ಇಂಗ್ಲಿಷ್ ದ್ವೇಷದ ಹಿಂದಿನ ಮಸಲತ್ತು

ಯಾವುದೇ ಭಾಷೆಯನ್ನಾಗಲಿ, ಉಪ ಭಾಷೆಯನ್ನಾಗಲಿ ಕಲಿಯುವುದು, ಮಾತಾಡುವುದು ತಪ್ಪೇನಲ್ಲ. ಅದು ಹೆಮ್ಮೆ ಪಡಬೇಕಾದ ಸಂಗತಿ. ಯಾವುದೇ ಭಾಷೆಯನ್ನು ಕಲಿಯುವುದರಿಂದ ಸಾಕಷ್ಟು ಪ್ರಯೋಜನವಾಗುತ್ತದೆ. ಜನ ಸಂಪರ್ಕ ಹೆಚ್ಚಾಗುತ್ತದೆ. ಆದರೆ, ಭಾಷೆಯೊಂದನ್ನು ವಿನಾಕಾರಣ ದ್ವೇಷಿಸುವ ಅವಿವೇಕಿಗಳಿಗೆ ಇದು ಅರ್ಥವಾಗುವುದಿಲ್ಲ. ಭಾರತದ ಗೃಹ ಮಂತ್ರಿಯಂಥ ಜವಾಬ್ದಾರಿ ಸ್ಥಾನದಲ್ಲಿ ಇರುವ ಅಮಿತ್ ಶಾ ಅವರು ಇತ್ತೀಚೆಗೆ ನಿವೃತ್ತ ಅಧಿಕಾರಿಯೊಬ್ಬರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತ ದೇಶದಲ್ಲಿ ಇರುವ ಇಂಗ್ಲಿಷ್ ಮಾತನಾಡುವ ಜನರು ನಾಚಿಕೆ ಪಟ್ಟುಕೊಳ್ಳುವ ದಿನ ಬಹಳ ದೂರವೇನೂ ಇಲ್ಲ ಎಂದು ಹೇಳಿದರು. ಇದು ಅವರ ಅಜ್ಞಾನ ಎಂದು ನಿರ್ಲಕ್ಷ್ಯ ಮಾಡಬಹುದು. ಆದರೆ ಅದರ ಹಿಂದೆ ಬಹುದೊಡ್ಡ ಮಸಲತ್ತು ಅಡಗಿದೆ.
ಅಮಿತ್ ಶಾ ಅವರು ಆರೆಸ್ಸೆಸ್ ಶಾಖೆಯಲ್ಲಿ ಬೆಳೆದವರು.ಅವರಿಂದ ಇಂಥ ಹೇಳಿಕೆಗಳು ಬರುವುದು ಆಶ್ಚರ್ಯಕರವಲ್ಲ. ಅದು ಅನಿರೀಕ್ಷಿತ ಕೂಡ ಅಲ್ಲ. ದಲಿತರು, ಹಿಂದುಳಿದವರು ಮತ್ತು ಎಲ್ಲ ಸಮುದಾಯಗಳ ಬಡವರು ಇಂಗ್ಲಿಷ್ ಕಲಿಯುವುದು ತಮ್ಮದೇ ಹಿತಾಸಕ್ತಿ ಹೊಂದಿರುವ ಕೆಲವರಿಗೆ ಬೇಕಾಗಿಲ್ಲ. ಇಂಗ್ಲಿಷ್ ನಂಥ ಅಂತರ್‌ರಾಷ್ಟ್ರೀಯ ಸಂಪರ್ಕ ಮಾಧ್ಯಮದ ಭಾಷೆಯನ್ನು ದಮನಿತ ಸಮುದಾಯಗಳ ಜನರು ಕಲಿತರೆ ಅವರು ಸುಮ್ಮನೇ ಇರುವುದಿಲ್ಲ. ಪ್ರತಿಯೊಂದನ್ನ್ನೂ ಪ್ರಶ್ನಿಸುತ್ತಾರೆ. ಆಗ ಅವರನ್ನು ಶೋಷಣೆಗೆ ಗುರಿಪಡಿಸುವುದು ಅಷ್ಟು ಸುಲಭವಾಗುವುದಿಲ್ಲ ಎಂಬುದು ಮನುವಾದ ರಕ್ಷಕರ ಸಹಜ ಆತಂಕವಾಗಿದೆ. ಇಂಗ್ಲಿಷ್ ಕಲಿತು ಉನ್ನತ ಪದವಿಗಳಿಸಿದ ಅಂಬೇಡ್ಕರ್ ಏನೆಲ್ಲ ಮಾಡಿದರು, ಕತ್ತಲ ಲೋಕದ ಮೇಲೆ ಹೇಗೆ ಬೆಳಕು ಚೆಲ್ಲಿದರು, ಹೇಗೆ ಶತಮಾನದ ಜಾತಿ ವ್ಯವಸ್ಥೆಯ ಕೋಟೆಯ ಬುಡವನ್ನು ಹೇಗೆ ಅಲುಗಾಡಿಸಿದರು ಎಂಬುದು ಅವರಿಗೆ ಅಂದರೆ ಶತಮಾನಗಳಿಂದ ದುಡಿಯದೆ ಉಣ್ಣುವವರಿಗೆ ಚೆನ್ನಾಗಿ ಗೊತ್ತಿದೆ. ಅಂತಲೇ ಇಂಗ್ಲಿಷನ್ನು ದೂರ ಮಾಡಿ ರಾಷ್ಟ್ರ ಭಾಷೆ ಎಂದು ಹಿಂದಿಯನ್ನು ತಂದು ಆ ಮೂಲಕ ಕ್ರಮೇಣ ಸಂಸ್ಕೃತವನ್ನು ಹೇರುವುದು ಅವರ ಒಳ ಹುನ್ನಾರವಾಗಿದೆ. ಆದರೆ ಇಂಗ್ಲಿಷ್ ವಿರೋಧಿಸುವವರಿಗೆ ಅದರಲ್ಲೂ ಬಿಜೆಪಿಯ ಉನ್ನತ ನಾಯಕರಿಗೆ ಇದು ಅನ್ವಯಿಸುವುದಿಲ್ಲ. ಅವರು ತಮ್ಮ ಮಕ್ಕಳನ್ನು ಇಂಗ್ಲೆಂಡ್ ಅಮೆರಿಕಗಳಂಥ ದೇಶಗಳಿಗೆ ವ್ಯಾಸಂಗ ಮಾಡಲು ಕಳಿಸುತ್ತಾರೆ.