Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಬಹುವಚನ
  5. ನೀರಿನ ಮೂಲಕ ಪಾಕಿಸ್ತಾನದ ಉಸಿರು...

ನೀರಿನ ಮೂಲಕ ಪಾಕಿಸ್ತಾನದ ಉಸಿರು ಕಟ್ಟಿಸಲು ಸಾಧ್ಯವೇ?

ಮಾಧವ ಐತಾಳ್ಮಾಧವ ಐತಾಳ್9 May 2025 10:50 AM IST
share
ನೀರಿನ ಮೂಲಕ ಪಾಕಿಸ್ತಾನದ ಉಸಿರು ಕಟ್ಟಿಸಲು ಸಾಧ್ಯವೇ?
ಪಾಕಿಸ್ತಾನಕ್ಕೆ ನೀರು ನಿರ್ಬಂಧಿಸುವ ಭಾರತದ ಸಾಮರ್ಥ್ಯವು ನೈಸರ್ಗಿಕ ಜಲ ಚಕ್ರ, ಮೂಲಸೌಕರ್ಯದಲ್ಲಿನ ಕಂದರ ಮತ್ತು ಒಪ್ಪಂದದ ನಿಯಮಗಳಿಂದ ನಿರ್ಬಂಧಿಸಲ್ಪಟ್ಟಿದೆ. ಇದರಿಂದ ಸಿಂಧೂ ನದಿ ವ್ಯವಸ್ಥೆಯ ಬಹುಪಾಲು ನೀರು ಪಾಕಿಸ್ತಾನಕ್ಕೆ ಹರಿಯುತ್ತಲೇ ಇರುತ್ತದೆ. ಪಶ್ಚಿಮ ನದಿಗಳಿಂದ ನಿಯಂತ್ರಿತ ಹರಿವನ್ನು (3.6 ಎಂಎಎಫ್) ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು. ಆದರೆ, ನೈಸರ್ಗಿಕ ಹರಿವು ನಮ್ಮ ನಿಯಂತ್ರಣದಲ್ಲಿ ಇಲ್ಲ. ಭಾರತ ಭಾರೀ ಅಣೆಕಟ್ಟು-ಜಲವಿದ್ಯುತ್ ಯೋಜನೆಗಳ ಮೂಲಕ ಸಂಗ್ರಹ ಸಾಮರ್ಥ್ಯ ಹೆಚ್ಚಿಸಿಕೊಂಡು, ಪಶ್ಚಿಮದ ನದಿಗಳ ಮೇಲೆ ಶಾಶ್ವತ ನಿಯಂತ್ರಣ ಪಡೆಯಬಹುದು. ಇದರಿಂದ ಪಾಕಿಸ್ತಾನದ ಮೇಲೆ ನೀರಿನ ಒತ್ತಡ ಹೆಚ್ಚುತ್ತದೆ.

ಪಹಲ್ಗಾಮ್ ಮಾರಕ ದಾಳಿ ನಂತರ ಸಿಂಧೂ ಜಲ ಒಪ್ಪಂದ(ಇಂಡಸ್ ವಾಟರ್ ಟ್ರೀಟಿ, ಐಡಬ್ಲ್ಯುಟಿ)ವನ್ನು ತಡೆಹಿಡಿಯುವುದಾಗಿ ಭಾರತ ಹೇಳಿದೆ. ಪ್ರತಿಯಾಗಿ, ತಾನು ಶಿಮ್ಲಾ ಒಪ್ಪಂದ ಸೇರಿದಂತೆ ಭಾರತದೊಂದಿಗೆ ಮಾಡಿಕೊಂಡಿರುವ ಎಲ್ಲ ದ್ವಿಪಕ್ಷೀಯ ಒಪ್ಪಂದಗಳನ್ನು ಅಮಾನತಿನಲ್ಲಿ ಇಡುವುದಾಗಿ ಪಾಕಿಸ್ತಾನ ಹೇಳಿಕೊಂಡಿದೆ. ನೀರಿನ ಮೂಲಕ ಪಾಕಿಸ್ತಾನದ ಉಸಿರು ಕಟ್ಟಿಸಲು ಸಾಧ್ಯವೇ?

