Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಬಹುವಚನ
  5. ಸುಳ್ಳು ಸುದ್ದಿ ತಡೆಗೆ ರೂಪಿಸಿದ...

ಸುಳ್ಳು ಸುದ್ದಿ ತಡೆಗೆ ರೂಪಿಸಿದ ಬ್ರಹ್ಮಾಸ್ತ್ರದಿಂದಲೇ ಗಂಡಾಂತರ

ಮಾಧವ ಐತಾಳ್ಮಾಧವ ಐತಾಳ್25 July 2025 11:09 AM IST
share
ಸುಳ್ಳು ಸುದ್ದಿ ತಡೆಗೆ ರೂಪಿಸಿದ ಬ್ರಹ್ಮಾಸ್ತ್ರದಿಂದಲೇ ಗಂಡಾಂತರ
ಯಾವುದೇ ಸರಕಾರ ಪ್ರಶ್ನಿಸುವವರ ಉಸಿರು ಕಟ್ಟಿಸಲು ಮುಂದಾಗಬಾರದು. ತುರ್ತು ಪರಿಸ್ಥಿತಿಯ 50ನೇ ವಾರ್ಷಿಕೋತ್ಸವದ ಆಚರಣೆ ನಡೆದು ಕೆಲ ದಿನಗಳಷ್ಟೇ ಆಗಿದೆ. ಆಗ ಸೆರೆವಾಸ ಅನುಭವಿಸಿದ್ದ ಬಿಜೆಪಿ ಮುಖಂಡರು, ಈಗ ಅಕ್ರಮ ಚಟುವಟಿಕೆ (ತಡೆ) ಕಾಯ್ದೆ, ಯುಎಪಿಎ ಹಾಗೂ ಹಣ ವರ್ಗಾವಣೆ ತಡೆ ಕಾಯ್ದೆ, ಪಿಎಂಎಲ್‌ಎ ಮೂಲಕ ಪ್ರತಿಪಕ್ಷಗಳು/ಅಭಿಪ್ರಾಯಭೇದ ಇರುವವರನ್ನು ಅಟ್ಟಾಡಿಸುತ್ತಿದ್ದಾರೆ. ಕಾಂಗ್ರೆಸ್ ಈ ಕಾನೂನುಗಳ ಜನಕ; ಬಿಜೆಪಿ ಅವನ್ನು ಆಯುಧವಾಗಿ ಪರಿವರ್ತಿಸಿದೆ, ಅಷ್ಟೆ.

ತಪ್ಪು ಮಾಹಿತಿ-ಸುಳ್ಳು ಸುದ್ದಿಯನ್ನು ತಡೆಯುವ ಉದ್ದೇಶವುಳ್ಳ ಕರ್ನಾಟಕ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿ(ತಡೆ) ಕಾಯ್ದೆ- ಕೆಎಂಎಫ್‌ಎನ್‌ಪಿ ಕರಡು ಸಿದ್ಧವಾಗಿದೆ. ಈ ಕಾಯ್ದೆಯು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸುಳ್ಳು ಸುದ್ದಿ ಹರಡುವವರಿಗೆ ಗರಿಷ್ಠ 7 ವರ್ಷ ಸೆರೆವಾಸ ಮತ್ತು 10 ಲಕ್ಷ ರೂ. ದಂಡ ವಿಧಿಸಲಿದೆ. ಕಾಂಗ್ರೆಸ್ ತನ್ನ 2024ರ ಚುನಾವಣೆ ಪ್ರಣಾಳಿಕೆಯಲ್ಲಿ ಮುಕ್ತ ಅಭಿವ್ಯಕ್ತಿಯನ್ನು ಹತ್ತಿಕ್ಕುವ ಕಾನೂನುಗಳನ್ನು ಹಿಂಪಡೆದು, ಸ್ವತಂತ್ರ ಹಾಗೂ ಅನಿರ್ಬಂಧಿತ ಮಾಧ್ಯಮವನ್ನು ಬೆಂಬಲಿಸುವುದಾಗಿ ಹೇಳಿಕೊಂಡಿತ್ತು. ಆದರೆ, ತದ್ವಿರುದ್ಧವಾಗಿ ನಡೆದು, ಮುಕ್ತ ಸಂವಾದಕ್ಕೆ ನಿಷೇಧ ಹಾಗೂ ದಂಡ ವಿಧಿಸಲು ಮುಂದಾಗಿದೆ.