ಅಲ್ಲಿ ಕಲಿಯುವ ಅವರ ಮಕ್ಕಳು ಲಕ್ಷಾಂತರ ರೂಪಾಯಿ ಸಂಬಳದ ನೌಕರಿಯನ್ನು ಗಿಟ್ಟಿಸುತ್ತಾರೆ.ಆದರೆ ವಿದೇಶಕ್ಕೆ ಹೋಗಲಾಗದ ಬಡವರ,ದಮನಿತರ ಮಕ್ಕಳು ಅಕ್ಷರ ಕಲಿಯದೇ ತಮ್ಮ ಚಾಕರಿ ಮಾಡಿಕೊಂಡಿರಬೇಕು ಎಂಬುದು ಅವರ ಇಂಗ್ಲಿಷ್ ವಿರೋಧದ ಒಳಗುಟ್ಟಾಗಿದೆ. ಭಾರತದಲ್ಲಿ ಜನರಾಡುವ ಎಲ್ಲ ಭಾಷೆಗಳು ನಮ್ಮೆಲ್ಲರ ಹೆಮ್ಮೆಯ ಭಾಷೆಗಳು. ಈ ಎಲ್ಲ ಭಾಷೆಗಳ ಸಂಪರ್ಕದ ಕೊಂಡಿಯಾಗಿ, ಸೇತುವೆಯಾಗಿ ಇಂಗ್ಲಿಷ್ ನಂಥ ಭಾಷೆ ಕೂಡ ನಮಗೆ ಬೇಕು.ಎಷ್ಟು ಭಾಷೆಯನ್ನು ಕಲಿತರೂ ಅದರಿಂದ ನಷ್ಟವಿಲ್ಲ , ನಮ್ಮ ಜ್ಞಾನ ಭಂಡಾರ ವಿಸ್ತಾರವಾಗುತ್ತದೆ. ರಾಹುಲ ಸಾಂಕ್ರಾತ್ಯಾಯರಂಥ ಹೆಸರಾಂತ ವಿದ್ವಾಂಸರಿಗೆ ಇಪ್ಪತ್ತಕ್ಕೂ ಹೆಚ್ಚು ಭಾಷೆಗಳು ಬರುತ್ತಿದ್ದವು. ಭಾರತದ ಬಹುತೇಕ ಎಲ್ಲ ಭಾಷೆಗಳು ಕೂಡ ಇಂಗ್ಲಿಷ್ ಭಾಷೆಯ ಒಡನಾಟದಿಂದ ಸಾಕಷ್ಟು ಅಭಿವೃದ್ಧಿ ಹೊಂದಿವೆ. ಭಾರತ ಎಂಬುದು ಬಹುತ್ವದ ದೇಶ.
ಇತರ ಭಾಷೆಗಳನ್ನು ಮಾತಾಡುವವರಿಗಿಂತ ಇಂಗ್ಲಿಷ್ ಮಾತಾಡುವವರ ಸಂಖ್ಯೆ ಜಾಸ್ತಿ ಇದೆ. ಸುಮಾರು ಹತ್ತು ಕೋಟಿಗೂ ಹೆಚ್ಚು ಮಂದಿ ಇಂಗ್ಲಿಷ್ ಮಾತನಾಡುತ್ತಾರೆ. ಕೆಲವು ರಾಜ್ಯಗಳಲ್ಲಿ ಇಂಗ್ಲಿಷ್‌ಗೆ ಅಧಿಕೃತ ಭಾಷೆಯ ಸ್ಥಾನಮಾನವನ್ನು ನೀಡಲಾಗಿದೆ.ವಿಶ್ವದಲ್ಲಿ ಅತಿ ಹೆಚ್ಚು ಇಂಗ್ಲಿಷ್ ಮಾತಾಡುವ ಜನರಿರುವ ದೇಶಗಳಲ್ಲಿ ಭಾರತಕ್ಕೆ ಎರಡನೇ ಸ್ಥಾನವಿದೆ.
ಯಾವುದೇ ಒಂದು ಭಾಷೆಯನ್ನು ಜನರು ಒಪ್ಪಿಕೊಂಡರೆ ಅದು ಉಪಯುಕ್ತಕರ ಭಾಷೆ ಎಂದು ಹೇಳಬಹುದು. ಜನರು ಯಾವ ಭಾಷೆಯನ್ನು ಕಲಿಯಬೇಕು ಮತ್ತು ಮಾತಾಡಬೇಕೆಂಬುದನ್ನು ಯಾವುದೇ ಸರಕಾರ ಇಲ್ಲವೇ ಸಂಘಟನೆಗಲಿಗೆ ತೀರ್ಮಾನಿಸುವ ಹಕ್ಕಿಲ್ಲ. ಜನರು ಇಷ್ಟಪಟ್ಟು ಇಂಗ್ಲಿಷ್ ಸೇರಿದಂತೆ ಯಾವುದೇ ಭಾಷೆಯನ್ನು ಕಲಿಯಬಹುದು. ಇಂಥ ಸೂಕ್ಷ್ಮ್ಮ ವಿಷಯಗಳ ಬಗ್ಗೆ ಮಾತನಾಡುವಾಗ ಸರಕಾರದಲ್ಲಿ ಜವಾಬ್ದಾರಿ ಸ್ಥಾನದಲ್ಲಿ ಇರುವವರು ಎಚ್ಚರ ವಹಿಸುವುದು ಅಗತ್ಯವಾಗಿದೆ.