ಐಡಬ್ಲ್ಯುಟಿಗೆ ಜವಾಹರಲಾಲ್ ನೆಹರೂ ಹಾಗೂ ಜನರಲ್ ಅಯ್ಯೂಬ್ ಖಾನ್ ಸೆಪ್ಟಂಬರ್ 19,1960ರಂದು ಸಹಿ ಹಾಕಿದ್ದರು. ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಪಂಜಾಬಿನ ಸಂಸದ ಇಕ್ಬಾಲ್ ಸಿಂಗ್, ಇದರಿಂದ ತಮ್ಮ ರಾಜ್ಯದಲ್ಲಿ ಆಹಾರ ಉತ್ಪಾದನೆಗೆ ಹಿನ್ನಡೆ ಆಗಲಿದೆ ಎಂದರೆ, ರಾಜಸ್ಥಾನದ ಸಂಸದ ಎಚ್.ಸಿ. ಮಾಥುರ್ ಒಪ್ಪಂದದಿಂದ ರಾಜ್ಯದ ಮೇಲೆ ತೀವ್ರ ವಿಪರಿಣಾಮ ಉಂಟಾಗಲಿದೆ ಎಂದು ಟೀಕಿಸಿದ್ದರು. ಕಾಂಗ್ರೆಸ್ ಮುಖಂಡ ಅಶೋಕ್ ಮೆಹ್ತಾ, ‘‘ದೇಶದ ಹಿತಾಸಕ್ತಿ ಕಾಯಬೇಕಿರುವವರೇ ವಂಚಿಸಿದ್ದಾರೆ’’ ಎಂದು ಟೀಕಿಸಿದ್ದರು. ಒಪ್ಪಂದವು ‘ಪಾಕಿಸ್ತಾನಕ್ಕೆ ಶರಣಾಗತಿ’ ಎಂಬ ಟೀಕೆಗೂ ಒಳಗಾಯಿತು. ದೇಶ ವಿಭಜನೆ ಬಳಿಕ 12 ವರ್ಷ ಎಳೆದಾಡಿದ ಈ ಒಪ್ಪಂದದಿಂದ ಪಾಕಿಸ್ತಾನಕ್ಕೆ 83 ಕೋಟಿ ರೂ. ವಿದೇಶಿ ವಿನಿಮಯ ಸಿಕ್ಕಿತು. ಒಪ್ಪಂದವನ್ನು ವಿರೋಧಿಸಿದವರನ್ನು ಸಂಕುಚಿತ ಮನಸ್ಸಿನವರು ಎಂದು ನೆಹರೂ ಖಂಡಿಸಿದರು. ಮೂರು ವಾರಗಳ ಬಳಿಕ ಸಂಸತ್ತು ಒಪ್ಪಂದವನ್ನು ಅನುಮೋದಿಸಿತು. ಒಪ್ಪಂದದ ಪ್ರಕಾರ, ಭಾರತವು ಪೂರ್ವದ ನದಿಗಳು(ರಾವಿ, ಬಿಯಾಸ್ ಮತ್ತು ಸಟ್ಲೆಜ್) ಮೇಲೆ ವಿಶೇಷ ಹಕ್ಕು ಹೊಂದಿರಲಿದೆ. ಇವುಗಳ ವಾರ್ಷಿಕ ಹರಿವು 33.8 ದಶಲಕ್ಷ ಎಕರೆ ಅಡಿ(ಎಂಎಎಫ್). ಪಾಕಿಸ್ತಾನವು ಪಶ್ಚಿಮ ನದಿಗಳಾದ ಸಿಂಧೂ, ಜೇಲಂ ಹಾಗೂ ಚೆನಾಬ್ ಮೇಲೆ ಹಕ್ಕು ಹೊಂದಿದ್ದು, ಇವುಗಳ ಹರಿವು ಪ್ರಮಾಣ 135.6 ದಶಲಕ್ಷ ಎಕರೆ ಅಡಿ. ಒಪ್ಪಂದದ ಪ್ರಕಾರ, ಭಾರತ 3.6 ಎಂಎಎಫ್ ನೀರು ಸಂಗ್ರಹಿಸಿ ಇಟ್ಟುಕೊಳ್ಳಬಹುದು; ಭಾರತಕ್ಕೆ ಶೇ.30 ಹಾಗೂ ಪಾಕಿಸ್ತಾನಕ್ಕೆ ಶೇ.70ರಷ್ಟು ನೀರು ಹಾಗೂ ಭಾರತದ 5 ದಶಲಕ್ಷ ಹೆಕ್ಟೇರ್ ಹಾಗೂ ಪಾಕಿಸ್ತಾನದ 21 ದಶಲಕ್ಷ ಹೆಕ್ಟೇರ್ ಭೂಮಿಗೆ ನೀರು ಲಭ್ಯವಾಯಿತು.

ಪಾಕಿಸ್ತಾನಕ್ಕೆ ನಿಗದಿಯಾದ ಸಿಂಧೂ, ಜೇಲಂ ಮತ್ತು ಚೆನಾಬ್ ನದಿಗಳ 135 ದಶಲಕ್ಷ ಎಕರೆ ಅಡಿ(ಎಂಎಎಫ್) ನೀರನ್ನು ಭಾರತ ಅನಿಯಮಿತ ಜಲವಿದ್ಯುತ್ ಯೋಜನೆಗೆ ಬಳಸಬಹುದು(ಉದಾಹರಣೆಗೆ, ಬಾಗ್ಲಿಹಾರ್). ಭಾರತ 7.01 ಲಕ್ಷ ಎಕರೆ ಭೂಮಿಗೆ ನೀರು ನೀಡಬಹುದು; ಜತೆಗೆ, ಜಮ್ಮು- ಕಾಶ್ಮೀರ ಮತ್ತು ಲಡಾಖ್‌ನಲ್ಲಿ 13.4 ಲಕ್ಷ ಎಕರೆ ನೀರಾವರಿ ಅಭಿವೃದ್ಧಿ ಪಡಿಸಬಹುದು. ಆದರೆ, ಹಾಲಿ 6.42 ಲಕ್ಷ ಎಕರೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಅಲ್ಲದೆ, ಭಾರತ ಪೂರ್ವ ನದಿಗಳಿಂದ ಹಂಚಿಕೆಯಾದ 33 ಎಂಎಎಫ್‌ನಲ್ಲಿ ಶೇ.90 ಮಾತ್ರ ಬಳಸುತ್ತಿದೆ. ರಾವಿ ನದಿಯಿಂದ 2 ಎಂಎಎಫ್ ಮತ್ತು ಸಟ್ಲೆಜ್/ಬಿಯಾಸ್‌ನಿಂದ 5.5 ಎಂಎಎಫ್ ನೀರು ಜಲಾಶಯ ನಿರ್ಮಿಸದ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಹರಿಯುತ್ತಿದೆ.

