ಕೋಮುವಾದ ಎಂಬ ವಾಸಿಯಾಗದ ರೋಗಕ್ಕೆ ಮದ್ದು ಎಲ್ಲಿದೆ?

ರಾಜ್ಯ ವಿಧಾನ ಸಭೆಯ ಚುನಾವಣೆಗೆ ಇನ್ನು ಮೂರು ವರ್ಷ ಇದೆ. ಕಳೆದ ವಿಧಾನಸಭಾ ಚುನಾವಣೆಯ ಸೋಲಿನಿಂದ ಕಂಗಾಲಾದವರು ಸಹಜವಾಗಿ ಮುಂದಿನ ಸಲವಾದರೂ ಗೆದ್ದು ಅಧಿಕಾರಕ್ಕೆ ಬರಬೇಕೆಂದು ಬಯಸುವುದು ಸಹಜ.ರಾಜಕೀಯ ಅಧಿಕಾರದಿಂದ ಅನಾಯಾಸವಾಗಿ ದಕ್ಕುವ ಸಂಪತ್ತಿನ ಸಂಗ್ರಹಕ್ಕೆ ಮತ್ತಷ್ಟು ಸೇರಿಸುವ ಅವಕಾಶ, ತಲೆ ಮಾರುಗಳಿಗಾಗುವಷ್ಟು ಆಸ್ತಿ, ಪಾಸ್ತಿಗಳ ಸಂಗ್ರಹ, ಯಾವ ಪರಿಶ್ರಮವೂ ಇಲ್ಲದೇ ಸಿಗುವ ಸುಖ, ಇವನ್ನೆಲ್ಲ ಯಾರು ಕಳೆದುಕೊಳ್ಳಲು ಸಾಧ್ಯ? ಭಾರತೀಯರನ್ನು ಹಾಗೂ ಕನ್ನಡಿಗರನ್ನು ಜಾತಿ, ಮತದ ಹೆಸರಿನಲ್ಲಿ ಒಡೆದರೆ ಸಾಕು. ಯಾವ ಗ್ಯಾರಂಟಿಯೂ ಬೇಕಾಗಿಲ್ಲ. ಮತದ ಮತ್ತೇರಿಸಿಬಿಟ್ಟರೆ ಜನ ಬೇರೇನನ್ನೂ ಕೇಳುವುದಿಲ್ಲ.
ಅನ್ನಭಾಗ್ಯ, ಗ್ಯಾರಂಟಿಯಂಥ ಜನಪರವಾದ ಕಾರ್ಯಕ್ರಮಗಳು ಇಲ್ಲದಾಗ ಅಥವಾ ಅವುಗಳು ತಮ್ಮ ತಾತ್ವಿಕ ನಿಲುಗಳಿಗೆ ಹೊಂದುವುದಿಲ್ಲ ಎಂದು ಕಂಡು ಬಂದಾಗ ಉರಿಗೌಡ, ನಂಜೇಗೌಡರಂಥ ಪಾತ್ರಗಳ ಸೃಷ್ಟಿ ಅನಿವಾರ್ಯವಾಗುತ್ತದೆ. ಅವುಗಳು ಠುಸ್ಸೆಂದಾಗ ಹೊಸ,
ಹೊಸ ಐಡಿಯಾಗಳನ್ನು ಹುಡುಕಿ ಜಾರಿಗೆ ತರುವುದೊಂದೇ ಉಳಿದ ದಾರಿಯಾಗುತ್ತದೆ. ಮಂಡ್ಯದ ಇತ್ತೀಚಿನ ವಿದ್ಯಮಾನಗಳನ್ನು ಸೂಕ್ಷ್ಮ್ಮವಾಗಿ ಅವಲೋಕಿಸಿದರೆ ಕಳವಳಕಾರಿ ಬೆಳವಣಿಗೆಗಳು ಕಣ್ಣ ಮುಂದೆ ಬಂದು ನಿಲ್ಲುತ್ತವೆ.
ಮಂಗಳೂರು ನಂತರ ಮಂಡ್ಯವನ್ನು ಕೋಮುವಾದಿ ಸಂಘಟನೆಗಳು ತಮ್ಮ ಪ್ರಯೋಗ ಶಾಲೆಯನ್ನಾಗಿ ಮಾಡುವ ಯೋಜನೆ ಇಂದು ಮತ್ತು ನಿನ್ನೆಯದಲ್ಲ. ಇದು ತುಂಬಾ ಹಳೆಯ ಕನಸು. ಕರ್ನಾಟಕವನ್ನು ತಮ್ಮ ಪರಿಕಲ್ಪನೆಯ ಗುಜರಾತ್ ಮಾದರಿಯ ಮನುವಾದಿ ಹಿಂದುತ್ವದ ಪ್ರಯೋಗ ಶಾಲೆಯನ್ನಾಗಿ ಮಾಡುವ ಕಾರ್ಯ ಕುತಂತ್ರದ ಭಾಗವಾಗಿ ಉತ್ತರ ಕರ್ನಾಟಕದ ಲಿಂಗಾಯತ ಸಮುದಾಯ ಹಾಗೂ ಹಳೆ ಮೈಸೂರಿನ ಒಕ್ಕಲಿಗ ಸಮುದಾಯಗಳನ್ನು ತಮ್ಮತ್ತ
