ಬರೆದ ಅಕ್ಷರವ ಅಳಿಸಲಾಗದು ನೋಡಾ...

ಚಿಂತನೆಗಳು ಈಗಾಗಲೇ ಜಗತ್ತಿನಲ್ಲಿ ಇರುವಂಥವು; ಅವುಗಳ ನಿಷೇಧ ಸಾಧ್ಯವಿಲ್ಲ. ಆದರೆ, ಚಿಂತನೆಗಳನ್ನು ಒಳಗೊಂಡಿರುವ ಪುಸ್ತಕಗಳು ಕೈಗೆ ಎಟಕುವಂತೆ ಇರುತ್ತವೆ. ಕಪಾಟಿನಲ್ಲಿ ಕುಳಿತು ದಿಟ್ಟಿಸುತ್ತವೆ; ಎಲ್ಲೋ ಮೂಲೆಯಲ್ಲಿ ಕಾಣದಂತೆ ಇದ್ದು, ದಿಢೀರನೆ ಪ್ರತ್ಯಕ್ಷವಾಗುತ್ತವೆ; ಅವುಗಳ ಭೌತಿಕ ಇರುವು ಆಳುವವರಿಗೆ ಸಮಸ್ಯೆ ಆಗುತ್ತದೆ. ಇದರಿಂದ, ನಿಷೇಧದ ಹೊಡೆತ ಬೀಳುತ್ತದೆ. ಆದರೆ, ಪುಸ್ತಕ ನಿಷೇಧದ ಮೂಲಕ ಇತಿಹಾಸದ ಹೆಜ್ಜೆಗಳನ್ನು, ಕರಾಳತೆ-ದಮನವನ್ನು ಅಳಿಸಿಹಾಕಲು ಸಾಧ್ಯವಿಲ್ಲ ಎನ್ನುವುದು ಅರ್ಥವಾಗಬೇಕಿದೆ.
ಆಗಸ್ಟ್ 2025ರ ಮೊದಲ ವಾರ ಜಮ್ಮು ಮತ್ತು ಕಾಶ್ಮೀರದ ಗೃಹ ಇಲಾಖೆಯು 25 ಪುಸ್ತಕಗಳನ್ನು ನಿಷೇಧಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಓದುಗರೊಬ್ಬರು ಸಾಮಾಜಿಕ ವೇದಿಕೆ ‘ಎಕ್ಸ್’ ನಲ್ಲಿ ಪ್ರಶ್ನೆಯೊಂದನ್ನು ಕೇಳಿದರು-‘‘ಇವರಿಗೆ ಪುಸ್ತಕಗಳ ಮೇಲೆ ಏಕೆ ದ್ವೇಷ?’’ ಇದಕ್ಕೆ ನೀಡಬಹುದಾದ ಉತ್ತರವೆಂದರೆ, ಬೌದ್ಧಿಕ ಆತಂಕ. ಸೆನ್ಸರ್‌ಶಿಪ್ ಎನ್ನುವುದು ಹಲವು ಮುಖವಾಡ ಧರಿಸಿ ಬರುತ್ತದೆ; ರಾಷ್ಟ್ರೀಯವಾದ, ನೈತಿಕತೆ, ಕಾನೂನು-ಸುವ್ಯವಸ್ಥೆಗೆ ಧಕ್ಕೆ ಇತ್ಯಾದಿ. ಆದರೆ, ಪುಸ್ತಕಗಳ ಸಾಫ್ಟ್ ಕಾಪಿಗಳು ಆನ್‌ಲೈನ್‌ನಲ್ಲಿ ಲಭ್ಯವಿರುವ ಜಗತ್ತಿನಲ್ಲಿ ಇಂಥ ವಶಪಡಿಸಿಕೊಳ್ಳುವಿಕೆ ಇಲ್ಲವೇ ನಿಷೇಧದಿಂದ ಯಾವ ಪ್ರಯೋಜನ ಆಗುತ್ತದೆ? ಆನ್‌ಲೈನ್‌ನಲ್ಲಿರುವ ಪುಸ್ತಕಗಳನ್ನು ಹೇಗೆ ನಿಷೇಧಿಸುತ್ತೀರಿ-ವಶಪಡಿಸಿಕೊಳ್ಳುತ್ತೀರಿ?