ಜನರು ಒಪ್ಪಲಿ, ಬಿಡಲಿ ತನ್ನ ಕಾರ್ಯಸೂಚಿಯನ್ನು ಬಲವಂತವಾಗಿ ದೇಶದ ಮೇಲೆ ಹೇರಲು ಬಿಜೆಪಿ ಅತ್ಯಂತ ಅವಸರವನ್ನು ಮಾಡುತ್ತಿದೆ. ಭಾರತ ಅಂದರೆ ಉತ್ತರ ಭಾರತ ಮಾತ್ರವಲ್ಲ. ಭಾಷೆ ಅಂದರೆ ಹಿಂದಿ ಭಾಷೆ ಮಾತ್ರವಲ್ಲ. ದಕ್ಷಿಣ ಭಾರತದ ರಾಜ್ಯಗಳು ಮುಂಚಿನಿಂದಲೂ ಹಿಂದಿ ಹೇರಿಕೆಯನ್ನು ವಿರೋಧಿಸುತ್ತಲೇ ಬಂದಿವೆ. ದಕ್ಷಿಣದವರು ಸಂಪರ್ಕ ಭಾಷೆಯನ್ನಾಗಿ ಇಂಗ್ಲಿಷ್ ಭಾಷೆಯನ್ನು ಬಳಸುತ್ತಾರೆ.ಅದು ಅವರ ಹಕ್ಕು ಕೂಡ. ಅಮಿತ್‌ಶಾ ಅವರು ಇಂಗ್ಲಿಷ್ ಭಾಷೆಯ ಮೇಲೆ ಕೆಂಡ ಕಾರುವ ಒಳ ಉದ್ದೇಶ ಹಿಂದಿಯೇತರ ಭಾಷೆಗಳನ್ನಾಡುವ ರಾಜ್ಯಗಳ ಮೇಲೆ ಬಲವಂತವಾಗಿ ಹಿಂದಿಯನ್ನು ಹೇರುವುದಾಗಿದೆ. ಇಂಗ್ಗಿಷ್ ಭಾಷೆಯನ್ನು ಜನರು ನಿರಾಕರಿಸುವಂತೆ ಮಾಡಿ ಆ ಸ್ಥಾನಕ್ಕೆ ಹಿಂದಿಯನ್ನು ಹೇರಿಕೆ ಮಾಡುವುದಾಗಿದೆ.ಇಂಗ್ಲಿಷ್ ವಿದೇಶಿ ಭಾಷೆ ಎಂದು ಅಮಿತ್‌ಶಾ ಟೀಕಿಸಿದ್ದಾರೆ .ಹೌದು ವಸಾಹತುಶಾಹಿ ಕಾಲದಲ್ಲಿ ಇಂಗ್ಲಿಷ್ ಅಧಿಕಾರದ ಭಾಷೆಯಾಗಿತ್ತು , ಆದರೆ ಸ್ವಾತಂತ್ರ್ಯ ದ ನಂತರ ಅದು ಸಂಪರ್ಕ ಭಾಷೆಯಾಗಿದೆ.ಅಮಿತ್‌ಶಾ ಹಾಗೂ ಅವರ ಸಂಘ ಪರಿವಾರದವರು ಒಪ್ಪಲಿ ಬಿಡಲಿ ಜನರು ಅದನ್ನು ಒಪ್ಪಿದ್ದಾರೆ.
ಭಾರತದ ವಿಭಿನ್ನ ಭಾಷಿಕ ರಾಜ್ಯಗಳ ಮೇಲೆ ತ್ರಿಭಾಷಾ ಸೂತ್ರದ ಹೆಸರಿನಲ್ಲಿ ಹಿಂದಿಯನ್ನು ಹೇರುವುದನ್ನು ಒಪ್ಪುವುದಿಲ್ಲ. ಯಾವುದೇ ಭಾಷೆಯನ್ನು ಕಲಿಯಲು ಯಾರ ಅಭ್ಯಂತರವೂ ಇಲ್ಲ. ಜ್ಞಾನದ ಬೆಳಕು ಎಲ್ಲಿಂದಲಾದರೂ ಬರಲಿ. ಆದರೆ, ಈಗ ಉದ್ಭವಿಸಿರುವುದು ಭಾಷೆಯನ್ನು ಕಲಿಯುವುದಲ್ಲ. ಕೇಂದ್ರದ ಅಧಿಕಾರ ಸೂತ್ರ ಹಿಡಿದ ಪಕ್ಷ ಬಲವಂತವಾಗಿ ಹಿಂದಿಯನ್ನು ಹೇರಲು ಹೊರಟಿದೆ. ರೈಲು, ಬ್ಯಾಂಕು ಮುಂತಾದ ಕಡೆ ಒತ್ತಾಯದ ಹಿಂದಿ ಹೇರಿಕೆ ನಡೆದಿದೆ. ಇದರಿಂದ ಆ ಭಾಷೆ ಗೊತ್ತಿಲ್ಲದ ಕನ್ನಡಿಗರಿಗೆ ಮಾತ್ರವಲ್ಲ ದಕ್ಷಿಣ ಭಾರತೀಯರಿಗೆ ಕಷ್ಟವಾಗಿದೆ. ನಮಗೆ ಮೊದಲು ನಮ್ಮ ತಾಯಿ ಭಾಷೆ ಆನಂತರ ಉಳಿದ ಭಾಷೆಗಳು.