ಕೆಎಂಎಫ್‌ಎನ್‌ಪಿ ಮಸೂದೆ ಕರಡಿನ ಪ್ರಕಾರ, ಗೊತ್ತಿದ್ದೂ ಇಲ್ಲವೇ ಅಜಾಗರೂಕತೆಯಿಂದ ನೀಡಿದ ಹೇಳಿಕೆಯೇ ತಪ್ಪು ಮಾಹಿತಿ; ಸುಳ್ಳು ಸುದ್ದಿ ಎಂದರೆ ತಿರುಚಿದ ಹೇಳಿಕೆ ಮತ್ತು ತಿದ್ದಿದ ಚಿತ್ರಗಳು. ಸ್ತ್ರೀ ವಿರೋಧ ಹಾಗೂ ಸನಾತನ ಚಿಹ್ನೆಗಳಿಗೆ ಅಗೌರವ ತೋರಿಸುವ ಹೇಳಿಕೆ-ವಿಷಯ ನಿಷೇಧಿತ. ಇದಕ್ಕಾಗಿ ಕನ್ನಡ-ಸಂಸ್ಕೃತಿ ಸಚಿವರ ಅಧ್ಯಕ್ಷತೆಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿಗಳ ನಿಯಂತ್ರಣ ಪ್ರಾಧಿಕಾರವನ್ನು ರಚಿಸಲಿದ್ದು, ಇದರಲ್ಲಿ ಇಬ್ಬರು ಶಾಸಕರು(ವಿಧಾನಸಭೆ ಮತ್ತು ವಿಧಾನಪರಿಷತ್ತಿನಿಂದ ತಲಾ ಒಬ್ಬರು), ಸಾಮಾಜಿಕ ಮಾಧ್ಯಮ ವೇದಿಕೆಗಳ ಇಬ್ಬರು ಪ್ರತಿನಿಧಿಗಳು ಹಾಗೂ ಇಬ್ಬರು ಐಎಎಸ್ ಅಧಿಕಾರಿ ಇರುತ್ತಾರೆ. ಈ ಪ್ರಕರಣಗಳ ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯಗಳನ್ನು ರಚಿಸಲಾಗುತ್ತದೆ. ಇವು ಸಂಜ್ಞೇಯ(ಕಾಗ್ನಿಸಬಲ್) ಅಪರಾಧ ಹಾಗೂ ಜಾಮೀನು ನೀಡಲಾಗದ ಪ್ರಕರಣಗಳ ವಿಚಾರಣೆ ನಡೆಸಲಿವೆ. ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸದೆ ಇದ್ದರೆ, 2 ವರ್ಷ ಸೆರೆವಾಸ ಮತ್ತು ದಿನವೊಂದಕ್ಕೆ 25,000 ರೂ. ದಂಡ ವಿಧಿಸಲಾಗುತ್ತದೆ. 2023ರ ಸ್ಟೇಟಸ್ ಆಫ್ ಪೊಲೀಸಿಂಗ್ ವರದಿ ಪ್ರಕಾರ, ಕಾನೂನು ಪ್ರತಿಕೂಲ ಕ್ರಮದ ಭಯದಿಂದ ಮೂವರಲ್ಲಿ ಇಬ್ಬರು ಆನ್‌ಲೈನ್‌ನಲ್ಲಿ ರಾಜಕೀಯ/ಸಾಮಾಜಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಭಯಪಡುತ್ತಾರೆ. ಬಿಜೆಪಿ ಆಡಳಿತವಿರುವ ಹರ್ಯಾಣ ಮತ್ತು ರಾಜಸ್ಥಾನದಲ್ಲಿ ಟ್ವೀಟ್ ಇಲ್ಲವೇ ಸಂದೇಶವೊಂದನ್ನು ಮುಂದೆ ರವಾನಿಸುವುದರಿಂದ ಸಂಭವಿಸಬಹುದಾದ ಕಾನೂನು ಕ್ರಮಗಳಿಂದ ಭಯಭೀತರಾಗಿದ್ದೇವೆ ಎಂದು 1/3ರಷ್ಟು ಮಂದಿ ಹೇಳಿದ್ದರು. ಸಾರ್ವಜನಿಕ ಸಂವಾದದಲ್ಲಿ ನೆಲೆಗೊಂಡಿರುವ ತೀವ್ರ ಆತಂಕವನ್ನು ಇದು ತೋರಿಸುತ್ತದೆ. ಕರ್ನಾಟಕ ಇಂಥ ರಾಜ್ಯಗಳ ಪಟ್ಟಿಗೆ ಸೇರಲು ಹೊರಟಿದೆಯೇ?