ಸೆಳೆದುಕೊಳ್ಳಲು ಮಸಲತ್ತು ಮಾಡುತ್ತಲೇ ಇವೆ. ಲಿಂಗಾಯತರ ಮತಗಳಿಸಲು ಯಡಿಯೂರಪ್ಪನವರನ್ನು ಬಳಸಿಕೊಳ್ಳಲಾಯಿತು. ಮುಂದೆ ಅವರ ಗತಿ ಏನಾಯಿತೆಂಬುದನ್ನು ವಿವರಿಸಬೇಕಾಗಿಲ್ಲ. ಬಸವಣ್ಣನವರ ಪ್ರಭಾವವಿರುವ ಲಿಂಗಾಯತರು ತಮ್ಮ ನಿರೀಕ್ಷೆಯಂತೆ ಬಲೆಗೆ ಬೀಳಲಿಲ್ಲ. ಇನ್ನೊಂದೆಡೆ ಒಕ್ಕಲಿಗರನ್ನು ಸೆಳೆದುಕೊಳ್ಳಲು ಅವರ ಕೋಟೆಯಾದ ಮಂಡ್ಯ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಅದಕ್ಕೆ ಮೊದಲ ಅಡ್ಡಿಯಾದ ಟಿಪ್ಪು ಸುಲ್ತಾನರ ತೇಜೋವಧೆ ಮಾಡಲು ಕಟ್ಟು ಕತೆಗಳನ್ನು ಕಟ್ಟಲಾಯಿತು. ಎರಡನೇಯದಾಗಿ ದೇವೇಗೌಡರ ಪ್ರಭಾವವನ್ನು ಕಡಿಮೆ ಮಾಡಲು ತಂತ್ರ ರೂಪಿಸಲಾಯಿತು. ಇದು ಅತ್ಯಂತ ಸೂಕ್ಷ್ಮವಾಗಿ ರೂಪಿಸಿದ ತಂತ್ರ, ಅದು ಈಗ ನಿಧಾನವಾಗಿ ಫಲ ಕೊಡುತ್ತಿದೆ. ಕುಮಾರ ಸ್ವಾಮಿ ಅವರಿಗೆ ತಾತ್ಕಾಲಿಕವಾಗಿ ಮಂತ್ರಿ ಸ್ಥಾನವನ್ನು ನೀಡಿ ಅವರ ಕೋಟೆಯನ್ನೇ ಕಬಳಿಸುವ ತಂತ್ರ ಸಫಲವಾಗುತ್ತಿದೆ. ಮದ್ದೂರಿನ ಗಣೇಶೋತ್ಸವ ಘಟನೆ ಇದಕ್ಕೆ ಒಂದು ಉದಾಹರಣೆ. ದೇವೇಗೌಡರು, ಕುಮಾರ ಸ್ವಾಮಿ ಅವರ ಕೋಟೆ ಕುಸಿತದ ಆರಂಭ ಇದು. ಕೋಮುವಾದಿಗಳ ಸ್ನೇಹ, ಗೌಡರ ಪಾಲಿಗೆ ಮಾರಕವಾಗಲಿದೆ. ಜೀವನದಲ್ಲಿ ಮರೆಯಲಾಗದ ಪಾಠವಾಗಲಿದೆ.
ಇದು ಕೇವಲ ಮದ್ದೂರಿನ ಘಟನೆ ಮಾತ್ರವಲ್ಲ ಮಂಡ್ಯ ಜಿಲ್ಲೆಯ ಗೌಡರ ಸೀಮೆಯನ್ನು ಗೆಲ್ಲಲು ತುಂಬ ಹಿಂದೆಯೇ ರೂಪಿಸಿದ ಕಾರ್ಯತಂತ್ರ.ಕೆ.ವಿ.ಶಂಕರೇಗೌಡರು, ಜಿ.ಮಾದೇಗೌಡರು, ಪುಟ್ಟಣ್ಣಯ್ಯ, ಎ.ಎನ್. ಮೂರ್ತಿರಾಯರು, ಬೆಸಗರಹಳ್ಳಿ ರಾಮಣ್ಣ ನವರು, ಹೀಗೇ ಹಲವಾರು ಜನಪರ ಕಾಳಜಿಯ ರಾಜಕೀಯ ಮುತ್ಸದ್ದಿಗಳು ಬಂದ ಮಂಡ್ಯ ಜಿಲ್ಲೆಯ ದಿಕ್ಕು ಬದಲಿಸಲು ದಶಕಗಳಿಂದಲೇ ಹುನ್ನಾರ ನಡೆಯುತ್ತಲೇ ಬಂದಿದೆ.ಮಸೀದಿಯ ಮುಂದೆ ಮೆರವಣಿಗೆ ಮತ್ತು ಕಲ್ಲು ತೂರಾಟ ಕೂಡ ಇದೇ ಮೊದಲಲ್ಲ. ನಾನು ಚಿಕ್ಕವನಾಗಿದ್ದಾಗಿನಿಂದಲೂ ಇಂಥದನ್ನು ನೋಡುತ್ತಿರುವೆ. ಅಂದಿನ ಅವಿಭಜಿತ ಬಿಜಾಪುರ ಜಿಲ್ಲೆಯ ಬಾಗಲಕೋಟೆ ಬಾಗೇವಾಡಿ ಮೊದಲಾದ ಕಡೆ ಪ್ರತಿವರ್ಷ ಆರೆಸ್ಸೆಸ್ ಮಸೀದಿಯ ಮುಂದೆ ಪಥ ಸಂಚಲನ ನಡೆಸಲು ಪಟ್ಟು ಹಿಡಿಯುತ್ತಿತ್ತು. ಪಥ ಸಂಚಲನದ ಮಾರ್ಗವನ್ನು ಬದಲಿಸಲು ಪೊಲೀಸರು ಪರಿ ಪರಿಯಾಗಿ ಕೇಳಿಕೊಂಡರೂ ಅವರು ಒಪ್ಪುತ್ತಿರಲಿಲ್ಲ. ಪರವಾನಿಗೆ ಪಡೆದ ನಂತರವೂ ಪಥ ಸಂಚಲನವನ್ನು ಮಾಡುತ್ತ ಮುಂದೆ ಹೋದರೆ ಯಾವುದೇ ಸಮಸ್ಯೆ ಇಲ್ಲ. ಆದರೆ ಗಂಟೆಗಟ್ಟಲೇ ವಾದ್ಯ ಬಾರಿಸುತ್ತ ನಿಲ್ಲುತ್ತಿದ್ದರು. ಮುಸಲ್ಮಾನರ ನಮಾಝಿನ ಸಮಯಕ್ಕೆ ವಾದ್ಯ ಬಾರಿಸಿ ಕೆಣಕುವುದು ಇವರ ಉದ್ದೇಶ. ಈಗಂತೂ ಭಯಾನಕವಾದ ಡಿಜೆಗಳು ಬಂದಿವೆ. ಅವುಗಳ ಭೀಕರ ಸಪ್ಪಳಕ್ಕೆ ವಯೋವೃದ್ಧರಲ್ಲಿ ಹೃದಯಾಘಾತವಾದರೆ ಅಚ್ಚರಿ ಪಡಬೇಕಿಲ್ಲ. ಮದ್ದೂರಿನಲ್ಲಿ ತಾಸುಗಟ್ಟಲೇ ಡಿಜೆ ಅಬ್ಬರಿಸುತ್ತ ಒಂದೇ ಜಾಗದಲ್ಲಿ ನಿಂತರೆಂದು ಅನೇಕರು ಹೇಳುತ್ತಾರೆ. ಅಲ್ಲಿ ಕಲ್ಲು ಯಾರೇ ತೂರಿರಲಿ ಅದು ಖಂಡನೀಯ. ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ.
ಇದೆಲ್ಲ ಎಲ್ಲರಿಗೂ ಗೊತ್ತಿರುವ ಸಂಗತಿ. ಗೊತ್ತಾಗಬೇಕಾದ ಸಂಗತಿ ಅಂದರೆ ಬಿಜೆಪಿ ಮಂಡ್ಯವನ್ನೇ ಆಯ್ದು ಕೊಂಡದ್ದೇಕೆ?. ಕರ್ನಾಟಕದಲ್ಲಿ ಈ ವರೆಗೆ ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಆಗಿಲ್ಲ. ಆಪರೇಷನ್ ಕಮಲ ಇಲ್ಲವೇ ಜೆಡಿಎಸ್ ಆಸರೆ ಅನಿವಾರ್ಯವಾಗಿದೆ. ಈ ಅನಿವಾರ್ಯತೆ ಹೇಗಿದೆಯೆಂದರೆ ಜೆಡಿಎಸ್ ಜೊತೆಗಿನ ಹೊಂದಾಣಿಕೆಗೆ
ಭಾರೀ ಬೆಲೆಯನ್ನು ತೆರಬೇಕಾಗುತ್ತದೆ. ಅಂದರೆ ಕುಮಾರಣ್ಣ ಮುಖ್ಯ ಮುಖ್ಯಮಂತ್ರಿ ಕುರ್ಚಿಗೆ ಪಟ್ಟು ಹಿಡಿಯುತ್ತಾರೆ. ಈ ಅನಿವಾರ್ಯತೆ ತಪ್ಪಬೇಕೆಂದರೆ ಜೆಡಿಎಸ್ ಪಕ್ಷವನ್ನೇ ಮುಗಿಸಿ ಅದರ ಓಟ್ ಬ್ಯಾಂಕನ್ನು ಕಬ್ಜಾ ಮಾಡಿಕೊಳ್ಳುವುದು ಅದರ ಕಾರ್ಯಕುತಂತ್ರವಾಗಿದೆ. ಅದರ ಭಾಗವಾಗಿ ಮಂಡ್ಯ ಜಿಲ್ಲೆಯಲ್ಲಿ ಇವೆಲ್ಲ ಘಟನೆಗಳು ನಡೆಯುತ್ತಿವೆ.
ಜನ ಸಾಮಾನ್ಯರನ್ನು ಜಾತಿ, ಮತದ ಹೆಸರಿನಲ್ಲಿ ವಿಭಜಿಸಲು ಹೊಂಚು ಹಾಕಿ ಕಾಯುತ್ತಿರುವವರಿಗೆ ಹಬ್ಬಗಳು ಬಂದರೆ ಹಾಲು ಕುಡಿದಷ್ಟು ಸಂತಸವಾಗುತ್ತದೆ. ಈ ಹಬ್ಬಗಳನ್ನು ತಮ್ಮ ಗುಪ್ತ ರಾಜಕೀಯ ಕಾರ್ಯಸೂಚಿಯ ಜಾರಿಗಾಗಿ ಬಳಸಿಕೊಳ್ಳುವ ಇವರು ಈ ಸೂಕ್ಷ್ಮ ಸಂದರ್ಭವನ್ನು ಬಳಸಿಕೊಂಡು ಕಲಹದ ಕಿಡಿಯನ್ನು ಹೊತ್ತಿಸುತ್ತಾರೆ.ಅದರ ಭಾಗವಾಗಿ ಶೂದ್ರ ಯುವಕರಿಗೆ ಗಣವೇಷ ಹಾಕಿ ಕೈಯಲ್ಲಿ ಲಾಠಿ ಕೊಟ್ಟು ಕಳಿಸುತ್ತಾರೆ. _ ಹಬ್ಬಗಳೆಂದರೆ ತಮ್ಮ ರಾಜಕೀಯ ಅಜೆಂಡಾದ ಸುತ್ತ ನಿರ್ದಿಷ್ಟ ಸಮುದಾಯದ ಜನರನ್ನು ಒಟ್ಟುಗೂಡಿಸುವ ಒಂದು ಸಂದರ್ಭ ಮಾತ್ರ. ನಮ್ಮ ರಾಜ್ಯದ ಉದಾಹರಣೆಯನ್ನು ತೆಗೆದುಕೊಂಡರೆ ಮಂಗಳೂರು ನಂತರ ಮಂಡ್ಯ ಜಿಲ್ಲೆಯಲ್ಲಿ ಕಾಲೂರುವುದಕ್ಕಾಗಿ ಏನೆಲ್ಲ ನಡೆದಿವೆೆ.
