ಎಲ್ಲೆಲ್ಲೂ ಇರುವ ಅವಿನಾಶಿ ಪ್ಲಾಸ್ಟಿಕ್

ಪ್ಲಾಸ್ಟಿಕ್‌ನ ಉತ್ಪಾದನೆ, ಬಳಕೆ ಹಾಗೂ ತ್ಯಾಜ್ಯ ನಿರ್ವಹಣೆಯ ಸಂಪೂರ್ಣ ವೃತ್ತವೇ ಮಲಿನಪೂರಿತವಾಗಿದೆ; ಆದ್ದರಿಂದ ಬಳಕೆ ನಿಲ್ಲಿಸುವುದು ಮತ್ತು ಪರ್ಯಾಯಗಳ ಅಭಿವೃದ್ಧಿ ಆದ್ಯತೆಯಾಗಬೇಕಿದೆ. ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯನ್ನು ಮಾತ್ರ ಪರಿಗಣಿಸಬೇಕೇ ಅಥವಾ ಉತ್ಪಾದನೆ-ಬಳಕೆಯನ್ನು ಕಡಿತ/ಸ್ಥಗಿತಗೊಳಿಸಬೇಕೇ? ಮತ್ತು ಉತ್ಪಾದನೆ ಸ್ಥಗಿತಗೊಳಿಸಿದಲ್ಲಿ ನಷ್ಟಕ್ಕೀಡಾಗುವ ಬಡ ದೇಶಗಳಿಗೆ ಶ್ರೀಮಂತ ದೇಶಗಳು ಆರ್ಥಿಕ ನೆರವು ನೀಡುತ್ತವೆಯೇ ಎಂಬ ಪ್ರಶ್ನೆ ಕೂಡ ಇದೆ.
ಸಾವು ಸಂಭವಿಸದ ಮನೆಗಳು ಇರಬಹುದು; ಆದರೆ, ಪ್ಲಾಸ್ಟಿಕ್ ಇಲ್ಲದ ಮನೆಗಳನ್ನು ಹುಡುಕುವುದು ಕಷ್ಟ ಎನ್ನುವಷ್ಟು ಅದು ಎಲ್ಲೆಡೆ ವ್ಯಾಪಿಸಿಬಿಟ್ಟಿದೆ. ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವ ಸಂಬಂಧ ಸ್ವಿಟ್ಸರ್‌ಲ್ಯಾಂಡ್‌ನ ಜಿನೀವಾದಲ್ಲಿ ಇತ್ತೀಚೆಗೆ (ಆಗಸ್ಟ್ 5ರಿಂದ ಆಗಸ್ಟ್ 14, 2025) ಸಮಾವೇಶವೊಂದು ನಡೆಯಿತು. ಆದರೆ, ಎರಡು ಭಾಗಗಳಾಗಿ ಒಡೆದಿರುವ ಜಗತ್ತಿನಲ್ಲಿ ಒಮ್ಮತವಿಲ್ಲದೆ ಈ ಸಂಬಂಧ ಯಾವುದೇ ಒಪ್ಪಂದಕ್ಕೆ ಬರಲು ಆಗಲಿಲ್ಲ.
ಜಿನೀವಾದಲ್ಲಿ ನಡೆದ ಅಂತರ ಸರಕಾರ ಸಮಾಲೋಚನಾ ಸಮಿತಿಯ ಐದನೇ ಅಧಿವೇಶನ (ಐಎನ್‌ಸಿ-5.2)ದಲ್ಲಿ 184 ದೇಶಗಳು ಪಾಲ್ಗೊಂಡಿದ್ದವು. 70 ದೇಶಗಳ ‘ಮಹತ್ವಾಕಾಂಕ್ಷಿ ಗುಂಪು’ ವರ್ಜಿನ್ ಪ್ಲಾಸ್ಟಿಕ್ ಉತ್ಪಾದನೆ ಮೇಲೆ ಮಿತಿ ಹೇರಿಕೆ ಹಾಗೂ ಪ್ಲಾಸ್ಟಿಕ್‌ಗೆ ಸೇರ್ಪಡೆಗೊಳಿಸುವ ಅಪಾಯಕಾರಿ ರಸಾಯನಿಕಗಳ ನಿಯಂತ್ರಣಕ್ಕೆ ಆಗ್ರಹಿಸಿತು; ಆದರೆ, 100ಕ್ಕೂ ಹೆಚ್ಚು ದೇಶಗಳ ‘ಸಮಾನಮನಸ್ಕ ಗುಂಪು’ ಪ್ಲಾಸ್ಟಿಕ್ ಮರುಬಳಕೆ, ತ್ಯಾಜ್ಯ ನಿರ್ವಹಣೆ ಮತ್ತು ಸ್ವಯಂಬಾಧ್ಯತೆಯನ್ನು ಪ್ರತಿಪಾದಿಸಿದವು. ಈ ಭಿನ್ನಾಭಿಪ್ರಾಯ ದಶಕಗಳಿಂದಲೂ ಬಗೆಹರಿಯದೆ ಕಗ್ಗಂಟಾಗೇ ಉಳಿದಿದೆ. ಕಳೆದ ಮೂರು ವರ್ಷಗಳಲ್ಲಿ ಇಂಥ ಮೂರು ಸಮಾವೇಶಗಳು ನಡೆದಿವೆ. ಆದರೆ, ಒಪ್ಪಂದವೊಂದಕ್ಕೆ ಬರಲು ಸಾಧ್ಯವಾಗಿಲ್ಲ.
