Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಬಹುವಚನ
  5. ಭೌಗೋಳಿಕ ಮಾನ್ಯತೆ ಮತ್ತು ಕಲಾಪ್ರಕಾರಗಳ...

ಭೌಗೋಳಿಕ ಮಾನ್ಯತೆ ಮತ್ತು ಕಲಾಪ್ರಕಾರಗಳ ದುರ್ಬಳಕೆ ಸಮಸ್ಯೆ

ಮಾಧವ ಐತಾಳ್ಮಾಧವ ಐತಾಳ್12 Sept 2025 11:22 AM IST
share
ಭೌಗೋಳಿಕ ಮಾನ್ಯತೆ ಮತ್ತು ಕಲಾಪ್ರಕಾರಗಳ ದುರ್ಬಳಕೆ ಸಮಸ್ಯೆ

ಜಿಐ ಹಾಗೂ ಬೌದ್ಧಿಕ ಆಸ್ತಿ ಹಕ್ಕು ಕುರಿತು ಸರಕಾರ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ದೇಶಿ ಉತ್ಪನ್ನಗಳಿಗೆ ಜಾಗತಿಕ ಆಸಕ್ತಿ ಹೆಚ್ಚುತ್ತಿರುವುದರಿಂದ, ದೇಶವು ಲಿಸ್ಬನ್ ಸೇರಿದಂತೆ ಅಂತರ್‌ರಾಷ್ಟ್ರೀಯ ಒಪ್ಪಂದಗಳಿಗೆ ಸೇರ್ಪಡೆಯಾಗಬೇಕಿದೆ. ಸರಕಾರದ ‘ಒಂದು ಜಿಲ್ಲೆ ಒಂದು ಉತ್ಪನ್ನ’ ಯೋಜನೆಯನ್ನು ಜಿಐ ಉತ್ಪನ್ನಗಳೊಂದಿಗೆ ಏಕತ್ರಗೊಳಿಸಬೇಕು. ಜಿಐ ಉತ್ಪನ್ನಗಳ ಬ್ರಾಂಡಿಂಗ್-ಮಾರುಕಟ್ಟೆ ಆಗಬೇಕಿದೆ; ಪ್ರಯೋಗಾಲಯಗಳ ಮೂಲಕ ಉತ್ಪನ್ನಗಳ ಗುಣಮಟ್ಟವನ್ನು ಖಾತ್ರಿಪಡಿಸುವುದು, ಕೃಷಿ ಉತ್ಪನ್ನಗಳ ಆನ್‌ಲೈನ್ ವೇದಿಕೆ ‘ಇನಾಮ್’ನಲ್ಲಿ ಜಿಐ ಉತ್ಪನ್ನಗಳಿಗೆ ಪ್ರತ್ಯೇಕ ವೇದಿಕೆ ಒದಗಿಸುವುದು ಮತ್ತು ‘ವೋಕಲ್ ಫಾರ್ ಲೋಕಲ್’ ಉಪಕ್ರಮದಲ್ಲಿ ಜಿಐ ಉತ್ಪನ್ನಗಳಿಗೆ ಆದ್ಯತೆ ನೀಡುವುದು ಇನ್ನಿತರ ಕ್ರಿಯೆಗಳ ಮೂಲಕ ಬೆಂಬಲ ನೀಡಬಹುದಾಗಿದೆ.

ಇಟಲಿ ಮೂಲದ ಫ್ಯಾಶನ್ ಬ್ರಾಂಡ್ ಪ್ರಾಡಾ, ಕೊಲ್ಲಾಪುರ ಚಪ್ಪಲಿ ಮತ್ತು ಅಸ್ಸಾಮಿನ ಬೋಡೋಲ್ಯಾಂಡ್ ಟೆರಿಟೋರಿಯಲ್ ರೀಜನ್(ಬಿಟಿಆರ್) ಮಂಡಳಿಯ ಚುನಾವಣೆ; ಈ ಮೂರನ್ನು ಒಂದೆಳೆಯಲ್ಲಿ ಪೋಣಿಸಿದ ಸಂಗತಿಯೊಂದು ಇದೆ- ಭೌಗೋಳಿಕ ಮಾನ್ಯತೆ(ಜಿಯಾಗ್ರಫಿಕಲ್ ಇಂಡಿಕೇಷನ್, ಜಿಐ).

