ಚುನಾವಣೆ ಆಯೋಗದ ಕುತಂತ್ರ ಮತ್ತು ವೋಟ್‌ಬಂದಿ

ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್)ಯನ್ನು ‘ಅದೊಂದು ಸಾಂವಿಧಾನಿಕ ಹೊಣೆಗಾರಿಕೆ’ ಎಂದಿರುವ ಸುಪ್ರೀಂ ಕೋರ್ಟ್(ಜುಲೈ 10, 2025ರಂದು), ಪ್ರಕ್ರಿಯೆಯನ್ನು ಮುಂದುವರಿಸಲು ಅನುಮತಿ ನೀಡಿದೆ. ತೀರ್ಪಿನಿಂದ ಉತ್ತೇಜಿತವಾಗಿರುವ ಆಯೋಗ, ದೇಶಾದ್ಯಂತ ಈ ಪ್ರಕ್ರಿಯೆಯನ್ನು ನಡೆಸುವುದಾಗಿ ಹೇಳಿದೆ. ಇದರ ಬೆನ್ನಲ್ಲೇ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಲೋಪಗಳಿವೆ ಎಂದು ವೀಡಿಯೊ ಮಾಡಿದ್ದ ಪತ್ರಕರ್ತ/ಯುಟ್ಯೂಬರ್ ಅಜಿತ್ ಅಂಜುಂ ಮೇಲೆ ಜುಲೈ 15ರಂದು ಎಫ್‌ಐಆರ್ ದಾಖಲಿಸಲಾಗಿದೆ. ಪರಿಷ್ಕರಣೆಯನ್ನು ವಿರೋಧಿಸಿದ್ದ ಪ್ರತಿಪಕ್ಷಗಳು, ಸುಪ್ರೀಂ ಮೆಟ್ಟಿಲೇರಿವೆ. ಜುಲೈ 28ರಂದು ಈ ಸಂಬಂಧ ವಿಚಾರಣೆ ಬಾಕಿ ಇದೆ.
ಪರಿಷ್ಕರಣೆ ಹೇಗೆ?
ಮತದಾರರ ಪಟ್ಟಿಯನ್ನು 4 ರೀತಿ ಪರಿಷ್ಕರಿಸಲಾಗುತ್ತದೆ: ಸಮಗ್ರ, ಸಂಕ್ಷಿಪ್ತ, ಭಾಗಶಃ ಸಮಗ್ರ-ಭಾಗಶಃ ಸಂಕ್ಷಿಪ್ತ ಮತ್ತು ವಿಶೇಷ. ಸಮಗ್ರ ಪರಿಷ್ಕರಣೆಯಲ್ಲಿ ಮನೆಗಳಿಗೆ ತೆರಳಿ ಕುಟುಂಬದ ಪರಿಶೀಲನೆ ಮಾಡಲಾಗುತ್ತದೆ; ಸಂಕ್ಷಿಪ್ತ ಪರಿಷ್ಕರಣೆಯಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆ ಇಲ್ಲವೇ ತೆಗೆದುಹಾಕುವಿಕೆ ಸಂಬಂಧಿಸಿದಂತೆ ಆಕ್ಷೇಪ-ಕೋರಿಕೆಗಳನ್ನು ಆಹ್ವಾನಿಸಿ, ಆನಂತರ ಪಟ್ಟಿಯನ್ನು ಸಿದ್ಧಗೊಳಿಸಲಾಗುತ್ತದೆ. ಭಾಗಶಃ ಸಮಗ್ರ-ಭಾಗಶಃ ಸಂಕ್ಷಿಪ್ತ ಪರಿಷ್ಕರಣೆಯಲ್ಲಿ ಹಾಲಿ ಮತಪಟ್ಟಿಯ ಕರಡನ್ನು ಪ್ರಕಟಿಸಲಾಗುತ್ತದೆ ಮತ್ತು ಅದೇ ಹೊತ್ತಿನಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಾರೆ. ಬಿಹಾರದಲ್ಲಿ ನಡೆಯುತ್ತಿರುವುದು ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್); ಮತಪಟ್ಟಿಯನ್ನು ತುರ್ತಾಗಿ ಸರಿಪಡಿಸಲು ನಡೆಯುವಂಥದ್ದು.
ಚುನಾವಣೆ ಆಯೋಗ ಹೇಳುವುದೇನು?
