ಐವತ್ತರ ಹೊಸ್ತಿಲಲ್ಲಿ ಸಮುದಾಯ

ನಾಡಿನ ಹೆಮ್ಮೆಯ ಜನಪರ ಕಾಳಜಿಯ ಸಾಂಸ್ಕೃತಿಕ ಸಂಘಟನೆ ಎಂದು ಹೆಸರಾದ ‘ಸಮುದಾಯ’ಕ್ಕೆ ಈಗ ಐವತ್ತು. ನಂಬಲು ಆಗುತ್ತಿಲ್ಲ. ಎಪ್ಪತ್ತರ ದಶಕದಲ್ಲಿ ನಡೆಸಿದ ಜಾಥಾ, ಬೀದಿ ನಾಟಕಗಳು, ಹೊಸ ರಂಗ ಪ್ರಯೋಗಗಳು ಇವೆಲ್ಲ ನಿನ್ನೆ, ಮೊನ್ನೆ ನಡೆದಂತಿವೆ. ಆದರೆ, ಹೆಜ್ಜೆ ಮೇಲೆ ಹೆಜ್ಜೆಯನ್ನಿಡುತ್ತ ‘ಸಮುದಾಯ’ ಈಗ ಐವತ್ತರ ಹೊಸ್ತಿಲಿಗೆ ಬಂದು ನಿಂತಿದೆ. ಈ ಸಂಭ್ರಮವನ್ನು ನವೀನ ಪ್ರಯೋಗಗಳ ಮೂಲಕ ಆಚರಿಸಲು ಸಿದ್ಧತೆ ನಡೆದಿದೆ. ಈ ಸಂತಸದ ಕ್ಷಣದಲ್ಲಿ ಹೊಸ ಸವಾಲುಗಳನ್ನು ಸ್ವೀಕರಿಸಿ ಮುಂದೆ ಸಾಗಲು ಅದು ಮುಂದಾಗಿದೆ.
ಅದು ಎಪ್ಪತ್ತರ ದಶಕ. ಕರ್ನಾಟಕ ಎಂಬ ಈ ಹೆಮ್ಮೆಯ ನಾಡು ಮರೆಯಲಾಗದ ದಶಕ ಅದು. ಹಲವಾರು ಹೊಸ ಚಳವಳಿಗಳು, ಹೋರಾಟಗಳು, ಸಾಹಿತ್ಯಿಕ ಚಟುವಟಿಕೆಗಳು, ರಾಜಕೀಯ ವಿದ್ಯಮಾನಗಳಿಗೆ ಸಾಕ್ಷಿಯಾದ ದಶಕ. ಹವ್ಯಾಸಿ ರಂಗಭೂಮಿಯಲ್ಲಿ ಹೊಸ ನೀರು ಬಂದದ್ದು ಆವಾಗ ಎಂದು ಹೇಳಿದರೆ ಅತಿಶಯೋಕ್ತಿ ಆಗಲಿಕ್ಕಿಲ್ಲ. ಬೆಂಗಳೂರಿನ ರಂಗಭೂಮಿ ಆಗ ಹೊಸ ದಿಕ್ಕಿನತ್ತ ಹೊರಳಿ ನಿಂತಿತು. ಹೊಸ ತಂಡಗಳು ಕಾಣಿಸಿಕೊಂಡವು. ನಾಡಿನ ಹೆಮ್ಮೆಯ ‘ಸಮುದಾಯ’ ಕೂಡ ಕಣ್ಣು ತೆರೆಯಿತು.
ದಿಲ್ಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ (ಎನ್‌ಎಸ್‌ಡಿ) ವ್ಯಾಸಂಗ ಮಾಡುತ್ತಿದ್ದ ಸಾಗರದ ಪ್ರಸನ್ನ ರಜೆಯಲ್ಲಿ ಬೆಂಗಳೂರಿಗೆ ಬಂದಾಗಲೆಲ್ಲ ಜನಪರ ಕಾಳಜಿಯ ರಂಗ ತಂಡವೊಂದನ್ನು ಕಟ್ಟುವ ಅವಶ್ಯಕತೆಯ ಬಗ್ಗೆ ಸಮಾನ ಮನಸ್ಕ ಮಿತ್ರರೊಂದಿಗೆ ಆಗಾಗ ಸಮಾಲೋಚನೆ ನಡೆಸುತ್ತಿದ್ದರು. ಅವರ ಪ್ರಯತ್ನಕ್ಕೆ ಮರುಳಸಿದ್ಧಪ್ಪ, ಕಿ.ರಂ.ನಾಗರಾಜ, ಡಿ.ಆರ್.ನಾಗರಾಜ ಮೊದಲಾದವರು ಸ್ಪಂದಿಸಿದರು. ಹೊಸ ರಂಗ ತಂಡಕ್ಕೆ ‘ಸಮುದಾಯ’ ಎಂದು ಹೆಸರಿಟ್ಟವರು ಕಿ.ರಂ.ನಾಗರಾಜ.
