ಮುಂಬೈ ಕಟ್ಟಲು ಬೆವರು ಬಸಿದ ಕನ್ನಡಿಗರು

ಭಾರತದ ವಾಣಿಜ್ಯ ರಾಜಧಾನಿ ಎಂದು ಹೆಸರಾದ ಮುಂಬೈ ಮಹಾನಗರದ ಬಗ್ಗೆ ನನಗೆ ಮೊದಲಿನಿಂದಲೂ ವಿಶೇಷ ಕುತೂಹಲ. ಸ್ವಾತಂತ್ರ್ಯ ಚಳವಳಿ, ಕಾರ್ಮಿಕರ ಹೋರಾಟ, ಜಾರ್ಜ್ ಫೆರ್ನಾಂಡಿಸ್, ಅಮಿರಬಾಯಿ ಕರ್ನಾಟಕಿ, ಶಾಂತಾರಾಮ ವಣಕುದುರೆ, ಶಾಂತಾ ಹುಬಳಿಕರ್, ಜವಳಿ ಗಿರಣಿಗಳ ಅಸಂಖ್ಯಾತ ಶ್ರಮಜೀವಿಗಳು ಹೀಗೆ ತಾವು ಬೆಳೆಯುವ ಜೊತೆಗೆ ತಮ್ಮ ಮೈ ಬೆವರಿನಿಂದ ಮುಂಬೈ ಎಂಬ ಮಹಾನಗರವನ್ನು ಕಟ್ಟಿ ಬೆಳೆಸಿದವರಲ್ಲಿ ಕರ್ನಾಟಕದಿಂದ ಅಲ್ಲಿ ವಲಸೆ ಹೋದ ದುಡಿಯುವ ಜನರ ಪಾಲು ಬಹುದೊಡ್ಡದು. ನಾನು ಉಲ್ಲೇಖಿಸಿದ ಕೆಲ ದಿಗ್ಗಜರ ಹೆಸರುಗಳನ್ನು ಹೊರತುಪಡಿಸಿದರೆ ಎಲ್ಲೂ ಹೆಸರು ಮಾಡದ ಅಸಂಖ್ಯಾತ ಕನ್ನಡಿಗರು ಮುಂಬೈ ಮಹಾನಗರವನ್ನು ಕಟ್ಟಲು ತಮ್ಮ ರಕ್ತವನ್ನು ನೀರು ಮಾಡಿಕೊಂಡವರು ಎಂದು ಹೇಳಿದರೆ ತಪ್ಪಲ್ಲ.
ಬದುಕು ಕಟ್ಟಿಕೊಳ್ಳಲು ಮುಂಬೈ ಮಹಾನಗರಕ್ಕೆ ಹಲವಾರು ರಾಜ್ಯಗಳಿಂದ ವಲಸೆ ಬಂದು ನೆಲೆಸಿದವರ ಸಂಖ್ಯೆ ಸಾಕಷ್ಟಿವೆೆ. ಹೀಗೆ ವಲಸೆ ಬಂದವರಲ್ಲಿ ಕನ್ನಡಿಗರೇನು ಕಡಿಮೆಯಿಲ್ಲ. ಜವಳಿ ಗಿರಣಿಗಳ ಕಾರ್ಮಿಕರಾಗಿ, ಹೋಟೆಲ್ ಕಾರ್ಮಿಕರಾಗಿ ನಂತರ ಮಾಲಕರಾಗಿ, ವಕೀಲರಾಗಿ, ವೈದ್ಯರಾಗಿ ಈ ಮಹಾನಗರಿಯಲ್ಲಿ ಕನ್ನಡಿಗರು ಅದರಲ್ಲೂ ದಕ್ಷಿಣ ಕನ್ನಡಿಗರು ಬಹುದೊಡ್ಡ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ತುಳು, ಬ್ಯಾರಿ, ಕೊಂಕಣಿ ಕನ್ನಡಿಗರು ತಮ್ಮ ಮನೆ ಭಾಷೆಯ ಜೊತೆ ಜೊತೆಗೆ ಕನ್ನಡವನ್ನೂ ಉಳಿಸಿ, ಬೆಳೆಸಿದ್ದಾರೆ. ಎರಡು ವರ್ಷಗಳ ಹಿಂದೆ ಮಹಾರಾಷ್ಟ್ರದ ಕನ್ನಡಿಗ ಪತ್ರಕರ್ತರ ಸಂಘದ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಲು ಮುಂಬೈಗೆ ಹೋದಾಗ ಮುಂಬೈ ಕನ್ನಡಿಗರನ್ನು ನೋಡುವ, ಮಾತಾಡುವ ಅವಕಾಶ ನನಗೆ ದೊರಕಿತು.ಆ ಕಾರ್ಯಕ್ರಮದಲ್ಲಿ ಸೇರಿದವರಲ್ಲಿ ಉದ್ಯಮಿಗಳಿದ್ದರು, ವಕೀಲರಿದ್ದರು, ಹೋಟೆಲ್ ಮಾಲಕರಿದ್ದರು. ಹೀಗೆ ನಾನಾ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಅಪರೂಪದ ವ್ಯಕ್ತಿಗಳಿದ್ದರು. ಪರಸ್ಪರ ಭೇಟಿಯಾದಾಗ ಕನ್ನಡದಲ್ಲಿ ಅವರು ಮಾತನಾಡುತ್ತಿದ್ದರು. ಅಲ್ಲಿ ಸೇರಿದವರಲ್ಲಿ ಕೆಲವರು ಆತ್ಮೀಯ ಗೆಳೆಯರಾದರು. ಅವರಲ್ಲಿ ಸಾ.