ತಾವರೆಕೆರೆ | ಬಾಲಕಿಯ ಅತ್ಯಾಚಾರ, ಹತ್ಯೆ: ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

ಸಾಂದರ್ಭಿಕ ಚಿತ್ರ | PC : freepik.com
ಬೆಂಗಳೂರು : ರಾಜಧಾನಿ ಬೆಂಗಳೂರು ಹೊರವಲಯದ ತಾವರೆಕೆರೆ ಗ್ರಾಮದಲ್ಲಿ 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ಪ್ರಕರಣದಡಿ ಆರೋಪಿಯನ್ನು ತಾವರೆಕೆರೆ ಠಾಣಾ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಜು.9ರಂದು ಬಾಲಕಿಯ ಪೋಷಕರು ಕೆಲಸಕ್ಕೆ ಹೋದಾಗ ಈ ಘಟನೆ ನಡೆದಿದೆ. ಹತ್ಯೆಗೀಡಾದ ಬಾಲಕಿ, ಕೊಪ್ಪಳ ಮೂಲದ ದಂಪತಿಯ ಮಗಳಾಗಿದ್ದು, ಆರೋಪಿ ರಾಯಚೂರು ಮೂಲದವನು. ಬಾಲಕಿಯ ಪೋಷಕರ ಬಗ್ಗೆ ಆತನಿಗೆ ಮೊದಲೇ ಗೊತ್ತಿತ್ತು ಎನ್ನಲಾಗಿದೆ. ಬು.9ರ ರಾತ್ರಿಯೇ ತಾವರೆಕೆರೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ವ್ಯಕ್ತಿಯ ದ್ವಿಚಕ್ರ ವಾಹನ ಹಾಗೂ ಮೊಬೈಲ್ ಕಳವು ಮಾಡಿದ್ದ. ಕಳವು ಮಾಡಿದ ದ್ವಿಚಕ್ರ ವಾಹನದಲ್ಲೇ ಆತ ಜು.9ರ ಬುಧವಾರ ಮಧ್ಯಾಹ್ನ ಬಾಲಕಿಯ ಮನೆಯ ಬಳಿ ಬಂದಿದ್ದ. ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಬಳಿಕ ಹತ್ಯೆ ನಡೆಸಿ ಮನೆಯಲ್ಲಿ ಇದ್ದ ಸಿಲಿಂಡರ್ ಹೊತ್ತೊಯ್ದಿದ್ದ ಎಂಬುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿರುವುದಾಗಿ ಗೊತ್ತಾಗಿದೆ.