ಜಾಗತಿಕವಾಗಿ ವಾರ್ಷಿಕ 430 ದಶಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗುತ್ತಿದೆ. ಇದರಲ್ಲಿ ಹೆಚ್ಚಿನದು ಏಕ ಬಳಕೆ ಪ್ಲಾಸ್ಟಿಕ್. ಇವನ್ನು ಒಮ್ಮೆ ಬಳಸಿದ ಬಳಿಕ ಎಸೆಯಲಾಗುತ್ತದೆ. ಸಮರ್ಪಕ ತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಇಲ್ಲದೆ ಇರುವುದರಿಂದ, ತ್ಯಾಜ್ಯಗಳು ನದಿ/ಸಮುದ್ರ ಹಾಗೂ ನೆಲಭರ್ತಿ ಭೂಮಿಯನ್ನು ಸೇರುತ್ತಿವೆ; ಪರಿಸರ ವ್ಯವಸ್ಥೆ, ಜೈವಿಕ ವೈವಿಧ್ಯ ಮತ್ತು ಹವಾಮಾನದ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಸೂಕ್ಷ್ಮ ಪ್ಲಾಸ್ಟಿಕ್‌ಗಳು ಆಹಾರ ಸರ ಪಳಿಯನ್ನು ಸೇರಿಕೊಂಡು, ಆರೋಗ್ಯದ ಮೇಲೆ ದುರಸ್ತಿ ಮಾಡಲು ಆಗದಷ್ಟು ದುಷ್ಪರಿಣಾಮ ಬೀರುತ್ತಿವೆ. ಆರೋಗ್ಯ ಮತ್ತು ಪರಿಸರ ಮಾಲಿನ್ಯ ಪರಸ್ಪರ ಸಂಬಂಧಿಸಿವೆ. ಪ್ಲಾಸ್ಟಿಕ್ ಮಾಲಿನ್ಯ ಒಂದು ವಾಸ್ತವಿಕ ಸಂಕಷ್ಟ ಹಾಗೂ ಪ್ರತಿದಿನ ಹೆಚ್ಚುತ್ತಿರುವಂಥದ್ದು.
‘ಸಮಾನಮನಸ್ಕ ದೇಶ’ಗಳ ಗುಂಪಿನಲ್ಲಿರುವ ಭಾರತ, ಜಾಗತಿಕ ತ್ಯಾಜ್ಯದಲ್ಲಿ ಶೇ.20ನ್ನು ಉತ್ಪಾದಿಸುತ್ತದೆ; ಜಗತ್ತಿನ ಅತಿ ದೊಡ್ಡ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದಕ ದೇಶ ಎಂಬ ಖ್ಯಾತಿ ಹೊಂದಿದೆ. ದೇಶದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇಧಿಸಿದ್ದರೂ, ಹೆಚ್ಚೇನೂ ಪ್ರಯೋಜನವಾಗಿಲ್ಲ. ಈ ಗುಂಪಿನ ಇತರ ಸದಸ್ಯರು ರಶ್ಯ ಹಾಗೂ ಇತರ ತೈಲ ಉತ್ಪಾದಿಸುವ ರಾಷ್ಟ್ರಗಳು. ‘ಮಹತ್ವಾಕಾಂಕ್ಷಿ ದೇಶ’ಗಳ ಗುಂಪಿನಲ್ಲಿ ಯುರೋಪಿಯನ್ ಒಕ್ಕೂಟ, ಆಸ್ಟ್ರೇಲಿಯ, ಆಫ್ರಿಕಾದ ಕೆಲವು ದೇಶಗಳು ಹಾಗೂ ಪೆಸಿಫಿಕ್ ದ್ವೀಪದ ದೇಶಗಳು ಇವೆ. ‘ಸಮಾನಾಸಕ್ತ ದೇಶ’ಗಳು ಪ್ಲಾಸ್ಟಿಕ್ ತಮ್ಮ ಅರ್ಥ ವ್ಯವಸ್ಥೆ ಮತ್ತು ಅಭಿವೃದ್ಧಿ ಯೋಜನೆಗಳ ಭಾಗವಾಗಿದ್ದು, ಭಾರೀ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸುತ್ತದೆ. ಆದ್ದರಿಂದ ಉತ್ಪಾದನೆ ಕಡಿತಗೊಳಿಸದೆ, ಬಳಕೆ ಮತ್ತು ತ್ಯಾಜ್ಯವನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕು ಎಂದು ವಾದಿಸುತ್ತವೆ. ಇದು ‘ಮಹತ್ವಾಕಾಂಕ್ಷಿ ದೇಶ’ಗಳಿಗೆ ಸಮ್ಮತವಲ್ಲ. ಅವುಗಳ ಪ್ರಕಾರ, ತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಈವರೆಗೆ ಯಶಸ್ವಿಯಾಗಿಲ್ಲ. ಆದ್ದರಿಂದ, ಸಮಸ್ಯೆ ಬಗೆಹರಿಸಲು ಉತ್ಪಾದನೆ ಸ್ಥಗಿತಗೊಳಿಸಬೇಕು ಇಲ್ಲವೇ ಕಡಿತಗೊಳಿಸಬೇಕು. ಎರಡು ಗುಂಪುಗಳ ನಡುವೆ ಸಂಧಾನ ಸಾಧ್ಯವಾಗಿಲ್ಲ.