‘ಹಲವಾರು ಭಾಷೆಗಳಿರುವುದೇ ಭಾರತದ ನಿಜವಾದ ಶಕ್ತಿ. ಜಗತ್ತಿನ ಬೇರೆ ಕಡೆಗಳಂತೆ ಒಂದೇ ಒಂದು ಭಾಷೆ ಒಂದು ವೇಳೆ ಇದ್ದಿದ್ದರೆ ದೇಶವೆಂದೋ ಛಿದ್ರ, ಛಿದ್ರವಾಗಿ ಹೋಗುತ್ತಿತ್ತು’ ಎಂದು ಯು.ಆರ್. ಅನಂತಮೂರ್ತಿಯವರು ಹೇಳುತ್ತಿದ್ದರು. ಹಿಂದಿಯನ್ನು ಬಲವಂತವಾಗಿ ಹೇರುವ ಕೇಂದ್ರದ ಹುನ್ನಾರದ ವಿರುದ್ಧ ತಮಿಳು ನಾಡು ಸೇರಿದಂತೆ ದಕ್ಷಿಣದ ರಾಜ್ಯಗಳು ಸಿಡಿದೆದ್ದಿವೆ. ಹಿಂದಿಯನ್ನು ಒಪ್ಪಿಕೊಳ್ಳದಿದ್ದರೆ, ಅಂಥ ರಾಜ್ಯಗಳಿಗೆ ಕೇಂದ್ರದ ಅನುದಾನ ಸ್ಥಗಿತಗೊಳಿಸುವುದಾಗಿ ಕೇಂದ್ರ ಸರಕಾರ ಧಮಕಿ ಹಾಕುತ್ತಲೆ ಇದೆ. ಈಗಾಗಲೇ ಒಕ್ಕೂಟದ ತೆರಿಗೆ ವರಮಾನದಲ್ಲಿ ರಾಜ್ಯಗಳಿಗೆ ಕೊಡುವ ಪಾಲನ್ನು ಕಡಿಮೆ ಮಾಡುವಂತೆ ಹಣಕಾಸು ಆಯೋಗಕ್ಕೆ ಸೂಚಿಸಿದೆ ಎಂಬ ವರದಿಗಳು ರಾಜ್ಯಗಳಿಗೆ ಆತಂಕವನ್ನುಂಟು ಮಾಡಿವೆ.
__ಸಂವಿಧಾನದ ಪ್ರಕಾರ, ನಮ್ಮದು ಒಕ್ಕೂಟ ವ್ಯವಸ್ಥೆ, ರಾಜ್ಯಗಳೆಂದರೆ ಹಿಂದಿನ ಮಾಂಡಲಿಕರಂತೆ ತೆರಿಗೆ ವಸೂಲಿ ಮಾಡಿ ಕೊಡುವ ಏಜೆನ್ಸಿಗಳಲ್ಲ. ಪ್ರಧಾನ ಮಂತ್ರಿಗಳು ವಸೂಲಿಯಾದ ತೆರಿಗೆಯನ್ನು ಜಮಾ ಮಾಡಿಕೊಳ್ಳುವ ಮಹಾರಾಜರಲ್ಲ.
ದಕ್ಷಿಣದ ರಾಜ್ಯಗಳ ಮೇಲೆ ಬಲವಂತವಾಗಿ ಹಿಂದಿಯನ್ನು ಹೇರುವ ಮಸಲತ್ತು ನಿನ್ನೆ ಮೊನ್ನೆಯದಲ್ಲ. ಭಾರತವನ್ನು ವಿದೇಶಿ ಹಿಡಿತದಿಂದ ಮುಕ್ತಗೊಳಿಸಿದ ಆನಂತರ ಈ ಹುನ್ನಾರ ನಡೆಯುತ್ತಲೇ ಇದೆ. ಸಂವಿಧಾನ ರಚನಾ ಸಭೆಗಳಲ್ಲಿ ಕೂಡ ಇದರ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಆದರೆ, ಸ್ವತಂತ್ರ ಭಾರತಕ್ಕೆ ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಹೇರುವ ಕುತಂತ್ರಕ್ಕೆ ತೀವ್ರ ವಿರೋಧ ಬಂದ ಆನಂತರ ಇದನ್ನು ಕೈ ಬಿಡಲಾಯಿತು. ಹಿಂದಿಯೊಂದೇ ಅಲ್ಲ, ಸ್ವತಂತ್ರ ಭಾರತದ ಕನ್ನಡ, ತಮಿಳು, ತೆಲುಗು ಸೇರಿದಂತೆ 22 ಭಾಷೆಗಳನ್ನು ರಾಷ್ಟ್ರಭಾಷೆಗಳೆಂದು ಆಗ ಒಮ್ಮತಕ್ಕೆ ಬರಲಾಯಿತು.