ಬಿಹಾರದಲ್ಲಿ ಅಕ್ಟೋಬರ್-ನವೆಂಬರ್ 2025ರಲ್ಲಿ ಚುನಾವಣೆ ನಡೆಯಲಿದೆ. ಆಯೋಗವು ಎಸ್‌ಐಆರ್ ನಡೆಸುವುದಾಗಿ ಜೂನ್ 24, 2025ರಂದು ಘೋಷಿಸಿತು. ಈ ಮೊದಲು 2003ರಲ್ಲಿ ಪರಿಷ್ಕರಣೆ ನಡೆದಿತ್ತು. ಕಳೆದ 20 ವರ್ಷದಲ್ಲಿ ಮತದಾರರ ಪಟ್ಟಿಗೆ ಭಾರೀ ಪ್ರಮಾಣದಲ್ಲಿ ಹೆಸರು ಸೇರ್ಪಡೆ/ತೆಗೆದುಹಾಕುವಿಕೆ ನಡೆದಿದೆ; ನಗರೀಕರಣ, ಯುವ ಮತದಾರರ ಸೇರ್ಪಡೆ, ಸಾವುಗಳನ್ನು ವರದಿ ಮಾಡದೆ ಇರುವುದು ಮತ್ತು ವಾಸ್ತವ್ಯ ಬದಲಿಸಿದರೂ, ಮತದಾರರ ಪಟ್ಟಿಯಿಂದ ಹೆಸರು ತೆಗೆಸದೆ ಇರುವುದರಿಂದ ಮತದಾರರ ಪಟ್ಟಿಯ ಪರಿಷ್ಕರಣೆ ಅಗತ್ಯವಿದೆ ಎಂದು ಆಯೋಗ ಹೇಳುತ್ತದೆ.
ಬಿಹಾರದಲ್ಲಿ 7.89 ಕೋಟಿ ಮತದಾರರಿದ್ದಾರೆ. 2003ರ ಮತದಾರ ಪಟ್ಟಿಯಲ್ಲಿ 4.96 ಕೋಟಿ ಇದ್ದು, ಆನಂತರ 2.93 ಕೋಟಿ ಮಂದಿ ನೋಂದಾಯಿಸಿಕೊಂಡಿದ್ದಾರೆ. 1987ಕ್ಕೆ ಮೊದಲು ಜನಿಸಿದವರು ಜನನ ದಿನಾಂಕ ಮತ್ತು ಸ್ಥಳದ ದಾಖಲೆ, 1987-2004ರ ಅವಧಿಯಲ್ಲಿ ಜನಿಸಿದವರು ಜನನ ದಿನಾಂಕ, ಸ್ಥಳ ಹಾಗೂ ಪೋಷಕರೊಬ್ಬರ ಇಂಥದ್ದೇ ದಾಖಲೆ ಹಾಗೂ 2004ರ ನಂತರ ಜನಿಸಿದವರು ತಮ್ಮ ಮತ್ತು ಪೋಷಕರ ಜನನ ದಿನಾಂಕ ಮತ್ತು ಸ್ಥಳದ ದಾಖಲೆ ಹಾಗೂ ಪೋಷಕರ ಪಾಸ್‌ಪೋರ್ಟ್ ನೀಡಬೇಕಿದೆ. ಆಯೋಗದ ಹಠಾತ್ ಹಾಗೂ ಏಕಪಕ್ಷೀಯ ನಿರ್ಧಾರದಿಂದ ಆಧಾರ್ ಮತ್ತಿತರ ದಾಖಲೆಗಳಿಲ್ಲದ, 2003ರ ನಂತರ ನೋಂದಣಿ ಮಾಡಿಸಿದವರು ಅನರ್ಹರಾಗಲಿದ್ದಾರೆ. ಇವರೆಲ್ಲರೂ 2024ರ ಲೋಕಸಭೆ ಚುನಾವಣೆಯಲ್ಲೂ ಮತ ಚಲಾವಣೆ ಮಾಡಿದ್ದರು. ಮತಪಟ್ಟಿಯಲ್ಲಿರುವ ನಕಲಿ ಮತದಾರರನ್ನು ತೆಗೆಯಲು ಪರಿಷ್ಕರಣೆ ನಡೆಸಲಾಗುತ್ತಿದೆ ಎಂದು ಆಯೋಗ ಹೇಳುತ್ತದೆ. ಇದರರ್ಥ-2024ರಲ್ಲಿಯೂ ನಕಲಿ ಮತ ಚಲಾವಣೆ ಆಗಿದೆ ಎಂದಾಗುತ್ತದೆ. ಆಗ ಗೆದ್ದಿರುವ ಸಂಸದರ ಮೇಲೆ ಆಯೋಗ ಏನು ಕ್ರಮ ತೆಗೆದುಕೊಳ್ಳಲಿದೆ? ಮಹಾರಾಷ್ಟ್ರದಲ್ಲಿ ಚುನಾವಣೆಗೆ ಕೇವಲ 5 ತಿಂಗಳು ಮುನ್ನ 40 ಲಕ್ಷ ಮತದಾರರನ್ನು ಸೇರಿಸಲಾಗಿದೆ ಎಂದು ಕಾಂಗ್ರೆಸ್ ದೂರಿತ್ತು. ಇದು 5 ವರ್ಷಗಳಲ್ಲಿ ಸೇರ್ಪಡೆಯಾಗುವ ಮತದಾರರ ಸಂಖ್ಯೆಗಿಂತ ಅಧಿಕ. ಈ ಮತದಾರರು ಯಾರು, ಎಲ್ಲಿಂದ ಬಂದರು ಮತ್ತು ಅವರನ್ನು ಮತಪಟ್ಟಿಗೆ ಹೇಗೆ ಸೇರಿಸಲಾಯಿತು? ಮಹಾರಾಷ್ಟ್ರದ ಮತದಾರರ ಪಟ್ಟಿಯನ್ನು ಬಹಿರಂಗಗೊಳಿಸಬೇಕು ಎಂದು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದಾಗ, ಆಯೋಗ ಕಿಮಕ್ ಎನ್ನಲಿಲ್ಲ. ಮಾರ್ಚ್ 8, 2015ರಂದು ಕಾಂಗ್ರೆಸ್ ದೂರು ನೀಡಿದ ಬಳಿಕ ಮತದಾರರ ಆಧಾರ್‌ನ್ನು ಮತಪಟ್ಟಿಗೆ ಜೋಡಣೆ ಮಾಡುವ ಪ್ರಸ್ತಾವ ಇರಿಸಿತು. ಪ್ರಸ್ತಾವವನ್ನು ಪ್ರತಿಪಕ್ಷಗಳು ಬೆಂಬಲಿಸಿದವು. ಆದರೆ, 3 ತಿಂಗಳ ಬಳಿಕ ಆಧಾರ್ ಜೋಡಣೆ ಪ್ರಸ್ತಾವ ಕೈಬಿಟ್ಟ ಆಯೋಗ, ಎಸ್‌ಐಆರ್‌ಗೆ ಮುಂದಾಯಿತು. ನಕಲಿ ಮತದಾರರನ್ನು ತೆಗೆದುಹಾಕುವ ಆಯೋಗದ ಉದ್ದೇಶ ಪ್ರಾಮಾಣಿಕವಾದದ್ದು ಎಂದುಕೊಂಡರೂ, ಅಂದಾಜು 2.93 ಕೋಟಿ ಜನರನ್ನು ಒಂದು ತಿಂಗಳೊಳಗೆ ಭೇಟಿ ಮಾಡಿ, ಅವರ ದಾಖಲೆಗಳನ್ನು ಪರಿಶೀಲಿಸಿ, ಮತಪಟ್ಟಿಗೆ ಸೇರ್ಪಡೆಗೊಳಿಸುವುದು ಸಾಧ್ಯವೇ? ಎಸ್‌ಐಆರ್ ಘೋಷಿಸುವ ಮುನ್ನ ಪ್ರತಿಪಕ್ಷಗಳೊಟ್ಟಿಗೆ ಮಾತುಕತೆ ನಡೆಸಲಿಲ್ಲವೇಕೆ? 35 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಎಲ್ಲರೂ ತಮ್ಮ ಪೋಷಕರ ಜನನ ಪ್ರಮಾಣಪತ್ರ ಸಲ್ಲಿಸಬೇಕೆಂದು ಏಕೆ ಕೇಳಲಾಗುತ್ತಿದೆ? ಆಯೋಗ ಆಡಳಿತ ಪಕ್ಷಕ್ಕೆ ನೆರವಾಗಲು ಕೋಟ್ಯಂತರ ಜನರ ಮತ ಚಲಾವಣೆ ಹಕ್ಕು ಕಿತ್ತುಕೊಳ್ಳುತ್ತಿದೆಯೇ? ಹಾಗೂ, ಇದು ಛದ್ಮವೇಷದ ರಾಷ್ಟ್ರೀಯ ನಾಗರಿಕತ್ವ ರಿಜಿಸ್ಟರ್ (ಸಿಎನ್‌ಆರ್‌ಸಿ) ಪ್ರಯತ್ನವೇ?