ದಯಾ,(ದಯಾನಂದ ಸಾಲಿಯಾನ್), ಗೋಪಾಲ ತ್ರಾಸಿ, ರೋನ್ಸ್ ಬಂಟ್ವಾಳ್, ಅನಿತಾ ಪೂಜಾರಿ ಮೊದಲಾದವರನ್ನು ಮರೆಯಲು ಆಗುವುದಿಲ್ಲ. ಗೆಳೆಯ ದಯಾನಂದ ಸಾಲಿಯಾನ್ ‘ಮುಂಬೈ ಸ್ವ_ಗತ’ ಎಂಬ ಪುಸ್ತಕವೊಂದನ್ನು ಬರೆದಿದ್ದಾರೆ. ಮುಂಬೈನ ವಿವಿಧ ರಂಗಗಳಲ್ಲಿ ಕೆಲಸ ಮಾಡಿದ ಹಾಗೂ ಮಾಡುತ್ತಿರುವ ಕನ್ನಡಿಗರನ್ನು ಪರಿಚಯಿಸುವ 288 ಪುಟಗಳ ಈ ಪುಸ್ತಕ ಮುಂಬೈಗೆ ಮೊದಲು ಬಂದು ನೆಲೆಸಿದ ಮತ್ತು ಈಗಲೂ ಬರುತ್ತಿರುವ ಕನ್ನಡಿಗರ ಕೊಡುಗೆಯನ್ನು ಸ್ಮರಿಸುವ ಅತ್ಯುತ್ತಮ ದಾಖಲೆಯಾಗಿದೆ.
ಮುಂಬೈ ಮಹಾನಗರಕ್ಕೆ ವಲಸೆ ಬಂದು ಬದುಕನ್ನು ಕಟ್ಟಿಕೊಂಡವರಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದವರನ್ನು ಬಿಟ್ಟರೆ ಉತ್ತರ ಕರ್ನಾಟಕದ ಬಿಜಾಪುರ, ಯಾದಗಿರಿ, ರಾಯಚೂರು, ಕಲಬುರಗಿ, ಬೆಳಗಾವಿ ಮೊದಲಾದ ಕಡೆಯಿಂದ ಬಂದವರು ಕೂಡ ಸಾಕಷ್ಟಿದ್ದಾರೆ. ಅಂಥವರನ್ನೆಲ್ಲ ಸಾ.ದಯಾ ಹುಡುಕಿ ನಮ್ಮ ಮುಂದೆ ತಂದು ನಿಲ್ಲಿಸಿದ್ದಾರೆ.
ಮುಂಬೈ ಮಹಾನಗರಕ್ಕೆ ಹೊಟ್ಟೆಪಾಡಿಗಾಗಿ ವಲಸೆ ಬಂದ ಕನ್ನಡಿಗರು ತಮ್ಮ ಭಾಷೆ, ಸಂಸ್ಕೃತಿಗಳನ್ನು ಮರೆಯಲಿಲ್ಲ. ಅವುಗಳ ಜೊತೆ ಜೊತೆಗೆ ನೆಲೆಸಿದ ನಾಡಿಗೂ ತಮ್ಮ ಕೊಡುಗೆಯನ್ನು ನೀಡಿದರು. ಕನ್ನಡಿಗರ ರಾತ್ರಿ ಶಾಲೆಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಹೀಗೆ ಕಟ್ಟುವ ಕೆಲಸಕ್ಕೆ ಕೈ ಜೋಡಿಸಿದರು. ಮಹಾರಾಷ್ಟ್ರದಲ್ಲಿ ಹೆಸರು ಮಾಡಿದ ಕರ್ನಾಟಕದ ವಕೀಲರು, ವೈದ್ಯರು, ಹಣಕಾಸು ಸಂಸ್ಥೆಗಳನ್ನು ಕಟ್ಟಿದವರು, ಪ್ರಕಾಶನ ಸಂಸ್ಥೆಗಳು, ಮಂಗಳೂರು ಸ್ಟೋರುಗಳು,ಕರ್ನಾಟಕ ಸಂಘಗಳು, ಕನ್ನಡಿಗರ ಕೂಟಗಳು, ರಂಗ ತಂಡಗಳು ಹೀಗೆ ಯಾರೊಬ್ಬರನ್ನು ಬಿಡದೇ ಎಲ್ಲರನ್ನೂ ದಯಾ ಪರಿಚಯಿಸಿದ್ದಾರೆ. ಮುಂಬೈ ಮಹಾನಗರದ ವೈಶಿಷ್ಟ್ಯವೆಂದರೆ ಅದು ತನ್ನ ಆಸರೆ ಬಯಸಿ ಬಂದ ಯಾರನ್ನೂ ಕೈ ಬಿಟ್ಟಿಲ್ಲ. ಕನ್ನಡಿಗರು ಕೂಡ ನೋವು, ಅಪಮಾನ, ಸೋಲು, ನಲಿವು ಎಲ್ಲವನ್ನೂ ಜೀರ್ಣಿಸಿಕೊಂಡು ಸಾಮರಸ್ಯದಿಂದ ಬದುಕನ್ನು ಕಟ್ಟಿಕೊಂಡಿದ್ದಾರೆ.
