Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಬಹುವಚನ
  5. ಲಾಭಕೋರತನ, ಮಿಲಿಟರೀಕರಣ ಹಾಗೂ ಹವಾಮಾನ...

ಲಾಭಕೋರತನ, ಮಿಲಿಟರೀಕರಣ ಹಾಗೂ ಹವಾಮಾನ ಬದಲಾವಣೆ

ಮಾಧವ ಐತಾಳ್ಮಾಧವ ಐತಾಳ್8 Aug 2025 12:03 PM IST
share
ಲಾಭಕೋರತನ, ಮಿಲಿಟರೀಕರಣ ಹಾಗೂ ಹವಾಮಾನ ಬದಲಾವಣೆ

ಲೇಖಕಿ ಮಾರ್ಗರೆಟ್ ಮೀಡ್ ‘ಪರಿಸರವನ್ನು ನಾಶ ಮಾಡಿದರೆ ನಮಗೆ ಸಮಾಜವೆಂಬುದೇ ಇರುವುದಿಲ್ಲ’; ‘ಯುದ್ಧ ಎನ್ನುವುದು ಕೇವಲ ಸೃಷ್ಟಿಯೇ ಹೊರತು ಜೈವಿಕ ಅಗತ್ಯವಲ್ಲ’ ಎಂದು ಹೇಳುತ್ತಾರೆ. ಆದರೆ, ಯುದ್ಧಗಳು ವ್ಯಾಪಾರ ಆಗಿರುವ ಮತ್ತು ಪರಿಸರ ಸಂರಕ್ಷಣೆ ಎನ್ನುವುದು ನಿರ್ಲಕ್ಷಿತವಾಗಿರುವ ಜಗತ್ತಿನಲ್ಲಿ ಇದನ್ನು ಡೊನಾಲ್ಡ್ ಟ್ರಂಪ್, ಬೆಂಜಮಿನ್ ನೆತನ್ಯಾಹು ಮತ್ತಿತರರಿಗೆ ಅರ್ಥ ಮಾಡಿಸುವುದು ಹೇಗೆ?

ಉತ್ತರಾಖಂಡದ ಉತ್ತರಕಾಶಿಯಲ್ಲಿ ಮೇಘಸ್ಫೋಟದಿಂದ ಊರೊಂದು ಕೊಚ್ಚಿಹೋಗಿದೆ. ಯುರೋಪಿನ ನಾಗರಿಕರು ಉಷ್ಣ ಅಲೆಯಿಂದ ಬಳಲುತ್ತಿರುವ ಹೊತ್ತಿನಲ್ಲೇ ಅಮೆರಿಕ ಪ್ರವಾಹ/ಚಂಡಮಾರುತಕ್ಕೆ ಈಡಾಗಿದೆ. ಆಗ್ನೇಯ ಏಶ್ಯದ ದೇಶಗಳಲ್ಲಿ ಮಳೆ ಋತುಗಳೇ ಬದಲಾಗಿವೆ. ನೇಚರ್ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಪ್ರಕಾರ, ಪ್ರತಿದಿನ ವಾತಾವರಣಕ್ಕೆ ಬಿಡುಗಡೆಯಾಗುವ ಇಂಗಾಲದ ಡೈಆಕ್ಸೈಡ್ ಪ್ರಮಾಣ 90.5 ದಶಲಕ್ಷ ಟನ್ ಮುಟ್ಟಿದೆ (2020). 1850ರಲ್ಲಿ ಭೂಮಿಯ ತಾಪಮಾನವನ್ನು ದಾಖಲಿಸಲು ಆರಂಭಿಸಿದ ಬಳಿಕ 2024ರಲ್ಲಿ ಅತಿ ಹೆಚ್ಚು ಉಷ್ಣತೆ ದಾಖಲಾಗಿದೆ. ಹವಾಮಾನ ಸಂಕಷ್ಟ ಎನ್ನುವುದು ಹೊಸಿಲು ದಾಟಿ ಒಳಗೆ ಪ್ರವೇಶಿಸಿದೆ. ಇದರ ಜೊತೆಗೆ ಶಸ್ತ್ರಾಸ್ತ್ರ ಉದ್ಯಮದ ಲಾಭಕೋರತನದಿಂದ ಪರಿಸರದ ಮೇಲೆ ತೀವ್ರ ಹಾನಿ ಆಗುತ್ತಿದೆ.