ತಮಿಳುನಾಡುಗಳಂಥ ರಾಜ್ಯಗಳು ಹಿಂದಿ ಹೇರಿಕೆ ವಿರುದ್ಧ ಯಾವ ಪರಿ ತಿರುಗಿ ಬಿದ್ದವೆಂದರೆ ಅಲ್ಲಿನ ಪ್ರತ್ಯೇಕತೆಯ ಕೂಗು ದಿಲ್ಲಿಗೆ ಅಪ್ಪಳಿಸಿತು. ಈಗಲೂ ಅಲ್ಲಿ ನೆಲದ ಭಾಷೆಗೆ ಮೊದಲ ಆದ್ಯತೆ. ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಂದ ಹಿಡಿದು ಈಗಿನ ಪ್ರಧಾನಿ ನರೇಂದ್ರ ಮೋದಿಯವರವರೆಗೆ ಯಾರೇ ತಮಿಳುನಾಡಿಗೆ ಹೋದರೂ ತಮಿಳನ್ನು ಕಡೆಗಣಿಸುವುದಿಲ್ಲ. ತಮಿಳು ಮಾತಾಡಲು ಬರದವರು ಅಲ್ಲಿ ಇಂಗ್ಲಿ ಷ್‌ನಲ್ಲಿ ಮಾತಾಡುತ್ತಾರೆ. ತಮಿಳುನಾಡಿನಿಂದ ಲೋಕಸಭೆಗೆ ಚುನಾಯಿತರಾಗಿದ್ದ ಡಿಎಂಕೆಯ ಹಿರಿಯ ನಾಯಕರಾಗಿದ್ದ ಅಣ್ಣಾ ದೊರೈ ಅವರು ಸದನದಲ್ಲಿ ತಮ್ಮ ತಾಯಿಭಾಷೆ ತಮಿಳಿನಲ್ಲಿ ಮಾತನಾಡುತ್ತಿದ್ದರು. ಅವರ ಭಾಷಣವನ್ನು ಕೇಳಿದ ಅಟಲ್ ಬಿಹಾರಿ ವಾಜಪೇಯಿ ಅವರು, ‘ನಿಮ್ಮ ಭಾಷೆ ಅರ್ಥವಾಗುವುದಿಲ್ಲ. ಆದರೂ ನಿಮ್ಮ ಇಂಪಾದ ತಮಿಳನ್ನು ಕೇಳಲು ಖುಷಿಯಾಗುತ್ತದೆ’ ಎಂದು ಸದನದಲ್ಲೇ ಹೇಳಿದ್ದರು.
ದಕ್ಷಿಣ ದ ರಾಜ್ಯಗಳನ್ನು ಮಣಿಸಲು ಹಲವಾರು ಹುನ್ನಾರಗಳು ನಡೆದಿವೆ. ಭಾಷೆಯ ಪ್ರಶ್ನೆ ಒಂದೆಡೆಯಾದರೆ, ಇನ್ನೊಂದೆಡೆ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯ ಒಳ ಮಸಲತ್ತು ನಡೆಯುತ್ತಿದೆ. ಇದು ಯಶಸ್ವಿಯಾದರೆ ದಕ್ಷಿಣ ಭಾರತದ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಕನಿಷ್ಠ 7-8 ಕಡಿಮೆಯಾಗಲಿವೆೆ. ಈ ಕುರಿತಂತೆ ದಕ್ಷಿಣದ ತಮಿಳುನಾಡು, ಕೇರಳ, ಕರ್ನಾಟಕ, ತೆಲಂಗಾಣ ರಾಜ್ಯಗಳು ತೀವ್ರ ಪ್ರತಿರೋಧ ವನ್ನು ವ್ಯಕ್ತಪಡಿಸಿವೆ.
ವಾಸ್ತವವಾಗಿ ಭಾರತ ಎಂಬುದರ ನೈಜ ಸ್ವರೂಪವೇನೆಂಬ ಬಗ್ಗೆ ಇದನ್ನೆಲ್ಲ ಮಾಡಲು ಹೊರಟವರಿಗೆ ಗೊತ್ತಿಲ್ಲ. ಭಾರತ ಎಂಬುದು ಒಂದೇ ಧರ್ಮ, ಸಂಸ್ಕೃತಿ, ಭಾಷೆ, ಜನಾಂಗ ಹಾಗೂ ರಾಷ್ಟ್ರೀಯತೆಗಳಿಗೆ ಸೇರಿದ ಪರಿಕಲ್ಪನೆ ಅಲ್ಲ. ಇದು ಬಹುತ್ವದ ಭೂಮಿ. ಸ್ವಾತಂತ್ರ್ಯಾನಂತರ ಹೊಸ ಭಾರತ ಕಟ್ಟಲು ಮುಂದಾದ ನಮ್ಮ ರಾಷ್ಟ್ರೀಯ ವಿಮೋಚನಾ ಚಳವಳಿಯ ನೇತಾರರಿಗೆ ಇದೆಲ್ಲ ಗೊತ್ತಿತ್ತು. ಅದಕ್ಕೆ ನಮ್ಮ ಸಂವಿಧಾನ ನಿರ್ಮಾಪಕರು ಇದನ್ನು ಒಂದು ರಾಷ್ಟ್ರ ಎಂದು ಕರೆಯಲಿಲ್ಲ. ಅದರ ಬದಲಾಗಿ ಒಕ್ಕೂಟ ಎಂದು ಕರೆದರು. ಇಂಗ್ಲಿಷ್‌ನಲ್ಲಿ ಫೆಡರಲ್ ಸ್ಟೇಟ್ ಎಂದು ವ್ಯಾಖ್ಯಾನಿಸಿದಂತೆ ಭಾರತವೂ ಒಕ್ಕೂಟ ರಾಷ್ಟ್ರ. ಭಾರತದಂಥ ಇನ್ನೊಂದು ಮಾದರಿ ಜಗತ್ತಿನಲ್ಲಿ ಎಲ್ಲೂ ಇಲ್ಲ.
