Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪ್ರಚಲಿತ
  5. ಪ್ರಶ್ನಿಸುವುದೇ ಅಪರಾಧವಾದ ಈ ದಿನಗಳು

ಪ್ರಶ್ನಿಸುವುದೇ ಅಪರಾಧವಾದ ಈ ದಿನಗಳು

ಸನತ್ ಕುಮಾರ ಬೆಳಗಲಿಸನತ್ ಕುಮಾರ ಬೆಳಗಲಿ26 Aug 2025 9:40 AM IST
share
ಪ್ರಶ್ನಿಸುವುದೇ ಅಪರಾಧವಾದ ಈ ದಿನಗಳು

ಅಸ್ಸಾಂ ಪೊಲೀಸರ ವರ್ತನೆ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿ ಮಾತ್ರವಲ್ಲ, ನ್ಯಾಯಾಲಯದ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ. ರಾಜದ್ರೋಹಕ್ಕೆ ಸಂಬಂಧಿಸಿದ 152ನೇ (ಕಲಂ) ಕಾಯ್ದೆಯ ಅನ್ವಯ ಎಫ್‌ಐಆರ್ ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಪತ್ರಕರ್ತರಿಬ್ಬರ ಮೇಲೆ ಯಾವುದೇ ಬಲವಂತದ ಕ್ರಮ ಬೇಡ ಎಂದು ಅಸ್ಸಾಮಿನ ಮೊರಿಗಾಂವ್ ಪೊಲೀಸರಿಗೆ ಆದೇಶ ನೀಡಿದ್ದರೂ ಕೂಡ ಗುವಾಹಟಿ ಪೊಲೀಸ್ ಅಪರಾಧ ವಿಭಾಗವು ಮತ್ತೊಂದು ಪ್ರಕರಣದಲ್ಲಿ ಪತ್ರಕರ್ತರಿಗೆ ಸಮನ್ಸ್ ನೀಡಿದೆ. ಹೀಗೆ ನ್ಯಾಯಾಲಯದ ಆದೇಶ ಉಲ್ಲಂಘಿಸಲಾಗಿದೆ.

ನೈಜ ಪ್ರಜಾಪ್ರಭುತ್ವದಲ್ಲಿ ಯಾವುದೇ ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದು ಅಪರಾಧವಲ್ಲ. ಪ್ರಶ್ನೆ ಎಂಥದೇ ಆಗಿರಲಿ ಸ್ವಾಗತಿಸುವುದು ಪ್ರಜಾಪ್ರಭುತ್ವದ ಮೂಲ ತತ್ವ. ತಾತ್ವಿಕ, ರಾಜಕೀಯ ಭಿನ್ನಾಭಿಪ್ರಾಯಗಳನ್ನು ಪ್ರಜಾಪ್ರಭುತ್ವ ವ್ಯವಸ್ಥೆ ಗೌರವಿಸುತ್ತದೆ. ಪ್ರಶ್ನೆಗಳನ್ನು ಅದು ಸ್ವಾಗತಿಸುತ್ತದೆ. ಆದರೆ, ಅದೇ ಪ್ರಜಾಪ್ರಭುತ್ವ ವ್ಯವಸ್ಥೆ ನಿರಂಕುಶ ಸರ್ವಾಧಿಕಾರಿಗಳ ಕೈಗೆ ಸಿಕ್ಕಾಗ ಏನಾಗುತ್ತದೆ ಎಂಬುದಕ್ಕೆ ಜಗತ್ತಿನಲ್ಲಿ ಹಲವಾರು ಉದಾಹರಣೆಗಳಿವೆ. ಅಡಾಲ್ಫ್ ಹಿಟ್ಲರ್ ಕೈಗೆ ಸಿಕ್ಕ ಜರ್ಮನಿ ಹಾಗೂ ಮುಸ್ಸೋಲಿನಿ ಕೈ ವಶವಾದ ಇಟಲಿ ಎಂಬ ದೇಶಗಳು ಹೇಗೆ ನರಕ ಯಾತನೆಯನ್ನು ಅನುಭವಿಸಿದವು ಎಂಬುದಕ್ಕೆ ಚರಿತ್ರೆಯೇ ಸಾಕ್ಷಿಯಾಗಿದೆ.

