ನೆಹರೂ ನಿಂದನೆಗೆ ಸಂಸತ್ತಿನ ದುರ್ಬಳಕೆ

ಇವರು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಹನ್ನೊಂದು ವರ್ಷಗಳಾದವು. ಸಾಧಿಸಿದ್ದೇನೂ ಇಲ್ಲ. ಬದಲಾಗಿ ಸ್ವಾತಂತ್ರ್ಯಾ ನಂತರ ಅಪಾರ ಪರಿಶ್ರಮ ಮತ್ತು ಬದ್ಧತೆಯಿಂದ ಕಟ್ಟಿದ ಆಧುನಿಕ ಭಾರತದ ಅಪರೂಪದ ಸಾಧನೆಗಳನ್ನು ಒಂದೊಂದಾಗಿ ಮಣ್ಣು ಪಾಲು ಮಾಡುತ್ತ ಬಂದರು. ಸುಳ್ಳು ಹೇಳುವ ತಮ್ಮ ನಾಯಕನನ್ನು ವಿಜೃಂಭಿಸಲು ದೇಶದ ಮೊದಲ ಪ್ರಧಾನ ಮಂತ್ರಿ ಪಂಡಿತ್‌ಜವಾಹರಲಾಲ್ ನೆಹರೂ ಅವರನ್ನು ತಮ್ಮ ವಾಟ್ಸ್‌ಆ್ಯಪ್ ಯುನಿವರ್ಸಿಟಿಗಳ ಮೂಲಕ ತೇಜೋವಧೆ ಮಾಡುತ್ತ ಬಂದರು.ತಮ್ಮ ಈಗಿನ ವೈಫಲ್ಯಗಳನ್ನು ಮರೆ ಮಾಚಲು ನೆಹರೂ ಅವರತ್ತ ಬೆರಳು ತೋರಿಸ ತೊಡಗಿದರು. ಇತ್ತೀಚೆಗೆ ಲೋಕಸಭೆಯಲ್ಲಿ ಬೆಂಗಳೂರಿನಿಂದ ಚುನಾಯಿತನಾದ ಪಡ್ಡೆಯೊಬ್ಬ ನೆಹರೂ ಬಗ್ಗೆ ಸುಳ್ಳು ಹೇಳಲು ಹೋಗಿ ಶರದ್ ಪವಾರರ ರಾಷ್ಟ್ರ ವಾದಿ ಕಾಂಗ್ರೆಸ್ ಸಂಸದೆ ಸುಪ್ರಿಯಾ ಸುಳೆ ಮತ್ತು ಡಿ.ಎಂ.ಕೆ.ಯ ಕನಿಮೋಳಿ ಅವರಿಂದ ಉಗಿಸಿಕೊಂಡ. ಕಾಂಗ್ರೆಸ್ ಸದಸ್ಯರಿಂದ ಬರಬೇಕಾಗಿದ್ದ ಪ್ರತಿರೋಧ ಇವರಿಂದ ಬಂತು.
ಸಂಘ ಪರಿವಾರದ ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರದವರು ಅತ್ಯಂತ ವ್ಯವಸ್ಥಿತವಾಗಿ ಬೆಳೆಸಿದ ಅರೆಬೆಂದ ಈ ಹುಡುಗ ಭಾರತದ ಮಹಾನಾಯಕನ ಬಗ್ಗೆ ವಾಟ್ಸ್ ಆ್ಯಪ್ ಯುನಿವರ್ಸಿಟಿ ಯ ಸುಳ್ಳಿನ ರೈಲು ಬಿಟ್ಟ. ಈತನ ಅವಿವೇಕತನವನ್ನು ನಮ್ಮ ಕರ್ನಾಟಕದವರೇ ಆದ ಗೆಳೆಯ ಸುಧೀಂದ್ರ ಕುಲಕರ್ಣಿ ಅವರು ‘ದಿ ಸ್ಕ್ರೋಲ್ ಇನ್ ವೆಬ್’ ಪತ್ರಿಕೆಯಲ್ಲಿ ಸುದೀರ್ಘವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ತೇಜಸ್ವಿ ಸೂರ್ಯ ಎಂಬ ಅವಿವೇಕಿಯ ಬಗ್ಗೆ ಕುಲಕರ್ಣಿ ಅವರು ಬರೆದ ಲೇಖನ ಗಮನಾರ್ಹವಾಗಿದೆ. ಹಿಂದೂ ಸಮಾಜದ ಮೇಲೆ ಸಾಂಸ್ಕೃತಿಕ ಏಕರೂಪತೆಯನ್ನು ಒತ್ತಾಯಪೂರ್ವಕವಾಗಿ ಹೇರುವ ಪ್ರಯತ್ನದ ಮೂಲಕ ಬಿಜೆಪಿಯವರು ಭಾರತೀಯ ಸಮಾಜದ ವೈವಿಧ್ಯ, ಬಹುತ್ವದಲ್ಲಿನ ನಂಬಿಕೆ, ಸಹಿಷ್ಣುತೆ ಗಾಗಿ ಜಗತ್ತಿನ ಗೌರವ ಪಡೆದಿರುವ ಭಾರತದ ಆತ್ಮವನ್ನು ನೋಯಿಸಿದೆ ಎಂದು ಕುಲಕರ್ಣಿ ಹೇಳಿದ್ದಾರೆ. ಅದರಲ್ಲೂ ವಿಶೇಷವಾಗಿ ತೇಜಸ್ವಿ ಸೂರ್ಯ ಮೂರ್ಖತನವನ್ನು ಲೇಖನದುದ್ದಕ್ಕೂ ಟೀಕಿಸಿದ್ದಾರೆ.