ಮಹಿಳೆಯರ ನಿಂದನೆ ಅಥವಾ ಅಶ್ಲೀಲ ಪೋಸ್ಟ್‌ಗಳು, ಸನಾತನ ಚಿನ್ಹೆಗಳ ವಿರುದ್ಧ ಹಗುರ ಮಾತುಗಳು ಶಿಕ್ಷಾರ್ಹ. ಆದರೆ, ಸ್ತ್ರೀ ವಿರೋಧ ಎಂದರೇನು? ಸನಾತನ ಎಂದು ಕರೆಯಬಹುದಾದ ಚಿಹ್ನೆಗಳೇನು? ಎಂಬ ಕುರಿತು ಸ್ಪಷ್ಟ ವಿವರಣೆಯಿಲ್ಲ. ವಿಜ್ಞಾನ, ಚರಿತ್ರೆ, ಧರ್ಮ, ತತ್ವಜ್ಞಾನ, ಸಾಹಿತ್ಯ ಇತ್ಯಾದಿ ವಿಷಯಗಳ ಪ್ರಕಟಣೆಗೆ ಮುನ್ನ ಅವು ಸಂಶೋಧನೆಯನ್ನು ಆಧರಿಸಿವೆಯೇ ಎಂಬುದನ್ನು ಪ್ರಾಧಿಕಾರ ಖಾತ್ರಿಪಡಿಸಿಕೊಳ್ಳಬೇಕು. ಶ್ರೇಯಾ ಸಿಂಘಾಲ್ v/s ಭಾರತ ಸರಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಕ್ರಿಮಿನಲ್ ಕಾಯ್ದೆಗಳಲ್ಲಿ ಇರುವ ಇಂಥ ವಿವರಣೆ ಇಲ್ಲದ ಅಸ್ಪಷ್ಟ ಪದಗಳು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರಲಿವೆ ಎಂದು ಹೇಳಿತ್ತು. ಅಪರಾಧ ಸಾಬೀತಾದಲ್ಲಿ ತಪ್ಪು ಮಾಹಿತಿ-ಸುಳ್ಳು ಸುದ್ದಿ ಹರಡುವವರಿಗೆ ವಿಧಿಸುವ 7 ವರ್ಷ ಸೆರೆವಾಸ ಮತ್ತು 10 ಲಕ್ಷ ರೂ. ದಂಡ ಅತಿ ಹೆಚ್ಚು: ತೀವ್ರ ಹಿಂಸಾಕೃತ್ಯಕ್ಕೆ ವಿಧಿಸುವ ಶಿಕ್ಷೆಗಿಂತ ಅಧಿಕ. ಇಂಥ ಪ್ರಕರಣಗಳ ವಿಚಾರಣೆ ನಡೆಸುವ ನ್ಯಾಯಾಧೀಶರಿಗೆ ಆರೋಪಿಯ ನಿರಪರಾಧಿತ್ವ ಹಾಗೂ ಭವಿಷ್ಯದಲ್ಲಿ ಆತನ ನಡವಳಿಕೆ ಸಮರ್ಪಕವಾಗಿರಲಿದೆ ಎಂದು ಅನ್ನಿಸದೆ ಇದ್ದಲ್ಲಿ, ಜಾಮೀನು ಗಗನಕುಸುಮ ಆಗಲಿದೆ. ಇಲ್ಲಿ ಪ್ರಕ್ರಿಯೆಯೇ ಶಿಕ್ಷೆಯಾಗಲಿದ್ದು, ನಿರಪರಾಧಿ ಎಂದು ಸಾಬೀತಾಗುವವರೆಗೆ ಸೆರೆವಾಸ ತಪ್ಪುವುದಿಲ್ಲ.

ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿದಂತೆ ಪೊಲೀಸರು ಹಾಗೂ ಸುಳ್ಳು ಸುದ್ದಿಗಳ ನಿಯಂತ್ರಣ ಪ್ರಾಧಿಕಾರ ದೂರು ನೀಡಬಹುದು. ಆದರೆ, ಪ್ರಾಧಿಕಾರದಲ್ಲಿ ಸ್ವತಂತ್ರ ಪರಿಣತರು, ನಾಗರಿಕ ಸಮಾಜದ ಸಂಸ್ಥೆಗಳು/ಕಾರ್ಯಕರ್ತರು, ಶಿಕ್ಷಣ ತಜ್ಞರು ಹಾಗೂ ಪತ್ರಕರ್ತರಿಗೆ ಸ್ಥಾನವಿಲ್ಲ. ಆರೋಪ ಸಾಬೀತಾದರೆ, ಆನ್‌ಲೈನ್‌ನಲ್ಲಿರುವ ಆಕ್ಷೇಪಾರ್ಹ ವಿಷಯಗಳನ್ನು ತೆಗೆದುಹಾಕಲು ಹೇಳಬಹುದು/ಬ್ಲಾಕ್ ಮಾಡಬಹುದು. ಇದು ನ್ಯಾಯಾಲಯಗಳ ಹಲವು ತೀರ್ಪುಗಳು ಮತ್ತು ಸಂವಿಧಾನ ಖಾತ್ರಿಪಡಿಸಿದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ. ಕುನಾಲ್ ಕಾಮ್ರಾ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್(ಸೆಪ್ಟಂಬರ್ 2024), ನಿಜಾಂಶ ಪತ್ತೆ ಘಟಕಗಳ ಸ್ಥಾಪನೆಯನ್ನು ವಿರೋಧಿಸಿತು; ‘ಕಾರ್ಯಾಂಗವು ತನ್ನನ್ನು ಸತ್ಯದ ಅಂತಿಮ ನ್ಯಾಯಾಧೀಶ ಎಂದು ತಾನೇ ನೇಮಿಸಿಕೊಳ್ಳಬಾರದು. ಸುಳ್ಳು, ತಪ್ಪು ಇಲ್ಲವೇ ತಪ್ಪು ದಾರಿಗೆಳೆಸುವ ಎಂಬ ಪದಗಳು ಅಸ್ಪಷ್ಟ; ಇವು ತಾರತಮ್ಯಕ್ಕೆ ಕಾರಣ ವಾಗುತ್ತವೆ ಮತ್ತು ಶಾಸನಬದ್ಧ ಸಂವಾದಕ್ಕೆ ತಡೆಯೊಡ್ಡುತ್ತವೆ’ ಎಂದು ಹೇಳಿತ್ತು.

ಅಧಿಕಾರಿಗಳು ನಂಬಿಕೆಗೆ ಅರ್ಹರೇ?

ಅಧಿಕಾರಿಗಳು ಸುಳ್ಳು ಮಾಹಿತಿಯನ್ನು ಸಕಾಲದಲ್ಲಿ ಗುರುತಿಸುತ್ತಾರೆ ಎಂದು ಮಸೂದೆ ಭಾವಿಸುತ್ತದೆ. ಪ್ರಾಧಿಕಾರ ಇಲ್ಲವೇ ನ್ಯಾಯಾಲಯಗಳು ನಿಜಾಂಶವನ್ನು ಹೇಗೆ ಪತ್ತೆ ಮಾಡುತ್ತವೆ ಮತ್ತು ಸುಳ್ಳು ಸುದ್ದಿಯನ್ನು ಹೇಗೆ ನಿಯಂತ್ರಿಸುತ್ತವೆ ಎಂಬುದಕ್ಕೆ ಸ್ಪಷ್ಟ ಕಾರ್ಯನೀತಿ ಇಲ್ಲವೇ ಮಾದರಿಯೊಂದು ಕರಡಿನಲ್ಲಿ ಇಲ್ಲ. ಪ್ರಾಧಿಕಾರದಲ್ಲಿ ಪರಿಣತ ನಿಜಾಂಶ ಪತ್ತೆದಾರರು ಇರುವರೇ ಅಥವಾ ಬಾಹ್ಯ ಪರಿಣತರನ್ನು ಬಳಸಿಕೊಳ್ಳಲಾಗುವುದೇ? ಗೊತ್ತಿಲ್ಲ. ಯಾವುದು ಸತ್ಯ ಅಥವಾ ಸುಳ್ಳು ಎಂಬುದನ್ನು ಅಧಿಕಾರಿಯೊಬ್ಬರು ನಿರ್ಧರಿಸುತ್ತಾರೆ. ಅಧಿಕಾರಶಾಹಿಯು ‘ಹೌದಣ್ಣ’ ಪ್ರವೃತ್ತಿ, ಭ್ರಷ್ಟಾಚಾರ ಮತ್ತು ಕೋಮುವಾದಕ್ಕೆ ಪಕ್ಕಾಗಿರುವ ಸಂದರ್ಭದಲ್ಲಿ ನಿಷ್ಪಕ್ಷ ನಿಲುವು ಸಾಧ್ಯವೇ? ಸಾರ್ವಜನಿಕರ ಹಿತರಕ್ಷಣೆಯ ನೆಪದಲ್ಲಿ ಕಾರ್ಯಾಂಗಕ್ಕೆ ಏಕಪಕ್ಷೀಯ ನಿರ್ಧಾರದ ಅಧಿಕಾರ ನೀಡಿ, ಸೆನ್ಸರ್‌ಶಿಪ್ ಮಾಡಲಾಗುತ್ತಿದೆ. ಕಾಯ್ದೆಯ ಹಲವು ಖಂಡಗಳನ್ನು ಖಾಸಗಿ ಸದಸ್ಯರೊಬ್ಬರು ಮಂಡಿಸಿದ ಸುಳ್ಳು ಸುದ್ದಿ(ತಡೆ) ಮಸೂದೆ 2019ರಿಂದ ತೆಗೆದುಕೊಳ್ಳಲಾಗಿದೆ.