ಭಾರತ ಎಂಬ ಈ ಒಕ್ಕೂಟ ರಾಷ್ಟ್ರದಲ್ಲಿ ಉತ್ತರದ ರಾಜ್ಯಗಳಿಗೂ ದಕ್ಷಿಣದ ರಾಜ್ಯಗಳಿಗೂ ಆಹಾರ, ಭಾಷೆ, ಸಂಸ್ಕೃತಿ, ಉಡುಪುಗಳಲ್ಲಿ ಸಾಕಷ್ಟು ವ್ಯತ್ಯಾಸವಿದೆ. ದಕ್ಷಿಣದಲ್ಲೇ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿ ಇವುಗಳ ನಡುವಿನ ಭಾಷಾ ವೈವಿಧ್ಯತೆ ಇದೆ. ಅದಕ್ಕೆ ರಾಷ್ಟ್ರಕವಿ ಕುವೆಂಪು ಅವರು ಇದನ್ನು ‘ಸರ್ವಜನಾಂಗದ ಶಾಂತಿಯ ತೋಟ’ ಎಂದು ಕರೆದರು. ಅವರು ಕರೆದದ್ದು ಕರ್ನಾಟಕಕ್ಕೆ ಹೇಗೆ ಅನ್ವಯವಾಗುತ್ತದೋ ಅದೇ ರೀತಿ ಇಡೀ ಭಾರತಕ್ಕೂ ಅನ್ವಯವಾಗುತ್ತದೆ. ಭಾರತ ಈವರೆಗೆ ಸುರಕ್ಷಿತವಾಗಿ ಉಳಿದಿರುವುದು ಯಾವುದೇ ದೇವರು, ಇಲ್ಲವೇ ಧರ್ಮದಿಂದ ಅಲ್ಲ. ಬದಲಾಗಿ ಬಹುತ್ವದಿಂದ. ಪರಸ್ಪರ ಬೆಸೆದುಕೊಂಡಿರುವ ಬಹುತ್ವ ಸಂಸ್ಕೃತಿಯಿಂದ.
ಆದರೆ, ಈ ಬಹು ಸುಂದರವಾದ ಹೆಮ್ಮೆಯ ಬಹುತ್ವಕ್ಕೆ ಈಗ ಹಿಂದೆಂದೂ ಕಂಡರಿಯದ ಅಪಾಯ ಎದುರಾಗಿದೆ. ಇಲ್ಲಿನ ಅನೇಕತೆಯನ್ನು ಅಳಿಸಿ ಹಾಕಿ ದೇಶದ ಮೇಲೆ ಏಕ ಸಂಸ್ಕೃತಿ, ಏಕ ಧರ್ಮ ಮತ್ತು ಏಕ ಭಾಷೆಯನ್ನು ಹೇರಲು ಹೊರಟವರು ತಮಗಿರುವ ಅಧಿಕಾರದ ಬಲದಿಂದ ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಧಕ್ಕೆ ತರುತ್ತಿದ್ದಾರೆ. ದಕ್ಷಿಣದ ರಾಜ್ಯಗಳ ಮೇಲೆ ರಾಷ್ಟ್ರ ಭಾಷೆಯ ಹೆಸರಿನಲ್ಲಿ ಹಿಂದಿಯನ್ನು ಬಲವಂತವಾಗಿ ಹೇರುವ ಪ್ರಕ್ರಿಯೆ ಆರಂಭವಾಗಿದೆ. ಈಗಾಗಲೇ ನಾವು ಓಡಾಡುವ ರೈಲುಗಳಲ್ಲಿ ಹಿಂದಿ ನಿಧಾನವಾಗಿ ತಳವೂರುತ್ತಿದೆ. ಕೇಂದ್ರ ಸರಕಾರದ ಹಲವಾರು ದಾಖಲೆಗಳು, ಕಾಗದಪತ್ರಗಳ ಹಿಂದಿಮಯ ಆಗುತ್ತಿವೆ.
ರಾಜಕಾರಣಿಗಳು ಹಿಂದಿಯನ್ನು ರಾಷ್ಟ್ರ ಭಾಷೆ ಎಂದು ಕರೆದು, ಹೇರಲು ಹೊರಟಿದ್ದಾರೆ. ಆದರೆ, ವಾಸ್ತವವಾಗಿ ಹಿಂದಿಯೊಂದೇ ರಾಷ್ಟ್ರ ಭಾಷೆಯಲ್ಲ, ರಾಷ್ಟ್ರ ಭಾಷೆಗಳಲ್ಲಿ ಅದೂ ಒಂದು. ಕನ್ನಡ, ಮಲಯಾಳಂ, ತಮಿಳು, ತೆಲುಗು, ಮರಾಠಿ ಸೇರಿ ಎಲ್ಲಾ ಪ್ರಾದೇಶಿಕ 22 ಭಾಷೆಗಳು ಕೂಡ ರಾಷ್ಟ್ರ ಭಾಷೆಗಳೇ ಎಂದು ಸಂವಿಧಾನ ಹೇಳುತ್ತದೆ.
ಇದು ಸಮಾಜವಾದಿ ನಾಯಕ ಡಾ. ರಾಮ ಮನೋಹರ ಲೋಹಿಯಾ ಅವರಿಗೆ ಗೊತ್ತಿತ್ತು. ಅಂತಲೇ ಕಟ್ಟಾ ಹಿಂದಿ ಪ್ರೇಮಿಯಾಗಿದ್ದ ಅವರು ದಕ್ಷಿಣದ ಭಾಷೆಗಳನ್ನು ರಾಷ್ಟ್ರ ಭಾಷೆಗಳು ಎಂದು ಮನ್ನಿಸುತ್ತಿದ್ದರು. ಕರ್ನಾಟಕದ ಶಿವಮೊಗ್ಗದಿಂದ ಸೋಷಲಿಸ್ಟ್ ಪಕ್ಷದ ಪರವಾಗಿ ಸ್ಪರ್ಧಿಸಿ ಲೋಕಸಭೆಗೆ ಚುನಾಯಿತರಾಗಿದ್ದ ಜೆ.ಎಚ್.ಪಟೇಲ್ ಅವರು ಸಂಸತ್ತಿನಲ್ಲಿ ಇಂಗ್ಲಿಷ್‌ನಲ್ಲಿ ಮಾತನಾಡಲು ಹೊರಟಾಗ ಮಧ್ಯಪ್ರವೇಶ ಮಾಡಿದ ಡಾ.ಲೋಹಿಯಾ ‘ನಿಮ್ಮ ನಾಡಿನ ಭಾಷೆ ಕನ್ನಡದಲ್ಲಿ ಮಾತಾಡಿ ಪಟೇಲರೆ’ ಎಂದು ಸೂಚಿಸಿದ್ದರು.