ನಂಬಿಕೆ ಕಳೆದುಕೊಂಡಿದೆ
ಚುನಾವಣೆ ಆಯೋಗದ ವಿಶ್ವಾಸಾರ್ಹತೆ ನೆಲ ಕಚ್ಚಿದೆ. ಈ ಸಂಸ್ಥೆಯ ಚಟುವಟಿಕೆಗಳು ಅಪಾರದರ್ಶಕವಾಗಿವೆ; ಸರಕಾರದ ‘ಹೌದಣ್ಣ’, ‘ಜೀಹುಜೂರ್’ ಆಗಿದೆ. ಮಾಹಿತಿ ಹಕ್ಕು ಅರ್ಜಿಗಳಿಗೆ ಆಯೋಗ ಉತ್ತರಿಸುವುದಿಲ್ಲ. 2003ರ ಮತಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದ ಆದೇಶದ ಪ್ರತಿ ತನ್ನ ಬಳಿ ಇಲ್ಲ ಎಂದು ಆರ್‌ಟಿಐ ಅರ್ಜಿಗೆ ಪ್ರತಿಕ್ರಿಯಿಸಿತ್ತು. ಅಂದಾಜು 96.88 ಕೋಟಿ ಮತದಾರರು ಇರುವ ಮತಪಟ್ಟಿ ಡಿಜಿಟಲೀಕರಣಗೊಂಡಿದೆ. ಆದರೆ, ನಿರ್ವಚನ ಸದನದಲ್ಲಿರುವ ಕಡತಗಳಿಗೆ ಡಿಜಿಟಲೀಕರಣ ಭಾಗ್ಯ ಬಂದಿಲ್ಲ. 2024ರ ಲೋಕಸಭೆ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ರಿಟರ್ನಿಂಗ್ ಅಧಿಕಾರಿ(ಆರ್‌ಒ)ಗಳ ಪಟ್ಟಿ ತನ್ನ ಬಳಿ ಇಲ್ಲ ಎಂದು ಹೇಳಿತ್ತಲ್ಲದೆ, ಅರ್ಜಿಯನ್ನು ರಾಜ್ಯ/ಕೇಂದ್ರಾಡಳಿತ ಪ್ರದೇಶದ ಸಂಬಂಧಿಸಿದ ಅಧಿಕಾರಿಗಳಿಗೆ ಕಳಿಸಲು ನಿರಾಕರಿಸಿತು; ಪ್ರಚಾರಕ್ಕೆ ಹೆಚ್ಚು ಹಣ ವೆಚ್ಚ ಮಾಡುವ ಸಾಧ್ಯತೆ ಇರುವ ಲೋಕಸಭೆ ಕ್ಷೇತ್ರಗಳ ಪಟ್ಟಿ ತನ್ನ ಬಳಿ ಇಲ್ಲ ಎಂದಿತ್ತು. ವೆಚ್ಚ ಪರಿವೀಕ್ಷಕರ ವರದಿಗಳನ್ನು ಬಹಿರಂಗಗೊಳಿಸಬೇಕೆಂಬ ಮನವಿಯನ್ನು ತಳ್ಳಿಹಾಕಿತ್ತು. ಚುನಾವಣೆ ವೇಳೆ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಬ್ಯಾಂಕ್‌ಗಳು ನೀಡುವ ಸಂದೇಹಾಸ್ಪದ ವಹಿವಾಟು ವರದಿ(ಎಸ್‌ಟಿಆರ್)ಗಳನ್ನು ಕೇಳಿದಾಗ, ಯಾವುದೇ ಮಾಹಿತಿ ಇಲ್ಲ ಎಂದು ಹೇಳಿತ್ತು. ರಿಟರ್ನಿಂಗ್ ಅಧಿಕಾರಿಗಳು ಮತ ಚಲಾವಣೆ ಪೂರ್ಣಗೊಂಡ ನಂತರ ಕಳುಹಿಸುವ ವರದಿಗಳು ‘ಮಾಹಿತಿ ಎಂಬ ಶೀರ್ಷಿಕೆಯಡಿ ಬರುವುದಿಲ್ಲ’ ಎಂದು ಹೇಳಿತ್ತು. 