ಇಂಥದ್ದೊಂದು ಕಾನೂನು ಬೇಕಿತ್ತಾ?

‘ಬಿಜೆಪಿಯ ಐಟಿ ಕೋಶವು ನಿರಂತರವಾಗಿ ಸುಳ್ಳುಗಳನ್ನು ಹರಡುತ್ತಿದೆ ಹಾಗೂ ಸತ್ಯವನ್ನು ಘನಘೋರವಾಗಿ ತಿರುಚುತ್ತಿದೆ. ಇದರಿಂದ, ಇಂಥ ಕಾನೂನಿನ ಅಗತ್ಯ ಇದೆ; ದ್ವೇಷ ಭಾಷಣವಲ್ಲದೆ, ಆನ್‌ಲೈನ್‌ನಲ್ಲಿ ಸುಳ್ಳಿನ ಸರಪಳಿ ಸೃಷ್ಟಿಯಾಗುತ್ತಿದೆ; ಅಲ್ಪಸಂಖ್ಯಾತರು ಹಾಗೂ ಪ್ರತಿಪಕ್ಷಗಳ ಮುಖಂಡರ ವಿರುದ್ಧ ನಿರಂತರ ದಾಳಿ ನಡೆಸುತ್ತಿದ್ದು, ತಡೆಯಲು ಇಂಥ ಕಾಯ್ದೆ ಅಗತ್ಯವಿತ್ತು’ ಎಂದು ವಾದಿಸ ಬಹುದು. ಆದರೆ, ಇಂಥ ಕಾನೂನು ಸಂವಿಧಾನ ಕೊಡಮಾಡಿದ ಹಕ್ಕುಗಳ ಹರಣ ಮಾಡಲಿದೆ.

ಆದರೆ, ಕಾನೂನನ್ನು ನ್ಯಾಯಾಂಗ ತಿರಸ್ಕೃರಿಸುವ ಸಾಧ್ಯತೆಯಿದೆ. ಶ್ರೇಯಾ ಸಿಂಘಾಲ್ v/s ಭಾರತ ಸರಕಾರ(ಮಾರ್ಚ್ 2015) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಸಂವಿಧಾನದ ವಿಧಿ 19(1)(ಎ) ಕೊಡಮಾಡಿದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಎಂದು ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿಧಿ 66ಎಯನ್ನು ಕಿತ್ತೆಸೆದಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿಧಿ 19(2) ವಿಧಿಸುವ ನಿರ್ದಿಷ್ಟ ನಿರ್ಬಂಧಗಳಾದ ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆ, ರಾಜ್ಯದ ಸುಭದ್ರತೆ, ವಿದೇಶಗಳೊಂದಿಗೆ ಸೌಹಾರ್ದ ಸಂಬಂಧ, ಸಾರ್ವಜನಿಕ ಸುವ್ಯವಸ್ಥೆ ಹಾಗೂ ಶಿಷ್ಟತೆ ಇಲ್ಲವೇ ನೈತಿಕತೆಗೆ ಧಕ್ಕೆ, ನ್ಯಾಯಾಂಗ ನಿಂದನೆ, ಮಾನನಷ್ಟ ಅಥವಾ ಅಪರಾಧಕ್ಕೆ ಎಳಸುವಂತಿದ್ದರೆ ಮಾತ್ರ ಅನ್ವಯಿಸುತ್ತದೆ. ಆದ್ದರಿಂದ, ಕಾಯ್ದೆಯು ನ್ಯಾಯಾಂಗದ ನಿಕಷದಿಂದ ತಪ್ಪಿಕೊಳ್ಳುವುದು ಕಷ್ಟ.