ಕಳೆದ ಹನ್ನೊಂದು ವರ್ಷಗಳ ಕಾಲಾವಧಿಯಲ್ಲಿ ಈ ಭಾರತದಲ್ಲಿ ನಡೆಯುತ್ತಿರುವುದನ್ನೆಲ್ಲ ಅವಲೋಕಿಸಿದರೆ ಎಲ್ಲವೂ ಸುಲಭವಾಗಿ ಅರ್ಥವಾಗುತ್ತದೆ. ಡಾ. ಸ್ಯಾಮುವೆಲ್ ಜಾನ್ಸನ್ ನುಡಿ ಮುತ್ತೊಂದು ಮತ್ತೆ ಮತ್ತೆ ನೆನಪಿಗೆ ಬರುತ್ತದೆ. ‘‘ದೇಶ ಭಕ್ತಿ ಎಂಬುದು ದುಷ್ಟರ ಕೊನೆಯ ಆಶ್ರಯ’’ ಎಂದು ಆತ ಹೇಳಿದ. ಈ ನಕಲಿ ದೇಶಭಕ್ತರ ದೃಷ್ಟಿಯಲ್ಲಿ ನಿಜವಾದ ದೇಶ ಭಕ್ತರು ದೇಶದ್ರೋಹದ ಆರೋಪ ಹೊತ್ತು ಜೈಲಿಗೆ ಹೋಗಬೇಕಾಗುತ್ತದೆ. ಈಗಾಗಲೇ ಆನಂದ್ ತೇಲ್ತುಂಬ್ಡೆ, ಸ್ಟ್ಯಾನ್ ಸ್ವಾಮಿ ಮೊದಲಾದವರು ಇಂಥ ಆರೋಪದ ಮೇಲೆ ಜೈಲಿಗೆ ಹೋಗಿ ನ್ಯಾಯಾಲಯದಿಂದ ಬಿಡುಗಡೆಯಾಗಿ ಬಂದಿದ್ದಾರೆ.ಈಗ ಈ ಪಟ್ಟಿಗೆ ಸೇರ್ಪಡೆಯಾದ ಹೊಸ ಹೆಸರುಗಳೆಂದರೆ ದೇಶದ ಹಿರಿಯ ಪತ್ರಕರ್ತರಾದ ಸಿದ್ಧಾರ್ಥ್ ವರದರಾಜನ್ ಮತ್ತು ಕರಣ್ ಥಾಪರ್. ಇವರ ಪ್ರಕರಣದಲ್ಲೂ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಬೇಕಾಯಿತು.

‘ದಿ ವೈರ್’ನ ಸಂಸ್ಥಾಪಕ ಸಂಪಾದಕ ಸಿದ್ಧಾರ್ಥ್ ವರದರಾಜನ್ ಮತ್ತು ಸಲಹಾ ಸಂಪಾದಕರಾದ ಕರಣ್ ಥಾಪರ್ ಅವರ ಮೇಲೆ ಅಸ್ಸಾಂ ಪೊಲೀಸರು ದೇಶದ್ರೋಹದ ಆರೋಪ ಹೊರಿಸಿ ಎಫ್‌ಐಆರ್ ದಾಖಲಿಸಿದ್ದಾರೆ. ‘ಆಪರೇಷನ್ ಸಿಂಧೂರ’ ಕುರಿತು ‘ದಿ ವೈರ್’ನಲ್ಲಿ ಪ್ರಕಟವಾದ ಲೇಖನಗಳು ಹಾಗೂ ಸಂದರ್ಶನಗಳಿಗೆ ಸಂಬಂಧಿಸಿದಂತೆ ಈ ಎಫ್‌ಐಆರ್ ದಾಖಲಿಸಲಾಗಿತ್ತು.ಸಮನ್ಸ್ ಕೂಡ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಇವರಿಬ್ಬರೂ ಸುಪ್ರೀಂ ಕೋರ್ಟ್‌ಗೆ ಹೋಗಿದ್ದರು. ಇವರ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಜಯ್‌ಮಲ್ಯ ಬಾಗ್ಚಿ ಅವರುಳ್ಳ ಪೀಠ ಇವರನ್ನು ಬಂಧಿಸಬಾರದು ಎಂದು ಅಸ್ಸಾಂ ಪೊಲೀಸರಿಗೆ ತಾಕೀತು ಮಾಡಿದೆ.

ವಾಸ್ತವವಾಗಿ ಅಸ್ಸಾಂ ಪೊಲೀಸರ ವರ್ತನೆ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿ ಮಾತ್ರವಲ್ಲ, ನ್ಯಾಯಾಲಯದ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ. ರಾಜದ್ರೋಹಕ್ಕೆ ಸಂಬಂಧಿಸಿದ 152ನೇ (ಕಲಂ) ಕಾಯ್ದೆಯ ಅನ್ವಯ ಎಫ್‌ಐಆರ್ ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಪತ್ರಕರ್ತರಿಬ್ಬರ ಮೇಲೆ ಯಾವುದೇ ಬಲವಂತದ ಕ್ರಮ ಬೇಡ ಎಂದು ಅಸ್ಸಾಮಿನ ಮೊರಿಗಾಂವ್ ಪೊಲೀಸರಿಗೆ ಆದೇಶ ನೀಡಿದ್ದರೂ ಕೂಡ ಗುವಾಹಟಿ ಪೊಲೀಸ್ ಅಪರಾಧ ವಿಭಾಗವು ಮತ್ತೊಂದು ಪ್ರಕರಣದಲ್ಲಿ ಪತ್ರಕರ್ತರಿಗೆ ಸಮನ್ಸ್ ನೀಡಿದೆ. ಹೀಗೆ ನ್ಯಾಯಾಲಯದ ಆದೇಶ ಉಲ್ಲಂಘಿಸಲಾಗಿದೆ.

ರಾಜದ್ರೋಹದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಕರಣವನ್ನು ಮನಬಂದಂತೆ ದಾಖಲಿಸಬಾರದೆಂದು ಸುಪ್ರೀಂ ಕೋರ್ಟ್ 2022ರಲ್ಲಿ ನೀಡಿದ ತಡೆಯಾಜ್ಞೆಯನ್ನು ಅಸ್ಸಾಂ ಪೊಲೀಸರು ಉದ್ದೇಶ ಪೂರ್ವಕವಾಗಿ ಕಡೆಗಣಿಸಿದ್ದಾರೆ.

ಸರಕಾರದ ಲೋಪಗಳನ್ನು ಬಯಲಿಗೆಳೆಯುವ ಪತ್ರಕರ್ತರ ಬಾಯಿ ಮುಚ್ಚಿಸಲು ಒಂದೆಡೆ ರಾಜದ್ರೋಹ ಕಾಯ್ದೆಯ ದುರುಪಯೋಗ ನಡೆದರೆ, ಇನ್ನೊಂದೆಡೆ ಪ್ರಧಾನ ಮಂತ್ರಿ, ಮುಖ್ಯಮಂತ್ರಿಗಳು ಹಾಗೂ ಮಂತ್ರಿಗಳು ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗುವ ಅಪರಾಧ ಎಸಗಿದ ಆರೋಪದ ಅಡಿಯಲ್ಲಿ ಬಂಧಿತರಾಗಿ ಸತತ 30 ದಿನಗಳ ಕಾಲ ಜೈಲಿನಲ್ಲಿ ಇದ್ದರೆ ಅಂಥವರು ತಮ್ಮ ಸ್ಥಾನಮಾನಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬ ಅಂಶಗಳನ್ನು ಒಳಗೊಂಡ ವಿಧೇಯಕಗಳನ್ನು ಹೇರಲಾಗುತ್ತಿದೆ. ಇದು ಆರೋಪ ಸಾಬೀತಾಗುವ ಮೊದಲೇ ಅವರನ್ನು ಶಿಕ್ಷೆಗೆ ಗುರಿಪಡಿಸಲು ಅವಕಾಶ ಮಾಡಿಕೊಡುತ್ತದೆ. ಸಂವಿಧಾನ ತಿದ್ದುಪಡಿಯ ಉದ್ದೇಶದ ಈ ವಿಧೇಯಕಗಳು ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಮಸಲತ್ತಿನಿಂದ ಕೂಡಿವೆ.