ಬ್ರಿಟಿಷರು ಪಂಜಾಬಿನಲ್ಲಿ ನಿರ್ಮಿಸಿದ್ದ ನಾಲೆ ವ್ಯವಸ್ಥೆ ಮೂಲಕ ನೀರು ಹಂಚಿಕೆಯಾಗುತ್ತಿತ್ತು. 1947-48ರ ಕಾಶ್ಮೀರ ಕುರಿತ ಘರ್ಷಣೆ ಹಿನ್ನೆಲೆಯಲ್ಲಿ ಭಾರತ ನೀರು ನಿಲುಗಡೆ ಮಾಡಿತು. 1948ರಲ್ಲಿ ಪಾಕ್ ಪ್ರಧಾನಿ ಲಿಯಾಕತ್ ಅಲಿ ಖಾನ್ ದಿಲ್ಲಿಗೆ ಆಗಮಿಸಿ, ಒಪ್ಪಂದ ಮಾಡಿಕೊಂಡರು. ಆದರೆ, ವಿವಾದ ಅಂತ್ಯಗೊಳ್ಳಲಿಲ್ಲ. 1951-52ರಲ್ಲಿ ಭಾರತವು ಸಂಸದೀಯ ಪ್ರಜಾಪ್ರಭುತ್ವವಾದರೆ, ಪಾಕಿಸ್ತಾನವು ಭಾಷೆ, ಪೂರ್ವ-ಪಶ್ಚಿಮ ಪಾಕಿಸ್ತಾನದ ನಡುವಿನ ಕಿತ್ತಾಟ ಮತ್ತು ಪ್ರಜಾಸತ್ತೆಯಿಲ್ಲದೆ ಬಳಲುತ್ತಿತ್ತು. ಪೂರ್ವ ಪಾಕಿಸ್ತಾನ ಮೂಲದ ಇಸ್ಕಂದರ್ ಮಿರ್ಝಾ ಅಧ್ಯಕ್ಷರಾದ ಬಳಿಕ ವೈರತ್ವ ಸ್ಫೋಟಗೊಂಡಿತು. ಮಿರ್ಝಾ ರಾಜಕೀಯ ಪಕ್ಷಗಳನ್ನು ನಿಷೇಧಿಸಿದರು. ಆದರೆ, ಕೆಲವೇ ವಾರಗಳ ಬಳಿಕ ಜನರಲ್ ಅಯ್ಯೂಬ್ ಖಾನ್, ನಿಷೇಧ ಆದೇಶ ಹಿಂಪಡೆದರು. ವಿಶ್ವ ಬ್ಯಾಂಕ್ ಮುಖ್ಯಸ್ಥ ಯೂಜೀನ್ ಬ್ಲಾಕ್ ಮಧ್ಯಸ್ಥಿಕೆಯಲ್ಲಿ ಒಪ್ಪಂದ ಏರ್ಪಟ್ಟಿತು. ಹೊಸ ದೇಶ ಸ್ಥಾಪನೆಯಾದ ಬಳಿಕ ಏನೇನೂ ಆಗಿಲ್ಲ ಎಂಬ ವೈಫಲ್ಯವನ್ನು ಮುಚ್ಚಿಕೊಳ್ಳಲು ಅಯ್ಯೂಬ್ ಖಾನ್ ಒಪ್ಪಂದವನ್ನು ಬಳಸಿಕೊಂಡರು. ಆದರೆ, ಒಪ್ಪಂದಕ್ಕೆ ಸತ್ವಪರೀಕ್ಷೆ ಎದುರಾಗಿದ್ದು 1965ರ ಯುದ್ಧದ ಸಮಯದಲ್ಲಿ. ತಾಷ್ಕೆಂಟ್ ಒಪ್ಪಂದದ ಬಳಿಕ ಅಯ್ಯೂಬ್ ಖಾನ್, 3 ದಶಲಕ್ಷ ಎಕರೆ ಭೂಮಿಗೆ ನೀರು ಹಾಗೂ 6 ದಶಲಕ್ಷ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿದ್ದ ಮಂಗ್ಲಾ ಅಣೆಕಟ್ಟು ನಿರ್ಮಿಸಿದರು. ಸಮಸ್ಯೆಯೆಂದರೆ, ಯೋಜನೆಯ ಹೆಚ್ಚು ಭಾಗ ಪಾಕ್ ಆಕ್ರಮಿತ ಕಾಶ್ಮೀರದಲ್ಲಿತ್ತು. ಈ ಅಣೆಕಟ್ಟಿನಿಂದ ಪಿಒಕೆ ಮೇಲಿನ ಭಾರತದ ಹಕ್ಕಿಗೆ ಧಕ್ಕೆಯಾಗುವುದಿಲ್ಲ ಎಂದು ಇಂದಿರಾ ಗಾಂಧಿ ಹೇಳಿದರು.