ಮಾರಿಕೊಂಡ ಮಾಧ್ಯಮಗಳು

ಮುಖ್ಯವಾಹಿನಿಯ ಬಹುತೇಕ ಮಾಧ್ಯಮಗಳು ಬಿಜೆಪಿಗೆ ಮಾರಿಕೊಂಡಿವೆ; ಕಾಂಗ್ರೆಸ್ ಸೇರಿದಂತೆ ಪಕ್ಷಾತೀತವಾಗಿ ಅಧಿಕಾರದಲ್ಲಿರುವ ಯಾವುದೇ ಪಕ್ಷಕ್ಕಾದರೂ ಮಾರಿಕೊಳ್ಳಬಹುದು. ಇದರಿಂದ ಸ್ವತಂತ್ರ ವ್ಯಕ್ತಿ-ಸಂಸ್ಥೆಗಳು ಸಾರ್ವಜನಿಕ ಮಾಧ್ಯಮ ವೇದಿಕೆಯಲ್ಲಿ ರೂಪಿಸುವ ನರೇಟಿವ್‌ಗಳು ಮುಖ್ಯವಾಗುತ್ತವೆ. ಸಾಮಾಜಿಕ ಮಾಧ್ಯಮಗಳು ಎರಡು ಅಲಗಿನ ಕತ್ತಿಯಂತೆ. ಸ್ವತಂತ್ರ ಪ್ರವೃತ್ತಿಯಿಂದಾಗಿ ಅಧಿಕಾರಕ್ಕೆ ಸತ್ಯ ಹೇಳುವ, ಅನ್ಯಾಯವನ್ನು ಬಯಲಿಗೆಳೆಯುವ, ರಾಜ್ಯದಿಂದ ಆಗುವ ಅಧಿಕಾರ ದುರುಪಯೋಗವನ್ನು ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳು/ಚುನಾವಣೆ ಪ್ರಕ್ರಿಯೆಗಳನ್ನು ಹಾಳುಗೆಡವುತ್ತಿರುವುದನ್ನು ಬಹಿರಂಗಗೊಳಿಸುತ್ತಿವೆ. ಆದರೆ, ಇದರ ಇನ್ನೊಂದು ಮುಖವು ವಿಷಪೂರಿತ ಅಸತ್ಯಗಳನ್ನು ಹರಡುತ್ತಿದ್ದು, ಜನರ ಬದುಕು ಹಾಗೂ ಘನತೆಗೆ ಮಸಿ ಬಳಿಯುತ್ತಿದೆ.

ಯಾವುದೇ ಸರಕಾರ ಪ್ರಶ್ನಿಸುವವರ ಉಸಿರು ಕಟ್ಟಿಸಲು ಮುಂದಾಗಬಾರದು. ತುರ್ತು ಪರಿಸ್ಥಿತಿಯ 50ನೇ ವಾರ್ಷಿಕೋತ್ಸವದ ಆಚರಣೆ ನಡೆದು ಕೆಲ ದಿನಗಳಷ್ಟೇ ಆಗಿದೆ. ಆಗ ಸೆರೆವಾಸ ಅನುಭವಿಸಿದ್ದ ಬಿಜೆಪಿ ಮುಖಂಡರು, ಈಗ ಅಕ್ರಮ ಚಟುವಟಿಕೆ (ತಡೆ) ಕಾಯ್ದೆ, ಯುಎಪಿಎ ಹಾಗೂ ಹಣ ವರ್ಗಾವಣೆ ತಡೆ ಕಾಯ್ದೆ, ಪಿಎಂಎಲ್‌ಎ ಮೂಲಕ ಪ್ರತಿಪಕ್ಷಗಳು/ಅಭಿಪ್ರಾಯಭೇದ ಇರುವವರನ್ನು ಅಟ್ಟಾಡಿಸುತ್ತಿದ್ದಾರೆ. ಕಾಂಗ್ರೆಸ್ ಈ ಕಾನೂನುಗಳ ಜನಕ; ಬಿಜೆಪಿ ಅವನ್ನು ಆಯುಧವಾಗಿ ಪರಿವರ್ತಿಸಿದೆ, ಅಷ್ಟೆ. ನಿರಂಕುಶಾಧಿಕಾರ ಪ್ರವೃತ್ತಿ ಹಾಗೂ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿ ನಡೆಸುವ ನಿರಂಕುಶ ಪ್ರಭುತ್ವ ಕೇವಲ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ಇದು ಎಲ್ಲ ರಾಜಕೀಯ ಪಕ್ಷಗಳಲ್ಲೂ ಕಂಡುಬರುವ ಪ್ರವೃತ್ತಿ. ಆದ್ದರಿಂದ ವ್ಯಾಪಕ ಖಂಡನೆಗೆ ಅರ್ಹ.