ಹೀಗೆ ಮಾನವ ಹಕ್ಕುಗಳು ಹಾಗೂ ಸಂವಿಧಾನಕ್ಕೆ ಅಪಚಾರ ಉಂಟು ಮಾಡುವ ಹುನ್ನಾರ ಅತ್ಯಂತ ವ್ಯವಸ್ಥಿತವಾಗಿ ನಡೆದಿದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಇದನ್ನು ಸಮರ್ಥಿಸಿಕೊಂಡಿದ್ದಾರೆ. ಭ್ರಷ್ಟಾಚಾರವನ್ನು ಬೇರು ಸಮೇತ ಕಿತ್ತೊಗೆಯಲು ಈ ವಿಧೇಯಕಗಳನ್ನು ತರಲಾಗಿದೆ ಎಂದು ಅವರು ಹೇಳಿದ್ದಾರೆ. ಅತ್ಯಂತ ಭ್ರಷ್ಟ ಮಂತ್ರಿಗಳನ್ನು ತನ್ನ ಸಚಿವ ಸಂಪುಟದಲ್ಲಿ ಇಟ್ಟುಕೊಂಡು ಪ್ರತಿಪಕ್ಷಗಳನ್ನು ಹತ್ತಿಕ್ಕಲು ಈ ಸಂವಿಧಾನ ತಿದ್ದುಪಡಿ ಮಸೂದೆಯನ್ನು ತರಲಾಗಿದೆ ಎಂಬುದು ಹಗಲಿನಷ್ಟು ನಿಚ್ಚಳವಾಗಿದೆ. ಇದು ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳನ್ನು ಪದಚ್ಯುತಗೊಳಿಸುವ ಮಸಲತ್ತಾಗಿದೆ.

ಫ್ಯಾಶಿಸ್ಟ್ ಪ್ರಭುತ್ವ ಪ್ರಜೆಗಳಿಂದ ವಿಧೇಯತೆ ಬಯಸುತ್ತದೆ. ಪ್ರಶ್ನೆ ಮಾಡುವುದನ್ನು, ಮಾಡುವವರನ್ನು ಅದು ಸಹಿಸುವುದಿಲ್ಲ. ಪ್ರತಿರೋಧದ ಸಣ್ಣ ಅಲೆ ಬಂದರೂ ಅದು ಸಹಿಸುವುದಿಲ್ಲ. ಅದರಲ್ಲೂ ಸಂಪತ್ತಿನ ಒಡೆಯರು ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳಲು ಕಟ್ಟಿಕೊಂಡ ಪ್ರಭುತ್ವ ಇನ್ನೂ ಭಯಾನಕವಾಗಿರುತ್ತದೆ. ಅದು ಅಭಿವ್ಯಕ್ತಿಯ ಎಲ್ಲ ಸೆಲೆಗಳನ್ನು ಮುಚ್ಚಿ ಬಂದ್ ಮಾಡುತ್ತದೆ. ತನ್ನ ಲೋಪಗಳನ್ನು ಮುಚ್ಚಿಕೊಳ್ಳಲು ನಾನಾ ಕಸರತ್ತುಗಳನ್ನು ನಡೆಸುತ್ತದೆ. ವರ್ಗ ಮತ್ತು ಜಾತಿ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಧರ್ಮ, ದೇವರನ್ನು ಬಳಸಿಕೊಳ್ಳುತ್ತದೆ. ರಾಷ್ಟ್ರವೆಂದರೆ ತಾನು ಎಂದು ಬಿಂಬಿಸಿಕೊಳ್ಳುತ್ತದೆ.

ನಮ್ಮ ಭಾರತದಲ್ಲಿ ಕಾರ್ಪೊರೇಟ್ ಮತ್ತು ಕೋಮುವಾದಿ ಶಕ್ತಿಗಳ ಜಂಟಿ ಪ್ರಭುತ್ವ ಇದೆ. ಇದು ಈಗ ಭಿನ್ನಮತ ಹತ್ತಿಕ್ಕಲು ‘ದೇಶ ದ್ರೋಹ’ ಎಂಬ ಅಸ್ತ್ರ ಬಳಸಲಾಗುತ್ತಿದೆ. ಬ್ರಿಟಿಷರು ಭಾರತವನ್ನಾಳುವಾಗ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಲು ರೂಪಿಸಿದ ‘ರಾಜದ್ರೋಹ’ ಎಂಬ ಕಾಯ್ದೆಯನ್ನು ಸ್ವಾತಂತ್ರ್ಯಾನಂತರವೂ ಉಳಿಸಿಕೊಂಡ ಭಾರತದ ಪ್ರಭುತ್ವ ಅದನ್ನು ರಾಜಕೀಯ ಮತ್ತು ಸೈದ್ಧಾಂತಿಕ ವಿರೋಧಿಗಳನ್ನು ಹತ್ತಿಕ್ಕಲು ಬಳಸಿಕೊಳ್ಳುತ್ತಿದೆ.

