ವಿವೇಕದ ಬೆಳಕು ಎಲ್ಲೆಡೆ ಹರಡಲಿ

ಜನಾಂಗ ದ್ವೇಷದ ಅವಿವೇಕದ ಕತ್ತಲು ಹರಡುತ್ತಿರುವ ಈ ದಿನಗಳಲ್ಲಿ ವಿವೇಕದ ಬೆಳಕು ಮಾತ್ರ ಮನುಷ್ಯನಿಗೆ ಮಾತ್ರವಲ್ಲ ಸಕಲ ಜೀವಿಗಳಿಗೂ ನೆಮ್ಮದಿ ತರಬಲ್ಲದು. ಜನಸಾಮಾನ್ಯರಿಗೆ ನೆಮ್ಮದಿಯ ಬದುಕು ಬೇಕಾಗಿದೆ. ಆದರೆ, ಸಾಮಾಜಿಕ ನೆಮ್ಮದಿಯನ್ನು ಹಾಳು ಮಾಡುವುದೇ ಕೆಲವರ ರಾಜಕೀಯ ಸಿದ್ಧಾಂತವಾಗಿದೆ. ಇದು ಅವರ ಹೊಟ್ಟೆಪಾಡು ಮಾತ್ರವಲ್ಲ ಇದರಿಂದ ಅನಾಯಾಸವಾಗಿ ಸಿಗುವ ಅಧಿಕಾರವನ್ನು ಕಬಳಿಸಿ ನಾಡನ್ನು ದೋಚಿ ತಮ್ಮ ತಿಜೋರಿಯನ್ನು ತುಂಬಿಕೊಳ್ಳುವುದು ಅವರ ದಂಧೆ. ಅಂಥವರು ಬೆಳಕಿಗಿಂತ ಕತ್ತಲನ್ನು ಇಷ್ಟಪಡುತ್ತಾರೆ.
ಜನಸಾಮಾನ್ಯರನ್ನು ದೇವರು, ಧರ್ಮ, ಜಾತಿ,ಮತದ ಹೆಸರಿನಲ್ಲಿಒಡೆಯುವುದು ಕತ್ತಲು. ಎಲ್ಲರನ್ನೂ ಒಂದು ಗೂಡಿಸುವುದು, ಸೌಹಾರ್ದದಿಂದ ಬದುಕುವಂಥ ವಾತಾವರಣ ನಿರ್ಮಿಸುವುದು ಬೆಳಕು.
ದಸರಾ ಹಬ್ಬವನ್ನು ನಾಡಹಬ್ಬವೆಂದು ಎಲ್ಲೆಡೆ ವಿಶೇಷವಾಗಿ ಮೈಸೂರಿನಲ್ಲಿ ಆಚರಿಸುತ್ತ ಬಂದಿದ್ದೇವೆ. ಅರಸರು ಯಾರೇ ಇರಲಿ, ಇದರ ಆಚರಣೆಗೆ ವ್ಯತ್ಯಯ ಬಂದಿಲ್ಲ. ಯಾಕೆಂದರೆ ಇದು ಎಲ್ಲ ಸಮುದಾಯದವರು ಸೇರಿ ಆಚರಿಸುವ, ಸಂಭ್ರಮಿಸುವ ಉತ್ಸವ. ಹೈದರಲಿ, ಟಿಪ್ಪು ಸುಲ್ತಾನರೂ ಇದರಲ್ಲಿ ಪಾಲ್ಗೊಳ್ಳುತ್ತಿದ್ದರು. ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ
ದಿವಾನರಾಗಿದ್ದ ಮಿರ್ಝಾ ಇಸ್ಮಾಯೀಲ್ ಇದರ ನೇತೃತ್ವ ವಹಿಸುತ್ತಿದ್ದರು.ಹೀಗೆ ಹಲವಾರು ವರ್ಷಗಳಿಂದ ನಡೆದು ಕೊಂಡು ಬಂದ ಭಾವೈಕ್ಯದ ಉತ್ಸವಕ್ಕೆ ಹುಳಿ ಹಿಂಡುವ ರಾಜಕಾರಣಿಗಳು ಈಗ ನಾಡಿನ ಶಾಂತಿ ,ನೆಮ್ಮದಿ, ಸೌಹಾರ್ದಕ್ಕೆ ಭಂಗ ತರುವ ಹುನ್ನಾರ ನಡೆಸಿದ್ದಾರೆ.