ಇಟಲಿಯ ಕಾದಂಬರಿಕಾರ, ತತ್ವಶಾಸ್ತ್ರಜ್ಞ ಹಾಗೂ ಸಾಂಸ್ಕೃತಿಕ ಚಿಂತಕ ಉಂಬರ್ಟೋ ಎಕೋ(ಜನವರಿ 5, 1932-ಫೆಬ್ರವರಿ 19, 2016), ಈಜಿಪ್ಟ್‌ನ ಬಿಬ್ಲಿಯೋತೆಕಾ ಅಲೆಕ್ಸಾಂಡ್ರಿಯಾ ಗ್ರಂಥಾಲಯದಲ್ಲಿ ನೀಡಿದ ‘ವೆಜಿಟಬಲ್ ಆಂಡ್ ಮಿನರಲ್ ಮೆಮೊರಿ-ದ ಫ್ಯೂಚರ್ ಆಫ್ ಬುಕ್ಸ್’ ಉಪನ್ಯಾಸದಲ್ಲಿ ‘‘ಮುದ್ರಿತ ಪುಸ್ತಕಗಳು ಒಂದು ರೀತಿಯ ಸಸ್ಯೀಯ ಜ್ಞಾಪಕಶಕ್ತಿ; ಸಸ್ಯಗಳ ದೇಹದಿಂದ ಮಾಡಲ್ಪಟ್ಟ (ಅಂದರೆ, ಕಾಗದದಿಂದ) ಮನುಷ್ಯರ ಆಲೋಚನೆಗಳ ಭಂಡಾರ ಆಗಿರುತ್ತವೆ. ಇವು ಖನಿಜ ಸ್ಮರಣಶಕ್ತಿ (ಇಲೆಕ್ಟ್ರಾನಿಕ್ ಉಪಕರಣ) ಮತ್ತು ಸಾವಯವ ಸ್ಮರಣ ಶಕ್ತಿ (ಮಿದುಳಿನಲ್ಲಿ ಶೇಖರವಾಗಿರುವಂಥದ್ದು)ಗಿಂತ ಭಿನ್ನವಾಗಿರುತ್ತವೆ. ಒಂದು ‘ಡಿಲೀಟ್’ ಸೂಚನೆಯಿಂದ ಇಲ್ಲವಾಗುವ ಇಲೆಕ್ಟ್ರಾನಿಕ್ ಸ್ಮರಣೆ ಇಲ್ಲವೇ ಯಾವುದೇ ಕ್ಷಣ ಇಲ್ಲವಾಗಬಹುದಾದ ಮನುಷ್ಯರ ಸ್ಮರಣಶಕ್ತಿಗೆ ಹೋಲಿಸಿದರೆ, ಪುಸ್ತಕಗಳು ಕಾಲ, ಸೆನ್ಸರ್‌ಶಿಪ್ ಹಾಗೂ ಅಧಿಕಾರ ಬಲವನ್ನು ಮೀರಿ ಉಳಿದುಕೊಳ್ಳುತ್ತವೆ’’ ಎಂದು ಹೇಳಿದ್ದರು.
ನಿಷೇಧ ಘೋಷಣೆ ಬಳಿಕ ಪೊಲೀಸರು ಪುಸ್ತಕದ ಅಂಗಡಿಗಳ ಮೇಲೆ ದಾಳಿ ನಡೆಸಿ, ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ಹರಿಬಿಟ್ಟರು. ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರುವ ಪುಸ್ತಕ ಪ್ರೇಮಿಗಳು ನಿಷೇಧಿತ ಪುಸ್ತಕಗಳ ಸಾಫ್ಟ್ ಕಾಪಿಯನ್ನು ಹಂಚಿದರು. ಇದರಿಂದ ಸರಕಾರದ ನಿಷೇಧ ಪ್ರಕ್ರಿಯೆ ನಿರರ್ಥಕವಾಗಿಬಿಟ್ಟಿತು. ಆದರೆ, ಸಮಸ್ಯೆಯೇನೆಂದರೆ ಈ ಸಾಫ್ಟ್ ಕಾಪಿಗಳು ಪುಸ್ತಕ ಹಂಚಿಕೆಯೆಂಬ ಸಾಂಸ್ಕೃತಿಕ ವಿನಿಮಯ ಕ್ರಿಯೆಗೆ ಸಮನಾಗುವುದಿಲ್ಲ.