ಮುಂಬೈಗೆ ವಲಸೆ ಬಂದ ಕನ್ನಡಿಗರು ಇಲ್ಲಿ ಬಹುದೊಡ್ಡ ಕಾರ್ಮಿಕ ನಾಯಕರಾಗಿ ಬೆಳೆದರು, ಮಾತ್ರವಲ್ಲ, ಚುನಾವಣೆಗೆ ಸ್ಪರ್ಧಿಸಿ ಗೆಲುವಿನ ಬಾವುಟವನ್ನು ಹಾರಿಸಿದ್ದಾರೆ. ಜಾರ್ಜ್ ಫೆರ್ನಾಂಡೀಸ್ ಅವರಿಗಿಂತ ಮೊದಲು ಮುಂಬೈಗೆ ಬಂದ ಚಿಕ್ಕಮಗಳೂರು ಮೂಲದ ಪಿ.ಡಿ’ಮೆಲ್ಲೊ ಅವರು ಕಾರ್ಮಿಕ ಸಂಘಟನೆಯನ್ನು ಕಟ್ಟಿ ಬೆಳೆಸಿದರು. ಅವರ ಗರಡಿಯಲ್ಲಿ ಬೆಳೆದ ಸಮಾಜವಾದಿ ನಾಯಕ ಜಾರ್ಜ್ ಫೆೆರ್ನಾಂಡಿಸ್ ಕಾರ್ಮಿಕ ನಾಯಕರಾಗಿ ಬೆಳೆಯುವುದಲ್ಲದೇ ಮುಂಬೈನಿಂದ ಲೋಕಸಭೆಗೂ ಚುನಾಯಿತರಾಗಿ ಬಂದರು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ದಿನಕರ ದೇಸಾಯಿ ಅವರು ಕೂಡ ಕಾರ್ಮಿಕ ನಾಯಕರಾಗಿ ಹೊರ ಹೊಮ್ಮಿದರು. ಜಾರ್ಜ್ ಫೆರ್ನಾಂಡಿಸ್ ಅವರಂತೂ ಜಾತಿ, ಮತ, ಭಾಷೆಗಳ ಭೇದವಿಲ್ಲದೆ ಎಲ್ಲರ ಮತ ಪಡೆದು ಎಸ್.ಕೆ.ಪಾಟೀಲರಂಥ ಘಟಾನುಘಟಿಯನ್ನು ಸೋಲಿಸಿ ಜಯಶಾಲಿಯಾದರು. ಈ ಗೆಲುವನ್ನು ಸಹಿಸಲಾಗದೇ ಬಾಳಾ ಠಾಕ್ರೆಯವರು ಶಿವಸೇನೆಯನ್ನು ಕಟ್ಟಿದರು. ಆ ಮೂಲಕ ಕನ್ನಡಿಗರನ್ನು ಉಳಿದವರಿಂದ ಪ್ರತ್ಯೇಕಿಸುವ ಪ್ರಚೋದನಕಾರಿ ಚಟುವಟಿಕೆಗಳಲ್ಲಿ ತೊಡಗಿದರು. ಮುಂಬೈ ಮರಾಠಿಗರದ್ದು, ಲುಂಗಿವಾಲಾಗಳು ತೊಲಗಲಿ ಎಂದು ದಕ್ಷಿಣ ಭಾರತೀಯರ ವಿರುದ್ಧ, ಅದರಲ್ಲೂ ಕನ್ನಡಿಗರ ವಿರುದ್ಧ ಮರಾಠಿಗರನ್ನು ಎತ್ತಿ ಕಟ್ಟಲು ಪ್ರಚೋದನೆ ನೀಡಿದರು. ಈ ಮಾತನ್ನು ಸ್ವತಃ ಜಾರ್ಜ್ ಫೆರ್ನಾಂಡಿಸ್ ನನಗೆ ಹೇಳಿದ್ದರು.