ಅರೆ ಬೆಂದ ಈ ಹುಡುಗ ನೆಹರೂ ಅವರಂಥ ಸೂರ್ಯನ ಮೇಲೆ ಉಗುಳಲು ಹೋಗಿ ತನ್ನ ಮುಖ ಹೊಲಸು ಮಾಡಿಕೊಂಡ. ತಮ್ಮ ಬಂಡಲ್ ಗುರುವನ್ನು ಓಲೈಸಲು ಬಾಯಿಗೆ ಬಂದಂತೆ ಮಾತಾಡಿದ.ನೆಹರೂ ರಾಷ್ಟ್ರಕ್ಕೆ ಸೇನೆಯೇ ಬೇಡ ಎಂದು ಹೇಳಿದ್ದರು ಎಂದು ಸುಳ್ಳು ಹೇಳಿದ. ಈ ಕುಚೇಷ್ಟೆಯ ಸುಳ್ಳಿಗೆ ಕಾಂಗ್ರೆಸ್ ಸದಸ್ಯರಿಂದ ಮೊದಲು ಉತ್ತರ ಬರಬೇಕಾಗಿತ್ತು.ಆದರೆ ಆ ಪಕ್ಷದಲ್ಲೂ ನಯನಾ ಮೊಟಮ್ಮನವರಂಥವರ ಸಂಖ್ಯೆ ಹೆಚ್ಚಾಗಿರುವುದರಿಂದ ಅಂಥ ಪ್ರತಿಕ್ರಿಯೆ ತಕ್ಷಣ ಬರಲಿಲ್ಲ. ಬದಲಿಗೆ ರಾಷ್ಟ್ರ ವಾದಿ ಕಾಂಗ್ರೆಸ್ ನಾಯಕಿ ಸುಪ್ರಿಯಾ ಸುಳೆಯವರು ಮತ್ತು ಡಿ.ಎಂ. ಕೆ.ಯ ಕನಿಮೋಳಿ ಅವರು ಈತನನ್ನು ತರಾಟೆಗೆ ತೆಗೆದುಕೊಂಡರು. ನೆಹರೂ ಕಾಲದಲ್ಲೇ ನಿಜಾಮರಿಂದ ಹೈದರಾಬಾದ್ ವಿಮೋಚನೆಯಾಯಿತು.1961 ರಲ್ಲಿ ಪೊರ್ಚುಗೀಸರಿಂದ ಸೇನಾ ಕಾರ್ಯಾಚರಣೆ ನಡೆಸಿ ಗೋವವನ್ನು ಮುಕ್ತಗೊಳಿಸಲಾಯಿತು. ಪಾಕಿಸ್ತಾನವನ್ನು ಎರಡು ಬಾರಿ ಹಿಮ್ಮೆಟ್ಟಿಸಲಾಯಿತು.ಹೀಗೆ ಅಂಕಿಸಂಖ್ಯೆಗಳ ಮೂಲಕ ಸುಪ್ರಿಯಾ ಸುಳೆ ಮಾತಾಡುವಾಗ ಸದನದ ಎಸಿ ಸಭಾಂಗಣದಲ್ಲೂ ಈತ ಮಾತ್ರವಲ್ಲ ಈತನ ಗುರುವಿನ ಮುಖದ ಮೇಲೆ ಬೆವರಿಳಿಯತೊಡಗಿತು.ಸಾಲದೆಂಬಂತೆ ಡಿ.ಎಂ.ಕೆ.ಯ ಕನಿಮೊಳಿ ಅವರು ಮೈ ಮುಟ್ಟಿ ನೋಡಿಕೊಳ್ಳುವಂತೆ ಝಾಡಿಸಿದರು.
ಭಾರತದಂಥ ನೂರಾ ನಲವತ್ತು ಕೋಟಿ ಜನಸಂಖ್ಯೆಯ ಬಹುತ್ವ ದೇಶದ ಸಾರಥ್ಯ ವಹಿಸಿದ ವ್ಯಕ್ತಿ ಹೇಗಿರಬೇಕು ಎಂಬುದಕ್ಕೆ ನೆಹರೂ ಮಾದರಿಯಾಗಿದ್ದಾರೆ.ಹೇಗಿರಬಾರದೆಂಬುದಕ್ಕೆ ಯಾರು ಮಾದರಿ ಎಂಬುದು ಎಲ್ಲರಿಗೂ ಗೊತ್ತಿದೆ. ಬ್ರಿಟಿಷರು ಬಿಟ್ಟು ಹೋದಾಗ ಒಂದು ದೇಶದ ಸ್ವರೂಪವನ್ನೇ ಪಡೆದಿರದಿದ್ದ ಭಾರತದ ನೆಲದ ಸಂಸ್ಥಾನಗಳನ್ನೆಲ್ಲ ಒಟ್ಟುಗೂಡಿಸಿ ಆದುನಿಕ ಭಾರತವನ್ನು ಕಟ್ಟಿದವರು ಜವಾಹರಲಾಲ್ ನೆಹರೂ.ಅಂತರ್‌ರಾಷ್ಟ್ರೀಯ ವಾಗಿ ಭಾರತದ ಘನತೆ, ಪ್ರತಿಷ್ಠೆ ಹೆಚ್ಚಾಗಿದ್ದು ನೆಹರೂ ಕಾಲದಲ್ಲಿ ಅಲಿಪ್ತ ಆಂದೋಲನವನ್ನು ಕಟ್ಟಿ ಅಮೆರಿಕದ ಸಾಮ್ರಾಜ್ಯಶಾಹಿ ಗೆ ಸವಾಲು ಹಾಕಿದವರು ನೆಹರೂ.ನೆಹರೂ ಕಾಲದಲ್ಲಿ ರಕ್ಷಣಾ ಮಂತ್ರಿಯಾಗಿದ್ದ ವಿ. ಕೆ. ಕೃಷ್ಣ ಮೆನನ್ ಸಂಯುಕ್ತ ರಾಷ್ಟ್ರ ಸಂಸ್ಥೆಯ ಸಭೆಯಲ್ಲಿ ಸುದೀರ್ಘ ಎಂಟು ತಾಸು ಮಾತಾಡಿ ಭಾರತದ ನಿಲುವನ್ನು ಸಮರ್ಥಿಸಿದ ದಾಖಲೆಯನ್ನು ಈ ವರೆಗೆ ಯಾರೂ ಮುರಿದಿಲ್ಲ.