ದೇವದುರ್ಗ ತಾಲೂಕು ಕ್ಷೀರಕ್ರಾಂತಿಗೆ ಹೊಸ ಮುನ್ನುಡಿ ಬರೆಯಲಿ: ಸಂಸದ ಜಿ.ಕುಮಾರ ನಾಯಕ

ದೇವದುರ್ಗ : ತಾಲೂಕಿನ ಮ್ಯಾಕಲದೊಡ್ಡಿ ಮತ್ತು ಸೋಮನಮರಡಿ ಗ್ರಾಮಗಳ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘಗಳಿಗೆ ರಾಯಚೂರು-ಯಾದಗಿರಿ ಲೋಕಸಭಾ ಕ್ಷೇತ್ರದ ಸಂಸದ ಜಿ. ಕುಮಾರ ನಾಯಕ ಅವರು ಸೋಮವಾರ ಭೇಟಿ ನೀಡಿದರು.
ಈ ವೇಳೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 152 ಹಾಲು ಸಹಕಾರಿ ಸಂಘಗಳು ಇದ್ದು, ಅದರಲ್ಲಿ ದೇವದುರ್ಗ ತಾಲೂಕಿನಲ್ಲಿ ಕೇವಲ 17 ಸಂಘಗಳಷ್ಟೇ ಇರುವುದನ್ನು ಉಲ್ಲೇಖಿಸಿದ ಅವರು, ಮಹಿಳೆಯರು ಆರ್ಥಿಕವಾಗಿ ಸದೃಢರಾಗಲು ಹೈನುಗಾರಿಕೆ ಉತ್ತಮ ಆಯ್ಕೆಯಾಗಿದೆ ಎಂದರು.
ವ್ಯವಸಾಯದ ಜೊತೆಗೆ ಹಾಲು ಉತ್ಪಾದನೆಯಲ್ಲಿ ತೊಡಗಿಕೊಂಡರೆ ಮಹಿಳೆಯರು ಸ್ವಾವಲಂಬಿಗಳಾಗಬಹುದು ಎಂದು ಅಭಿಪ್ರಾಯಪಟ್ಟರು.
ಇನ್ನೂ, ಕೆಎಂಎಫ್ ಸಂಸ್ಥೆಯಿಂದ ಪಶುವೈದ್ಯರ ನೇಮಕ, ಸಾಲ ಸೌಲಭ್ಯ, ಗ್ರಾಮ ಪಂಚಾಯತ್ ಮಟ್ಟದಲ್ಲಿ ಶೆಡ್‌ಗಳ ನಿರ್ಮಾಣ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹಾಲು ಒಕ್ಕೂಟದ ಉಪಾಧ್ಯಕ್ಷ ಎನ್.ಸತ್ಯನಾರಾಯಣ, ನಿರ್ದೇಶಕರು ಅಮರಗುಂಡಪ್ಪ, ಪ್ರವೀಣ್ ಕುಮಾರ್, ವ್ಯವಸ್ಥಾಪಕ ನಿರ್ದೇಶಕ ಜೆ.ಕೆ. ಯರಿಸ್ವಾಮಿ, ಕೆಎಂಎಫ್ ನಿರ್ದೇಶಕ ಪ್ರಭುಶಂಕರ್, ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.