ರಾಯಚೂರು | ಎಸೆಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಮಹಾನಗರ ಪಾಲಿಕೆಯಿಂದ ಸಮಾಲೋಚನಾ ಸಭೆ

ರಾಯಚೂರು :ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.40 ಕ್ಕಿಂತ ಕಡಿಮೆ ಫಲಿತಾಂಶ ಪಡೆದ 62 ಶಾಲೆಗಳ ಮುಖ್ಯಗುರುಗಳೊಂದಿಗೆ ಮಹತ್ವದ ಸಮಾಲೋಚನಾ ಸಭೆಯನ್ನು ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಪಾತ್ರ ಅವರ ಅಧ್ಯಕ್ಷತೆಯಲ್ಲಿ ಸೆ.15 ರಂದು ನಡೆಸಲಾಯಿತು.
ಮಹಾನಗರ ಪಾಲಿಕೆಯ ವಲಯ ಸಭಾಂಗಣದಲ್ಲಿ ನಡೆದ ಈ ಸಭೆಯಲ್ಲಿ ಮಾತನಾಡಿದ ಆಯುಕ್ತರು, “ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಮುಂದಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತರುವುದಕ್ಕೆ ಎಲ್ಲಾ ಶಿಕ್ಷಕರು ವಿಶೇಷ ಕಾಳಜಿ ವಹಿಸಬೇಕು” ಎಂದು ಸೂಚನೆ ನೀಡಿದರು.
10 ದಿನಗಳ ಗಡುವು :
ಪ್ರತಿಯೊಂದು ಶಾಲೆಯಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಹಾಜರಾತಿ ವರದಿ, ಶಾಲೆ ಬಿಟ್ಟ ವಿದ್ಯಾರ್ಥಿಗಳ ವಿವರ, ಮೂಲಭೂತ ಸೌಲಭ್ಯಗಳ ಕೊರತೆಗಳ ಮಾಹಿತಿ ಸೇರಿ ಸವಿವರವಾದ ವರದಿಯನ್ನು ಹತ್ತು ದಿನಗಳ ಒಳಗೆ ಸಲ್ಲಿಸಲು ಆಯುಕ್ತರು ಸೂಚಿಸಿದರು. ಎರಡು ವಾರಗಳ ನಂತರ ನಡೆಯುವ ಮುಂದಿನ ಸಭೆಗೆ ಮುಖ್ಯಗುರುಗಳು ಖುದ್ದಾಗಿ ಹಾಜರಾಗಿ ಅಗತ್ಯ ಮಾಹಿತಿಯನ್ನು ನೀಡಬೇಕೆಂದು ತಿಳಿಸಿದರು.
ಉಪ ಸಮಿತಿ ರಚನೆ :
ಜಿಲ್ಲಾಧಿಕಾರಿಗಳ ನಿರ್ದೇಶನದಂತೆ, ರಾಯಚೂರು ನಗರ ಸೇರಿದಂತೆ ಜಿಲ್ಲೆಯ ಫಲಿತಾಂಶ ಸುಧಾರಣೆಗಾಗಿ ಮಹಾನಗರ ಪಾಲಿಕೆಯ ನೇತೃತ್ವದಲ್ಲಿ ಉಪ ಸಮಿತಿಗಳನ್ನು ರಚಿಸಲಾಗುತ್ತಿದೆ. ಪ್ರತಿ 5–10 ಶಾಲೆಗಳ ಗುಂಪಿಗೆ ತಾಲೂಕು ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಫಲಿತಾಂಶ ಸುಧಾರಣೆ ಕಾರ್ಯದ ಜವಾಬ್ದಾರಿಯನ್ನು ಹಂಚಲಾಗಿದೆ.
“ವಿದ್ಯಾರ್ಥಿಗಳ ಸಾಧನೆ ಎಂದರೆ ಕೇವಲ ಅಂಕಗಳಿಸುವುದಲ್ಲ. ಬದಲಿಗೆ ಅವರ ಕೌಶಲ್ಯ, ಬೌದ್ಧಿಕ ಸಾಮರ್ಥ್ಯಗಳನ್ನು ಬೆಳೆಸುವ ಮೂಲಕ ಸಮರ್ಥ ಮಾನವ ಸಂಪನ್ಮೂಲವನ್ನು ರೂಪಿಸುವುದು. ಉತ್ತಮ ಶಿಕ್ಷಣವೇ ರಾಷ್ಟ್ರಕ್ಕೆ ಬಲವಾದ ಶಕ್ತಿ ನೀಡುತ್ತದೆ. ಈ ಕ್ರಮದಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಹೊಸ ದಾರಿ ತೆರೆದುಕೊಳ್ಳಲಿದೆ” ಎಂದು ಆಯುಕ್ತ ಜುಬಿನ್ ಮೊಹಪಾತ್ರ ಸಲಹೆ ನೀಡಿದರು.
ಸಭೆಯಲ್ಲಿ ಪಾಲಿಕೆಯ ಉಪ ಆಯುಕ್ತ ಸಂತೋಷ ರಾಣಿ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಶಾಲೆಗಳ ಮುಖ್ಯಗುರುಗಳು ಉಪಸ್ಥಿತರಿದ್ದರು.