Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಬಹುವಚನ
  5. ನ್ಯಾಯಾಂಗದ ಮೇಲೆ ಹಿಡಿತ ಸಾಧಿಸುವ...

ನ್ಯಾಯಾಂಗದ ಮೇಲೆ ಹಿಡಿತ ಸಾಧಿಸುವ ಪ್ರಯತ್ನ

ಮಾಧವ ಐತಾಳ್ಮಾಧವ ಐತಾಳ್1 Aug 2025 11:44 AM IST
share
ನ್ಯಾಯಾಂಗದ ಮೇಲೆ ಹಿಡಿತ ಸಾಧಿಸುವ ಪ್ರಯತ್ನ
ನ್ಯಾ.ವರ್ಮಾ ಪ್ರಕರಣವು ನ್ಯಾಯಾಂಗದ ವಿಷಮ ಸ್ಥಿತಿಯನ್ನು ತೋರಿಸುತ್ತದೆ. ವಜಾ ಪ್ರಕ್ರಿಯೆ ಹಲವು ಹಂತಗಳಲ್ಲಿ ನಡೆಯುವುದರಿಂದ, ವಿಳಂಬವಲ್ಲದೆ, ವಜಾ ಸಾಧ್ಯತೆ ಕಡಿಮೆ ಯಾಗುತ್ತದೆ. ನ್ಯಾಯಾಂಗದಲ್ಲಿ ಭ್ರಷ್ಟಾಚಾರ-ದುರ್ನಡತೆ ತಡೆಯಲು ವಜಾ ಉತ್ತಮ ವಿಧಾನ; ಆದರೆ, ರಾಜಕೀಯ ಜಡತ್ವ ಮತ್ತು ಸಾಂಸ್ಥಿಕ ಲೋಪಗಳಿಂದ ಅದು ಪರಿಣಾಮಕಾರಿಯಾಗಿಲ್ಲ. ಇದಕ್ಕೆ ಪರಿಹಾರ ಕಂಡುಕೊಳ್ಳದೆ ಇದ್ದಲ್ಲಿ, ಕಾಲಕ್ರಮೇಣ ಹುಣ್ಣಾಗಿ ಪರಿಣಮಿಸಲಿದೆ.

ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ‘ಆಪರೇಷನ್ ಸಿಂಧೂರ’ ಸರಕಾರ-ಪ್ರತಿಪಕ್ಷಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಈ ಗದ್ದಲದಿಂದ ನ್ಯಾಯಾಂಗ, ಕಾರ್ಯಾಂಗ ಮತ್ತು ನ್ಯಾಯಾಧೀಶರ ನೇಮಕ-ವರ್ಗಾವಣೆಗೆ ಸಂಬಂಧಿಸಿದಂತೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದ ನ್ಯಾಯಾಧೀಶ ನ್ಯಾ.ಯಶವಂತ್ ವರ್ಮಾ ಅವರ ಪ್ರಕರಣ ಹಿನ್ನೆಲೆಗೆ ಸರಿದಿದೆ.

ಮಾರ್ಚ್ 14, 2025ರಂದು ದಿಲ್ಲಿ ಹೈಕೋರ್ಟ್‌ನ ಹಿರಿಯ ನ್ಯಾಯಾಧೀಶ ನ್ಯಾ. ಯಶವಂತ್ ವರ್ಮಾ ಅವರ ಅಧಿಕೃತ ನಿವಾಸದ ಹೊರ ಮನೆಯಲ್ಲಿ ಸುಟ್ಟ 500 ರೂ. ಮುಖಬೆಲೆಯ ನೋಟುಗಳ ಚೀಲಗಳು ಸಿಕ್ಕಿದ್ದವು. ಸುಪ್ರೀಂ ಕೋರ್ಟ್ ಮು.ನ್ಯಾ. ಸಂಜೀವ್ ಖನ್ನಾ ಅವರು ಈ ಸಂಬಂಧ ತನಿಖೆ ನಡೆಸಲು ಮಾ.22ರಂದು ಪಂಜಾಬ್-ಹರ್ಯಾಣ ಹೈಕೋರ್ಟ್ ಮು.ನ್ಯಾ. ಶೀಲ್ ನಾಗು ನೇತೃತ್ವದಲ್ಲಿ ಹಿಮಾಚಲ ಪ್ರದೇಶ ಹಾಗೂ ಕರ್ನಾಟಕ ಹೈಕೋರ್ಟ್ ನ ನ್ಯಾಯಾಧೀಶರ ಸಮಿತಿಯನ್ನು ನೇಮಿಸಿದರು. ಸಮಿತಿ ‘ವರ್ಮಾ ಅವರ ವಿರುದ್ಧದ ಆರೋಪಗಳು ಸಾಬೀತಾಗಿವೆ’ ಎಂದು ತನ್ನ 64 ಪುಟಗಳ ವರದಿಯಲ್ಲಿ ಹೇಳಿ, ಅವರ ವಜಾಕ್ಕೆ ಶಿಫಾರಸು ಮಾಡಿತು(ಮೇ 4). ಸಮಿತಿಯ ವರದಿ ಹಾಗೂ ವರ್ಮಾ ಅವರ ಪ್ರತಿಕ್ರಿಯೆಯನ್ನು ಪ್ರಧಾನಿ ಹಾಗೂ ರಾಷ್ಟ್ರಪತಿ ಅವರಿಗೆ ಕಳಿಸಿರುವುದಾಗಿ ಸುಪ್ರೀಂ ಕೋರ್ಟ್ ಹೇಳಿತು. ಮಾರ್ಚ್ 28ರಂದು ವರ್ಮಾ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಿದ ಸರಕಾರ, ಯಾವುದೇ ಪ್ರಕರಣಗಳ ವಿಚಾರಣೆಗೆ ನೇಮಿಸಬಾರದು ಎಂದು ಸೂಚಿಸಿತು.