ಅದೇ ಕಾಲಘಟ್ಟದಲ್ಲಿ ಬೆಂಗಳೂರಿನಲ್ಲಿ ‘ನಟರಂಗ’, ‘ರಂಗ ಸಂಪದ’, ‘ಬೆನಕ’, ‘ಕಲಾ ಗಂಗೋತ್ರಿ’ ಮೊದಲಾದ ರಂಗ ತಂಡಗಳು ಚಟುವಟಿಕೆ ಆರಂಭಿಸಿದ್ದವು. ‘ಸಮುದಾಯ’ ಉಳಿದವುಗಳಿಗಿಂತ ಭಿನ್ನ ಸಾಂಸ್ಕೃತಿಕ ಸಂಘಟನೆ, ಸಾಮಾಜಿಕ ಕಾಳಜಿ, ಸಮಾನತೆಯ ಆಶಯಗಳು ಸಮುದಾಯದ ವಿಶೇಷ.
‘ಕಲೆ ಕಲೆಗಾಗಿ ಅಲ್ಲ, ಕಲೆ ಮನರಂಜನೆಗಾಗಿ ಅಲ್ಲ’ ಎಂಬ ಬ್ರೆಕ್ಟ್‌ನ ಘೋಷ ವಾಕ್ಯದಿಂದ ಸ್ಫೂರ್ತಿ ಪಡೆದ ಬೆಂಗಳೂರಿನ ಸಮಾನ ಮನಸ್ಕ ಸಂಗಾತಿಗಳು ಹೊಸ ರಂಗ ತಂಡ ರೂಪಿಸಲು ಮುಂದಾದರು. ವಿಶೇಷವಾಗಿ ಮರುಳಸಿದ್ಧಪ್ಪ, ಕೆ.ವಿ.ನಾರಾಯಣ, ಸಿ.ವೀರಣ್ಣ, ವಿಜಯಮ್ಮ, ನಿಸಾರ್ ಅಹಮದ್, ಕ.ವೆಂ.ರಾಜಗೋಪಾಲ, ಲಕ್ಷ್ಮೀ ಚಂದ್ರಶೇಖರ ಈ ನಿಟ್ಟಿನಲ್ಲಿ ಆಸಕ್ತಿ ವಹಿಸಿದರು. ಇವರೆಲ್ಲರ ಆಶಯಕ್ಕೆ ಪೂರಕವಾಗಿ ಎನ್‌ಎಸ್‌ಡಿಯಿಂದ ಬಂದಿದ್ದ ಪ್ರಸನ್ನ ಅವರು ರಂಗ ಸಂಪದಕ್ಕಾಗಿ ‘ಕದಡಿದ ನೀರು’ ಹಾಗೂ ಕೆಲ ಮಿತ್ರರ ಜೊತೆಗೆ ಸೇರಿ ‘ಬಯಲು ಸೀಮೆ ಸರ್ದಾರ’ ನಾಟಕಗಳನ್ನು ರಂಗಕ್ಕೆ ತಂದಿದ್ದರು. ಆಗಲೇ ಎಡಪಂಥೀಯ ಯುವ ನಿರ್ದೇಶಕ ಎಂದು ಹೆಸರಾಗಿದ್ದ ಪ್ರಸನ್ನ ಉಳಿದ ಸಮಾನ ಮನಸ್ಕ ಮಿತ್ರರ ಜೊತೆಗೆ ಸೇರಿ ಸಮುದಾಯಕ್ಕೆ ಚಾಲನೆ ನೀಡಿದರು.