ಆದರೆ ಈಗ ಸದನದಲ್ಲಿ ಟ್ರಂಪ್ ಹೆಸರು ಹೇಳಲು ಹೆದರುವ ಪುಕ್ಕಲರಿಗೆ ಇದೆಲ್ಲ ಹೇಗೆ ಅರ್ಥವಾಗಬೇಕು.? ಸಂಸತ್ತಿನ ಉಭಯ ಸದನಗಳ ಅಧಿವೇಶನ ನಡೆದಾಗ ಪ್ರಧಾನಿ ನೆಹರೂ ನಿತ್ಯವೂ ಸದನಕ್ಕೆ ಬಂದು ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ವಿರೋಧ ಪಕ್ಷಗಳ ಟೀಕೆ ಟಿಪ್ಪಣಿಗಳನ್ನು ಸ್ವಾಗತಿಸುತ್ತಿದ್ದರು.ಆದರೆ ಅಧಿವೇಶನ ನಡೆದಾಗ ವಿದೇಶಕ್ಕೆ ಜಿಗಿಯುವ ಹಾಗೂ ಸದನಕ್ಕೆ ಬರಲು ಹಿಂಜರಿಯುವವರನ್ನು ನೆಹರೂ ಅವರಿಗೆ ಹೋಲಿಕೆ ಮಾಡಲು ಹೇಗೆ ಸಾಧ್ಯ? ಎಂದೂ ಸುದ್ದಿಗೋಷ್ಠಿ ನಡೆಸದ, ಪ್ರಶ್ನೆಗಳನ್ನು ಎದುರಿಸಲಾಗದೇ ಪಲಾಯನ ಮಾಡುವ ಮಹಾಶಯರಿಗೆ ನೆಹರೂ ಅರ್ಥವಾಗುವುದಿಲ್ಲ. ಇವರ ದಿವಾಳಿಕೋರ ವಿದೇಶ ನೀತಿಯ ಪರಿಣಾಮವಾಗಿ ಭಾರತ ಇಂದು ಜಗತ್ತಿನಲ್ಲಿ ಒಂಟಿಯಾಗಿ ನಿಲ್ಲಬೇಕಾಗಿ ಬಂದಿದೆ.
ನೋಟು ಅಮಾನ್ಯೀಕರಣ, ದಿಲ್ಲಿಯಲ್ಲಿ ವರ್ಷವಿಡೀ ನಡೆದ ರೈತರ ಹೋರಾಟ, ಕೋವಿಡ್ ಕಾಲದಲ್ಲಿ ಒಮ್ಮಿಂದೊಮ್ಮೆಲೆ ಹೇರಿದ ಲಾಕ್‌ಡೌನ್, ಆಗ ಉಂಟಾದ ಸಾವುಗಳು, ಎರಡು ವರ್ಷಗಳಿಂದ ಹಿಂಸಾಚಾರದಿಂದ ತತ್ತರಿಸಿದ ಮಣಿಪುರ, ಹೀಗೆ ಹಲವಾರು ಸಮಸ್ಯೆಗಳ ಬಗ್ಗೆ ಈಗಿನ ಪ್ರಧಾನಿ ನರೇಂದ್ರ ಮೋದಿಯವರು ಮಾತಾಡಿದ್ದು ಕಡಿಮೆ. ಮೌನವೆಂಬ ಪಲಾಯನವಾದಕ್ಕೆ ಮೊರೆ ಹೋಗಿದ್ದೇ ಜಾಸ್ತಿ. ಪ್ರಶ್ನೆ ಎದುರಾದಾಗ ಸುಮ್ಮನಿದ್ದು ಇನ್ಯಾವಾಗಲೋ ಬಾಯಿ ಬಿಡುವುದು ಇವರ ಚಾಳಿ. ತೀರ ಇತ್ತೀಚಿನ ಉದಾಹರಣೆಯೆಂದರೆ ಆಪರೇಷನ್ ಸಿಂಧೂರ ಬಗ್ಗೆ ಸದನದಲ್ಲಿ ಪ್ರತಿಪಕ್ಷ ಗಳು ಪ್ರಶ್ನಿಸಿದಾಗ ಮೌನವೇ ಸರಕಾರದ ಉತ್ತರವಾಗಿತ್ತು.
ಭಾರತ ಪಾಕಿಸ್ತಾನ ನಡುವೆ ಘರ್ಷಣೆ ಆರಂಭವಾದಾಗ ಕದನ ವಿರಾಮ ಮಾಡಿಸಿದ್ದು ತಾನು ಎಂದು ಅಮೆರಿಕದ ಅಧ್ಯಕ್ಷ ಟ್ರಂಪ್ ಹಲವಾರು ಸಲ ಹೇಳಿದರೂ ಸದನದಲ್ಲಿ ಉತ್ತರಿಸುವಾಗ ಟ್ರಂಪ್ ಹೆಸರು ಹೇಳಲು ಹಿಂಜರಿದರು.ತಾಸುಗಟ್ಟಲೇ ಮಾತಾಡಿದರೂ ನಿರ್ದಿಷ್ಟ ಪ್ರಶ್ನೆಗಳಿಗೆ ಇವರ ಬಳಿ ಉತ್ತರವಿರಲಿಲ್ಲ. ಜಾಗತಿಕವಾಗಿ ಭಾರತದ ಘನತೆ, ಪ್ರತಿಷ್ಠೆ ಇವರ ಕಾಲದಲ್ಲಿ ಸಂಪೂರ್ಣವಾಗಿ ಹಾಳಾಗಿ ಹೋಗಿದೆ.ವಿದೇಶಾಂಗ ನೀತಿ ಹಳ್ಳ ಹಿಡಿದಿದೆ. ಪಹಲ್ಗಾಮ್‌ನಲ್ಲಿ ಯಾತ್ರಿಕರ ಮೇಲೆ ಭಯೋತ್ಪಾದಕರು ದಾಳಿ ಮಾಡಿ ಅನೇಕರನ್ನು ಕೊಂದರು.ಅಲ್ಲಿ ಭದ್ರತಾ ವ್ಯವಸ್ಥೆಯನ್ನು ಯಾಕೆ ಮಾಡಿರಲಿಲ್ಲ? ಇದಕ್ಕೆಲ್ಲ ನೆಹರೂ ಕಾರಣರೇ?