ನಿಷೇಧದ ಚರಿತ್ರೆ
ಕಾಶ್ಮೀರದ ಜನರು ಅಧಿಕಾರದ ಎಲ್ಲ ರೀತಿಯ ದುರ್ಬಳಕೆಯನ್ನು ಕಂಡುಂಡಿದ್ದಾರೆ. ಕರ್ಫ್ಯೂ, ಇಂಟರ್ನೆಟ್ ನಿಷೇಧ ಮತ್ತು ಟೆಲಿಫೋನ್ ಸಂಪರ್ಕ ಕಡಿತದಿಂದ ಹೊರ ಜಗತ್ತು ಅವರ ಪಾಲಿಗೆ ದೀರ್ಘಕಾಲ, ಕೆಲವೊಮ್ಮೆ ತಿಂಗಳುಗಟ್ಟಲೆ ದೂರವಾಗಿದೆ. ದಾಲ್ ಸರೋವರದ ದಡದಲ್ಲಿ ಸರಕಾರಿ ಪ್ರಾಯೋಜಿತ ಚಿನಾರ್ ಪುಸ್ತಕ ಉತ್ಸವ ನಡೆಯುತ್ತಿದ್ದಾಗಲೇ ಶ್ರೀನಗರದಲ್ಲಿ ಹಲವು ಪುಸ್ತಕ ಮಳಿಗೆಗಳ ಮೇಲೆ ಪೊಲೀಸ್ ದಾಳಿ ನಡೆಯಿತು. ಈ ನಿಷೇಧವು ಹೊಸ ಸೆನ್ಸರ್‌ಶಿಪ್ ಭಯವನ್ನು ಹುಟ್ಟುಹಾಕಿದೆ.
ಸಾರ್ವಜನಿಕ ಸುವ್ಯವಸ್ಥೆಗೆ ಭಂಗ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮತ್ತು ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಸೇರಿದಂತೆ ನಾನಾ ಕಾರಣಗಳಿಗಾಗಿ ಪುಸ್ತಕಗಳನ್ನು ನಿಷೇಧಿಸಲಾಗಿದೆ. ದೇಶದಲ್ಲಿ ಮೊದಲು ನಿಷೇಧಗೊಂಡ ಪುಸ್ತಕ-ಮಹಾತ್ಮಾ ಗಾಂಧಿಯವರ ‘ಹಿಂದ್ ಸ್ವರಾಜ್ ಅಥವಾ ಇಂಡಿಯನ್ ಹೋಮ್ ರೂಲ್’, 1909ರಲ್ಲಿ; ಆನಂತರ ಪಂಡಿತ್ ಎಂ.ಎ. ಚಾಮುಪತಿ ಅವರ ‘ರಂಗೀಲಾ ರಸೂಲ್’ 1924ರಲ್ಲಿ ನಿಷೇಧಿಸಲ್ಪಟ್ಟಿತು. ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪ್ರಕಾಶಕ ಮಹಾಶೇ ರಾಜ್‌ಪಾಲ್ ವಿರುದ್ಧ ಕಾನೂನು ಕ್ರಮ ತೆಗೆದು ಕೊಳ್ಳಲಾಯಿತು. ಅಂತಿಮವಾಗಿ ಪಂಜಾಬ್ ಹೈಕೋರ್ಟ್ ಅವರನ್ನು ಖುಲಾಸೆಗೊಳಿಸಿತು. ಅಮೆರಿಕದ ಚರಿತ್ರಕಾರ ಸ್ಟ್ಯಾನ್ಲಿ ವೊಲ್ಪರ್ಟ್ ಅವರ ಗಾಂಧಿ ಹತ್ಯೆಯ ಚಿತ್ರಣವಿರುವ ‘ನೈನ್ ಅವರ್ಸ್ ಟು ರಾಮ’, ಸಲ್ಮಾನ್ ರಶ್ದಿಯವರ ‘ದಿ ಸಟಾನಿಕ್ ವರ್ಸಸ್’, ಹ್ಯಾಮಿಶ್ ಮೆಕ್‌ಡೊನಾಲ್ಡ್ ಅವರ ‘ದಿ ಪಾಲಿಯೆಸ್ಟರ್ ಪ್ರಿನ್ಸ್-ದಿ ರೈಸ್ ಆಫ್ ಧೀರೂಭಾಯಿ ಅಂಬಾನಿ’, ವೆಂಡಿ ಡೋನಿಗರ್ ಅವರ ‘ದಿ ಹಿಂದೂಸ್: ಆನ್ ಆಲ್ಟರ್ನೇಟಿವ್ ಹಿಸ್ಟರಿ’ ಹಿಂದೂ ದೇವತೆಗಳು ಮತ್ತು ಧಾರ್ಮಿಕ ಆಚರಣೆಗಳನ್ನು ಅಗೌರವದಿಂದ ಕಾಣಲಾಗಿದೆ ಎಂದು ಹಾಗೂ ತಸ್ಲೀಮಾ ನಸ್ರೀನ್ ಅವರ ‘ಲಜ್ಜಾ’ ಧಾರ್ಮಿಕ ಅಸಹಿಷ್ಣುತೆ ಮತ್ತು ಮಹಿಳೆಯರ ದುಃಸ್ಥಿತಿಯ ಕಾಲ್ಪನಿಕ ಚಿತ್ರಣದಿಂದ ಧಾರ್ಮಿಕ ಸಮುದಾಯಗಳ ನಡುವೆ ದ್ವೇಷವನ್ನು ಪ್ರಚೋದಿಸುವ ಸಾಧ್ಯತೆಯಿದೆ ಎಂದು ನಿಷೇಧಿಸಲ್ಪಟ್ಟಿವೆ. ಕನ್ನಡದಲ್ಲಿ ಬಂಜಗೆರೆ ಜಯಪ್ರಕಾಶ ಅವರ ‘ಆನುದೇವಾ ಹೊರಗಣವನು’, ಪಿ.