ರಾಯಚೂರು | ಜಿ+2 ಆಶ್ರಯ, ಆವಾಸ್ ಯೋಜನೆಗಳ ಪ್ರಗತಿ ಪರಿಶೀಲನೆ

ರಾಯಚೂರು: ಎಎಚ್‌ಪಿ ಜಿ+2 ಆಶ್ರಯ ಮತ್ತು ದೇವರಾಜ್ ಅರಸ್ ಆವಾಸ್ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಸೆ.15 ರಂದು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ ಪಾಲಿಕೆಯ ಆಯುಕ್ತ ಜುಬಿನ್ ಮೊಹಪಾತ್ರ ಅವರು ಮಾತನಾಡಿ, ಈ ವಸತಿ ಯೋಜನೆಗಳು ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳಾಗಿರುವುದರಿಂದ ಜಿಲ್ಲಾಧಿಕಾರಿಗಳ ನಿರ್ದೇಶನಗಳನ್ನು ತಪ್ಪದೆ ಪಾಲನೆ ಮಾಡಬೇಕು ಮತ್ತು ಅನುಷ್ಠಾನವನ್ನು ತ್ವರಿತಗೊಳಿಸಬೇಕು ಎಂದು ಸೂಚಿಸಿದರು.
ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ತ್ವರಿತ ಮತ್ತು ಪಾರದರ್ಶಕವಾಗಿ ನಡೆಯಬೇಕು ಎಂದು ಸೂಚನೆ ನೀಡಿದ ಅವರು, ಸ್ವೀಕರಿಸಿದ ಅರ್ಜಿಗಳ ಪರಿಶೀಲನೆಗಾಗಿ ವಿಶೇಷ ತಂಡಗಳನ್ನು ರಚಿಸಲು ಆದೇಶಿಸಿದರು.
ಯೋಜನೆಗಳು ನಿಗದಿತ ಸಮಯದಲ್ಲಿ ಪೂರ್ಣಗೊಳ್ಳುವಂತೆ ಸೂಕ್ತ ಮೇಲ್ವಿಚಾರಣೆ ಖಚಿತಪಡಿಸಿಕೊಳ್ಳಬೇಕು ಎಂದರು.
ಸಭೆಯಲ್ಲಿ ಆಡಳಿತ ಉಪ ಆಯುಕ್ತ ಸಂತೋಷ ರಾಣಿ, ತಹಶೀಲ್ದಾರ ಸುರೇಶ್ ವರ್ಮಾ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು, ಪಾಲಿಕೆಯ ಎಂಜಿನಿಯರಿಂಗ್ ಹಾಗೂ ಆಶ್ರಯ ವಿಭಾಗದ ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಪಿಎಂಸಿ ಸಿಬ್ಬಂದಿ ಉಪಸ್ಥಿತರಿದ್ದರು.