ಸಂಸತ್ತಿನಲ್ಲಾಗಲಿ ಹೊರಗಡೆಯಾಗಲಿ ನೆಹರೂ ಮತ್ತು ಗಾಂಧೀಜಿ ಮೇಲೆ ಕೋಮುವಾದಿ ಶಕ್ತಿಗಳು, ವಾಟ್ಸ್‌ಆ್ಯಪ್ ಯುನಿವರ್ಸಿಟಿಗಳು ಸುಳ್ಳು ಪ್ರಚಾರ ನಡೆಸುತ್ತಿರುವಾಗ ಕಾಂಗ್ರೆಸ್ ಸಂಸದರಾಗಲಿ, ಪಕ್ಷದ ನಾಯಕರಾಗಲಿ ಅದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಉದಾಹರಣೆಗಳು ಕಡಿಮೆ. ಸಂಸತ್ತಿನ ಉಭಯ ಸದನಗಳಲ್ಲಿ ಮಲ್ಲಿಕಾರ್ಜುನ ಖರ್ಗೆ, ಜೈ ರಾಂ ರಮೇಶ್, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿವರೇನೋ ಮಾತಾಡುತ್ತಾರೆ. ಆದರೆ ಉಳಿದವರು ಗಪ್‌ಚುಪ್. ಕರ್ನಾಟಕ ವಿಧಾನಸಭೆಯಲ್ಲೂ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಕೋಮುವಾದಿ ಗಳನ್ನು ತರಾಟೆಗೆ ತೆಗೆದುಕೊಳ್ಳುವಾಗಲೂ ಅವರ ಕಾಂಗ್ರೆಸ್ ಪಕ್ಷದ ಶಾಸಕರು, ಮಂತ್ರಿಗಳು ಅವರ ಬೆಂಬಲಕ್ಕೆ ನಿಂತ ಉದಾಹರಣೆಗಳು ಕೂಡಾ ಅಪರೂಪ.ಇದಕ್ಕೆ ಅಧ್ಯಯನದ ಹಾಗೂ ಬದ್ಧತೆಯ ಕೊರತೆ ಕಾರಣ.ಕಾಂಗ್ರೆಸ್ ಪಕ್ಷ ಈ ಸೈದ್ಧಾಂತಿಕ ಅರಿವಿನ ಲೋಪವನ್ನು ಸರಿಪಡಿಸಿಕೊಳ್ಳಬೇಕಾಗಿದೆ.
ಭಾರತ ಎಂಬುದು ವಿಭಿನ್ನ ಜನ ಸಮುದಾಯಗಳಿಗೆ,
ಭಾಷೆಗಳಿಗೆ, ಧರ್ಮಗಳಿಗೆ, ಸಂಸ್ಕೃತಿ ಗಳಿಗೆ ಆಸರೆ ನೀಡಿದ ಭೂ ಪ್ರದೇಶ. ಸ್ವಾತಂತ್ರ್ಯಾ ನಂತರ ಒಂದು ದೇಶವಾಗಿ ಹೊರ ಹೊಮ್ಮಿದ ಇದರ ಬಹುತ್ವ ದ ಮಹತ್ವ ನೆಹರೂ ಅವರಿಗೆ ಗೊತ್ತಿತ್ತು. ಬ್ರಿಟಿಷರು ಹೋದ ನಂತರ ಇದನ್ನು ಮನುವಾದಿ ಹಿಂದೂರಾಷ್ಟ್ರವನ್ನಾಗಿ ಮಾಡುವ ಮಸಲತ್ತನ್ನು ಸಾವರ್ಕರ್, ಗೊಳ್ವ್ವಾಲ್ಕರ್ ಮಾಡಿದ್ದರು.ಇದಕ್ಕೆ ಪೂರಕವಾಗಿ ಭಾರತದ ವೇದ, ಪುರಾಣ, ರಾಮಾಯಣ,
ಮಹಾಭಾರತ, ಭಗವದ್ಗೀತೆಗಳು ಸೇರಿದಂತೆ ಯಾವುದೇ ಧಾರ್ಮಿಕ ಗ್ರಂಥಗಳಲ್ಲಿ ಇಲ್ಲದ ಹಿಂದೂ ಎಂಬ ಪದದ ಸುತ್ತ ಒಂದು ಸಿದ್ಧಾಂತವನ್ನು ರೂಪಿಸಿದರು.ಈ ಸಿದ್ಧಾಂತದ ಮೂಲ ಭಾರತವಲ್ಲ.ಜರ್ಮನಿ ಮತ್ತು ಇಟಲಿ. ನಾಗಪುರದ ಶಿವರಾಮ ಮುಂಜೆ ಇಟಲಿಗೆ ಹೋಗಿ ಮುಸ್ಸೋಲಿನಿಯನ್ನು ಭೇಟಿಯಾಗಿ ಅವನಿಂದ ಫ್ಯಾಶಿಸ್ಟ್ ಸಿದ್ದಾಂತವನ್ನು, ಜರ್ಮನಿಯಿಂದ ಹಿಟ್ಲರನ ಮೂಲಕ ನಾಝಿ ಸಿದ್ಧಂತವನ್ನು ಎರವಲು ತಂದು ಹಿಂದುತ್ವ ದ ಬೀಜ ನೆಟ್ಟರು.ಇದನ್ನು ನೆಹರೂ ಬಯಲಿಗೆಳೆಯುತ್ತಿದ್ದರು.