ಮೊದಲಿಗೆ ಬೆಂಗಳೂರಿನಲ್ಲಿ ಆರಂಭವಾದ ‘ಸಮುದಾಯ’ ನಂತರ ಮೈಸೂರು, ಮಂಗಳೂರು, ಧಾರವಾಡ, ಕಲಬುರಗಿ, ರಾಯಚೂರು, ಬೀದರ್, ಕುಂದಾಪುರ, ಕೆಜಿಎಫ್ ಮೊದಲಾದ ಕಡೆ ವಿಸ್ತಾರಗೊಂಡು ರಾಜ್ಯವ್ಯಾಪಿ ಚಟುವಟಿಕೆಗಳನ್ನು ಆರಂಭಿಸಿತು. ಮ್ಯಾಕ್ಸಿಂ ಗಾರ್ಕಿ ಅವರ ‘ತಾಯಿ’ ನಾಟಕವನ್ನು ಸಿ.ವೀರಣ್ಣ ಕನ್ನಡಕ್ಕೆ ತಂದರು. ಮೈಸೂರಿನ ಸಮುದಾಯ ಅದನ್ನು ರಂಗಕ್ಕೆ ತಂದಿತು. ಸಮುದಾಯದ ಇನ್ನೊಂದು ನಾಟಕ ‘ಮಾರೀಚನ ಬಂಧುಗಳು’ ಯಶಸ್ವಿಯಾಗಿ ಹಲವಾರು ಪ್ರಯೋಗಗಳನ್ನು ಕಂಡಿತು.
ಸಮುದಾಯದ ವಿಶೇಷವೆಂದರೆ ಅದು ತನ್ನದೇ ಆದ ಹೊಸ ಪ್ರೇಕ್ಷಕ ಸಮೂಹವನ್ನೇ ಸೃಷ್ಟಿಸಿತು. ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು, ಕೂಲಿ ಕಾರ್ಮಿಕರು, ಪ್ರಗತಿಪರ ವಿದ್ಯಾರ್ಥಿಗಳು ಹೀಗೆ ಹಲವಾರು ಜನ ಸಮುದಾಯದ ನಾಟಕ ನೋಡಲು ಬರತೊಡಗಿದರು.
ನಂತರ ರಂಗಭೂಮಿಯಲ್ಲಿ ಮಾತ್ರವಲ್ಲ ಒಟ್ಟಾರೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೆಸರು ಮಾಡಿದ ಸಿಜಿಕೆ, ಬಸವಲಿಂಗಯ್ಯ, ಜನಾರ್ದನ (ಜನ್ನಿ) ತಮ್ಮ ಕಾರ್ಯ ಕ್ಷೇತ್ರವನ್ನು ಸಮುದಾಯದ ಆಚೆಗೂ ವಿಸ್ತರಿಸಿದರೂ ಬದ್ಧತೆಯನ್ನು ಬಿಟ್ಟುಕೊಡಲಿಲ್ಲ. ಸಮುದಾಯದ ಆರಂಭದ ದಿನಗಳಲ್ಲಿ ವೈಚಾರಿಕ ಮಾರ್ಗದರ್ಶನವನ್ನು ನೀಡಿದ ಇನ್ನೊಬ್ಬರನ್ನು ಮರೆಯಲಾಗುವುದಿಲ್ಲ. ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮುಗಿಸಿ ಬಂದಿದ್ದ ಕಮ್ಯುನಿಸ್ಟ್ (ಮಾರ್ಕ್ಸವಾದಿ) ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿದ್ದ ಎಂ.ಕೆ.ಭಟ್ ಅವರು ಸಮುದಾಯಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದರು.
ನನಗೆ 1976-77ರಿಂದಲೂ ಸಮುದಾಯದ ಒಡನಾಟ. ಆಗ ನಾನು ಹುಬ್ಬಳ್ಳಿಯಲ್ಲಿ ನೆಲೆಸಿದ್ದೆ. ಮೊದಲು ಬೆಂಗಳೂರಿಗೆ ಸೀಮಿತವಾಗಿದ್ದ ಸಮುದಾಯ ನಂತರದ ದಿನಗಳಲ್ಲಿ ರಾಜ್ಯವ್ಯಾಪಿ ಬಳ್ಳಿಯಂತೆ ಹಬ್ಬತೊಡಗಿತು. ಅದು ತುರ್ತು ಪರಿಸ್ಥಿತಿಯ ಹಾಗೂ ನಂತರದ ಕಾಲ ಘಟ್ಟ. ಇಂದಿರಾ ಗಾಂಧಿಯವರು ಚಿಕ್ಕಮಗಳೂರಿನಿಂದ ಲೋಕಸಭೆ ಉಪಚುನಾವಣೆಗೆ ಸ್ಪರ್ಧಿಸಿದಾಗ ಅವರ ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಿ ಸಮುದಾಯ ಬೀದಿ ನಾಟಕಗಳನ್ನು ಮಾಡಿ ಜನಜಾಗೃತಿ ಉಂಟು ಮಾಡಿತು. ನಂತರದ ದಿನಗಳಲ್ಲಿ ರಾಜ್ಯಮಟ್ಟದಲ್ಲಿ ಸಾಂಸ್ಕೃತಿಕ ಜಾಥಾ ಕಾರ್ಯಕ್ರಮ ವನ್ನು ರೂಪಿಸಲಾಯಿತು. ಬೀದರ್‌ನಲ್ಲಿ ಈ ಜಾಥಾಕ್ಕೆ ಎಂ.ಎಸ್.ಸತ್ಯು ಮತ್ತು ಬರಗೂರು ರಾಮಚಂದ್ರಪ್ಪನವರು ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಕೆಜಿಎಫ್‌ನಿಂದ ಅಚ್ಯುತ್ ಅವರ ನೇತೃತ್ವದಲ್ಲಿ ಇನ್ನೊಂದು ಜಾಥಾ ಹೊರಟಿತು.