ಈ ಬಾರಿ ದಸರಾ ಹಬ್ಬದ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಲೇಖಕಿ ಬಾನು ಮುಷ್ತಾಕ್ ಅವರನ್ನು ರಾಜ್ಯ ಸರಕಾರ ಆಹ್ವಾನಿಸುತ್ತಿದ್ದಂತೆ ಕೆಲವರಿಗೆ ಅಸಹನೆಯ ವ್ಯಾಧಿ ಬಂದಿದೆ. ಒಂದು ರಾಷ್ಟ್ರೀಯ ಪಕ್ಷವೆಂದು ಹೇಳಿಕೊಳ್ಳುವ ಪಕ್ಷಕ್ಕೆ ಸೇರಿದವರನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನತೆ ತಿರಸ್ಕರಿಸಿದ್ದಾರೆ. ಜನ ತಮ್ಮನ್ನು ಯಾಕೆ ತಿರಸ್ಕರಿಸಿದರು ಎಂಬುದರ ಆತ್ಮಾವಲೋಕನ ಮಾಡಿಕೊಳ್ಳಲು ತಯಾರಿಲ್ಲದ ಇವರು ಜಾತಿ, ಮತದ ಹೆಸರಿನಲ್ಲಿ ಜನರನ್ನು ವಿಭಜಿಸಿ ಓಟ್ ಬ್ಯಾಂಕ್ ಸೃಷ್ಟಿಸಿಕೊಂಡು ಮತ್ತೆ ಅಧಿಕಾರಕ್ಕೆ ಬರಲು ಮಸಲತ್ತು ನಡೆಸಿದ್ದಾರೆ.ಅಧಿಕಾರ ಸಿಕ್ಕಾಗ ಬಳ್ಳಾರಿಯ ಗಣಿ ಸಂಪತ್ತನ್ನು ಕೊಳ್ಳೆ ಹೊಡೆಯಲು ಅವಕಾಶ ನೀಡಿದವರು ಇವರು. ಇವರಿಗೆ ಜನ ಎಂದೂ ಬಹುಮತ ನೀಡಿಲ್ಲ. ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದು ಲೂಟಿ ಮಾಡುವುದೊಂದೇ ಇವರ ಕಾಯಕ.ಇಂಥವರು ದಸರಾ ಆಚರಣೆಗೆ ಹುಳಿ ಹಿಂಡಲು ಹೊರಟಿದ್ದಾರೆ.
ಶೋಭಾ ಕರಂದ್ಲಾಜೆ ಎಂಬ ಕೇಂದ್ರ ಸಚಿವೆ ತನ್ನ ಸ್ಥಾನದ ಘನತೆಯನ್ನು ಮರೆತು ಚಾಮುಂಡಿ ಬೆಟ್ಟ ಹಿಂದೂಗಳದ್ದು, ಅದನ್ನು ಹತ್ತಲು ಬಾನು ಮುಷ್ತಾಕ್ ಅವರಿಗೆ ಬಿಡುವುದಿಲ್ಲ ಎಂದು ಆರ್ಭಟಿಸುತ್ತಾರೆ. ಅಶೋಕ್, ಯತ್ನಾಳ್, ಜಗದೀಶ ಶೆಟ್ಟರ್ ಇವರು ಸೇರಿದಂತೆ ಬಿಜೆಪಿ ನಾಯಕರೆಲ್ಲರ ಹೇಳಿಕೆ ಒಂದೇ ತೆರನಾಗಿದೆ.ಸೂಕ್ಷ್ಮ ವಾಗಿ ಅವಲೋಕಿಸಿದರೆ ಇದು ಅವರ ವೈಯಕ್ತಿಕ ಹೇಳಿಕೆಯಲ್ಲ.ಕೇಶವ ಕೃಪಾದಲ್ಲಿ ಅತ್ಯಂತ ಜಾಣತನದಿಂದ ಸಿದ್ಧಪಡಿಸಿದ ಹೇಳಿಕೆ.ಅದನ್ನು ಎಲ್ಲರೂ ತಮ್ಮ ಹೆಸರಿನಲ್ಲಿ ನೀಡುತ್ತಿದ್ದಾರೆ. ಚಾಮುಂಡಿ ಬೆಟ್ಟವಾಗಲಿ, ಚಾಮುಂಡಿದೇವಿಯಾಗಲಿ ಸಂಘ ಪರಿವಾರದವರ ಖಾಸಗಿ ಆಸ್ತಿಯಲ್ಲ, ಚಾಮುಂಡಿ ಬೆಟ್ಟ ನಿಸರ್ಗದ ಸೃಷ್ಟಿ. ಅದು ಎಲ್ಲ ಸಮುದಾಯದವರಿಗೆ ಸೇರಿದ್ದು.ಅಷ್ಟೇ ಅಲ್ಲ,ಮನುಷ್ಯರು ಮಾತ್ರವಲ್ಲ, ಸಕಲ ಜೀವ ಜಂತುಗಳಿಗೆ ಸೇರಿದ್ದು.