ಮಿಲಾನ್ ಫ್ಯಾಶನ್ ಮೇಳದಲ್ಲಿ ಕೊಲ್ಲಾಪುರಿ ಚಪ್ಪಲಿಯನ್ನು ಹೋಲುವ ವಿನ್ಯಾಸವೊಂದನ್ನು ಪ್ರಾಡಾ ಪ್ರದರ್ಶಿಸಿತ್ತು. ದೇಶಿ ಉತ್ಪನ್ನವನ್ನು ನಕಲು ಮಾಡಲಾಗಿದೆ. ಇದು ‘ದೇಶದ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಕರಕುಶಲ ವಸ್ತುಗಳ ದುರ್ಬಳಕೆ’ ಎಂದು ವ್ಯಾಪಕ ಟೀಕೆಗೆ ಒಳಗಾಯಿತು. ‘ಜಿಐ ಉಲ್ಲಂಘನೆ ಆಗಿದೆ’ ಎಂದು ಲಿಡ್ಕರ್(ಡಾ. ಬಾಬು ಜಗಜೀವನ್‌ರಾಂ ಚರ್ಮ ಉದ್ಯಮಗಳ ಅಭಿವೃದ್ಧಿ ನಿಗಮ ನಿ.) ಪ್ರಾಡಾಕ್ಕೆ ನೋಟಿಸ್ ನೀಡಿತು ಹಾಗೂ ಭಾರತ ಸರಕಾರವು ಬಾಂಬೆ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿತು. ಪ್ರತಿಕ್ರಿಯಿಸಿದ ಪ್ರಾಡಾ, ‘‘ಭಾರತೀಯ ಸಾಂಪ್ರದಾಯಿಕ ಕರಕುಶಲ ಕಲೆಯ ಸಾಂಸ್ಕೃತಿಕ ಮಹತ್ವವನ್ನು ಗೌರವಿಸುತ್ತೇವೆ’’ ಎಂದು ಹೇಳಿತು. ಆನಂತರ ಅಸ್ಸಾಮಿನ ಬೋಡೋಲ್ಯಾಂಡ್ ಮಂಡಳಿ ಚುನಾವಣೆ ವಿಷಯ ಮುನ್ನೆಲೆಗೆ ಬಂದಿತು. ಸೆಪ್ಟಂಬರ್ 22, 2025ರಂದು ಬೋಡೋಲ್ಯಾಂಡ್‌ನ 5 ಜಿಲ್ಲೆಗಳ 40 ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ. ಬೋಡೋ ಯುವಜನರ ತಂಡವೊಂದು 2021ರಲ್ಲಿ ಜಿಐ ಮಾನ್ಯತೆಗೆ 50 ಉತ್ಪನ್ನಗಳನ್ನು ಗುರುತಿಸಿತ್ತು. ಮೇ 2024ರೊಳಗೆ 21 ವಸ್ತುಗಳ ನೋಂದಣಿ ಆಗಿದೆ. ಇಲ್ಲಿನ 26 ಸಮುದಾಯಗಳು ತಮ್ಮ ಸಾಂಪ್ರದಾಯಿಕ-ಕರಕುಶಲ ವಸ್ತುಗಳು ಹಾಗೂ ಕೃಷಿ ಉತ್ಪನ್ನ ಸೇರಿದಂತೆ 21 ಉತ್ಪನ್ನಗಳಿಗೆ ಜಿಐ ಮಾನ್ಯತೆ ಸಿಗಬೇಕು ಎಂದು ಒತ್ತಾಯಿಸುತ್ತಿವೆ. ಇದು ಚುನಾವಣೆಯಲ್ಲಿ ಮುಖ್ಯ ವಿಷಯವಾಗಿದೆ. ದಿಲ್ಲಿ ಮೂಲದ ಗಾಂಧಿ ಹಿಂದುಸ್ತಾನಿ ಸಾಹಿತ್ಯ ಸಭೆಯು ಈ ಸಂಬಂಧ ಮಾರ್ಗದರ್ಶನ ನೀಡುತ್ತಿದೆ.

