ಸಂವಿಧಾನ: ಇದು ಅಪಾಯದ ಮುನ್ಸೂಚನೆ

ಸಂವಿಧಾನದ ಪೀಠಿಕೆಯಿಂದ ‘ಸಮಾಜವಾದ’ ಮತ್ತು ‘ಜಾತ್ಯತೀತ’ ಪದಗಳನ್ನು ತೆಗೆದು ಹಾಕಬೇಕೆಂದು ಆರೆಸ್ಸೆಸ್ನ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆಯವರು ಹೇಳಿದ್ದಾರೆ. ಹೊಸಬಾಳೆಯವರ ಮಾತಿಗೆ ಕೇಂದ್ರ ಸಚಿವ ಶಿವ್ರಾಜ್ ಸಿಂಗ್ ಚೌಹಾಣ್ ಕೂಡ ದನಿಗೂಡಿಸಿದ್ದಾರೆ. ಇವರ ಕುಹಕದ ಮಾತಿಗೆ ದೇಶಾದ್ಯಂತ ವ್ಯಾಪಕ ಪ್ರತಿರೋಧ ವ್ಯಕ್ತವಾಗುತ್ತಿದೆ. ಸಂಘ ಪರಿವಾರದ ವಲಯಗಳಿಂದ ಅವರ ಪರವಾಗಿ ಸಮರ್ಥನೆಗಳೂ ಬರುತ್ತಿವೆ. ಸಂಘ ಪರಿವಾರದ ಮುಖವಾಣಿ ‘ಆರ್ಗನೈಝರ್’ ಕೂಡ ಹೊಸಬಾಳೆಯವರ ಅಭಿಪ್ರಾಯಕ್ಕೆ ಸಹಮತವನ್ನು ವ್ಯಕ್ತಪಡಿಸಿದೆ. ಇದಾವುದೂ ಅಚ್ಚರಿದಾಯಕ ಅಲ್ಲ, ಅನಿರೀಕ್ಷಿತವೂ ಅಲ್ಲ.
ಸಂವಿಧಾನ ಅಸ್ತಿತ್ವಕ್ಕೆ ಬರುವ ಮೊದಲಿನಿಂದಲೂ ಆರೆಸ್ಸೆಸ್ ಅದನ್ನು ವಿರೋಧಿಸುತ್ತಲೇ ಬಂದಿದೆ. ನಾವು ಸಂವಿಧಾನವನ್ನು ಬದಲಿಸಲು ಅಧಿಕಾರಕ್ಕೆ ಬಂದಿದ್ದೇವೆ ಎಂದು ಮಾಜಿ ಕೇಂದ್ರ ಮಂತ್ರಿ ಅನಂತ ಕುಮಾರ್ ಹೆಗಡೆಯವರು ಹಲವಾರು ಸಲ ಬಹಿರಂಗವಾಗಿಯೇ ಹೇಳಿದ್ದರು. ಕಳೆದ ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲೂ ಪ್ರಧಾನಿ ನರೇಂದ್ರ ಮೋದಿಯವರು ಇಂಥದೇ ಇಂಗಿತವನ್ನು ವ್ಯಕ್ತಪಡಿಸಿದ್ದರು. ಈಗ ಆರೆಸ್ಸೆಸ್ ಸಹ ಕಾರ್ಯವಾಹರೇ ನೇರವಾಗಿ ಹೇಳಿದ್ದಾರೆ.ಇದು ಕೇವಲ ಇವೆರಡು ‘ಪದ’ ಗಳಿಗೆ ಮಾತ್ರ ಸೀಮಿತವಾಗಿಲ್ಲ. ಇದರ ಮುಂದಿನ ಹೆಜ್ಜೆ ಸಂವಿಧಾನದ ಬದಲಾವಣೆ ಹಾಗೂ ಅದರ ಸ್ಥಾನದಲ್ಲಿ ‘ಮನುಸ್ಮತಿ’ ಸ್ಥಾಪನೆ ಇವರ ನಿಜವಾದ ಗುರಿಯಾಗಿದೆ.
ಸಂವಿಧಾನದ ಪೀಠಿಕೆಯಿಂದ ಸಮಾಜವಾದ ಮತ್ತು ಧರ್ಮ ನಿರಪೇಕ್ಷತೆ (Socialism and Secular-ism) ಇವೆರಡೂ ಪದಗಳನ್ನು ತೆಗೆದು ಹಾಕಬೇಕೆಂಬುದು ದತ್ತಾತ್ರೇಯ ಹೊಸಬಾಳೆಯವರೊಬ್ಬರೇ ಅಲ್ಲ,ಅವರ ಸಂಘಟನೆಯ ಅನೇಕರು ಆಗಾಗ ಹೇಳುತ್ತಲೇ ಇರುತ್ತಾರೆ. ಸಂಘದ ಎರಡನೇ ಸರಸಂಘಚಾಲಕ ಮಾಧವ ಸದಾಶಿವ ಗೋಳ್ವಾಲ್ಕರ್ ತಮ್ಮ ಚಿಂತನಗಂಗಾ ಪುಸ್ತಕದಲ್ಲಿ ‘ಸಮಾಜವಾದ ಭಾರತಕ್ಕೆ ಪರಕೀಯ ಶಬ್ದ’ಎಂದು ಎಪ್ಪತ್ತು ವರ್ಷಗಳ ಹಿಂದೆಯೇ ಹೇಳಿದ್ದರು.ಇದು ಅವರ ಸಂಘದ ಸಿದ್ಧಾಂತ. ಮನುವಾದದಲ್ಲಿ ನಂಬಿಕೆ ಹೊಂದಿದವರು ಮನುಷ್ಯರೆಲ್ಲ ಸಮಾನರು ಎಂಬುದನ್ನು ಒಪ್ಪುವುದಿಲ್ಲ. ಆದರೆ ‘ಮನುಷ್ಯರೆಲ್ಲ ಸಮಾನರು’ ಎಂಬುದು ಸಮಾಜವಾದಿ ಸಿದ್ಧಾಂತ. ಅದನ್ನು ಹೊಸಬಾಳೆಯವರಾಗಲಿ ಅವರ ಸಂಘದವರಾಗಲಿ ಹೇಗೆ ಒಪ್ಪಲು ಸಾಧ್ಯ?