ದೇಶದಲ್ಲಿ ಈವರೆಗೆ ಒಬ್ಬನೇ ಒಬ್ಬ ನ್ಯಾಯಾಧೀಶ ದುರ್ವರ್ತನೆ/ಭ್ರಷ್ಟಾಚಾರದಿಂದ ವಜಾ ಆಗಿಲ್ಲ. ವಜಾ ಪ್ರಕ್ರಿಯೆಯ ಸಂಕೀರ್ಣತೆ ಹಾಗೂ ರಾಜಕೀಯ ಇದಕ್ಕೆ ಕಾರಣ. ನ್ಯಾ.ವೀರಸ್ವಾಮಿ ರಾಮಸ್ವಾಮಿ ವಜಾ ಪ್ರಕ್ರಿಯೆ ಎದುರಿಸಿದ ಮೊದಲ ನ್ಯಾಯಾಧೀಶ. ಅವರ ಮೇಲೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿದ್ದಾಗ ವಿಪರೀತ ವೆಚ್ಚ ಮಾಡಿದ್ದ ಆರೋಪ ಕೇಳಿಬಂದಿತ್ತು. 1993ರಲ್ಲಿ ಅವರ ವಿರುದ್ಧ ಮಂಡನೆಯಾದ ಗೊತ್ತುವಳಿ ಲೋಕಸಭೆಯಲ್ಲಿ ಅಂಗೀಕಾರಗೊಳ್ಳಲಿಲ್ಲ. ಕಲ್ಕತ್ತಾ ಹೈಕೋರ್ಟ್‌ನ ನ್ಯಾ. ಸೌಮಿತ್ರ ಸೇನ್ ವಿರುದ್ಧದ ಗೊತ್ತುವಳಿ ರಾಜ್ಯಸಭೆಯಲ್ಲಿ 2011ರಲ್ಲಿ ಅಂಗೀಕಾರಗೊಂಡಿತು. ಆದರೆ, ವಿಷಯ ಲೋಕ ಸಭೆಗೆ ಬರುವ ಮುನ್ನವೇ ಸೇನ್ ರಾಜೀನಾಮೆ ನೀಡಿದರು.

ವಜಾ ಪ್ರಕ್ರಿಯೆಯಲ್ಲಿ ವಿಳಂಬ

ನ್ಯಾಯಾಧೀಶರ ವಜಾಗೊಳಿಸುವ ಅಧಿಕಾರ ಇರುವುದು ಸಂಸತ್ತಿಗೆ ಮಾತ್ರ. ವರ್ಮಾ ಅವರನ್ನು ವಜಾ ಮಾಡಬೇಕೆಂದು ಲೋಕಸಭೆಯಲ್ಲಿ ಪ್ರತಿಪಕ್ಷಗಳು ನೋಟಿಸ್ ನೀಡಿವೆ. ಗೊತ್ತುವಳಿ ಯನ್ನು ಲೋಕಸಭೆಯಲ್ಲಿ ಮಂಡಿಸಿದರೆ, ಕನಿಷ್ಠ 100 ಸಂಸದರು ಹಾಗೂ ರಾಜ್ಯಸಭೆಯಲ್ಲಿ ಕನಿಷ್ಠ 50 ಸದಸ್ಯರ ಸಹಿ ಅಗತ್ಯವಿರಲಿದೆ. ನ್ಯಾಯಾಧೀಶರ (ವಿಚಾರಣೆ) ಕಾಯ್ದೆ 1968ರ ಪ್ರಕಾರ, ಸಭಾಧ್ಯಕ್ಷ/ಸಭಾಪತಿ ಸದನದಲ್ಲಿ ಗೊತ್ತುವಳಿ ಮಂಡನೆಯಾದ ಬಳಿಕ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ಒಬ್ಬರು ಕಾನೂನು ಪರಿಣತರ ಸಮಿತಿ ರಚಿಸಿ, 3 ತಿಂಗಳೊಳಗೆ ವರದಿ ಸಲ್ಲಿಸಲು ಸೂಚಿಸುತ್ತಾರೆ. ವಜಾಕ್ಕೆ ಮು.ನ್ಯಾ. ಸಂಜೀವ್ ಖನ್ನಾ ನೇಮಿಸಿದ ಸಮಿತಿಯ ವರದಿಯಷ್ಟೇ ಸಾಲುವುದಿಲ್ಲ. ‘ಸಮಿತಿ ವರ್ಮಾ ಅವರನ್ನು ಅಪರಾಧಿ ಎಂದು ಹೇಳಿಲ್ಲ,’ ಎಂದು ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

