ಮತಗಳವು ಮತ್ತು ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಪ್ರಶ್ನೆ

ಆಡಳಿತ ಪಕ್ಷಕ್ಕೆ ಅನುಕೂಲವಾಗುವಂತೆ ಚುನಾವಣೆ ವೇಳಾಪಟ್ಟಿ ಸಿದ್ಧಗೊಳಿಸುವಿಕೆ, ಮಾದರಿ ನೀತಿ ಸಂಹಿತೆ ಜಾರಿಯಲ್ಲಿ ಪಕ್ಷಪಾತ, ಆಡಳಿತ ಪಕ್ಷದ ವಿರುದ್ಧ ಕ್ರಮಕ್ಕೆ ಹಿಂಜರಿತ ಇತ್ಯಾದಿ ದೂರುಗಳು ಇದ್ದವು. ಈಗ ಇಲೆಕ್ಟ್ರಾನಿಕ್ ಮತದಾನದ ದತ್ತಾಂಶ ನಿರ್ವಹಣೆಯಲ್ಲಿ ಅಪಾರದರ್ಶಕತೆ, ದೂರು ಬಗೆಹರಿಸಲು ಹಿಂಜರಿಕೆ ಹಾಗೂ ದೂರು ನೀಡಿದವನನ್ನೇ ಅಪರಾಧಿ ಎನ್ನುವ ಪ್ರವೃತ್ತಿಯಿಂದ ಆಯೋಗ ಪಾತಾಳಕ್ಕೆ ಕುಸಿದಿದೆ.
ರಾಹುಲ್ ಗಾಂಧಿ ಆಗಸ್ಟ್ 7, 2025ರಂದು ಪತ್ರಿಕಾಗೋಷ್ಠಿಯಲ್ಲಿ ಲೋಕಸಭಾ ಕ್ಷೇತ್ರವೊಂದರಲ್ಲಿ ‘1,00,250 ಮತ ಕಳವು’ ಆರೋಪ ಹೊರಿಸಿದರು. ಆದರೆ, ಈ ಕುರಿತು ತನಿಖೆ ನಡೆಸದ ಚುನಾವಣಾ ಆಯೋಗವು ಮಹಿಳೆಯೊಬ್ಬರು ಎರಡು ಬಾರಿ ಮತ ಚಲಾಯಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಬೇಕೆಂದು ರಾಹುಲ್ ಅವರಿಗೆ ನೋಟಿಸ್ ನೀಡಿತು; ಸಂದೇಶವಾಹಕನ ಸಂದೇಶವನ್ನು ನಿರ್ಲಕ್ಷಿಸಲು ಮುಂದಾಯಿತು. ‘ಇಂಡಿಯಾ’ ಒಕ್ಕೂಟ ಮತಗಳವನ್ನು ಪ್ರತಿಭಟಿಸಿ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದೆ; ಇದೇ ಹೊತ್ತಿನಲ್ಲಿ ‘ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೇ ಮತಪಟ್ಟಿ ಸಿದ್ಧಪಡಿಸಲಾಗಿತ್ತು’ ಎಂದ ಸಚಿವ ಕೆ.ಎನ್. ರಾಜಣ್ಣ ಅವರ ತಲೆದಂಡ ಆಗಿದೆ.
ದೇಶದಲ್ಲಿ ಮೊದಲ ಚುನಾವಣೆ ಅಕ್ಟೋಬರ್ 25, 1951ರಿಂದ ಫೆಬ್ರವರಿ 21,1952ರ ಅವಧಿಯಲ್ಲಿ ನಡೆಯಿತು. ಚುನಾವಣೆ ಆಯೋಗದ ಕಾರ್ಯನಿರ್ವಹಣೆ ಮತ್ತು ವೃತ್ತಿಪರತೆ ಕುರಿತು ಹಲವು ಅಧ್ಯಯನಗಳು ನಡೆದಿವೆ. ಆದರೆ, ಈಗ ಆಯೋಗದ ಮೇಲೆ ಕರಿ ನೆರಳು ಬಿದ್ದಿದೆ. ಆಯೋಗವು ಆಡಳಿತ ಪಕ್ಷದೊಂದಿಗೆ ಸೇರಿಕೊಂಡು ದತ್ತಾಂಶ ಮುಚ್ಚಿಡುವಿಕೆಯಲ್ಲದೆ, ಹಲವು ರಾಜ್ಯಗಳಲ್ಲಿ ಅಕ್ರಮವಾಗಿ ಚುನಾವಣೆಗಳನ್ನು ‘ಕದಿಯಲು’ ನೆರವಾಗಿದೆ. ಇದರಿಂದ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ 33,000ಕ್ಕಿಂತ ಕಡಿಮೆ ಮತಗಳ ಅಂತರದಲ್ಲಿ 25 ಸ್ಥಾನದಲ್ಲಿ ಗೆದ್ದು ಅಧಿಕಾರ ಉಳಿಸಿಕೊಂಡಿದೆ ಎಂಬ ರಾಹುಲ್ ಅವರ ಹೇಳಿಕೆ ಅಲ್ಲೋಲಕಲ್ಲೋಲ ಸೃಷ್ಟಿಸಿದೆ.
