ರಾಯಚೂರು | ಜಾತಿ ಕಾಲಂನಲ್ಲಿ ಕುರುಬ ಎಂದು ಹೆಸರು ಬರೆಸಲು ಈರಣ್ಣ ಒತ್ತಾಯ

ರಾಯಚೂರು: ಸೆ.22ರಿಂದ ಪ್ರಾರಂಭವಾಗಲಿರುವ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪ್ರತಿಯೊಬ್ಬರೂ ಜಾತಿ ಕಾಲಂ (ಕಾಲಂ 9) ನಲ್ಲಿ ‘ಕುರುಬ’ ಎಂದು ಬರೆಸಿಕೊಳ್ಳುವಂತೆ ರಾಜ್ಯ ಕುರುಬ ಸಮಾಜದ ಅಧ್ಯಕ್ಷ ಎಂ.ಈರಣ್ಣ ಅವರು ಮನವಿ ಮಾಡಿದ್ದಾರೆ.
ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಮೀಕ್ಷೆದಾರರು ಉಪಜಾತಿ ಕುರಿತು ಕೇಳಿದರೆ ಉಪಜಾತಿ ಇಲ್ಲ ಎಂದು ಹೇಳಬೇಕು ಎಂದು ಹೇಳಿದರು.
ವೃತ್ತಿ ಸಂಬಂಧಿಸಿದ ಮಾಹಿತಿಯನ್ನು ನಿಖರವಾಗಿ ನಮೂದಿಸಬೇಕು. ಆದರೆ ಕುಲಕಸುಬು ಕಾಲಂನಲ್ಲಿ ಯಾವುದೇ ಮುಜುಗರವಿಲ್ಲದೆ ತಮ್ಮ ಕುಲಕಸುಬನ್ನು ಸ್ಪಷ್ಟವಾಗಿ ಬರೆಸಿಕೊಳ್ಳಬೇಕೆಂದು ಸೂಚಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ಧಾರದಂತೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧೀನದಲ್ಲಿ ನಡೆಯುತ್ತಿರುವ ಈ ಸಮೀಕ್ಷೆ, ಮೀಸಲಾತಿ ಗೊಂದಲ ನಿವಾರಣೆಗೆ ಸಹಕಾರಿಯಾಗಲಿದೆ. ಕಾಡು ಕುರುಬ, ಜೇನು ಕುರುಬ, ಬೆಟ್ಟ ಕುರುಬ ಮತ್ತು ಗೊಂಡ ಸಮುದಾಯವನ್ನು ಹೊರತುಪಡಿಸಿ, ಉಳಿದ ಎಲ್ಲರೂ ‘ಕುರುಬ’ ಎಂದೇ ಬರೆಸಬೇಕು ಎಂದು ಹೇಳಿದರು.
ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ಪಟ್ಟಿಗೆ ಸೇರಿಸುವ ಕುರಿತ ಚರ್ಚೆಗಾಗಿ ಶೀಘ್ರದಲ್ಲೇ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ ಎಂದು ಈರಣ್ಣ ತಿಳಿಸಿದರು.
ಈ ವೇಳೆ ಸಮಾಜದ ಜಿಲ್ಲಾಧ್ಯಕ್ಷ ಕೆ. ಬಸವಂತಪ್ಪ ಮಾತನಾಡಿ, ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಕುರುಬರನ್ನು ಗೊಂಡ ಎಂದು ಕರೆಯಲಾಗುತ್ತದೆ. ಬೀದರ್‌ನಲ್ಲಿ ‘ಗೊಂಡ’ ಎಂದು ಬರೆಸುತ್ತಾರೆ. ಆದರೆ ರಾಯಚೂರು ಜಿಲ್ಲೆಯ ಸಮುದಾಯದವರು ಜಾತಿ ಕಾಲಂನಲ್ಲಿ ಸ್ಪಷ್ಟವಾಗಿ ‘ಕುರುಬ’ ಎಂದೇ ಬರೆಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹನುಮಂತ, ನಾಗೇಂದ್ರಪ್ಪ ಮಟಮಾರಿ, ಶೇಖರ ವಾರದ, ಬೀರಪ್ಪ, ಆಂಜನೇಯ್ಯ, ಬಸವರಾಜ್, ನಾಗರಾಜ್ ಮಡ್ಡಿಪೇಟೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.