ಫ್ಯಾಶಿಸ್ಟ್ ಪ್ರಭುತ್ವದ ದೃಷ್ಟಿಯಲ್ಲಿ ದೇಶವೆಂದರೆ ದೇಶದ ಜನರಲ್ಲ. ದೇಶದ ಕೋಟ್ಯಂತರ ಜನರಿಗೆ ಸೇರಿದ ಸಂಪತ್ತನ್ನು ಕಬಳಿಸಿದ ಕೆಲವೇ ಕೆಲವು ಬಂಡವಾಳಗಾರರು ಮಾತ್ರ ಇವರ ಪ್ರಕಾರ ದೇಶದ ಮಾಲಕರು. ಅದಕ್ಕೆ ಪದೇ ಪದೇ ಅವರು ತೆರಿಗೆದಾರರ ಹಣದಿಂದ ದೇಶ ನಡೆದಿದೆ ಎಂದು ಪ್ರತಿಪಾದಿಸುತ್ತಾರೆ. ಬಯೊಕಾನ್ ಕಿರಣ್ ಮಜುಮ್ದಾರ್ ಅವರು, ‘‘ಕೋವಿಡ್ ಕಾಲದಲ್ಲಿ ತೆರಿಗೆ ಕಟ್ಟುವವರ ಆರೋಗ್ಯ ಮುಖ್ಯ. ಮೊದಲು ಅವರಿಗೆ ಲಸಿಕೆ ಹಾಕಿ’’ ಎಂದು ಒತ್ತಾಯಿಸಿದ್ದರು ಎಂಬುದನ್ನು ಹೇಗೆ ಮರೆಯಲು ಸಾಧ್ಯ? ಆದರೆ, ದೇಶವೆಂದರೆ ಉಳ್ಳವರು ಮಾತ್ರವಲ್ಲ. ತಮ್ಮ ಮೈ ಬೆವರಿನಿಂದ ಈ ಭಾರತವನ್ನು ಕಟ್ಟಿದ ಕಾಯಕ ಜೀವಿಗಳನ್ನು ಮರೆಯಬಾರದು.

ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದ ನಂತರ ದೇಶಪ್ರೇಮದ ಮತ್ತು ದೇಶದ್ರೋಹದ ವ್ಯಾಖ್ಯಾನ ಬದಲಾಗಿದೆ. ಪ್ರತಿರೋಧದ ಒಂದು ಸಣ್ಣ ಧ್ವನಿ ದೇಶದ್ರೋಹವಾಗುತ್ತದೆ. ದೇಶವೆಂದರೆ ಈಗ ದೇಶವನ್ನಾಳುವ ಪಕ್ಷ ಮತ್ತು ಅದರ ನಾಯಕ. ಅಷ್ಟೇ ಅಲ್ಲ, ಅದು ಮತ್ತು ಆ ನಾಯಕ ಪ್ರತಿಪಾದಿಸುವ ಸಿದ್ಧಾಂತ.