ಚುನಾವಣೆಗಳು ಪ್ರಜಾಪ್ರಭುತ್ವದ ಆತ್ಮ ಮತ್ತು ಮತದಾರರ ಪಟ್ಟಿಗಳು ಚುನಾವಣೆಯ ಜೀವನಾಡಿ. ಮತದಾರರ ಪಟ್ಟಿಯನ್ನು ತಿದ್ದುವ ಅಧಿಕಾರಿ-ರಾಜಕಾರಣಿಗಳ ಪ್ರಯತ್ನದಿಂದ ಪ್ರಜಾಪ್ರಭುತ್ವದ ಪರಿಕಲ್ಪನೆಗೆ ಹಾನಿಯುಂಟಾಗಿದೆ. ಅಮೆರಿಕದಲ್ಲಿ ಮಹಿಳೆಯರು ಮತದಾನದ ಹಕ್ಕಿಗಾಗಿ 1840ರಲ್ಲಿ ಹೋರಾಟ ಆರಂಭಿಸಿದರೂ, ಅವರಿಗೆ ಹಕ್ಕು ಪ್ರಾಪ್ತವಾಗಿದ್ದು 1920ರಲ್ಲಿ; ಆಫ್ರಿಕಾ ಮೂಲದ ಅಮೆರಿಕನ್ನರಿಗೆ ಮತ ಚಲಾವಣೆ ಹಕ್ಕು ಸಿಕ್ಕಿದ್ದು 1964ರಲ್ಲಿ. ದೇಶದಲ್ಲಿ ಬ್ರಿಟಿಷರ ಆಡಳಿತವಿದ್ದಾಗ ಜಮೀನುದಾರರು, ತೆರಿಗೆ ಪಾವತಿದಾರರು ಹಾಗೂ ಪದವೀಧರರಿಗೆ ಮಾತ್ರ ಮತ ಚಲಾವಣೆ ಹಕ್ಕು ಇತ್ತು. ಆದರೆ, ಸಂವಿಧಾನ ರಚನಾ ಸಮಿತಿಯು ಲಿಂಗ, ಧರ್ಮ, ಜಾತಿ ಹಾಗೂ ವಿದ್ಯೆಯನ್ನು ಪರಿಗಣಿಸದೆ, ಎಲ್ಲರಿಗೂ ಮತ ಚಲಾವಣೆ ಹಕ್ಕು ನೀಡಿತು. ಕಾಂಗ್ರೆಸ್ 1928ರಿಂದಲೇ ಎಲ್ಲಾ ವಯಸ್ಕ ಭಾರತೀಯರಿಗೆ ಮತ ಚಲಾವಣೆ ಹಕ್ಕೊತ್ತಾಯ ಮಂಡಿಸಿತ್ತು. 1937ರಲ್ಲಿ ಬ್ರಿಟಿಷ್ ಆಡಳಿತ ನಡೆಸಿದ ಚುನಾವಣೆಯಲ್ಲಿ ಆರನೇ ಒಂದು ಭಾಗದಷ್ಟು ವಯಸ್ಕರು ಮತ ಚಲಾಯಿಸಿದ್ದರು. ಎಲ್ಲ ಮತದಾರರನ್ನು ಒಳಗೊಂಡ ಪಟ್ಟಿಯನ್ನು ರಚಿಸುವುದು ಸ್ವತಂತ್ರ ದೇಶ ತೆಗೆದುಕೊಂಡ ಮೊದಲ ಆಡಳಿತಾತ್ಮಕ ನಿರ್ಧಾರವಾಗಿತ್ತು. ಆನಂತರ ಬಿ.ಎನ್. ರಾವ್ ನೇತೃತ್ವದ ಸಂವಿಧಾನ ಸಚಿವಾಲಯವು ವಯಸ್ಕ ಮತದಾರರ ಪಟ್ಟಿಯನ್ನು ಸಿದ್ಧಪಡಿಸಿತು. ಸಂವಿಧಾನದ ರಚನೆ, ಅಂಗೀಕಾರಕ್ಕೆ ಮುನ್ನವೇ ಮತದಾರರ ಪಟ್ಟಿ ಸಿದ್ಧವಾಗಿತ್ತು. ‘ಇದರಿಂದ ಭಾರತೀಯರು ಮೊದಲು ಮತದಾರರಾದರು; ಆನಂತರ ನಾಗರಿಕರಾದರು’ ಎಂದು ಸಂಶೋಧಕ-ಲೇಖಕ ಅರ್ನಿತ್ ಶಾನಿ ಹೇಳುತ್ತಾರೆ. ಚುನಾವಣೆ ಆಯೋಗದ ರಚನೆಗೆ ದಾರಿ ಮಾಡಿಕೊಡುವ ವಿಧಿಯನ್ನು ಮಂಡಿಸುವಾಗ ಡಾ. ಬಿ.ಆರ್. ಅಂಬೇಡ್ಕರ್, ‘ಒಬ್ಬ ಅಧಿಕಾರಿಯ ಇಚ್ಛೆಯಂತೆ’ ಯಾವುದೇ ಭಾರತೀಯನನ್ನು ಮತದಾರರ ಪಟ್ಟಿಯಿಂದ ಹೊರಗಿಡಬಾರದು ಎಂದು ಸ್ಪಷ್ಟವಾಗಿ ಹೇಳಿದ್ದರು. ಆದರೆ, ಮತಗಳವು ಮತ್ತಿತರ ಲೋಪಗಳು ಈ ಪರಂಪರೆಗೆ ಧಕ್ಕೆ ತಂದಿವೆ.