ಬಹುತ್ವ ಭಾರತವನ್ನು ಮನುವಾದಿ, ಫ್ಯಾಶಿಸ್ಟ್ ರಾಜ್ಯವನ್ನಾಗಿ ಬದಲಿಸಲು ಹೊರಟಿರುವವರು ಅದಕ್ಕೆ ಭಾರತವನ್ನು ಸಿದ್ಧಪಡಿಸಲು ಆಗಾಗ ಇಂಥ ಬಾಣಗಳನ್ನು ಬಿಡುತ್ತಲೇ ಇರುತ್ತಾರೆ. ಇದಕ್ಕೆ ಜನರ ಪ್ರತಿಕ್ರಿಯೆಗಳನ್ನು ಗಮನಿಸಿ ಮುಂದಿನ ಹೆಜ್ಜೆಯನ್ನು ಇಡುತ್ತಾರೆ. ‘ಸಮಾಜವಾದ’ ಎಂಬುದು ಒಂದು ಪದವಾಗಿ ಮಾತ್ರವಲ್ಲ, ಅದು ಸಂವಿಧಾನದ ಜೀವಾಳವಾಗಿದೆ. ಸಂವಿಧಾನದ 35 ರಿಂದ 45ವರೆಗಿನ ವಿಧಿಗಳಲ್ಲಿರುವ ಅಂಶಗಳು ಸಂವಿಧಾನದ ಬುನಾದಿಯಾಗಿವೆ. ಇವು ಸಮಾಜವಾದಿ ತತ್ವ ಸಿದ್ಧಾಂತಗಳನ್ನು ಒಳಗೊಂಡಿವೆ. ಅಲ್ಲದೆ ಆರ್ಟಿಕಲ್ 39 ರ ಪ್ರಕಾರ ಸಂಪತ್ತು ಒಂದೇ ಕಡೆಗೆ ಸೇರಿ ಕೊಳ್ಳಬಾರದು, ಸಂಪತ್ತು ಸಾಮೂಹಿಕ ವಾಗಿರಬೇಕು ಎಂದು ಹೇಳಲಾಗಿದೆ. ಇದನ್ನು ಹೇಗೆ ತೆಗೆದು ಹಾಕುತ್ತೀರಿ ಹೊಸಬಾಳೆಯವರೇ? ಯಾರೇ ಒಪ್ಪಲಿ ಬಿಡಲಿ, ಅನೇಕತೆಯಲ್ಲಿ ಏಕತೆ ಎಂಬುದು ಬಹುತ್ವ ಭಾರತದ ನೈಜ ಸೌಂದರ್ಯ, ಅಂತಲೇ ನಮ್ಮದು ವಿಭಿನ್ನ ಭಾಷೆ, ಧರ್ಮ, ಜನಾಂಗ, ಸಂಸ್ಕೃತಿ ಮತ್ತು ರಾಷ್ಟ್ರೀಯತೆಗಳ ಒಕ್ಕೂಟ ದೇಶ.
ಸಂವಿಧಾನ ಮಾತ್ರವಲ್ಲ ಬಹುತ್ವ ಉದಾರವಾದಿ ಸಹಬಾಳ್ವೆಯ ಪರಂಪರೆಯನ್ನು ನಾಶ ಮಾಡುವುದು ಇವರ ಒಳ ಗುರಿಯಾಗಿದೆ.ಇವರಿಗೆ ಬುದ್ಧ, ಬಸವಣ್ಣನವರನ್ನು ಕಂಡರೆ ಆಗುವುದಿಲ್ಲ. ಇನ್ನೊಂದೆಡೆ ಕರ್ನಾಟಕದ ವಚನ ಸಾಹಿತ್ಯ, ಮಹಾರಾಷ್ಟ್ರದ ಸಂತ ಪರಂಪರೆಯನ್ನು ಮುಗಿಸುವುದು ಇವರ ಮಸಲತ್ತಾಗಿದೆ.ಕರ್ನಾಟಕದಲ್ಲಿ ಇವರು ಪ್ರಕಟಿಸಿದ ‘ವಚನ ದರ್ಶನ’ ಎಂಬ ಪುಸ್ತಕದ ಪ್ರಚಾರಕ್ಕಾಗಿ ನಡೆಸಿದ ಸಭೆ ಸಮಾರಂಭಗಳು, ವಿಚಾರ ಗೋಷ್ಠಿಗಳು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಲಿಂಗಾಯತರು ತಿರುಗಿ ನಿಂತ ನಂತರ ಇವರು ಬಾಲ ಮುಚ್ಚಿಕೊಂಡರು.