ಅವಿನಾಶಿ, ಸರ್ವವ್ಯಾಪಿ ವಸ್ತು
ಜಾಗತಿಕವಾದ, ಕೈಗಾರಿಕೀಕೃತಗೊಂಡ ಹಾಗೂ ಬಳಕೆಯನ್ನು ಆಧರಿಸಿದ ಆರ್ಥಿಕತೆಗೆ ಒಂದು ಪರಿಪೂರ್ಣ ನಿದರ್ಶನ-ಪ್ಲಾಸ್ಟಿಕ್. ವಿಮಾನ, ವೈದ್ಯಕೀಯ ಉಪಕರಣ, ಪ್ಯಾಕೇಜಿಂಗ್, ಸೌರ ವಿದ್ಯುತ್, ಗೃಹ ನಿರ್ಮಾಣ, ಕೃಷಿ, ಗೃಹಬಳಕೆ ಉತ್ಪನ್ನಗಳು ಸೇರಿದಂತೆ ಪ್ಲಾಸ್ಟಿಕ್ ಬಳಸದ ಕ್ಷೇತ್ರವೇ ಇಲ್ಲ ಎನ್ನಬಹುದು. ಅದು ಸರ್ವವ್ಯಾಪಿಯಾಗಲು ಪ್ರಮುಖ ಕಾರಣ- ಕಡಿಮೆ ಉತ್ಪಾದನೆ ವೆಚ್ಚ; ಉಕ್ಕು, ಅಲ್ಯುಮಿನಿಯಂಗೆ ಹೋಲಿಸಿದರೆ, ಪ್ಲಾಸ್ಟಿಕ್ ಬಹಳ ಅಗ್ಗ. ಬಾಗುವಿಕೆ-ಸ್ಥಿತಿಸ್ಥಾಪಕ ಗುಣ, ವ್ಯಾಪಕ ಲಭ್ಯತೆ, ದುಬಾರಿಯಲ್ಲದ್ದರಿಂದ ಎಗ್ಗಿಲ್ಲದೆ ಬಳಕೆಯಾಗುತ್ತಿದೆ. ಇದರಿಂದ ಅಪಾರ ಪ್ರಮಾಣದ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಕುಸಿಯಲು ಕಾರಣವಾಗಿದೆ.
ಪ್ಲಾಸ್ಟಿಕನ್ನು ಪಾಲಿಮರ್‌ಗಳಿಂದ ತಯಾರಿಸಲಾಗುತ್ತದೆ; ಸ್ವಾಭಾವಿಕ(ಸೆಲ್ಯುಲೋಸ್, ಲಿಗ್ನಿನ್ ಇತ್ಯಾದಿ) ಮತ್ತು ನ್ಯಾಫ್ತಾ. ಪಳೆಯುಳಿಕೆ ಇಂಧನ/ಕಚ್ಚಾ ತೈಲದಿಂದ ತಯಾರಾಗುವ ಪ್ಲಾಸ್ಟಿಕ್, ಮಾನೊಮರ್, ಪಾಲಿಮರ್ ಹಾಗೂ ರಾಸಾಯನಿಕಗಳ ಮಿಶ್ರಣ. ನ್ಯಾಫ್ತಾದ ಸಂಸ್ಕರಣೆ ಉತ್ಪನ್ನಗಳೆಂದರೆ ಈಥೇನ್, ಪ್ರೊಪೇನ್, ಬ್ಯುಟೇನ್ ಹಾಗೂ ಹೆಕ್ಸೇನ್. ಎಥಿಲೀನ್ ಉತ್ಪನ್ನಗಳಾದ ಪಾಲಿಎಥಿಲೀನ್‌ನಿಂದ ಕೊಂಡೊಯ್ಯುವ ಚೀಲಗಳು, ಹಾಲಿನ ಪೊಟ್ಟಣಗಳು, ಪ್ಯಾಕೇಜಿಂಗ್ ವಸ್ತುಗಳು, ಕೃತಕ ನಾರು, ನೆಲಹಾಸು, ದಿಂಬು, ನೀರಿನ ಕೊಳವೆಗಳು ಇತ್ಯಾದಿ; ಪಾಲಿಪ್ರೊಪಿಲೀನ್‌ನಿಂದ ಅಡುಗೆ ಪಾತ್ರೆಗಳು, ಆಹಾರ ಸಂಗ್ರಾಹಕಗಳು; ಬ್ಯುಟೇನ್‌ನಿಂದ ಟೈರ್‌ಗಳು; ಹೆಕ್ಸೇನ್‌ನಿಂದ ಥರ್ಮೋಕೋಲ್, ನೆಲಹಾಸು ಇತ್ಯಾದಿ ತಯಾರಿಸಲಾಗುತ್ತದೆ. ಎಥಿಲೀನ್‌ನ ನಿಷ್ಪನ್ನಗಳಾದ ಪಾಲಿಪ್ರೊಪಿಲೀನ್(ಪಿಪಿ), ಕಡಿಮೆ ಸಾಂದ್ರತೆಯ ಪಾಲಿಎಥಿಲೀನ್(ಎಲ್‌ಡಿಪಿಇ), ಕಡಿಮೆ ಸಾಂದ್ರತೆಯ ಲೀನಿಯರ್ ಪಾಲಿಎಥಿಲೀನ್(ಎಲ್‌ಎಲ್‌ಡಿಪಿಇ), ಹೆಚ್ಚು ಸಾಂದ್ರತೆಯ ಪಾಲಿಎಥಿಲೀನ್(ಎಚ್‌ಡಿಪಿಇ) ಮತ್ತು ಪಾಲಿಎಥಿಲೀನ್ ಟೆರಾಫ್ತಲೇಟ್(ಪಿಇಟಿ) ಪ್ಯಾಕೇಜಿಂಗ್‌ನಲ್ಲಿ ಅತಿ ಹೆಚ್ಚು ಬಳಸಲ್ಪಡುವಂಥವು. ಇವು ಸಂಶ್ಲೇಷಿತ ಹಾಗೂ ಜೈವಿಕವಾಗಿ ವಿಭಜನೆಯಾಗದ ಪಾಲಿಮರ್‌ಗಳು. ಪ್ಲಾಸ್ಟಿಕ್ ತಯಾರಿಕೆ ವೇಳೆ ಬಿಪಿಎ(ಬಿಸ್ಫೆನಾಲ್ ಎ), ಥ್ಯಾಲೇಟ್, ಪಾಲಿಕ್ಲೋರಿನೇಟೆಡ್ ಬೈಫೀನೈಲ್(ಪಿಸಿಬಿ), ಪಾಲಿಬ್ರೋಮಿನೇಟೆಡ್ ಡೈಫೀನೈಲ್ ಈಥರ್(ಪಿಬಿಡಿಇ) ಮತ್ತು ಪರ್ ಪಾಲಿಫ್ಲೋರೋಆಲ್ಕೈಲ್(ಪಿಎಫ್‌ಎ) ಬಳಸಲಾಗುತ್ತದೆ.