ಅಂತಲೇ ನೆಹರೂ ಮತ್ತು ಅವರ ಕುಟುಂಬದವರ ವಿರುದ್ಧ ನಿರಂತರ ಇವರು ಅಪಪ್ರಚಾರ ಮಾಡುತ್ತ ಬಂದರು.ಸ್ವಾತಂತ್ರ್ಯಾ ನಂತರದ ಆಧುನಿಕ ಭಾರತದ ನಿರ್ಮಾಣದಲ್ಲಿ ನೆಹರೂ ಕೊಡುಗೆಯ ಬಗ್ಗೆ ಇಂದಿನ ಪೀಳಿಗೆಗೆ ಗೊತ್ತಿಲ್ಲ. ಕೋಮುವಾದಿ ಗಳ ನಿರಂತರ ತೇಜೋವಧೆಯ ಅಬ್ಬರದಲ್ಲಿ ಸತ್ಯ ಹೊರಗೆ ಬಂದಿಲ್ಲ. ನೆಹರೂ ಸಾಧನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಕಾಂಗ್ರೆಸ್ ಕೂಡ ಮಾಡಲಿಲ್ಲ. ಖರ್ಗೆಯವರು ಹೇಳಿದಂತೆ ಅಧಿಕಾರದ ಆಸೆಯಿಂದ ಕಾಂಗ್ರೆಸ್ ಸೇರಿದವರಿಗೆ ಸ್ವತಂತ್ರ ಭಾರತದ ಸಾಧನೆಗಳನ್ನು ಜನರಿಗೆ ವಿವರಿಸುವ ಆಸಕ್ತಿ ಇರಲಿಲ್ಲ.
ಹಿಂದುತ್ವದ ಹಿನ್ನೆಲೆಯನ್ನು ಮೊದಲು ಗುರುತಿಸಿ ಖಡಾಖಂಡಿತವಾಗಿ ವಿರೋಧಿಸಿದವರು ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ. ಅಂತಲೇ ಅವರು ಅಂದಿನಿಂದಲೇ ಈ ಷಡ್ಯಂತ್ರವನ್ನು ವಿರೋಧಿಸುತ್ತಾ ಬಂದರು. ಕಂಡರೆ ಇವರಿಗೆ ಆಗುವುದಿಲ್ಲ.
ಸ್ವಾತಂತ್ರ್ಯಾ ನಂತರ ಮೊದಲ ಹದಿನೇಳು ವರ್ಷಗಳ ಕಾಲಾವಧಿಯಲ್ಲಿ ನೆಹರೂ ಪ್ರಧಾನಿಯಾಗಿರದಿದ್ದರೆ ಭಾರತದ ಪರಿಸ್ಥಿತಿ ಹೀಗಿರುತ್ತಿರಲಿಲ್ಲ. ನಮ್ಮ ದೇಶದಲ್ಲಿ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಆಳವಾಗಿ ಬೇರೂರಿದ್ದರೆ ಅದರ ಶ್ರೇಯಸ್ಸು ನೆಹರೂ ಮತ್ತು ಅಂಬೇಡ್ಕರ್ ಅವರಿಗೆ ಸಲ್ಲಬೇಕು. ನರೇಂದ್ರ ಮೋದಿಯಂಥ ಒಬ್ಬ ಸಾಮಾನ್ಯ ಕುಟುಂಬದಿಂದ ಬಂದ ವ್ಯಕ್ತಿ ಪ್ರಧಾನಿಯಾಗುತ್ತಾರೆಂದರೆ ಅದು ಬಾಬಾಸಾಹೇಬರ ಸಂವಿಧಾನ ಮತ್ತು ನೆಹರೂ ಹಾಕಿದ ಜನತಾಂತ್ರಿಕ ಅಡಿಪಾಯ ಕಾರಣ.ಇದು ಮೋದಿಯವರಿಗೂ ಗೊತ್ತಿದೆ. ಆದರೆ ಅವರು ಒಪ್ಪಿ , ಆಯ್ಕೆ ಮಾಡಿಕೊಂಡ ರಾಜಕೀಯ ವಾಸ್ತವವನ್ನು ಒಪ್ಪಿಕೊಳ್ಳಲು ಬಿಡುವುದಿಲ್ಲ.
ಭಾರತದ ಸಾರ್ವಜನಿಕ ಉದ್ಯಮಗಳು, ಅಣೆಕಟ್ಟು ಗಳು, ಶಾಲೆ,ಕಾಲೇಜುಗಳು, ರೈಲು ಮಾರ್ಗಗಳು,ಆರೋಗ್ಯ ಕೇಂದ್ರಗಳು ,ಸರಕಾರಿ ಆಸ್ಪತ್ರೆಗಳು , ಬಾಹ್ಯಾಕಾಶ ಸಂಶೋಧನಾ ಕೇಂದ್ರಗಳು ,ರಾಷ್ಟ್ರೀಕೃತ ಬ್ಯಾಂಕುಗಳು ಇವೆಲ್ಲ 2014 ರ ನಂತರ ಒಮ್ಮ್ಮೆಲೇ ಧರೆಗಿಳಿದು ಬರಲಿಲ್ಲ. ಇವು ನೆಹರೂ ಪ್ರಧಾನಿ ಯಾದ ನಂತರ, 1947 ರ ನಂತರ ಹಂತಹಂತವಾಗಿ ಸಾಕಾರಗೊಂಡ ಸಾಧನೆಗಳು.