ಈ ಪಕ್ಷ ಮತ್ತು ಅದರ ನಾಯಕ ಹಾಗೂ ಆತ ಪ್ರತಿಪಾದಿಸುವ ಸಿದ್ಧಾಂತದ ಬಗ್ಗೆ ಭಿನ್ನಮತವನ್ನು ಹೊಂದಿದ್ದರೆ ಅದು ‘ದೇಶದ್ರೋಹ’ ಎಂದು ವ್ಯಾಖ್ಯಾನಿಸಲ್ಪಡುತ್ತದೆ. ರಾಜಕೀಯ ಮತ್ತು ಸೈದ್ಧಾಂತಿಕ ವಿರೋಧಿಗಳನ್ನು ಹತ್ತಿಕ್ಕಲು ಭಾರತೀಯ ಅಪರಾಧ ಸಂಹಿತೆಯ 124(ಎ) ವಿಧಿಯನ್ನು ಪದೇ ಪದೇ ಬಳಸಿಕೊಳ್ಳಲಾಗುತ್ತಿದೆ. ಇದೇ ಕಾಯ್ದೆಯಡಿ ಹಿಂದೊಮ್ಮೆ ಪತ್ರಕರ್ತ ವಿನೋದ್ ದುವಾ ಅವರ ವಿರುದ್ಧ ಪ್ರಕರಣ ದಾಖಲಿಸಲಾಯಿತು ವಾಸ್ತವವಾಗಿ ದೇಶದ್ರೋಹ ಅಂದರೆ ಯಾವುದು ಎಂಬುದನ್ನು ವ್ಯಾಖ್ಯಾನಿಸಲು 1962ರಲ್ಲಿ ಕೇದಾರನಾಥ ಸಿಂಗ್ ಪ್ರಕರಣದಲ್ಲಿ ನೀಡಿರುವ ತೀರ್ಪನ್ನು ಉಲ್ಲೇಖಿಸಿ ‘ಯಾವುದೇ ಕ್ರಿಯೆ ದೇಶದ್ರೋಹ ಎಂದು ಪರಿಗಣಿಸಲ್ಪಡಬೇಕಾದರೆ, ಅದು ಹಿಂಸಾ ಮಾರ್ಗವನ್ನು ಅನುಸರಿಸಿ ಸರಕಾರವನ್ನು ಬುಡಮೇಲು ಮಾಡಲು ಯತ್ನಿಸಿದರೆ, ಸಾರ್ವಜನಿಕ ಶಾಂತಿ, ಸುವ್ಯವಸ್ಥೆಗೆ ಧಕ್ಕೆ ತಂದರೆ ಅದು ದೇಶದ್ರೋಹದ ಕಾನೂನಿನ ವ್ಯಾಪ್ತಿಗೆ ಬರುತ್ತದೆ’ ಎಂದು ಸ್ಪಷ್ಟಪಡಿಸಿದ ಸುಪ್ರೀಂ ಕೋರ್ಟ್ ಐಪಿಸಿಯ 124(ಎ) ಕಲಮಿನ ಬಳಕೆಯ ಮೇಲೆ ಮಿತಿಯನ್ನು ಹೇರಿತು.

ಇದಷ್ಟೇ ಅಲ್ಲ, ಯಾರೇ ಪತ್ರಕರ್ತ ಸರಕಾರಕ್ಕೆ ಇಷ್ಟವಾಗದ ಲೇಖನ ಇಲ್ಲವೇ ವರದಿಯನ್ನು ಪ್ರಕಟಿಸಿದರೆ, ಇಲ್ಲವೇ ಪ್ರಸಾರ ಮಾಡಿದರೆ ಅಂಥ ಪತ್ರಕರ್ತರ ವಿರುದ್ಧ ದೇಶದ್ರೋಹದ ಕಾಯ್ದೆಯನ್ನು ಬಳಸಕೂಡದು ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ಸರಕಾರಕ್ಕೆ ಎಚ್ಚರಿಕೆ ನೀಡಿತ್ತು ಎಂಬುದನ್ನು ಮೋದಿ ಸರಕಾರ ಅತ್ಯಂತ ಜಾಣತನದಿಂದ ಮರೆತಂತೆ ಕಾಣುತ್ತದೆ

ದೇಶ ದ್ರೋಹದ ಪ್ರಕರಣವನ್ನು ದಾಖಲಿಸಿದ್ದು ಇದೇ ಮೊದಲ ಬಾರಿಯೇನೂ ಅಲ್ಲ. ರಾಮಚಂದ್ರ ಗುಹಾ ಅವರಂಥ ಖ್ಯಾತ ವಿದ್ವಾಂಸರು ಪ್ರಧಾನಿಗೆ ಪತ್ರ ಬರೆದರೆಂದು ಅವರ ವಿರುದ್ಧ ಕೂಡ ದೇಶದ್ರೋಹದ ಪ್ರಕರಣ ದಾಖಲಿಸಲಾಗಿತ್ತು.