ಯುದ್ಧಗಳು ಪರಿಸರದ ಮೇಲೆ ತೀವ್ರ ಮತ್ತು ಶಾಶ್ವತ ಋಣಾತ್ಮಕ ಪರಿಣಾಮ ಬೀರುತ್ತವೆ; ಮಣ್ಣಿನ ನಾಶ, ವಾಯು- ಜಲ ಮಾಲಿನ್ಯ ಮತ್ತು ಆವಾಸಸ್ಥಾನ ನಾಶಗೊಳ್ಳುತ್ತದೆ. ಪರಿಸರ ವ್ಯವಸ್ಥೆಗೆ ಭಂಗವಲ್ಲದೆ, ನೈಸರ್ಗಿಕ ಸಂಪನ್ಮೂಲಗಳು ಖಾಲಿ ಆಗುತ್ತವೆ. ಸ್ಫೋಟಕಗಳಿಂದ ನೇರ, ತಕ್ಷಣ ಪರಿಣಾಮ ಮತ್ತು ಮಾಲಿನ್ಯ-ಆವಾಸಸ್ಥಾನ ನಾಶದಿಂದ ದೀರ್ಘಕಾಲೀನ ಪರಿಣಾಮ ಆಗಲಿದೆ. ಸ್ಫೋಟದಿಂದ ಭಾರ ಲೋಹಗಳು ಬಿಡುಗಡೆ ಆಗುತ್ತವೆ; ಇಂಧನಗಳ ದಹನದಿಂದ ಸಾರಜನಕ ಆಕ್ಸೈಡ್, ಇಂಗಾಲದ ಡೈಆಕ್ಸೈಡ್ ಮತ್ತಿತರ ಹಾನಿಕರ ಅನಿಲಗಳು ಬಿಡುಗಡೆಯಾಗುತ್ತವೆ; ಇದು ಆಮ್ಲ ಮಳೆ ಮತ್ತು ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ರಾಸಾಯನಿಕಗಳು, ಇಂಧನ-ತೈಲ ಸೋರಿಕೆಯಿಂದ ಜಲ ಮೂಲಗಳು ಕಲುಷಿತಗೊಳ್ಳುತ್ತವೆ. ಸೇನಾ ಕಾರ್ಯಾಚರಣೆಯಿಂದ ಅರಣ್ಯ, ಜೌಗು ಪ್ರದೇಶಗಳು ಮತ್ತು ಇನ್ನಿತರ ಆವಾಸಸ್ಥಾನಗಳು ನಾಶವಾಗಲಿವೆ; ವನ್ಯಜೀವಿಗಳ ಸ್ಥಳಾಂತರ, ಬೇಟೆ, ಪರಿಸರ ಸಮತೋಲಕ್ಕೆ ಧಕ್ಕೆ ಮತ್ತು ಅರಣ್ಯ ನಾಶದಿಂದ ಇಂಗಾಲದ ಸಿಂಕ್‌ಗಳಿಗೆ ಧಕ್ಕೆಯಾಗುತ್ತದೆ. ಪ್ರವಾಹ ಮತ್ತು ಭೂಕುಸಿತದಂಥ ನೈಸರ್ಗಿಕ ವಿಕೋಪಗಳು ಉಲ್ಬಣಗೊಳ್ಳಲಿದೆ. ಕೃಷಿ ಭೂಮಿಗೆ ಹಾನಿಯಿಂದ ಆಹಾರ ಕೊರತೆ ಮತ್ತು ಕ್ಷಾಮ ಸಂಭವಿಸಬಹುದು. ನೀರು ಮತ್ತು ಮರಮಟ್ಟಿನಂಥ ನೈಸರ್ಗಿಕ ಸಂಪನ್ಮೂಲಗಳ ಬಳಕೆ ಹೆಚ್ಚಲಿವೆ. ಅಧ್ಯಯನಗಳ ಪ್ರಕಾರ, ಯುದ್ಧದಿಂದ ಸಂಪನ್ಮೂಲ ನಾಶ ಮತ್ತು ಸಂರಕ್ಷಣೆ ಪ್ರಯತ್ನಗಳಿಗೆ ಹಿನ್ನಡೆಯಾಗುತ್ತದೆ.