ಹೈಕೋರ್ಟ್ ನ್ಯಾಯಾಧೀಶರ ವಜಾ ಕುರಿತು ವಿವರಿಸುವ ಸಂವಿಧಾನದ ವಿಧಿ 124(4) ಹಾಗೂ ವಿಧಿ 218 ಪ್ರಕಾರ, ವಜಾ ಪ್ರಕ್ರಿಯೆಯನ್ನು ಯಾವುದೇ ಸದನ ಆರಂಭಿಸಬಹುದು. ಸಭಾಪತಿ/ಸಭಾಧ್ಯಕ್ಷರು ಗೊತ್ತುವಳಿಯನ್ನು ಅಂಗೀಕರಿಸಬಹುದು ಇಲ್ಲವೇ ತಿರಸ್ಕರಿಸಬಹುದು. ಅಂಗೀಕರಿಸಿದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ, ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಹಾಗೂ ಕಾನೂನು ಪರಿಣತರ ಸಮಿತಿಯನ್ನು ರಚಿಸಲಾಗುತ್ತದೆ. ಈ ಸಮಿತಿಯು ನ್ಯಾಯಾಧೀಶನನ್ನು ಅಪರಾಧಿ ಎಂದು ಪರಿಗಣಿಸಿದರೆ, ಸಂಸತ್ತು/ರಾಜ್ಯಸಭೆಯಲ್ಲಿ ಚರ್ಚೆ ಹಾಗೂ ಮತ ಚಲಾವಣೆ ನಡೆಯುತ್ತದೆ. ಸದನದಲ್ಲಿ ವಾದ ಮಂಡಿಸಲು ಆರೋಪಿ ಇಲ್ಲವೇ ಆತನ ವಕೀಲನಿಗೆ ಅವಕಾಶ ನೀಡಲಾಗುತ್ತದೆ. ಮತ ಚಲಾವಣೆ ನಡೆದಲ್ಲಿ ಹಾಜರಿದ್ದವರಲ್ಲಿ 2/3ರಷ್ಟು ಸದಸ್ಯರು ಸಮ್ಮತಿಸಬೇಕಾಗುತ್ತದೆ; ಸದನದ ಒಟ್ಟು ಬಲಾಬಲದಲ್ಲಿ ಶೇ. 50ರಷ್ಟು ಸದಸ್ಯರು ಹಾಜರಿರಬೇಕು. ಎರಡೂ ಸದನಗಳು ಅಂಗೀಕರಿಸಿದ ಬಳಿಕ ರಾಷ್ಟ್ರಪತಿ ವಜಾ ಆದೇಶ ಹೊರಡಿಸುತ್ತಾರೆ.

ನ್ಯಾಯಾಧೀಶರ (ವಿಚಾರಣೆ) ಕಾಯ್ದೆ-1968 ನ್ಯಾಯಾಧೀಶರ ದುರ್ವರ್ತನೆ ಅಥವಾ ಅಸಾಮರ್ಥ್ಯಕ್ಕೆ ಸಾಕ್ಷಿ ಹಾಗೂ ತನಿಖೆಯ ಪ್ರಕ್ರಿಯೆಯನ್ನು ವಿವರಿಸುತ್ತದೆ. ಹೈಕೋರ್ಟ್-ಸುಪ್ರೀಂ ಕೋರ್ಟ್ ನ್ಯಾಯಾಧೀಶರ ವಿರುದ್ಧದ ಆರೋಪಗಳ ತನಿಖೆಗೆ ಸುಪ್ರೀಂ ಕೋರ್ಟ್ 1999ರಲ್ಲಿ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿತು. ಆರೋಪ ಕುರಿತು ಸಮಿತಿಯೊಂದು ಪರಿಶೀಲನೆ ನಡೆಸುತ್ತದೆ. ಒಂದುವೇಳೆ ಆರೋಪ ನಿಜ ಎಂದಾದಲ್ಲಿ ಮುಖ್ಯ ನ್ಯಾಯ ಮೂರ್ತಿ ಆರೋಪ ಹೊತ್ತ ನ್ಯಾಯಾಧೀಶನಿಗೆ ರಾಜೀನಾಮೆ ನೀಡಲು ಹೇಳಬಹುದು. ಅವರು ಒಪ್ಪದೆ ಇದ್ದಲ್ಲಿ ಪ್ರಧಾನಿ-ರಾಷ್ಟ್ರಪತಿಗೆ ವಿಷಯ ತಿಳಿಸಿ, ವಜಾ ಪ್ರಕ್ರಿಯೆ ಆರಂಭಿಸಲು ಕೋರಬಹುದು. ಆನಂತರ ಸದನದಲ್ಲಿ ಚರ್ಚೆ-ಮತ ಚಲಾವಣೆ ನಡೆಯಲಿದೆ.