ಆಯೋಗದ ಬಗ್ಗೆ ಸಂಶಯ ಇದೇ ಮೊದಲಲ್ಲ
ಮತದಾರರ ಪಟ್ಟಿಯ ಸಮಗ್ರತೆ ಬಗ್ಗೆ ಸಂಶಯ ವ್ಯಕ್ತವಾಗುತ್ತಿರುವುದು ಇದೇ ಮೊದಲಲ್ಲ. ಆದರೆ, ಈಗ ಆಯೋಗ ಪ್ರತಿಕ್ರಿಯಿಸುತ್ತಿರುವ ರೀತಿ ಆತಂಕಕ್ಕೆ ಕಾರಣವಾಗಿದೆ. ಸುದ್ದಿ ಪೋರ್ಟಲ್ ‘ದ ಸ್ಕ್ರಾಲ್’, 2019ರ ಲೋಕಸಭೆ ಚುನಾವಣೆ ಮಾಹಿತಿಯಲ್ಲಿನ ಹಲವು ಲೋಪಗಳ ಕುರಿತು 2023ರಲ್ಲಿ ವಿಸ್ತೃತ ಲೇಖನ ಪ್ರಕಟಿಸಿತ್ತು. ಮಾರ್ಚ್ 2025ರಲ್ಲಿ ತೃಣಮೂಲ ಕಾಂಗ್ರೆಸ್, ದೇಶಾದ್ಯಂತ ಹಲವು ಮತದಾರರು ಒಂದೇ ಸಂಖ್ಯೆಯ ಚುನಾವಣೆ ಕಾರ್ಡ್(ಎಪಿಕ್) ಹೊಂದಿದ್ದಾರೆ ಎಂದು ದೂರಿತ್ತು. ಸರಿಪಡಿಸುವುದಾಗಿ ಚುನಾವಣಾ ಆಯೋಗ ಹೇಳಿತಾದರೂ, ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ; ಇಂಥ ದೋಷಗಳು ಏಕೆ ಮತ್ತು ಹೇಗೆ ಕಾಣಿಸಿಕೊಳ್ಳುತ್ತಿವೆ ಎಂದು ವಿವರಿಸಲಿಲ್ಲ. ಆಯೋಗ ಬಿಹಾರದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ ಮಹಿಳೆಯರು ಮತ್ತು ಅಲ್ಪಸಂಖ್ಯಾತರನ್ನು ಕೈಬಿಡಲಾಗಿದೆ ಎಂಬ ಆರೋಪ ದಟ್ಟವಾಗಿದೆ. ಪರಿಷ್ಕರಣೆಯು ಕೆಳ ಹಂತದ ಅಧಿಕಾರಶಾಹಿ ಕೈಯಲ್ಲಿ ಅಪಾರ ಅಧಿಕಾರ ಇರಿಸಿದೆ; ಇದು ಪೌರತ್ವ ರಿಜಿಸ್ಟ್ರಿ (ಎನ್‌ಆರ್‌ಸಿ)ಯ ಇನ್ನೊಂದು ರೂಪ ಎಂದು ಟೀಕೆಗೆ ಒಳಗಾಗಿದೆ.