ಪಾಲಿಮರೀಕರಣ ಪ್ರಕ್ರಿಯೆಯಲ್ಲಿ ಮಾನೋಮರ್‌ಗೆ ಬಣ್ಣಗಳು, ಪೂರಕಗಳು(ಫಿಲ್ಲರ್) ಇತ್ಯಾದಿಯನ್ನು ಸಂಕಲ್ಯ(ಅಡಿಟಿವ್)ಗಳಾಗಿ ಹಾಗೂ ಬಾಗುವಿಕೆ, ಸ್ಥಿರತೆ ಮತ್ತು ಬಲವನ್ನು ನೀಡಲು ಸಂಸ್ಕರಣೆ ಸಹಾಯಕಗಳನ್ನು ಸೇರಿಸಲಾಗುತ್ತದೆ. ಇವುಗಳಲ್ಲಿ ಶೇ.30ರಷ್ಟು ವಸ್ತುಗಳನ್ನು ವರ್ಗೀಕರಿಸಲು ಸಾಧ್ಯವಾಗಿಲ್ಲ ಮತ್ತು 10,000 ವಸ್ತುಗಳು ಮನುಷ್ಯರ ಆರೋಗ್ಯ/ಪರಿಸರದ ಮೇಲೆ ಯಾವ ಪರಿಣಾಮ ಬೀರುತ್ತವೆ ಎಂಬ ಬಗ್ಗೆ ಮಾಹಿತಿಯಿಲ್ಲ. 2021-2024ರ ಅವಧಿಯಲ್ಲಿ ಪ್ಲಾಸ್ಟಿಕ್ ತಯಾರಿಕೆಗೆ ಬಳಸುವ ರಾಸಾಯನಿಕಗಳ ಸಂಖ್ಯೆ 16,000ಕ್ಕೆ ಹೆಚ್ಚಿತು ಎಂದು ನಾರ್ವೆ ಹಾಗೂ ಸ್ವಿಟ್ಸರ್‌ಲ್ಯಾಂಡ್ ತಜ್ಞರಿದ್ದ ಪ್ಲಾಸ್ಟ್‌ಕೆಮ್ ಪ್ರಾಜೆಕ್ಟ್ ವರದಿ ಹೇಳಿದೆ. ಆದರೆ, ಇದು ಕಡಿಮೆ; ಅಂದಾಜು 25,000 ವಸ್ತುಗಳನ್ನು ಬಳಸಲಾಗುತ್ತಿದೆ ಎಂದು ತಜ್ಞರು ಹೇಳುತ್ತಾರೆ. ಇವುಗಳಲ್ಲಿ ಹೆಚ್ಚಿನವು ವಿಷಯುಕ್ತ. ಬಿಪಿಎ(ಬಿಸ್ಫೆನಾಲ್ ಎ), ಥ್ಯಾಲೇಟ್‌ಗಳು, ಪರ್-ಪಾಲಿಫ್ಲೋರೋಆಲ್ಕೈಲ್ ವಸ್ತುಗಳು, ಬ್ರೋಮೀನ್ ಇರುವ ಬೆಂಕಿ ತಡೆಯುವ ವಸ್ತುಗಳು ಮತ್ತು ಆರ್ಗ್ಯಾನೋಫಾಸ್ಫೇಟ್ ಬೆಂಕಿ ತಡೆಯುವ ವಸ್ತುಗಳು ಇದರಲ್ಲಿ ಸೇರಿವೆ. ಜೊತೆಗೆ, ಉದ್ದೇಶವಿಲ್ಲದೆ ಸೇರಿಸುವ ವಸ್ತು(ಎನ್‌ಐಎಎಸ್)ಗಳೂ ಇರುತ್ತವೆ.