ಸಾ.ದಯಾ ಅವರ ಮುಂಬೈ ಕನ್ನಡಿಗರ ಕುರಿತ ಈ ಲೇಖನ ಮಾಲೆ ‘ವಾರ್ತಾಭಾರತಿ’ಯಲ್ಲಿ 40 ವಾರ ಪ್ರಕಟವಾಯಿತು. ಇದನ್ನು ನಾನು ತಪ್ಪದೇ ಓದುತ್ತಿದ್ದೆ. ದಯಾ ಅವರದ್ದು ಸುಲಲಿತವಾಗಿ ಓದಿಸಿಕೊಂಡು ಹೋಗುವ ಶೈಲಿ. ವಿವಿಧ ರಂಗಗಳ ಕನ್ನಡಿಗರನ್ನು ಆಪ್ತವಾಗಿ ಪರಿಚಯಿಸಿದ್ದಾರೆ. ಹೊರನಾಡಿನಲ್ಲಿರುವ ಕನ್ನಡಿಗರ ಬಗ್ಗೆ ಇಂಥದೊಂದು ಪುಸ್ತಕ ಬಂದಿರುವುದು ಇದೇ ಮೊದಲೆನೆಯದೇನೊ. ದಿಲ್ಲಿ, ಚನ್ನೈ, ಕೋಲ್ಕತಾ, ಉತ್ತರ ಪ್ರದೇಶ, ರಾಜಸ್ಥಾನ, ಗೋವಾ ಮೊದಲಾದ ಕಡೆ ಕನ್ನಡಿಗರು ವಲಸೆ ಹೋಗಿ ನೆಲೆಸಿ ಬದುಕನ್ನು ಕಟ್ಟಿಕೊಂಡ ಹಲವಾರು ಉದಾಹರಣೆಗಳಿವೆ. ಅಲ್ಲೂ ಕನ್ನಡ ಸಂಘ ಮಾಡಿಕೊಂಡು ಚಟುವಟಿಕೆಗಳಲ್ಲಿ ತೊಡಗಿದವರಿದ್ದಾರೆ. ಆದರೆ ಮುಂಬೈ ಹಾಗೂ ಗೋವಾದಷ್ಟು ದೊಡ್ಡ ಸಂಖ್ಯೆಯಲ್ಲಿ ಇಲ್ಲ. ಅಲ್ಲದೆ ದಯಾ ಅವರಂತೆ ಇಂಥದೊಂದು ಪುಸ್ತಕ ಹೊರತಂದಿರುವುದು ನನ್ನ ಗಮನಕ್ಕೆ ಬಂದಿಲ್ಲ. ಇದು ಬರೀ ಮಾಹಿತಿಗಳನ್ನು ಮಾತ್ರ ಒಳಗೊಂಡಿಲ್ಲ, ತುಂಬಾ ಅಧ್ಯಯನ ಪೂರ್ಣ ಕೃತಿಯಾಗಿದೆ.
ಮುಂಬೈ ಕನ್ನಡಿಗರದ್ದು ಜಾತಿ, ಮತ, ಪ್ರದೇಶಗಳ ವ್ಯತ್ಯಾಸಗಳನ್ನು ಮೀರಿದ ಭಾಷಾ ಬಾಂಧವ್ಯ. ಕನ್ನಡವೊಂದೇ ಇವರನ್ನು ಬೆಸೆದ ಕೊಂಡಿ. ಜಾತಿ, ಮತ ಧರ್ಮಗಳನ್ನು ದಾಟಿ ಒಂದಾಗುವ ಅಸ್ಮಿತೆ ಭಾಷೆಗಿದೆ. ಭಾರತದ ವಿಭಜನೆಯಾದಾಗ ಪಶ್ಚಿಮ ಮತ್ತು ಪೂರ್ವ ಭಾಗಗಳು ಧರ್ಮದ ಆಧಾರದಲ್ಲಿ ಪಾಕಿಸ್ತಾನದಲ್ಲಿ ಒಂದಾದವು. ಆದರೆ ಪೂರ್ವ ಪಾಕಿಸ್ತಾನದ ಹಿಂದೂ, ಮುಸ್ಲಿಮ್, ಕ್ರೈಸ್ತ, ಬೌದ್ಧ, ಜೈನ ಎನ್ನದೆ ಬಂಗಾಳಿ ಭಾಷಿಕರು ಎಲ್ಲ ಅಡ್ಡಗೋಡೆಗಳನ್ನು ದಾಟಿ ಮುಜೀಬುರ‌್ರಹಮಾನ್ ಅವರ ನೇತೃತ್ವದಲ್ಲಿ ಒಂದಾಗಿ ಹೋರಾಡಿ ಬಾಂಗ್ಲಾದೇಶ ಎಂಬ ಪ್ರತ್ಯೇಕ ರಾಷ್ಟ್ರವನ್ನೇ ರಚಿಸಿಕೊಂಡರು. ಭಾಷೆಯೊಂದೇ ಇವರನ್ನು ಒಂದಾಗಿಸಿದ ಕೊಂಡಿಯಾಗಿತ್ತು.