ಶಸ್ತ್ರಾಸ್ತ್ರ ಸಂಘರ್ಷ ಹೆಚ್ಚಳ

ಜಗತ್ತು ದ್ವೇಷಪೂರಿತವಾಗುತ್ತಿದೆ; ಎಲ್ಲೆಡೆ ತೀವ್ರ ಸ್ವರೂಪದ ಶಸ್ತ್ರಾಸ್ತ್ರ ಸಂಘರ್ಷಗಳು ಹೆಚ್ಚುತ್ತಿವೆ. 2024ರಲ್ಲಿ ಇಂಥ 59 ಸಂಘರ್ಷಗಳು ಸಂಭವಿಸಿದ್ದವು. ಜಾಗತಿಕ ಶಾಂತಿ ಸೂಚ್ಯಂಕ(ಜಿಪಿಐ, 2024)ದ ಪ್ರಕಾರ, 87 ದೇಶಗಳಲ್ಲಿ ಶಾಂತಿ ಸೂಚ್ಯಂಕ ಕುಸಿದಿದೆ. ಇದೇ ಹೊತ್ತಿನಲ್ಲಿ ಜಾಗತಿಕ ಸೇನಾ ವೆಚ್ಚ 9 ವರ್ಷದಿಂದ ಸತತವಾಗಿ ಹೆಚ್ಚುತ್ತಿದ್ದು, 2024ರಲ್ಲಿ 2.7 ಲಕ್ಷ ಕೋಟಿ ಡಾಲರ್ ಮುಟ್ಟಿದೆ; 2023ಕ್ಕೆ ಹೋಲಿಸಿದರೆ, ಶೇ.9.4ರಷ್ಟು ಹೆಚ್ಚಳ. ಜಗತ್ತಿನ ಒಟ್ಟು ದೇಶಿ ಉತ್ಪಾದನೆ(ಜಿಡಿಪಿ)ಯಲ್ಲಿ ಸೇನಾ ವೆಚ್ಚ ಶೇ.2.5 ಹಾಗೂ ಸಂಘರ್ಷಪೀಡಿತ ದೇಶಗಳಲ್ಲಿ ಶೇ.4.4 ಇದೆ. ರಶ್ಯ-ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಯುರೋಪಿನ ಸೇನಾ ವೆಚ್ಚ ಶೇ.17, ರಶ್ಯದ ಸೇನಾ ವೆಚ್ಚ ಶೇ. 38 ಹಾಗೂ ಉಕ್ರೇನಿನ ಸೇನಾ ವೆಚ್ಚ ಶೇ. 2.9ರಷ್ಟು ಹೆಚ್ಚಿದೆ. ಯುರೋಪಿಯನ್ ದೇಶಗಳ ‘ರಿಆರ್ಮ್ ಪ್ಲ್ಯಾನ್-ರೆಡಿನೆಸ್ 2030’, ಸೇನೆ ವೆಚ್ಚವನ್ನು 800 ಶತಕೋಟಿ ಯುರೋಗೆ ಹೆಚ್ಚಿಸಲು ಹೇಳಿದೆ; ಇದು ಯುರೋಪ್ ಖಂಡದ 28 ದೇಶಗಳ ಒಕ್ಕೂಟವಾದ ಯುರೋಪಿಯನ್ ಯೂನಿಯನ್‌ನ ಜಿಡಿಪಿಯ ಶೇ.3.5. 2024ರಲ್ಲಿ ನೇಟೊ(ನಾರ್ಥ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಷನ್; ಅಮೆರಿಕ ಸೇರಿದಂತೆ 32 ದೇಶಗಳ ಒಕ್ಕೂಟ) ದೇಶಗಳು ಸೇನೆಗೆ 1.5 ಲಕ್ಷ ಕೋಟಿ(1.5 ಟ್ರಿಲಿಯನ್) ಡಾಲರ್ ವೆಚ್ಚ ಮಾಡಿದ್ದು, ಇದರಲ್ಲಿ ಅಮೆರಿಕದ ಪಾಲು 997 ಶತಕೋಟಿ ಡಾಲರ್. ನೇಟೊ 2025ರಲ್ಲಿ ಈ ಮೊತ್ತವನ್ನು ದುಪ್ಪಟ್ಟು ಮಾಡಲು ನಿರ್ಧರಿಸಿದೆ. ಇದಕ್ಕೆ ಪೂರಕವಾಗಿ ಪ್ರಮುಖ ಶಸ್ತ್ರಾಸ್ತ್ರ ಉತ್ಪಾದನೆ ಕಂಪೆನಿಗಳ ವಹಿವಾಟು ಹೆಚ್ಚಿದೆ; 2024ರಲ್ಲಿ 318.7 ಶತಕೋಟಿ ಡಾಲರ್ ವಹಿವಾಟು ನಡೆಸಿವೆ: 2023ಕ್ಕೆ ಹೋಲಿಸಿದರೆ ಶೇ.29ರಷ್ಟು ಹೆಚ್ಚಳ.