ಹೊಸ ಒಪ್ಪಂದ ಬೇಕಿದೆ

ಸಿಂಧೂ ಜಲ ಒಪ್ಪಂದದಿಂದ ಹೊರನಡೆಯುವುದು ಸಾಧ್ಯವಿಲ್ಲ. ಆದರೆ, ವಿಭಾಗ 12(3) ಹಾಗೂ 4ರ ಅನ್ವಯ ಹೊಸ ಒಪ್ಪಂದ ಮಾಡಿಕೊಳ್ಳಬಹುದು. ಆದರೆ, ಇದಕ್ಕೆ ಪಾಕಿಸ್ತಾನ ಒಪ್ಪಬೇಕಾಗುತ್ತದೆ. ಅಂಥ ಸಾಧ್ಯತೆ ಕಡಿಮೆ. ಆದರೆ, ಭಾರತ ಪಶ್ಚಿಮದ ನದಿಗಳಿಗೆ ಅಣೆಕಟ್ಟುಗಳು ಮತ್ತು ಜಲವಿದ್ಯುತ್ ಯೋಜನೆಗಳನ್ನು ನಿರ್ಮಿಸಿದರೆ, ಪಾಕಿಸ್ತಾನಕ್ಕೆ ಕೆಳಮುಖ ಹರಿವು ಕಡಿಮೆಯಾಗಿ, ಕೃಷಿ ಮತ್ತು ಕುಡಿಯುವ ನೀರಿನ ಕೊರತೆಯಾಗಲಿದೆ. ಜೊತೆಗೆ, ಚೆನಾಬ್ ನದಿಯ ಉಪನದಿ ಪಾಕಲ್ ದುಲ್‌ಗೆ ಖಿಶ್ತ್‌ವಾರ್ ಜಿಲ್ಲೆಯಲ್ಲಿ ನಿರ್ಮಿಸುತ್ತಿರುವ ಜಲವಿದ್ಯುತ್ ಯೋಜನೆ(1,000 ಮೆಗಾವ್ಯಾಟ್) ಮತ್ತು ಸಾವಲ್ಕೋಟ್ (1,856 ಮೆಗಾವ್ಯಾಟ್) ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಿದರೆ, ಭವಿಷ್ಯದಲ್ಲಿ ಚೆನಾಬ್‌ನ ನಿಯಂತ್ರಣ ನಮಗೆ ಸಿಗಲಿದೆ. ಆದರೆ, ಈ ನದಿಗಳಲ್ಲಿ ನೈಸರ್ಗಿಕ ಹರಿವು ಮುಂದುವರಿಯುತ್ತದೆ. ಅಂದರೆ, ನಿರ್ದಿಷ್ಟ ಅವಧಿಯಲ್ಲಿ ನದಿಯಲ್ಲಿ ಮಳೆ, ಹಿಮನದಿ ಕರಗುವಿಕೆ ಮತ್ತು ಅಂತರ್ಜಲ ಸೋರಿಕೆಯಿಂದ ಆಗುವ ಹರಿವು. ನಿಯಂತ್ರಿತ ಹರಿವು ಎಂದರೆ ಅಣೆಕಟ್ಟುಗಳು, ಜಲಾಶಯ ಇತ್ಯಾದಿ ಮಾನವ ನಿರ್ಮಿತ ರಚನೆಗಳ ಮೂಲಕ ನಿಯಂತ್ರಿಸಲ್ಪಡುವ ನೀರು. ಐಡಬ್ಲ್ಯುಟಿ ಪ್ರಕಾರ, ಭಾರತ ಪಶ್ಚಿಮದ ನದಿಗಳಲ್ಲಿ ಜಲವಿದ್ಯುತ್- ನೀರಾವರಿ ಯೋಜನೆಗಳನ್ನು ನಿರ್ಮಿಸಬಹುದು; ವಿದ್ಯುತ್ ಉತ್ಪಾದನೆಗಾಗಿ ತಾತ್ಕಾಲಿಕವಾಗಿ ನೀರು ಹಿಡಿದಿಟ್ಟುಕೊಳ್ಳಬಹುದು ಅಥವಾ ತಿರುಗಿಸಬಹುದು. ಆದರೆ, ಇದರಿಂದ ಪಾಕಿಸ್ತಾನಕ್ಕೆ ನೀರು ಕಡಿಮೆ ಆಗಬಾರದು.