ಸಮಾಜವಾದ ಮತ್ತು ಜಾತ್ಯತೀತ ಎಂಬ ಪದಗಳನ್ನು ಸಂವಿಧಾನದ ಪೀಠಿಕೆಯಿಂದ ತೆಗೆದು ಹಾಕಬೇಕೆಂದು ಒತ್ತಾಯಿಸಿ ಸಲ್ಲಿಸಲಾಗಿದ್ದ ದಾವೆಯನ್ನು ಸುಪ್ರೀಂ ಕೋರ್ಟ್ 2024ರ ನವೆಂಬರ್ನಲ್ಲಿ ತಳ್ಳಿ ಹಾಕಿತ್ತು. ಆದರೂ ಸಂವಿಧಾನವನ್ನು ಕಂಡರಾಗದ ಕೋಮುವಾದಿ, ಮನುವಾದಿ ಶಕ್ತಿಗಳು ಆಗಾಗ ಇಂಥ ಅಪಸ್ವರವನ್ನು ತೆಗೆಯುತ್ತಲೇ ಇವೆ.
ಸಮಾಜವಾದ ಮತ್ತು ಜಾತ್ಯತೀತ ಎಂಬ ಪದಗಳು ಹೊರಗಿನಿಂದ ಬಂದುದರಿಂದ ಅವುಗಳು ಬೇಡ ಎಂಬುದು ಹೊಸಬಾಳೆ ಮತ್ತು ಅವರ ಸಂಘ ಪರಿವಾರದವರ ವಾದ. ಇದಕ್ಕಿಂತ ಅವಿವೇಕ ಇನ್ನೊಂದಿಲ್ಲ. ಒಳ್ಳೆಯದು ಎಲ್ಲಿಂದಲಾದರೂ ಬರಲಿ ಅದನ್ನು ಸ್ವಾಗತಿಸೋಣ ಎಂದು ಸ್ವಾಮಿ ವಿವೇಕಾನಂದರೇ ಹೇಳಿದ್ದಾರೆ. ಹೊರಗಿನ ಅಂದರೆ ವಿದೇಶದಿಂದ ಬಂದದ್ದೆಲ್ಲ ಬೇಡ ಎಂದಾದರೆ ನಾವು ನಿತ್ಯ ಬಳಸುವ ವಿದ್ಯುತ್ ದೀಪಗಳನ್ನು ಆರಿಸಿ ಬುಡ್ಡಿ ದೀಪದ ಮೊರೆ ಹೋಗಬೇಕಾಗುತ್ತದೆ, ಯಾಕೆಂದರೆ ವಿದ್ಯುಚ್ಛಕ್ತಿ ನಮ್ಮ ದೇಶದ್ದಲ್ಲ.ಮೋಹನ್ ಭಾಗವತರು ಮತ್ತು ಹೊಸಬಾಳೆಯವರು ಸಂಚರಿಸುವ ರೈಲು, ಬಸ್ಸು, ವಿಮಾನ ಇವೆಲ್ಲವೂ ವಿದೇಶದಿಂದ ಬಂದದ್ದು. ಅವುಗಳನ್ನು ಇವರು ಬಳಸುವಂತಿಲ್ಲ. ಎತ್ತಿನ ಗಾಡಿ ಕಟ್ಟಿಕೊಂಡು ಓಡಾಡಬೇಕಾಗುತ್ತದೆ. ಇವು ಮಾತ್ರವಲ್ಲ ಆರೆಸ್ಸೆಸ್ಸಿದ್ಧಾಂತದ ಮೂಲ ಭಾರತೀಯವಲ್ಲ. ಸಂಘದ ಸ್ಥಾಪಕ ಹೆಡ್ಗೆವಾರ್ ಅವರು ಮೂಂಜೆ ಅವರನ್ನು ಜರ್ಮನಿ ಮತ್ತು ಇಟಲಿಗಳಿಗೆ ಕಳಿಸಿ ಅಲ್ಲಿನ ಹಿಟ್ಲರ್ನ ನಾಝಿ ಪಕ್ಷ ಮತ್ತು ಮುಸ್ಸೋಲಿನಿ ಫ್ಯಾಶಿಸ್ಟ್ ಪಕ್ಷದ ಸಿದ್ಧಾಂತಗಳನ್ನು ತಂದು ಅದಕ್ಕೆ ಮನುವಾದಿ ಹಿಂದುತ್ವದ ಲೇಪನ ಮಾಡಿ ತಮ್ಮ ಸಂಘದ ಸಿದ್ಧಾಂತವನ್ನು ರೂಪಿಸಿದರು.ಅಸಹನೆ, ದ್ವೇಷ, ಇವೆಲ್ಲ ಭಾರತೀಯ ಮೂಲದಿಂದ ಬಂದಿಲ್ಲ. ಅಲ್ಲಿಂದ ಎರವಲು ತಂದಿರುವುದು ಗುಟ್ಟಿನ ಸಂಗತಿಯಲ್ಲ.
