ರಾಯಚೂರು | ಎರಡು ಅಂತಸ್ತಿನ ಕಟ್ಟಡ ಏರಿ ಯುವಕ ಆತ್ಮಹತ್ಯೆಗೆ ಯತ್ನ : ಯುವಕನನ್ನು ರಕ್ಷಿಸಿದ ಸಿಬ್ಬಂದಿ, ಸ್ಥಳೀಯರು

ರಾಯಚೂರು: ಲಿಂಗಸುಗೂರಿನಲ್ಲಿ ಖಾಸಗಿ ಆಸ್ಪತ್ರೆಯ ಕಟ್ಟಡದ ಮೇಲಕ್ಕೆ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿ ಆತಂಕ ಸೃಷ್ಟಿಸಿದ್ದ ಯುವಕನನ್ನು ಸ್ಥಳೀಯರು ಹಾಗೂ ಆಸ್ಪತ್ರೆ ಸಿಬ್ಬಂದಿ ರಕ್ಷಿಸಿದ ಘಟನೆ ಸೋಮವಾರ ನಡೆದಿದೆ.
ಬಸವಸಾಗರ ವೃತ್ತ ಬಳಿಯ ಖಾಸಗಿ ಆಸ್ಪತ್ರೆಯ ಕಟ್ಟಡದ ಎರಡನೇ ಅಂತಸ್ತಿನ ತುದಿಗೆ ಏರಿ ಕೆಳಗೆ ಜಿಗಿಯುವುದಾಗಿ ಕೂಗಾಡುತ್ತಿದ್ದ ಯುವಕನನ್ನು ಮುದಗಲ್ ಪಟ್ಟಣದ ಜಾವೀದ್ ಪಾಷಾ ಎಂದು ಗುರುತಿಸಲಾಗಿದೆ. ಕೆಲ ದಿನಗಳ ಹಿಂದೆ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆಂದು ತಿಳಿದುಬಂದಿದೆ.
ಘಟನೆಯ ವೇಳೆ ಕೆಲಕಾಲ ಯುವಕ ಹೈಡ್ರಾಮ ಮಾಡಿದ್ದರಿಂದ ಆಸ್ಪತ್ರೆಯ ಸಿಬ್ಬಂದಿ ಗಾಬರಿಗೊಂಡಿದ್ದರು. ನಂತರ ಸಿಬ್ಬಂದಿ ಹಾಗೂ ಸ್ಥಳೀಯರ ಸಹಾಯದಿಂದ ಅವನನ್ನು ಸುರಕ್ಷಿತವಾಗಿ ಕೆಳಗೆ ಇಳಿಸಲಾಯಿತು.
ಯುವಕ ಕುಡಿದ ಮತ್ತಿನಲ್ಲಿದ್ದಾನೆಂದು ಹೇಳಲಾಗುತ್ತಿದ್ದು, ಆತ್ಮಹತ್ಯೆಗೆ ಯಾಕೆ ಮುಂದಾಗಿದ್ದಾನೆ ಎಂಬುದರ ಸ್ಪಷ್ಟ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಲಿಂಗಸುಗೂರು ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.