ಹುಬ್ಬಳ್ಳಿಯಂಥ ನಗರದಲ್ಲಿ ವಿಶೇಷ ಪೊಲೀಸ್ ಬಂದೋಬಸ್ತ್ ಮಾಡಬೇಕಾಗುತ್ತದೆ. ಹಬ್ಬಗಳು ಮನುಷ್ಯರನ್ನು ಜೊತೆಗೂಡಿಸುವ ಕೊಂಡಿಯಾಗಬೇಕೇ ಹೊರತು ಒಡೆಯುವ ಕಿಡಿಯಾಗಬಾರದು. ಮನುಷ್ಯರನ್ನು ಕೋಮು ಹೆಸರಿನಲ್ಲಿ ಒಡೆಯುವ ಚುನಾವಣೆಯ ಓಟಿನ ರಾಜಕಾರಣಕ್ಕೆ ಗಣೇಶೋತ್ಸವ ಅಥವಾ ಯಾವ ಹಬ್ಬವಾಗಲಿ ಬಳಕೆಯಾಗಬಾರದು.
ನಾವೆಲ್ಲ ಚಿಕ್ಕವರಿದ್ದಾಗ ಗಣೇಶೋತ್ಸವ ಅಂದರೆ ಸಾಹಿತ್ಯೋತ್ಸವದಂತೆ ಇರುತಿತ್ತು. ಅನಕೃ, ಬೀಚಿ, ಬಸವರಾಜ ಕಟ್ಟೀಮನಿ, ಪಾಪು, ಬೆಟಗೇರಿ ಕೃಷ್ಣ ಶರ್ಮಾ, ತರಾಸು, ರಾರ್ ಬಹಾದ್ದೂರ, ಸಿದ್ದಯ್ಯ ಪುರಾಣಿಕ ಅವರಂಥವರನ್ನು ಕರೆಸಿ ಭಾಷಣ ಮಾಡಿಸುತ್ತಿದ್ದರು. ಈಗ ಗಣೇಶೋತ್ಸವ ಸ್ವರೂಪ ಬದಲಾಗಿದೆ. ಕೂಡಿ ಆಚರಿಸುವ ಹಬ್ಬಕ್ಕೂ ಪೊಲೀಸ್ ಕಾವಲು ಬೇಕಾಗಿದೆ. ಈ ಬಾರಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಬಿಜೆಪಿ ಜನಪ್ರತಿನಿಧಿಗಳೇ ಪಟ್ಟು ಹಿಡಿದಿದ್ದರಿಂದ ಪರಿಸ್ಥಿತಿ ಗಂಭೀರವಾಗಿತ್ತು.
ಹುಬ್ಬಳ್ಳಿಯ ಈದ್ಗಾ ಮೈದಾನ ಮುಂಚಿನಿಂದಲೂ ಸಂಘ ಪರಿವಾರದ ರಾಜಕೀಯ ಲಾಭಗಳಿಕೆಗೆ ಬಳಕೆಯಾಗುತ್ತಿದೆ. ಈ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವ ಸಂಬಂಧ ಗಲಾಟೆಯಾಗಿ ತಿಂಗಳಾನುಗಟ್ಟಲೆ ಕರ್ಫ್ಯೂ ಹೇರಲ್ಪಟ್ಟಾಗ ನಾನು ಹುಬ್ಬಳ್ಳಿಯಲ್ಲಿ ಇದ್ದೆ. ಆಗ ದೇಶಪಾಂಡೆ ನಗರದಲ್ಲಿ ಪೊಲೀಸ್ ಗೋಲಿಬಾರ್ ನಡೆದು ಐವರು ಯುವಕರು ಬೀದಿ ಹೆಣವಾಗಿದ್ದರು. ಅವರ ಮನೆಗಳ ದೀಪಗಳು ಆರಿ ಹೋದವು. ಇದರ ಲಾಭವಾಗಿದ್ದು ಬಿಜೆಪಿಗೆ. ನಂತರದ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತಲೇ ಬಂತು.
ಹಿಂದೂ-ಮುಸ್ಲಿಮ್ ವಿಭಜನೆಯಿಂದ ಹಿಂದೂ ಓಟ್ ಬ್ಯಾಂಕ್ ನಿರ್ಮಾಣವಾಯಿತು. ಹುಬ್ಬಳ್ಳಿ ಶಾಸಕ ಸ್ಥಾನ,ಲೋಕಸಭಾ ಸ್ಥಾನ, ಮಹಾನಗರ ಪಾಲಿಕೆ ಹೀಗೆ ಎಲ್ಲೆಡೆ ಬಿಜೆಪಿ ಗೆಲುವು ಸಾಧಿಸಿತು. ಕೊನೆಗೆ ಈ ವಿವಾದ ಶಾಂತಿಯುತವಾಗಿ ಬಗೆಹರಿಯಿತು. ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯೋತ್ಸವದಂದು ಧ್ವಜಾರೋಹಣ ಮಾಡಲಾಗುತ್ತದೆ.