ವಜಾ ಪ್ರಕ್ರಿಯೆಯಲ್ಲಿ ಸುಧಾರಣೆ ಅಗತ್ಯ

ನ್ಯಾ.ವರ್ಮಾ ಪ್ರಕರಣವು ನ್ಯಾಯಾಂಗದ ವಿಷಮ ಸ್ಥಿತಿಯನ್ನು ತೋರಿಸುತ್ತದೆ. ವಜಾ ಪ್ರಕ್ರಿಯೆ ಹಲವು ಹಂತಗಳಲ್ಲಿ ನಡೆಯುವುದರಿಂದ, ವಿಳಂಬವಲ್ಲದೆ, ವಜಾ ಸಾಧ್ಯತೆ ಕಡಿಮೆ ಯಾಗುತ್ತದೆ. ನ್ಯಾಯಾಂಗದಲ್ಲಿ ಭ್ರಷ್ಟಾಚಾರ-ದುರ್ನಡತೆ ತಡೆಯಲು ವಜಾ ಉತ್ತಮ ವಿಧಾನ; ಆದರೆ, ರಾಜಕೀಯ ಜಡತ್ವ ಮತ್ತು ಸಾಂಸ್ಥಿಕ ಲೋಪಗಳಿಂದ ಅದು ಪರಿಣಾಮಕಾರಿಯಾಗಿಲ್ಲ. ಇದಕ್ಕೆ ಪರಿಹಾರ ಕಂಡುಕೊಳ್ಳದೆ ಇದ್ದಲ್ಲಿ, ಕಾಲಕ್ರಮೇಣ ಹುಣ್ಣಾಗಿ ಪರಿಣಮಿಸಲಿದೆ. ನ್ಯಾ. ವಿ. ರಾಮಸ್ವಾಮಿ ವಿರುದ್ಧ ಸಾಕ್ಷ್ಯಗಳಿದ್ದರೂ, ಅವರು ದೋಷಮುಕ್ತರಾದರು; ರಾಜಕೀಯ ತನ್ನ ಕೈಚಳಕ ತೋರಿಸಿತು.

ಕೆನಡಾ ಮತ್ತು ಇಂಗ್ಲೆಂಡ್‌ನಲ್ಲಿ ನ್ಯಾಯಾಧೀಶರ ವಜಾಗೊಳಿಸುವಿಕೆಗೆ ಸ್ಪಷ್ಟ ಮತ್ತು ಸರಳ ಪ್ರಕ್ರಿಯೆಗಳಿದ್ದು, ಇದರಿಂದ ನಿರ್ಧಾರಗಳು ಶೀಘ್ರವಾಗಿ ಹಾಗೂ ಪಾರದರ್ಶಕವಾಗಿ ನಡೆಯುತ್ತವೆ; ಇದರಿಂದ ನ್ಯಾಯಾಂಗದ ಉತ್ತರದಾಯಿತ್ವ ಹೆಚ್ಚಿದೆ. ನಮ್ಮ ಸಮಸ್ಯೆಯೇನೆಂದರೆ, ನ್ಯಾಯಾಂಗ ತನ್ನ ಸ್ವಾಯತ್ತೆಯನ್ನು ರಕ್ಷಿಸಿಕೊಳ್ಳಲು ಬಡಿದಾಡುತ್ತದೆ; ಆದರೆ, ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ಸ್ವಜನಪಕ್ಷಪಾತ ಹಾಗೂ ಹಸ್ತಕ್ಷೇಪಕ್ಕೆ ಸಂಬಂಧಿಸಿದ ಆರೋಪಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಇಂಥ ಆರೋಪಗಳ ತನಿಖೆಗೆ ಇರುವ ಆಂತರಿಕ ಉಪಕ್ರಮಗಳು ನ್ಯಾಯಾಧೀಶರನ್ನು ರಕ್ಷಿಸಲು ಬಳಕೆಯಾಗುತ್ತಿವೆ. ನ್ಯಾ.ವರ್ಮಾ ತಮ್ಮ ಕುರಿತ ಆಂತರಿಕ ತನಿಖೆ ವರದಿಯನ್ನು ಅನೂರ್ಜಿತಗೊಳಿಸಬೇಕೆಂದು ಕೋರಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಇದು ಸಮಸ್ಯೆಯನ್ನು ಕ್ಲಿಷ್ಟಗೊಳಿಸಿದೆ. ‘ಅರ್ಜಿಯ ವಿಚಾರಣೆಗೆ ಪೀಠವನ್ನು ರಚಿಸಲಾಗುತ್ತದೆ. ತಾವು ಆ ಪೀಠದ ಭಾಗವಾಗಿರುವುದಿಲ್ಲ’ ಎಂದು ಮು.ನ್ಯಾ. ಬಿ.ಆರ್. ಗವಾಯಿ ಹೇಳಿದ್ದಾರೆ.