ಯಾರು ಎಲ್ಲಿ ಹೋಗಬೇಕು,ಎಲ್ಲಿ ಹೋಗಬಾರದು ಎಂಬುದನ್ನು ತಿರ್ಮಾನಿಸಿ ಕಟ್ಟುಪಾಡು ಹಾಕಲು ಈ ದೊಣ್ಣೆ ನಾಯಕರು ಯಾರು? ಬಾಬಾಸಾಹೇಬರು ರೂಪಿಸಿದ ಸಂವಿಧಾನದ ಪ್ರಕಾರ, ಈ ದೇಶ ನಡೆಯಬೇಕೇ ಹೊರತು ಮನುವಾದಿ ಗುಲಾಮರ ಅಪ್ಪಣೆಯಂತೆ ಅಲ್ಲ. ಇವತ್ತು ಬಾನು ಮುಷ್ತಾಕ್ ಚಾಮುಂಡಿ ಬೆಟ್ಟಕ್ಕೆ ಹೋಗಬಾರದೆಂದು ಅಪ್ಪಣೆ ಕೊಡಿಸುವ ಈ ದೊಣ್ಣೆ ನಾಯಕರು ಇದನ್ನು ಇಷ್ಟಕ್ಕೆ ನಿಲ್ಲಿಸುವುದಿಲ್ಲ.ನಾಳೆ ದಲಿತರು ಚಾಮುಂಡಿ ಬೆಟ್ಟಕ್ಕೆ ಹೋಗಬಾರದೆಂದು ಕ್ಯಾತೆ ತೆಗೆಯುತ್ತಾರೆ. ದೇಶದಲ್ಲಿರುವ ಈ ಸಂವಿಧಾನವನ್ನು ಬದಲಿಸಿ ಮನುವಾದ ಜಾರಿ ಮಾಡಲು ಹೊರಟವರಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ? ಭಾರತದಲ್ಲಿ ಯಾವುದೇ ಧರ್ಮಕ್ಕೆ ಯಾರಿಂದಲೂ ಅಪಾಯವಿಲ್ಲ.ಧರ್ಮಕ್ಕೆ ಅಪಾ ಯವಿರುವುದು ಅದರ ಹೆಸರಿನಲ್ಲಿ ಓಟಿನ ದಂಧೆ ಮಾಡಿಕೊಳ್ಳುವ ನಕಲಿ ಧರ್ಮ ರಕ್ಷಕರಿಂದ.
ವಾಸ್ತವವಾಗಿ ಧರ್ಮವನ್ನು ಸ್ವಯಂ ಘೋಷಿತ ‘ಧರ್ಮ ರಕ್ಷಕ’ರಿಂದ ರಕ್ಷಿಸಬೇಕಿದೆ. ಜಾತ್ರೆ, ಸಂತೆ, ಹಬ್ಬ, ಉರೂಸುಗಳು ಮನುಷ್ಯರು ತಮ್ಮ ನೆಮ್ಮದಿಗಾಗಿ ಮಾಡಿಕೊಂಡ ಏರ್ಪಾಡುಗಳು.ಈಗ ದಸರೆಯ ಹೆಸರಿನಲ್ಲಿ ಖ್ಯಾತೆ ತೆಗೆದವರು ಹಿಂದೆ ಹಿಂದೂ ದೇವರ ಜಾತ್ರೆಗಳಲ್ಲಿ ಮುಸ್ಲಿಮರ ಅಂಗಡಿಗೆ ಅವಕಾಶ ನೀಡುವುದಿಲ್ಲ ಎಂದು ತಕರಾರು ತೆಗೆದಿದ್ದರು.
ಹಬ್ಬ ಹರಿದಿನ ರಥೋತ್ಸವಗಳಲ್ಲಿ ಮುಸಲ್ಮಾನರು ಸೇರಿ ಎಲ್ಲಾ ಸಮುದಾಯದ ವ್ಯಾಪಾರಿಗಳು ಅಂಗಡಿ ಹಾಕಿ ವ್ಯಾಪಾರ ಮಾಡುತ್ತಾರೆ. ಉರೂಸುಗಳಲ್ಲಿ ಹಿಂದೂ ವ್ಯಾಪಾರಿಗಳು ಸೇರಿದಂತೆ ಎಲ್ಲರೂ ವಹಿವಾಟು ನಡೆಸುತ್ತಾರೆ.ಅಲ್ಲಿ ನಂಬಿಕೆ ಮತ್ತು ಭಕ್ತಿಯಿಂದಾಗಲಿ ಖುಷಿಗಾಗಿಯಾಗಲಿ ಸೇರುವ ಜನ ಯಾವ ಅಂಗಡಿಯಲ್ಲಿ ಕಡಿಮೆ ಬೆಲೆಗೆ ಒಳ್ಳೆಯ ವಸ್ತು ಸಿಗುತ್ತದೆ ಅಲ್ಲಿ ಖರೀದಿಸುತ್ತಾರೆ.
