ರಾಯಚೂರು | ದೇಶ ಕಟ್ಟುವುದೆಂದರೆ ಕಟ್ಟಡ ನಿರ್ಮಾಣವಲ್ಲ, ಜನರ ಜೀವನ ಕಟ್ಟುವುದು: ಹದ್ದಿನಾಳ

ರಾಯಚೂರು: ದೇಶ ಕಟ್ಟುವುದು ಎಂದರೆ ಬಿಲ್ಡಿಂಗ್ ಕಟ್ಟುವುದಲ್ಲ, ಜನರ ಜೀವನ ಕಟ್ಟುವುದಾಗಿದೆ ಎಂದು ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯನವರು ಮಾತು ಸತ್ಯವಾಗಿದೆ ಎಂದು ಹಿರಿಯ ಪತ್ರಕರ್ತ ಭೀಮರಾಯ ಹದ್ದಿನಾಳ ಹೇಳಿದರು.
ನಗರದ ಕನ್ನಡ ಭವನದಲ್ಲಿ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಿದ್ದ ಸರ್ ಎಂ. ವಿಶ್ವೇಶ್ವರಯ್ಯ ಜನ್ಮಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ಮೋಕ್ಷಗುಂಡಂ ವಿಶ್ವೇಶ್ವರಯ್ಯ ಆಂಧ್ರ ಮೂಲದವರಾದರೂ, ಕನ್ನಡ ಸೇವೆಗೆ ಅಪಾರ ಕೊಡುಗೆ ನೀಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಅವರ ಸೇವೆ ಮಹತ್ವದ್ದಾಗಿದೆ ಎಂದರು.
ವಿಶ್ವೇಶ್ವರಯ್ಯ ಶಿಸ್ತಿನ ಸಿಪಾಯಿ, ಸರಳ ಜೀವನ ನಡೆಸಿದ ಉದಾತ್ತ ಚಿಂತಕರು. ತಂತ್ರಜ್ಞಾನ ಇಲ್ಲದ ಕಾಲದಲ್ಲೇ ತಮ್ಮ ಮೇಧಾಶಕ್ತಿಯಿಂದ ದೇಶದಲ್ಲಿ ಡ್ಯಾಂಗಳು, ಕುಡಿಯುವ ನೀರಿನ ಯೋಜನೆಗಳನ್ನು ರೂಪಿಸಿದವರು. ಬ್ರಿಟಿಷರು ಭಾರತದಿಂದ ಯಾವುದನ್ನೂ ಕಸಿದುಕೊಳ್ಳದಂತೆ ಯೋಜನೆ ಮಾಡಿದ ಪ್ರಾಮಾಣಿಕ ವ್ಯಕ್ತಿ ಎಂದು ಪ್ರಶಂಸಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ ಮಾತನಾಡಿ, “ಅಭಿಯಂತರರ ದಿನಾಚರಣೆ ಅರ್ಥಪೂರ್ಣ ಆಗಬೇಕೆಂದರೆ, ಅಭಿಯಂತರರು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಮಾಡಿದಾಗ ಮಾತ್ರ ದೇಶ ಸುಭದ್ರವಾಗಿ ಕಟ್ಟಲ್ಪಡುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಅಭಿಯಂತರರು ಅಶೋಕ್ ಕುಮಾರ್ ಮೈದಾರಕರ, ಜಿಕಸಾಪ ಸಂಘಟನಾ ಕಾರ್ಯದರ್ಶಿ ನಾಗಪ್ಪ ಹೋರಾಪ್ಯಾಟಿ ಉಪಸ್ಥಿತರಿದ್ದರು. ಗೌರವ ಸನ್ಮಾನವನ್ನು ದಶಕಂಠ ಮತ್ತು ರಮೇಶ್ ಭೋಸ್ಲೆ ಸ್ವೀಕರಿಸಿದರು.
ಹಿರಿಯ ಸಾಹಿತಿಗಳು ವೀರ ಹನುಮಾನ, ಬಾಬು ಬಂಡಾರಿಗಲ್, ಆಂಜನೇಯ ಜಾಲಿಬೆಂಚಿ, ಹೆಚ್. ಹೆಚ್. ಮ್ಯಾದರ್, ಈರಣ್ಣ ಬೆಂಗಾಲಿ, ರಾಮಣ್ಣ ಬೋಯರ, ರೇಖಾ ಪಾಟೀಲ್, ಯಶೋಧ, ದೇವೇಂದ್ರಮ್ಮ, ಮಹದೇವ ಪಾಟೀಲ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರತಿಭಾ ಗೋನಾಳ್ ಪ್ರಾರ್ಥನೆ ಸಲ್ಲಿಸಿದರು, ವಿಜಯರಾಜೇಂದ್ರ ನಿರೂಪಿಸಿದರು, ರಾವುತ್ ರಾವ್ ವಂದಿಸಿದರು.