ಈ ಜಾಥಾ ಯಾವುದೇ ಒಂದು ಪಕ್ಷದ ಪರವಾಗಿ ಇಲ್ಲವೇ ವಿರೋಧವಾಗಿ ಇರಲಿಲ್ಲ. ಆದರೆ, ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ತತ್ವ ಮತ್ತು ಮೌಲ್ಯಗಳನ್ನು ಜನಸಾಮಾನ್ಯರ ನಡುವೆ ಕೊಂಡೊಯ್ಯುವುದು ಇದರ ಗುರಿಯಾಗಿತ್ತು. ಈ ಜಾಥಾದಲ್ಲಿ ಜನರಿಗೆ ತಲುಪಿಸಲು ಆಧುನಿಕ ಭಾರತ ಎದುರಿಸುತ್ತಿರುವ ಮಹತ್ವದ ಸವಾಲುಗಳು ಮತ್ತು ಪರ್ಯಾಯ ಕುರಿತು ಪುಸ್ತಕಗಳನ್ನು ಪರಿಣಿತರಿಂದ ಬರೆಯಿಸಿ ಜನರಿಗೆ ತಲುಪಿಸಲಾಯಿತು. ನಾಡಿನ ಹಿರಿಯ ಚಿಂತಕ ಡಾ.ಜಿ.ರಾಮಕೃಷ್ಣ ಅವರು ಈ ಜಾಥಾದ ಸಲುವಾಗಿ ಕರಾಳ ಕೋಮುವಾದಿಗಳ ಅಪಾಯದ ಕುರಿತು ಎಚ್ಚರಿಸುವ ‘ಆರೆಸ್ಸೆಸ್ ಎಂಬ ವಿಷ ವೃಕ್ಷ’ ಪುಸ್ತಕವೊಂದನ್ನು ಬರೆದುಕೊಟ್ಟರು. ಈ ಜಾಥಾದಲ್ಲಿ ಊರೂರಿಗೆ ಹೋಗಿ ಈ ಪುಸ್ತಕವನ್ನು ಜನರಿಗೆ ತಲುಪಿಸಲಾಯಿತು.ಆಗ ಕೋಮುವಾದಿ ಶಕ್ತಿಗಳು ಕರ್ನಾಟಕದಲ್ಲಿ ನಿಧಾನವಾಗಿ ಬೇರು ಬಿಡುವ ಕಾಲಘಟ್ಟ. ಹೀಗಾಗಿ ಪುಸ್ತಕ ಮಾರಲು ಹೋದಾಗಲೆಲ್ಲ ಸಾಗರ ಮುಂತಾದ ಕಡೆ ಆರೆಸ್ಸೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರಿಂದ ತೀವ್ರ ಪ್ರತಿರೋಧ ಎದುರಿಸಬೇಕಾಯಿತು. ಪ್ರಸನ್ನ, ಪ್ರದೀಪ, ಗುಂಡಣ್ಣ ಮೊದಲಾದ ಗೆಳೆಯರು ಜಾಥಾದಲ್ಲಿ ಎದುರಾಗುವ ಪ್ರಶ್ನೆಗಳನ್ನು ಎದುರಿಸುತ್ತ ಮುಂದೆ ಸಾಗಿದರು. ಭಾರತದ ಪ್ರಜಾಪ್ರಭುತ್ವಕ್ಕೆ ಸರ್ವಾಧಿಕಾರ ಮಾತ್ರವಲ್ಲ, ಸಂಘ ಪರಿವಾರದ ಫ್ಯಾಶಿಸ್ಟ್ ಕೋಮುವಾದ ಕೂಡ ಅದಕ್ಕಿಂತ ಹೆಚ್ಚು ಅಪಾಯಕಾರಿ ಎಂಬುದು ಅರಿವಾಗತೊಡಗಿತು. ಜನರ ಮಧ್ಯ ಹೋದಾಗ ಮಾತ್ರ ವಾಸ್ತವ ಸ್ಥಿತಿ ಗೊತ್ತಾಗುತ್ತದೆ ಎಂದು ಹಿರಿಯ ಕಮ್ಯುನಿಸ್ಟ್ ನಾಯಕರೊಬ್ಬರು ನನಗೆ ಹೇಳಿದ ಮಾತು ನಿಜವಾಯಿತು.