ಹೀಗೆ ಖರೀದಿಸುವಾಗ, ಅವರು ವ್ಯಾಪಾರಿಯ ಮತ ಧರ್ಮವನ್ನು ನೋಡುವುದಿಲ್ಲ.ಜನರನ್ನು ಒಡೆದು ಓಟಿನ ಬೆಳೆ ಬೆಳೆಯಲು ನೀವು ಯಾವುದೇ ಬಣ್ಣದ ಬಾವುಟ ಕಟ್ಟಬಹುದು. ಜನ ಬಾವುಟ ನೋಡುವುದಿಲ್ಲ. ವ್ಯಾಪಾರ ಧರ್ಮ ಎಂಬುದೊಂದಿದೆ. ಅಲ್ಲಿರುವುದು ಮಾರಾಟಗಾರ ಮತ್ತು ಖರೀದಿದಾರ ಎಂಬ ಎರಡೇ ಸಂಬಂಧ ಗಳಿರುವುದು. ಇಷ್ಟು ಕನಿಷ್ಠ ಜ್ಞಾನವಿಲ್ಲದ ಅವಿವೇಕಿಗಳಿಗೆ ಪಾಠ ಕಲಿಸುವ ಗುಣ ಈ ಮಣ್ಣಿಗಿದೆ. ಇದು ಹಿಟ್ಲರ್, ಗೋಬ್ಬೆಲ್ಸ್, ಮುಸ್ಸೋಲಿನಿಗಳ ದೇಶವಲ್ಲ. ಇದು ಬುದ್ಧ, ಬಸವಣ್ಣ, ಗಾಂಧೀಜಿ, ಬಾಬಾಸಾಹೇಬರು, ಭಗತ್ ಸಿಂಗ್, ಸುಭಾಷ್ ಚಂದ್ರಬೋಸ್ ಅವರಿಗೆ ಸೇರಿದ ಭಾರತ. ನೆನಪಿರಲಿ, ಇಲ್ಲಿ ಕೋಮು ದ್ವೇಷದ ರಕ್ತಪಾತ ಮಾಡುವ ನಿಮ್ಮ ಆಟ ನಡೆಯುವುದಿಲ್ಲ.
ಕಳವಳಕಾರಿ ಸಂಗತಿಯೆಂದರೆ ಇತ್ತೀಚಿನ ವರ್ಷಗಳಲ್ಲಿ ಸ್ವಯಂ ಘೋಷಿತ ಧರ್ಮ ರಕ್ಷಕರ ಹಾವಳಿಯಿಂದ ಸದುದ್ದೇಶದಿಂದ ಕೂಡಿರುವ ನೈಜ ಧರ್ಮಕ್ಕೆ ಅಪಾಯ ಎದುರಾಗಿದೆ.ಅವರವರ ನಂಬಿಕೆಯಂತೆ ಪರಮಾತ್ಮನ ಸಾಕ್ಷಾತ್ಕಾರಕ್ಕಾಗಿ ಮಾನಸಿಕ ಶಾಂತಿಗಾಗಿ ದೇವರು,ಧರ್ಮದ ಮೊರೆ ಹೋಗುತ್ತಿದ್ದ ಜನ ಈ ‘ಧರ್ಮ ರಕ್ಷಕರ’ ದಾಂಧಲೆಯಿಂದ ತತ್ತರಿಸಿ ಹೋಗಿದ್ದಾರೆ. ಇಂದು ಧರ್ಮ ಎಲ್ಲಿಗೆ ಬಂದಿದೆ ಅಂದರೆ ಯಾರು ಯಾವ ಊಟ ಮಾಡಬೇಕು, ಯಾವ ಬಟ್ಟೆ ತೊಡಬೇಕು ಎಂಬುದರ ಜೊತೆಗೆ ಈಗ ಜಾತ್ರೆ,ಉತ್ಸವಗಳಲ್ಲಿ ವ್ಯಾಪಾರಕ್ಕಾಗಿ ಅಂಗಡಿ ಹಾಕುವವರ ಜಾತ ,ಮತ ಹುಡುಕುತ್ತಾ ‘ಅವರು ಇಲ್ಲಿ ವ್ಯಾಪಾರ ಮಾಡಕೂಡದು’ ಎಂದು ಫರ್ಮಾನು ಹೊರಡಿಸುತ್ತಿದ್ದಾರೆ.
ಇವರು ಅಂದರೆ ಕೋಮುವಾದಿಗಳು ಮತ್ತು ಜನಾಂಗ ದ್ವೇಷಿಗಳು ಧಾರ್ಮಿಕ ವ್ಯಕ್ತಿಗಳಲ್ಲ. ನಿಜವಾದ ಧಾರ್ಮಿಕ ವ್ಯಕ್ತಿ ಸಕಲ ಜೀವ ಚರಗಳನ್ನು ಪ್ರೀತಿಸುತ್ತಾನೆ.ಸಹ ಜೀವಿಗಳನ್ನು ಎಂದೂ ದ್ವೇಷಿಸುವುದಿಲ್ಲ. ಆದರೆ, ಧರ್ಮದ ಮುಖವಾಡ ಹಾಕಿಕೊಂಡು ತಮ್ಮ ರಾಜಕೀಯ ಸ್ವಾರ್ಥ ಸಾಧಿಸಿಕೊಳ್ಳುವವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಸಮಾಜದ ಇತರ ಸಮುದಾಯದ ಜನರನ್ನು ದ್ವೇಷಿಸುವಂತೆ ಪ್ರಚೋದಿಸುತ್ತಾರೆ. ಒಂದು ಸಮುದಾಯದ ವಿರುದ್ಧ ಇನ್ನೊಂದು ಸಮುದಾಯವನ್ನು ಎತ್ತಿ ಕಟ್ಟುತ್ತಾರೆ. ಧಾರ್ಮಿಕ ಮತ್ತು ಇತಿಹಾಸದ ಮಹಾಪುರುಷರನ್ನು ಬಳಸಿಕೊಂಡು ನಕಲಿ ಶೌರ್ಯ ಪ್ರದರ್ಶನ ಮಾಡುತ್ತಾರೆ.