ಸಂವಿಧಾನೇತರ ಶಕ್ತಿ ಕೇಂದ್ರ ನಿಯಂತ್ರಿಸುವ ನರೇಂದ್ರ ಮೋದಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ರಾಜಕೀಯ ಭಿನ್ನಾಭಿಪ್ರಾಯ ಹೊಂದಿದವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸುವುದು ಸಾಮಾನ್ಯವಾಗಿದೆ. ಪೇಶ್ವೆಗಳ ವಿರುದ್ಧ ದಲಿತರು ಭೀಮಾ ಕೋರೆಗಾಂವ್ ಯುದ್ಧದಲ್ಲಿ ಜಯಗಳಿಸಿದ ವಿಜಯೋತ್ಸವದ 200ನೇ ವರ್ಷಾಚರಣೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕವಿ ವರವರರಾವ್, ನ್ಯಾಯವಾದಿ ಸುಧಾ ಭಾರದ್ವಾಜ್, ಚಿಂತಕ ಆನಂದ ತೇಲ್ತುಂಬ್ಡೆ, ಪತ್ರಕರ್ತ ಗೌತಮ್ ನವ್ಲಾಖಾ, ಜನಪರ ಹೋರಾಟಗಾರ ಸ್ಟ್ಯಾನ್ ಸ್ವಾಮಿ ಸೇರಿದಂತೆ 19 ಜನರ ವಿರುದ್ಧ ದೇಶದ್ರೋಹದ ಖಟ್ಲೆ ಹಾಕಲಾಗಿತ್ತು. ಈ ಹಿಂಸಾಚಾರದ ನಿಜವಾದ ಪ್ರಚೋದಕ ಸಂಭಾಜಿ ಭಿಡೆ ರಾಜಾರೋಷವಾಗಿ ಓಡಾಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

ದಿಲ್ಲಿಯಲ್ಲಿ ರೈತರ ಪ್ರತಿಭಟನೆ ನಡೆದಾಗ ಅದನ್ನು ಹತ್ತಿಕ್ಕುವ ಯತ್ನದ ವಿರುದ್ಧ ಟ್ವೀಟ್ ಮಾಡುವುದು ದೇಶದ್ರೋಹದ ಅಪರಾಧ ಎಂದು ಪರಿಗಣಿಸಲಾಗಿತ್ತು. ಇಂಥ ಟ್ವೀಟ್ ಮಾಡಿದ ಹಿರಿಯ ಪತ್ರಕರ್ತ ರಾಜದೀಪ್ ಸರ್ದೇಸಾಯಿ, ಲೇಖಕ ರಾಮಚಂದ್ರ ಗುಹಾ, ನ್ಯಾಷನಲ್ ಹೆರಾಲ್ಡ್ ನ ಮೃಣಾಲ್ ಪಾಂಡೆ ಮುಂತಾದವರ ವಿರುದ್ಧ ಕೂಡ ಎಫ್‌ಐಆರ್ ದಾಖಲಿಸಲಾಗಿತ್ತು.

ಈಗಂತೂ ದೇಶದ ಅಧಿಕಾರ ಸೂತ್ರವನ್ನು ಹಿಡಿದವರು ಮತ್ತು ಅವರನ್ನು ನಿಯಂತ್ರಿಸುವವರು ಮತ್ತು ಅವರ ಭಕ್ತ ಪರಿವಾರವನ್ನು ಹೊರತುಪಡಿಸಿ ಉಳಿದವರೆಲ್ಲ ದೇಶದ್ರೋಹದ ನಿಂದನೆಗೆ ಗುರಿಯಾಗಿದ್ದಾರೆ.

ಆದರೆ ಈ ಭಾರತ ಯಾರದು? ಯಾವುದೇ ಪಕ್ಷದ, ಪರಿವಾರದ, ಜಾತಿಯ ಖಾಸಗಿ ಸೊತ್ತೇ? ಇಲ್ಲಿ ಶತಮಾನಗಳಿಂದ ನೆಲೆಸಿದ ಎಲ್ಲ ಸಮುದಾಯಗಳ ಜನರಿಗೆ ಸೇರಿದ ದೇಶ ಭಾರತ. ಇದು ಯಾವುದೇ ಧರ್ಮಕ್ಕೆ, ಜನಾಂಗಕ್ಕೆ, ಕೋಮಿಗೆ, ಜಾತಿಗೆ ಸೇರಿದ ದೇಶವಲ್ಲ.