ನೆಹರೂ ಅವರನ್ನು ಕಾರಣವಿಲ್ಲದೇ ಟೀಕಿಸುವವರು ಅವರು ಬರೆದ ‘‘ಡಿಸ್ಕವರಿ ಆಫ್ ಇಂಡಿಯಾ’’ ಮತ್ತು ‘‘ಗ್ಲಿಂಪ್ಸಸ್ ಆಫ್ ವರ್ಲ್ಡ್ ಹಿಸ್ಟರಿ’’ ಪುಸ್ತಕಗಳನ್ನು ಓದಲಿ. ಕಾಂಗ್ರೆಸ್ ಪಕ್ಷವೂ ತನ್ನ ಕಾರ್ಯಕರ್ತರಿಗೆ ಈ ಪುಸ್ತಕಗಳ ಬಗ್ಗೆ ಅಧ್ಯಯನ ಶಿಬಿರಗಳನ್ನು ಏರ್ಪಡಿಸಲಿ. ಇದರ ಜೊತೆಗೆ ನೆಹರೂ ಅವರು ಜೈಲಿನಲ್ಲಿ ಇದ್ದಾಗ ಮಗಳು ಇಂದಿರಾ ಅವರಿಗೆ ಬರೆದ ಪತ್ರಗಳನ್ನು ಓದಲಿ. ಎಷ್ಟು ಸರಳವಾಗಿ ಜಗತ್ತಿನ, ಮನುಕುಲದ ಚರಿತ್ರೆಯನ್ನು ವಿವರಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೆಹರೂ ಅವರ ಸಾಹಿತ್ಯವನ್ನು ಕನ್ನಡದಲ್ಲಿ ಅನುವಾದ ಮಾಡಿಸಿ ಸರಕಾರದಿಂದ ಪ್ರಕಟಿಸಲಿ.
ಈಗಾಗಲೇ ಲೋಹಿಯಾ ಮತ್ತು ಡಾ. ಅಂಬೇಡ್ಕರ್ ಸಂಪುಟಗಳನ್ನು ಪ್ರಕಟಿಸಲಾಗಿದೆ. ಸಂಘ ಪರಿವಾರದ ಕಾರ್ಯಕರ್ತರು ತಮ್ಮ ವಿಚಾರಕ್ಕೆ ಭಿನ್ನವಾದ ಸಾಹಿತ್ಯವನ್ನು ಓದುವುದಿಲ್ಲ. ಹೀಗಾಗಿ ಅವರ ಬೌದ್ಧ್ದಿಕ ಮಟ್ಟ ಇದ್ದಲ್ಲೇ ಇದ್ದು ಭಕ್ತರೆಂದು ಲೇವಡಿಗೆ ಒಳಗಾಗುತ್ತಾರೆ.
ನಮ್ಮ ಮಕ್ಕಳಿಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ವೈಚಾರಿಕ ಸಾಹಿತ್ಯವನ್ನು, ನೆಹರೂ ಮತ್ತು ಗಾಂಧೀಜಿಯವರ ಬರಹಗಳನ್ನು ಓದಲು ಕೊಡಬೇಕು. ಆಗ ಅವರು ಬದಲಾಗುತ್ತಾರೆ.
ರಾಜಕೀಯ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಜವಾಹರಲಾಲ್ ನೆಹರೂ ಗೌರವಿಸುತ್ತಿದ್ದರು. ತಮ್ಮ ಕಟು ಟೀಕಾಕಾರರಾಗಿದ್ದ ಡಾ. ರಾಮ ಮನೋಹರ ಲೋಹಿಯಾ ಅವರು ಸದನದಲ್ಲಿ ಇರಬೇಕೆಂದು ಬಯಸುತ್ತಿದ್ದ ನೆಹರೂ ಅವರ ಮಾತುಗಳನ್ನು ಆಲಿಸುತ್ತಿದ್ದರು.ಕಮ್ಯುನಿಸ್ಟ್ ನಾಯಕರಾಗಿದ್ದ ಎಸ್.
ಎ.ಡಾಂಗೆ, ಭೂಪೇಶ್ ಗುಪ್ತ್ತಾ ಮತ್ತು ಎ.ಕೆ.ಗೋಪಾಲನ್ ಅವರ ಬಗ್ಗೆ ಕೂಡ ನೆಹರೂ ಅಪಾರ ಗೌರವ ಹೊಂದಿದ್ದರು. ಭೂಪೇಶ್ ಗುಪ್ತಾ ಸದನದಲ್ಲಿ ಮಾತಾಡುತ್ತಾರೆಂದರೆ ಆ ದಿನ ನೆಹರೂ ತಪ್ಪದೇ ಸದನಕ್ಕೆ ಬಂದು ಅವರ ಭಾಷಣವನ್ನು ಟಿಪ್ಪಣಿ ಮಾಡಿಕೊಳ್ಳುತ್ತಿದ್ದರು.ಅಂತಲೇ ಸೈದ್ಧಾಂತಿಕವಾಗಿ ನೆಹರೂ ಅವರ ಕಡು ವಿರೋಧಿಯಾದ ಅಟಲ್ ಬಿಹಾರಿ ವಾಜಪೇಯಿ ಅವರು ಕೂಡ ನೆಹರೂ ಬಗ್ಗೆ ಗೌರವ ಹೊಂದಿದ್ದರು. 1977ರಲ್ಲಿ ಮೊರಾರ್ಜಿ ದೇಸಾಯಿ ಅವರ ಸಂಪುಟದಲ್ಲಿ ವಾಜಪೇಯಿ ಅವರು ವಿದೇಶ ಮಂತ್ರಿ ಯಾಗಿದ್ದಾಗ ಅವರ ಅಧಿಕೃತ ಕೊಠಡಿಯಲ್ಲಿ ಇದ್ದ ನೆಹರೂ ಅವರ ಪಟ ಮಾಯವಾಗಿತ್ತು. ಇದರಿಂದ ಕೋಪ ಗೊಂಡ ವಾಜಪೇಯಿ ನೆಹರೂ ಪಟ ತೆಗೆದವರನ್ನು ತರಾಟೆಗೆ ತೆಗೆದುಕೊಂಡರು. ನೆಹರೂ ಪಟವನ್ನು ಮತ್ತೆ ತರಿಸಿ ಗೋಡೆಗೆ ಹಾಕಿಸಿದರು.