ಕೊಲಿಜಿಯಂ ಮತ್ತು ಪಕ್ಷ ರಾಜಕಾರಣ

ಸರಕಾರ ನ್ಯಾ. ವರ್ಮಾ ಪ್ರಕರಣದ ಲಾಭ ಪಡೆದುಕೊಳ್ಳಲು ಪ್ರಯತ್ನಿಸಿತು. (ಮಾಜಿ) ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್, ರಾಷ್ಟ್ರೀಯ ನ್ಯಾಯಾಂಗ ನೇಮಕ ಆಯೋಗ(ನ್ಯಾಷನಲ್ ಜ್ಯುಡಿಷಿಯಲ್ ಅಪಾಯಿಂಟ್ಮೆಂಟ್ ಕಮಿಷನ್, ಎನ್‌ಜೆಎಸಿ) ಕಾಯ್ದೆಯನ್ನು ವಾಪಸ್ ತರಬಾರದೇಕೆ ಎಂದು ಚರ್ಚಿಸಲು ಸರಕಾರ/ಪ್ರತಿಪಕ್ಷಗಳ ಮುಖಂಡರ ಸಭೆಯನ್ನು ಕರೆದರು. ಎನ್‌ಡಿಎ 1.0 ಸರಕಾರವು ಆಗಸ್ಟ್ 2014ರಲ್ಲಿ ಸಂವಿಧಾನದ (99ನೇ ತಿದ್ದುಪಡಿ) ಕಾಯ್ದೆ ಮತ್ತು ಎನ್‌ಜೆಎಸಿ ಕಾಯ್ದೆ ಮೂಲಕ ಕೊಲಿಜಿಯಂ ವ್ಯವಸ್ಥೆಗೆ ಪರ್ಯಾಯವೊಂದನ್ನು ಸೃಷ್ಟಿಸಲು ಮುಂದಾಗಿತ್ತು. ಸಿಜೆಐ ನೇತೃತ್ವದ ಸಮಿತಿಯಲ್ಲಿ ಸುಪ್ರೀಂ ಕೋರ್ಟ್ ನ ಇಬ್ಬರು ಹಿರಿಯ ನ್ಯಾಯಾಧೀಶರು, ಕೇಂದ್ರ ಕಾನೂನು ಸಚಿವ ಮತ್ತು ನಾಗರಿಕ ಸಮಾಜದ ಇಬ್ಬರು ಸದಸ್ಯರು (ಸಿಜೆಐ, ಪ್ರಧಾನಿ, ಲೋಕಸಭೆಯ ಪ್ರತಿಪಕ್ಷ ನಾಯಕ ಇರುವ ಸಮಿತಿಯು ಒಬ್ಬ ಸದಸ್ಯರನ್ನು ಆಯ್ಕೆ ಮಾಡುತ್ತದೆ ಹಾಗೂ ಮತ್ತೊಬ್ಬರು ಪರಿಶಿಷ್ಟ ಜಾತಿ/ವರ್ಗ, ಒಬಿಸಿ ಅಥವಾ ಮಹಿಳೆ ಆಗಿರುತ್ತಾರೆ) ಇರುತ್ತಾರೆ. ಸಂಸತ್ತಿನಲ್ಲಿ ಮಸೂದೆಗೆ ರಾಮ್ ಜೇಠ್ಮಲಾನಿ ಹೊರತುಪಡಿಸಿದರೆ, ಎಲ್ಲ ಪಕ್ಷಗಳೂ ಸಮ್ಮತಿ ನೀಡಿದವು! ಅಧಿಕಾರ ಇಲ್ಲದೆ ಇರುವಾಗ ನ್ಯಾಯಾಂಗದ ಸ್ವಾಯತ್ತೆ ಬಗ್ಗೆ ಮಾತನ್ನಾಡುವ ಪಕ್ಷಗಳು ಇಂಥ ಸಮಯದಲ್ಲಿ ಮೌನಕ್ಕೆ ಶರಣಾಗುವುದು ಸೋಜಿಗವೇನಲ್ಲ! ಆದರೆ, ಮಸೂದೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು. ಐವರು ನ್ಯಾಯಾಧೀಶರ ಪೀಠ ಅಕ್ಟೋಬರ್ 16, 2015ರಂದು 4:1 ಬಹುಮತದಿಂದ ಕಾಯ್ದೆಯನ್ನು ವಜಾಗೊಳಿಸಿತು. ಎನ್‌ಜೆಎಸಿ ಅಸಾಂವಿಧಾನಿಕ ಮತ್ತು ಸಂವಿಧಾನದ ಮೂಲಭೂತ ಚೌಕಟ್ಟನ್ನು ಉಲ್ಲಂಘಿಸುತ್ತದೆ ಎಂದು ಹೇಳಿತು. ನ್ಯಾ. ಜಸ್ತಿ ಚಲಮೇಶ್ವರ್ ಅವರು ಮಾತ್ರ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದರು.