2024ರ ಮಹಾರಾಷ್ಟ್ರ ಚುನಾವಣೆಯಲ್ಲಿ ಸಂಜೆ 5 ಗಂಟೆ ಬಳಿಕ ಎಷ್ಟು ಮಂದಿ ಮತ ಚಲಾಯಿಸಿದರು ಎಂಬುದು ಗೊತ್ತಿಲ್ಲ ಎಂದು ಹೇಳಿತ್ತು. ಚುನಾವಣೆ ಕೈಪಿಡಿ ಪ್ರಕಾರ, ಆರ್‌ಒಗಳು ಮುಖ್ಯ ಚುನಾವಣೆ ಅಧಿಕಾರಿಗೆ ಇಂಥ ವರದಿ ಸಲ್ಲಿಸುತ್ತಾರೆ. ಆರ್‌ಟಿಐ ಕಾರ್ಯಕರ್ತರೊಬ್ಬರು ಮತದಾರರಿಗೆ ಬೆದರಿಕೆ ಮತ್ತು ಅಕ್ರಮ ಪ್ರಲೋಭನೆ ಒಡ್ಡುವ ಕ್ಷೇತ್ರಗಳಿಗೆ ಸಂಬಂಧಿಸಿದ ವರದಿಯನ್ನು ಕೇಳಿದಾಗ, ಅಂಥ ಮಾಹಿತಿ ತನ್ನ ಬಳಿ ಇಲ್ಲ ಎಂದು ಹೇಳಿತ್ತು. ಆದರೆ, ಅಂಥ ವರದಿಗಳನ್ನು ಮಾರ್ಚ್ 27, 2024ರಲ್ಲೇ ಕಳಿಸಲಾಗಿತ್ತು ಎಂಬುದು ಬೆಳಕಿಗೆ ಬಂತು! ಅಂಕಿಅಂಶ ಲಭ್ಯವಿಲ್ಲ(ನೋ ಡೇಟಾ ಅವೈಲಬಲ್) ಸರಕಾರದ ನೆರಳಿನಲ್ಲಿರುವ ಆಯೋಗ, ಚುನಾವಣೆಗೆ ಸಂಬಂಧಿಸಿದ ಬಹುಮುಖ್ಯ ಮಾಹಿತಿಗಳನ್ನು ‘ಸರಕಾರಿ ರಹಸ್ಯ’ ಎಂದು ಹೇಳುತ್ತ, ಬಹಿರಂಗಪಡಿಸಲು ನಿರಾಕರಿಸುತ್ತಿದೆ. ಇಂಥ ಲೋಪಗಳ ಪಟ್ಟಿ ಬಹಳ ಉದ್ದವಾಗಿದೆ.
ವಲಸೆ ದೊಡ್ಡ ಸಮಸ್ಯೆ
ಬಿಹಾರದಲ್ಲಿ ವಲಸೆ ಮತದಾರರ ಪ್ರಮಾಣ ಅಂದಾಜು ಶೇ.20. ಇವರೆಲ್ಲರೂ ಜುಲೈ 31, 2025ರೊಳಗೆ ದಾಖಲೆ ಸಲ್ಲಿಸಬೇಕಿದೆ. ಜನಪ್ರತಿನಿಧಿ ಕಾಯ್ದೆ 1950ರ ಪ್ರಕಾರ, ವಾಸಸ್ಥಳದಿಂದ ತಾತ್ಕಾಲಿಕ ಅವಧಿಗೆ ಗೈರುಹಾಜರಾಗುವವರು ಕೂಡ ಅಲ್ಲಿನ ನಿವಾಸಿಗಳೇ ಆಗಿರುತ್ತಾರೆ; ಅವರಿಗೆ ವಾಪಸಾಗುವ ಉದ್ದೇಶ ಹಾಗೂ ಸಾಮರ್ಥ್ಯ ಇರಬೇಕು. ರಾಜ್ಯದಲ್ಲಿ ಪುರುಷರಿಗಿಂತ ಮಹಿಳೆಯರ ಮತಚಲಾವಣೆ ಪ್ರಮಾಣ ಹೆಚ್ಚು ಇದೆ. ವಲಸೆ ಹೋಗಿರುವ ಪುರುಷರು ಸ್ವಗ್ರಾಮಕ್ಕೆ ಮರಳಿ ಮತ ಚಲಾವಣೆ ಮಾಡದೆ ಇರುವುದು ಇದಕ್ಕೆ ಕಾರಣ.