ಕೆಎಂಎಫ್‌ಎನ್‌ಪಿ ಮಸೂದೆ ಕರಡನ್ನು ಈ ಹಿನ್ನೆಲೆಯಲ್ಲಿ ನೋಡಬೇಕಾಗುತ್ತದೆ. ಕಳೆದ 2 ವರ್ಷದಿಂದ ಕರಡು ಸಿದ್ಧವಾಗುತ್ತಿತ್ತು; ಪಠ್ಯ ಸಾರ್ವಜನಿಕಗೊಂಡಿಲ್ಲ ಹಾಗೂ ಅಧಿಕಾರಿಗಳು ಕೂಡ ಕತ್ತಲೆಯಲ್ಲಿದ್ದಾರೆ. ಸುಳ್ಳು ಸುದ್ದಿ ಯಾವುದು- ಸತ್ಯ ಯಾವುದು ಎಂಬುದನ್ನು ನಿರ್ಧರಿಸುವ ಮಾನದಂಡಗಳನ್ನು ಸರಕಾರವೇ ರೂಪಿಸುತ್ತದೆ. ಕೇಂದ್ರ ಸರಕಾರವು ಐಟಿ ಕಾಯ್ದೆಯಡಿ ರಚಿಸಿದ ‘ಸತ್ಯಾಂಶ ಪತ್ತೆ ಘಟಕ’ಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು; ‘ರಾಜ್ಯವು ಸತ್ಯದ ಮಧ್ಯಸ್ಥಿಕೆದಾರನಲ್ಲ ಮತ್ತು ಅಭಿಪ್ರಾಯಭೇದವನ್ನು ಶಿಕ್ಷಿಸುವಂತಿಲ್ಲ; ಸುಳ್ಳು ಸುದ್ದಿ/ತಪ್ಪು ಮಾಹಿತಿಯನ್ನು ವ್ಯಾಖ್ಯಾನಿಸುವ ಅಧಿಕಾರವನ್ನು ಕಾರ್ಯಾಂಗಕ್ಕೆ ನೀಡುವುದು ಸೆನ್ಸರ್‌ಶಿಪ್‌ಗೆ ದಾರಿ ಮಾಡಿಕೊಡಲಿದೆ’ ಎಂದು ಬಾಂಬೆ ಹೈಕೋರ್ಟ್ ಸ್ಪಷ್ಟವಾಗಿ ಹೇಳಿತ್ತು. ‘ಗುಜರಾತ್ ಅಭಿವೃದ್ಧಿ ಮಾದರಿ’ ಎಂಬ ಭ್ರಮೆಯನ್ನು ಹಂಗಿಸುವ ಕಾಂಗ್ರೆಸ್‌ಗೆ ಆ ರಾಜ್ಯದಲ್ಲಿ ಮಾಧ್ಯಮಗಳ ಸ್ವಾತಂತ್ರ್ಯಹರಣ ಆಗಿರುವುದು ಕಾಣಿಸುವುದಿಲ್ಲವೇ?