ಪ್ಲಾಸ್ಟಿಕ್ ತಯಾರಿಕೆ ಕಂಪೆನಿಗಳು ಉತ್ಪನ್ನದ ಸೂತ್ರವನ್ನು ಬಹಿರಂಗಪಡಿಸುವುದಿಲ್ಲ; ಬೇರೆಯವರು ನಕಲು ಮಾಡುತ್ತಾರೆ ಎಂದು ಗೌಪ್ಯತೆ ಕಾಯ್ದುಕೊಳ್ಳುತ್ತವೆ. ಇದರಿಂದ ಪ್ಲಾಸ್ಟಿಕ್‌ಗೆ ಸೇರಿಸಿದ ವಸ್ತುಗಳು ಯಾವುವು ಎನ್ನುವುದು ಗೊತ್ತಾಗುವುದಿಲ್ಲ. ನೇಚರ್ ಪತ್ರಿಕೆಯಲ್ಲಿ 2024ರಲ್ಲಿ ಪ್ರಕಟಗೊಂಡ ವರದಿ ಪ್ರಕಾರ, ವಿವಿಧ ಪ್ಲಾಸ್ಟಿಕ್‌ಗಳಾದ ಪಾಲಿವಿನೈಲ್ ಕ್ಲೋರೈಡ್ (ಪಿವಿಸಿ), ಪಾಲಿಯೂರಿಥೇನ್, ಪಾಲಿಎಥಿಲೀನ್ ಟೆರಾಫ್ತಲೇಟ್(ಪಿಇಟಿ), ಪಾಲಿಎಥಿಲೀನ್ ಇತ್ಯಾದಿಯಲ್ಲಿರುವ 4,000ಕ್ಕೂ ಅಧಿಕ ರಾಸಾಯನಿಕಗಳು ಅಪಾಯಕರ. ಜೈವಿಕವಾಗಿ ಕರಗದ ಇವು ನದಿ-ಸಮುದ್ರ, ಗಾಳಿ, ಭೂಮಿ ಹಾಗೂ ಸೇವಿಸುವ ಆಹಾರದ ಮೂಲಕ ಮನುಷ್ಯರ ದೇಹ ಸೇರುತ್ತಿವೆ ಎಂದು ಹಲವು ಅಧ್ಯಯನಗಳು ಹೇಳಿವೆ. ಆಹಾರ ಸಂಗ್ರಹಕ್ಕೆ ಬಳಸುವ ಪ್ಲಾಸ್ಟಿಕ್ ಪೊಟ್ಟಣ(ಕಂಟೇನರ್)ದಿಂದ ರಾಸಾಯನಿಕಗಳು ಆಹಾರಕ್ಕೆ ಸೇರ್ಪಡೆಗೊಳ್ಳುತ್ತವೆ. ‘ಟೇಕ್ ಅವೇ’, ‘ಬೈ ಆಂಡ್ ಕ್ಯಾರಿ’ ಪ್ರವೃತ್ತಿ ಹೆಚ್ಚಳದಿಂದ ಪ್ಲಾಸ್ಟಿಕ್ ಬಳಕೆ ಮತ್ತು ವಿಷಮಯ ಆಹಾರ ಸೇವನೆಯೂ ಹೆಚ್ಚಿದೆ.
ಕ್ಯಾನ್ಸರ್ ಹೆಚ್ಚಳ
ದೇಶದಲ್ಲಿ 21 ಪೆಟ್ರೋಕೆಮಿಕಲ್ ಸಂಸ್ಕರಣಾಗಾರಗಳಿದ್ದು, 13 ರಾಜ್ಯಗಳಲ್ಲಿ ಹರಡಿಕೊಂಡಿವೆ. ಪ್ಲಾಸ್ಟಿಕ್‌ನ ಮೂಲವಸ್ತು ನ್ಯಾಫ್ತಾ ಈ ಸಂಸ್ಕರಣಾಗಾರಗಳಿಂದ ಬರುವುದರಿಂದ, ಎರಡೂ ಘಟಕಗಳು ಒಟ್ಟಿಗೆ ಇರುವುದು ಸಹಜ. 5ನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ(ಎನ್‌ಎಫ್‌ಎಚ್‌ಎಸ್, 2019-2021) ಪ್ರಕಾರ, 8 ರಾಜ್ಯಗಳ ಸಂಸ್ಕರಣಾಗಾರ ಇರುವ ಜಿಲ್ಲೆಗಳಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಶ್ವಾಸ ಕೋಶ ಸೋಂಕು ತೀವ್ರವಾಗಿದೆ. ಎನ್ವಿರಾನ್ಮೆಂಟಲ್ ರಿಸರ್ಚ್ 2020ರಲ್ಲಿ ಪ್ರಕಟಗೊಂಡ ಅಧ್ಯಯನದ ಪ್ರಕಾರ, ಪೆಟ್ರೋಕೆಮಿಕಲ್ ಸಂಸ್ಕರಣಾಗಾರಗಳ ಬಳಿ ಇರುವವರಲ್ಲಿ ಕ್ಯಾನ್ಸರ್ ಸಾಧ್ಯತೆ ಹೆಚ್ಚು. ಹಲವು ಅಧ್ಯಯನಗಳ ಪ್ರಕಾರ, ಈ ರಾಸಾಯನಿಕಗಳು ಆರೋಗ್ಯದ ಮೇಲೆ ಪರಿಣಾಮ ಬೀರುವುದು ಸಾಬೀತಾಗಿದೆ. ಅಮೆರಿಕದ ಬಾಸ್ಟನ್ ಕಾಲೇಜ್ ಮತ್ತು ಆಸ್ಟ್ರೇಲಿಯದ ಮೈಂಡೆರೂ ಪ್ರತಿಷ್ಠಾನ ನಡೆಸಿದ 11 ಲಕ್ಷ ಜನ ಪಾಲ್ಗೊಂಡಿದ್ದ ಪ್ರಾಥಮಿಕ ಅಧ್ಯಯನದಿಂದ ಈ ರಾಸಾಯನಿಕಗಳಿಗೆ ಒಡ್ಡಿಕೊಂಡವರಲ್ಲಿ ಥೈರಾಯ್ಡ್ ಕಾರ್ಯನಿರ್ವಹಣೆಯಲ್ಲಿ ವ್ಯತ್ಯಯ, ಅಧಿಕ ರಕ್ತದೊತ್ತಡ, ಮೂತ್ರಜನಕಾಂಗ/ವೃಷಣ ಕ್ಯಾನ್ಸರ್ ಮತ್ತು ಗರ್ಭಿಣಿಯರಲ್ಲಿ ಮಧುಮೇಹದ ಸಂಭವ ನೀಯತೆ ಪತ್ತೆಯಾಗಿದೆ. ಅಧ್ಯಯನದಲ್ಲಿ ಪಾಲ್ಗೊಂಡವರಲ್ಲಿ ಹೆಚ್ಚಿನವರು ಶ್ರೀಮಂತ ದೇಶಗಳವರು. ಪರಿಸರ ಕಾನೂನುಗಳ ಅನುಷ್ಠಾನ ದುರ್ಬಲವಾಗಿರುವ ಮತ್ತು ಇಂಥ ಅಧ್ಯಯನ ನಡೆಯದೆ ಇರುವ ಅಭಿವೃದ್ಧಿಶೀಲ ದೇಶಗಳಲ್ಲಿ ಸಮಸ್ಯೆ ಇನ್ನಷ್ಟು ಹೆಚ್ಚಿರುವ ಸಾಧ್ಯತೆ ಇದೆ.