ಅಮೆರಿಕ, ಪಶ್ಚಿಮ ಯುರೋಪ್, ಜಪಾನ್, ಆಸ್ಟ್ರೇಲಿಯ ಮತ್ತು ನ್ಯೂಝಿಲ್ಯಾಂಡ್ ಒಳಗೊಂಡ ಪ್ರಥಮ ಜಗತ್ತಿನ ಆರ್ಥಿಕತೆಯ ಚಾಲನ ಶಕ್ತಿ-ಶಸ್ತ್ರಾಸ್ತ್ರ ಮಾರಾಟ. ಈ ದೇಶಗಳು ಯುದ್ಧದಲ್ಲಿ ತೊಡಗಿಕೊಂಡ ಎರಡೂ ದೇಶಗಳಿಗೂ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತವೆ; ಯುದ್ಧ ಆರಂಭಿಸಲು ಅಗತ್ಯ ಸನ್ನಿವೇಶ ಸೃಷ್ಟಿ ಮಾಡುತ್ತವೆ. ಅಮೆರಿಕ, ಫ್ರಾನ್ಸ್, ರಶ್ಯ, ಚೀನಾ ಮತ್ತು ಜರ್ಮನಿ ಜಾಗತಿಕ ಶಸ್ತ್ರಾಸ್ತ್ರ ವಹಿವಾಟಿನಲ್ಲಿ ಶೇ.72ರಷ್ಟು ಪಾಲು ಹೊಂದಿವೆ. ಸಿಪ್ರಿ(ಸ್ಟಾಕ್‌ಹೋಮ್ ಇಂಟರ್‌ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್) ಪ್ರಕಾರ, 2024ರಲ್ಲಿ ನೂರು ಶಸ್ತ್ರಾಸ್ತ್ರ ಉತ್ಪಾದನೆ ಕಂಪೆನಿಗಳ ವಹಿವಾಟು 632 ಶತಕೋಟಿ ಡಾಲರ್ ಇತ್ತು. ಶಸ್ತ್ರಾಸ್ತ್ರ ಉತ್ಪಾದನೆಯಲ್ಲಿ ಅಮೆರಿಕದ ಲಾಕ್ ಹೀಡ್ ಮಾರ್ಟಿನ್, ರೇಥಿಯಾನ್ ಟೆಕ್ನಾಲಜೀಸ್(ಆರ್‌ಟಿಎಕ್ಸ್), ನಾರ್ತ್‌ರಾಪ್ ಗ್ರುಮ್ಮನ್, ಬೋಯಿಂಗ್ ಮತ್ತು ಜನರಲ್ ಡೈನಮಿಕ್ಸ್ ಮೊದಲ ಐದು ಸ್ಥಾನಗಳಲ್ಲಿವೆ; ಆನಂತರ ಬಿಎಇ ಸಿಸ್ಟಮ್ಸ್(ಇಂಗ್ಲೆಂಡ್), ಸಫ್ರಾನ್(ಫ್ರಾನ್ಸ್), ನಾರಿಂಕೋ ಮತ್ತು ಎವಿಕ್ (ಚೀನಾ), ಎಂಬಿಡಿಎ(ಜರ್ಮನಿ), ಥೇಲ್ಸ್(ಫ್ರಾನ್ಸ್), ಲಿಯೊನಾರ್ಡೋ(ಇಟಲಿ) ಹಾಗೂ ಎಲ್‌3 ಹ್ಯಾರಿಸ್ ಟೆಕ್ನಾಲಜೀಸ್(ಅಮೆರಿಕ) ಇವೆ. ಬಹುತೇಕ ಯುದ್ಧಗಳಿಗೆ ಇವೇ ಕಂಪೆನಿಗಳು ಶಸ್ತ್ರಾಸ್ತ್ರ ಪೂರೈಸುತ್ತವೆ ಮತ್ತು ಅಮೆರಿಕದ ಕರಾಳಹಸ್ತ ಢಾಳಾಗಿ ಕಾಣುತ್ತದೆ.

ಸೇನೆ ಚಟುವಟಿಕೆಗಳಿಂದ ಮಾಲಿನ್ಯ

ಮಿಲಿಟರಿ ಕಾರ್ಯಾಚರಣೆಗಳು ತೀವ್ರ ಮಾಲಿನ್ಯಕ್ಕೆ ಕಾರಣವಾಗುತ್ತವೆ. ಅಂದಾಜಿನ ಪ್ರಕಾರ, ಒಟ್ಟು ಮಾಲಿನ್ಯದಲ್ಲಿ ಮಿಲಿಟರಿ ಪಾಲು ಶೇ.5.5. ವಿಶ್ವಸಂಸ್ಥೆ ರೂಪಿಸಿದ ಎಸ್‌ಡಿಜಿ(ಸಾಮಾನ್ಯ ಅಭಿವೃದ್ಧಿ ಗುರಿ)ಗಳ ಮೇಲೆ ಸೇನಾ ವೆಚ್ಚದ ಹೆಚ್ಚಳದ ಪರಿಣಾಮ ಕುರಿತ ಅಧ್ಯಯನದ ಪ್ರಕಾರ, ಯುರೋಪಿಯನ್ ಯೂನಿಯನ್‌ನ ರಿಆರ್ಮ್ ಪ್ಲ್ಯಾನ್-ರೆಡಿನೆಸ್ 2030 ಪ್ರಸ್ತಾವದಿಂದ ಮಿಲಿಟರಿ ವೆಚ್ಚ ಶೇ.1ರಷ್ಟು ಮತ್ತು ಇದರಿಂದ ಕೊಳೆ ಗಾಳಿ ತುಂಬುವಿಕೆ ಶೇ.2ರಷ್ಟು ಹೆಚ್ಚಲಿದೆ.