ಈ ವಿವಾದ ತಣ್ಣಗಾಗುವುದರಲ್ಲಿ ಈಗ ಈದ್ಗಾ ಮೈದಾನದಲ್ಲಿ ಗಣೇಶೋತ್ಸವದಂದು ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಕೋಮುವಾದಿ ಶಕ್ತಿಗಳು ಹಠ ಹಿಡಿದು ಯಶಸ್ವಿಯಾಗಿವೆ. ಅವರೆಷ್ಟೇ ಪ್ರಚೋದನೆಯನ್ನು ಮಾಡಲಿ ಮುಸಲ್ಮಾನರು ಶಾಂತವಾಗಿ ತಮ್ಮ ಹಬ್ಬಗಳನ್ನು ತಾವು ಮಾಡಿಕೊಂಡು ನೆಮ್ಮದಿಯಿಂದ ಇದ್ದಾರೆ. ಈ ವರ್ಷ ಈದ್ ಮೆರವಣಿಗೆಯಲ್ಲಿ ಡಿಜೆ ಹಚ್ಚದಿರಲು ಅವರು ತಾವೇ ತೀರ್ಮಾನಿಸಿದರು.
ಹೋದ ವರ್ಷ ಈದ್ಗಾ ಮೈದಾನದ ಗಣೇಶ ಮೂರ್ತಿ ವಿಸರ್ಜನೆ ದಿನ ಬಿಜಾಪುರದ ಪ್ರಚೋದನಕಾರಿ ಭಾಷಣಗಳಿಗೆ ಹೆಸರಾದ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಭಾಷಣಕ್ಕೆ ಕರೆಸಿದರು. ಆತ ಪ್ರಚೋದನಕಾರಿ ಭಾಷಣ ಮಾಡಿದರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರಮೋದ್ ಮುತಾಲಿಕ್ ಮಾತನಾಡಿ, ‘ಮುಂದಿನ ವರ್ಷ ಮಸೀದಿಯಲ್ಲಿ ಗಣಪತಿ ಕೂರಿಸುತ್ತೇವೆ’ ಎಂದು ಹೇಳಿದ್ದರು. ಆದರೂ ಮುಸ್ಲಿಮರು ಪ್ರಚೋದಿತರಾಗಲಿಲ್ಲ.
ದೇಹವೇ ದೇಗುಲ ಎಂದು ಸಾರಿದ ಬಸವಣ್ಣನವರ ಕರ್ನಾಟಕದ ಒಂದು ನಗರದ ಇಂದಿನ ಪರಿಸ್ಥಿತಿ ಇದು ದೇವರು ಸರ್ವಾಂತರ್ಯಾಮಿ ಎಂದು ಹೇಳುವವರು, ಅಣುರೇಣು ತೃಣಕಾಷ್ಟದಲ್ಲಿ ದೇವರನ್ನು ಕಾಣುವವರು ಇಂಥ ಗಲಾಟೆಗೆ ಹೋಗುವುದಿಲ್ಲ.
ನಿಜವಾದ ಧಾರ್ಮಿಕರು, ದೈವ ಶ್ರದ್ಧೆ ಇರುವವರಿಗೆ ಮನಶ್ಶಾಂತಿಗಾಗಿ ದೇವರು ಬೇಕು. ಆದರೆ ದೇವರನ್ನು ಓಟಿನ ರಾಜಕಾರಣಕ್ಕೆ ಬಳಸಿಕೊಳ್ಳಲು ಹೊರಟವರಿಗೆ, ಧರ್ಮವನ್ನು ಮನಸ್ಸು ಒಡೆಯಲು ಉಪಯೋಗಿಸುವವರಿಗೆ ಸಾಮಾಜಿಕ ಶಾಂತಿಯನ್ನು ಕದಡುವುದೇ ಲಾಭದಾಯಕ ದಂಧೆಯಾಗಿದೆ. ಇಂಥವರೇ ಬಿಜೆಪಿಯ ಟಿಕೆಟ್ ಕೊಡಿಸುವುದಾಗಿ ಕೋಟಿ, ಕೋಟಿ ರೂ. ಕೊಳ್ಳೆ ಹೊಡೆದು ಅದನ್ನು ಮುಚ್ಚಿಕೊಳ್ಳಲು ದೇವರನ್ನು, ಧರ್ಮವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ನಾನು ಕಳೆದ ಎರಡು ದಶಕಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರೂ ಕಲಬುರಗಿ ಮತ್ತು ಹುಬ್ಬಳ್ಳಿಯ ಒಡನಾಟವಿದೆ.ಈ ನಗರಗಳಲ್ಲಿ ಈಗಲೂ ತಿಂಗಳಾನುಗಟ್ಟಲೆ ಕಳೆಯುತ್ತಿರುವೆ. ಒಂದು ಕಾಲದಲ್ಲಿ ಹುಬ್ಬಳ್ಳಿ ನಗರ ಬೆಂಗಳೂರು ನಂತರದ ರಾಜ್ಯದ ದೊಡ್ಡ ನಗರವೆಂದು ಹೆಸರಾಗಿತ್ತು.ಇದನ್ನು ‘ಚೋಟಾ ಮುಂಬೈ’ ಎಂದು ಕರೆಯುತ್ತಿದ್ದರು.