ಅಂಗಡಿಗಳಿಗೆ ಕೇಸರಿ ಬಾವುಟ ಕಟ್ಟಿ ಅಲ್ಲಿ ವ್ಯಾಪಾರ ಮಾಡಬಾರದು, ಇಲ್ಲಿ ಮಾಡಬೇಕು ಎಂದು ಜನರನ್ನು ಕೆರಳಿಸುತ್ತಾರೆ.ಆದರೆ ವ್ಯಾಪಾರ ಎಂಬುದಕ್ಕೂ ಒಂದು ಧರ್ಮವಿದೆ. ಅದು ವ್ಯಾಪಾರ ಧರ್ಮ. ಅಲ್ಲಿ ಗಿರಾಕಿ ಯಾವ ಧರ್ಮ ,ಜಾತಿಯವನೆಂಬುದು ಮುಖ್ಯವಲ್ಲ.ಹಾಗೇ ವಸ್ತುವನ್ನು ಖರೀದಿಸುವ ಗಿರಾಕಿಗೂ ತಾನು ವ್ಯಾಪಾರ ಮಾಡುವ ಅಂಗಡಿಯ ಮಾಲಕ ಯಾವ ಜಾತಿ, ಮತದವನೆಂಬುದು ಮುಖ್ಯವಲ್ಲ. ಅವನಿಗೆ ನ್ಯಾಯವಾದ ಬೆಲೆಗೆ ಒಳ್ಳೆಯ ವಸ್ತು ಸಿಗಬೇಕು.ಇದು ವ್ಯಾಪಾರ ಧರ್ಮ. ಇಲ್ಲಿ ಯಾರನ್ನು ಯಾರೂ ಅವರು ಜನಿಸಿದ ಜಾತಿ ಮತದ ಕಾರಣಕ್ಕಾಗಿ ದ್ವೇಷಿಸುವ ಪರಿಸ್ಥಿತಿ ಇರುವುದಿಲ್ಲ.
ವ್ಯಾಪಾರ ,ವಹಿವಾಟುಗಳಲ್ಲಿ ಯಾವುದೇ ಒಂದು ಸಮುದಾಯವನ್ನು ಬಹಿಷ್ಕರಿಸುವುದು ಅಸ್ಪಶ್ಯತೆಯ ಇನ್ನೊಂದು ರೂಪ. ಶತಮಾನಗಳಿಂದ ದಲಿತರನ್ನು ಊರಾಚೆ ಇಟ್ಟವರು ಈಗ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹಿಂದುತ್ವದ ಹೊಸ ವೇಷ ಹಾಕಿದ್ದಾರೆ. ಈಗ ಅವರು ಟಾರ್ಗೆಟ್ ಮಾಡುತ್ತಿರುವುದು ಮುಸಲ್ಮಾನರು ಮತ್ತು ಕ್ರೈಸ್ತರನ್ನು. ಮುಸ್ಲಿಮರನ್ನು ಬಿಟ್ಟರೆ ಕಮ್ಯುನಿಸ್ಟರು ಅವರ ಪ್ರಧಾನ ಶತ್ರುಗಳು.ಒಂದೆಡೆ ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತರು ಮುಸಲ್ಮಾನರ ಬಗ್ಗೆ ಸೌಮ್ಯ ವಾಗಿ ಮಾತಾಡುತ್ತಾರೆ. ಇನ್ನೊಂದೆಡೆ ಮಂಗಳೂರು, ಗುಜರಾತ್‌ನಂಥ ಕಡೆ ಅವರ ಶಿಷ್ಯರು ಜಾತ್ರೆ ,ಸಂತೆಗಳಲ್ಲಿ ಮುಸಲ್ಮಾನರ ಅಂಗಡಿ ಗಳಲ್ಲಿ ಏನನ್ನು ಖರೀದಿ ಮಾಡಬಾರದು ಎಂದು ಗಲಾಟೆ ಮಾಡುತ್ತಾರೆ.ನಾನು ಚಿಕ್ಕ ವಯಸ್ಸಿನಿಂದ ನಮ್ಮ ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿಯ ಬಸವೇಶ್ವರ ಜಾತ್ರೆ,ಬಿಜಾಪುರದ ಸಿದ್ದೇಶ್ವರ ಜಾತ್ರೆಗಳನ್ನು ನೋಡುತ್ತ ಬೆಳೆದವನು.ಈಗಲೂ ಕಲಬುರಗಿ ಶರಣ ಬಸವೇಶ್ವರ ಜಾತ್ರೆ,ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆ,ಹುಬ್ಬಳ್ಳಿಯ ಸಿದ್ಧಾರೂಢರ ಜಾತ್ರೆಗಳು ಸೇರಿದಂತೆ ಹಲವಾರು ಜಾತ್ರೆಗಳಿಗೆ ಹೋಗುತ್ತಿರುತ್ತೇನೆ.ಅಲ್ಲಿ ಮುಸ್ಲಿಮ್ ವ್ಯಾಪಾರಿಗಳು ಬಂದರೆ ಮಾತ್ರ ಜಾತ್ರೆಯ ಸಂಭ್ರಮ ಎದ್ದು ಕಾಣುತ್ತದೆ. ಬಡವರು, ಜನಸಾಮಾನ್ಯರು ತಪ್ಪದೇ ಬರುವ ಜಾತ್ರೆಗಳಲ್ಲಿ ಅವರಿಗೆ ಬೇಕಾಗುವ ಕಡಿಮೆ ಬೆಲೆಯ ಬಳೆ,ಪಾತ್ರೆ,ರೆಡಿಮೆಡ್ ಉಡುಪು,ಮಕ್ಕಳ ಆಟಿಕೆಗಳು ಈಗ ನಾನಾ ತರದ ಸರಕುಗಳನ್ನು ಹೊತ್ತು ತರುವವರು ಮುಸ್ಲಿಮ್ ವ್ಯಾಪಾರಿಗಳು. ಅವರಿಲ್ಲದಿದ್ದರೆ ನೀವು ಹಿಂದೂಗಳೆಂದು ಕರೆಯುವ ಲಿಂಗಾಯತರು, ಒಕ್ಕಲಿಗರು,ಬಂಟರು,ಬಿಲ್ಲವರು,ನಾಯಕರು,ಕುರುಬರು ಹೀಗೆ ಯಾರೂ ಜಾತ್ರೆಯತ್ತ ಹೊರಳಿ ನೋಡುವುದಿಲ್ಲ.