1988ರಲ್ಲಿ ರಾಜೀವ್ ಗಾಂಧಿ ಅವರು ಮಾನನಷ್ಟ ಮಸೂದೆಯೊಂದನ್ನು ತರಲು ಮುಂದಾಗಿದ್ದರು; ಅದು ಮಾಧ್ಯಮಗಳ ಬಾಯನ್ನು ಮುಚ್ಚಲು ನಡೆಸಿದ ಪ್ರಯತ್ನವಾಗಿತ್ತು. ಆ ಮಸೂದೆಯನ್ನು ರೂಪಿಸಿದವರು ಸಿದ್ಧಾರ್ಥ ಶಂಕರ್ ರೇ. ಆನಂತರ ಮಸೂದೆಯನ್ನು ಹಿಂಪಡೆಯಲಾಯಿತು. ಅರುಣ್ ಶೌರಿ ಈ ಸಂಬಂಧ ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯಲ್ಲಿ ಬರೆದಿದ್ದ ಲೇಖನದಲ್ಲಿ ಕಥೆಯೊಂದನ್ನು ಹೇಳಿದ್ದರು-‘ಕಳ್ಳನೊಬ್ಬನ ಮೇಲಿನ ಆರೋಪ ಸಾಬೀತಾಗಿ ಆತನಿಗೆ ನೂರು ಏಟು ಇಲ್ಲವೇ ನೂರು ಈರುಳ್ಳಿ ತಿನ್ನುವ ಶಿಕ್ಷೆಯಲ್ಲಿ ಒಂದನ್ನು ಆಯ್ದುಕೊಳ್ಳಬೇಕೆಂದು ರಾಜ ಹೇಳುತ್ತಾನೆ. ಏಟಿಗೆ ಹೆದರಿದ ಕಳ್ಳ, ಈರುಳ್ಳಿ ತಿನ್ನುವುದಾಗಿ ಹೇಳುತ್ತಾನೆ. ಆದರೆ, 10 ಈರುಳ್ಳಿ ತಿನ್ನುವಷ್ಟರಲ್ಲಿ ಬಾಯಿ ಉರಿಯತೊಡಗುತ್ತದೆ; ಕಣ್ಣಿನಿಂದ ಧಾರಾಕಾರ ನೀರು ಸುರಿಯುತ್ತದೆ. ಇದರ ಬದಲು ಏಟು ತಿನ್ನುವುದೇ ಉತ್ತಮ ಎಂದುಕೊಂಡು ಕೇಳಿಕೊಳ್ಳುತ್ತಾನೆ. ಆದರೆ, 25 ಏಟು ತಿನ್ನುವಷ್ಟರಲ್ಲಿ ಸುಸ್ತಾಗಿ, ಈರುಳ್ಳಿ ತಿನ್ನುವುದೇ ಸೂಕ್ತ ಎಂದು ಈರುಳ್ಳಿ ತಿನ್ನಲು ಶುರು ಮಾಡುತ್ತಾನೆ. ಕೊನೆಗೆ, 100 ಈರುಳ್ಳಿ ಹಾಗೂ 100 ಏಟು ಎರಡನ್ನೂ ತಿನ್ನುತ್ತಾನೆ. ಇದು ರಾಜೀವ್ ಗಾಂಧಿ ಸ್ಥಿತಿ’ ಎಂದು ಶೌರಿ ವ್ಯಂಗ್ಯವಾಡಿದ್ದರು.

ಕಾಂಗ್ರೆಸ್ ನಾಯಕರಿಗೆ ಇದು ಬೇಕಿದೆಯೇ? ಸಂವಿಧಾನದಲ್ಲಿ ನಂಬಿಕೆ ಇದೆ ಎನ್ನುವ ಈ ಪಕ್ಷದ ಕಾನೂನುಗಳು ಆ ಚೈತನ್ಯವನ್ನು ಎತ್ತಿ ಹಿಡಿಯುವಂತೆ ಇರಬೇಕು. ನ್ಯಾಯಾಂಗದಲ್ಲಿ ಮುಖಭಂಗ ಅನುಭವಿಸುವುದಕ್ಕಿಂತ ಕಾಯ್ದೆ ವಾಪಸ್ ಪಡೆಯುವುದು ಸೂಕ್ತ. ಬದಲಾಗಿ, ಡಿಜಿಟಲ್ ಸಾಕ್ಷರತೆ ಅಭಿಯಾನದ ಮೂಲಕ ಸುಳ್ಳು ಸುದ್ದಿ-ತಪ್ಪು ಮಾಹಿತಿ ಬಗ್ಗೆ ಜಾಗೃತಿ ಮೂಡಿಸಬೇಕು. ಆಗ, ಹಿಂಸಾಚಾರಕ್ಕೆ ಎಳಸುವ ನರೇಟಿವ್‌ಗಳು ಮೊನಚು ಕಳೆದುಕೊಳ್ಳುತ್ತವೆ.

share
ಮಾಧವ ಐತಾಳ್
ಮಾಧವ ಐತಾಳ್
Next Story
X