ಬಿಹಾರದಲ್ಲಿ 2003ರಲ್ಲಿ ಹಾಗೂ ಇತರ ರಾಜ್ಯಗಳಲ್ಲಿ 2002ರಿಂದ 2004ರ ಅವಧಿಯಲ್ಲಿ ಎಸ್‌ಐಆರ್ ನಡೆದಿದೆ. ಆನಂತರ, ನಿಯಮಿತ ಪರಿಷ್ಕರಣೆಗಳು ನಡೆದಿವೆ. ಅದರಲ್ಲಿ ಇತ್ತೀಚಿನದು ಜನವರಿ 2025ರಲ್ಲಿ ಮುಕ್ತಾಯವಾಯಿತು. ಹೀಗಿದ್ದರೂ, ಚುನಾವಣೆಗೆ ಕೆಲವು ತಿಂಗಳು ಮುನ್ನ ಎಸ್‌ಐಆರ್ ನಡೆಸುತ್ತಿರುವುದು ಶಂಕಾಸ್ಪದ. ಆಯೋಗಕ್ಕೆ ಸಂವಿಧಾನದ 324ನೇ ವಿಧಿಯಡಿ ಪರಿಷ್ಕರಣೆಯ ಅಧಿಕಾರ ಇದೆ. ಆದರೆ, ಪರಿಷ್ಕರಣೆ ಪ್ರಕ್ರಿಯೆಗಳು ಪಾರದರ್ಶಕವಾಗಿರಬೇಕು ಹಾಗೂ ಮತದಾನದ ಹಕ್ಕನ್ನು ಕಸಿದುಕೊಳ್ಳಬಾರದು. ಆಧಾರ್ ಪೌರತ್ವವನ್ನು ಸಾಬೀತುಪಡಿಸದ ಕಾರಣ ಅದನ್ನು ದಾಖಲೆಯೆಂದು ಪರಿಗಣಿಸಬಾರದು ಎಂದು ಆಯೋಗವು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿತ್ತು; ಆದರೆ, ಕೋರ್ಟ್ ಆಧಾರ್‌ನ್ನು ಕ್ರಮಬದ್ಧ ದಾಖಲೆ ಎಂದು ಪರಿಗಣಿಸಬೇಕೆಂದು ಆದೇಶಿಸಿತು. ಬಿಹಾರದಲ್ಲಿ ಅಂದಾಜು ಶೇ.87 ಜನ ಆಧಾರ್ ಕಾರ್ಡ್ ಹೊಂದಿದ್ದು, ಅದು ವ್ಯಾಪಕವಾಗಿ ಬಳಸಲ್ಪಡುವ ಗುರುತಿನ ಚೀಟಿಯಾಗಿದೆ. ರಾಜ್ಯದಲ್ಲಿ ಶೇ. 45-50 ಮಂದಿ ಮಾತ್ರ ಮೆಟ್ರಿಕ್ಯುಲೇಟ್ ವ್ಯಾಸಂಗ, ಶೇ.2ಕ್ಕಿಂತ ಕಡಿಮೆ ಜನ ಪಾಸ್‌ಪೋರ್ಟ್ ಹಾಗೂ 2021ರಲ್ಲಿ ಶೇ.56 ಮಂದಿ ಮಾತ್ರ ಜನನ ಪ್ರಮಾಣಪತ್ರ ಹೊಂದಿದ್ದರು. ಇಂಥ ಪರಿಸ್ಥಿತಿ ಇರುವಾಗ ದಾಖಲೆಗಳನ್ನು ತೋರಿಸಲು ಒತ್ತಾಯಿಸುವುದು ಶಿಕ್ಷೆಗೆ ಸಮ.