ರಾಜಕೀಯ ಪಕ್ಷಗಳಿಗೆ ಕೊಲಿಜಿಯಂ ವ್ಯವಸ್ಥೆ ಇಷ್ಟವಿಲ್ಲ

ಕೊಲಿಜಿಯಂ ಕಳಿಸುವ ನ್ಯಾಯಾಧೀಶರ ಪಟ್ಟಿ ಸರಕಾರಕ್ಕೆ ಸಮ್ಮತವಾಗದೆ ಇದ್ದಲ್ಲಿ ಅದನ್ನು ವಾಪಸ್ ಮಾಡುತ್ತದೆ. ಆದರೆ, ಕೊಲಿಜಿಯಂ ಅದೇ ಹೆಸರನ್ನು ಮತ್ತೆ ಕಳಿಸಿದರೆ, ತಿರಸ್ಕರಿಸುವ ಅಧಿಕಾರ ಸರಕಾರಕ್ಕೆ ಇಲ್ಲ. ಸಮಸ್ಯೆ ಏನೆಂದರೆ, 2014ರ ಬಳಿಕ ಕೊಲಿಜಿಯಂ ಕಳಿಸುವ ಹೆಸರುಗಳನ್ನು ಸರಕಾರ ವಿನಾಕಾರಣ ದೀರ್ಘಕಾಲ, ಕೆಲವೊಮ್ಮೆ ವರ್ಷಗಟ್ಟಲೆ ಉಳಿಸಿಕೊಳ್ಳುತ್ತಿದೆ. ಸರಕಾರಕ್ಕೆ ‘ಅನುಕೂಲಕರವಲ್ಲದ’ ಹೆಸರುಗಳು ಕಡತದಲ್ಲೇ ಉಳಿಯುತ್ತಿವೆ. ಇದರಿಂದ ನ್ಯಾಯಾಧೀಶರ ನೇಮಕ ಪ್ರಕ್ರಿಯೆ ಕುಂಠಿತಗೊಂಡು, ಕಡತಗಳು ಜಮೆಯಾಗುತ್ತಿವೆ. ಸುಪ್ರೀಂ ಕೋರ್ಟ್‌ನಲ್ಲಿ 86,700, ಹೈಕೋರ್ಟ್‌ಗಳಲ್ಲಿ 63.3 ಲಕ್ಷ ಹಾಗೂ ಜಿಲ್ಲೆ-ಕೆಳಹಂತದ ನ್ಯಾಯಾಲಯಗಳಲ್ಲಿ 4.6 ಕೋಟಿ ಪ್ರಕರಣಗಳು ಉಳಿದುಕೊಂಡಿವೆ. ಮಂಜೂರಾದ 26,927 ನ್ಯಾಯಾಧೀಶ ಹುದ್ದೆಗಳಲ್ಲಿ 5,665 ಖಾಲಿ ಇವೆ. 1987ರ ನ್ಯಾಯಾಂಗ ಆಯೋಗದ ಪ್ರಕಾರ, 10 ಲಕ್ಷ ಮಂದಿಗೆ 50 ನ್ಯಾಯಾಧೀಶರು ಇರಬೇಕು. ಈಗ ಇರುವುದು 15 ನ್ಯಾಯಾಧೀಶರು ಮಾತ್ರ. ನ್ಯಾಯದಾನದಲ್ಲಿ ವಿಳಂಬ ಮತ್ತು ತಗಲುವ ವೆಚ್ಚದಿಂದ ಜನರು ಕೋರ್ಟ್ ಕದ ತಟ್ಟಲು ಹಿಂಜರಿಯುತ್ತಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇದನ್ನು ‘ಬ್ಲ್ಯಾಕ್ ಕೋಟ್ ಸಿಂಡ್ರೋಮ್’ ಎಂದು ಕರೆದಿದ್ದರು. ಕೊಲಿಜಿಯಂ ತಾನು ಶಿಫಾರಸು ಮಾಡಿದವರ ಆಯ್ಕೆಗೋಸ್ಕರ ಕೆಲವೊಮ್ಮೆ ಸರಕಾರದ ಪರ ಇರುವವರನ್ನು ನೇಮಕ ಮಾಡುತ್ತಿರುವುದರಿಂದ, ಹಿಂದುತ್ವ ಸಿದ್ಧಾಂತದ ಒಲವು ಇರುವವರು ಆಯ್ಕೆಯಾಗುತ್ತಿದ್ದಾರೆ. ಒಂದುವೇಳೆ ಸರಕಾರ ನ್ಯಾಯಾಧೀಶರ ನೇಮಕದಲ್ಲಿ ಹಿಡಿತ ಸಾಧಿಸಿದರೆ, ಜಾರಿ ನಿರ್ದೇಶನಾಲಯ, ಸಿಬಿಐ, ಆದಾಯ ತೆರಿಗೆ ಇಲಾಖೆಗಳಂತೆ ನ್ಯಾಯಾಂಗ ಕೂಡ ಸರಕಾರದ ಹತಾರವಾಗಿ ಬದಲಾಗಲಿದೆ.