ಇಂಥ ನೆಹರೂ ಬಗ್ಗೆ ತಲೆಯಲ್ಲಿ ಮೆದುಳಿಲ್ಲದ ಭಕ್ತರು ಅಸಭ್ಯವಾಗಿ ಮಾತಾಡುತ್ತಾರೆ. ವಾಟ್ಸ್‌ಆ್ಯಪ್ ಯುನಿವರ್ಸಿಟಿ ಗಳಲ್ಲಿ ಅವರು ಪಡೆದ ತರಬೇತಿ ಅವರ ವಿವೇಕವನ್ನು ನಾಶ ಮಾಡಿದೆ.ಆದರೆ ಗಾಂಧಿ , ನೆಹರೂ ಸಿದ್ಧಾಂತವನ್ನು ಒಪ್ಪಿಕೊಂಡಿರುವ ಕಾಂಗ್ರೆಸ್ ನಾಯಕರಿಗೆ ಏನಾಗಿದೆ? ಎಷ್ಟು ಜನ ಕಾಂಗ್ರೆಸ್ ಶಾಸಕರಿಗೆ ನೆಹರೂ ಬಗ್ಗೆ ಗೊತ್ತಿದೆ? ಇನ್ನಾದರೂ ಕಾಂಗ್ರೆಸ್ ತನ್ನ ಕಾರ್ಯಕರ್ತರಿಗೆ ಗಾಂಧಿ, ನೆಹರೂ ,ಅಂಬೇಡ್ಕರ್ ಸಿದ್ಧಾಂತದ ಬಗ್ಗೆ ತಿಳುವಳಿಕೆ ನೀಡಲಿ.
ನೆಹರೂ ಪಕ್ಷದೊಳಗಿನ ಒತ್ತಡಕ್ಕೆ ಮಣಿದು ಮಾಡಿದ ಒಂದೇ ಒಂದು ತಪ್ಪೆಂದರೆ 1957 ರಲ್ಲಿ ಕೇರಳದಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಇ.ಎಂ.ಎಸ್.ನಂಬೂದಿರಿ ಪಾಡ್ ಅವರ ನೇತೃತ್ವದ ಕಮ್ಯುನಿಸ್ಟ್ ಸರಕಾರವನ್ನು ಪದಚ್ಯುತಗೊಳಿಸಿದ್ದು. ಇಂಥ ಕೆಲ ಲೋಪಗಳನ್ನು ಹೊರತುಪಡಿಸಿದರೆ ನೆಹರೂ ಈ ದೇಶ ಕಂಡ ಮಹಾನ್ ನಾಯಕ.
ಬಾಬಾಸಾಹೇಬ್ ಅಂಬೇಡ್ಕರ್ ಗಾಂಧಿ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದ್ದರೂ ನೆಹರೂ ಅವರ ಬಗ್ಗೆ ಅವರಿಗೆ ಗೌರವವಿತ್ತು.ಸಂವಿಧಾನ ರಚನಾ ಕಾರ್ಯದಲ್ಲಿ ನೆಹರೂ ಸಂಪೂರ್ಣ ಸಹಕಾರ ನೀಡಿದರು.ನಂತರ ನೆಹರೂ ಸಂಪುಟದಲ್ಲಿ ಅಂಬೇಡ್ಕರ್ ಮಂತ್ರಿಯಾಗಿದ್ದಾಗಲೂ ಅವರ ಖಾತೆಯಲ್ಲಿ ನೆಹರೂ ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಹಿಂದೂ ಕೋಡ್ ಬಿಲ್ ಬಗ್ಗೆ ಮಾತ್ರ ನೆಹರೂ ಅಸಹಾಯಕರಾದರು.ತಾತ್ವಿಕ ವಾಗಿ ಅಂಬೇಡ್ಕರ್ ನಿಲುವನ್ನು ಅವರು ಒಪ್ಪಿದ್ದರೂ ಕೂಡ ಅಂದಿನ ಸಂಸತ್ತಿನಲ್ಲಿ, ಸ್ವಂತ ಪಕ್ಷದಲ್ಲಿ ಸಂಪ್ರದಾಯವಾದಿಗಳನ್ನು ಎದುರಿಸಲು ಅವರಿಗೆ ಸಾಧ್ಯವಾಗಲಿಲ್ಲ. ಅಗ ತಾನೆ ಸ್ವಾತಂತ್ರ್ಯ ಬಂದಿತ್ತು. ಮುಂದೆ ಚುನಾವಣೆ ಇತ್ತು.
ಹೀಗಾಗಿ ಅಂಬೇಡ್ಕರ್ ಪರವಾಗಿ ನಿಲ್ಲಲು ಆಗಲಿಲ್ಲ. ಆದರೆ ನಂತರ ಸಂಸತ್ತು ಇದನ್ನು ಅಂಗೀಕರಿಸಿತು.
ನೆಹರೂ - ಗಾಂಧಿ ಕುಟುಂಬವನ್ನು ದ್ವೇಷಿಸುವವರು ಒಂದು ವಿಷಯವನ್ನು ನೆನಪಿನಲ್ಲಿ ಇಟ್ಟು ಕೊಳ್ಳಬೇಕು.ನೆಹರೂ ಆಗಲಿ ಇಂದಿರಾ ಆಗಲಿ ಜಾತಿ ಹೋಗಬೇಕೆಂದು ಕೇವಲ ವೇದಿಕೆಯಲ್ಲಿ ನಿಂತು ಮಾತಾಡಿದವರಲ್ಲ. ಸ್ವಂತ ಜೀವನದಲ್ಲಿ ಆಚರಣೆಗೆ ತಂದವರು. ಇಂದಿರಾ ಮದುವೆಯಾಗಿದ್ದು ಪಾರ್ಸಿ ಯುವಕ ಫಿರೋಝ್ ಗಾಂಧಿಯನ್ನು, ಇಂದಿರಾ ಪುತ್ರ ರಾಜೀವ್ ಮದುವೆಯಾಗಿದ್ದು ಇಟಲಿಯ ಸೋನಿಯಾರನ್ನು ಸಂಜಯ್ ಗಾಂಧಿ ವಿವಾಹವಾಗಿದ್ದು ಸಿಖ್ ಯುವತಿ ಮೇನಕಾರನ್ನು. ಇದೊಂದು ಜಾತಿಯ ಅಡ್ಡಗೋಡೆಯನ್ನು ಕೆಡವಿದ ಕುಟುಂಬ. ಜಾತಿ ರಹಿತ ಮದುವೆಯ ಬಸವಣ್ಣನವರ ಪರಿಕಲ್ಪನೆಯನ್ನು ಅನುಷ್ಠಾನಕ್ಕೆ ತಂದ ಮನೆತನ. ಜಾತಿಯ ಕೊಚ್ಚೆಯಲ್ಲಿ ಬಿದ್ದವರಿಗೆ ಇದನ್ನು ಸಹಿಸಲು ಆಗುತ್ತಿಲ್ಲ. ಅಸಭ್ಯ, ಅಸಹ್ಯ ಭಾಷೆಯಲ್ಲಿ ಅವರನ್ನು ನಿಂದಿಸುತ್ತಾರೆ.