2023ರಲ್ಲಿ ನೇಟೊ ದೇಶಗಳ ವಾರ್ಷಿಕ ಕೊಳೆಗಾಳಿ ಪ್ರಮಾಣ 4,861 ದಶಲಕ್ಷ ಟನ್ ಇಂಗಾಲದ ಡೈಆಕ್ಸೈಡ್‌ಗೆ ಸಮ (ಎಂಟಿ ಸಿಒ2ಇ) ಇತ್ತು(ಅಮೆರಿಕ ಹೊರತುಪಡಿಸಿ). ಇದರಿಂದ ಆದ ವಾರ್ಷಿಕ ಪರಿಸರ ನಷ್ಟ 119ರಿಂದ 264 ಶತಕೋಟಿ ಡಾಲರ್; ಅಮೆರಿಕ ಈಗಾಗಲೇ ಪ್ಯಾರಿಸ್ ಒಪ್ಪಂದ( 2015ರಲ್ಲಿ ಪ್ಯಾರಿಸ್ ನಲ್ಲಿ ನಡೆದ ವಿಶ್ವ ಸಂಸ್ಥೆಯ ಹವಾಮಾನ ಬದಲಾವಣೆ ಶೃಂಗದಲ್ಲಿ ಜಾಗತಿಕ ತಾಪಮಾನ ಹೆಚ್ಚಳವನ್ನು 1.5 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಮಾಡಲು 196 ದೇಶಗಳು ಸಮ್ಮತಿಸಿದ್ದವು)ದಿಂದ 2 ಬಾರಿ ಹೊರಬಂದಿದೆ; ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಹವಾಮಾನ ಬದಲಾವಣೆ’ ಎಂಬುದು ಇಲ್ಲವೇ ಇಲ್ಲ ಎನ್ನುತ್ತಾರೆ. ಅಮೆರಿಕದ ಸೇನೆ ಜಗತ್ತಿನ ಅತ್ಯಂತ ದೊಡ್ಡ ಇಂಧನ(ಹೈಡ್ರೋಕಾರ್ಬನ್) ಬಳಕೆದಾರ. ರಾಯ್ಟರ್ಸ್‌ ವರದಿ ಪ್ರಕಾರ, 2022ರಲ್ಲಿ ಪೆಂಟಗನ್ ಚಟುವಟಿಕೆಗಳಿಂದ 48 ದಶಲಕ್ಷ ಮೆಟ್ರಿಕ್ ಟನ್ ಕೊಳೆಗಾಳಿ ಜಮೆಯಾಗಿತ್ತು(ಇದರಲ್ಲಿ ಅಂತರ್‌ರಾಷ್ಟ್ರೀಯ ಸಾಗಣೆ ಮತ್ತು ಬಂಕರ್ ಇಂಧನ ಸೇರ್ಪಡೆಯಾಗಿಲ್ಲ). ಇದು ಫಿನ್‌ಲ್ಯಾಂಡ್, ಗ್ವಾಟೆಮಾಲಾ ಮತ್ತು ಸಿರಿಯಾ ವರ್ಷವೊಂದಕ್ಕೆ ಹೊರಚೆಲ್ಲುವ ಸಿಒ2ಗೆ ಸಮ.

ಸೇನೆಯ ಚಟುವಟಿಕೆಗಳಿಗೆ ಅಪಾರ ಪ್ರಮಾಣದ ಇಂಧನ ಅಗತ್ಯವಿದೆ. ಉಕ್ರೇನ್ ಮತ್ತು ರಶ್ಯ ನಡುವಿನ ಯುದ್ಧದ ಮೊದಲ ಮೂರು ವರ್ಷದಲ್ಲಿ 230 ದಶಲಕ್ಷ ಟನ್ ಸಿಒ2 ಬಿಡುಗಡೆಯಾಗಿದೆ; ಇದು ಆಸ್ಟ್ರಿಯಾ, ಹಂಗೇರಿ, ಜೆಕ್ ಗಣರಾಜ್ಯ ಮತ್ತು ಸ್ಲೋವಾಕಿಯಾದ ವಾರ್ಷಿಕ ಹೊರಸೂಸುವಿಕೆಗೆ ಸಮ. ಯುದ್ಧದಿಂದ ಉಂಟಾಗುವ ಮಾಲಿನ್ಯವನ್ನು ಲೆಕ್ಕ ಮಾಡಿದ ಮೊದಲ ಪ್ರಯತ್ನ ಇದು. ಸೇನೆ ಹೊರಸೂಸುವ ಸಿಒ2 ಪ್ರಮಾಣವು ವಿಶ್ವದ ಅನೇಕ ದೇಶಗಳ ಒಟ್ಟು ಹೊರಸೂಸುವಿಕೆಗಿಂತ ಹೆಚ್ಚು ಇದೆ; ಜಾಗತಿಕವಾಗಿ ಬಿಡುಗಡೆಯಾಗುವ ಹಸಿರು ಮನೆ ಅನಿಲದಲ್ಲಿ ಸೇನೆ ಶೇ. 5.5ರಷ್ಟನ್ನು ಬಿಡುಗಡೆ ಮಾಡುತ್ತದೆ ಎಂದು ಅಂದಾಜಿಸಲಾಗಿದೆ.