ರಾಜಕೀಯವಾಗಿಯೂ ಉತ್ತರ ಭಾರತವೇ ಬಹುತ್ವದ ಭಾರತವನ್ನು ನಿಯಂತ್ರಿಸುತ್ತ ಬಂದಿದೆ. ಈ ಯಜಮಾನಿಕೆಯ ವಿರುದ್ಧ ತಮಿಳುನಾಡಿನಲ್ಲಿ ದ್ರಾವಿಡ ಚಳವಳಿ ತಲೆ ಎತ್ತಿತು. ಪ್ರತ್ಯೇಕತೆಯ ಧ್ವನಿಗಳು ಕೇಳಿ ಬರತೊಡಗಿದವು. ಭಾಷಾವಾರು ಪ್ರಾಂತಗಳನ್ನು ವಿರೋಧಿಸುತ್ತ ಬಂದಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಅಖಂಡ ಹಿಂದೂ ರಾಷ್ಟ್ರ ಸ್ಥಾಪನೆಯ ಗುರಿ ಹೊಂದಿದೆ. ಈಗ ಕೇಂದ್ರದ ಅಧಿಕಾರ ಸೂತ್ರ ಹಿಡಿದಿರುವ ಬಿಜೆಪಿ ಸಂಘಪರಿವಾರದ ರಾಜಕೀಯ ವೇದಿಕೆ ಸಹಜವಾಗಿ ಅದು ತನ್ನ ಪರಿಕಲ್ಪನೆಯ ರಾಷ್ಟ್ರ ನಿರ್ಮಾಣದ ಭಾಗವಾಗಿ ಸಂವಿಧಾನದಲ್ಲಿ ಇರುವ ಒಕ್ಕೂಟ ಪರಿಕಲ್ಪನೆಯನ್ನು ನಿಧಾನವಾಗಿ ಅಪ್ರಸ್ತುತಗೊಳಿಸಲು ಅತ್ಯಂತ ವ್ಯವಸ್ಥಿತವಾದ ಕಾರ್ಯತಂತ್ರ ರೂಪಿಸಿದೆ. ಒಂದೇ ರಾಷ್ಟ್ರ, ಒಂದೇ ಭಾಷೆ, ಒಂದೇ ಧರ್ಮ, ಒಂದೇ ರೇಷನ್ ಕಾರ್ಡ್ ಹೀಗೆ ಒಂದೇ ಎನ್ನುವುದೆಲ್ಲ ರಾಜ್ಯಗಳ ಅಸ್ತಿತ್ವವನ್ನು ಬುಡಮೇಲು ಮಾಡುವ ಗುರಿ ಹೊಂದಿದೆ ಎಂದರೆ ತಪ್ಪ್ಪಲ್ಲ.
ಈ ಕಾರ್ಯತಂತ್ರದ ಭಾಗವಾಗಿ ಕೇಂದ್ರ ಸರಕಾರದ ಏಜೆಂಟರಂತಿರುವ ರಾಜ್ಯಪಾಲರ ಮೂಲಕ ರಾಜ್ಯಗಳ ಚುನಾಯಿತ ಸರಕಾರಗಳಿಗೆ ಕಿರುಕುಳ ಕೊಡುವುದು, ಶಾಸಕರನ್ನು ಖರೀದಿ ಮಾಡಿ ಬಿಜೆಪಿಯೇತರ ರಾಜ್ಯ ಸರಕಾರಗಳನ್ನು ಉರುಳಿಸುವುದು, ಭಾಷಾ ಸ್ವಾಯತ್ತತೆ ಮತ್ತು ಆಡಳಿತಾತ್ಮಕ ಸ್ವಾಯತ್ತತೆಗೆ ಧಕ್ಕೆ ತರುವುದು, ಸಂಪನ್ಮೂಲಗಳನ್ನು ಹಂಚಿಕೆ ಮಾಡುವಾಗ ಪಕ್ಷಪಾತ ಮಾಡುವುದು, ರಾಜ್ಯಗಳ ಅಭಿಪ್ರಾಯವನ್ನು ಕಡೆಗಣಿಸುವುದು ಇವೆಲ್ಲ ಸೇರಿವೆ.
ನಮ್ಮ ಸಂವಿಧಾನ ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡರೂ ಕೇಂದ್ರಕ್ಕೆ ಮೂರನೇ ಎರಡರಷ್ಟು ತೆರಿಗೆಯನ್ನು ರಾಜ್ಯಗಳಿಂದ ವಸೂಲಿ ಮಾಡುವ ಅಧಿಕಾರವನ್ನು ಸಂವಿಧಾನ ನೀಡಿದೆ. ಈ ಕೆಲವು ಗೊಂದಲಗಳಿಂದ ಒಂದು ದೇಶ, ಒಂದು ಭಾಷೆ, ಒಂದು ಮಾರುಕಟ್ಟೆ, ಒಂದು ತೆರಿಗೆಯನ್ನು ಪ್ರತಿಪಾದಿಸುವ ಪಕ್ಷ ಸಹಜವಾಗಿ ತನ್ನ ಇಷ್ಟದಂತೆ ಭಾರತವನ್ನು ನಡೆಸುತ್ತದೆ. ಇದಕ್ಕೆ ಸಂಸತ್ತಿನಲ್ಲಿ ಉತ್ತರದ ರಾಜ್ಯಗಳ ಪ್ರಾಬಲ್ಯವೂ ಕಾರಣ. ದಕ್ಷಿಣದ ರಾಜ್ಯಗಳಿಗಿಂತ ಹೆಚ್ಚು ಲೋಕಸಭಾ ಸ್ಥಾನಗಳನ್ನು ಉತ್ತರದ ರಾಜ್ಯಗಳು ಹೊಂದಿವೆ.