ಸಾರಿಗೆ ಕಂಪನಿ ನಡೆಸುವ ಸಂಘಪರಿವಾರದ ಹಾಗೂ ಬಿಜೆಪಿಯ ಅನೇಕ ನಾಯಕರ ಟ್ರಾವಲ್ಸ್ ಏಜೆನ್ಸಿ ಬಸ್ಸುಗಳು ಇವೆ.ಈ ಬಸ್ಸುಗಳಲ್ಲಿ ನಿತ್ಯ ಮಂಗಳೂರು ,ಉಡುಪಿಗಳಿಂದ ,ಹುಬ್ಬಳ್ಳಿ ,ಬೆಂಗಳೂರಿನಿಂದ ಕಲಬುರಗಿ , ದಾವಣಗೆರೆ ಗಳಿಂದ,ಮೈಸೂರು, ಶಿವಮೊಗ್ಗಗಳಿಂದ ಸಾವಿರಾರು ಪ್ರಯಾಣಿಕರು ಸಂಚರಿಸುತ್ತಾರೆ. ಪ್ರಯಾಣ ಮಾಡುವವರ ಜಾತಿ,ಮತವನ್ನು ಯಾರೂ ಕೇಳುವುದಿಲ್ಲ. ಅವರಿಂದ ವಸೂಲಿ ಮಾಡುವುದು ಬಸ್ ಚಾರ್ಜ್ ಮಾತ್ರ.ಈ ಬಸ್ಸುಗಳಿಗೆ ವಿಎಚ್‌ಪಿ ಕಾರ್ಯಕರ್ತರು ಕೇಸರಿ ಬಾವುಟ ಕಟ್ಟಿ ಈ ಬಸ್ಸುಗಳಲ್ಲಿ ಮುಸಲ್ಮಾನರು ಪ್ರಯಾಣಿಸಲು ಅವಕಾಶವಿಲ್ಲ ಎಂದು ನಿರ್ಬಂಧ ವಿಧಿಸುವರೇ? ಬಿಜೆಪಿಯ ನಾಯಕರು ಮುಸ್ಲಿಮ್ ಗಿರಾಕಿಗಳಿಗೆ ಯಾವುದೇ ವಸ್ತು ಗಳನ್ನು ಮಾರಾಟ ಮಾಡಬಾರದೆಂದು ಹಿಂದೂ ಬಟ್ಟೆ ಅಂಗಡಿ,ಟಿ,ವಿ ಅಂಗಡಿ,ಮೊಬೈಲ್ ಅಂಗಡಿಗಳ ಮಾಲಕರಿಗೆ ಕಟ್ಟುಪಾಡು ವಿಧಿಸುರೆ? ತಮ್ಮನ್ನು ಸಾಕಿ ಸಲಹುವ ಶ್ರೀಮಂತರ ಉಸಾಬರಿಗೆ ಇವರು ಹೋಗುವುದಿಲ್ಲ.ಹಾಗಿದ್ದರೆ ನಿರ್ಬಂಧ ಇರುವುದು ಬಡವರಿಗೆ ಮಾತ್ರವಾ?