ಯುದ್ಧ, ಮಿಲಿಟರೀಕರಣ ಹಾಗೂ ಹವಾಮಾನ ಬದಲಾವಣೆ ನಡುವಿನ ಸಂಬಂಧದ ಬಗ್ಗೆ ಮಾಹಿತಿ-ಜಾಗೃತಿ-ಅರಿವು ಕಡಿಮೆ. 2022ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಶಸ್ತ್ರಾಸ್ತ್ರ ಸಂಘರ್ಷದ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ ಕುರಿತು 27 ನಿಯಮಗಳನ್ನು ಅಂಗೀಕರಿಸಿತು. ಆದರೆ, ಮಿಲಿಟರಿ ಚಟುವಟಿಕೆಯಿಂದ ಉತ್ಪತ್ತಿಯಾಗುವ ಹಸಿರುಮನೆ ಅನಿಲಗಳ ಬಗ್ಗೆ ಇದರಲ್ಲಿ ಯಾವುದೇ ಉಲ್ಲೇಖ ಇರಲಿಲ್ಲ. ವಿಶ್ವ ಸಂಸ್ಥೆಯ ಹವಾಮಾನ ಬದಲಾವಣೆ ಒಪ್ಪಂದದ ಚೌಕಟ್ಟು(ಯುಎನ್‌ಎಫ್ ಸಿಸಿಸಿ) ಸೇನೆಯ ಇಂಧನ ಬಳಕೆಯನ್ನು ಲೆಕ್ಕ ಹಾಕುತ್ತದೆಯೇ ಹೊರತು, ಶಸ್ತ್ರಾಸ್ತ್ರ ತಯಾರಿಕೆ ಉದ್ದಿಮೆ, ಪೂರೈಕೆ ಸರಪಳಿ ಹಾಗೂ ಸೇನೆಯ ಚಟುವಟಿಕೆಗಳಿಂದ ಹೊರಹೊಮ್ಮುವ ಮಾಲಿನ್ಯ ಕುರಿತು ಏನೂ ಹೇಳುವುದಿಲ್ಲ. ಇದರಿಂದ, ಸಂಪೂರ್ಣ ಚಿತ್ರಣ ಲಭ್ಯವಾಗುತ್ತಿಲ್ಲ ಎಂದು ‘ವರ್ಲ್ಡ್ ಕ್ಲೈಮೇಟ್ ಆಂಡ್ ಸೆಕ್ಯುರಿಟಿ ರಿಪೋರ್ಟ್-2024’ ಹೇಳಿದೆ. ಇಂಗ್ಲೆಂಡ್ ಮತ್ತು ಯುರೋಪ್‌ನಲ್ಲಿ ನಡೆದ ಅಧ್ಯಯನದ ಪ್ರಕಾರ, ಶಸ್ತ್ರಾಸ್ತ್ರ-ಉಪಕರಣಗಳ ಖರೀದಿ ಹಾಗೂ ಇನ್ನಿತರ ಪೂರೈಕೆ ಸರಪಳಿಗಳಿಂದ ಹೆಚ್ಚು ಮಾಲಿನ್ಯ ಉಂಟಾಗುತ್ತದೆ. ಕದನ ಅಂತ್ಯಗೊಂಡ ಬಳಿಕ ಸಮರ್ಪಕ ಮೌಲ್ಯಮಾಪನ ನಡೆಯುತ್ತಿಲ್ಲ. ಈ ದೇಶಗಳಲ್ಲಿ ಅರಣ್ಯನಾಶದ ಹೆಚ್ಚಳದಿಂದ ಮಾಲಿನ್ಯವೂ ಹೆಚ್ಚಿರುತ್ತದೆ.

ಬ್ರೆಝಿಲ್‌ನಲ್ಲಿ ನವೆಂಬರ್ 10, 2025ರಿಂದ ನಡೆಯಲಿರುವ ಪರಿಸರ ಶೃಂಗ, ಸಿಒಪಿ 30(ಕಾನ್ಫೆರೆನ್ಸ್ ಆಫ್ ಪಾರ್ಟೀಸ್)ರ ಸಿಇಒ ಅನಾ ಟೋನಿ ಪ್ರಕಾರ, ಹವಾಮಾನ ಬದಲಾವಣೆಯು ‘ಅತಿ ದೊಡ್ಡ ಯುದ್ಧ’ವಾಗಿದ್ದು, ದೇಶದೊಳಗೆ ಮತ್ತು ಹೊರಗೆ ಸಂಘರ್ಷವನ್ನು ಹುಟ್ಟುಹಾಕಬಹುದು. ಸಿಒಪಿ 30ರಲ್ಲಿ ಮಿಲಿಟರಿ ಮೂಲಸೌಲಭ್ಯಗಳನ್ನು ಇಂಗಾಲಸ್ನೇಹಿ ಆಗಿಸುವಿಕೆ, ಮಿಲಿಟರಿ ಪೂರೈಕೆ ಸರಪಳಿಯಲ್ಲಿ ಇಂಧನ ಸ್ಥಿತ್ಯಂತರ ಮತ್ತು ಸೇನೆಯ ಕೊಳೆಗಾಳಿ ಕುರಿತು ವರದಿ ಸಲ್ಲಿಸುವಿಕೆಗೆ ಸಂಬಂಧಿಸಿದಂತೆ ಚರ್ಚೆ ನಡೆಯಲಿದೆ. ಅಂತರ್‌ರಾಷ್ಟ್ರೀಯ ನ್ಯಾಯಾಲಯ(ಐಸಿಜೆ) ‘ಹವಾಮಾನ ಬದಲಾವಣೆಯಿಂದ ಆಗುವ ಹಾನಿಯನ್ನು ತಡೆಯುವ ಜವಾಬ್ದಾರಿ ದೇಶಗಳ ಮೇಲೆ ಇದೆ’ ಎಂದು ಇತ್ತೀಚೆಗೆ ಹೇಳಿದೆ.