ನ್ಯಾಯಾಧೀಶರ ನೇಮಕ-ವರ್ಗಾವಣೆ

ವಿಧಿ 222(1)ರ ಪ್ರಕಾರ, ಮುಖ್ಯ ನ್ಯಾಯಮೂರ್ತಿ ಅವರ ಸಲಹೆ ಮೇರೆಗೆ ರಾಷ್ಟ್ರಪತಿ ಅವರು ನ್ಯಾಯಾಧೀಶರ ವರ್ಗಾವಣೆ ಮಾಡುತ್ತಾರೆ. ಜಡ್ಜಸ್ ಪ್ರಕರಣ 1,2 ಮತ್ತು 3ರಲ್ಲಿ ಈ ಕುರಿತು ನಿರ್ಣಾಯಕ ತೀರ್ಪು ಬಂದಿದೆ. ಎಸ್.ಸಿ. ಗುಪ್ತಾ v/s ರಾಷ್ಟ್ರಪತಿ ಪ್ರಕರಣ(1991)ದಲ್ಲಿ ನ್ಯಾಯಾಧೀಶರ ವರ್ಗಾವಣೆ-ನೇಮಕದಲ್ಲಿ ಕಾರ್ಯಾಂಗಕ್ಕೆ ಆದ್ಯತೆ ಸಿಕ್ಕಿತು(ಜಡ್ಜಸ್ ಕೇಸ್ 1). ಆದರೆ, ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್ ಆನ್ ರೆಕಾರ್ಡ್ ಅಸೋಸಿಯೇಷನ್ v/s ಭಾರತ ಸರಕಾರ ಪ್ರಕರಣ(1993. ಜಡ್ಜಸ್ ಕೇಸ್ 2)ದಲ್ಲಿ ನ್ಯಾಯಾಲಯವು ಕೊಲಿಜಿಯಂ ವ್ಯವಸ್ಥೆಯನ್ನು ಸಾಂಸ್ಥೀಕರಿಸಿತು. ರಾಷ್ಟ್ರಪತಿ ಮತ್ತು ಸಿಜೆಐ ನಡುವೆ ಭಿನ್ನಾಭಿಪ್ರಾಯ ಬಂದಲ್ಲಿ, ಸಿಜೆಐ ಅಭಿಪ್ರಾಯಕ್ಕೆ ಆದ್ಯತೆ ಇರಲಿದೆ ಎಂದು ತೀರ್ಪು ನೀಡಿತು. ವರ್ಗಾವಣೆಗೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರು, ಕನಿಷ್ಠ ಇಬ್ಬರು ಹೈಕೋರ್ಟ್ ನ್ಯಾಯಾಧೀಶರು ಹಾಗೂ ವಕೀಲರ ಸಂಘದ ಹಿರಿಯ ಸದಸ್ಯರ ಸಲಹೆಯನ್ನು ಸಿಜೆಐ ಪಡೆಯಬೇಕು ಎಂದು ನ್ಯಾ. ಜೆ.ಎಸ್. ವರ್ಮಾ ಹೇಳಿದರು. ಮೂರನೇ ಪ್ರಕರಣ(1998)ದ ತೀರ್ಪು ಕೊಲಿಜಿಯಂ ವ್ಯವಸ್ಥೆಯನ್ನು ಇನ್ನಷ್ಟು ವಿಸ್ತರಿಸಿತು. ‘ಸಿಜೆಐ ನಾಲ್ವರು ಅತಿ ಹಿರಿಯ ನ್ಯಾಯಾಧೀಶರ ಜತೆಗೂಡಿ ವರ್ಗಾವಣೆ ಶಿಫಾರಸು ಮಾಡಬೇಕು. ಕಾನೂನು ಸಚಿವರು ಪರಿಶೀಲಿಸಿ, ಪ್ರಧಾನಿಗೆ ರವಾನಿಸಬೇಕು. ಅವರು ಅದನ್ನು ರಾಷ್ಟ್ರಪತಿಗೆ ಕಳಿಸಿ, ಅಂಗೀಕರಿಸಿದ ಬಳಿಕ ರಾಜ್ಯಪತ್ರದಲ್ಲಿ ಪ್ರಕಟಿಸಬೇಕು’ ಎಂದು ಕೋರ್ಟ್ ಹೇಳಿತು(ಜಡ್ಜಸ್ ಕೇಸ್ 3).

ಕೊಲಿಜಿಯಂ ವ್ಯವಸ್ಥೆ ಪರಿಪೂರ್ಣವಲ್ಲ

ಎಲ್ಲ ಕ್ಷೇತ್ರದಲ್ಲಿರುವಂತೆ ನ್ಯಾಯಾಂಗದಲ್ಲೂ ಭ್ರಷ್ಟಾಚಾರವಿದೆ. ಅಪಾರದರ್ಶಕತೆ ಮತ್ತು ನ್ಯಾಯಾಧೀಶರ ಆಯ್ಕೆಗೆ ಮಾರ್ಗದರ್ಶಿ ಸೂತ್ರಗಳು ಇಲ್ಲದೆ ಇರುವುದರಿಂದ, ಸ್ವಜನ ಪಕ್ಷಪಾತ, ಭ್ರಷ್ಟಾಚಾರವಲ್ಲದೆ ಅನರ್ಹರು ಆಯ್ಕೆಯಾಗುತ್ತಿದ್ದಾರೆ. ಆದರೆ, ಸರಕಾರದ ಹಸ್ತಕ್ಷೇಪ ಇದಕ್ಕಿಂತ ಅಪಾಯಕರ. ಪ್ರತಿವರ್ಷ ಸುಪ್ರೀಂ ಹಾಗೂ ಹೈಕೋರ್ಟ್‌ಗಳಿಗೆ ನೂರಾರು ನ್ಯಾಯಾಧೀಶರ ನೇಮಕ ನಡೆಯುತ್ತವೆ. ಕೊಲಿಜಿಯಂನಲ್ಲಿ ಇರುವವರು ಸೇವೆ ಸಲ್ಲಿಸುತ್ತಿರುವ ನ್ಯಾಯಾಧೀಶರಾಗಿರುವುದರಿಂದ, ಅವರಿಗೆ ನೇಮಕ/ಸಂದರ್ಶನಕ್ಕೆ ಹೆಚ್ಚು ಸಮಯ ನೀಡಲು ಆಗುತ್ತಿಲ್ಲ. ಈ ಸಮಸ್ಯೆ ನಿವಾರಿಸಲು ಪೂರ್ಣಾವಧಿ ನೇಮಕ ಆಯೋಗವನ್ನು ರಚಿಸಬೇಕಿದೆ. ಈ ಆಯೋಗವು ನೇಮಕ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸುವಂತೆ ನೋಡಿಕೊಳ್ಳಬೇಕು. ಜೊತೆಗೆ, ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ನ್ಯಾಯಾಂಗ ದೂರು ಆಯೋಗ ರಚಿಸಬೇಕು.