ವಿ. ನಾರಾಯಣ ಅವರ ‘ಧರ್ಮಕಾರಣ’, ಪ್ರಾತಃಸ್ಮರಣೀಯರಾದ ಕಲಬುರ್ಗಿಯವರ ‘ಮಾರ್ಗ’, ಎಚ್.ಎಸ್. ಶಿವಪ್ರಕಾಶರ ‘ಮಹಾಚೈತ್ರ’, ಯೋಗೀಶ್ ಮಾಸ್ಟರ್ ಅವರ ‘ದುಂಡಿ’ ಇತ್ಯಾದಿ ಪುಸ್ತಕಗಳು ನಿಷೇಧಕ್ಕೆ ಸಿಲುಕಿವೆ. ಇಂಥ ನಿಷೇಧವನ್ನು ವಿರೋಧಿಸಿ, ಪ್ರತಿಭಟನೆ ನಡೆದಿದೆ; ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ.
ಇತಿಹಾಸದ ಮೇಲಿನ ದಾಳಿ
2019ರ ಬಳಿಕ ರಾಜ್ಯದಲ್ಲಿ ಸೆನ್ಸಾರ್‌ಶಿಪ್ ಮತ್ತು ಕಣ್ಗಾವಲು ತೀವ್ರಗೊಂಡಿರುವ ಹೊತ್ತಿನಲ್ಲೇ ಈ ನಿಷೇಧ ಬಂದಿರುವುದು ಆಶ್ಚರ್ಯವೇನಲ್ಲ. ಆರು ವರ್ಷಗಳ ಹಿಂದೆ ಕಾಶ್ಮೀರದ ಅರೆ ಸ್ವಾಯತ್ತ ಸ್ಥಾನಮಾನವನ್ನು ರದ್ದುಗೊಳಿಸಿದಾಗಿನಿಂದ, ದಮನಕಾರಿ ಕ್ರಮಗಳು ಹೆಚ್ಚಿವೆ. ದಾಲ್ ಸರೋವರದ ದಡದಲ್ಲಿ ಸರಕಾರಿ ಪ್ರಾಯೋಜಿತ ಚಿನಾರ್ ಪುಸ್ತಕ ಉತ್ಸವ ನಡೆಯುತ್ತಿದ್ದಾಗಲೇ ಶ್ರೀನಗರದಲ್ಲಿ ಹಲವು ಪುಸ್ತಕ ಮಳಿಗೆಗಳ ಮೇಲೆ ಪೊಲೀಸ್ ದಾಳಿ ನಡೆಯಿತು. ಪುಸ್ತಕ ನಿಷೇಧವು ವಿವಾದಿತ ಪ್ರದೇಶದಲ್ಲಿನ ಶೈಕ್ಷಣಿಕ ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ಹೊಸದಿಲ್ಲಿ ನಡೆಸಿದ ಪ್ರಯತ್ನ ಎಂಬ ಆರೋಪ ದಟ್ಟವಾಗಿದೆ. ಈ ಪುಸ್ತಕಗಳ ನಿಷೇಧದ ಮೂಲಕ ಇತಿಹಾಸದ ಅಳಿಸುವಿಕೆ ನಡೆದಿದೆ.
ಕಾಶ್ಮೀರ ವಿವಾದ 1947ಕ್ಕೂ ಹಿಂದಿನದು; ಬ್ರಿಟಿಷರು ಭಾರತೀಯ ಉಪಖಂಡವನ್ನು ಭಾರತ ಮತ್ತು ಪಾಕಿಸ್ತಾನ ಎಂದು ವಿಭಜಿಸಿದರು. ಆದರೆ, ಕಾಶ್ಮೀರಿಗಳಿಗೆ ಏನು ಬೇಕು ಎಂದು ಯಾರೂ ಕೇಳಲಿಲ್ಲ. ದಿಲ್ಲಿಯಿಂದ ಹೇರಲ್ಪಡುತ್ತಿದ್ದ ಆಡಳಿತದ ವಿರುದ್ಧದ ಅಸಮಾಧಾನ ಹೆಚ್ಚುತ್ತ ಹೋಯಿತು. 1989ರಲ್ಲಿ ಚುನಾವಣಾ ಫಿಕ್ಸಿಂಗ್ ಆರೋಪಕ್ಕೆ ಪ್ರತಿಕ್ರಿಯೆಯಾಗಿ ಸಶಸ್ತ್ರ ದಂಗೆ ಸ್ಫೋಟಗೊಂಡಿತು.
ರಾಜ್ಯದಲ್ಲಿ ಸೆನ್ಸರ್‌ಶಿಪ್ ಮತ್ತು ಮಾಹಿತಿ ನಿಯಂತ್ರಣದ ದೀರ್ಘ ಇತಿಹಾಸವಿದೆ. 2010ರಲ್ಲಿ ವಿದ್ಯಾರ್ಥಿ ತುಫೈಲ್ ಮಟ್ಟೂ(17) ಅವರನ್ನು ಭದ್ರತಾ ಪಡೆಗಳು ಹತ್ಯೆಗೈದ ಬಳಿಕ ಭಾರೀ ಪ್ರಮಾಣದ ಪ್ರತಿಭಟನೆಗಳು ಭುಗಿಲೆದ್ದವು. ಸರಕಾರ ಅಂತರ್ಜಾಲ ಸೇವೆಯನ್ನು ನಿರ್ಬಂಧಿಸಿತು; ಮೂರು ವರ್ಷಗಳ ನಂತರ ಅವುಗಳನ್ನು ಪುನಃಸ್ಥಾಪಿಸಿತು. 2019ರಲ್ಲಿ ನಾಗರಿಕ ದಂಗೆ ಉತ್ತುಂಗದಲ್ಲಿದ್ದಾಗ ಶ್ರೀನಗರದ ‘ಕಾಶ್ಮೀರ್ ರೀಡರ್’ನ್ನು ‘ಹಿಂಸಾಚಾರಕ್ಕೆ ಪ್ರಚೋದನೆ’ಯ ಕಾರಣ ನೀಡಿ ಮುದ್ರಣಕ್ಕೆ ಹೋಗುವುದನ್ನು ನಿಲ್ಲಿಸಿತು. ಪತ್ರಿಕೆಗಳು ಮತ್ತು ಸಂವಹನದ ಮೇಲಿನ ನಿಷೇಧವಲ್ಲದೆ, ಹಲವು ಪತ್ರಕರ್ತರನ್ನು ಬಂಧಿಸಲಾಗಿದೆ. ವಿಧಿ 370ನ್ನು ಆಗಸ್ಟ್ 5, 2019ರಂದು ಹಿಂಪಡೆದು, ಜಮ್ಮು-ಕಾಶ್ಮೀರ ಹಾಗೂ ಲಡಾಖ್‌ನ್ನು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ವಾಗಿ ವಿಭಾಗಿಸಲಾಯಿತು. ನಂತರ 2024ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ 3 ಮತ್ತು ಕಾಂಗ್ರೆಸ್ 2 ಸ್ಥಾನ ಗಳಿಸಿದವು. ಅಕ್ಟೋಬರ್ 2024ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಉಮರ್ ಅಬ್ದುಲ್ಲಾ ನೇತೃತ್ವದ ನ್ಯಾಷನಲ್ ಕಾನ್ಫರೆನ್ಸ್ ಬಹುಮತ ಪಡೆಯಿತು(42 ಸ್ಥಾನ). ಆದರೆ, ಜನರಿಂದ ಆಯ್ಕೆಯಾದ ಸರಕಾರವೇ ಪುಸ್ತಕಗಳ ನಿಷೇಧಕ್ಕೆ ಮುಂದಾಯಿತು!
ಈ ಪುಸ್ತಕಗಳು ಕಾಶ್ಮೀರದ ಯುವಕರನ್ನು ದಾರಿ ತಪ್ಪಿಸುತ್ತಿವೆ ಮತ್ತು ‘ಹಿಂಸೆ ಮತ್ತು ಭಯೋತ್ಪಾದನೆಯಲ್ಲಿ ಭಾಗವಹಿಸುವಂತೆ ಪ್ರಚೋದಿಸುತ್ತಿವೆ’ ಎಂದು ಸರಕಾರ ದೂರಿದೆ. ‘ಈ ಕೃತಿಗಳು ರಾಜ್ಯದ ಲೋಪದೋಷ, ಬಲಿಪಶು ಪ್ರವೃತ್ತಿ ಮತ್ತು ಭಯೋತ್ಪಾದಕತೆಯನ್ನು ವೈಭವೀಕರಿಸುವ ಮೂಲಕ ಯುವಕರ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರುತ್ತವೆ’ ಎಂದು ಆದೇಶ ಹೇಳುತ್ತದೆ.