ದತ್ತಾತ್ರೇಯ ಹೊಸಬಾಳೆ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬದವರು. ಕರ್ನಾಟಕದಲ್ಲಿ ಎಬಿವಿಪಿ ಸಂಘಟನೆಯನ್ನು ಕಟ್ಟಿದವರು.ಸಂಘಟನೆಗೆ ತಮ್ಮನ್ನು ಸಮರ್ಪಿಸಿಕೊಂಡವರು.ರಾಘವೇಶ್ವರ ಭಾರತಿ ಸ್ವಾಮಿಯ ಪ್ರಕರಣದಲ್ಲಿ ಇವರು ಸ್ವಾಮಿಯ ವಿರೋಧವಾಗಿದ್ದರು. ಆದರೆ ಕಲ್ಲಡ್ಕ ಪ್ರಭಾಕರ್ ಭಟ್ಟರು ಸ್ವಾಮಿಯ ಪರವಾಗಿದ್ದರು. ಸರ ಕಾರ್ಯವಾಹರಾಗಿದ್ದರೂ ಇವರ ಮಾತು ನಡೆಯಲಿಲ್ಲ. ಆರೆಸ್ಸೆಸ್ ಕಲ್ಲಡ್ಕರ ಪರವಾಗಿ ನಿಂತಿತು. ಇವೆಲ್ಲವುಗಳ ಜೊತೆಗೆ ತಾನು ನಂಬಿದ ಸಿದ್ಧಾಂತಕ್ಕೆ ಹೊಸಬಾಳೆ ಬದ್ಧರಾದವರು.ವೈಯಕ್ತಿಕವಾಗಿ ಹೇಗೇ ಇರಲಿ ಜೀವ ವಿರೋಧಿ ಸಿದ್ಧಾಂತದ ಸಮರ್ಥಕರಾಗಿರುವುದಂತೂ ವಾಸ್ತವ ಸಂಗತಿ.
ಸಂವಿಧಾನದ ವಿರುದ್ಧ ನಡೆಯುತ್ತಿರುವ ಮಸಲತ್ತುಗಳ ಬಗ್ಗೆ ಭಾರತದ ದಮನಿತ, ದಲಿತ ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳು ಸ್ವಾತಂತ್ರ್ಯಾ ನಂತರ ಇದೇ ಮೊದಲ ಬಾರಿ ಅತ್ಯಂತ ಆತಂಕದ ಕ್ಷಣಗಳನ್ನು ಎದುರಿಸುತ್ತಿವೆ. ತಮಗೆ ರಕ್ಷಾ ಕವಚವಾದ ಸಂವಿಧಾನವನ್ನೇ ಬುಡಮೇಲು ಮಾಡಲು ನಡೆದಿರುವ ಮಸಲತ್ತುಗಳ ಬಗ್ಗೆ ಒಂದು ವಿಧದ ಭೀತಿಯ ವಾತಾವರಣ ಉಂಟಾಗಿದೆ. ಇದಕ್ಕೆ ಕಾರಣವಿಲ್ಲದಿಲ್ಲ.
ಸಂವಿಧಾನ ಇಟ್ಟುಕೊಂಡೇ ಕಳೆದ ಹನ್ನೊಂದು ವರ್ಷಗಳಲ್ಲಿ ನಡೆಯುತ್ತಿರುವ ಸಂವಿಧಾನ ವಿರೋಧಿ ಚಟುವಟಿಕೆಗಳು ಹಾಗೂ ಸಂವಿಧಾನವನ್ನು ಬದಲಿಸಲು ಬಂದಿದ್ದೇವೆ ಎಂಬ ಕೇಂದ್ರ ಸಚಿವರ ಮಾತುಗಳು ಸಹಜವಾಗಿ ಅವಕಾಶ ವಂಚಿತ ಸಮುದಾಯದಲ್ಲಿ ಮುಂದೇನಾಗುತ್ತದೆ ಎಂಬ ಆತಂಕ ಉಂಟು ಮಾಡಿದೆ.
ಸಂವಿಧಾನವನ್ನು ಬದಲಿಸುತ್ತೇವೆಂದು ಹೇಳುವುದು ಮಾತ್ರವಲ್ಲ ಆ ಸಂವಿಧಾನವನ್ನು ದೇಶದ ರಾಜಧಾನಿ ದಿಲ್ಲಿಯಲ್ಲಿ ಸಂಸತ್ ಭವನದ ಎದುರೇ ಸುಟ್ಟುಹಾಕಿದ ಘಟನೆಯೂ ನಡೆಯಿತು. ಸುಟ್ಟು ಹಾಕಿದವರಿಗೂ ಹಾಗೂ ಸಂವಿಧಾನವನ್ನು ಬದಲಿಸುತ್ತೇವೆಂದು ಹೇಳುವವರಿಗೂ ಅಂಥ ವ್ಯತ್ಯಾಸವೇನಿಲ್ಲ. ಸಂವಿಧಾನ ಸುಟ್ಟವರ ಮೇಲೆ ಸರಕಾರ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ ಎಂಬುದು ಗಮನಾರ್ಹ.