ಇಷ್ಟೇ ಅಲ್ಲ, ಈ ಕುಟುಂಬ ದ ಮೂವರು ಬಹುತ್ವ ಭಾರತಕ್ಕಾಗಿ ಹುತಾತ್ಮರಾದರು. ಭಾರತದ ಏಕ್ಯತೆ, ಸಮಗ್ರತೆಯನ್ನು ಉಳಿಸಲು ಬಿಂದ್ರನವಾಲೆಯ ಮತಾಂಧತೆ ವಿರುದ್ಧ ದಿಟ್ಟ ಕ್ರಮವನ್ನು ಕೈಗೊಂಡು ಇಂದಿರಾ ಗಾಂಧಿ ಸಿಖ್ ಅಂಗರಕ್ಷಕರ ಗುಂಡಿಗೆ ಬಲಿಯಾದರು. ನಲವತ್ತನೇ ವಯಸ್ಸಿನಲ್ಲಿ ಸೋನಿಯಾ ಗಾಂಧಿ ಪತಿ ರಾಜೀವ್ ಗಾಂಧಿಯವರನ್ನು ಕಳೆದುಕೊಂಡರು.ಈಳಂ ಮಾನವ ಬಾಂಬ್‌ಗೆ ರಾಜೀವ್ ಬಲಿಯಾದರು. ಸಂಜಯ್ ಗಾಂಧಿ ವಿಮಾನ ಅಪಘಾತದಲ್ಲಿ ಹೋದರು. ಆದರೂ ತನ್ನ ಪತಿಯನ್ನು ಕೊಂದವರನ್ನು ಕ್ಷಮಿಸಿದ ಸೋನಿಯಾ ಗಾಂಧಿ ಹಂತಕರ ಬಿಡುಗಡೆ ಗೆ ಮನವಿ ಮಾಡಿದರು.ಇತ್ತೀಚೆಗೆ ಅವರು ಬಿಡುಗಡೆ ಯಾಗಿ ಹೊರ ಬಂದರು. ಇಂಥ ತ್ಯಾಗ, ಬಲಿದಾನ ಮಾಡಿದ ಕುಟುಂಬದ ಬಗ್ಗೆ ಹಗುರವಾಗಿ ಮಾತಾಡುವವರು, ಅವರ ಮಾತನ್ನು ನಿಜವೆಂದು ನಂಬಿ ಕೊಳಕು ಮಾತಾಡುವವರು ಇತಿಹಾಸದ ಪುಟಗಳನ್ನು ಒಮ್ಮೆ ಓದಲಿ. ಚಾಚಾ ನೆಹರೂ ಹೆಸರನ್ನು ಅಳಿಸಿ ಹಾಕುವ ರೋಗಗ್ರಸ್ತ ಮನಸ್ಸುಗಳಿಗೆ ತುರ್ತಾಗಿ ಚಿಕಿತ್ಸೆ ಬೇಕಾಗಿದೆ.
ನೆಹರೂ ಪರಿಕಲ್ಪನೆಯ ಜನತಾಂತ್ರಿಕ ಸಮಾಜವಾದಿ ಆರ್ಥಿಕ ಅಭಿವೃದ್ಧಿ ಮಾರ್ಗದಿಂದ ಜಗತ್ತು ಮತ್ತು ಭಾರತ ಸಾಕಷ್ಟು ದೂರ ಬಂದಿವೆ.
ನೆಹರೂ ಅವರಿಗೆ ಸ್ಫೂರ್ತಿ ನೀಡಿದ ಸೋವಿಯತ್ ಸಮಾಜವಾದಿ ವ್ಯವಸ್ಥೆ ಯಾವಾಗ ಕುಸಿದು ಬಿತ್ತೋ ಆಗಲೇ ವಿಶ್ವದ ರಾಜಕೀಯ ,
ಆರ್ಥಿಕ ಅಭಿವೃದ್ಧಿ ಮಾರ್ಗದ ದಿಕ್ಕು ಬದಲಾಯಿತು. ಇದನ್ನು ಮತ್ತೆ ಸರಿ ದಾರಿಗೆ ತರಬೇಕಾದ ದುಡಿಯುವ ವರ್ಗ ಜಾತಿ,ಮತ, ಜನಾಂಗೀಯ ಗೋಡೆಗಳನ್ನು ತಮ್ಮ ನಡುವೆ ಕಟ್ಟಿ ಕೊಂಡು ತನ್ನ ಚಾರಿತ್ರಿಕ ಕರ್ತವ್ಯ ನಿಭಾಯಿಸುವಲ್ಲಿ ವಿಫಲಗೊಂಡಿದೆ. ಇಂಥ ಬಿಕ್ಕಟ್ಟಿನ ಸನ್ನಿವೇಶದಲ್ಲಿ ನೆಹರೂ ನೆನಪು
ಚೇತೋಹಾರಿಯಾಗಿದೆ.