ಸಾಮಾನ್ಯವಾಗಿ ಹಿಂದೂಗಳು ಮತ್ತು ಮುಸಲ್ಮಾನರನ್ನು ಬೇರ್ಪಡಿಸುವುದು ಅಷ್ಟು ಸುಲಭವಲ್ಲ. ಬಡ ಮುಸಲ್ಮಾನರು ಮತ್ತು ಹಿಂದೂಗಳನ್ನು ಬೆದರಿಕೆ ಹಾಕಿ ನೀವು ಬೇರ್ಪಡಿಸಬಹುದು.ಆದರೆ ಅನೇಕ ಉದ್ಯಮ ,ವಹಿವಾಟುಗಳಲ್ಲಿ ಹಿಂದೂ ಮತ್ತು ಮುಸ್ಲಿಮ್ ಪಾಲುದಾರರಾಗಿರುತ್ತಾರೆ.ಹಣಕಾಸು ಮತ್ತು ಲಾಭದ ಹಿತಾಸಕ್ತಿ ಅವರನ್ನು ಒಂದು ಮಾಡಿರುತ್ತದೆ.ದೊಡ್ಡವರ ಸಂಬಂಧಗಳೇ ಭಿನ್ನ ವಾಗಿರುತ್ತವೆ.ವಿಶ್ವ ಹಿಂದೂ ಪರಿಷತ್ತಿನ ಹಿಂದಿನ ಅಧ್ಯಕ್ಷ ಅಶೋಕ್ ಸಿಂಘಾಲರ ಮಗಳನ್ನು ಮಂತ್ರಿ ಮುಕ್ತಾರ್ ಅಬ್ಬಾಸ್ ನಖ್ವಿ ಮದುವೆಯಾಗಬಹುದು, ಮುರಳಿ ಮನೋಹರ ಜೋಶಿಯವರ ಮಗಳನ್ನು ಬಿಜೆಪಿಯ ಇನ್ನೊಬ್ಬ ಮುಸ್ಲಿಮ್ ನಾಯಕ ಮದುವೆಯಾಗಬಹುದು.ಅಡ್ವಾಣಿ ಮುಸಲ್ಮಾನರ ಜೊತೆಗೆ ನೆಂಟಸ್ತಿಕೆ ಮಾಡಬಹುದು. ಆದರೆ ಜನಸಾಮಾನ್ಯರು ಜಾತಿ ಮತದ ಬೇಲಿ ದಾಟಿ ಮದುವೆಯಾದರೆ ಅದಕ್ಕೆ ’ ಲವ್ ಜಿಹಾದ್’ ಕತೆ ಕಟ್ಟುತ್ತಾರೆ.
ಜಾತ್ರೆ,ಸಂತೆಗಳಿಗೆ ಬರುವ ಬಡ ಹಿಂದೂ ಮತ್ತು ಮುಸಲ್ಮಾನರ ಮೇಲೆ ನಿರ್ಬಂಧ ವಿಧಿಸುವ ಕೋಮುವಾದಿ ಸಂಘಟನೆಗಳ ನೇತಾರರು ಜಾತ್ರೆಗಳಿಗೆ ಮಾತ್ರ ಇದನ್ನು ಯಾಕೆ ಅನ್ವಯಿಸುತ್ತಾರೆ? ಮಂಗಳೂರು , ಉಡುಪಿ ಸೇರಿದಂತೆ ಕರ್ನಾಟಕದ ಅನೇಕ ಕಡೆ ಬಟ್ಟೆ ಅಂಗಡಿಗಳು,ಚಿನ್ನದ ಅಂಗಡಿಗಳು,ವಿದ್ಯುತ್ ಉಪಕರಣಗಳು ಹೀಗೆ ಹಿಂದೂಗಳ ಮಾತ್ರವಲ್ಲ ಸಂಘಪರಿವಾರದ ನಾಯಕರು ಮತ್ತು ಅವರ ಸಂಬಂಧಿಕರ ಒಡೆತನಕ್ಕೆ ಒಳಪಟ್ಟಿವೆ.ಅವರಿಗೆ ಹೆಚ್ಚಿನ ಗಿರಾಕಿಗಳು ಮುಸಲ್ಮಾನರು. ಮುಸಲ್ಮಾನರಿಗೆ ಮಾರಾಟ ಮಾಡಬಾರದು ಎಂದು ಬಾವುಟ ಕಟ್ಟಿ ದಿಗ್ಬಂಧನ ವಿಧಿಸಬಾರದೇಕೆ? ಇದು ಎಂದೂ ಸಾಧ್ಯವಿಲ್ಲ. ಬಹುತೇಕ ಬಿಜೆಪಿ ನಾಯಕರ ವ್ಯಾಪಾರ ,ಉದ್ದಿಮೆಗಳ ನಿತ್ಯದ ಗಿರಾಕಿಗಳು ಮುಸಲ್ಮಾನರು ಎಂಬುದು ಸಂಘದ ನಾಯಕರಿಗೆ ಗೊತ್ತಿದೆ. ಚುನಾವಣೆ ಸಂದರ್ಭದಲ್ಲಿ ಮುಸ್ಲಿಮ್ ಶ್ರೀಮಂತರಿಂದ ಬಿಜೆಪಿ ಚುನಾವಣಾ ನಿಧಿಯನ್ನು ವಸೂಲಿ ಮಾಡುವುದಿಲ್ಲವೇ?