ಯುದ್ಧದಿಂದ ಸರ್ವನಾಶ

ಯುದ್ಧದಿಂದ ಆಗುವ ಜೀವಹಾನಿ-ಪರಿಸರ ನಾಶಕ್ಕೆ ಗಾಝಾ ಒಂದು ಜ್ವಲಂತ ನಿದರ್ಶನ. ಅಕ್ಟೋಬರ್ 7, 2023ರಂದು ಹಮಾಸ್ ದಾಳಿಯಿಂದ 1,200 ಜನ ಮೃತಪಟ್ಟ ಬಳಿಕ ಇಸ್ರೇಲ್ ಪ್ರತಿದಾಳಿ ನಡೆಸಿತು; 251 ಒತ್ತೆಯಾಳುಗಳ ಬಿಡುಗಡೆ ನೆವದಲ್ಲಿ ಆರಂಭವಾದ ಹತ್ಯಾಕಾಂಡ 21 ತಿಂಗಳುಗಳ ಬಳಿಕವೂ ಮುಂದುವರಿದಿದ್ದು, ಗಾಝಾ ಪಟ್ಟಿಯನ್ನು ನರಕವಾಗಿಸಿದೆ. ಇಸ್ರೇಲ್ ಮತ್ತು ಮೆಡಿಟರೇನಿಯನ್ ಸಮುದ್ರದ ನಡುವೆ 365 ಚದರ ಕಿ.ಮೀ. ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಗಾಝಾದ ಜನಸಂಖ್ಯೆ ಅಂದಾಜು 23 ಲಕ್ಷ. ಯುದ್ಧದಿಂದ 17,000 ಮಕ್ಕಳು ಸೇರಿದಂತೆ 59,000 ಫೆಲೆಸ್ತೀನಿಯರು ಮೃತಪಟ್ಟಿದ್ದಾರೆ(ಜುಲೈ 26, 2025); 200ಕ್ಕೂ ಅಧಿಕ ಪತ್ರಕರ್ತರು ಹಾಗೂ 500ಕ್ಕೂ ಅಧಿಕ ನೆರವು ಕಾರ್ಯಕರ್ತರು ಹತ್ಯೆ ಆಗಿದ್ದಾರೆ; 1.4 ಲಕ್ಷಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇದರಿಂದ ಗಾಝಾ 21ನೇ ಶತಮಾನದ ಅತ್ಯಂತ ಅಪಾಯಕರ ಯುದ್ಧಭೂಮಿಯಾಗಿ ಪರಿಣಮಿಸಿದೆ. ಪ್ರಸ್ತುತ 20 ಲಕ್ಷ ಮಂದಿ ಕೇವಲ 45 ಚದರ ಕಿ.ಮೀ. ಪ್ರದೇಶದಲ್ಲಿ ಉಸಿರು ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಶೇ. 80ರಷ್ಟು ಕೃಷಿ ಭೂಮಿ ಹಾಳಾಗಿದೆ; ಆಸ್ಪತ್ರೆಗಳು, ಶಾಲೆಗಳು, ವಾಣಿಜ್ಯ, ಧಾರ್ಮಿಕ ಹಾಗೂ ಕೈಗಾರಿಕೆ ಕಟ್ಟಡಗಳು ಹಾನಿಗೀಡಾಗಿವೆ. ಯುನಿಸೆಫ್ ಪ್ರಕಾರ, ಗಾಝಾ ಪಟ್ಟಿಯಲ್ಲಿ ಜಗತ್ತಿನ ಬೇರೆಲ್ಲೂ ಇಲ್ಲದಷ್ಟು ಅಂಗಾಂಗ ಕಳೆದುಕೊಂಡ ಮಕ್ಕಳು ಇದ್ದಾರೆ. ಮಾರ್ಚ್ 2025ರಲ್ಲಿ 2ನೇ ಯುದ್ಧವಿರಾಮ ಅಂತ್ಯಗೊಂಡ ಬಳಿಕ ಇಸ್ರೇಲ್ ತನ್ನ ಹಿಡಿತ ಬಿಗಿಗೊಳಿಸಿದೆ. ವಿಶ್ವಸಂಸ್ಥೆ ಪ್ರಕಾರ, ಮೇ ಬಳಿಕ ಆಹಾರಕ್ಕಾಗಿ ನೆರವು ಕೇಂದ್ರಗಳ ಬಳಿ ಸೇರಿದ್ದ 1,000ಕ್ಕೂ ಅಧಿಕ ಜನರನ್ನು ಕೊಲ್ಲಲಾಗಿದೆ. 6 ತಿಂಗಳಿನಿಂದ 5 ವರ್ಷದೊಳಗಿನ ಮಕ್ಕಳಲ್ಲಿ ಅಪೌಷ್ಟಿಕತೆ ತೀವ್ರಗೊಳ್ಳುತ್ತಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ‘ಸಂಪೂರ್ಣ ಜಯ’ ಮತ್ತು ಹಮಾಸ್ ‘ಇಸ್ರೇಲಿನ ಸೇನೆ ಸಂಪೂರ್ಣ ವಾಪಸ್ ಆಗಬೇಕು’ ಎಂದು ಹಟ ಹಿಡಿದಿವೆ. ಇದರಿಂದ ಶಾಂತಿ ಮರೀಚಿಕೆಯಾಗಿದೆ.