ಮುಂಬೈ ಕನ್ನಡಿಗರದ್ದು ಅದೇ ಮಾದರಿಯ ಭಾಷಾ ಬಾಂಧವ್ಯ. ಈ ಮಹಾನಗರಿಯ ಕನ್ನಡ ಸಂಘ ಸಂಸ್ಥೆಗಳನ್ನು ಕನ್ನಡ ಮಾತಾಡುವ ಎಲ್ಲರೂ ಕೂಡಿ ಕಟ್ಟಿದ್ದಾರೆ. ಅದರಲ್ಲೂ ಅವಿಭಜಿತ ದಕ್ಷಿಣ ಕನ್ನಡ ಮೂಲದ ಕನ್ನಡಿಗರ ಕೊಡುಗೆ ದೊಡ್ಡದು. ಕರಾವಳಿಯ ಹಿನ್ನೆಲೆಯಿಂದ ಬಂದ ದಯಾನಂದ ಸಾಲಿಯಾನ್ ಅವರು ಮುಂಬೈ ಕನ್ನಡ ಚಟುವಟಿಕೆಗಳಿಗೆ ಕನ್ನಡ ಮುಸ್ಲಿಮ್ ಮತ್ತು ಕ್ರೈಸ್ತ ಬಾಂಧವರ ಕೊಡುಗೆಯನ್ನು ತಮ್ಮ ಐದಾರು ಅಂಕಣಗಳಲ್ಲಿ ವಿವರವಾಗಿ ಬರೆದಿದ್ದಾರೆ. ನಾನು ಮುಂಬೈಗೆ ಹೋದಾಗಲೂ ಗಮನಿಸಿದೆ. ಯಾವ ಭೇದ ಭಾವವಿಲ್ಲದೆ ಮುಂಬೈ ಕನ್ನಡಿಗರು ಒಂದೆಡೆ ಸೇರಿದ್ದರು. ನನಗನಿಸಿದಂತೆ ಬಹುಶಃ ಕರ್ನಾಟಕದ ರಾಜಧಾನಿ ಬೆಂಗಳೂರಿಗಿಂತ ಹೆಚ್ಚು ಕನ್ನಡಿಗರು ಮುಂಬೈನಲ್ಲಿ ಇದ್ದಾರೆ ಎಂದರೆ ಅತಿಶಯೋಕ್ತಿಯಾಗಿರಲಿಕ್ಕಿಲ್ಲ.
ಮುಂಬೈಗೆ ತುಳು ಕನ್ನಡಿಗರು ತಾವು ಮಾತ್ರ ವಲಸೆ ಬರಲಿಲ್ಲ. ತಮ್ಮ್ಮೊಂದಿಗೆ ತುಳು ನೆಲದ ದೈವಗಳು ಅಥವಾ ಭೂತಗಳನ್ನು ತಂದರು. ತುಳು ಕನ್ನಡಿಗರ ಮನೆಯಲ್ಲಿ ದೇವರ ಫೋಟೋಗಳ ಜೊತೆಗೆ ದೈವವೂ ಆರಾಧನೆಗೊಳಗಾಯಿತು._ ಇತ್ತೀಚಿನ ವರ್ಷಗಳಲ್ಲಿ ತುಳುನಾಡಿನಲ್ಲಿ ಯಕ್ಷಗಾನದ ಸ್ವರೂಪವೂ ಬದಲಾಗಿದೆ. ಈ ಯಕ್ಷಗಾನವನ್ನು ಕೋಮುವಾದಿಗಳು ದುರ್ಬಳಕೆ ಮಾಡಿಕೊಂಡು ಕೋಮು ದ್ವೇಷಕ್ಕೆ, ಗಲಭೆಗೆ ಅದನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಕಾಯಿಲೆ ಮುಂಬೈ ಕನ್ನಡಿಗರಿಗೆ ಅಂಟಿಕೊಂಡಿಲ್ಲ ಎಂಬುದು ಸಂತಸದ ಸಂಗತಿ. ತಮ್ಮ ಪಾಡಿಗೆ ತಾವು ಅಪಾರ ಪರಿಶ್ರಮದಿಂದ ಸವಾಲುಗಳ ನಡುವೆ ತಮ್ಮ ಬದುಕನ್ನು ಕಟ್ಟಿಕೊಂಡ ತುಳು ಕನ್ನಡಿಗರು ತಮ್ಮ ಮನೆಗಳಲ್ಲಿ ಮಾತ್ರವಲ್ಲ ಮನದಲ್ಲೂ ಬಿಟ್ಟು ಬಂದ ನೆಲದ ಸಂಸ್ಕೃತಿಗಳನ್ನು ಉಳಿಸಿಕೊಂಡಿದ್ದಾರೆ.