ಪಶ್ಚಿಮದ ನದಿಗಳು ತಮ್ಮ ಹರಿವಿನ ಶೇ.60-70ನ್ನು ಹಿಮನದಿ ಕರಗುವಿಕೆಯಿಂದ ಮತ್ತು ಶೇ. 30-40ನ್ನು ಮಳೆಯಿಂದ ಪಡೆಯುತ್ತವೆ(ಅಂದಾಜು 135 ಎಂಎಎಫ್ ನೀರು ಲಭ್ಯವಾಗುತ್ತದೆ). ವಾರ್ಷಿಕ 131.4 ಎಂಎಎಫ್ ನೈಸರ್ಗಿಕ ಹರಿವು ಪಾಕಿಸ್ತಾನವನ್ನು ತಲುಪುತ್ತದೆ. ಇದನ್ನು ಭಾರತ ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ, ಅಣೆಕಟ್ಟುಗಳು-ಬ್ಯಾರೇಜ್‌ಗಳಿಂದ ಬಿಡುಗಡೆಯಾಗುವ 3.6 ಎಂಎಎಫ್ ನೀರು ನಿರ್ವಹಿಸಲು ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಗ್ರಹ ಸೌಕರ್ಯಗಳಿಲ್ಲ. ಬಗ್ಲಿಹಾರ್ ಅಣೆಕಟ್ಟಿನಲ್ಲಿ ಹೆಚ್ಚೆಂದರೆ 1.5 ಎಂಎಎಫ್ ನೀರು ಹಿಡಿದಿಡಬಹುದು. ಆದರೆ, ಜಲಾಶಯಗಳಿಲ್ಲದೆ, ನೀರು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಪಾಕಿಸ್ತಾನದ್ದೂ ಇದೇ ಸಮಸ್ಯೆ. ಮಂಗ್ಲಾ ಮತ್ತು ತರ್ಬೆಲಾ ಅಣೆಕಟ್ಟುಗಳ ಒಟ್ಟು ಸಂಗ್ರಹ ಸಾಮರ್ಥ್ಯ 14.4 ಎಂಎಎಫ್. ಇದು ಐಡಬ್ಲ್ಯುಟಿ ಅನುಮತಿಸಿದ ವಾರ್ಷಿಕ ಹಕ್ಕಿನ ಕೇವಲ ಶೇ.10 ಮಾತ್ರ. ಪಾಕಿಸ್ತಾನ ಈ ಬೇಸಿಗೆಯಲ್ಲಿ (2025) ಕಡಿಮೆ ಹರಿವನ್ನು ಹೇಗೆ ನಿರ್ವಹಿಸುತ್ತದೆ ಎಂದು ಕಾದುನೋಡಬೇಕಿದೆ.

ಪಾಕಿಸ್ತಾನಕ್ಕೆ ನೀರು ನಿರ್ಬಂಧಿಸುವ ಭಾರತದ ಸಾಮರ್ಥ್ಯವು ನೈಸರ್ಗಿಕ ಜಲ ಚಕ್ರ, ಮೂಲಸೌಕರ್ಯದಲ್ಲಿನ ಕಂದರ ಮತ್ತು ಒಪ್ಪಂದದ ನಿಯಮಗಳಿಂದ ನಿರ್ಬಂಧಿಸಲ್ಪಟ್ಟಿದೆ. ಇದರಿಂದ ಸಿಂಧೂ ನದಿ ವ್ಯವಸ್ಥೆಯ ಬಹುಪಾಲು ನೀರು ಪಾಕಿಸ್ತಾನಕ್ಕೆ ಹರಿಯುತ್ತಲೇ ಇರುತ್ತದೆ. ಪಶ್ಚಿಮ ನದಿಗಳಿಂದ ನಿಯಂತ್ರಿತ ಹರಿವನ್ನು (3.6 ಎಂಎಎಫ್) ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು. ಆದರೆ, ನೈಸರ್ಗಿಕ ಹರಿವು ನಮ್ಮ ನಿಯಂತ್ರಣದಲ್ಲಿ ಇಲ್ಲ. ಭಾರತ ಭಾರೀ ಅಣೆಕಟ್ಟು-ಜಲವಿದ್ಯುತ್ ಯೋಜನೆಗಳ ಮೂಲಕ ಸಂಗ್ರಹ ಸಾಮರ್ಥ್ಯ ಹೆಚ್ಚಿಸಿಕೊಂಡು, ಪಶ್ಚಿಮದ ನದಿಗಳ ಮೇಲೆ ಶಾಶ್ವತ ನಿಯಂತ್ರಣ ಪಡೆಯಬಹುದು. ಇದರಿಂದ ಪಾಕಿಸ್ತಾನದ ಮೇಲೆ ನೀರಿನ ಒತ್ತಡ ಹೆಚ್ಚುತ್ತದೆ.