ನಿಷೇಧಿಸಿದ ಬಹುತೇಕ ಪುಸ್ತಕಗಳು ದೇಶ ವಿಭಜನೆ ಸುತ್ತಲಿನ ಘಟನೆಗಳು ಮತ್ತು ಕಾಶ್ಮೀರ ಸಮಸ್ಯೆ ವಿವಾದವಾಗಿ ಪರಿಣಮಿಸಲು ಕಾರಣಗಳ ವಿಸ್ತೃತ ಅವಲೋಕನವನ್ನು ನೀಡುತ್ತವೆ. ಬೂಕರ್ ಪ್ರಶಸ್ತಿ ವಿಜೇತೆ ಅರುಂಧತಿ ರಾಯ್ ಅವರ ‘ಆಝಾದಿ’, ಪಿಯೋಟ್ರ್ ಬಾಲ್ಸೆರೋವಿಚ್ ಮತ್ತು ಅಗ್ನಿಸ್ಕಾ ಕುಸ್ಜೆವ್ಸ್ಕಾ ಅವರ ‘ಹ್ಯೂಮನ್ ರೈಟ್ಸ್ ವಯಲೇಷನ್ಸ್ ಇನ್ ಕಾಶ್ಮೀರ್’, ಮುಹಮ್ಮದ್ ಯೂಸುಫ್ ಸರಾಫ್ ಅವರ ‘ಕಾಶ್ಮೀರೀಸ್ ಫೈಟ್ ಫಾರ್ ಫ್ರೀಡಂ’, ಅಬ್ದುಲ್ ಗೋಖಾಮಿ ಜಬ್ಬಾರ್ ಅವರ ‘ಕಾಶ್ಮೀರ್ ಪಾಲಿಟಿಕ್ಸ್ ಆಂಡ್ ಪ್ಲೆಬಿಸೈಟ್’, ಹಫ್ಸಾ ಕಾಂಜ್ವಾಲ್ ಅವರ ‘ಕಲೋನೈಸಿಂಗ್ ಕಾಶ್ಮೀರ್: ಸ್ಟೇಟ್ ಬಿಲ್ಡಿಂಗ್ ಅಂಡರ್ ಇಂಡಿಯನ್ ಆಕ್ಯುಪೇಶನ್’ ಮತ್ತು ಎಸ್ಸಾರ್ ಬಟೂಲ್ ಅವರ ‘ಡು ಯು ರಿಮೆಂಬರ್ ಕುನನ್ ಪೋಶ್ಪೋರಾ?’ ಕೃತಿಗಳು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ/ಹತ್ಯೆ ಮತ್ತು ಸರಕಾರ ನೀಡಿದ ಭರವಸೆಗಳನ್ನು ಈಡೇರಿಸದ ಕುರಿತ ಪುಸ್ತಕಗಳಾಗಿವೆ. ಪತ್ರಕರ್ತೆ ಅನುರಾಧಾ ಭಾಸಿನ್ ಅವರ ‘ಎ ಡಿಸ್ಮ್ಯಾಂಟಲ್ಡ್ ಸ್ಟೇಟ್: ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಕಾಶ್ಮೀರ್ ಆಫ್ಟರ್ ಆರ್ಟಿಕಲ್ 370’ ಮತ್ತು ಸಂವಿಧಾನ ತಜ್ಞ ಎ.ಜಿ. ನೂರಾನಿ ಅವರ ‘ದಿ ಕಾಶ್ಮೀರ್ ಡಿಸ್ಪ್ಯೂಟ್ 1947-2012’ ಈ ಪ್ರದೇಶದ ದಶಕಗಳ ರಾಜಕೀಯ ಪ್ರಯಾಣವನ್ನು ವಿಶ್ಲೇಷಿಸುತ್ತವೆ.