ಆಯೋಗದ ವಿಶ್ವಾಸಾರ್ಹತೆ ಕುಸಿತಕ್ಕೆ ಸರಕಾರ ತಂದ ಸಾಂಸ್ಥಿಕ ಬದಲಾವಣೆಗಳು ಮುಖ್ಯ ಕಾರಣ. 2023ರಲ್ಲಿ ಅನೂಪ್ ಬರನ್ವಾಲ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಚುನಾವಣೆ ಆಯೋಗದ ನೇಮಕಗಳಿಗೆ ಪ್ರಧಾನಿ, ವಿರೋಧ ಪಕ್ಷದ ನಾಯಕ ಮತ್ತು ಮುಖ್ಯ ನ್ಯಾಯಾಧೀಶರ ಸಮಿತಿ ರಚಿಸಬೇಕು. ನ್ಯಾಯಾಧೀಶರ ಆಯ್ಕೆಗೆ ಸಂಸತ್ತು ಹೊಸ ಕಾನೂನು ರೂಪಿಸುವವರೆಗೆ, ಇದು ತಾತ್ಕಾಲಿಕ ವ್ಯವಸ್ಥೆಯಾಗಿ ಇರಲಿದೆ ಎಂದು ತೀರ್ಪು ನೀಡಿತು. ನೇಮಕಕ್ಕೆ ನಿಷ್ಪಕ್ಷಪಾತ ವ್ಯವಸ್ಥೆ ಯೊಂದರ ಸೃಷ್ಟಿ ನ್ಯಾಯಾಲಯದ ಉದ್ದೇಶವಾಗಿತ್ತು. ಆದರೆ, ಅಡ್ಡ ದಾರಿ ಹಿಡಿದ ಕೇಂದ್ರ ಸರಕಾರ, ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ಕಾಯ್ದೆ 2023ನ್ನು ಸಂಸತ್ತಿನಲ್ಲಿ ಅಂಗೀಕರಿಸಿತು; ಆಯ್ಕೆ ಸಮಿತಿ ಯಲ್ಲಿ ಮುಖ್ಯ ನ್ಯಾಯಾಧೀಶರ ಬದಲು ಪ್ರಧಾನಿ ಆಯ್ಕೆ ಮಾಡಿದ ಕೇಂದ್ರ ಕ್ಯಾಬಿನೆಟ್ ಸಚಿವರನ್ನು ಸೇರಿಸಿತು. ಇದರಿಂದ ಸರಕಾರದ ಕೈ ಮೇಲಾಯಿತು ಮತ್ತು ನ್ಯಾಯಾಲಯದ ತೀರ್ಪು ಬುಡಮೇಲಾಯಿತು. ಕಾಯ್ದೆಯಿಂದ ಆಯೋಗವು ಆಡಳಿತ ಪಕ್ಷದ ನಿಯಂತ್ರಣಕ್ಕೊಳಪಡಲಿದೆ; ಸರ್ವಾಧಿಕಾರ ಪ್ರವೃತ್ತಿಗೆ ದಾರಿಮಾಡಿಕೊಡಲಿದೆ ಎಂದು ಟೀಕೆ ವ್ಯಕ್ತವಾಯಿತು. ಆದರೆ, ಹೊಸ ವ್ಯವಸ್ಥೆ ಪಾರದರ್ಶಕ ಮತ್ತು ಕಾನೂನುಬದ್ಧವಾಗಿದೆ ಎಂದು ಸರಕಾರ ಸಮರ್ಥಿಸಿಕೊಂಡಿತು.
ಮತದಾರರಲ್ಲಿ ನಂಬಿಕೆ ಕುಸಿತ
ವ್ಯವಸ್ಥೆಯೊಂದು ವಿಶ್ವಾಸಾರ್ಹವಾಗಿದ್ದರೆ ಮಾತ್ರ ಜನ ಅದನ್ನು ನಂಬುತ್ತಾರೆ. ರೆಫ್ರಿ ಒಂದು ತಂಡದ ಪರವಾಗಿ ಆಟವಾಡುತ್ತಿದ್ದಾನೆ ಎಂದು ಮತದಾರರು ನಂಬಿದರೆ, ಆನಂತರ ಇಡೀ ಚುನಾವಣೆ ಪ್ರಕ್ರಿಯೆಯ ವಿಶ್ವಾಸಾರ್ಹತೆಯೇ ಪ್ರಶ್ನಾರ್ಹವಾಗಿ ಬಿಡುತ್ತದೆ. ಅಂತರ್‌ರಾಷ್ಟ್ರೀಯ ಪ್ರಜಾಪ್ರಭುತ್ವ ಸೂಚ್ಯಂಕಗಳು ಕಳೆದ ದಶಕದಿಂದ ದೇಶದಲ್ಲಿ ಪ್ರಜಾಪ್ರಭುತ್ವ ಅವನತಿಯಲ್ಲಿದೆ ಎಂದು ದಾಖಲಿಸಿವೆ. ನಾಗರಿಕ ಸ್ವಾತಂತ್ರ್ಯದ ಮೇಲಿನ ನಿರ್ಬಂಧಗಳು, ಭಿನ್ನಾಭಿಪ್ರಾಯಕ್ಕೆ ಅಸಹಿಷ್ಣುತೆ ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳ ವಶಪಡಿಸಿಕೊಳ್ಳುವಿಕೆ ಇದಕ್ಕೆ ಕಾರಣ ಎಂದು ಹೇಳಿವೆ. ಆಡಳಿತ ಪಕ್ಷಕ್ಕೆ ಅನುಕೂಲವಾಗುವಂತೆ ಚುನಾವಣೆ ವೇಳಾಪಟ್ಟಿ ಸಿದ್ಧಗೊಳಿಸುವಿಕೆ, ಮಾದರಿ ನೀತಿ ಸಂಹಿತೆ ಜಾರಿಯಲ್ಲಿ ಪಕ್ಷಪಾತ, ಆಡಳಿತ ಪಕ್ಷದ ವಿರುದ್ಧ ಕ್ರಮಕ್ಕೆ ಹಿಂಜರಿತ ಇತ್ಯಾದಿ ದೂರುಗಳು ಇದ್ದವು. ಈಗ ಇಲೆಕ್ಟ್ರಾನಿಕ್ ಮತದಾನದ ದತ್ತಾಂಶ ನಿರ್ವಹಣೆಯಲ್ಲಿ ಅಪಾರದರ್ಶಕತೆ, ದೂರು ಬಗೆಹರಿಸಲು ಹಿಂಜರಿಕೆ ಹಾಗೂ ದೂರು ನೀಡಿದವನನ್ನೇ ಅಪರಾಧಿ ಎನ್ನುವ ಪ್ರವೃತ್ತಿಯಿಂದ ಆಯೋಗ ಪಾತಾಳಕ್ಕೆ ಕುಸಿದಿದೆ.