5 ಮಿಲಿಮೀಟರ್‌ಗಿಂತ ಸಣ್ಣ ಗಾತ್ರದ ಸೂಕ್ಷ್ಮ(ಮೈಕ್ರೋ) ಪ್ಲಾಸ್ಟಿಕ್ ಅನ್ನು ಪತ್ತೆ ಹಚ್ಚುವ ತಂತ್ರಜ್ಞಾನ ಇತ್ತೀಚೆಗಷ್ಟೇ ಲಭ್ಯವಾಗಿದೆ. ಇವುಗಳ ಪ್ರಮುಖ ಮೂಲಗಳೆಂದರೆ, ಭೌತಿಕ, ರಾಸಾಯನಿಕ ಮತ್ತು ಜೈವಿಕ ಪ್ರಕ್ರಿಯೆಗಳಿಂದ ಪ್ಯಾಕೇಜಿಂಗ್ ಮತ್ತು ಬಾಟಲಿಗಳಂತಹ ದೊಡ್ಡ ಪ್ಲಾಸ್ಟಿಕ್ ವಸ್ತುಗಳ ವಿಭಜನೆ; ಕೆಲವು ಸೌಂದರ್ಯವರ್ಧಕಗಳಲ್ಲಿ ಸೇರಿಸಿದ ಸೂಕ್ಷ್ಮಹರಳು (ಮೈಕ್ರೋಬೀಡ್)ಗಳು ಅಥವಾ ಕೃತಕ ನಾರಿನ ಬಟ್ಟೆಗಳಿಂದ ಮತ್ತು ಟೈರ್ ಸವೆತ. ಇವು ರಕ್ತ, ಎದೆ ಹಾಲು, ತಾಯಿ ಮಾಸು ಹಾಗೂ ಮೂಳೆ ದ್ರವದಲ್ಲಿ ಸೇರಿಹೋಗಿವೆ; ಹಲವು ಕಾಯಿಲೆಗಳಿಗೆ ಕಾರಣವಾಗಿವೆ.
ಆರೋಗ್ಯದ ಮೇಲೆ ಹಾನಿ ಪ್ರಶ್ನೆ
ದೇಶದ 20 ರಾಜ್ಯಗಳಲ್ಲಿ ಏಕಬಳಕೆ ಪ್ಲಾಸ್ಟಿಕ್ ಉತ್ಪಾದನೆ/ಬಳಕೆ ನಿಷೇಧಿಸಲ್ಪಟ್ಟಿದೆ; ಕಂಪೆನಿಗಳು ನಿರ್ದಿಷ್ಟ ಪ್ರಮಾಣದ ಬಳಸಿದ ಪ್ಲಾಸ್ಟಿಕ್‌ನ್ನು ವಾಪಸ್ ಪಡೆಯಬೇಕು ಎಂಬ ನಿಯಮ ಇದ್ದರೂ, ಇದರಿಂದ ಹೆಚ್ಚು ಪರಿಣಾಮವಾಗಿಲ್ಲ. ಆರೋಗ್ಯದ ಮೇಲೆ ಪ್ಲಾಸ್ಟಿಕ್/ರಾಸಾಯನಿಕಗಳ ದುಷ್ಪರಿಣಾಮದ ಬಗ್ಗೆ ಜಾಗೃತಿ ಇಲ್ಲ. ದೇಶವು ಅಂತರ್‌ರಾಷ್ಟ್ರೀಯ ಸಂಧಾನಗಳಲ್ಲಿ ಆರೋಗ್ಯದ ಮೇಲೆ ಪ್ಲಾಸ್ಟಿಕ್ ಪರಿಣಾಮ ಕುರಿತು ಚರ್ಚಿಸಲು ಸಿದ್ಧವಿಲ್ಲ. ಇದು ವಿಶ್ವ ಆರೋಗ್ಯ ಸಂಸ್ಥೆಗೆ ಸೇರಿದ ವಿಷಯ ಎಂಬ ನೆಪ ಹೇಳಲಾಗುತ್ತಿದೆ. ಮರುಬಳಕೆಯೊಂದೇ ಪರಿಹಾರ ಎನ್ನಲಾಗುತ್ತದೆ. ಆದರೆ, ಇದು ಸರಿಯಲ್ಲ. ದಿಲ್ಲಿ ಮೂಲದ ಸಂಸ್ಥೆ, ಟಾಕ್ಸಿಕ್ ಲಿಂಕ್‌ನ 2024ರ ವರದಿ ಪ್ರಕಾರ, ಮರುಬಳಕೆ ಪ್ಲಾಸ್ಟಿಕ್‌ನಿಂದ ತಯಾರಿಸಿದ ಉತ್ಪನ್ನಗಳಲ್ಲಿ ಬಿಪಿಎ, ಕ್ಲೋರಿನೇಟೆಡ್ ಪ್ಯಾರಾಫಿನ್‌ಗಳು, ಥ್ಯಾಲೇಟ್‌ಗಳು ಹಾಗೂ ಭಾರೀ ಲೋಹಗಳು ಇವೆಯೇ ಎಂದು ಪರೀಕ್ಷೆ ನಡೆಸಲಾಗಿತ್ತು. 10ರಲ್ಲಿ 6 ನಮೂನೆಗಳು ಒಂದಲ್ಲ ಒಂದು ಅಪಾಯಕರ ರಾಸಾಯನಿಕವನ್ನು ಹೊಂದಿದ್ದು ಪತ್ತೆಯಾಯಿತು.
ಪ್ಲಾಸ್ಟಿಕ್ ಆರೋಗ್ಯದ ಮೇಲೆ ಬೀರಬಹುದಾದ ಪರಿಣಾಮ ಕುರಿತು ಚರ್ಚೆ ಜಿನೀವಾ ಶೃಂಗದ ಕೇಂದ್ರ ಬಿಂದು ಆಗಿತ್ತು. ಪ್ಲಾಸ್ಟಿಕ್ ಉತ್ಪಾದನೆ-ಬಳಕೆ-ತ್ಯಾಜ್ಯ ನಿರ್ವಹಣೆಗೆ ವಿಶ್ವ ಸಂಸ್ಥೆಯ ಪರಿಸರ ಕಾರ್ಯಕ್ರಮ(ಯುಎನ್‌ಇಪಿ)ದ ಬೆಂಬಲ ಇದ್ದರೂ, ಎಲ್ಲ ದೇಶಗಳು ಸಮ್ಮತಿಸಿದ ಒಪ್ಪಂದವೊಂದು ಇಲ್ಲ; ತೈಲ, ಸ್ವಾಭಾವಿಕ ಅನಿಲ ಮತ್ತು ಪ್ಲಾಸ್ಟಿಕ್ ಉತ್ಪಾದಿಸುವ ರಶ್ಯ, ಸೌದಿ ಅರೇಬಿಯ ಮತ್ತು ಚೀನಾ ಒಪ್ಪಂದಕ್ಕೆ ಅಡ್ಡಿಯಾಗಿವೆ. ಹೀಗಾಗಿ, ದೇಶಗಳ ಮೇಲೆ ಒತ್ತಡ ಹೇರಲು ಆಗುತ್ತಿಲ್ಲ. ಆದರೆ, ಹಲವು ದೇಶಗಳು ಪ್ಲಾಸ್ಟಿಕ್ ಮಾತ್ರವಲ್ಲದೆ ಬೇರೆ ಉತ್ಪನ್ನಗಳಲ್ಲೂ ಬಳಕೆಯಾಗುತ್ತಿರುವ ರಾಸಾಯನಿಕಗಳನ್ನು ನಿಯಂತ್ರಿಸಲು ಕ್ರಮ ಕೈಗೊಂಡಿವೆ. ಯುರೋಪಿಯನ್ ಯೂನಿಯನ್ ರೂಪಿಸಿರುವ ಮಾನದಂಡ, ರೀಚ್(ನೋಂದಣಿ, ಮೌಲ್ಯಮಾಪನ, ದೃಢೀಕರಣ ಮತ್ತು ರಾಸಾಯನಿಕಗಳ ನಿರ್ಬಂಧ) ಪ್ರಕಾರ, ವರ್ಷಕ್ಕೆ ಒಂದು ಟನ್ ಅಥವಾ ಅದಕ್ಕಿಂತ ಹೆಚ್ಚು ರಸಾಯನಿಕವೊಂದನ್ನು ತರಿಸಿಕೊಳ್ಳುತ್ತಿರುವವರು ಯುರೋಪಿಯನ್ ಕೆಮಿಕಲ್ಸ್ ಏಜೆನ್ಸಿಯಡಿ ನೋಂದಣಿ ಮಾಡಿಸಿಕೊಳ್ಳಬೇಕಾಗುತ್ತದೆ ಮತ್ತು ಆ ರಾಸಾಯನಿಕಗಳ ಗುಣಲಕ್ಷಣ, ಬಳಕೆ ಹಾಗೂ ಅಪಾಯ ಕುರಿತು ಮಾಹಿತಿ ನೀಡಬೇಕಾಗುತ್ತದೆ. ಆಸ್ಟ್ರೇಲಿಯ, ಜಪಾನ್, ಅಮೆರಿಕ, ಕೆನಡಾ, ದಕ್ಷಿಣ ಕೊರಿಯಾ, ಚೀನಾ ಮತ್ತು ತೈವಾನ್ ಕೂಡ ರಾಸಾಯನಿಕಗಳ ಬಳಕೆ ಕುರಿತು ತಮ್ಮದೇ ಆದ ನಿಯಮಗಳನ್ನು ಹೊಂದಿವೆ.