ರಾಷ್ಟ್ರ ಕವಿ ಕುವೆಂಪು ಅವರು ಹೇಳಿದಂತೆ ಇದು ಸರ್ವ ಜನಾಂಗದ ಶಾಂತಿಯ ತೋಟ. ವಾಸ್ತವವಾಗಿ ಈ ಶಾಂತಿಯ ತೋಟಕ್ಕೆ ನುಗ್ಗಿ ಕಲಹದ ಕಿಡಿ ಹೊತ್ತಿಸುವವರು, ಜನಸಾಮಾನ್ಯರ ನಡುವೆ ದ್ವೇಷದ ವಿಷ ಬೀಜ ಬಿತ್ತುವವರು ದೇಶದ್ರೋಹಿಗಳು. ಆ ದೇಶದ್ರೋಹಿ ಕುಹಕಿಗಳನ್ನು ಸದೆ ಬಡಿಯಲು ನಾವೆಲ್ಲ ಒಂದಾಗಬೇಕಾಗಿದೆ. ಬಸವಣ್ಣನವರು ಹೇಳಿದಂತೆ ಸಕಲ ಜೀವಾತ್ಮರ ಲೇಸನು ಬಯಸುವ ನಾಡನ್ನು ಕಟ್ಟಬೇಕಾಗಿದೆ.

ದೇಶಭಕ್ತರೆಂದರೆ ಯಾರು, ದೇಶ ಭಕ್ತಿ ಅಂದರೆ ಯಾವುದು? ನ್ಯಾಯಕ್ಕಾಗಿ ಹೋರಾಡುವವರು ನಿಜವಾದ ದೇಶ ಭಕ್ತರು. ತಮ್ಮ ಕಾಯಕದ ಪಾಲನ್ನು ಕೇಳುವವರು ನಿಜವಾದ ದೇಶ ಭಕ್ತರು. ತಮ್ಮ ರಕ್ತ ನೀರು ಮಾಡಿಕೊಂಡು ದುಡಿದು ದೇಶ ಕಟ್ಟುವವರು ನಿಜವಾದ ದೇಶ ಭಕ್ತರು. ದೇಶದ ಸಂಪತ್ತು ಸಮಾನ ಹಂಚಿಕೆಯಾಗಬೇಕೆಂದು ಹೇಳುವುದು, ಅಸ್ಪಶ್ಯತೆ, ಜಾತೀಯತೆ, ಅಸಮಾನತೆ ವಿರುದ್ಧ ಹೋರಾಡುವುದು ನಿಜವಾದ ದೇಶ ಭಕ್ತಿ.

ದೇಶ ದ್ರೋಹಿಗಳೆಂದರೆ ಯಾರು? ಗಾಂಧೀಜಿಯನ್ನು ಕೊಂದವರು ದೇಶ ದ್ರೋಹಿಗಳು. ದೇಶದ ಸರ್ವ ಜನರಿಗೆ ಸೇರಿದ ಸಂಪತ್ತನ್ನು ಅಂಬಾನಿ, ಅದಾನಿಯಂಥ ಕಾರ್ಪೊರೇಟ್‌ನವರ ಮಡಿಲಿಗೆ ಹಾಕುವವರು ದೇಶದ್ರೋಹಿಗಳು. ದಲಿತರನ್ನು ಮಲದ ಗುಂಡಿಗೆ ಇಳಿಸಿ ಉಸಿರು ಗಟ್ಟಿಸಿ ಸಾಯಿಸುವವರು ದೇಶ ದ್ರೋಹಿಗಳು. ಆಮ್ಲಜನಕ ನೀಡದೇ ಕೋವಿಡ್ ಪೀಡಿತರನ್ನು ಕೊಲ್ಲುವುದು ದೇಶ ದ್ರೋಹ.

ಈಗ ದೇಶಭಕ್ತಿ ಹಾಗೂ ದೇಶದ್ರೋಹದ ಮರುವ್ಯಾಖ್ಯಾನ ಮಾಡಬೇಕಾದ ಕಾಲ ಬಂದಿದೆ.

share
ಸನತ್ ಕುಮಾರ ಬೆಳಗಲಿ
ಸನತ್ ಕುಮಾರ ಬೆಳಗಲಿ
Next Story
X