1977-78ರ ನಂತರ ಅದರಲ್ಲೂ ವಿಶೇಷವಾಗಿ ಎಂಭತ್ತರ ದಶಕದ ಕೊನೆಯಲ್ಲಿ ಜಾಗತಿಕ ಪರಿಸ್ಥಿತಿ ಬದಲಾಗತೊಡಗಿತು. ಸೋವಿಯತ್ ರಶ್ಯದ ಸಮಾಜವಾದಿ ವ್ಯವಸ್ಥೆ ಕುಸಿದು ಬಿತ್ತು. ಪೂರ್ವ ಯುರೋಪಿನ ಕಮ್ಯುನಿಸ್ಟ್ ಸರಕಾರಗಳು ಒಂದೊಂದಾಗಿ ಪತನಗೊಂಡವು. ಅದೇ ಕಾಲಘಟ್ಟದಲ್ಲಿ ಭಾರತದಲ್ಲೂ ಸಾಕಷ್ಟು ಬದಲಾವಣೆಗಳಾದವು. ಜಾಗತೀಕರಣದ ಮಾರುಕಟ್ಟೆ ಆರ್ಥಿಕತೆ ಸ್ವತಂತ್ರ ಭಾರತವನ್ನು ಪ್ರವೇಶಿಸಿತು. ಅದಕ್ಕೆ ಪೂರಕವಾಗಿ ಕೋಮುವಾದದ ವಿಷ ಗಾಳಿ ಭಾರತದಲ್ಲಿ ಬೀಸತೊಡಗಿತು. 1992ರಲ್ಲಿ ಅಯೋಧ್ಯೆಯ ಬಾಬರಿ ಮಸೀದಿಯನ್ನು ಕೋಮುವಾದಿ ಗೂಂಡಾಗಳು ನೆಲಸಮಗೊಳಿಸಿದರು. ಆ ನಂತರದ ದಿನಗಳಿಂದ ಹಿಡಿದು ಇಲ್ಲಿವರೆಗೆ ಎಲ್ಲ ಜನಪರ, ಜೀವ ಪರ ಮನಸ್ಸುಗಳಿಗೆ, ಶಕ್ತಿಗಳಿಗೆ ವಿಶೇಷವಾಗಿ ಸಾಂಸ್ಕೃತಿಕ ಸಂಘಟನೆಗಳಿಗೆ ಕೋಮುವಾದವೇ ಪ್ರಧಾನ ಶತ್ರುವಾಗಿದೆ.
ರಾಷ್ಟ್ರ ಮಟ್ಟದಲ್ಲಿ ಇಪ್ಟಾ ಹಾಗೂ ಸಹಮತದಂಥ ಸಾಂಸ್ಕೃತಿಕ ಸಂಘಟನೆಗಳು ಹಾಗೂ ಕರ್ನಾಟಕದಲ್ಲಿ ಸಮುದಾಯದಂಥ ಸಾಂಸ್ಕೃತಿಕ ಸಂಘಟನೆಗಳು ಸಾಮಾಜಿಕವಾಗಿ ವ್ಯಾಪಿಸತೊಡಗಿದ ಕೋಮುವಾದ ಮತ್ತು ಜಾತಿ ವಾದದ ವ್ಯಾಧಿಗಳನ್ನು ತೊಲಗಿಸಲು ನಿರಂತರ ಸೆಣಸಾಟ ನಡೆಸಿವೆ.