ನೀರು ಒಂದು ಆಯುಧ

21ನೇ ಶತಮಾನದಲ್ಲಿ ಹಿಮಾಲಯದಲ್ಲಿ ಚೀನಾ ಹಲವು ಭಾರೀ ಅಣೆಕಟ್ಟುಗಳನ್ನು ಕಟ್ಟುವ ಮೂಲಕ ನೀರನ್ನು ಅಸ್ತ್ರವನ್ನಾಗಿ ಬಳಸಲು ಆರಂಭಿಸಿತು. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ಮುಂದುವರಿಯಿತು. ಬಲೂಚಿಸ್ತಾನದ ಉಗ್ರರ ಚಟುವಟಿಕೆಗೆ ಬೆಂಬಲ ನೀಡಿದ ಆರೋಪದಡಿ ಕುಲಭೂಷಣ್ ಜಾಧವ್ ಬಂಧನ(2016), ಜನವರಿಯಲ್ಲಿ ಪಠಾಣ್‌ಕೋಟ್ ಹಾಗೂ ಸೆಪ್ಟಂಬರ್‌ನಲ್ಲಿ ಉರಿಯಲ್ಲಿ ಉಗ್ರರ ದಾಳಿ ನಡೆಯಿತು. ಭಾರತ ಕಾಶ್ಮೀರದಲ್ಲಿ ಕಿಶನ್ ಗಂಗಾ ಅಣೆಕಟ್ಟು ನಿರ್ಮಾಣ ಮುಗಿಸಿ, ಚೆನಾಬ್‌ನಲ್ಲಿ ರಾಟ್ಲ್ ಜಲಶಕ್ತಿ ಯೋಜನೆಯನ್ನು ಮುಂದೊತ್ತಿತು. 2023ರಲ್ಲಿ ಒಪ್ಪಂದದಲ್ಲಿ ಬದಲಾವಣೆ ಮಾಡಬೇಕು ಎಂಬ ಭಾರತದ ಮನವಿಗೆ ಪಾಕಿಸ್ತಾನ ಒಪ್ಪಲಿಲ್ಲ. ಪಹಲ್ಗಾಮ್ ದಾಳಿ ಬಳಿಕ ಎಪ್ರಿಲ್ 23, 2025ರಲ್ಲಿ ಒಪ್ಪಂದವನ್ನು ಅಮಾನತಿನಲ್ಲಿ ಇರಿಸಿ, ಶಾಶ್ವತ ಸಿಂಧೂ ಆಯೋಗದ ಎಲ್ಲ ಸಭೆಗಳನ್ನು ನಿರ್ಬಂಧಿಸಿತು ಮತ್ತು 2023ರ ಪ್ರಸ್ತಾವನೆ ಬಗ್ಗೆ ಮಾತುಕತೆ ನಡೆಸಬೇಕೆಂದು ಆಗ್ರಹಿಸಿದೆ. ಇದರಿಂದ ಚಕ್ರ ಒಂದು ಸುತ್ತು ಬಂದು, 1940ರ ಸ್ಥಿತಿ ಮರಳಿದೆ. ಸಿಂಧೂ ಒಪ್ಪಂದವನ್ನು ಅಮಾನತಿನಲ್ಲಿ ಇರಿಸಿರುವುದರಿಂದ, ಪಾಕಿಸ್ತಾನ ಅಂತರ್‌ರಾಷ್ಟ್ರೀಯ ನ್ಯಾಯಾಲಯದ ಕದ ತಟ್ಟುವ ಸಾಧ್ಯತೆ ಇದೆ.

ಜಗತ್ತು ನೀರನ್ನು ಹಂಚಿಕೊಳ್ಳುತ್ತಿರುವಾಗ, ನಾವು ನದಿಗಳನ್ನೇ ಹಂಚಿಕೊಂಡಿದ್ದೇವೆ. ಇದು ಭಾರತ ಇಲ್ಲವೇ ಪಾಕಿಸ್ತಾನದ ಆಲೋಚನೆಯಲ್ಲ; ಬದಲಿಗೆ ಇಂಟರ್‌ನ್ಯಾಷನಲ್ ಬ್ಯಾಂಕ್ ಫಾರ್ ರಿಕನ್ಸ್‌ಸ್ಟ್ರಕ್ಷನ್ ಆಂಡ್ ಡೆವಲಪ್‌ಮೆಂಟ್, ಐಬಿಆರ್‌ಡಿ (ಈಗ ವಿಶ್ವ ಬ್ಯಾಂಕ್) ಆಲೋಚನೆ. ನೀರಿನ ನಿಲ್ಲಿಸುವಿಕೆ ಎಂದರೆ ‘ಯುದ್ಧ’ ಎಂದು ಪಾಕಿಸ್ತಾನ ಹೇಳಿದೆ. ಭಾರತವು ಪಾಕಿಸ್ತಾನ-ಬಾಂಗ್ಲಾ ದೇಶದ ಮೇಲ್ಹರಿವು ದೇಶ: ಆದರೆ, ಚೀನಾಕ್ಕೆ ಕೆಳ ಹರಿವು ದೇಶ. ಭಾರತದ ಬ್ರಹ್ಮಪುತ್ರಾ ಹಾಗೂ ಇತರ ನದಿಯೋಜನೆಗಳಿಗೆ ಚೀನಾ ಸಹಕಾರ ನೀಡುತ್ತಿಲ್ಲ.