ಜಿಐ ಎನ್ನುವುದು ವಿಶಿಷ್ಟ ಉತ್ಪನ್ನವೊಂದರ ಮೂಲಸ್ಥಳ, ಕೃಷಿ-ಹವಾಮಾನ ವ್ಯತ್ಯಾಸ ಮತ್ತು ಸಾಂಪ್ರದಾಯಿಕ ಬೆಳೆ ಪದ್ಧತಿಯನ್ನು ಆಧರಿಸಿ ನೀಡುವ ಪ್ರಮಾಣಪತ್ರ. ಜಿಯಾಗ್ರಫಿಕಲ್ ಇಂಡಿಕೇಷನ್ಸ್ ಆಫ್ ಗೂಡ್ಸ್ (ನೋಂದಣಿ ಮತ್ತು ರಕ್ಷಣೆ) ಕಾಯ್ದೆ 1998 ಈ ಕುರಿತ ಶಾಸನ. ಜಿಐಯನ್ನು ವಿಶ್ವ ವ್ಯಾಪಾರ ಸಂಸ್ಥೆಯ ಟ್ರಿಪ್ಸ್(ವ್ಯಾಪಾರ ಸಂಬಂಧಿತ ಬೌದ್ಧಿಕ ಆಸ್ತಿ ಹಕ್ಕುಗಳು) ಒಪ್ಪಂದ ನಿರ್ವಹಿಸುತ್ತದೆ. ಒಪ್ಪಂದದ ವಿಧಿ 22(1) ಪ್ರಕಾರ, ಜಿಐ ಎಂದರೆ ‘ಉತ್ಪನ್ನದ ಭೌಗೋಳಿಕ ಮೂಲವನ್ನು ಪ್ರತಿನಿಧಿಸುವ ವಿಶಿಷ್ಟ ಗುಣ’. ಭಾರತೀಯ ಕಾಯ್ದೆ ಜಾರಿಯಾಗಿ 22 ವರ್ಷ ಕಳೆದಿದೆ(ಸೆಪ್ಟಂಬರ್ 15, 2003). ಡಾರ್ಜಿಲಿಂಗ್ ಚಹಾ ಜಿಐ ಮನ್ನಣೆ ಪಡೆದ ಮೊದಲ ಉತ್ಪನ್ನ. ಯುರೋಪಿಯನ್ ದೇಶಗಳಲ್ಲಿ ಜಿಐಗಳನ್ನು 2 ವಿಧವಾಗಿ ವರ್ಗೀಕರಿಸುತ್ತಾರೆ-ಸಂರಕ್ಷಿತ ಜಿಐ(ಪಿಜಿಐ) ಮತ್ತು ಪ್ರೊಟೆಕ್ಟೆಡ್ ಡೆಸ್ಟಿನೇಶನ್ ಆಫ್ ಆರಿಜಿನ್(ಪಿಡಿಒ). ಭಾರತದಲ್ಲಿ ಇರುವುದು ಪಿಜಿಐ ಮಾತ್ರ. ಜುಲೈ 2025ರ ಹೊತ್ತಿಗೆ ದೇಶದಲ್ಲಿ 658 ನೋಂದಾಯಿತ ಜಿಐ ಉತ್ಪನ್ನಗಳಿದ್ದವು. ಇವುಗಳಲ್ಲಿ ಕರಕುಶಲ ವಸ್ತು, ಕೃಷಿ ಉತ್ಪನ್ನ, ಆಹಾರ ಪದಾರ್ಥ, ಕೈಗಾರಿಕಾ ಉತ್ಪನ್ನಗಳು ಮತ್ತು ನೈಸರ್ಗಿಕ ವಸ್ತುಗಳಿವೆ; ಕರಕುಶಲ ವಸ್ತು (ಶೇ.45) ಮತ್ತು ಕೃಷಿ ಉತ್ಪನ್ನ(ಶೇ.30) ಇವೆ. ರಾಜ್ಯದ 46 ಉತ್ಪನ್ನಗಳಿಗೆ ಜಿಐ ನೋಂದಣಿ ನೀಡಲಾಗಿದೆ(ಮಾರ್ಚ್ 2024). ಇದರಲ್ಲಿ ಕೃಷಿ ಉತ್ಪನ್ನಗಳು, ಕರಕುಶಲ ವಸ್ತುಗಳು ಹಾಗೂ ತಿನಿಸುಗಳು ಸೇರಿವೆ.

ಕೊಲ್ಲಾಪುರಿ ಚಪ್ಪಲಿ ಮತ್ತು ಹುಪಾರಿ ಅಂದುಗೆ

ಕೊಲ್ಲಾಪುರಿ ಚಪ್ಪಲಿ ತನ್ನ ವೈಶಿಷ್ಟ್ಯದಿಂದಾಗಿ ಜನಪ್ರಿಯತೆ ಗಳಿಸಿದೆ. ಮಹಾರಾಷ್ಟ್ರ ಮಾತ್ರವಲ್ಲದೆ, ರಾಜ್ಯದ ಅಥಣಿ, ನಿಪ್ಪಾಣಿ ಮತ್ತು ಸುತ್ತಮುತ್ತ ಈ ಚಪ್ಪಲಿ ತಯಾರಾಗುತ್ತದೆ. ಸ್ಥಳೀಯ ಚಮ್ಮಾರರಿಗೆ ಜೋಡಿಯೊಂದಕ್ಕೆ 250-400 ರೂ. ಸಿಗುತ್ತದೆ. ದಲ್ಲಾಳಿಗಳು 1,500-2,000 ರೂ.ಗೆ ಮತ್ತು ರಿಟೇಲ್ ಮಾರಾಟಗಾರರು 4,000 ರೂ.ಗೆ ಮಾರಾಟ ಮಾಡುತ್ತಾರೆ. ಆದರೆ, ಚಪ್ಪಲಿಗೆ ಪ್ರಾಡಾ ಇಟ್ಟಿದ್ದ ಬೆಲೆ 1,200 ಡಾಲರ್(1 ಲಕ್ಷ ರೂ.ಗೂ ಅಧಿಕ). ದೇಶದಲ್ಲಿ ಇಂಥ ಸಾಂಪ್ರದಾಯಿಕ ಉತ್ಪನ್ನಗಳ ಭಂಡಾರವೇ ಇದ್ದು, ಆಭರಣ, ಸುಗಂಧ, ವಸ್ತ್ರ, ಪೀಠೋಪಕರಣ, ಆಹಾರ ಮತ್ತು ಮದ್ಯದಲ್ಲಿ ವೈವಿಧ್ಯಮಯ ಉತ್ಪನ್ನಗಳಿವೆ. ಈ ಕರಕುಶಲತೆ ಸಂಪ್ರದಾಯದಲ್ಲಿ ನೆಲೆ ಹೊಂದಿದ್ದು, ಸೌಂದರ್ಯಪ್ರಜ್ಞೆಗೆ ಹೆಸರಾಗಿದೆ ಮತ್ತು ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾಗಿದೆ. ಈ ಉತ್ಪನ್ನಗಳು ಬೇರೆಡೆ ಲಭ್ಯವಾದರೂ, ಅವುಗಳ ಅಸ್ಮಿತೆ ಮತ್ತು ಮೌಲ್ಯ ಮೂಲ ಸ್ಥಾನದೊಂದಿಗೆ ತಳಕು ಹಾಕಿಕೊಂಡಿರುತ್ತದೆ. ಕೊಲ್ಲಾಪುರದಿಂದ 20 ಕಿ.ಮೀ. ದೂರದಲ್ಲಿರುವ ಹುಪಾರಿಯನ್ನು ‘ದೇಶದ ಬೆಳ್ಳಿ ನಗರ’ ಎಂದು ಕರೆಯಲಾಗುತ್ತದೆ. ಇಲ್ಲಿ 100ಕ್ಕೂ ಅಧಿಕ ಕಾರ್ಖಾನೆಗಳಲ್ಲಿ ಸಾವಿರಾರು ಕುಶಲ ಕರ್ಮಿಗಳು ಬೆಳ್ಳಿಯಿಂದ ಸೂಕ್ಷ್ಮಕೆತ್ತನೆ ಇರುವ ಅಂದುಗೆ(ಕಾಲಿನ ಕಡಗ)ಗಳನ್ನು ತಯಾರಿಸುತ್ತಾರೆ. ಇದರ ಮೇಲೂ ಪ್ರಾಡಾದ ಕಣ್ಣು ಬಿದ್ದಿದೆ ಎಂದು ವರದಿಯಾಗಿದ್ದರಿಂದ, ಇಂಥ ಉತ್ಪನ್ನಗಳ ಸಾಂಸ್ಕೃತಿಕ ಒಡೆತನ, ಉತ್ಪನ್ನಗಳ ಮಾರಾಟದಿಂದ ಬಂದ ಮೊತ್ತದ ನ್ಯಾಯಬದ್ಧ ಹಂಚಿಕೆ ಹಾಗೂ ಕರಕುಶಲ ವಸ್ತುಗಳಿಗೆ ಶಾಸನಾತ್ಮಕ ರಕ್ಷಣೆ ಕುರಿತು ಚರ್ಚೆ ಆರಂಭವಾಯಿತು.