ಹಫ್ಸಾ ಕಾಂಜ್ವಾಲ್ ಅವರ ‘ಕಲೊನೈಸಿಂಗ್ ಕಾಶ್ಮೀರ್-ಸ್ಟೇಟ್ ಬಿಲ್ಡಿಂಗ್ ಅಂಡರ್ ಇಂಡಿಯನ್ ಆಕ್ಯುಪೇಷನ್’ ಪುಸ್ತಕವು ಭಾರತ ಸರಕಾರವು ಕಾಶ್ಮೀರದ ಮೇಲೆ ತನ್ನ ನಿಯಂತ್ರಣವನ್ನು ಬಲ ಪಡಿಸಿದ ವಿಧಾನಗಳ ಮೇಲೆ ಬೆಳಕು ಚೆಲ್ಲುತ್ತದೆ. ಕಾಶ್ಮೀರಕ್ಕೆ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದ ಶೇಕ್ ಅಬ್ದುಲ್ಲಾ ಅವರ ವಜಾ ಮತ್ತು ಅವರ ಸ್ಥಾನಕ್ಕೆ ಬಕ್ಷಿ ಗುಲಾಮ್ ಮುಹಮ್ಮದ್ ನೇಮಕ ಮತ್ತು ಬಕ್ಷಿ ಅವರ 10 ವರ್ಷಗಳ ಅಧಿಕಾರಾವಧಿಯಲ್ಲಿ ಕಾಶ್ಮೀರದ ಮೇಲೆ ಹೊಸದಿಲ್ಲಿಯ ಹಿಡಿತ ಬಲಗೊಂಡಿತು ಎಂದು ಪುಸ್ತಕ ಹೇಳುತ್ತದೆ. ಈ ಪುಸ್ತಕ 2025ರ ಬರ್ನಾರ್ಡ್ ಕೋನ್ ಪುಸ್ತಕ ಪ್ರಶಸ್ತಿಗೆ ಪಾತ್ರವಾಗಿದೆ.
‘‘ಪತ್ರಕರ್ತರ ಬಾಯಿ ಮುಚ್ಚಿಸಿದ ಬಳಿಕ ಶೈಕ್ಷಣಿಕ ಕ್ಷೇತ್ರದತ್ತ ಗಮನ ಹರಿಸಿದ್ದಾರೆ’’ ಎಂದು ಜಮ್ಮು ಮತ್ತು ಕಾಶ್ಮೀರದ ಅತ್ಯಂತ ಹಳೆಯ ಇಂಗ್ಲಿಷ್ ದಿನಪತ್ರಿಕೆ ‘ಕಾಶ್ಮೀರ್ ಟೈಮ್ಸ್’ನ ಕಾರ್ಯನಿರ್ವಾಹಕ ಸಂಪಾದಕಿ ಅನುರಾಧಾ ಭಾಸಿನ್ ಹೇಳುತ್ತಾರೆ. ‘ನಮ್ಮ ಪುಸ್ತಕ ಭಯೋತ್ಪಾದನೆಯನ್ನು ವೈಭವೀಕರಿಸುವುದಿಲ್ಲ; ಆದರೆ, ರಾಜ್ಯವನ್ನು ಟೀಕಿಸುತ್ತದೆ. ಈ ಎರಡರ ನಡುವೆ ವ್ಯತ್ಯಾಸವಿದೆ. ಇಂಥ ನಿಷೇಧಗಳು ದೂರಗಾಮಿ ಪರಿಣಾಮ ಬೀರುತ್ತವೆ. ಕಾಶ್ಮೀರ ಕುರಿತು ಏನನ್ನಾದರೂ ಮುದ್ರಿಸುವ ಮೊದಲು ಪ್ರಕಾಶಕರು ಎರಡು ಬಾರಿ ಯೋಚಿಸುತ್ತಾರೆ. ನನ್ನ ಪುಸ್ತಕ ಮುದ್ರಣಕ್ಕೆ ಹೋಗುವ ಮುನ್ನ ಕಾನೂನು ತಂಡವು ಅದನ್ನು ಮೂರು ಬಾರಿ ಪರಿಶೀಲಿಸಿತು’’ ಎಂದು ಹೇಳುತ್ತಾರೆ.
‘ಕಾಶ್ಮೀರ್ ಅಟ್ ದಿ ಕ್ರಾಸ್‌ರೋಡ್ಸ್’ ಪುಸ್ತಕದ ಲೇಖಕ, ಇತಿಹಾಸಕಾರ ಸುಮಂತ್ರ ಬೋಸ್, ಇಂಡಿಯನ್ ನ್ಯಾಷನಲ್ ಆರ್ಮಿಯ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮೊಮ್ಮಗ. ಅವರು 1993 ರಿಂದ ಈ ಪ್ರದೇಶದಲ್ಲಿ ಶಾಶ್ವತ ಶಾಂತಿಗೆ ಮಾರ್ಗಗಳನ್ನು ರೂಪಿಸಲು ಪ್ರಯತ್ನಿಸುತ್ತಿದ್ದಾರೆ. ಸುಭಾಷ್ ಚಂದ್ರ ಬೋಸ್ ಅವರ ಪುಸ್ತಕ ‘ದಿ ಇಂಡಿಯನ್ ಸ್ಟ್ರಗಲ್, 1920-1934’ನ್ನು ಬ್ರಿಟಿಷ್ ವಸಾಹತುಶಾಹಿ ಅಧಿಕಾರಿಗಳು ನಿಷೇಧಿಸಿದ್ದರು. ಚಕ್ರ ಒಂದು ಸುತ್ತು ಬಂದಂತೆ ಆಗಿದೆ!