ಇದಲ್ಲದೆ ಹವಾಮಾನ ಬದಲಾವಣೆಯಿಂದ ಹಿಮಾಲಯವನ್ನು ಆಧರಿಸಿದ ನದಿಗಳು ಸೊರಗುತ್ತಿವೆ. ಇತ್ತೀಚಿನ ಅಂತರ್‌ರಾಷ್ಟ್ರೀಯ ಸಮಗ್ರ ಪರ್ವತಾಭಿವೃದ್ಧಿ ಕೇಂದ್ರ(ಐಸಿಐಎಂಒಡಿ) ವರದಿ ಪ್ರಕಾರ, ಹಿಂದೂ ಕುಷ್ ಹಿಮಾಲಯ ಪ್ರಾಂತದ ನದಿಗಳಲ್ಲಿ ಹವಾಮಾನ ಬದಲಾವಣೆಯಿಂದ ನೀರಿನ ಹರಿವು ಕುಗ್ಗಿದೆ. ದಕ್ಷಿಣ ಹಾಗೂ ಉತ್ತರ ಧ್ರುವಗಳನ್ನು ಹೊರತುಪಡಿಸಿದರೆ, ಅತ್ಯಂತ ಹೆಚ್ಚು ಹಿಮ ಇಲ್ಲಿ ಶೇಖರವಾಗುವುದರಿಂದ ಈ ಪ್ರಾಂತವನ್ನು ಮೂರನೇ ಧ್ರುವ ಎಂದು ಕರೆಯುತ್ತಾರೆ. ಈ ಹಿಮದ ಪದರಗಳನ್ನು ಗಂಗಾ, ಮೆಕಾಂಗ್, ಸಿಂಧೂ, ಬ್ರಹ್ಮಪುತ್ರಾ, ಅಮುದರ್ಯಾ ಸೇರಿದಂತೆ 12 ಪ್ರಮುಖ ನದಿಗಳು ನೆಚ್ಚಿಕೊಂಡಿವೆ; ಅಂದಾಜು 2 ಶತಕೋಟಿ ಜನರನ್ನು ಅಂದರೆ, ಜಗತ್ತಿನ ಒಟ್ಟು ಜನಸಂಖ್ಯೆಯ ಶೇ.25ರಷ್ಟು ಜನರನ್ನು ಪೊರೆಯುತ್ತಿವೆ. 2024-25ರಲ್ಲಿ ಹಿಮ ಪದರ ಶೇ.23.6ರಷ್ಟು ಕಡಿಮೆಯಾಗಿದೆ.

ಪಾಕಿಸ್ತಾನ ಒಂದು ವಿಫಲ ರಾಷ್ಟ್ರ

ಪಾಕಿಸ್ತಾನ ಒಂದು ವಿಫಲ ರಾಷ್ಟ್ರ. ಆಹಾರ ಧಾನ್ಯಗಳ ಬೆಲೆ ಮುಗಿಲು ಮುಟ್ಟಿದೆ. ಇತ್ತೀಚೆಗೆ ಬಲೂಚಿಸ್ತಾನದಲ್ಲಿ ರೈಲನ್ನೇ ಅಪಹರಿಸಲಾಗಿತ್ತು. ಅಲ್ಲಿನ ಗುಪ್ತಚರ ಏಜೆನ್ಸಿ, ಐಎಸ್‌ಐ ಭಾರತದ ಮಗ್ಗಲುಮುಳ್ಳು. ಕಾಶ್ಮೀರದಲ್ಲಿ ಮೊದಲಿನಂತೆ ಪಾಕ್‌ಗೆ ಜನಬೆಂಬಲವಿಲ್ಲ. ಆಲ್ಬರ್ಟ್ ಐನ್‌ಸ್ಟೈನ್ ಅವರ ಪ್ರಕಾರ, ಒಂದು ಕೆಲಸವನ್ನು ಮತ್ತೆ ಮತ್ತೆ ಒಂದೇ ರೀತಿ ಮಾಡುತ್ತ, ಬೇರೆ ಫಲಿತಾಂಶವನ್ನು ನಿರೀಕ್ಷಿಸುವುದು ಬುದ್ಧಿ ಭ್ರಮಣೆ. 1948ರಿಂದ ಪಾಕ್ ಸೇನೆ ಇಂಥದ್ದೇ ಕೆಲಸ ಮಾಡುತ್ತಿದೆ. ಅದೊಂದು ಬಾಡಿಗೆ ಸೇನೆ. ಮೊದಲು ಅಮೆರಿಕನ್ನರು ಮತ್ತು ಈಗ ಚೀನೀಯರು ಅದನ್ನು ಬಾಡಿಗೆಗೆ ಪಡೆದುಕೊಂಡಿದ್ದಾರೆ. ಅಫ್ಘಾನಿಸ್ತಾನದ ಮೇಲೆ ಸೋವಿಯತ್ ರಶ್ಯ ದಾಳಿ ಮಾಡಿದ ಡಿಸೆಂಬರ್ 1979ರಿಂದ ಪಾಕಿಸ್ತಾನವು ಅಮೆರಿಕದ ಸೇವಕನಂತೆ ಕಾರ್ಯ ನಿರ್ವಹಿಸಿದೆ. ಪಾಕಿಸ್ತಾನದ ಪ್ರಧಾನಿ ಅಮೆರಿಕಕ್ಕೆ ಇತ್ತೀಚೆಗೆ, ‘‘ನಮ್ಮ ದೇಶ ಕಳೆದ ಮೂವತ್ತು ವರ್ಷದಿಂದ ನಿಮ್ಮ ತುಚ್ಛ ಕೆಲಸ ಮಾಡುತ್ತಿದೆ’’ ಎಂದು ಹೇಳಿರುವುದು ಇದೇ ಹಿನ್ನೆಲೆಯಲ್ಲಿ. ಪಾಕಿಸ್ತಾನದಲ್ಲಿ ಯಾವುದೇ ಸರಕಾರ ಇರಲಿ; ಸೇನೆ ಮಾಡುವುದು ಒಂದೇ ಕೆಲಸ-ಬಾಡಿಗೆ ಕಾಮಗಾರಿ. ಪಾಕಿಸ್ತಾನದ ಪಂಜಾಬ್ ಪ್ರಾಂತದಲ್ಲಿ ಸೈನ್ಯಕ್ಕೆ ಸೇರಿದವರು ಭೂಮಿ ಹೊಂದಿದ್ದಾರೆ. ಇಲ್ಲಿಗೆ ಸಿಂಧ್ ಪ್ರಾಂತದಿಂದ ನೀರು ಕಳವು ಮಾಡಲಾಗುತ್ತಿದೆ. ಸಿಂಧ್ ಪ್ರಾಂತವು ಭುಟ್ಟೋ ಕುಟುಂಬದ ಪಕ್ಷವಾದ ಪಿಪಿಪಿ ಹಿಡಿತದಲ್ಲಿದೆ. ಪಿಪಿಪಿ ಈಗ ನವಾಝ್ ಮತ್ತು ಶಹಬಾಝ್ ಷರೀಫ್ ನೇತೃತ್ವದ ಪಾಕಿಸ್ತಾನ್ ಮುಸ್ಲಿಮ್ ಲೀಗ್ ಜೊತೆ ಮೈತ್ರಿ ಮಾಡಿಕೊಂಡಿದೆ.