ಜಿನೀವಾ ಮೂಲದ ಅಂತರ್‌ರಾಷ್ಟ್ರೀಯ ನ್ಯಾಯಾಲಯ(ಐಸಿಜೆ)ವು ಭಾರತದಲ್ಲಿ ನ್ಯಾಯಾಂಗ ಸ್ವಾತಂತ್ರ್ಯ ಕುರಿತು ಹಲವು ಪ್ರಶ್ನೆಗಳನ್ನು ಎತ್ತಿದೆ. ಕಾರ್ಯಾಂಗದ ಹಸ್ತಕ್ಷೇಪ, ನೇಮಕ ಪ್ರಕ್ರಿಯೆಯಲ್ಲಿ ಅಪಾರದರ್ಶಕತೆ ಮತ್ತು ಉತ್ತರದಾಯಿತ್ವದಲ್ಲಿ ಕೊರತೆ ಇದೆ ಎಂದಿದೆ. ನ್ಯಾಯಾಧೀಶರ ವರ್ಗಾವಣೆಗಳನ್ನು ‘ಸಾರ್ವಜನಿಕ ಹಿತಾಸಕ್ತಿ’ ಮತ್ತು ‘ಉತ್ತಮ ಆಡಳಿತ’ ಎನ್ನುವ ಅಸ್ಪಷ್ಟ ನೀತಿಯಿಂದ ಸಮರ್ಥಿಸಿಕೊಳ್ಳಲಾಗುತ್ತಿದೆ. ನೇಮಕ ಮತ್ತು ವರ್ಗಾವಣೆ ಗಳಲ್ಲಿ ಪಾರದರ್ಶಕತೆ, ವಸ್ತುನಿಷ್ಠತೆ ಕಾಯ್ದುಕೊಳ್ಳಲು ಹಾಗೂ ಪೂರ್ವನಿರ್ಧರಿತ ಮಾನದಂಡಗಳನ್ನು ಅನುಸರಿಸಲು ನ್ಯಾಯಾಂಗ ಮಂಡಳಿಯನ್ನು ರಚಿಸಬೇಕು ಎಂದು ಹೇಳಿದೆ. ವಿಶ್ವ ನ್ಯಾಯ ಯೋಜನೆ (ಡಬ್ಲ್ಯುಜೆಪಿ) 2021ರ ಪ್ರಕಾರ, ದೇಶ ನ್ಯಾಯಾಂಗ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 79ನೇ ಸ್ಥಾನದಲ್ಲಿದೆ(142 ದೇಶಗಳಲ್ಲಿ). ದಕ್ಷಿಣ ಏಶ್ಯದ 6 ದೇಶಗಳಲ್ಲಿ 3ನೇ ಸ್ಥಾನದಲ್ಲಿದೆ. ನೇಪಾಳ ಮೊದಲ ಸ್ಥಾನದಲ್ಲಿದೆ.

ಕೆ. ವೀರಸ್ವಾಮಿ v/s ಭಾರತ ಸರಕಾರ ಪ್ರಕರಣ(1991)ದಲ್ಲಿ ಸುಪ್ರೀಂ ಕೋರ್ಟ್, ಭ್ರಷ್ಟಾಚಾರ ತಡೆ ಕಾಯ್ದೆಯಡಿ ನ್ಯಾಯಾಧೀಶರನ್ನು ಸಾರ್ವಜನಿಕ ಸೇವಕರು ಎಂದು ವರ್ಗೀಕರಿಸಿತು. ಇದರಿಂದ ನ್ಯಾಯಾಧೀಶರ ವಿಚಾರಣೆ ನಡೆಸಲು ಸಿಜೆಐ ಅನುಮತಿ ಬೇಕಾಗುತ್ತದೆ; ಈಮೂಲಕ ನ್ಯಾಯಾಂಗವನ್ನು ಕಾರ್ಯಾಂಗದ ಹಸ್ತಕ್ಷೇಪದಿಂದ ರಕ್ಷಿಸಲಾಗಿದೆ. (ಮಾಜಿ) ಉಪ ರಾಷ್ಟ್ರಪತಿ ಧನ್ಕರ್, ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಸಮಸ್ಯೆಯ ಮೂಲ ಕೆ. ವೀರಸ್ವಾಮಿ ತೀರ್ಪಿನಲ್ಲಿದೆ ಎಂದು ಹೇಳಿದ್ದರು. ‘ನ್ಯಾಯಾಂಗಕ್ಕೆ ಹಣಬಲವಿಲ್ಲ; ಬಾಹುಬಲವೂ ಇಲ್ಲ. ಸಾರ್ವಜನಿಕರು ಇರಿಸಿದ ವಿಶ್ವಾಸದ ಆಧಾರ ಮಾತ್ರ ಇದೆ. ವಿಶ್ವಾಸಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕಾದದ್ದು ಸಮಾಜದ ಸ್ಥಿರತೆಯ ದೃಷ್ಟಿಯಿಂದ ಮುಖ್ಯ’ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

ನ್ಯಾ.ವರ್ಮಾ ವಜಾ ಆಗುವರೇ? ಗೊತ್ತಿಲ್ಲ. ಆದರೆ, ನ್ಯಾಯಾಂಗದ ಶುಚೀಕರಣ ಕಾರ್ಯ ಖಂಡಿತವಾಗಿಯೂ ಆರಂಭವಾಗಬೇಕಿದೆ.

share
ಮಾಧವ ಐತಾಳ್
ಮಾಧವ ಐತಾಳ್
Next Story
X