ಜನವಿಭಜಕ ಛಿದ್ರಕಾರಿ ಶಕ್ತಿಗಳಿಗೆ ಜನಸಾಮಾನ್ಯರ ಬೆಂಬಲವಿಲ್ಲ. ಕರ್ನಾಟಕ ವಿಧಾನಸಭೆಯ ಇತ್ತೀಚಿನ ಚುನಾವಣೆಯಲ್ಲಿ ಅನುಭವಿಸಿದ ಅವಮಾನಕಾರಿ ಸೋಲು ಅವರನ್ನು ಹತಾಶರನ್ನಾಗಿ ಮಾಡಿದೆ.ಇವರಿಗೆ ಸ್ವಂತದ ಶಕ್ತಿಯಿಲ್ಲ.ಅದಕ್ಕಾಗಿ ದೇವರು,ದಿಂಡರು,ಗುಡಿ ,ಗುಂಡಾರಗಳಿಂದ ಇವರನ್ನು ದೂರ ಇಡಬೇಕಾಗಿದೆ.ಧಾರ್ಮಿಕ ಸಂಸ್ಥೆಗಳ ದುರ್ಬಳಕೆಯನ್ನು ನಿರ್ಬಂಧಿಸಬೇಕಿದೆ. ಮಾತ್ರ ಇವರ ಮತಾಂಧತೆಯ ನಿಶೆ ಇಳಿಯಲು ಸಾಧ್ಯ.
ಈ ಮತಾಂಧತೆಯ ಮತ್ತೇರಿಸಿಕೊಂಡ ಮೂರ್ಖರಿಂದ ನಿಜವಾದ ಧರ್ಮನಿಷ್ಠರಿಗೂ ಬೇಸರವಾಗಿದೆ. ಧರ್ಮಕ್ಕೆ ಅಪಾಯವಿರುವುದು ಹಫ್ತಾ ವಸೂಲಿ ಮಾಡುವ ,ಲೂಟಿ ಹೊಡೆಯುವ,ಕೋಟ್ಯಾಂತರ ಹಣ ದೋಚುವ ಇಂಥವರಿಂದ ವಾಸ್ತವವಾಗಿ ಯಾವುದೇ ಧರ್ಮ ಅಪಾಯದಲ್ಲಿಲ್ಲ. ಅಪಾಯ ಎದುರಾಗಿರುವುದು 130 ಕೋಟಿ ಭಾರತೀಯರಿಗೆ ಘನತೆಯ ಬದುಕನ್ನು ಕಲ್ಪಿಸಿಕೊಟ್ಟಿರುವ ಸಂವಿಧಾನಕ್ಕೆ ಎಂಬುದನ್ನು ಮರೆಯಬಾರದು.
ಇವರ ಪೊಳ್ಳು ಬೆದರಿಕೆಗೆ ಯಾರೂ ಹೆದರುವುದಿಲ್ಲ .
ಈಗಲೂ ಮುಸ್ಲಿಮ್ ವ್ಯಾಪಾರಿಗಳಲ್ಲಿ ವಸ್ತುಗಳನ್ನು ಖರೀದಿಸುತ್ತಿರುವ ಜನ ತಾವು ಯಾರ ಅಡಿಯಾಳುಗಳಲ್ಲ ಎಂದು ತೋರಿಸಿದ್ದಾರೆ. ಅದೇ ರೀತಿ ಮೈಸೂರು ದಸರಾ ಉತ್ಸವ ಅದರ ಪಾಡಿಗೆ ಅದು ನಡೆಯುತ್ತದೆ. ಬಾನು ಮುಷ್ತಾಕ್ ಉದ್ಘಾಟಿಸುತ್ತಾರೆ.ಅವಿವೇಕಿಗಳು ಜನರಿಂದ ದೂರವಾಗುತ್ತಾರೆ.
ಕಳೆದ ಮೂವತ್ತು ವರ್ಷಗಳಿಂದ ಭಕ್ತಿ ,ಶ್ರದ್ಧೆಯ ತಾಣಗಳಾದ ದೇವಾಲಯ, ಮಠ, ಮಂದಿರ, ಜಾತ್ರೆ,ರಥೋತ್ಸವ, ಮುಂತಾದವುಗಳ್ನು ತಮ್ಮ ರಾಜಕೀಯ ಅಜೆಂಡಾ ಜಾರಿಗೆ ಯಥೇಚ್ಛವಾಗಿ ದುರ್ಬಳಕೆ ಮಾಡಿಕೊಳ್ಳುತ್ತ ಬಂದ ಕರಾಳ ಶಕ್ತಿಗಳಿಂದಾಗಿ ಪೊಲೀಸರ ಕಾವಲಿನಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಬೇಕಾಗಿ ಬಂದಿದೆ.ಹೀಗೇ ಬಿಟ್ಟರೆ ಇದು ಇಲ್ಲಿಗೆ ನಿಲ್ಲುವುದಿಲ್ಲ. ಧಾರ್ಮಿಕ ಉನ್ಮಾದವನ್ನು ಉಪಯೋಗಿಸಿಕೊಂಡು ಬಾಬಾಸಾಹೇಬರ ಸಂವಿಧಾನ ವನ್ನು ತೆಗೆದು ಹಾಕಿ ಮನುಸ್ಮತಿಯನ್ನು ದೇಶದ ಮೇಲೆ ಹೇರಿ ದಲಿತ,ದಮನಿತ ಸಮುದಾಯಗಳನ್ನು ಊರಾಚೆ ಇಡಲು ಮಸಲತ್ತು ನಡೆಸಿದರೆ ಅಚ್ಚರಿ ಪಡಬೇಕಾಗಿಲ್ಲ.