ಜಿಯಾಗ್ರಫಿಕಲ್ ಇಂಡಿಕೇಷನ್ಸ್ ಆಫ್ ಗೂಡ್ಸ್(ನೋಂದಣಿ ಮತ್ತು ರಕ್ಷಣೆ) ಕಾಯ್ದೆಯು ಉತ್ಪಾದಕರಿಗೆ ತಮ್ಮ ಉತ್ಪನ್ನದ ಹೆಸರನ್ನು ಬೇರೆಯವರು ಬಳಸಿಕೊಳ್ಳದಂತೆ ರಕ್ಷಣೆ ನೀಡುತ್ತದೆ. ಮಾರುಕಟ್ಟೆ ರಕ್ಷಣೆಯಲ್ಲದೆ, ಅನಧಿಕೃತ ವ್ಯಕ್ತಿಗಳು ಹೆಸರು ದುರುಪಯೋಗಪಡಿಸಿಕೊಳ್ಳದಂತೆ ಖಾತ್ರಿ ನೀಡುತ್ತದೆ. ಆದರೆ, ಜಿಐ ನೋಂದಣಿಯಿಂದ ಉತ್ಪನ್ನಕ್ಕೆ ತನ್ನಿಂತಾನೇ ಮಾರುಕಟ್ಟೆ ಸೃಷ್ಟಿಯಾಗುವುದಿಲ್ಲ ಮತ್ತು ಅಧಿಕ ಲಾಭ ಖಾತ್ರಿಯಾಗುವುದಿಲ್ಲ. ಜಿಐ ನೋಂದಣಿಯು ಉತ್ಪನ್ನದಿಂದ ಲಾಭ ಪಡೆಯುವ ಒಂದು ಮಾರ್ಗ ಅಷ್ಟೇ. ಬೌದ್ಧಿಕ ಆಸ್ತಿ ಹಕ್ಕು(ಇಂಟೆಲೆಕ್ಚುಯಲ್ ಪ್ರಾಪರ್ಟಿ ರೈಟ್ಸ್, ಐಪಿಆರ್) ಕಾಯ್ದೆಗಳ ವಿಸ್ತೃತ ಚೌಕಟ್ಟಿನಲ್ಲಿ ಜಿಐ ಕಾಯ್ದೆ ಬರುತ್ತದೆ; ಆದರೆ, ಅದು ಕಾಪಿರೈಟ್ ಇಲ್ಲವೇ ಪೇಟೆಂಟ್ ಕಾಯ್ದೆಯಂತೆ ಉತ್ಪನ್ನ ಸೃಷ್ಟಿಗೆ ಕಾರಣವಾದ ಸೃಜನಶೀಲತೆಯನ್ನು ರಕ್ಷಿಸುವುದಿಲ್ಲ; ಟ್ರೇಡ್‌ಮಾರ್ಕ್ ಕಾನೂನಿನಂತೆ ಉತ್ಪನ್ನದ ಹೆಸರನ್ನು ರಕ್ಷಿಸುತ್ತದೆ. ಜಿಐ ಉತ್ಪಾದಕರನ್ನು ಪ್ರತಿನಿಧಿ ಸುವ ಸಂಘ/ಸಂಸ್ಥೆಗೆ ಸಾಮುದಾಯಿಕ ಹಕ್ಕು ನೀಡುತ್ತದೆ. ಆದರೆ, ಈ ಹಕ್ಕು ಎಷ್ಟು ಪರಿಣಾಮಕಾರಿಯಾಗಿ ಬಳಸಲ್ಪಡುತ್ತದೆ ಎಂಬುದು ಸಾಂಸ್ಥಿಕ ಸಾಮರ್ಥ್ಯ ಹಾಗೂ ಆರ್ಥಿಕ-ಕಾನೂನು ಸಂಪನ್ಮೂಲದ ಬಲವನ್ನು ಆಧರಿಸಿರುತ್ತದೆ.

ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ದೇಶಗಳಲ್ಲಿ ನಡೆದ ಅಧ್ಯಯನಗಳು ಜಿಐ ಪ್ರಮಾಣಪತ್ರದಿಂದ ಲಾಭವಾಗುತ್ತದೆ ಎಂದು ಖಾತ್ರಿಪಡಿಸಿವೆ. ಆದರೆ, ಇದು ನಮ್ಮ ದೇಶದಲ್ಲಿ ಸಂಪೂರ್ಣ ನಿಜವಲ್ಲ; ಇದಕ್ಕೆ ಜಿಐ ನೋಂದಣಿ ವ್ಯವಸ್ಥೆ ಹಾಗೂ ಮಾರುಕಟ್ಟೆಯ ಅಸಮರ್ಥತೆ ಕಾರಣ. ಜಿಐ ಅರ್ಜಿ ಹಾಗೂ ಅರ್ಜಿಯ ಪರಿಷ್ಕರಣೆ ಅವಧಿಗೆ ಸಂಬಂಧಿಸಿದಂತೆ ಬದಲಾವಣೆಗಳು ಆಗಬೇಕಿದೆ. ಇದಕ್ಕೆ ಅನುಗುಣವಾಗಿ ಸಾಂಸ್ಥಿಕ ಸಂರಚನೆಗಳನ್ನು ರೂಪಿಸಬೇಕಿದೆ.

ಕುಶಲಕರ್ಮಿಗಳೊಡನೆ ಸಂಯೋಜನೆ

ಜಾಗತಿಕವಾಗಿ ಖಂಡನೆಗೊಳಗಾದ ಪ್ರಾಡಾ, ತನ್ನ ತಂಡವನ್ನು ಕೊಲ್ಲಾಪುರಕ್ಕೆ ಕಳಿಸಿ, ಕುಶಲಕರ್ಮಿಗಳೊಟ್ಟಿಗೆ ಮಾತುಕತೆ ನಡೆಸಿತು; ಸಂಯೋಜನೆಯ ಸಾಧ್ಯತೆಗಳನ್ನು ಪರಿಶೀಲಿಸಿತು. ಜಾಗತಿಕ ಬ್ರಾಂಡ್ ಜೊತೆಗೆ ಸಹಯೋಗವು ಭರವಸೆ ಹುಟ್ಟಿಸುವಂಥದ್ದು; ಆದರೆ, ಅದಕ್ಕೆ ಸಮರ್ಪಕ ಯೋಜನೆ-ಕಾರ್ಯನೀತಿ ಅಗತ್ಯವಿರುತ್ತದೆ. ಹುಪಾರಿ ಅಂದುಗೆ-ಕೊಲ್ಲಾಪುರಿ ಚಪ್ಪಲಿಯನ್ನು ಪ್ರಾಡಾ ಅಂತರ್‌ರಾಷ್ಟ್ರೀಯ ಮಾರುಕಟ್ಟೆಗೆ ಪರಿಚಯಿಸಿದರೆ, ಉತ್ಪನ್ನಕ್ಕೆ ಬೇಡಿಕೆ ಹೆಚ್ಚಿ ಕಲಾವಿದರಿಗೆ ಆರ್ಥಿಕ ಲಾಭ ಆಗಲಿದೆ. ಇದರಿಂದ ಮೂಲಸೌಲಭ್ಯದ ಕೊರತೆ ಹಾಗೂ ಹೂಡಿಕೆಯ ಸಮಸ್ಯೆಗಳು ಪರಿಹಾರಗೊಂಡು, ಜಾಗತಿಕ ವಿನ್ಯಾಸಗಾರರ ಸ್ಪರ್ಶದಿಂದ ಹೊಸತನ ಮೂಡಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಬಹುದು. ಆದರೆ, ಈ ಆಶಾವಾದದ ಹಿಂದೆ ಪ್ರಶ್ನೆಗಳು ಉಳಿದುಕೊಳ್ಳುತ್ತವೆ; ಇಂಥ ಪಾಲುದಾರಿಕೆಗಳು ದೇಶಿ ಕರಕುಶಲಗಾರರನ್ನು ಸಬಲೀಕರಿಸಲು ಉತ್ತಮ ಮಾರ್ಗವೇ? ಇದರಿಂದ ಜಾಗತಿಕ ಬ್ರಾಂಡ್‌ಗಳು ಲಾಭ ಮಾಡಿಕೊಂಡು, ಸ್ಥಳೀಯರು ಮೊದಲಿನಂತೆಯೇ ಉಳಿದುಕೊಳ್ಳಬಹುದಲ್ಲವೇ? ಧನಬಲ ಇರುವ ಜಾಗತಿಕ ಬ್ರಾಂಡ್‌ಗಳು ದೇಶಿ ಉತ್ಪನ್ನಗಳನ್ನು ಕಬ್ಜಾ ಮಾಡಿಕೊಳ್ಳುವುದಿಲ್ಲ ಎಂಬುದಕ್ಕೆ ಖಾತ್ರಿ ಏನಿದೆ?