ಕಾನೂನುಬಾಹಿರ
ಲಾಲ್ ಬಾಬು ಹುಸೇನ್ ಮತ್ತಿತರರು v/s ಚುನಾವಣೆ ನೋಂದಣಿ ಅಧಿಕಾರಿ ಮತ್ತಿತರರು (6 ಫೆಬ್ರವರಿ 1995) ಪ್ರಕರಣದಲ್ಲಿ ‘ಮೊದಲ ಬಾರಿಗೆ ನೋಂದಾಯಿಸಿಕೊಳ್ಳುವ ವ್ಯಕ್ತಿ ಮೇಲೆ ಪೌರತ್ವವನ್ನು ಸಾಬೀತುಪಡಿಸುವ ಹೊರೆ ಇರಲಿದೆ’ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಆದರೆ, ಈಗಾಗಲೇ ಮತಪಟ್ಟಿಯಲ್ಲಿರುವವರಿಗೆ ಇದು ಅನ್ವಯಿಸುವುದಿಲ್ಲ. ‘ವಿಶೇಷ ಸಮಗ್ರ ಪರಿಶೀಲನೆ’ಯನ್ನು ಜನಪ್ರತಿನಿಧಿ ಕಾಯ್ದೆ ಅನುಮೋದಿಸುವುದಿಲ್ಲ. ಕಾಯ್ದೆಯ ಸೆಕ್ಷನ್ 21ರ ಅಡಿಯಲ್ಲಿ ಆಯೋಗಕ್ಕೆ ಅಂಥ ಅಧಿಕಾರವಿಲ್ಲ. ಕಾಯ್ದೆ 4 ರೀತಿಯ ಪರಿಷ್ಕರಣೆಗೆ ಅವಕಾಶ ನೀಡುತ್ತದೆ. ಅದರಲ್ಲಿ ಮೊದಲ ಎರಡು, ಸಾರ್ವತ್ರಿಕ ಅಥವಾ ಉಪ ಚುನಾವಣೆಗೆ ಮುನ್ನ, ಕಾನೂನಿನ ಪ್ರಕಾರ ಅಗತ್ಯ. ಮೂರನೆಯದು ಆಯೋಗ ಯಾವುದೇ ವರ್ಷದಲ್ಲಿ ಆದೇಶಿಸಬಹುದಾದ ಸಾಮಾನ್ಯ ಪರಿಷ್ಕರಣೆ; ಆದರೆ, ಅದು ಜನವರಿ 1ರೊಳಗೆ ನಡೆಯಬೇಕು. ಕೊನೆಯದಾದ ‘ವಿಶೇಷ ಸಮಗ್ರ ಪರಿಶೀಲನೆ’ಯನ್ನು ನಿರ್ದಿಷ್ಟ ಸಮಸ್ಯೆ ಇರುವ ಒಂದು ಅಥವಾ ಕೆಲವು ಕ್ಷೇತ್ರಗಳಲ್ಲಿ ಮಾತ್ರ ನಡೆಸಬಹುದು; ಇದನ್ನು ಇಡೀ ರಾಜ್ಯಕ್ಕೆ ಅನ್ವಯಿಸಲು ಸಾಧ್ಯವಿಲ್ಲ. ವಿಶೇಷ ಪರಿಷ್ಕರಣೆಗೆ ಕಾರಣವೇನು ಎಂಬುದನ್ನು ಆಯೋಗ ತಿಳಿಸಬೇಕು ಎಂದು ಕಾನೂನು ಹೇಳುತ್ತದೆ. 2024ರ ಲೋಕಸಭೆ ಚುನಾವಣೆಯಲ್ಲಿ ಬಳಸಿದ ಮತಪಟ್ಟಿ ಇದ್ದು, 2025ರಲ್ಲಿ ಪರಿಷ್ಕರಿಸಲ್ಪಟ್ಟಿದೆ. ಕೇವಲ ಆರು ತಿಂಗಳಲ್ಲಿ ಜನಸಂಖ್ಯೆಯಲ್ಲಿ ಭಾರೀ ಹೆಚ್ಚಳ/ಕುಸಿತ ಆಗಿದೆಯೇ? ಇಲ್ಲ. ಹಾಗಿದ್ದ ಮೇಲೆ ವಿಶೇಷ ಪರಿಷ್ಕರಣೆಯ ಅಗತ್ಯವೇನಿದೆ? ಇದರ ಹಿಂದೆ ಅಜೆಂಡಾ ಇದೆ.