ಚುನಾವಣೆ ಆಯೋಗದ ಕೈಪಿಡಿ ಪ್ರಕಾರ, ಮತಪಟ್ಟಿ ಪರಿಷ್ಕರಣೆ ಸಮಯದಲ್ಲಿ ಮತದಾರರ ನಿವ್ವಳ ವಾರ್ಷಿಕ ಸೇರ್ಪಡೆ ಹಿಂದಿನ ವರ್ಷಕ್ಕಿಂತ ಶೇ.4 ಮೀರಿದರೆ, ‘ಅಡ್ಡ ಪರಿಶೀಲನೆಯ ಹೆಚ್ಚುವರಿ ಹಂತ’ಗಳು ಅಗತ್ಯವಿರುತ್ತದೆ. ರಾಜ್ಯದಲ್ಲಿ 2008-2013ರ ಅವಧಿಯಲ್ಲಿ ವಾರ್ಷಿಕ ಶೇ. 6.76, 2013-18ರಲ್ಲಿ ಶೇ. 5.5, 2018-2023ರಲ್ಲಿ ಶೇ. 5.82 ಮತ್ತು 2023 ರ ವಿಧಾನಸಭೆ ಹಾಗೂ 2024ರ ಲೋಕಸಭೆ ಚುನಾವಣೆ ನಡುವೆ ಮತದಾರರ ಸಂಖ್ಯೆ ಶೇ. 8.54ರಷ್ಟು ಏರಿಕೆ ಕಂಡಿದೆ. ಹೀಗಿದ್ದರೂ ಆಯೋಗ ಅಡ್ಡ ಪರಿಶೀಲನೆ ನಡೆಸಲಿಲ್ಲ ಹಾಗೂ ಇದನ್ನು ಪ್ರತಿಪಕ್ಷಗಳು ಪ್ರಶ್ನಿಸಲಿಲ್ಲ. ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರಕ್ಕೆ ಸೇರಿದ ಮಹದೇವಪುರದಲ್ಲಿ 2008ರಿಂದ 2024ರ ಅವಧಿಯಲ್ಲಿ ಮತದಾರರ ಸಂಖ್ಯೆ ಶೇ.140 ಬೆಳವಣಿಗೆ ಆಗಿದೆ; ಮಹದೇವಪುರ ಕ್ಷೇತ್ರದ ತೀವ್ರ ಬೆಳವಣಿಗೆಗೆ ಐಟಿ ಕಾರಿಡಾರ್ ಕಾರಣ. ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಪ್ರಕಾರ, ಸರ್ವಜ್ಞನಗರ ವಿಧಾನಸಭೆ ಕ್ಷೇತ್ರದಲ್ಲಿ ಮತದಾರರ ಸಂಖ್ಯೆ ಶೇ.26.5ರಷ್ಟು ಹೆಚ್ಚಿದೆ. ಇಂಥ ಸ್ಥಿತ್ಯಂತರವನ್ನು ನಿರ್ವಹಿಸಲು ಆಯೋಗದಲ್ಲಿ ನಿಯಮಗಳಿವೆ. ಆದರೆ, ಈ ಸಂಬಂಧ ನಾಗರಿಕರು ಮತ್ತು ಸಾರ್ವಜನಿಕ ಕಾರ್ಯಕರ್ತರು ದೂರು ನೀಡಿದರೂ, ಅಧಿಕಾರಿಗಳು ಸ್ಪಂದಿಸಲಿಲ್ಲ. ಬದಲಾಗಿ, ಸಮಸ್ಯೆಯನ್ನು ತೋರಿಸಿದ ವ್ಯಕ್ತಿಯ ಬಾಯಿ ಮುಚ್ಚಿಸಲು ಮುಂದಾಗಿದ್ದಾರೆ.