ಸಂವಿಧಾನ ಇಲ್ಲದ ಭಾರತ ಹೇಗಿತ್ತು ಎಂದು ಊಹೆ ಮಾಡಿದರೆ ಹೆದರಿಕೆಯಾಗುತ್ತದೆ. ಮುಂಚೆ ರಾಜ ಮಹಾರಾಜರ ಕಾಲದಲ್ಲಿ ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಆಧರಿಸಿ ಈ ಸಮಾಜ ನಡೆಯುತ್ತಿತ್ತು. ರಾಜನ ಮಗ ರಾಜ.ಶಾನುಬೋಗನ ಮಗ ಶಾನುಬೋಗ , ಕಸಗುಡಿಸುವವನ ಮಗ ಕಸಗುಡಿಸುವವನಾಗುವ ವ್ಯವಸ್ಥೆ ಆಗಿತ್ತು. ಬ್ರಿಟಿಷರ ಕಾಲದಲ್ಲಿ ಈ ವ್ಯವಸ್ಥೆಗೆ ಕೊಂಚ ಪೆಟ್ಟು ಬಿತ್ತು. ಸೆಗಣಿ ಬಳಿಯುವವರ ಮಕ್ಕಳು ಶಾಲೆಗೆ ಹೋಗುವಂತಾಯಿತು. ಅಂತಲೇ ರಾಷ್ಟ್ರಕವಿ ಕುವೆಂಪು ಅವರು, ಬ್ರಿಟಿಷರು ಬರದಿದ್ದರೆ ನಾನು ದನದ ಕೊಟ್ಟಿಗೆಯಲ್ಲಿ ಸೆಗಣಿ ಬಳಿಯುತ್ತಿದ್ದೆಎಂದು ಹೇಳಿದ್ದಾರೆ. ಇದರರ್ಥ ವಿದೇಶಿ ಆಡಳಿತ ಒಳ್ಳೆಯದೆಂದಲ್ಲ. ಆದರೆ ಅದನ್ನು ಬರಮಾಡಿಕೊಳ್ಳುವಷ್ಟು ಈ ದೇಶದ ಜಾತಿ ವ್ಯವಸ್ಥೆ ಅಸಮಾನತೆಯಿಂದ ಹಾಳಾಗಿ ಒಡೆದ ಮನೆಯಂತಾಗಿತ್ತು.
ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಭಾರತದಲ್ಲಿ 4,635 ಜನಾಂಗೀಯ ಪಂಗಡಗಳು,325 ಭಾಷೆಗಳು, 25 ಲಿಪಿಗಳು, ಆರಕ್ಕಿಂತ ಹೆಚ್ಚು ಪ್ರಧಾನ ಧರ್ಮಗಳು, 500ಕ್ಕಿಂತ ಹೆಚ್ಚು ಸಂಸ್ಥಾನಗಳು, ನೂರಾರು ಜಾತಿ, ಉಪಜಾತಿಗಳು,ತಮ್ಮದೇ ಆಹಾರ ಪದ್ಧತಿ ಹೊಂದಿದ ವಿಭಿನ್ನ ಸಂಸ್ಕೃತಿಗಳ ಜನ ಸಮುದಾಯಗಳು ಇವೆಲ್ಲವನ್ನು ಒಟ್ಟು ಗೂಡಿಸಿ ಭಾರತ ಎಂಬ ಪರಿಕಲ್ಪನೆಯಲ್ಲಿ ಇದ್ದವು ಒಂದು ದೇಶವನ್ನಾಗಿ ಮಾಡಿದ್ದು ಬಾಬಾಸಾಹೇಬರು ರೂಪಿಸಿದ ನಮ್ಮ ಸಂವಿಧಾನ. ಈ ದೇಶ ಮುನ್ನಡೆಯಲು ಒಂದು ಸಂವಿಧಾನ ಬೇಕಿತ್ತು. ಅದನ್ನು ಅಂಬೇಡ್ಕರ್ ನೀಡಿದರು.