ನಮ್ಮಲ್ಲಿಯೂ ರಾಸಾಯನಿಕಗಳ ನೋಂದಣಿ, ಮೌಲ್ಯಮಾಪನ ಹಾಗೂ ಬಳಕೆ ಕುರಿತು ಕೆಲವು ಕಾನೂನುಗಳಿವೆ. ‘ಮ್ಯಾನ್ಯುಫ್ಯಾಕ್ಚರ್, ಸ್ಟೋರೇಜ್ ಆಂಡ್ ಇಂಪೋರ್ಟ್ ಆಫ್ ಹೆಜಾರ್ಡಸ್ ಕೆಮಿಕಲ್ಸ್ ರೂಲ್ಸ್-1989’ ಇಂಥ ಕಾನೂನುಗಳಲ್ಲಿ ಒಂದು. ಆದರೆ, ಇದು ಹಾನಿಕರ ರಾಸಾಯನಿಕಗಳ ಆಮದು-ರಫ್ತಿಗೆ ಸೀಮಿತವಾಗಿದ್ದು, ದೇಶದಲ್ಲಿ ಉತ್ಪಾದನೆಯಾಗುವ ರಾಸಾಯನಿಕಗಳ ಬಳಕೆ ಬಗ್ಗೆ ಮೌನವಾಗಿದೆ. ಭಾರತೀಯ ಮಾನಕ ಸಂಸ್ಥೆ (ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್, ಬಿಐಎಸ್) ಪ್ಲಾಸ್ಟಿಕ್ ಉತ್ಪಾದನೆ, ಬಳಕೆ ಮತ್ತು ಮರುಬಳಕೆಯಲ್ಲಿ ರಾಸಾಯನಿಕಗಳಿಗೆ ಯಾವುದೇ ಮಿತಿ ವಿಧಿಸಿಲ್ಲ. ಕೇಂದ್ರ ರಾಸಾಯನಿಕ ಮತ್ತು ಗೊಬ್ಬರಗಳ ಮಂತ್ರಾಲಯದ ಮಾಹಿತಿ ಪ್ರಕಾರ, ದೇಶದ ಪೆಟ್ರೋಕೆಮಿಕಲ್ ಸಂಸ್ಕರಣೆ ಸಾಮರ್ಥ್ಯದಲ್ಲಿ ಶೇ.67ರಷ್ಟು ಪ್ಲಾಸ್ಟಿಕ್ ಉತ್ಪಾದನೆಗೆ ಬಳಕೆಯಾಗುತ್ತಿದೆ. ಹೀಗಾಗಿ, ಉತ್ಪಾದನೆ ಕ್ಷೇತ್ರದ ನಿಯಂತ್ರಣಕ್ಕೆ ರಾಷ್ಟ್ರೀಯ ಕಾರ್ಯನೀತಿಯೊಂದು ಅಗತ್ಯವಿದೆ. ಆಹಾರದ ಸಂಪರ್ಕಕ್ಕೆ ಬರುವ ಪ್ಲಾಸ್ಟಿಕ್‌ಗೆ ಮಾನದಂಡ ರೂಪಿಸಿದ್ದರೂ, ವರದಿ ಮಾಡುವ ಇಲ್ಲವೇ ಮೇಲುಸ್ತುವಾರಿ ವ್ಯವಸ್ಥೆ ಇಲ್ಲ. ಪ್ಲಾಸ್ಟಿಕ್ ಮರುಬಳಕೆ ಕುರಿತು ಇರುವ ಮಾನದಂಡಗಳನ್ನು ಮರುಪರಿಶೀಲಿಸಬೇಕಿದೆ.
ಪ್ಲಾಸ್ಟಿಕ್‌ನ ಉತ್ಪಾದನೆ, ಬಳಕೆ ಹಾಗೂ ತ್ಯಾಜ್ಯ ನಿರ್ವಹಣೆಯ ಸಂಪೂರ್ಣ ವೃತ್ತವೇ ಮಲಿನಪೂರಿತವಾಗಿದೆ; ಆದ್ದರಿಂದ ಬಳಕೆ ನಿಲ್ಲಿಸುವುದು ಮತ್ತು ಪರ್ಯಾಯಗಳ ಅಭಿವೃದ್ಧಿ ಆದ್ಯತೆಯಾಗಬೇಕಿದೆ. ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯನ್ನು ಮಾತ್ರ ಪರಿಗಣಿಸಬೇಕೇ ಅಥವಾ ಉತ್ಪಾದನೆ-ಬಳಕೆಯನ್ನು ಕಡಿತ/ಸ್ಥಗಿತಗೊಳಿಸಬೇಕೇ? ಮತ್ತು ಉತ್ಪಾದನೆ ಸ್ಥಗಿತಗೊಳಿಸಿದಲ್ಲಿ ನಷ್ಟಕ್ಕೀಡಾಗುವ ಬಡ ದೇಶಗಳಿಗೆ ಶ್ರೀಮಂತ ದೇಶಗಳು ಆರ್ಥಿಕ ನೆರವು ನೀಡುತ್ತವೆಯೇ ಎಂಬ ಪ್ರಶ್ನೆ ಕೂಡ ಇದೆ.
ವೈಯಕ್ತಿಕ ಹಂತದಲ್ಲಿ ಒಂದಿಷ್ಟು ಸರಳ ಕೆಲಸಗಳನ್ನು ಮಾಡಬಹುದು: ಮಾರುಕಟ್ಟೆಗೆ ಹೋಗುವಾಗ ಬಟ್ಟೆ-ನಾರಿನ ಚೀಲ ಕೊಂಡೊಯ್ಯುವುದು; ಪ್ಲಾಸ್ಟಿಕ್ ಕ್ಯಾರಿ ಚೀಲಗಳ ಬಳಕೆ ಕಡಿತಗೊಳಿ ಸುವುದು/ನಿಲ್ಲಿಸುವುದು; ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ ಜವಾಬ್ದಾರಿಯುತವಾಗಿ ವಿಲೇವಾರಿ ಮಾಡುವುದು ಇತ್ಯಾದಿ. ಇದರಿಂದ ಪವಾಡವೇನೂ ಘಟಿಸುವುದಿಲ್ಲ. ನಿಜ. ಆದರೆ, ಇಂಥ ವೈಯಕ್ತಿಕ ನಡೆಗಳು ಭೂಮಿ-ಬದುಕನ್ನು ಒಂದಿಷ್ಟಾದರೂ ಸಹನೀಯಗೊಳಿಸುತ್ತವೆ.