ಮೂಲಭೂತ ಪ್ರಶ್ನೆಯೆಂದರೆ, ಹುಪಾರಿ/ಕೊಲ್ಲಾಪುರದ ಕುಶಲಕರ್ಮಿಗಳಿಗೆ ಇರುವ ಹಕ್ಕುಗಳು ಯಾವುವು? ಜಿಐ ಕಾಯ್ದೆಯ ಮುಖ್ಯ ಗುರಿ-ಹೆಸರಿನ ರಕ್ಷಣೆ; ಉತ್ಪನ್ನದ ರಕ್ಷಣೆಯಲ್ಲ. ಹಾಲಿ ಕಾನೂನಿನ ಅನ್ವಯ ವ್ಯಕ್ತಿ ಅಥವಾ ಸಂಸ್ಥೆಯೊಂದು ಜಿಐ ರಕ್ಷಣೆ ಹೊಂದಿರುವ ಉತ್ಪನ್ನವನ್ನು ಹೋಲುವ ಸರಕುಗಳನ್ನು ಮಾರಬಹುದು. ಆದರೆ, ಅದಕ್ಕೆ ರಕ್ಷಿಸಲ್ಪಟ್ಟ ಹೆಸರನ್ನು ಬಳಸಬಾರದು ಅಷ್ಟೆ. ಇದಲ್ಲದೆ, ಜಿಐ ನೋಂದಣಿ ಪ್ರಾಂತ-ದೇಶಕ್ಕೆ ಸೀಮಿತವಾದುದು; ದೇಶದಲ್ಲಿ ನೋಂದಣಿಯಾದ ಜಿಐ, ಗಡಿಯಾಚೆ ರಕ್ಷಣೆ ನೀಡುವುದಿಲ್ಲ. ವಿದೇಶಿ ಕಂಪೆನಿಯೊಂದು ದೇಶಿ ಜಿಐ ಕಾಯ್ದೆಯಡಿ ನೋಂದಣಿಯಾದ ಉತ್ಪನ್ನವನ್ನು ಮಾರಾಟ ಮಾಡಿದರೆ, ಅದನ್ನು ದೇಶಿ ಕಾಯ್ದೆಯಡಿ ಪ್ರಶ್ನಿಸಲು ಆಗುವುದಿಲ್ಲ. ವಿದೇಶದಲ್ಲಿ ರಕ್ಷಣೆ ಬೇಕೆಂದರೆ, ಪ್ರತ್ಯೇಕ ಜಿಐ ಅಗತ್ಯವಿದೆ. ಆದರೆ, ವಿದೇಶಗಳಲ್ಲಿ ಜಿಐ ಅರ್ಜಿಯನ್ನು ಲಿಸ್ಬನ್ ಒಪ್ಪಂದದಡಿ ಸಲ್ಲಿಸಬೇಕಾಗುತ್ತದೆ; ಭಾರತ ಈ ಒಪ್ಪಂದದ ಸದಸ್ಯನಲ್ಲ. ಇದರಿಂದ ದೇಶಿ ಜಿಐ ಮಾಲಕರು ವಿದೇಶದಲ್ಲಿ ತಮ್ಮ ಉತ್ಪನ್ನವನ್ನು ರಕ್ಷಿಸಿಕೊಳ್ಳಲು ಅಲ್ಲಿ ಅರ್ಜಿ ಸಲ್ಲಿಸಬೇಕಾಗಿ ಬರುತ್ತದೆ. ಇಂಥ ಸಂಕೀರ್ಣ, ವೆಚ್ಚದಾಯಕ ಕೆಲಸ ಹೆಚ್ಚಿನ ದೇಶಿ ಉತ್ಪಾದಕರಿಗೆ ಸಾಧ್ಯವಿಲ್ಲ.

