿ ಕಾಮಗಾರಿಗೆ ಹೆಚ್ಚುವರಿಯಾಗಿ ನೀಡಿದ ಭೂಮಿ ರದ್ದುಪಡಿಸಲು ಆಗ್ರಹಿಸಿ ಪ್ರತಿಭಟನೆ

ಸಿರವಾರ: ತಾಲೂಕಿನ ಮಲ್ಲಟ ಗ್ರಾಮದ ಸರ್ವೇ ನಂ.288/1 ರ ಸರ್ಕಾರಿ ಜಮೀನಿನಲ್ಲಿ ರಾಷ್ಟ್ರೀಯ ಹೆದ್ದಾರಿ 748ಎ ನಿರ್ಮಾಣ ಕಾಮಗಾರಿ ಮತ್ತು ಅಮೃತ ಸರೋವರ ಯೋಜನೆ ಹೆಸರಿನಲ್ಲಿ ಹೆಚ್ಚುವರಿ ಭೂಮಿ ನೀಡಿರುವುದನ್ನು ತಕ್ಷಣ ರದ್ದುಪಡಿಸಬೇಕೆಂದು ಸರ್ಕಾರಿ ಭೂಮಿ ಉಳಿಸಿ ಹೋರಾಟ ಸಮಿತಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ದಲಿತ ರಕ್ಷಣಾ ವೇದಿಕೆಗಳು ಒಟ್ಟಾಗಿ ತಹಶೀಲ್ದಾರ್ ಕಚೇರಿಯ ಮುಂದೆ ಧರಣಿ ನಡೆಸಿದರು.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಮಲ್ಲಟ ಗ್ರಾಮದ ಸರ್ವೇ ನಂ.288/1 ರಲ್ಲಿ ಒಟ್ಟು 97 ಎಕರೆ 37 ಗುಂಟೆ ಸರ್ಕಾರಿ ಜಮೀನು ಇದೆ. ಈ ಜಾಗದಲ್ಲಿ ಈಗಾಗಲೇ 20 ಎಕರೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಕೆರೆ ನಿರ್ಮಾಣಕ್ಕೆ ಮಂಜೂರಾಗಿತ್ತು. ಆದರೆ, ಅಮೃತ ಸರೋವರ ಯೋಜನೆಯಡಿ ಹೆಚ್ಚುವರಿಯಾಗಿ 5 ಎಕರೆ ಹಾಗೂ ಹೆದ್ದಾರಿ ಕಾಮಗಾರಿ ಹೆಸರಿನಲ್ಲಿ ಮತ್ತಷ್ಟು 7 ಎಕರೆ ಭೂಮಿಯನ್ನು ಗುತ್ತಿಗೆ ಕಂಪನಿ ಜಿಆರ್‌ಆ ಇನ್‌ಫ್ರಾ ಪ್ರಾಜೆಕ್ಟ್ಸ್ ಗೆ ನೀಡಲಾಗಿದೆ. ಈ ಹೆಚ್ಚುವರಿ ಮಂಜೂರಾತಿ ಸರ್ಕಾರದ ನಿಯಮ ಉಲ್ಲಂಘನೆಯಾಗಿದ್ದು, ಖಾಸಗಿ ಕಂಪನಿಯ ಒತ್ತಾಯಕ್ಕೆ ಸಿಲುಕಿದ ಅಧಿಕಾರಿಗಳು ಅಕ್ರಮವಾಗಿ ಸರ್ಕಾರಿ ಗೋಮಾಳ ಜಮೀನುಗಳನ್ನು ಹಂಚಿಕೊಡುತ್ತಿದ್ದಾರೆ. ಇದರಿಂದ ಎಸ್‌ಸಿ/ಎಸ್‌ಟಿ ಫಲಾನುಭವಿಗಳು ಹಾಗೂ ಗ್ರಾಮಸ್ಥರ ಜಾನುವಾರುಗಳಿಗೆ ಮೇಯಲು ಜಾಗವಿಲ್ಲದ ಸ್ಥಿತಿ ಉಂಟಾಗಿದೆ ಎಂದರು.
ಅಲ್ಲದೆ, 5 ಎಕರೆ ನಕ್ಷೆಯಂತೆ ಮಾತ್ರ ಕೆರೆ ನಿರ್ಮಿಸಬೇಕಾದಲ್ಲಿ, ಕಂಪನಿ ಹೆಚ್ಚುವರಿ ಜಮೀನನ್ನು ಕಬಳಿಸಿ ಬಳಸಿಕೊಂಡಿದ್ದು, ಸರ್ಕಾರಕ್ಕೆ ಆರ್ಥಿಕ ನಷ್ಟ ತಂದುಕೊಟ್ಟಿದೆ. ನಿರ್ಮಾಣ ಪ್ರದೇಶದಲ್ಲಿ ವಿದ್ಯುತ್ ಕಂಬಗಳೂ ಇರುವುದರಿಂದ, ಗಾಳಿ–ಮಳೆಯ ಸಮಯದಲ್ಲಿ ಜೀವಹಾನಿ ಸಂಭವಿಸುವ ಅಪಾಯವಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.
ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ಕಾಮಗಾರಿ ನಡೆಸಿದ ಜಿಆರ್‌ಆ ಇನ್‌ಫ್ರಾ ಪ್ರಾಜೆಕ್ಟ್ಸ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಹೆಚ್ಚುವರಿ ಭೂಮಿಯನ್ನು ನೀಡಿದ ಆದೇಶವನ್ನು ತಕ್ಷಣ ರದ್ದುಪಡಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಶಾಂತಪ್ಪ ಪಿತಗಲ್, ಶಂಕರ್ ಮರಾಠ, ರಮೇಶ್ ಭಂಡಾರಿ, ಬಸವರಾಜ ನಾಯಕ, ರವಿಕುಮಾರ ಮಲ್ಲಟ, ತಿರುಪತಿ ಮಲ್ಲಟ, ಬಸವರಾಜ ಕಾವಲಿ, ಹನುಮೇಶ, ಮಾರೆಪ್ಪ, ಮಲ್ಲು, ಪಕಿರಪ್ಪ ಸೇರಿದಂತೆ ಅನೇಕರು ಭಾಗವಹಿಸಿದ್ದರು.