ಬಾಬಾಸಾಹೇಬರ ಈ ಸಂವಿಧಾನ ಜಾತಿ, ಮತ,ಭಾಷೆ, ಧರ್ಮ ದ ಆಧಾರದಲ್ಲಿ ನಡೆಯುತ್ತ ಬಂದ ತಾರತಮ್ಯವನ್ನು ನಿವಾರಿಸುವ ದಿಕ್ಕಿನಲ್ಲಿ ಮಹತ್ವದ ದಿಕ್ಕನ್ನು ಈ ದೇಶಕ್ಕೆ ತೋರಿಸಿತು. ನಮ್ಮ ಸಂವಿಧಾನ ಜಗತ್ತಿನಲ್ಲೇ ಅತಿ ದೊಡ್ಡದಾದ ಲಿಖಿತ ಸಂವಿಧಾನ. ಇಂಥ ಸಂವಿಧಾನವನ್ನು ಬದಲಿಸಿ, ಬ್ರಿಟಿಷರು ಬರುವುದಕಿಂತ ಮುಂಚೆ ಇದ್ದ ಮನುಸ್ಮತಿಯನ್ನೇ ದೇಶದ ಸಂವಿಧಾನವನ್ನಾಗಿ ಮಾಡುವ ಹುನ್ನಾರ ಮುಂಚಿನಿಂದಲೂ ನಡೆದಿದೆ. ಇತ್ತೀಚೆಗೆ ಅದುತೀವ್ರ ಸ್ವರೂಪ ತಾಳಿದೆ. ಇದು ಈಗ ನಡೆದ ಮಸಲತ್ತಲ್ಲ ಇದಕ್ಕೆ ದಶಕಗಳ ಇತಿಹಾಸವಿದೆ. ಬಾಬಾಸಾಹೇಬರ ನೇತೃತ್ವದ ಸಂವಿಧಾನ ಕರಡು ರಚನಾ ಸಮಿತಿ ಸಂವಿಧಾನಕ್ಕೆ ಅಂತಿಮ ಸ್ವರೂಪ ನೀಡಿದಾಗ ಶತಮಾನಗಳಿಂದ ಇನ್ನೊಬ್ಬರ ದುಡಿಮೆಯಲ್ಲಿ ಮಜಾ ಮಾಡುತ್ತಿದ್ದ ಶೋಷಕ ವರ್ಗಗಳು ಅದನ್ನು ಸಹಿಸಲಿಲ್ಲ.
ಈ ಸಂವಿಧಾನ ಭಾರತದ ಆಚಾರ ವಿಚಾರಗಳನ್ನು ಪ್ರತಿನಿಧಿಸುವುದಿಲ್ಲ ಎಂದು ಆರೆಸ್ಸೆಸ್ನ ಅಂದಿನ ಸರ ಸಂಘ ಚಾಲಕ ಮಾಧವ ಸದಾಶಿವಗೋಳ್ವಾಲ್ಕರ್ ಟೀಕಿಸಿದ್ದರು. ಆದರೆ ಆಗ ಇಡೀ ದೇಶವೇ ಒಂದಾಗಿ ಸಂವಿಧಾನವನ್ನು ಬೆಂಬಲಿಸಿದ್ದರಿಂದ ಇವರ ಆಟ ನಡೆಯಲಿಲ್ಲ.
ಹಿಂದೆ ಐವತ್ತರ ದಶಕದಲ್ಲಿ ಸಂವಿಧಾನವನ್ನು ವಿರೋಧಿಸಿದ್ದ ಶಕ್ತಿಗಳು ಮತ್ತೆ ಬಾಲ ಬಿಚ್ಚಿದ್ದು ತೊಂಭತ್ತರ ದಶಕದಲ್ಲಿ.ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಚಳವಳಿ ಹೆಸರಿನ ಪುಂಡಾಟಿಕೆಯ ಆಸುಪಾಸಿನಲ್ಲಿ ದೊರೆತ ಪ್ರತಿಕ್ರಿಯೆಯಿಂದ ಉತ್ತೇಜಿತರಾದ ಮನುವಾದಿ,ಕೋಮುವಾದಿ ಶಕ್ತಿಗಳು ಹಿಂದೂ ಮೇಲ್ಜಾತಿಯ ಧರ್ಮ ಗುರುಗಳ ಸಭೆಯೊಂದನ್ನು ಕರೆದು ಭಾರತದ ಜನತೆ ಚುನಾಯಿಸಿದ ಸಂಸತ್ತಿಗೆ ಪ್ರತಿಯಾಗಿ ಧರ್ಮ ಸಂಸತ್ ನ್ನು ರಚಿಸಿದರು.ಈ ಧರ್ಮ ಸಂಸತ್ ಉದ್ದೇಶ ಈಗಿರುವ ಸಂವಿಧಾನವನ್ನು ಬದಲಿಸಿ ಮನುವಾದಿ ಸಂವಿಧಾನವನ್ನು ದೇಶದ ಮೇಲೆ ಹೇರುವುದಾಗಿದೆ.
ವಾಸ್ತವವಾಗಿ ಸಂವಿಧಾನ ಜಾರಿಗೆ ಬಂದ ನಂತರ ಭಾರತ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ. ಸಂವಿಧಾನ ಬರುವುದಕ್ಕಿಂತ ಮುಂಚೆ ಭಾರತ ಒಂದಾಗಿರಲಿಲ್ಲ. ಈ ದೇಶದಲ್ಲಿ ಊರೂರಿಗೆ ರಾಜ, ಮಹಾರಾಜರಿದ್ದರು.
ಉದಾಹರಣೆಗೆ ಜಮಖಂಡಿಯಲ್ಲಿ ಪಟವರ್ಧನ ಎಂಬ ಪೇಶ್ವೆಗಳ ಶಿಷ್ಯ ರಾಜನಾಗಿದ್ದ. ಅಲ್ಲಿಂದ ನಲವತ್ತು ಕಿ.ಮೀ. ಅಂತರದ ಮುಧೋಳದಲ್ಲಿ ಇನ್ನೊಬ್ಬ ರಾಜನಿದ್ದ, ಅಲ್ಲಿಂದ ಐವತ್ತು ಕಿ.ಮೀ. ಅಂತರದಲ್ಲಿರುವ ರಾಮದುರ್ಗದಲ್ಲಿ ಮತ್ತೊಬ್ಬ ರಾಜನಿದ್ದ. ಗುಪ್ತರ ಭಾರತ, ಮೌರ್ಯರ ಭಾರತ, ಹರ್ಷವರ್ಧನರ ಭಾರತ ಎಂದೆಲ್ಲ ಹರಿದು ಹಂಚಿ ಹೋಗಿತ್ತು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಈ ಭೂಪ್ರದೇಶ ಒಂದೇ ಆಡಳಿತಕ್ಕೊಳಪಟ್ಟಿರಲಿಲ್ಲ. ಸಂವಿಧಾನ ಈ ದೇಶವನ್ನು ಒಂದುಗೂಡಿಸಿತು.