ಫ್ಯಾಶಿಸ್ಟ್ ಕೋಮುವಾದಿ ಶಕ್ತಿಗಳ ವಿರುದ್ಧವಾಗಿ ಸೌಹಾರ್ದಕ್ಕಾಗಿ ಶಾಂತಿಯುತ ಜನಜಾಗೃತಿ ಚಟುವಟಿಕೆಗಳನ್ನು ಮಾಡುವುದು ಅಷ್ಟು ಸುಲಭವಲ್ಲ. ಅದಕ್ಕಾಗಿ ದೈಹಿಕ ದಾಳಿಯನ್ನೂ ಎದುರಿಸಬೇಕಾಗುತ್ತದೆ.
2001ರಲ್ಲಿ ಸಮುದಾಯ ಸಂಘಟನೆ ಭಾವೈಕ್ಯತೆಗಾಗಿ ರಾಜ್ಯಮಟ್ಟದ ಜಾಥಾ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿತ್ತು. ಈ ಜಾಥಾ ಬೆಂಗಳೂರು ಸಮೀಪದ ಆನೇಕಲ್‌ನಲ್ಲಿ ಬೀದಿ ನಾಟಕವನ್ನು ಮಾಡುವಾಗ ಸಮುದಾಯದ ಹಿರಿಯ ರಂಗ ಕರ್ಮಿ ಸಿ.ಕೆ.ಗುಂಡಣ್ಣ ಅವರ ಮೇಲೆ ಕೋಮುವಾದಿ ಗೂಂಡಾಗಳು ದೈಹಿಕ ದಾಳಿ ನಡೆಸಿದರು. ಗುಂಡಣ್ಣನವರ ತಲೆ ಒಡೆಯಿತು. ಆದರೂ ಅವರು ಹೆದರಲಿಲ್ಲ. ಈ ಗೂಂಡಾ ದಾಳಿಯ ವಿರುದ್ಧ ರಾಜ್ಯವ್ಯಾಪಿ ಪ್ರತಿಭಟನೆ ನಡೆಯಿತು.
ಗುಂಡಣ್ಣನವರ ಮೇಲಿನ ಈ ಹಲ್ಲೆಯನ್ನು ಪ್ರತಿಭಟಿಸಿ ಮಾರನೇ ದಿನ ಬೃಹತ್ ಪ್ರತಿಭಟನೆ ನಡೆಯಿತು. ಆ ಪ್ರತಿಭಟನೆಯಲ್ಲಿ ನಾನೂ ಭಾಗವಹಿಸಿದ್ದೆ. ಆಗ ನಾಟಕ ಅಕಾಡಮಿ ಅಧ್ಯಕ್ಷರಾಗಿದ್ದ ಸಿಜಿಕೆ ಬೆಂಗಳೂರಿನಿಂದ ಒಂದು ಬಸ್ ತುಂಬ ರಂಗ ಕಲಾವಿದರು ಹಾಗೂ ಜನಪರ ಸಂಘಟನೆಗಳನ್ನು ಕರೆದುಕೊಂಡು ಆನೇಕಲ್‌ಗೆ ಬಂದಿದ್ದರು. ದೂರದ ತೀರ್ಥಹಳ್ಳಿಯಲ್ಲಿ ‘ಕಾನೂರು ಹೆಗ್ಗಡತಿ’ ಚಿತ್ರೀಕರಣದಲ್ಲಿ ತೊಡಗಿದ್ದ ಗಿರೀಶ್ ಕಾರ್ನಾಡರು ಚಿತ್ರೀಕರಣ ಸ್ಥಗಿತಗೊಳಿಸಿ ಆನೇಕಲ್‌ಗೆ ಬಂದಿದ್ದರು. ಹೀಗೆ ಸಮುದಾಯ ಬಹುತ್ವ ಭಾರತದ ಸೌಹಾರ್ದ ಮೌಲ್ಯಗಳಿಗಾಗಿ ನಿರಂತರವಾಗಿ ಸೆಣಸುತ್ತ ಬಂದಿದೆ.
ಇಂಥ ಸಮುದಾಯ ಸಾಂಸ್ಕೃತಿಕ ಸಂಘಟನೆ ಐವತ್ತರ ಸಂಭ್ರಮವನ್ನು ವರ್ಷವಿಡೀ ಆಚರಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. 24-08-2025ರಿಂದ 24-08-2026ರವರೆಗೆ ಈ ಕಾರ್ಯಕ್ರಮಗಳು ರಾಜ್ಯವ್ಯಾಪಿ ನಡೆಯಲಿವೆ. ಇದರ ಅಂಗವಾಗಿ ನಾಟಕಗಳು, ವಿಚಾರಗೋಷ್ಟಿಗಳು, ಕಲಾ ಶಿಬಿರಗಳು, ರಂಗ ಗೀತೆಗಳು ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.