ಆದರೆ, ಇದೆಲ್ಲದರ ಜೊತೆಗೆ ಸಾ.ದಯಾ ಮಾತ್ರವಲ್ಲ ಅಲ್ಲಿನ ಕನ್ನಡಿಗರಿಗೆ ತುಂಬಾ ನೋವನ್ನು ಉಂಟು ಮಾಡಿದ ಸಂಗತಿಯೆಂದರೆ ಕೋವಿಡ್ ನಂತರದ ಬೆಳವಣಿಗೆಗಳು. ಊರಲ್ಲಿನ ಕಡು ಬಡತನದ ಬೇಗೆಯನ್ನು ಸಹಿಸಲಾಗದೆ ತಂದೆ, ತಾಯಿಗಳು ತಮ್ಮ ಎಳೆ ಮಗನನ್ನು ದುಡಿಯಲು ಮುಂಬೈಗೆ ಕಳುಹಿಸಿರುವುದು ಹಾಗೂ ಕಳುಹಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ತಮ್ಮ ಬಾಲ್ಯವನ್ನು ಕಳೆದುಕೊಂಡು ದೂರದ ಮುಂಬೈಗೆ ಬಂದ ಮಕ್ಕಳು ತಮ್ಮ ಮೈ ಬೆವರಿನಿಂದ ಬಂದ ಅಷ್ಟಿಷ್ಟು ಕೂಲಿ ಹಣವನ್ನು ಊರಲ್ಲಿರುವ ಪಾಲಕರರಿಗೆ ಕಳುಹಿಸುತ್ತ ಬಂದರು. ಈ ಹಣದಿಂದಲೇ ಅಕ್ಕನ ಮದುವೆ, ತಮ್ಮನ ಶಿಕ್ಷಣ, ತಂದೆ, ತಾಯಿಯ ದವಾಖಾನೆ ಖರ್ಚು ಎಲ್ಲವನ್ನೂ ನಿಭಾಯಿಸುತ್ತ ಬಂದರು. ಇಲ್ಲಿ ತಾವು ಉಪವಾಸ ಇದ್ದು, ಊರಲ್ಲಿರುವ ಬಂಧುಗಳನ್ನು ಸಾಕಿ ಸಲಹಿದರು. ಆದರೆ ಮುಂಬೈ ಮಹಾನಗರಿಗೆ ಕೊರೋನ ಅಪ್ಪಳಿಸಿದಾಗ ಉಳಿದ ರಾಜ್ಯಗಳ ಜನರು ತಮ್ಮ ಊರಿಗೆ ಹೊರಟಂತೆ ಕನ್ನಡಿಗರೂ ಮುಂಬೈ ತೊರೆಯಲು ಗಂಟು,ಮೂಟೆಗಳನ್ನು ಕಟ್ಟಿಕೊಂಡರು, ಆದರೆ ಊರಲ್ಲಿ ಇವರಿಂದ ಹಣದಿಂದ ಬದುಕನ್ನು ಕಟ್ಟಿಕೊಂಡ ಸಂಬಂಧಿಕರು ನಿಕ್ಲು ಇತ್ತೆ ಬರೊಡ್ಚಿ (ನೀವು ಈಗ ಬರಬೇಡಿ)
ಎಂದು ಮುಲಾಜಿಲ್ಲದೇ ಹೇಳಿದರು. ಉತ್ತರ ಕರ್ನಾಟಕದ ಕಲಬುರಗಿ, ರಾಯಚೂರು, ಬಿಜಾಪುರ, ಯಾದಗಿರಿಯ ಜನರು ಮುಂಬೈನಲ್ಲಿ ನೆಲೆಸಿದ ತಮ್ಮವರನ್ನು ಬರ ಮಾಡಿಕೊಂಡಂತೆ, ದಕ್ಷಿಣ ಕನ್ನಡದ ಊರಿನ ಬಂಧುಗಳು ಕರೆಸಿಕೊಳ್ಳಲಿಲ್ಲ ಇದರ ಬಗ್ಗೆ ತಳಮಳದಿಂದ ಬರೆದ ದಯಾ ಅವರು ಕಾಲ ಬದಲಾಗಿದೆ, ಲೆಕ್ಕಚಾರದ ಮೇಲೆ ಸಂಬಂಧಗಳು ನಿಂತಿವೆ ಎಂದು ಸಂಕಟಪಟ್ಟಿದ್ದಾರೆ.
ಮುಂಬೈನಲ್ಲಿ ಕನ್ನಡ ಸಂಘ ಸಂಸ್ಥೆಗಳಿಗೇನು ಕೊರತೆಯಿಲ್ಲ. ಇವುಗಳಲ್ಲಿ ಬಹುತೇಕ ಸಂಸ್ಥೆಗಳು ಸರಕಾರದಿಂದ ಅನುದಾನ ಪಡೆಯುತ್ತವೆ. ಆದರೆ ಧಾರಾವಿಯಲ್ಲಿ ನೆಲೆಸಿ ಬದುಕು ಕಟ್ಟಿಕೊಂಡ ನಿಜ ಕನ್ನಡಿಗರನ್ನು ಇವು ದೂರವಿಟ್ಟಿವೆ ಎಂಬುದು ಕಟು ಸತ್ಯ. ಸಾ.ದಯಾ ಅವರು ತಮ್ಮ ಪುಸ್ತಕದಲ್ಲಿ ನಿಸ್ಸಂಕೋಚವಾಗಿ ಇದನ್ನು ದಾಖಲಿಸಿದ್ದಾರೆ.