ಇನ್ನೊಂದು ನಿದರ್ಶನ

ಮಿತ್ರ ರಾಷ್ಟ್ರಗಳು ಜಪಾನಿನ ಹಿರೋಷಿಮಾ ಮೇಲೆ ಆಗಸ್ಟ್ 6ರಂದು ಹಾಕಿದ ‘ಲಿಟ್ಲ್ ಮ್ಯಾನ್’ ಮತ್ತು ನಾಗಾಸಾಕಿ ಮೇಲೆ ಆಗಸ್ಟ್ 9,1945ರಂದು ಎಸೆದ ‘ಫ್ಯಾಟ್ ಬಾಯ್’ ಅಣುಬಾಂಬ್‌ಗಳು ಅಪಾರ ಜೀವಹಾನಿಗೆ ಕಾರಣವಾದವು; ವರ್ಷಾಂತ್ಯದ ವೇಳೆಗೆ ಹಿರೋಷಿಮಾದಲ್ಲಿ ಅಂದಾಜು 1,40,000 ಹಾಗೂ ನಾಗಾಸಾಕಿಯಲ್ಲಿ ಅಂದಾಜು 74,000 ಮಂದಿ ಮೃತಪಟ್ಟರು. ಬದುಕುಳಿದವರು ವಿವಿಧ ರೀತಿಯ ಕ್ಯಾನ್ಸರ್ ಮತ್ತು ಇತರ ವಿಕಿರಣ ಸಂಬಂಧಿತ ಕಾಯಿಲೆಗಳಿಂದ ದೀರ್ಘಕಾಲ ಬಳಲಿದರು. ತ್ಯಾಜ್ಯಗಳ ಶುದ್ಧೀಕರಣಕ್ಕೆ ಒಂದು ವರ್ಷ ತೆಗೆದುಕೊಂಡಿತು.

ಲೇಖಕಿ ಮಾರ್ಗರೆಟ್ ಮೀಡ್ ‘ಪರಿಸರವನ್ನು ನಾಶ ಮಾಡಿದರೆ ನಮಗೆ ಸಮಾಜವೆಂಬುದೇ ಇರುವುದಿಲ್ಲ’; ‘ಯುದ್ಧ ಎನ್ನುವುದು ಕೇವಲ ಸೃಷ್ಟಿಯೇ ಹೊರತು ಜೈವಿಕ ಅಗತ್ಯವಲ್ಲ’ ಎಂದು ಹೇಳುತ್ತಾರೆ. ಆದರೆ, ಯುದ್ಧಗಳು ವ್ಯಾಪಾರ ಆಗಿರುವ ಮತ್ತು ಪರಿಸರ ಸಂರಕ್ಷಣೆ ಎನ್ನುವುದು ನಿರ್ಲಕ್ಷಿತವಾಗಿರುವ ಜಗತ್ತಿನಲ್ಲಿ ಇದನ್ನು ಡೊನಾಲ್ಡ್ ಟ್ರಂಪ್, ಬೆಂಜಮಿನ್ ನೆತನ್ಯಾಹು ಮತ್ತಿತರರಿಗೆ ಅರ್ಥ ಮಾಡಿಸುವುದು ಹೇಗೆ?

share
ಮಾಧವ ಐತಾಳ್
ಮಾಧವ ಐತಾಳ್
Next Story
X