ಬೌದ್ಧಿಕ ಆಸ್ತಿ ಹಕ್ಕುಗಳನ್ನು ಒಪ್ಪಂದಗಳ ಮೂಲಕ ಜಾರಿಗೊಳಿಸಲಾಗುತ್ತದೆ. ಕೊಲ್ಲಾಪುರಿ ಚಪ್ಪಲಿ ಉತ್ಪಾದಕರು ಮತ್ತು ಪ್ರಾಡಾ ನಡುವಿನ ಒಪ್ಪಂದ ಹೇಗಿರಲಿದೆ ಎಂಬುದನ್ನು ಆಧರಿಸಿ, ಲಾಭ ಹಂಚಿಕೆಯಾಗುತ್ತದೆ. ಇಂಥ ಒಪ್ಪಂದಗಳು ಶೋಷಣೆಗೆ ದಾರಿ ಮಾಡಿಕೊಡಬಹುದು; ಬ್ರಾಂಡ್‌ಗಳು ಕಲಾವಿದರ ಕೌಶಲ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ಬಳಸಿಕೊಂಡು, ಆನಂತರ ಅವರ ವಿನ್ಯಾಸದಲ್ಲಿ ಬದಲಾವಣೆ ಮಾಡಬಹುದು; ಲಾಭ ಹಂಚಿಕೆಗೆ ಒಪ್ಪದೆ ಇರಬಹುದು. ಜಾಗತಿಕ ಬ್ರಾಂಡ್ ಮತ್ತು ದೇಶಿ ಉತ್ಪಾದಕರ ನಡುವಿನ ಒಪ್ಪಂದವು ಸಮಾನಸ್ಕಂದರ ನಡುವೆ ನಡೆಯುವಂಥದ್ದಲ್ಲ; ಇಲ್ಲಿ ಅಧಿಕಾರ ಮತ್ತು ಹಣದ ಬಲ ಅಸಮಾನವಾಗಿರುತ್ತದೆ. ಕಂಪೆನಿ ಗಳು ಕಲಾಪ್ರಕಾರದ ಅಧಿಕೃತತೆಯನ್ನು ಹಾಳುಗೆಡವಬಹುದು. ಇದರಿಂದ ಕಲಾವಿದರ ಸೃಜನಶೀಲ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿಗೆ ಧಕ್ಕೆಯಲ್ಲದೆ, ಉತ್ಪನ್ನದ ಒಡೆತನಕ್ಕೆ ಸಂಚಕಾರ ಬರುತ್ತದೆ. ಬ್ರಾಂಡ್‌ಗಳ ಕೈ ಮೇಲಾದರೆ, ಕಲಾವಿದರು ಕೇವಲ ಉತ್ಪಾದಿಸುವ ಯಂತ್ರಗಳಾಗಿ ಬಿಡುತ್ತಾರೆ. ಕಂಪೆನಿಗಳಿಗೆ ಮಾರುಕಟ್ಟೆಯ ಆದ್ಯತೆಗಳೇ ಮುಖ್ಯವಾಗುವುದರಿಂದ, ಸಾಂಪ್ರದಾಯಿಕ ವಿನ್ಯಾಸಗಳು ತೆರೆಮರೆಗೆ ಸರಿಯುವ ಮತ್ತು ಸಾಂಸ್ಕೃತಿಕ ಸೂಕ್ಷ್ಮಗಳು ನಗಣ್ಯವಾಗುವ ಸಾಧ್ಯತೆಯೂ ಇದೆ. ಕಲಾವಿದರಿಗೆ ಅವರ ಹಕ್ಕುಗಳ ಬಗ್ಗೆ ಮಾಹಿತಿ ನೀಡದೆ ಇರುವುದು, ಅಪಾರದರ್ಶಕತೆ ಹಾಗೂ ಪರಸ್ಪರ ಗೌರವದ ಕೊರತೆಯಿಂದ ಕರಕುಶಲ ವಸ್ತುಗಳು ಬರಿದೇ ಮಾರಾಟದ ಸರಕಾಗಿ ಬಿಡುತ್ತವೆ.

ಉಳಿದ ದಾರಿಯೇನು?

ಗ್ವಾಟೆಮಾಲದ ಮಯನ್ ಮಹಿಳಾ ನೇಕಾರರು ಅಂತರ್‌ರಾಷ್ಟ್ರೀಯ ಬ್ರಾಂಡ್‌ಗಳು/ವಿನ್ಯಾಸಕಾರರು ದೇಶಿ ಸಂಕೇತಗಳನ್ನು ಸಮ್ಮತಿ ಪಡೆಯದೆ ಹಾಗೂ ಕಲಾವಿದರ ಹೆಸರು ಉಲ್ಲೇಖಿಸದೆ ಬಳಸುತ್ತಿವೆ ಎಂದು ಪ್ರತಿಭಟಿಸಿದರು; ಮೂಲ ಕಲಾವಿದರ ಹೆಸರು ನಮೂದಿಸಬೇಕು ಹಾಗೂ ಆರ್ಥಿಕ ಸವಲತ್ತು ನೀಡಬೇಕು ಎಂದು ಸಂಘಟಿತ ಕಾನೂನು ಹೋರಾಟ ನಡೆಸಿದರು. ಕೆನಡಾದಲ್ಲಿ ಮೂಲನಿವಾಸಿ ಕಲಾವಿದರು ನಡೆಸಿದ ಹೋರಾಟದಿಂದ ಹಲವು ಬಹಳ ಮುಖ್ಯ ಉಪಕ್ರಮಗಳು ಆರಂಭವಾದವು. ಇದರಲ್ಲಿ ಒಂದು- ಸ್ಥಳೀಯ ಸಾಂಸ್ಕೃತಿಕ ಪರಂಪರೆ ಮತ್ತು ವಸ್ತುಸಂಗ್ರಹಾಲಯಗಳ ಕಾರ್ಯಸೂಚಿ(1990ರ ದಶಕ); ಶೈಕ್ಷಣಿಕ ಕಾರ್ಯಪಡೆ (2021-2022)ಯು ಉತ್ತರ ಕೆನಡಾದಲ್ಲಿ ಶೈಕ್ಷಣಿಕ ಸುಧಾರಣೆಯ ಉದ್ದೇಶ ಹೊಂದಿದೆ. ಇವೆಲ್ಲವೂ ಜನರ ಹೋರಾಟ-ಪ್ರತಿಭಟನೆಗಳ ಫಲ. ಇಂಥ ಸಂಘಟಿತ ಹೋರಾಟದಿಂದಷ್ಟೇ ಕಲೆ-ಕಲಾವಿದರನ್ನು ಉಳಿಸಿಕೊಳ್ಳಬಹುದು.