ಕರ್ನಾಟಕದ ಅದರಲ್ಲೂ ಉತ್ತರ ಕರ್ನಾಟಕದ ಆಯಕಟ್ಟಿನ ಜಾಗದಲ್ಲಿ ಇರುವ ಹುಬ್ಬಳ್ಳಿ ಸುತ್ತಮುತ್ತಲಿನ ಕಾರವಾರ, ಶಿರಸಿ, ದಾವಣಗೆರೆ, ಬಾಗಲಕೋಟೆ, ಬಿಜಾಪುರ, ಗದಗ, ಹಾವೇರಿ, ಬೆಳಗಾವಿ, ಹೊಸಪೇಟೆ, ಹಂಪಿ, ಗೋಕರ್ಣ, ಕೊಪ್ಪಳ ಮುಂತಾದ ಐತಿಹಾಸಿಕ ತಾಣಗಳಿಂದ ನೂರು ಕಿ.ಮೀ.ನಷ್ಟು ಸಮೀಪದಲ್ಲಿ ಇದೆ. ಹೀಗಾಗಿ ಸುತ್ತಲಿನ ಐದಾರು ಜಿಲ್ಲೆಗಳ ಜನರು ಕಳೆದ 70 ವರ್ಷಗಳಿಂದ ವ್ಯಾಪಾರ ವಹಿವಾಟುಗಳಿಗಾಗಿ ಹುಬ್ಬಳ್ಳಿಗೆ ಬರುತ್ತಾರೆ.
ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳು. ಹುಬ್ಬಳ್ಳಿ ವಾಣಿಜ್ಯ ಕೇಂದ್ರವಾದರೆ ಧಾರವಾಡ ಶೈಕ್ಷಣಿಕ ಕೇಂದ್ರವಾಗಿದೆ. ಆದರೆ, ಇಂಥ ಹುಬ್ಬಳ್ಳಿಯಲ್ಲಿ ರಾಜಕೀಯ ಕಾರಣಗಳಿಗಾಗಿ ಎಪ್ಪತ್ತರ ದಶಕದಿಂದ ಆಗಾಗ ಕೋಮು ಗಲಭೆಗಳು ನಡೆಯುತ್ತ ಬಂದುದರಿಂದ ವ್ಯಾಪಾರ, ವಹಿವಾಟುಗಳಿಗೆ ಬಹುದೊಡ್ಡ ಪೆಟ್ಟು ಬಿದ್ದಿದೆ. ಇಲ್ಲಿನ ಬಹುತೇಕ ವ್ಯಾಪಾರ ಪಕ್ಕದ ಗದಗ ಮತ್ತು ಹಾವೇರಿಗಳಿಗೆ ಸ್ಥಳಾಂತರಗೊಂಡಿದೆ. ಕಳೆದ ಇಪ್ಪತ್ತು ವರ್ಷಗಳಿಂದ ಯಾವುದೇ ಹೊಸ ಉದ್ದಿಮೆ ಇಲ್ಲಿ ಆರಂಭವಾಗಿಲ್ಲ. ಇಲ್ಲಿ ಉದ್ಯಮ ಸ್ಥಾಪಿಸಲು ಉದ್ಯಮಿಗಳು ಹಿಂಜರಿಯುತ್ತಾರೆ. ಸದಾ ಗಲಾಟೆ,ಕರ್ಫ್ಯೂ ಕಿರಿಕಿರಿಯಿಂದ ಕೈಗಾರಿಕೆಗಳು ಇಲ್ಲಿ ಬರಲಿಲ್ಲ. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರು ಇತ್ತೀಚೆಗೆ ಮೆಡಿಕಲ್ ಕಾಲೇಜು ಆರಂಭಿಸಿದ್ದು ಕೂಡ ಧಾರವಾಡದಲ್ಲಿ. ಯಾಕೆಂದರೆ ಧಾರವಾಡ ಇಂದಿಗೂ ಯಾವುದೇ ಕೋಮು ಪ್ರಚೋದನೆಗೆ ಒಳಗಾಗದೆ ಶಾಂತ ನಗರವಾಗಿದೆ. ಹುಬ್ಬಳ್ಳಿ ಮಾತ್ರವಲ್ಲ ಕೆಲ ನಗರಗಳಲ್ಲಿ ಹಬ್ಬಗಳು ಬಂದವೆಂದರೆ ಆತಂಕ ಉಂಟಾಗುತ್ತದೆ. ಎಲ್ಲಿ, ಯಾರು, ಯಾವಾಗ, ಯಾಕೆ ಗಲಾಟೆ ಆರಂಭಿಸುತ್ತಾರೋ, ಎಲ್ಲೆಲ್ಲಿ ಮೆರವಣಿಗೆಗಳು ಸಾಗಿ, ಯಾವ ಪ್ರಾರ್ಥನಾಲಯಗಳ ಮುಂದೆ ಕರ್ಕಶ ಡಿಜೆ ಹಾಕಿ, ಅದ್ಯಾವುದೋ ದ್ವೇಷದ ಹಾಡು ಹಾಕಿ, ಕೈಯಲ್ಲಿ ಆಯುಧ ಹಿಡಿದುಕೊಂಡು ಗಲಾಟೆ ಮಾಡುತ್ತಾರೋ ಎಂದು ಹೆದರಿಕೆ ಉಂಟಾಗುತ್ತದೆ.
ಹಾಗೆ ನೋಡಿದರೆ ಒಂದು ಕಾಲದಲ್ಲಿ ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದ ಕಲ್ಯಾಣ ಕರ್ನಾಟಕದ ಕಲಬುರಗಿ ಈಗ ಹುಬ್ಬಳ್ಳಿಗೆ ಸರಿ ಸಾಟಿಯಾಗಿ ಅದನ್ನೂ ಮೀರಿ ಬೆಳೆಯುತ್ತಿದೆ.ಅಲ್ಲಿ ವಿಮಾನ ನಿಲ್ದಾಣವೂ ಬಂದಿದೆ. ವ್ಯಾಪಾರ ವಹಿವಾಟಗಳಿಗೆ ಮಾತ್ರವಲ್ಲ ಶೈಕ್ಷಣಿಕ , ಆರೋಗ್ಯ ಸೌಕರ್ಯಗಳಿಗೆ ಈಗ ಹೆಸರಾಗಿದೆ. ಇದಕ್ಕೆ ಕಾರಣ ಅಲ್ಲಿನ ಕೋಮು ಸೌಹಾರ್ದ. ಅಲ್ಲಿ ಮುಸ್ಲಿಮರು, ಲಿಂಗಾಯತರು, ಕೋಳಿ ಸಮಾಜದವರು, ದಲಿತರು, ಕ್ರೈಸ್ತರು, ಜೈನರು ಪರಸ್ಪರ ಪ್ರೀತಿ, ವಿಶ್ವಾಸದಿಂದ ಬದುಕುತ್ತಿದ್ದಾರೆ. ಇದು ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ಕರ್ಮಭೂಮಿಯಾದುರಿಂದ ಜನರ ನಡುವೆ ಪ್ರೀತಿ, ವಿಶ್ವಾಸ, ಬಾಂಧವ್ಯಕ್ಕೆ ಕೊರತೆಯಿಲ್ಲ. ಯಾವ ಪ್ರದೇಶದಲ್ಲಿ ಶಾಂತಿ ಮತ್ತು ನೆಮ್ಮದಿ ಇರುತ್ತದೋ ಆ ಪ್ರದೇಶ ಅಭಿವೃದ್ಧಿಯತ್ತ ದಾಪುಗಾಲಿಡುತ್ತದೆ. ಇದಕ್ಕೆ ಕಲಬುರಗಿ, ಬೀದರ್, ರಾಯಚೂರು ಪ್ರತ್ಯಕ್ಷ ಉದಾಹರಣೆ.
ಇಲ್ಲಿಯೂ ಜನರ ಮನಸ್ಸಿನಲ್ಲಿ ಹುಳಿ ಹಿಂಡಿ ಕೋಮು ಕಲಹ ಬೆಂಕಿ ಹಚ್ಚಲು ಕೋಮುವಾದಿ ಶಕ್ತಿಗಳು ಹಗಲೂ ರಾತ್ರಿ ಮಸಲತ್ತು ಮಾಡುತ್ತಿದ್ದರೂ ಕಲ್ಯಾಣ ಕರ್ನಾಟಕದ ಜನ ಅವರಿಗೆ ಮರುಳಾಗಿಲ್ಲ. ಮಾರ್ಚ್, ಎಪ್ರಿಲ್, ಮೇ, ಜೂನ್ ಸೇರಿ ಬಹುತೇಕ ತಿಂಗಳು ಕೆಂಡದಂಥ ಬಿಸಿಲಿದ್ದರೂ ಜನರ ಮನಸ್ಸು ಮಾತ್ರ ತಣ್ಣಗಿದೆ. ಇದಕ್ಕೆ ಕಾರಣ ಇಲ್ಲಿ ಬಸವಣ್ಣನವರ ಮತ್ತು ಸೂಫಿ ಸಂತ ಬಂದೇ ನವಾಜರ ಪ್ರಭಾವ, ಬೌದ್ಧ ಧರ್ಮದ ಜೀವಸೆಲೆ, ದಲಿತ ಮತ್ತು ಎಡಪಂಥೀಯ ಚಳವಳಿಗಳು ಹಾಗೂ ವೀರೇಂದ್ರ ಪಾಟೀಲ್, ಮಲ್ಲಿಕಾರ್ಜುನ ಖರ್ಗೆ, ಧರಂಸಿಂಗ್, ಶ್ರೀನಿವಾಸ ಗುಡಿ, ಗಂಗಾಧರ ನಮೋಶಿ ಅವರಂಥ ನಾಯಕತ್ವದ ಪ್ರಭಾವವೂ ಕಾರಣ ಎಂದರೆ ತಪ್ಪಲ್ಲ.
ಮುಂಬೈ ಮಹಾನಗರ ಗಣೇಶೋತ್ಸವಕ್ಕೆ ಹೆಸರಾಗಿದೆ. ಜನರು ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ. ಆದರೆ, ಎಲ್ಲಿಯೂ ಕೋಮು ಕಲಹದ ಕಿಡಿ ಕಾಣುವುದಿಲ್ಲ. ಪರಸ್ಪರ ಜಗಳವಾಡಲು ಕೂಡ ಸಮಯವಿಲ್ಲದ ಈ ಕಾಸ್ಮೋಪಾಲಿಟಿನ್ ನಗರದಲ್ಲಿ ಗಲಭೆಗಳು ನಡೆದೇ ಇಲ್ಲವೆಂದಲ್ಲು ನಡೆದರೂ ಬಹುಬೇಗ ಅದರಿಂದ ಹೊರಗೆ ಬಂದು ಜನರು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಮುಳುಗುತ್ತಾರೆ.ಶಿವಸೇನೆಯ ಬಾಳಾ ಠಾಕ್ರೆ ಕೂಡ ಭಾಷಣದಲ್ಲಿ ಏನೇ ಮಾತಾಡಿದರೂ ಮುಸ್ಲಿಮ್ ದ್ವೇಷಿಯಾಗಿರಲಿಲ್ಲ ಎಂದು ಮುಂಬೈನ ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ ನನಗೊಮ್ಮೆ ಹೇಳಿದ್ದರು.ಕೋಮುವಾದಿಗಳು ಎಷ್ಟೇ ಪ್ರಚೋದನೆ ಮಾಡಿದರೂ ಭಾರತವನ್ನು ಹಿಟ್ಲರ್‌ನ ಜರ್ಮನಿಯನ್ನಾಗಿ ಮಾಡಲು ಸಾಧ್ಯವಿಲ್ಲ ಎಂಬುದು ಸಾಬೀತಾಗುತ್ತಲೇ ಇದೆ.