ಉತ್ತರ ಕರ್ನಾಟಕದ ಬಿಜಾಪುರ, ರಾಯಚೂರು, ಕಲಬುರಗಿ, ಯಾದಗಿರಿ, ಗದಗ ಮೊದಲಾದ ಕಡೆಯಿಂದ ದುಡಿಯಲು ವಾಣಿಜ್ಯ ನಗರಿಗೆ ಬಂದ ಜನರಲ್ಲಿ ದಲಿತರು, ಹಿಂದುಳಿದವರು, ಕೋಲಿ ಸಮಾಜದವರು ಹಾಗೂ ಬಡ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಮಿಲ್ಲುಗಳಲ್ಲಿ, ಹಡಗು ಕಟ್ಟೆಯಲ್ಲಿ, ರೈಲ್ವೆ, ಮುನ್ಸಿಪಲ್ ಕಚೇರಿ, ಸಣ್ಣಪುಟ್ಟ ಕೈಗಾರಿಕೆಗಳಲ್ಲಿ ದುಡಿಯುವ ಈ ಅಶಿಕ್ಷಿತ, ಅರೆ ಶಿಕ್ಷಿತ ಜನ ಬದುಕಿನ ಹೋರಾಟದ ಜೊತೆಗೆ ತಮ್ಮ ಕನ್ನಡ ಅಸ್ಮಿತೆಯನ್ನು ಉಳಿಸಿಕೊಳ್ಳಲು ಸೆಣಸಾಡುತ್ತಿದ್ದಾರೆ. ಧಾರಾವಿಯಲ್ಲಿ ಕರ್ನಾಟಕ ಯುವ ಸಂಘ ಎಂಬ ವಾಟ್ಸ್‌ಆ್ಯಪ್ ಗ್ರೂಪ್ ಮಾಡಿಕೊಂಡಿದ್ದಾರೆ. ನಾನು ಮುಂಬೈಗೆ ಹೋದಾಗ ಬಹಳ ಹೊತ್ತು ಕಳೆದದ್ದು ಇವರ ಜೊತೆ. ಯಾದಗಿರಿಯ ಭೀಮರಾಯ ಚಿಲ್ಕಾ ಅವರು ಗುಬ್ಬಿ ಗೂಡಿನಂತಿರುವ ತಮ್ಮ ಪುಟ್ಟ ಸೂರಿಗೆ ಕರೆದುಕೊಂಡು ಹೋಗಿದ್ದರು. ಧಾರಾವಿಯ ಕನ್ನಡಿಗರು ಸದಾಶಿವ ಮಠ, ಎಲ್ಲಮ್ಮನ ಗುಡಿಗಳನ್ನು ಕಟ್ಟಿಕೊಂಡಿದ್ದಾರೆ. ಇವರಲ್ಲಿ ಈಗ ಹಲವರು ವೈದ್ಯರಾಗಿದ್ದಾರೆ, ವಕೀಲರಾಗಿದ್ದಾರೆ, ಇಂಜಿನಿಯರುಗಳಾಗಿದ್ದಾರೆ.ಕನ್ನಡಿಗರ ಮೂರು ಚರ್ಚುಗಳಿವೆ.ತಮ್ಮ ಊರಿನಂತೆ ಜಾತ್ರೆಗಳನ್ನು ಮಾಡುತ್ತಾರೆ.ಒಬ್ಬಿಬ್ಬರು ಮುಂಬೈ ಮಹಾ ನಗರ ಪಾಲಿಕೆಯ ಸದಸ್ಯರೂ ಆಗಿದ್ದಾರೆ.ಇದನ್ನೆಲ್ಲ ಸಾ. ದಯಾ ವಿವರವಾಗಿ ದಾಖಲಿಸಿದ್ದಾರೆ.
ಮೊದಲಿನಿಂದಲೂ ನನಗೆ ಮುಂಬೈ ಮಹಾನಗರದ ಬಗ್ಗೆ ವಿಶೇಷ ಕುತೂಹಲ. ಬಾಲ್ಯದಲ್ಲೇ ಕಮ್ಯುನಿಸ್ಟ್ ಚಳವಳಿಯ ಪ್ರಭಾವದಿಂದಾಗಿ ಮಹಾರಾಷ್ಟ್ರದ ಕಮ್ಯುನಿಸ್ಟ್ ನಾಯಕರಾಗಿದ್ದ ಎಸ್.ಎ.ಡಾಂಗೆ, ರಣದಿವೆ ಗೋದಾವರಿ ಪರುಳೆಕರ್ ಇವರೆಲ್ಲರ ಬದುಕು ಮತ್ತು ಬರಹದ ಬಗ್ಗೆ ತಿಳಿದುಕೊಳ್ಳುವ ಆಸೆ. ಮಹಾತ್ಮಾ ಗಾಂಧಿ ಅವರು ‘ಮಾಡು ಇಲ್ಲವೇ ಮಡಿ’ ಕರೆ ನೀಡಿದ್ದು ಇದೇ ಮುಂಬೈನಲ್ಲಿ. ಇದೇ ಮುಂಬೈನಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ವ್ಯಾಸಂಗ ಮಾಡಿದರು, ನಡೆದಾಡಿದರು. ಖ್ಯಾತ ಎಡಪಂಥೀಯ ನಾಯಕಿ ಅರುಣಾ ಅಸಫ್ ಅಲಿ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಬ್ರಿಟಿಷ್ ಪೊಲೀಸರ ಕಣ್ಣು ತಪ್ಪಿಸಿ ಗೋವಾಲಿಯಾ ಟ್ಯಾಂಕ್ ಮೈದಾನದಲ್ಲಿ ಎತ್ತರದಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಿದ ತಾಣವಿದು. ಕಾಸ್ಮೊಪಾಲಿಟಿನ್ ನಗರವಾದರೂ ಇಲ್ಲಿಯ ಮಾನವೀಯ ಸಂಬಂಧಗಳು ತುಂಬಾ ಆಪ್ತವಾಗಿವೆ. ಮುಂಬೈ ಜನಸಂಖ್ಯೆ ಒಂದೂವರೆ ಕೋಟಿ ದಾಟಿದೆ. ಇದರಲ್ಲಿ ಅಜಮಾಸು 35 ಲಕ್ಷ ಕನ್ನಡಿಗರಿದ್ದಾರೆ. ಕರ್ನಾಟಕದ ಒಳನಾಡಿಗಿಂತ ತುಂಬಾ ಪ್ರಭಾವಿಯಾಗಿರುವ 160ಕ್ಕಿಂತ ಹೆಚ್ಚು ಕನ್ನಡ ಸಂಘಗಳಿವೆ.ಅತ್ಯಧಿಕ ಪ್ರಸಾರದ ಕನ್ನಡ ದೈನಿಕ ಚಂದ್ರಶೇಖರ ಪಾಲೆತ್ತಾಡಿ ಅವರ ಸಂಪಾದಕತ್ವದಲ್ಲಿ ‘ಕರ್ನಾಟಕ ಮಲ್ಲ’ ದಿನಪತ್ರಿಕೆ ಇಲ್ಲಿಂದ ಪ್ರಕಟವಾಗುತ್ತದೆ.ಅದು ಮಾತ್ರವಲ್ಲ 50 ಕ್ಕೂ ಹೆಚ್ಚು ಕನ್ನಡ ಪತ್ರಿಕೆಗಳು ಇಲ್ಲಿವೆ. ಮುಂಬೈ ಕನ್ನಡ ಪತ್ರಿಕಾ ರಂಗಕ್ಕೆ 138 ವರ್ಷಗಳ ಇತಿಹಾಸವಿದೆ. 75 ವರ್ಷಗಳಿಗಿಂತ ಹೆಚ್ಚು ಕಾಲದಿಂದ ನಿರಂತರವಾಗಿ ಪ್ರಕಟವಾಗುತ್ತಿರುವ ‘ಮೊಗವೀರ’ ಸೇರಿದಂತೆ ಅನೇಕ ಕನ್ನಡ ಪತ್ರಿಕೆಗಳು ಇಲ್ಲಿವೆ. ನಾನು 35 ವರ್ಷಗಳ ಹಿಂದೆ ‘ಮೊಗವೀರ’ ಪತ್ರಿಕೆಗೆ ಕಳಿಸಿದ ಲೇಖನ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.
ಮುಂಬೈನಲ್ಲೇ ನೆಲೆಸಿದ,ಬದುಕು ಕಟ್ಟಿಕೊಂಡವರ ಬಗ್ಗೆ ಸಾಕಷ್ಟು ವಿವರಗಳನ್ನು ಸಾ.ದಯಾ ಅವರು ಸಂಗ್ರಹಿಸಿಕೊಟ್ಟಿದ್ದಾರೆ.ಇದನ್ನು ಇನ್ನಷ್ಟು ವಿಸ್ತರಿಸಬಹುದು. ರಾಜಕೀಯದಲ್ಲಿ ಹೆಸರು ಮಾಡಿದವರನ್ನ್ನೂ ದಯಾ ಅವರು ಪರಿಚಯಿಸಿದ್ದಾರೆ. ಆದರೆ ಎಲೆ ಮರೆಯ ಕಾಯಿಯಂತೆ ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತ ಬಂದ ಅನೇಕರಿದ್ದಾರೆ. ಅವರನ್ನೂ ಪರಿಚಯಿಸಬೇಕಾಗಿದೆ. ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಕನ್ನಡ ಮಾತೃಭಾಷೆಯ ಹಲವಾರು ಜನರಿದ್ದಾರೆ. ಇವರುಗಳ ಬಗ್ಗೆ ಇನ್ನಷ್ಟು ಅಂಕಣ ಬರಹಗಳನ್ನು ‘ವಾರ್ತಾಭಾರತಿ’ಗೆ ಬರೆಯಬಹುದಾಗಿದೆ. ಆದರೆ, ರಂಗಭೂಮಿ, ಕನ್ನಡ ಪತ್ರಕರ್ತರ ಸಂಘ ಹೀಗೆ ಹಲವಾರು ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ದಯಾ ಅವರುಜ ಪುರುಸೊತ್ತು ಮಾಡಿಕೊಂಡು ಬರೆಯಬಹುದು.ಈಗ ಬಂದ ಅಂಕಣ ಬರಹಗಳ ಈ ಪುಸ್ತಕ ಅಮೂಲ್ಯ ದಾಖಲೆಯಾಗಿದೆ.ಇದು ಎಲ್ಲರೂ ಓದಬಹುದಾದ ಪುಸ್ತಕ ಎಂದರೆ ಅತಿಶಯೋಕ್ತಿಯಲ್ಲ.