2017ರಲ್ಲಿ ವೈಟ್‌ಫೀಲ್ಡ್‌ನಲ್ಲಿ ‘ಮಿಲಿಯನ್ ವೋಟರ್ಸ್ ರೈಸಿಂಗ್’ ಎಂಬ ಸ್ಥಳೀಯ ನಿವಾಸಿಗಳ ಅಭಿಯಾನವು ಹಲವು ಸಮಸ್ಯೆಗಳನ್ನು ಪತ್ತೆಹಚ್ಚಿತು. ‘ದಿ ಹಿಂದೂ’ ವರದಿ ಪ್ರಕಾರ, ಶೇ.66ಕ್ಕೂ ಹೆಚ್ಚು ಮತದಾರರ ಅರ್ಜಿಗಳನ್ನು ತಿರಸ್ಕರಿಸ ಲಾಗಿತ್ತು; ಸಾರ್ವಜನಿಕರ ಆಕ್ರೋಶದಿಂದ ಎಚ್ಚೆತ್ತ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ಅರ್ಜಿಗಳ ಮರುಪರಿಶೀಲನೆಗೆ ಆದೇಶಿಸಬೇಕಾಯಿತು. ಇದರಿಂದ ತೃಪ್ತರಾಗದ ನಿವಾಸಿಗಳು ಹೈಕೋರ್ಟ್ ಮೆಟ್ಟಿಲೇರಿದರು. 20 22ರಲ್ಲಿ ‘ದಿ ನ್ಯೂಸ್‌ಮಿನಿಟ್’ ನಡೆಸಿದ ತನಿಖೆಯಿಂದ ಚಿಲುಮೆ ಟ್ರಸ್ಟ್ ವಿವಾದ ಬೆಳಕಿಗೆ ಬಂದಿತು. ‘‘ಈ ಎನ್‌ಜಿಒ ವೈಯಕ್ತಿಕ ದತ್ತಾಂಶವನ್ನು ಅಕ್ರಮವಾಗಿ ಬಳಸಿಕೊಂಡಿದೆ. ರಾಜಕೀಯ ಪಕ್ಷಕ್ಕೋಸ್ಕರ ಮತದಾರರ ಹೆಸರು ಅಳಿಸಲು ದತ್ತಾಂಶವನ್ನು ಬಳಸಲಾಗಿದೆ’’ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿತು. ಆನಂತರ ಸರಕಾರ ವಿಚಾರಣೆ ನಡೆಸಿ, ಚಿಲುಮೆ ಟ್ರಸ್ಟ್ ಮತದಾರರ ದತ್ತಾಂಶವನ್ನು ಅಕ್ರಮವಾಗಿ ಸಂಗ್ರಹಿಸಿ, ಖಾಸಗಿ ಸರ್ವರ್‌ಗಳಲ್ಲಿ ಸಂಗ್ರಹಿಸಿದೆ. ಆದರೆ, ‘ತಿರುಚುವಿಕೆ’ಯ ಪುರಾವೆ ಲಭ್ಯವಿಲ್ಲ ಎಂದು ಹೇಳಿತು. ಚಿಲುಮೆ ಟ್ರಸ್ಟ್ ಸಕ್ರಿಯವಾಗಿದ್ದ ಮೂರು ಕ್ಷೇತ್ರಗಳಲ್ಲಿ ಮಹದೇವಪುರವೂ ಒಂದು. ವ್ಯಂಗ್ಯವೆಂದರೆ, ಈಗ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಚಿಲುಮೆ ಟ್ರಸ್ಟ್ ಪ್ರಕರಣ ನಿರ್ಲಕ್ಷಿತವಾಗಿದೆ; ಆದರೆ, ಪಕ್ಷವು ಮತ ಕಳವು ವಿರುದ್ಧ ಹೋರಾಡುತ್ತಿದೆ!
ಮತ ಕಳವು ಒಂದು ಕ್ಷೇತ್ರ ಅಥವಾ ಪಕ್ಷಕ್ಕೆ ಸೀಮಿತವಾಗಿಲ್ಲ; ಅದು ಸಾಂಸ್ಥಿಕ ವೈಫಲ್ಯದ ಗಂಭೀರ ಪ್ರಕರಣ. ಆಯೋಗದ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ಬದ್ಧತೆ ಕುರಿತು ಮೂಲಭೂತ ಪ್ರಶ್ನೆಗಳನ್ನು ಎತ್ತುತ್ತದೆ. ಸಂವಿಧಾನದ ಪ್ರಕಾರ, ಚುನಾವಣಾಧಿಕಾರಿಗಳು ಮುಕ್ತ ಮತ್ತು ನ್ಯಾಯಯುತ ಚುನಾವಣೆಯನ್ನು ಖಚಿತಪಡಿಸಿಕೊಳ್ಳಬೇಕು. ಆಯುಕ್ತರ ವೈಯಕ್ತಿಕ ಪ್ರಾಮಾಣಿಕತೆ, ನಿಷ್ಪಕ್ಷತೆ ಮತ್ತು ಸಾರ್ವಜನಿಕ ಕಣ್ಣಿನಲ್ಲಿ ಅವರ ಮಾನ್ಯತೆ ಇಲ್ಲಿ ಮುಖ್ಯವಾಗುತ್ತದೆ. ಆದರೆ, ಈಗ ಚುನಾವಣೆ ಆಯೋಗವು ಆಡಳಿತ ಪಕ್ಷದ ಕಚೇರಿಯಾಗುತ್ತಿದೆ. ರಾಹುಲ್ ಅವರ ಆರೋಪಗಳನ್ನು ಪರಿಗಣಿಸಿ, ಆಯೋಗ ತನ್ನ ವಿಶ್ವಾಸಾರ್ಹತೆ ಉಳಿಸಿಕೊಳ್ಳದಿದ್ದರೆ ಎರಡು ಸಮಸ್ಯೆಗಳು ಎದುರಾಗಲಿವೆ; ಮೊದಲಿಗೆ, ಪ್ರತಿಪಕ್ಷಗಳು ಚುನಾವಣೆಗಳ ಫಲಿತಾಂಶಗಳನ್ನು ಒಪ್ಪುವುದಿಲ್ಲ. ಇದರಿಂದ ರಾಜಕೀಯ ಅಸ್ಥಿರತೆಯಲ್ಲದೆ, ಅಧಿಕಾರದ ಶಾಂತಿಯುತ ವರ್ಗಾವಣೆ ಆಗುವುದಿಲ್ಲ. ಎರಡನೆಯದಾಗಿ, ಚುನಾವಣೆಯನ್ನು ತಿರುಚುವುದರಿಂದ, ಯಾರಿಗೆ ಮತ ಚಲಾಯಿಸಿದರೂ ಪ್ರಯೋಜನವಿಲ್ಲ ಎಂದುಕೊಂಡು ನಾಗರಿಕರು ಚುನಾವಣೆ ಪ್ರಕ್ರಿಯೆಯಿಂದ ಹೊರಗುಳಿಯುವ ಸಾಧ್ಯತೆಯಿದೆ. ಇದರಿಂದ ಮತ ಚಲಾವಣೆ ಪ್ರಮಾಣ ಕುಸಿಯುತ್ತದೆ ಮತ್ತು ಕನಿಷ್ಠ ಮತ ಗಳಿಸಿದವರು ಆಯ್ಕೆಯಾಗುವ ಸಾಧ್ಯತೆ ಇದೆ. ಇದೊಂದು ಅಮೂರ್ತ ಅಪಾಯವಲ್ಲ. ಆಯೋಗವು ತನ್ನ ಮೇಲಿನ ಆರೋಪಗಳು ಆಧಾರರಹಿತ ಅಥವಾ ರಾಜಕೀಯಪ್ರೇರಿತ ಎಂದು ತಳ್ಳಿಹಾಕಿದ ತಕ್ಷಣ ಸಮಸ್ಯೆ ಬಗೆಹರಿಯುವುದಿಲ್ಲ; ಅದರ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆಯಲ್ಲದೆ, ಅದರ ಪ್ರಕ್ರಿಯೆಗಳು ಸಾರ್ವಜನಿಕರ ಪರಿಶೀಲನೆಗೆ ಒಳಪಡಬೇಕು. ಯಂತ್ರ ಓದಬಹುದಾದ ಮತದಾರರ ಪಟ್ಟಿ ನೀಡುವುದು, ವಿವಿಪಾಟ್ ಆಡಿಟ್ ಕಾರ್ಯವಿಧಾನಗಳನ್ನು ಸಾರ್ವಜನಿಕಗೊಳಿಸುವುದು, ಮತದಾನ ಕೇಂದ್ರದ ಸಿಸಿ ಟಿವಿ ದೃಶ್ಯಾವಳಿಗಳನ್ನು ಸಂರಕ್ಷಿಸಿ, ಕೇಳಿದವರಿಗೆ ಒದಗಿಸುವುದು ಮತ್ತು ಚುನಾವಣೆ ದತ್ತಾಂಶವನ್ನು ಸ್ವತಂತ್ರ, ಮೂರನೇ ವ್ಯಕ್ತಿಯಿಂದ ಲೆಕ್ಕಪರಿಶೋಧನೆಗೆ ಅನುಮತಿ ನೀಡುವುದರಿಂದ, ಆಯೋಗ ಏನನ್ನೂ ಮರೆಮಾಚುತ್ತಿಲ್ಲ ಎನ್ನುವುದು ಜನರಿಗೆ ಖಾತ್ರಿಯಾಗಲಿದೆ. ಜೊತೆಗೆ, ರಾಜಕೀಯ ಪಕ್ಷಗಳು ಮೂಗು ತೂರಿಸಲು ಅವಕಾಶವಿಲ್ಲದಂತೆ ಆಯುಕ್ತರ ನೇಮಕ ನಡೆಯಬೇಕಿದೆ; ಇದಕ್ಕಾಗಿ ಆಯ್ಕೆ ಸಮಿತಿಗೆ ನ್ಯಾಯಾಂಗ ಕ್ಷೇತ್ರದವರನ್ನು ಮರುಸೇರ್ಪಡೆಗೊಳಿಸಬೇಕಿದೆ.