ಸಂಸತ್ತಿನಲ್ಲಿರುವ ಬಹುಮತ ಬಳಸಿಕೊಂಡು ಪ್ರತಿಪಕ್ಷ ಸದಸ್ಯರನ್ನು ಹೊರಗೆ ಹಾಕಿ ಈಗಾಗಲೇ ಅತ್ಯಂತ ಮಹತ್ವದ ವಿಧೇಯಕಗಳಿಗೆ ಅಂಗೀಕಾರ ಪಡೆಯಲಾಗಿದೆ. ಪ್ರತಿಪಕ್ಷಗಳನ್ನು ಮಾತ್ರವಲ್ಲ ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾಗಿ ಮುಖ್ಯ ಚುನಾವಣಾ ಆಯುಕ್ತರ ನೇಮಕ ಕುರಿತ ವಿಧೇಯಕವನ್ನೂ ಪಾಸು ಮಾಡಿಕೊಳ್ಳಲಾಗಿದೆ.
ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇತರ ಆಯುಕ್ತರ ಆಯ್ಕೆ ಪ್ರಕ್ರಿಯೆಯಿಂದ ಮುಖ್ಯ ನ್ಯಾಯಮೂರ್ತಿಗಳನ್ನು ಹೊರಗಿಡುವ ವಿಧೇಯಕವನ್ನು ಪ್ರತಿಪಕ್ಷ ಸದಸ್ಯರನ್ನು ಅಮಾನತು ಮಾಡಿ ಅವರ ಅನುಪಸ್ಥಿತಿಯಲ್ಲಿ ಲೋಕಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆಯಲಾಯಿತು. ಈಗ ಚುನಾವಣಾ ಆಯೋಗದ ಆಯುಕ್ತರ ನೇಮಕ ಸಂಪೂರ್ಣವಾಗಿ ಕೇಂದ್ರ ಸರಕಾರದ ನಿಯಂತ್ರಣಕ್ಕೆ ಬರಲಿದೆ. ವಾಸ್ತವವಾಗಿ ಪ್ರಧಾನಮಂತ್ರಿ, ಸಂಸತ್‌ನ ಪ್ರತಿಪಕ್ಷ ನಾಯಕ ಹಾಗೂ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರನ್ನು ಒಳಗೊಂಡ ಸಮಿತಿಯ ಶಿಫಾರಸಿನ ಮೇರೆಗೆ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇತರ ಆಯುಕ್ತರ ನೇಮಕಾತಿ ನಡೆಯಬೇಕೆಂದು ಸುಪ್ರೀಂಕೋರ್ಟ್ ಹೇಳಿದ್ದರೂ ಸಂಸತ್ತನ್ನು ಉಪಯೋಗಿಸಿಕೊಂಡೇ ಸಂಸದೀಯ ಪ್ರಜಾಪ್ರಭುತ್ವವನ್ನು ಹೊಸಕಿ ಹಾಕುವ ಮಸಲತ್ತು ನಡೆದ ಈ ದಿನಗಳಲ್ಲಿ ಒಕ್ಕೂಟ ವ್ಯವಸ್ಥೆ ಹೇಗೆ ಸುರಕ್ಷಿತವಾಗಿ ಇರಲು ಸಾಧ್ಯ? ಭಾರತದ ಜನತೆ ಪ್ರಜ್ಞಾವಂತರಾಗಿ ಸಂಕಲ್ಪ ಮಾಡಿದರೆ ಮಾತ್ರ ತಮ್ಮ ರಕ್ಷಾ ಕವಚವಾದ ಸಂಸದೀಯ ಪ್ರಜಾಪ್ರಭುತ್ವ ಮತ್ತು ಸಂವಿಧಾನಗಳನ್ನು ಉಳಿಸಿಕೊಳ್ಳಲು ಸಾಧ್ಯ. ಇಲ್ಲದಿದ್ದರೆ ಕಳೆದ ಶತಮಾನದ ನಲವತ್ತರ ದಶಕದ ಹಿಟ್ಲರ್ ಕಾಲದ ಜರ್ಮನಿಯ ದಿನಗಳು ಮರುಕಳಿಸಿದರೆ ಅಚ್ಚರಿ ಪಡಬೇಕಾಗಿಲ್ಲ.
ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರದಿಂದ ಬರಬಹುದಾದ ಪಾಲು ಕಡಿಮೆಯಾಗಬಹುದು. ಇದರ ಒಟ್ಟು ಪರಿಣಾಮ ನಾವು ಉಸಿರಾಡುತ್ತಿರುವ ಫೆಡರಲ್ ವ್ಯವಸ್ಥೆ ಅಂದರೆ ಒಕ್ಕೂಟ ವ್ಯವಸ್ಥೆ ಕ್ರಮೇಣ ನಶಿಸಿ ಹೋದರೆ ಅಚ್ಚರಿ ಪಡಬೇಕಾಗಿಲ್ಲ. ಈ ಹುನ್ನಾರವನ್ನು ತಡೆಯುವುದೇ ನೈಜ ಪ್ರಜಾಪ್ರಭುತ್ವ ವಾದಿಗಳ, ಭಾರತದ ಅಭಿಮಾನಿಗಳ ಆದ್ಯ ಕರ್ತವ್ಯವಾಗಿದೆ.