ಜಿಐ ಹಾಗೂ ಬೌದ್ಧಿಕ ಆಸ್ತಿ ಹಕ್ಕು ಕುರಿತು ಸರಕಾರ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ದೇಶಿ ಉತ್ಪನ್ನಗಳಿಗೆ ಜಾಗತಿಕ ಆಸಕ್ತಿ ಹೆಚ್ಚುತ್ತಿರುವುದರಿಂದ, ದೇಶವು ಲಿಸ್ಬನ್ ಸೇರಿದಂತೆ ಅಂತರ್‌ರಾಷ್ಟ್ರೀಯ ಒಪ್ಪಂದಗಳಿಗೆ ಸೇರ್ಪಡೆಯಾಗಬೇಕಿದೆ. ಸರಕಾರದ ‘ಒಂದು ಜಿಲ್ಲೆ ಒಂದು ಉತ್ಪನ್ನ’ ಯೋಜನೆಯನ್ನು ಜಿಐ ಉತ್ಪನ್ನಗಳೊಂದಿಗೆ ಏಕತ್ರಗೊಳಿಸಬೇಕು. ಜಿಐ ಉತ್ಪನ್ನಗಳ ಬ್ರಾಂಡಿಂಗ್-ಮಾರುಕಟ್ಟೆ ಆಗಬೇಕಿದೆ; ಪ್ರಯೋಗಾಲಯಗಳ ಮೂಲಕ ಉತ್ಪನ್ನಗಳ ಗುಣಮಟ್ಟವನ್ನು ಖಾತ್ರಿಪಡಿಸುವುದು, ಕೃಷಿ ಉತ್ಪನ್ನಗಳ ಆನ್‌ಲೈನ್ ವೇದಿಕೆ ‘ಇನಾಮ್’ನಲ್ಲಿ ಜಿಐ ಉತ್ಪನ್ನಗಳಿಗೆ ಪ್ರತ್ಯೇಕ ವೇದಿಕೆ ಒದಗಿಸುವುದು ಮತ್ತು ‘ವೋಕಲ್ ಫಾರ್ ಲೋಕಲ್’ ಉಪಕ್ರಮದಲ್ಲಿ ಜಿಐ ಉತ್ಪನ್ನಗಳಿಗೆ ಆದ್ಯತೆ ನೀಡುವುದು ಇನ್ನಿತರ ಕ್ರಿಯೆಗಳ ಮೂಲಕ ಬೆಂಬಲ ನೀಡಬಹುದಾಗಿದೆ.

ಬೆಂಗಳೂರಿನಲ್ಲಿ 2025ರಲ್ಲಿ ನಡೆದ ಕ್ವಾಟಂ ಇಂಡಿಯಾ ಶೃಂಗದಲ್ಲಿ ಪಾಲ್ಗೊಂಡಿದ್ದ ಅಮೆರಿಕದ ನೊಬೆಲ್ ಪುರಸ್ಕೃತ ವಿಜ್ಞಾನಿ ಡೇವಿಡ್ ಗ್ರಾಸ್, ಮೇಕ್ ಇನ್ ಇಂಡಿಯಾ ಯಶ ಸಾಧಿಸಬೇಕೆಂದರೆ, ‘ಶೋಧಿಸು, ಆವಿಷ್ಕರಿಸು, ಸೃಷ್ಟಿಸು ಮತ್ತು ಉತ್ಪಾದಿಸು’ ನೀತಿ ಅಗತ್ಯವಿದೆ ಎಂದು ಹೇಳಿದ್ದರು. ಡೊನಾಲ್ಡ್ ಟ್ರಂಪ್ ಯುಗದಲ್ಲಿ ಜಾಗತಿಕ ವ್ಯಾಪಾರ ಮತ್ತು ಆರ್ಥಿಕ ಹರಿವಿನ ಅನಿಶ್ಚಿತತೆ ಹೆಚ್ಚಳಗೊಂಡಿದ್ದು, ಇದನ್ನು ನಿರ್ವಹಿಸಲು ಸಂಶೋಧನೆ-ಅಭಿವೃದ್ಧಿಯಲ್ಲಿ ಹೆಚ್ಚು ಹೂಡಿಕೆ ಮತ್ತು ಅನ್ವೇಷಣೆ ಸಾಮರ್ಥ್ಯದ ಬಲವರ್ಧನೆ ಆಗಬೇಕಿದೆ. ಆದರೆ, ಇದೆಲ್ಲವೂ ಮುನ್ನೋಟವಿಲ್ಲದ ಸರಕಾರಗಳಿಂದ ಹಾದಿ ತಪ್ಪಿಬಿಟ್ಟಿದೆ. ಇದರಿಂದಾಗಿ, ರೈತರು-ಕುಶಲಕರ್ಮಿಗಳು ಅತಂತ್ರರಾಗಿದ್ದಾರೆ.

share
ಮಾಧವ ಐತಾಳ್
ಮಾಧವ ಐತಾಳ್
Next Story
X