ಇಂಥ ಸಂವಿಧಾನದ ವಿರುದ್ಧ ನಡೆದಿರುವ ಸಂಚು ಆಘಾತಕಾರಿಯಾಗಿದೆ. ಈ ಸಂಚಿನ ಭಾಗವಾಗಿಯೇ ಹೊಸ ಪೀಳಿಗೆಯ ಯುವಕರ ಮೆದುಳಲ್ಲಿ ವಿಷ ತುಂಬಲಾಗುತ್ತದೆ. ಇಂಥ ವಿಷ ತುಂಬಿಕೊಂಡವರು ಅರವತ್ತು ವರ್ಷಗಳಲ್ಲಿ ಈ ದೇಶದಲ್ಲಿ ಏನೂ ಆಗಿಲ್ಲ, ಮೋದಿ ಬಂದ ನಂತರವೇ ಎಲ್ಲ ಆಗಿದೆ ಎಂದು ಹೇಳುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ನಮ್ಮ ರಾಜಕೀಯ ಪ್ರಜಾಪ್ರಭುತ್ವಕ್ಕೆ ಗಂಡಾಂತರ ಬರುತ್ತದೆ. ಆದಷ್ಟು ಬೇಗ ಈ ವೈರುಧ್ಯಗಳನ್ನು ನಿರ್ಮೂಲ ಮಾಡಬೇಕೆಂದು ಅಂಬೇಡ್ಕರ್ ಪ್ರತಿಪಾದಿಸಿದ್ದರು.
ಬಾಬಾಸಾಹೇಬರು 1950 ರ ಜನವರಿ 26ರಂದು ನಾವು ಹೊಸ ಬದುಕಿಗೆ ಪ್ರವೇಶಿಸಿದ್ದೇವೆ. ರಾಜಕೀಯದಲ್ಲಿ ಸಮಾನತೆ ಪಡೆದಿರುತ್ತೇವೆ. ಆದರೆ ಸಾಮಾಜಿಕ ಮತ್ತ್ತು ಆರ್ಥಿಕ ಕ್ಷೇತ್ರದಲ್ಲಿ ಅಸಮಾನತೆ ಮುಂದುವರಿದಿರುತ್ತದೆ. ರಾಜಕೀಯದಲ್ಲಿ ಒಬ್ಬರಿಗೆ ಒಂದು ಓಟು ಮತ್ತು ಒಂದು ಓಟಿಗೆ ಒಂದು ಮೌಲ್ಯವನ್ನು ಪರಿಗಣಿಸಿರುತ್ತೇವೆ. ಆದರೆ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಮನುಷ್ಯನಿಗೆ ಒಂದು ಮೌಲ್ಯ ಎಂಬ ತತ್ವವನ್ನು ನಿರಾಕರಿಸಲಾಗುತ್ತಿದೆ. ಈ ವೈರುಧ್ಯಗಳಿಂದ ಕೂಡಿದ ಸಮಾಜವನ್ನು ಎಷ್ಟು ಕಾಲ ಮುಂದುವರಿಸಲು ಸಾಧ್ಯ ಎಂದು ಪ್ರಶ್ನಿಸಿದ್ದರು.
ಸರ್ವರಿಗೂ ಸಮಾನಾವಕಾಶ ನೀಡಿದ ಭಾರತದ ಸಂವಿಧಾನ ಈಗ ಬಿಕ್ಕಟ್ಟಿನಲ್ಲಿದೆ.ಅಧಿಕಾರ ಕೇಂದ್ರದ ಅಂಗಳದಿಂದಲೇ ಸಂವಿಧಾನ ಬದಲಾವಣೆಯ ಅಪಸ್ವರಗಳುಕೇಳಿ ಬರುತ್ತಿವೆ. ಈ ಸಂವಿಧಾನ ಹೋದರೆ ಸಕಲರಿಗೂ ಸಮಾನಾವಕಾಶದ ತತ್ವ ಮಾಯವಾಗುತ್ತದೆ. ಮೀಸಲಾತಿ ರದ್ದಾಗುತ್ತದೆ. ಮಹಿಳೆಯರಿಗೆ ಈಗಿರುವ ಸ್ವಾತಂತ್ರ್ಯ ಅಪಹರಣವಾಗುತ್ತದೆ. ಜನರು ಚುನಾಯಿಸುವ ಸಂಸತ್ತಿನ ಬದಲಾಗಿ ಮಠಾಧೀಶರು ಮತ್ತು ಕೋಮುವಾದಿಗಳು ಚುನಾಯಿಸುವ ಧರ್ಮ ಸಂಸತ್ ಅಸ್ತಿತ್ವಕ್ಕೆ ಬರುತ್ತದೆ.