ಬದ್ಧತೆ ಅಗತ್ಯ
ಜಗತ್ತಿನಾದ್ಯಂತ ಚುನಾವಣೆ ಸಂಸ್ಥೆಗಳ ಬಗ್ಗೆ ಸಾರ್ವಜನಿಕರ ನಂಬಿಕೆ ಕುಸಿದಿದೆ; ವಿಶ್ವಾಸದ ಮರುಗಳಿಕೆ ಕಷ್ಟಕರ ಎಂದು ಸಾಬೀತಾಗಿದೆ. ಸರಕಾರಗಳು ಚುನಾವಣಾ ಆಯೋಗವನ್ನು ಕೈವಶಪಡಿಸಿಕೊಂಡಾಗ ಅಥವಾ ಆಯೋಗವೇ ಅಧಿಕಾರದೊಂದಿಗೆ ರಾಜಿ ಮಾಡಿಕೊಂಡಾಗ, ಪ್ರಜಾಪ್ರಭುತ್ವ ಕೆಲವೊಮ್ಮೆ ಸರಿಪಡಿಸಲಾಗದಷ್ಟು ಹದಗೆಟ್ಟಿದೆ. ಪ್ರಜಾಪ್ರಭುತ್ವದ ಯಶಸ್ಸಿನ ಕಥೆ ಎಂದು ಶ್ಲಾಘನೆಗೊಳಗಾದ ಅರಬ್ ಸ್ಪ್ರಿಂಗ್(ಅರಬ್ ವಸಂತ) ಅರಳಿದ ಟುನೀಶಿಯಾದಲ್ಲಿ ಚುನಾವಣೆ ಆಯೋಗದ ರಾಜಕೀಕರಣದಿಂದ ದೇಶ ಸರ್ವಾಧಿಕಾರದ ಕಡೆಗೆ ವಾಲುತ್ತಿದೆ. 2024ರಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯನ್ನು ಮರುಸ್ಥಾಪಿಸಬೇಕೆಂಬ ನ್ಯಾಯಾಲಯದ ಆದೇಶವನ್ನು ಪಾಲಿಸಲು ಆಯೋಗ ನಿರಾಕರಿಸಿತು. ಇದರಿಂದ ನ್ಯಾಯಾಂಗ ದುರ್ಬಲಗೊಂಡು, ಪ್ರಜಾಪ್ರಭುತ್ವದ ಬಿಕ್ಕಟ್ಟು ಇನ್ನಷ್ಟು ಆಳಗೊಂಡಿತು. ಚುನಾವಣೆ ಆಯೋಗದ ನಿಯಂತ್ರಣದಿಂದ ಆಡಳಿತ ಪಕ್ಷಕ್ಕೆ ಅಲ್ಪಾವಧಿಯಲ್ಲಿ ಲಾಭ ಆಗಬಹುದು; ಆದರೆ, ಒಮ್ಮೆ ಆಯೋಗ ಜನರ ನಂಬಿಕೆ ಕಳೆದುಕೊಂಡರೆ, ಮತದಾನದ ಮಹತ್ವ ಕುಸಿಯುತ್ತದೆ. ಎಚ್ಚರಿಕೆ ಗಂಟೆ ಬಾರಿಸುತ್ತಿದ್ದು, ಈಗ ಜನ-ರಾಜಕೀಯ ಪಕ್ಷಗಳು ಸುಮ್ಮನೆ ಇದ್ದರೆ, ಭವಿಷ್ಯ ಮಸುಕಾಗಲಿದೆ. ಇದನ್ನು ತಪ್ಪಿಸಬೇಕೆಂದರೆ, ಚುನಾವಣೆ ಆಯೋಗವು ಸಂವಿಧಾನಕ್ಕೆ ಬದ್ಧತೆ ಹೊಂದಿರಬೇಕಾಗುತ್ತದೆ. ನಾಗರಿಕರು ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಂಡರೆ ರಾಜಕೀಯದಲ್ಲಿ ಸ್ಪರ್ಧೆ ಕಾಣೆಯಾಗುತ್ತದೆ; ಕಾನೂನು ಅಧಿಕಾರದಲ್ಲಿರುವವರ ಕಡೆಗೆ ವಾಲುತ್ತದೆ ಮತ್ತು ಫಲಿತಾಂಶಗಳ ಸ್ವೀಕೃತಿಯು ಹಿಂಸಾತ್ಮಕವಾಗುತ್ತದೆ.
‘‘ರಾಜಕೀಯ ಪ್ರಜಾಪ್ರಭುತ್ವವು ‘ಒಬ್ಬ ವ್ಯಕ್ತಿ, ಒಂದು ಮತ’ ಹಾಗೂ ‘ಒಂದು ಮತ, ಒಂದು ಮೌಲ್ಯ’ ಸಿದ್ಧಾಂತವನ್ನು ಆಧರಿಸಿದೆ’’ ಎಂದು ಡಾ.ಬಿ.ಆರ್. ಅಂಬೇಡ್ಕರ್ ಹೇಳಿದ್ದರು. ಉಳಿದ ಪ್ರಶ್ನೆ ಏನೆಂದರೆ, ಕಾಂಗ್ರೆಸ್ ಮತ ಕಳವು ವಿರುದ್ಧ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವುದೇ? ಈ ಸಂಚಿನಲ್ಲಿ ಆಯೋಗ ಪಾಲ್ಗೊಂಡಿದೆ ಎಂದು ಕೋರ್ಟ್ ಕದ ತಟ್ಟುವುದೇ? ಮಹದೇವಪುರಕ್ಕೆ ಮುನ್ನುಡಿ ಹಾಕಿದ ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸುವುದೇ? ಬಿಜೆಪಿ ತಾಳಕ್ಕೆ ಕುಣಿಯುತ್ತಿರುವ ಚುನಾವಣೆ ಆಯೋಗವು ಪ್ರತಿಪಕ್ಷಗಳ ಪ್ರತಿಭಟನೆಗೆ ಮಣಿಯುವುದೇ?