ನೀರಿನ ಹಂಚಿಕೆ ಅಸಮರ್ಪಕವಾಗಿರುವುದರಿಂದ, ಭಾರತ ಹಲವು ವರ್ಷಗಳಿಂದ ಹೊಸ ಒಪ್ಪಂದಕ್ಕೆ ಆಗ್ರಹಿಸುತ್ತಿದೆ. ಆದರೆ, ಇದಕ್ಕೆ ಅಮೆರಿಕದ ನೆರವು ಬೇಕಾಗುತ್ತದೆ. ಅದು ನೆಚ್ಚಿಕೊಳ್ಳಲು ಆಗದ ದೇಶ. ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಉದ್ಭವವಾಗಿರುವ ಪರಿಸ್ಥಿತಿಯಲ್ಲಿ ಅಮೆರಿಕವು ಪಾಕಿಸ್ತಾನದಿಂದ ದೂರ ಸರಿಯುವ ಸಾಧ್ಯತೆ ಕಡಿಮೆ. ಪಾಕಿಸ್ತಾನವು ಚೀನಾದ ನೆರವನ್ನೂ ಕೇಳಬಹುದು. ಅಂತರ್‌ರಾಷ್ಟ್ರೀಯ ಸಂಬಂಧಗಳು ಹೆಣೆದುಕೊಳ್ಳುವುದು ವ್ಯಾಪಾರದ ಮೇಲೆ. ಜಗತ್ತಿನ ಅತ್ಯಂತ ದೊಡ್ಡ ಶಸ್ತ್ರಾಸ್ತ್ರ ಸರಬರಾಜುದಾರನಾದ ಅಮೆರಿಕ, ಭಾರತ ಹಾಗೂ ಪಾಕಿಸ್ತಾನ ಎರಡಕ್ಕೂ ಶಸ್ತ್ರಾಸ್ತ್ರ ಸರಬರಾಜು ಮಾಡುತ್ತದೆ. ಬಾಂಗ್ಲಾದಲ್ಲಿ ಕೂಡ ಭಾರತಕ್ಕೆ ಪೂರಕವಲ್ಲದ ಸರಕಾರವಿದೆ. ಪಾಕಿಸ್ತಾನವನ್ನು ಮಣಿಸಲು ಇರುವ ಮಾರ್ಗವೆಂದರೆ, ಆರ್ಥಿಕ ದಿಗ್ಬಂಧನ ಮತ್ತು ಅದೊಂದು ದಗಾಕೋರ ದೇಶವೆಂದು ಜಗತ್ತನ್ನು ಒಪ್ಪಿಸಿ, ಒಂಟಿಯಾಗಿಸುವುದು.

share
ಮಾಧವ ಐತಾಳ್
ಮಾಧವ ಐತಾಳ್
Next Story
X