ಪುಸ್ತಕಗಳ ಮೇಲೆ ಹಗೆ ಏಕೆ?
ರಾಜ್ಯ ಇಲ್ಲವೇ ಅಧಿಕಾರ ಕೇಂದ್ರವೊಂದಕ್ಕೆ ತಾನು ಎಲ್ಲ ಕಾಲವೂ, ಎಲ್ಲರ ಬಾಯಿಯನ್ನೂ ಮುಚ್ಚಿಸುವುದು ಸಾಧ್ಯವಿಲ್ಲ ಎನ್ನುವುದು ಗೊತ್ತಿರುತ್ತದೆ. ಹೀಗಾಗಿ ಅದು ಭಿನ್ನ ಧ್ವನಿಗಳ ಬಾಯಿ ಮುಚ್ಚಿಸುವ ಮೂಲಕ ಹೆದರಿಸುತ್ತದೆ. ಭಯ ಎನ್ನುವುದು ನಿಧಾನವಾಗಿ, ಸೋಂಕಿನಂತೆ ಹರಡುವಂಥದ್ದು. ಒಬ್ಬರನ್ನು ಬೆದರಿಸಿದರೆ, ಇನ್ನಷ್ಟು ಮಂದಿ ಬೆದರುತ್ತಾರೆ. ಇದರ ಮುಂದುವರಿದ ಭಾಗವೇ ಪುಸ್ತಕಗಳ ಮೇಲೆ ಹಲ್ಲೆ; ಅವುಗಳಲ್ಲಿರುವ ಪರಿಕಲ್ಪನೆ-ಚಿಂತನೆಗಳಿಗೆ ಬೆದರುತ್ತಾರೆ. ಚಿಂತನೆಗಳು ಈಗಾಗಲೇ ಜಗತ್ತಿನಲ್ಲಿ ಇರುವಂಥವು; ಅವುಗಳ ನಿಷೇಧ ಸಾಧ್ಯವಿಲ್ಲ. ಆದರೆ, ಚಿಂತನೆಗಳನ್ನು ಒಳಗೊಂಡಿರುವ ಪುಸ್ತಕಗಳು ಕೈಗೆ ಎಟಕುವಂತೆ ಇರುತ್ತವೆ. ಕಪಾಟಿನಲ್ಲಿ ಕುಳಿತು ದಿಟ್ಟಿಸುತ್ತವೆ; ಎಲ್ಲೋ ಮೂಲೆಯಲ್ಲಿ ಕಾಣದಂತೆ ಇದ್ದು, ದಿಢೀರನೆ ಪ್ರತ್ಯಕ್ಷವಾಗುತ್ತವೆ; ಅವುಗಳ ಭೌತಿಕ ಇರುವು ಆಳುವವರಿಗೆ ಸಮಸ್ಯೆ ಆಗುತ್ತದೆ. ಇದರಿಂದ, ನಿಷೇಧದ ಹೊಡೆತ ಬೀಳುತ್ತದೆ. ಆದರೆ, ಪುಸ್ತಕ ನಿಷೇಧದ ಮೂಲಕ ಇತಿಹಾಸದ ಹೆಜ್ಜೆಗಳನ್ನು, ಕರಾಳತೆ-ದಮನವನ್ನು ಅಳಿಸಿಹಾಕಲು ಸಾಧ್ಯವಿಲ್ಲ ಎನ್ನುವುದು ಅರ್ಥವಾಗಬೇಕಿದೆ.
ವಾಸ್ತವವೇನೆಂದರೆ, ಡಿಜಿಟಲ್ ಯುಗದಲ್ಲಿ ಪುಸ್ತಕಗಳ ನಿಷೇಧ ಅಸಂಗತ ಮತ್ತು ಅವಾಸ್ತವಿಕ. ಪುಸ್ತಕದ ಪದಗಳು ಆನ್‌ಲೈನ್‌ನಲ್ಲಿ ‘0’ ಮತ್ತು ‘1’ ರೂಪದಲ್ಲಿ ಎಲ್ಲೆಡೆ ಹರಡಿಬಿಟ್ಟಿರುತ್ತವೆ. ಎಕೋ ಹೇಳಿದಂತೆ, ಕಾಲ, ಸೆನ್ಸರ್‌ಶಿಪ್ ಹಾಗೂ ಅಧಿಕಾರ ಬಲವನ್ನು ಮೀರಿ ಉಳಿದುಕೊಳ್ಳುತ್ತವೆ; ಅಕ್ಕರಕ್ಕೆ ಸಾವಿಲ್ಲ; ಅಧಿಕಾರಸ್ಥರ ಹೂಟಗಳಿಗೆ ಅದು ಮಣಿಯುವುದಿಲ್ಲ.