ಬಿಜೆಪಿ ಪರೋಕ್ಷವಾಗಿ ಹೇಳುವ ಸಂಘ ಪರಿವಾರದ ಹಿಂದೂರಾಷ್ಟ್ರ ನಿರ್ಮಾಣದ ಘೋಷಣೆಯೇ ಸಂವಿಧಾನ ವಿರೋಧಿಯಾಗಿದೆ. ಭಾರತವು ಎಲ್ಲ ಧರ್ಮಗಳಿಗೆ ಸೇರಿದ ದೇಶ ಎಂದು ಸಂವಿಧಾನ ಸಾರಿದೆ.ಭಾರತ ಸಾರ್ವಭೌಮ ಸಮಾಜವಾದಿ ಧರ್ಮನಿರಪೇಕ್ಷ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಮುಂದುವರಿದರೆ ಮಾತ್ರ ಈ ದೇಶ ಸುರಕ್ಷಿತವಾಗಿರುತ್ತದೆ. ಇದು ಸರ್ವ ಜನಾಂಗದ ಶಾಂತಿಯ ತೋಟ.ಒಂದು ಧರ್ಮ, ಒಂದು ಭಾಷೆ, ಒಂದು ಸಂಸ್ಕೃತಿ ಎಂದು ಬಲವಂತವಾಗಿ ಹೇರಲು ಹೊರಟರೆ ಈ ದೇಶ ಛಿದ್ರ ಛಿದ್ರವಾಗುತ್ತದೆ. ಅದನ್ನು ತಪ್ಪಿಸಬೇಕೆಂದರೆ ಸಂವಿಧಾನ ವಿರೋಧಿ ಫ್ಯಾಶಿಸ್ಟ್ ಶಕ್ತಿಗಳನ್ನು ಅಧಿಕಾರದಿಂದ ಹೊರದಬ್ಬಬೇಕಾಗಿದೆ.
ಈ ದೇಶದಲ್ಲಿ ನೆಲೆಸಿದವರು ಯಾವುದೇ ಧರ್ಮದವರಿರಲಿ, ಯಾವುದೇ ಜನಾಂಗದವರಿರಲಿ, ಯಾವುದೇ ಭಾಷೆಯನ್ನಾಡಲಿ ಮೊದಲು ಅವರು ಈ ದೇಶದ ಸಂವಿಧಾನಕ್ಕೆ ತಲೆ ಬಾಗಬೇಕು.
ಸಂವಿಧಾನದಡಿ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಸಂವಿಧಾನಕ್ಕೆ ನಿಷ್ಠೆ ಹೊಂದಿರುವುದಾಗಿ ಪ್ರಮಾಣ ವಚನ ಸ್ವೀಕರಿಸಿದವರೇ ಇಂದು ಸಂವಿಧಾನದ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ. ಹಿಂದೂರಾಷ್ಟ್ರದ ಘೋಷಣೆ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರು ಹಾಗೂ ದಲಿತರ ವಿರುದ್ದ ಹಿಂಸೆಗೆ ಪ್ರಚೋದಿಸುತ್ತಿದ್ದಾರೆ. ದಲಿತರ ಧ್ವನಿಯನ್ನು ಅಡಗಿಸಲು ಬ್ರಿಟಿಷ್ ಕಾಲದ ರಾಜದ್ರೋಹದ ಕಾನೂನನ್ನು ಬಳಸಿಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರದ ಭೀಮಾ ಕೋರೆಗಾಂವ್ನಲ್ಲಿ ದಲಿತರ ಮೇಲೆ ಹಿಂಸಾಚಾರ ಮಾಡಿದವರಿಗೆ ರಕ್ಷಣೆ ನೀಡಿ ದಲಿತ ನಾಯಕರನ್ನು, ಚಿಂತಕರನ್ನು ಬಂಧಿಸಿ ರಾಜದ್ರೋಹದ ಆರೋಪ ಹೊರಿಸಿದ್ದಾರೆ.ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಿದ್ದಾರೆ.ಇವರು ಬಹಳ ಕಾಲ ಅಧಿಕಾರದಲ್ಲಿ ಮುಂದುವರಿದರೆ ಸಂವಿಧಾನ ಮಾತ್ರವಲ್ಲ ಪ್ರಜಾಪ್ರಭುತ್ವವೇ ನಾಶವಾಗುತ್ತದೆ.ಸಂವಿಧಾನ ಉಳಿದರೆ ದೇಶ ಉಳಿಯುತ್ತದೆ. ಬಾಬಾಸಾಹೇಬರ ಸಂವಿಧಾನ ಬೇಕೋ ಅಥವಾ ಜಾತಿ ಶ್ರೇಣೀಕರಣದ ಮನುಸ್ಮತಿ ಬೇಕೋ, ರಾಜ್ಯಾಂಗ ಬೇಕೋ ಅಥವಾ ಪಂಚಾಂಗ ಬೇಕೋ ಎಂಬುದನ್ನು ನಾವು ದೇಶದ ಪ್ರಜೆಗಳು ತೀರ್ಮಾನಿಸಬೇಕಾಗಿದೆ.