ಮತಪಟ್ಟಿಯ ಮೊದಲ ಕರಡು ಆಗಸ್ಟ್ 1 ಹಾಗೂ ಅಂತಿಮ ಮತಪಟ್ಟಿ ಸೆಪ್ಟಂಬರ್ 30ರಂದು ಪ್ರಕಟವಾಗಬೇಕಿದೆ. 1949ರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ‘ಮತದಾರರ ಪಟ್ಟಿಯ ಪಾವಿತ್ರ್ಯವು ಭಾರತದ ಪ್ರಜಾಪ್ರಭುತ್ವದ ಬುನಾದಿ’ ಎಂದು ಹೇಳಿದ್ದರು; ಚುನಾವಣೆ ಆಯೋಗದ ಕುತಂತ್ರದಿಂದ ಆ ಬುನಾದಿ ಅಲುಗಾಡುತ್ತಿದೆ. ‘ನಾಗರಿಕ-ಸರಕಾರದ ಸಂಬಂಧವು ಪ್ರತಿಯೊಬ್ಬರ ಘನತೆಯನ್ನು ಖಾತ್ರಿಗೊಳಿಸುವಂತೆ ಇರಬೇಕು’ ಎಂಬುದು ಸಂವಿಧಾನದ ಆಶಯ; ಆದರೆ, ಅದು ಒಡೆಯ-ಸೇವಕ ಸಂಬಂಧವಾಗಿ ಬದಲಾಗುತ್ತಿದೆ. ಬಿಹಾರ ಇಂಥ ದುಷ್ಟ ಪ್ರಯೋಗದ ಅಂಗಣ ವಾಗಿದ್ದು, ಕಾಲಕ್ರಮೇಣ ದೇಶದೆಲ್ಲೆಡೆ ವ್ಯಾಪಿಸಲಿದೆ. ಮತದಾನದ ಹಕ್ಕು ಕಾನೂನುಬದ್ಧ ಹಕ್ಕುಗಳಿಗಿಂತ ಹೆಚ್ಚಿನದು; ರಾಜಕೀಯ ಭಾಗವಹಿಸುವಿಕೆ ಮತ್ತು ನ್ಯಾಯಸಮ್ಮತತೆಯ ಮೂಲಾಧಾರ. ಆದ್ದರಿಂದ, ಪರಿಷ್ಕರಣೆ ಸಾಂವಿಧಾನಿಕವಲ್ಲ; ಕಾನೂನುಬಾಹಿರ ಮತ್ತು ಜನರಿಗೆ ವಿಧಿಸುವ ಶಿಕ್ಷೆ.
ಇದಕ್ಕೆ ಪೂರಕವೆಂಬಂತೆ, ಆಯೋಗ ಜುಲೈ 14ರಂದು ‘ಮತಪಟ್ಟಿಯಲ್ಲಿ ಬಾಂಗ್ಲಾ, ಮ್ಯಾನ್ಮಾರ್ ಮತ್ತು ನೇಪಾಳದ ಅಕ್ರಮ ಮತದಾರರಿದ್ದಾರೆ’ ಎಂದು ಪುಂಗಿ ಊದಲು ಆರಂಭಿಸಿತು. ತಕ್ಷಣ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ಶಹಝಾದ್ ಪೂನಾವಾಲಾ, ‘‘ಆರ್‌ಜೆಡಿ ಮತ್ತು ಕಾಂಗ್ರೆಸ್ ಬಿಹಾರಿಗಳ ಹಕ್ಕು ಖಾತ್ರಿಗೊಳಿಸುವುದನ್ನು ಬಿಟ್ಟು, ಹೊರಗಿನವರ ಹಕ್ಕುಗಳಿಗೆ ಹೋರಾಡುತ್ತಿವೆ’’ ಎಂದರು. ಆರ್‌ಜೆಡಿ ಸಂಸದ ಮನೋಜ್ ಜಾ, ‘‘ವಿದೇಶಿಯರು ಇದ್ದರೆ ಅದಕ್ಕೆ ಹೊಣೆಗಾರರು ಯಾರು? ಕೇಂದ್ರ ಗೃಹ ಸಚಿವರಲ್ಲವೇ? ಕರಡು ಪ್ರಕಟಗೊಳ್ಳುವ ಮುನ್ನವೇ ದ್ವೇಷವನ್ನು ಬಿತ್ತುವ ಸುಳ್ಳು ಕತೆಗಳು ಶುರುವಾಗಿವೆ’’ ಎಂದು ಹೇಳಿದರು. ಸುಳ್ಳು ನರೇಟಿವ್ ಕಟ್ಟುವಿಕೆ ಬಿಜೆಪಿಗೆ ನೀರು ಕುಡಿದಷ್ಟೇ ಸಲೀಸು ಕೆಲಸ. ಪಕ್ಷಕ್ಕೆ ಬಿಹಾರದಲ್ಲಿ ಗೆಲುವು ಬಹಳ ಮುಖ್ಯ. ಇದಕ್ಕಾಗಿ ಚುನಾವಣೆ ಆಯೋಗ ವೇದಿಕೆ ಸಿದ್ಧಮಾಡಿಕೊಡುತ್ತಿದೆ. ಇದನ್ನು ವಿಫಲಗೊಳಿಸಬೇಕಿದೆ.