ಹುಬ್ಬಳ್ಳಿಯಲ್ಲಿ ಮುಸಲ್ಮಾನರು ಸೇರಿದಂತೆ ಎಲ್ಲ ಸಮುದಾಯಗಳ ಜನರು ಸಾರ್ವಜನಿಕ ಗಣೇಶೋತ್ಸವ ಸಮಿತಿಯಲ್ಲಿ ಇದ್ದಾರೆ. ಉಳಿದಂತೆ ಕರ್ನಾಟಕದ ಬೇರೆ ಊರುಗಳಲ್ಲಿ ಮುಸಲ್ಮಾನ ಸಮಾಜದ ಗಣ್ಯ ವ್ಯಕ್ತಿಗಳೇ ಗಣೇಶೋತ್ಸವ ಸಮಿತಿಗಳ ಅಧ್ಯಕ್ಷರಾಗಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ ಉದಾಹರಣೆಗಳು ಸಾಕಷ್ಟಿವೆ. ವ್ಯಾಪಾರಿಗಳಿಗೂ ತಮ್ಮ ವ್ಯಾಪಾರ, ವಹಿವಾಟು ನಿರಾತಂಕವಾಗಿ ನಡೆಯಬೇಕು. ಉದ್ಯಮಿಗಳಿಗೆ ತಮ್ಮ ಉದ್ಯಮಗಳಿಗೆ ಧಕ್ಕೆ ಆಗಬಾರದು. ಹೀಗಾಗಿ ಕೋಮುವಾದಿ ಶಕ್ತಿಗಳಿಗೆ ನಿರಂತರವಾಗಿ ದ್ವೇಷದ ಬೆಂಕಿಯನ್ನು ಆರದಂತೆ ಇಡಲು ಸಾಧ್ಯವಿಲ್ಲ. ಆದರೆ ಕೆಲ ಕಾಲ ಅವರು ಸಾರ್ವಜನಿಕರ ನೆಮ್ಮದಿಗೆ ಭಂಗ ತರುತ್ತಾರೆ ಎಂಬುದೂ ನಿಜ.
ಇವರೆಷ್ಟೇ ಪ್ರಚೋದನೆ ಮಾಡಿದರೂ ಹಬ್ಬಗಳ ಸ್ವರೂಪ ಬದಲಾಗುತ್ತಿದೆ. ದೀಪಾವಳಿ ಬರೀ ಹಿಂದೂಗಳ ಹಬ್ಬವಾಗಿ ಉಳಿದಿಲ್ಲ. ಮೊಹರಮ್ ಅಂತೂ ಮೊದಲಿನಿಂದಲೂ ಮುಸಲ್ಮಾನರ ಮಾತ್ರವಲ್ಲ ಎಲ್ಲರ ಹಬ್ಬವಾಗಿದೆ. ನಮ್ಮ ಉತ್ತರ ಕರ್ನಾಟಕದಲ್ಲಿ ಲಿಂಗಾಯತರು, ಕುರುಬರು, ನಾಯಕರು, ದಲಿತರು ಸಂಭ್ರಮದಿಂದ ಮೊಹರಂ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ಕ್ರಿಸ್ಮಸ್ ಕೂಡ ಈಗ ಕ್ರೈಸ್ತರ ಹಬ್ಬ ಮಾತ್ರವಲ್ಲ, ದೀಪಾವಳಿಯ ಬೆಳಕು, ಕ್ರಿಸ್ಮಸ್‌ನ ಸಾಂತಾಕಾಸ್, ರಮಝಾನ್‌ನ ನಾನಾ ವಿಧದ ಭಕ್ಷ ಭೋಜನಗಳು ಯಾರಿಗೆ ಬೇಡ? ಯಾವುದೇ ಹಬ್ಬ ಬರಲಿ ವ್ಯಾಪಾರಿಗಳಿಗೆ ತಮ್ಮ ವ್ಯಾಪಾರ ಚೆನ್ನಾಗಿ ನಡೆಯಬೇಕು. ಜನರಿಗೂ ಸಂಭ್ರಮ ಬೇಕು.
ಹೀಗಾಗಿ ಹಬ್ಬಗಳನ್ನು ದುರುಪಯೋಗ ಮಾಡಿಕೊಳ್ಳುವ ರಾಜಕೀಯ ದಂಧೆ ಬಹಳ ಕಾಲ ನಡೆಯುವುದಿಲ್ಲ. ಗಣೇಶನ ಹೆಸರಿನಲ್ಲಿ ಗಲಾಟೆ ಮಾಡುವವರಿಗೆ ಗಣೇಶನ ಮೇಲೆ ಭಕ್ತಿಯಾಗಲಿ,ಶ್ರದ್ಧೆಯಾಗಲಿ ಇರುವುದಿಲ್ಲ. ಓಟಿಗಾಗಿ ಇಂಥ ಆಟಗಳನ್ನು ಅವರು ಆಡುತ್ತಾರೆ. ಅದು ಬಹಳ ದಿನ ನಡೆಯುವುದಿಲ್ಲ.